ಶಿಕ್ಷಕ ಇಂದು ಶಿಕ್ಷಕನಾಗಿ ಉಳಿದಿಲ್ಲ ಅಮು ಭಾವಜೀವಿ

ಕಾವ್ಯ ಸಂಗಾತಿ

ಅಮು ಭಾವಜೀವಿ

ಶಿಕ್ಷಕ ಇಂದು ಶಿಕ್ಷಕನಾಗಿ ಉಳಿದಿಲ್ಲ

ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು, ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಶಿಕ್ಷಕ ಮಹತ್ವವಾದ ಪಾತ್ರವನ್ನು ವಹಿಸುತ್ತಾನೆ. ಔಪಚಾರಿಕ ಶಿಕ್ಷಣ ಹಾಗೂ ಮಗುವಿನ ನಡುವಿನ ಕೊಂಡಿಯಾಗಿ ಶಿಕ್ಷಕ ಕಾರ್ಯನಿರ್ವಹಿಸುತ್ತಾನೆ. ಶಾಲೆ ದೇವಾಲಯವಾದರೆ ಭಕ್ತನಾಗಿ ಬರುವ ವಿದ್ಯಾರ್ಥಿಗೆ ಶಿಕ್ಷಕ ಪೂಜಾರಿಯಂತೆ ಇರುತ್ತಾನೆ. ಶಿಕ್ಷಕ ಸಚ್ಚಾರಿತ್ರ್ಯ ಉಳ್ಳವನಾಗಿ, ಪ್ರಾಮಾಣಿಕ,  ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಅವೆಲ್ಲವನ್ನೂ ತನ್ನ ವಿದ್ಯಾರ್ಥಿಗಳಿಗೆ ವರ್ಗಾಯಿಸುವ ಗುರುತರ ಜವಾಬ್ದಾರಿಯನ್ನು ಹೊಂದಿದವನಾಗಿರುತ್ತಾನೆ.

    ಶಾಲೆಯ ಅಭ್ಯುದಯ ಹಾಗೂ ವಿದ್ಯಾರ್ಥಿಯ ಭವಿಷ್ಯ ಒಳ್ಳೆಯ ಶಿಕ್ಷಕನಿಂದ ಮಾತ್ರ ಸಾಧ್ಯವಾಗುತ್ತದೆ. ಆದರೆ ಇಂದಿನ ದಿನಗಳಲ್ಲಿ ಶಿಕ್ಷಕ ದಾಖಲೆಗಳ ನಿರ್ವಣೆಯ ಕಾರಕೂನನಾಗಿ ಬದಲಾಗಿ ಹೋಗಿದ್ದಾನೆ. ಸರ್ಕಾರ ಹಾಗೂ ಇಲಾಖೆಯ  ಅನ್ಯ ಕಾರ್ಯಗಳ ಹೊರೆ ಹಾಗೂ ದಾಖಲೆಗಳನ್ನು  ನಿಗದಿತ ಸಮಯದಲ್ಲಿ ಕೊಡುವ ಕಾರ್ಯದಲ್ಲಿ ಹೈರಾಣಾಗಿ ಹೋಗಿದ್ದಾನೆ. ಪ್ರತಿನಿತ್ಯ ಹೊಸ ಹೊಸ ಯೋಜನೆ, ಅದಕ್ಕೆ ಬೇಕಾದ ನಿರ್ವಹಣೆಯನ್ನು ಮಾಡುವ ಅನಿವಾರ್ಯ ಇಕ್ಕಟ್ಟಿಗೆ ಸಿಲುಕಿ ಒದ್ದಾಡುತ್ತಿದ್ದಾನೆ . ಚುನಾವಣಾ ಕರ್ತವ್ಯ ಹಾಗೂ ಗಣತಿಯಂತ ಕಾರ್ಯಗಳು ಶಿಕ್ಷಕನಿಂದಲ್ಲದೆ ಬೇರೆಯವರಿಂದ ನಿಖರವಾಗಿ ನೀಡುವುದು ಅಸಾಧ್ಯವೆಂಬ ಮಾತು ಕೇಳಿಬರುತ್ತಿದೆ. ಶಿಕ್ಷಕ ಇಂದು ಶಿಕ್ಷಕನಾಗಿ ಉಳಿದಿಲ್ಲ ಇಲಾಖೆ ಕೇಳುವ ಎಲ್ಲಾ ದಾಖಲೆಗಳನ್ನು ನಿರ್ವಹಿಸಿ ಅವುಗಳನ್ನು ಸೂಕ್ತ ಸಮಯದಲ್ಲಿ ಮತ್ತೆ ಇಲಾಖೆಗೆ ಕಳುಹಿಸುವ ವಾಹಕನಾಗಿದ್ದಾನೆ.

