ಪುಸ್ತಕ ಸಂಗಾತಿ
ರೇವಣಸಿದ್ದಪ್ಪ. ಜಿ.ಆರ್
‘ಬಾಳ ನೌಕೆಗೆ ಬೆಳಕಿನ ದೀಪ’
ಅವಲೋಕನ
ದೀಪ್ತಿ ಭದ್ರಾವತಿಯವರಿಂದ
ಬೆಳಕಿನಲ್ಲಿ ಬಾಳ ನೌಕೆಯ ನೋಡುವ ಕವಿತೆಗಳು
ಲೇ: ರೇವಣ ಸಿದ್ದಪ್ಪ. ಜಿ.ಆರ್
ಯಶೋಧ ಪುಸ್ತಕ ಪ್ರಕಾಶನ
ದಾವಣಗೆರೆ
ಈ ಕಾವ್ಯ ಏನನ್ನು ಹೇಳುತ್ತದೆ ಎನ್ನುವ ಪ್ರಶ್ನೆಯೊಂದನ್ನು ಎದುರಿಗೆ ಇರಿಸಿಕೊಂಡರೆ ಹುಟ್ಟಿಕೊಳ್ಳುವ ಉತ್ತರಗಳು ಹಲವಾರು. ದೊರಕುವ ಆಯಾಮಗಳು ನೂರಾರು. ಏನನ್ನೋ ಹೇಳುತ್ತ, ಹೇಳದೆಯೇ ಹೋಗುತ್ತ. “ಅಯ್ಯೋ ಮರುಳೇ ನಿನ್ನ ಅರಿವು ಇಷ್ಟೇ” ಎನ್ನುತ್ತ ಕಾವ್ಯ ಎದೆಯೊಳಗೆ ಇಳಿಯುತ್ತದೆ. ನಾನು ಹೇಳುವುದನ್ನು ನೀನು ಕೇಳಲು ಸಾಧ್ಯವಾ ಎನ್ನುವ ಕೀಟಲೆಗೆ ಮುಂದಾಗುತ್ತದೆ ಕೈಗೆ ಸಿಕ್ಕಂತೆ ಕಾಣುವ ಸಿಗದೆ ಓಡುವ ಚಿಟ್ಟೆಯಂತೆ ಒದ್ದಾಡಿಸುತ್ತದೆ ಮಿದುವಾಗಿ ಬೆರಳಿಗಂಟಿಕೊಳ್ಳುತ್ತ ಇಲ್ಲೇ ಇದ್ದೇನಲ್ಲ ಒಮ್ಮೆ ಕಣ್ತೆರೆದು ನೋಡಬಾರದೆ ಎನ್ನುತ್ತ ಬದುಕಿನ ಮಿಡಿತಗಳಲ್ಲಿ ಒಂದಾಗುತ್ತದೆ. “ರೇವಣಸಿದ್ದಪ್ಪ. ಜಿ.ಆರ್ ರವರ ಮೊದಲ ಕವನ ಸಂಕಲನ “ಬಾಳ ನೌಕೆಗೆ ಬೆಳಕಿನ ದೀಪ” ಹಲವು ಸಾಲುಗಳನ್ನು ಓದುವಾಗ ನನಗೆ ಅನ್ನಿಸಿದ್ದು ಹೀಗೆ.
ಮೊದಲ ಸಂಕಲನ ಎನ್ನುವ ತಕ್ಷಣಕ್ಕೆ ಅದೊಂದು ರೋಚಕತೆಯಿಂದ ಕೂಡಿದ, ಕುತೂಹಲವನ್ನು ಒಳಗಿಳಿಸಿಕೊಂಡ ಬಹುತೇಕ ಪ್ರೇಮ ಪದ್ಯಗಳೇ ಕಾಣಸಿಗುತ್ತವೆ ಎನ್ನುವ ನಿರೀಕ್ಷೆಯಲ್ಲಿಯೇ ಓದು ಆರಂಭವಾಗುತ್ತದೆ. ಆದರೆ ಇಲ್ಲಿನ ಪದ್ಯಗಳನ್ನು ಓದುವಾಗ ಸಿಕ್ಕುವುದು ಬದುಕಿನ ಕುರಿತಾದ ಒಂದು ಗಾಢ ಅನುಭವ. ಒಂದು ಪರಿಪಕ್ವವಾದ ಜೀವನದ ನೈಜ ಅನಾವರಣ ಮತ್ತು ಎಲ್ಲ ಭ್ರಮೆಗಳನ್ನು ಕಳಚಿ ನಿಲ್ಲುವ, ನಿಜವಾದ ಜೀವನ ಏನು ಎಂದು ಹುಡುಕ ಹೊರಡುವ ಸಾಲುಗಳು. “ಲೋಕದ ಮೋಟಾರು ಯಾರೊಬ್ಬರ ಉಸಿರು ಹೋದಾಗಲೂ ಪಂಕ್ಚರ್ ಆಗುವುದಿಲ್ಲ” (ಇನ್ನಿಲ್ಲವಾದಾಗ)ಈ ಒಂದು ಸಾಲು ಬಹುಶ:. ತಾನೊಬ್ಬನೇ ಇಲ್ಲಿ ಮುಖ್ಯ ಎಂದುಕೊಳ್ಳುವ, ತನ್ನ ಹೊರತಾಗಿ ಈ ಜಗತ್ತಿನ ಚಲಿಸುವುದೇ ಇಲ್ಲ ಎಂದುಕೊಳ್ಳುವ ಪ್ರತಿಯೊಬ್ಬ ಮನುಷ್ಯನ ಭ್ರಮೆಯನ್ನು ಕಳಚಿ ಹಾಕುತ್ತದೆ. ಮತ್ತು ಇಲ್ಲಿ ಅದನ್ನು ಹೇಳುವ ರೀತಿ ಕೂಡ ಅದರ ರೂಪಕದ ಕಾರಣವಾಗಿ ಹಿಡಿದಿಟ್ಟುಕೊಳ್ಳುತ್ತದೆ.
“ಹತ್ತುವವರು ಹತ್ತುತ್ತಲೇ ಇರುತ್ತಾರೆ ಇಳಿಯುವವರು ಇಳಿಯುತ್ತಾರೆ” (ಯಂತ್ರಜೀವಿ) ಈ ಸಾಲುಗಳು ಕೂಡ ಮೇಲಿನ ಸಾಲಿನ ಒಳಗನ್ನೇ ಪ್ರತಿನಿಧಿಸುತ್ತದೆ. ಇಲ್ಲಿ ಎಲ್ಲವೂ ತನ್ನ ಪಾಡಿಗೆ ತಾನು ನಡೆಯುತ್ತ ಹೋಗುವ ಕ್ರಿಯೆ. ಇಲ್ಲಿ ಯಾವುದು ನಿಂತ ಉದಾಹರಣೆಗಳು ಇಲ್ಲ “ಯಾರದೋ ಕಣ್ ಪಾಯಿಂಟಿನಲ್ಲಿ ಪರೀಕ್ಷೆ ಬರೆಯುತ್ತಿದ್ದೇವೆ ನಾವೆಲ್ಲ” (ಲೆಕ್ಕ) ಎನ್ನುವ ಕವಿತೆಗಳು ಇಡೀ ಜೀವನದ ಶಾಶ್ವತತೆ ಮತ್ತು ನಶ್ವರತೆಯ ಕುರಿತಾಗಿನ ಒಂದು ನಿರಂತರವಾದ ಹುಡುಕಾಟವನ್ನು ಮಾಡುತ್ತಲೇ ಹೋಗುತ್ತವೆ. ಅಲ್ಲದೆ ಇಲ್ಲಿನ ಬಹುತೇಕ ಕವಿತೆಗಳಲ್ಲಿ ಈ ಭಾವ ಒಂದಲ್ಲ ಒಂದು ರೀತಿಯಲ್ಲಿ ಪ್ರಕಟಗೊಳ್ಳುತ್ತಲೇ ಹೋಗುತ್ತದೆ.
ಉದಾ: ಈ ಸಾಲುಗಳನ್ನು ನೋಡಬಹುದು “ಪಂಚಭೂತಗಳ ಪಾತ್ರ ನಾ ಬರುವ ಮುನ್ನ ಇದ್ದಂತೆ ಇಂದೂ ಇದೆ” (ಕೋರಿಕೆ) ಮತ್ತು ಈ ಎಲ್ಲವೂ ಕೂಡ ಅನುಭವದ ನೆಲೆಯಲ್ಲಿ ನಿಂತು ಅನುಭಾವದ ಕಕ್ಷೆಗೆ ಕೊಂಡೊಯ್ಯುತ್ತವೆ.
ಇದೇ ಆಯಾಮದಲ್ಲಿ ಮತ್ತಷ್ಟು ಕವಿತೆಗಳನ್ನು ಗ್ರಹಿಸುವುದಾದರೆ, “ಯಾರು ಸತ್ತರೂ ಯಾರು ಅತ್ತರೂ ಭೂಮಿ ತಿರುಗುವುದು” (ಸಾಂತ್ವನ)
ಇನ್ನು ಇದರ ಹೊರತಾಗಿ ಕವಿಗೆ ಇಡೀ ಮನುಷ್ಯ ಬದುಕನ್ನು ಹಸನಾಗಿಸುವ ಮತ್ತು ದ್ವೇಷವಿಲ್ಲದ ಪರಸ್ಪರ ನಂಟುಗಳ ಕಾಪಿಟ್ಟುಕೊಳ್ಳುವ ಕುರಿತಾಗಿ ಒಂದು ದಿವ್ಯ ಆಶಯವಿದೆ. ಹೀಗಾಗಿಯೇ ಇಡೀ ಜಗತ್ತು ಮುಖವಾಡಗಳ ಹೊತ್ತು ನಡೆಯುವ ಈ ಸಂದರ್ಭದಲ್ಲಿ “ಹತ್ತಿರ ಸೆಳೆದೂ ದೂರ ನಿಲ್ಲುವ, ದೂರ ಸರಿದೂ ಹತ್ತಿರವಾಗುವ ಮೋಡಿಯೀಗ ಸಾಕೆನ್ನಿಸಿದೆ” (ಇರುವುದೊಂದೆ ಭೂಮಿಯ ಮೇಲೆ) ಈ ಸಾಲುಗಳು ಮಹತ್ವದ್ದು ಎನ್ನಿಸುತ್ತವೆ. ಜೊತೆಯಲ್ಲಿಯೇ “ಗೀತೆ, ಕುರಾನ್, ಬೈಬಲ್, ವೇದ, ಆಗಮ, ಉಪನಿಷತ್ತು, ರಾಮಾಯಣ..ಜೈ ಕಾರ ಹಾಕಲದಷ್ಟೇ ಸಾಕೇ” (ಮಗುವಾದರೂ ಆಗದೇ) ಎನ್ನುವ ಪ್ರಶ್ನೆಗಳು ಓದುಗನನ್ನು ತಣ್ಣಗೆ ಪ್ರಶ್ನಿಸುತ್ತವೆ. ಅದರ ಮುಂದುವರಿಕೆಯಂತೆ ಮನುಷ್ಯ ಬದುಕನ್ನು ಹಸನಾಗಿಸಲು ಯತ್ನಿಸಿದ ಎಲ್ಲ ಮಹಾನ್ ಜೀವಗಳನ್ನು ಕೂಡ ನಮ್ಮ ಮಿತಿಯೊಳಗೆ ನಮ್ಮ ಮೂಗಿನ ನೇರಕ್ಕೆ ಅರಿಯುತ್ತ ಅವರನ್ನು ಸೀಮಿತಗೊಳಿಸುವುದು ಕೂಡ ಕವಿಗೆ ನೋವನ್ನುಂಟು ಮಾಡುವ ಕ್ರಿಯೆಗಳೇ ಆಗಿವೆ ಉದಾಹರಣೆಗೆ ಈ ಸಾಲುಗಳನ್ನು ಗಮನಿಸಬಹುದು “ ಬುದ್ಧ, ಬಸವ, ಅಂಬೇಡ್ಕರ್ ಗಾಂಧಿ ನಮಗೆ ದಕ್ಕಿದ್ದೆಷ್ಟು? ಅವರ ಓದು, ಅರಿವು, ಬಾಳ ಹರಹು ನಮ್ಮ ಹೊಕ್ಕಿದ್ದೆಷ್ಟು?” ( ಬುದ್ಧ,ಬಸವ,ಅಂಬೇಡ್ಕರ್, ಗಾಂಧಿ ಮತ್ತು ನಾವು”
ಬಹುಶ: ಹೀಗೆ ಒಂದೊಂದೇ ಕವಿತೆಗಳನ್ನು ಹೇಳುತ್ತ ಹೋದರೆ ಇಡೀ ಸಂಕಲನದಲ್ಲಿ ಇಂತಹ ಗಟ್ಟಿಯಾದಂತಹ ಅನೇಕ ಸಾಲುಗಳು ನಮಗೆ ಕಾಣಸಿಗುತ್ತವೆ.ಅವೆಲ್ಲವೂ ನಮ್ಮೊಡನೆ ಸಣ್ಣ ದನಿಯಲ್ಲಿ ಮಾತನಾಡುತ್ತ “ಮನುಷ್ಯನೆಂಬ ಮರುಳೇ ಇಷ್ಟೇ ತಿಳಿ ಬದುಕಿನ ಸಾರ” ಎನ್ನುತ್ತ ಮೆಲ್ಲಗೆ ನಗುತ್ತವೆ. ನಶ್ವರ ಬದುಕಿನ ಕುರಿತಾಗಿ ಹೇಳುತ್ತ ಹೇಳುತ್ತ ಶಾಶ್ವತ ನೆಲೆಗಳನ್ನು ಪರಿಚಯಿಸುತ್ತ ಹೋಗುತ್ತವೆ .ಕೆಲವು ಕಡೆ ತುಸು ವಾಚ್ಯವಾಯಿತೇನೋ ಎಂಬಂತೆ ಕಾಣುವ ಇಲ್ಲಿನ ಕವಿತೆಗಳು ಗಟ್ಟಿ ಹಲಸಿನ ಹಣ್ಣಿನೊಳಗೆ ಬಿಡುಸುತ್ತ ಹೋದಂತೆಲ್ಲ ಮಿದುವಾದ ತೊಳೆಗಳು ದೊರಕುವ ಹಾಗೆ ಆಪ್ತ ಎನ್ನಿಸುತ್ತವೆ ಆ ಮೂಲಕ ಅವೆಲ್ಲವೂ ನಮ್ಮವಾಗುತ್ತವೆ.
ದೀಪ್ತಿ ಭದ್ರಾವತಿ
ನಿಮ್ಮ ಅನಿಸಿಕೆಗಳನ್ನು ಪ್ರಾಮಾಣಿಕವಾಗಿ ಅಭಿವ್ಯಕ್ತಗೊಳಿಸಿರುವಿರಿ.ಹೃತ್ಪೂರ್ವಕ ಧನ್ಯವಾದಗಳು ಮೇಡಮ್.
ಬಹು ಆಪ್ತವಾಗಿ ಬರಿದಿರುವಿರಿ.