      ಇಂದು ಶಿಕ್ಷಕ ಕಾಣೆಯಾಗಿ ಹೋಗಿದ್ದಾನೆ. ಬದಲಾಗಿ ಅವನು ಮಕ್ಕಳನ್ನು ಶಾಲೆಗೆ ದಾಖಲು ಮಾಡಿಕೊಳ್ಳಬೇಕು, ನಂತರ ಅವರ ದಾಖಲೆಗಳನ್ನು ಸವಿವರವಾಗಿ ಆನ್ಲೈನ್ನಲ್ಲಿ ಅಪ್ಲೋಡ್ ಮಾಡಬೇಕು. ಅದಾದ ಮೇಲೆ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನಕ್ಕಾಗಿ ಅಗತ್ಯ ದಾಖಲೆಗಳನ್ನು ಪೋಷಕರಿಂದ ಪಡೆದು ಮತ್ತೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ ಅದರ ಅಡಕಮುದ್ರಿಕೆ ಮಾಡಿಸಿ ಸಂಬಂಧಪಟ್ಟ ಇಲಾಖೆಗೆ ನೀಡಬೇಕು. ಈ ಮಧ್ಯೆ ನೆಟ್ವರ್ಕ್ ಸಮಸ್ಯೆಯಿಂದಾಗಿ ಹಗಲು ರಾತ್ರಿಯೆನ್ನದೆ ಸೈಬರ್ ಕೆಫೆಗಳ ಎದುರು ಕಾದು ಕುಳಿತು ಈ ಕೆಲಸವನ್ನು ಮಾಡಿ ಮುಗಿಸುವ ಅನಿವಾರ್ಯತೆ ಶಿಕ್ಷಕರದ್ದು. ಹಿಂದೆ ಶಿಕ್ಷಕ ಶಾಲೆಗೆ ಮುಂಚೆ ಅಂದಿನ ಪಾಠ ತಯಾರಿ ಮಾಡಿಕೊಂಡು ಬರಬೇಕಾಗಿತ್ತು. ಆದರೆ ಇಂದು ಶಿಕ್ಷಕ ಶಾಲೆಗೆ ಬರುವಾಗ ಬಿಸಿಯೂಟಕ್ಕೆ ತರಕಾರಿ, ಹಾಲಿಗೆ ಸಕ್ಕರೆ ತೆಗೆದುಕೊಂಡು, ಅಂದಿನ ದಿನ ಇಲಾಖೆಗೆ ನೀಡಬೇಕಾದ ದಾಖಲೆ ಪತ್ರಗಳನ್ನು ಸಂಗ್ರಹಿಸಿಕೊಂಡು ಬರ ಬೇಕಾಗಿದೆ. ಅಲ್ಲದೆ ಅಡುಗೆ ಮಾಡಲು ಗ್ಯಾಸ್ ಬಂದಿದೆಯೋ ಇಲ್ಲವೋ, ಬರೆದಿದ್ದರೆ ಗ್ಯಾಸ್ ವಿತರಕರಿಗೆ ಫೋನಾಯಿಸಿ, ಇಲ್ಲವೇ ತಾನೇ ಖುದ್ದು ಹೋಗಿ ತಂದು ಕೊಡಬೇಕಿದೆ. ಇಷ್ಟೆಲ್ಲದರ ನಡುವೆ ತರಗತಿಯಲ್ಲಿ ತನ್ನನ್ನು ನಂಬಿದ ವಿದ್ಯಾರ್ಥಿಗಳಿದ್ದಾರೆ, ಅವರಿಗೆ ಪಾಠ ಬೋಧನೆ ಮಾಡಬೇಕೆಂಬ ಮತ್ತೊಂದು ಮುಖ್ಯ ಹೊಣೆಗಾರಿಕೆ ಅವನ ಮನಸ್ಸಿನಲ್ಲಿ ಕುಟುಕುತ್ತಿರುತ್ತದೆ. ಇನ್ನೇನು ಪಾಠ ಮಾಡಲು ಪ್ರಾರಂಭಿಸಬೇಕು ಎನ್ನುವಷ್ಟರಲ್ಲಿ ಇಲಾಖೆಯವರಿಂದ ಕರೆ ಬರುತ್ತದೆ. ತುರ್ತಾಗಿ ಆ ಮಾಹಿತಿ ಈ ಮಾಹಿತಿ ಇರಬೇಕು ಎಂದಾಗ ಪಾಠ ಬೋಧನೆಯನ್ನು ಮುಂದುವರಿಸಲಾಗದೆ ದಾಖಲೆ ಕೊಡುವತ್ತ ಧಾವಿಸಬೇಕಾಗುತ್ತದೆ. ಈ ಮಧ್ಯೆ ಪೋಷಕರಿಂದ ದೂರು ಬರುತ್ತದೆ ‘ನಮ್ಮ ಮಕ್ಕಳಿಗೆ ಓದಲು ಬರೆಯಲು ಬರುತ್ತಿಲ್ಲ, ನೀವೇನು ಮಾಡುತ್ತಿದ್ದೀರಿ ಎಂದು ಕೆಲವರಾದರೆ ಮತ್ತೆ ಕೆಲವರು ನನ್ನ ಮಗ/ ಳಿಗೆ ವಿದ್ಯಾರ್ಥಿ ವೇತನ ಬಿಡುಗಡೆಯಾಗಿಲ್ಲ, ಎಲ್ಲಾ ದಾಖಲೆಗಳನ್ನು ಕೊಟ್ಟಿದ್ದರು ನ್ಯೂಸ ಹೇಗೆ ನಿರ್ವಹಿಸಿಲ್ಲ ಹಾಗಾಗಿ ನಮ್ಮ ಮಕ್ಕಳಿಗೆ ಬರಬೇಕಾದ ಹಣವನ್ನು ನೀವು ಕೊಡಿ ಇಲ್ಲ ಸಂಬಂಧಪಟ್ಟವರ ಬಳಿ ಹೋಗಿ ಹಣ  ಖಾತೆಗೆ ಜಮಾ ಮಾಡಿಸಿ ಇಲ್ಲವೆಂದರೆ ಮೇಲಾಧಿಕಾರಿಗಳಿಗೆ, ಮಾಧ್ಯಮದವರಿಗೆ ಹೇಳಬೇಕಾಗುತ್ತದೆ ಎಂಬ ಮಾತುಗಳಿಂದ ಅಕ್ಷರಶಃ ನಲುಗಿ ಹೋಗುತ್ತಾನೆ. ಅಷ್ಟರೊಳಗೆ ಇಲಾಖೆಯ ಅಧಿಕಾರಿಗಳು ಬಂದು ಬಿಸಿಯೂಟ ನಡಿತಿದೆ, ತರಕಾರಿ ಸಾಕಷ್ಟು ಹಾಕುತ್ತಿಲ್ಲ, ರೇಷನ್ ಎಷ್ಟಿದೆ? ಉಳಿದರೆ ಏಕೆ ಉಳಿಯಿತು, ಖಾಲಿಯಾದರೆ ಏಕೆ ಖಾಲಿ  ಆಯಿತು ಎಂಬ ತನಿಖೆ ಮಾಡುತ್ತಾರೆ, ಅದರ ಜೊತೆಗೆ ಸಿ ಆರ್ ಪಿ ಬಂದು ದಾಖಲಾತಿ ಕೊಡಿ ಪ್ರತಿಭಾ ಕಾರಂಜಿ ಕಲೋತ್ಸವ ಕ್ರೀಡಾಕೂಟಗಳಿಗೆ ಮಕ್ಕಳನ್ನು ತಯಾರು ಮಾಡಿ, ಪಠ್ಯಪುಸ್ತಕ ಸಮವಸ್ತ್ರದ ಮಾಹಿತಿ ಕೊಡಿ, ಎಸ್ ಟಿ ಎಂ ಸಿ ಯವರಿಂದ ಅನುಮೋದನೆ ಪಡೆದುಕೊಳ್ಳಿ, ಸಂಬಂಧಪಟ್ಟ ಹಣಕಾಸಿಗೆ ಚೆಕ್ ವಿತರಣೆ ಮಾಡಿ ಎಂಬ ಸಲಹೆಗಳ ಜೊತೆಗೆ ಶೈಕ್ಷಣಿಕವಾಗಿ ಮಕ್ಕಳ ಅಭಿವೃದ್ಧಿಗೆ  ಶ್ರಮವಹಿಸುವಂತೆ ಮಾರ್ಗದರ್ಶನ ನೀಡಿ ಹೋಗುತ್ತಾರೆ.

      ಶಿಕ್ಷಕ ಇಷ್ಟೆಲ್ಲ ಕೆಲಸಗಳನ್ನು ಮಾಡುತ್ತಾ ಬೋಧನೆಗೆ ಸಮಯಾವಕಾಶವಾಗದೆ ಮಕ್ಕಳ ಕಲಿಕೆ ಕುಂಠಿತವಾಗಿ ಪೋಷಕರು ಖಾಸಗಿ ಶಾಲೆಗಳತ್ತ ಮುಖ ಮಾಡಿದಾಗ ಇನ್ನೊಂದು ಸಮಸ್ಯೆ ಎದುರಾಗುತ್ತದೆ. ಮಕ್ಕಳ ದಾಖಲಾತಿ ಕಡಿಮೆ ಇರುವುದರಿಂದ ‘ಹೆಚ್ಚುವರಿ’ ಎಂಬ ಅಸ್ತ್ರ ಪ್ರಯೋಗಿಸಿ ಮತ್ತೆಲ್ಲಿಗೂ ಬಿಸಾಕುವರೆಂಬ ಆತಂಕ ಅವನ ಭರವಸೆಯನ್ನೇ ಕಸಿಯುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಅತ್ತ ದರಿ ಇತ್ತ ಪುಲಿ ಎಂಬಂತಾಗಿ ಶಾಲೆ ಬಿಟ್ಟ ಮಕ್ಕಳನ್ನು ಮತ್ತೆ ಶಾಲೆಗೆ ಕರೆತರುವ ಹೊಣೆಗಾರಿಕೆಯನ್ನು ಹೊರಬೇಕು. ಇಷ್ಟೆಲ್ಲದರ ನಡುವೆ ಮಕ್ಕಳ ಆರೋಗ್ಯ ತಪಾಸಣೆ ಮಾಡಿಸಬೇಕು, ಅಂಗವಿಕಲ ಮಕ್ಕಳಿಗೆ ಸರ್ಕಾರದ ಸೌಲಭ್ಯಗಳನ್ನು ಕೊಡಿಸಬೇಕು, ಅದಕ್ಕಾಗಿ ಆಸ್ಪತ್ರೆ ಕಛೇರಿಗಳನ್ನು ಅಲೆಯಬೇಕಾದ ಕಾರ್ಯದೊತ್ತಡದಲ್ಲಿ ಸಿಲುಕಿದ್ದಾನೆ. ಆಗಿಂದಾಗೆ ಚುನಾವಣೆಗಳು ಎದುರಾಗುತ್ತಿರುವುದರಿಂದ ಮತಪಟ್ಟಿ ಪರಿಷ್ಕರಣೆ ಮಾಡಬೇಕು, ಹೆಸರು ಸೇರಿಸುವುದು ಬಿಡುವುದು ಹೀಗೆ ಸಂಬಂಧಪಟ್ಟ ಕಾರ್ಯ ಮಾಡುವಾಗ ಏನಾದರೂ ಹೆಚ್ಚು ಕಡಿಮೆಯಾದರೆ ಮತದಾರರಿಂದ ಪ್ರಭಾವಿಗಳಿಂದ ದೌರ್ಜನ್ಯಕೊಳಗಾಗಬೇಕಾಗುತ್ತದೆ.

       ಹಿಂದೆ ಶಿಕ್ಷಕರ ಕೆಲಸ ಕೇವಲ ಪಾಠ ಬೋಧನೆಗಷ್ಟೇ ಸೀಮಿತವಾಗಿತ್ತು. ಆದರಿಂದು ಪಾಠ ಬೋಧನೆ ಒಂದನ್ನು ಬಿಟ್ಟು ಉಳಿದೆಲ್ಲ ಕೆಲಸಗಳಿಗೆ ನಿಯೋಜನೆಗೊಂಡಿದ್ದಾನೆ. ಪ್ರತಿಹಂತದಲ್ಲೂ ಶಿಕ್ಷಕರ ನೇರ ಹೊಣೆ  ಮಾಡಲಾಗುತ್ತಿದೆ. ಶಿಕ್ಷಣ ಇಲಾಖೆಯ ತಳಮಟ್ಟದಲ್ಲಿರುವ ಶಿಕ್ಷಕ ತನ್ನ ಮೇಲಾಧಿಕಾರಿಗಳಿಗೂ, ಇತರೆ ಇಲಾಖೆಯ ಅಧಿಕಾರಿಗಳಿಗೂ, ಚುನಾಯಿತ ಪ್ರತಿನಿಧಿಗಳಿಗೂ, ಪೋಷಕರಿಗೂ ಉತ್ತರಿಸಬೇಕಾದ ಉಪದ್ರವಕ್ಕೆ ತುತ್ತಾಗಿದ್ದಾನೆ ಮಕ್ಕಳಿಗೆ ಹಾಲು ಕುಡಿಸಬೇಕು, ಊಟ ಮಾಡಿಸಬೇಕು, ಅವರಿಗೆ ಯೂನಿಫಾರ್ಮ್ ತರಬೇಕು, ಶೂ ಸಾಕ್ಸ್ ತಂದುಕೊಡಬೇಕು, ಈ ಹಂತದಲ್ಲಿ ಅಳತೆಯಲ್ಲಿ ವ್ಯತ್ಯಾಸವಾದರೆ ಪೋಷಕರಿಂದ ಇಲ್ಲಸಲ್ಲದ ಮಾತುಗಳನ್ನು ಕೇಳಬೇಕಾಗಿದೆ. ಇದರ ಜೊತೆಗೆ ಶಾಲಾ ಕಟ್ಟಡದ ನಿರ್ಮಾಣ ಮಾಡಬೇಕು, ಸುಣ್ಣ ಬಣ್ಣ ಮಾಡಿಸಬೇಕು, sdmc ರಚಿಸಬೇಕು, ವಿಪತ್ತು ನಿರ್ವಹಣಾ ತಂಡ ರಚಿಸಬೇಕು, ಮೀನಾ ತಂಡ , ಸ್ಕೌಟ್ಸ್ ಗೈಡ್ಸ್ ತರಬೇತಿ ನೀಡಬೇಕು, ಇಲಾಖೆ ನೀಡುವ ತರಬೇತಿಗಳಗೆ ಹಾಜರಾಗಬೇಕು, ಕಾಲಕಾಲಕ್ಕೆ ಪರೀಕ್ಷೆ  ಅಂಕಗಳನ್ನು ದಾಖಲಿಸಿ ಅದನ್ನು ಆನ್ಲೈನ್ನಲ್ಲಿ ಎಂಟ್ರಿ ಮಾಡಬೇಕು.

       ಇದಿಷ್ಟು ಶಿಕ್ಷಕನ ಕಾರ್ಯ ಚಟುವಟಿಕೆಯಾದರೆ ಅವನಿಗೂ ಒಂದು ವೈಯಕ್ತಿಕ ಬದುಕಿದೆ. ತನ್ನ ಸಂಸಾರ ಮಕ್ಕಳ ಓದು ಬರಹ ಮನೆಪಾಠ, ನನ್ನ ವೈಯಕ್ತಿಕ ಸಮಸ್ಯೆಗಳಿಗೆ ಗಮನ ಕೊಡಲಾಗಿದೆ ತೊಳಲಾಡುತ್ತಿದ್ದಾನೆ. ಮನೆ ಬಾಡಿಗೆ ಕಟ್ಟಬೇಕು. ವಾಹನಕ್ಕೆ ಪೆಟ್ರೋಲ್ ಹಾಕಿಸಬೇಕು , ಮನೆಗೆ ದಿನಸಿ ತರಬೇಕು, ಹಬ್ಬ-ಹರಿದಿನಗಳಿಗೆ ಮಡದಿ ಮಕ್ಕಳಿಗೆ ಬಟ್ಟೆ ತರಬೇಕು ಬಂಧುಬಾಂಧವರನ್ನು ಸಲಹಬೇಕು. ಇಷ್ಟೆಲ್ಲವನ್ನು ಅವನು ತನ್ನ ಸಂಬಳದಲ್ಲಿಯೇ ನಿಭಾಯಿಸಬೇಕು. ತಿಂಗಳ ಸಂಬಳ ಅದರಂತೆ ಅವನ ಪರಿಸ್ಥಿತಿ ಹೇಳತೀರದು. ಆ ಸಮಯದಲ್ಲಿ ಅವನ ಒದ್ದಾಟ ಯಾವ ಶತ್ರುವಿಗೂ ಬೇಡವೆನಿಸುತ್ತದೆ. ಮನೆ ಮತ್ತು ಶಾಲೆ ಎರಡಕ್ಕೂ ಕೈಯಿಂದ ಖರ್ಚು ಮಾಡಿ ತಿಂಗಳಾಗುವುದರೊಳಗೆ ಬರೀ ಕೈಯಲ್ಲಿ ಸಂಬಳಕ್ಕಾಗಿ ಚಾತಕ ಪಕ್ಷಿಯಂತೆ ಕಾದು ಕುಳಿತಿರುತ್ತಾನೆ. ಇನ್ನೂ ಅವನು ತನ್ನ ಕುಟುಂಬಕ್ಕೆ ಸಮಯ ಕೊಡುವ ಮಾತು ದೂರವೇ ಉಳಿಯಿತು.

        ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರಃ ಗುರುಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ ಎಂಬ ಮಾತು ಶಿಕ್ಷಕನ ಶ್ರೇಷ್ಠತೆಯನ್ನು ಹೇಳಿದರೆ ಇಂದಿನ ಪರಿಸ್ಥಿತಿ ಅವನನ್ನು ಆ ಶ್ರೇಷ್ಠತೆಯಿಂದ ನಿಕೃಷ್ಟತೆಯಡೆಗೆ ಕೊಂಡೊಯ್ದಿದೆ. ಇಂದಿನ ಶಿಕ್ಷಕ ಸಮಸ್ಯೆಗಳ ಚಕ್ರವ್ಯೂಹದಲ್ಲಿ ಸಿಲುಕಿ ಹೊರಬರಲಾಗದೆ ಒದ್ದಾಡುತ್ತಿದ್ದಾನೆ. ಸಮುದಾಯ ಮತ್ತು ಇಲಾಖೆಯ ನಡುವೆ ಕೊಂಡಿಯಾಗಿರುವ ಬದಲು ಅವುಗಳ ಒತ್ತಡಕ್ಕೆ ಸಿಲುಕಿ ನಲುಗಿ ಹೋಗುತ್ತಿದ್ದಾನೆ. ಶಿಕ್ಷಕ ಕೇವಲ ಬೋಧನೆಗಷ್ಟೇ ಸೀಮಿತವಾಗಿದ್ದರೆ ಇಂದು ಸರ್ಕಾರಿ ಶಾಲೆಯ ಮಕ್ಕಳು ನೂರಕ್ಕೆ ನೂರು ಅಂಕಗಳಿಸಿ ಲವ ರಂಗಗಳಲ್ಲೂ ಅದ್ವಿತೀಯ ಸಾಧನೆಗಳನ್ನು ಮಾಡುತ್ತಿದ್ದರು. ಹಾಗಾಗದೆ ಕೇವಲ  ಕೆಲವು ಮಕ್ಕಳು ವಿದ್ಯಾವಂತರಾಗಿ ಉಳಿದವರೆಲ್ಲ ಹಿಂದುಳಿದಿರುವುದು ಶಿಕ್ಷಣ ಎಂತಹ ದುಸ್ಥಿತಿಗೆ ತಲುಪುತ್ತಿದೆ ಎಂಬುದಕ್ಕೆ ತಾಜಾ ಉದಾಹರಣೆಯಾಗಿದೆ. ಇದೆಲ್ಲದಕ್ಕೂ ಶಿಕ್ಷಕರನ್ನೇ ನೇರ ಹೊಣೆಗಾರರನ್ನಾಗಿ ಮಾಡುತ್ತಿರುವುದು ಕೂಡ ಶಿಕ್ಷಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇನ್ನು ಮುಂದಾದರೂ ಶಿಕ್ಷಕರಿಗೆ ಅನ್ಯ ಕಾರ್ಯದ ಹೊಣೆಯನ್ನು ಕಡಿಮೆ ಮಾಡಿ ಅವನಿಗೆ ಮಕ್ಕಳ ಬಳಿ ಹೋಗಿ ಬೋಧನೆ ಕಲಿಕಾ ಪ್ರಕ್ರಿಯೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಲು ಅನುವು ಮಾಡಿಕೊಡಬೇಕು. ಒತ್ತಡ ರಹಿತವಾದ ಕೆಲಸದಲ್ಲಿ ಅವನು ತನ್ನನ್ನು ತಾನು ತೊಡಗಿಸಿಕೊಳ್ಳಬೇಕು. ಆ ಮೂಲಕ ತಿಗಳ ಭವಿಷ್ಯವನ್ನು ಕಟ್ಟುವ ಗುರುತರ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ಯಶಸ್ವಿಯಾಗುತ್ತಾನೆ. ಅದರಿಂದ ಸಮಾಜದಲ್ಲಿ ಅವನು ಕಳೆದುಕೊಂಡಿರುವ ಘನತೆಯನ್ನು ಮತ್ತೆ ಪಡೆದುಕೊಳ್ಳಲು ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮನ್ನು ಆಳುವವರು, ಅಧಿಕಾರಿಗಳು , ಶಿಕ್ಷಣ ತಜ್ಞರು, ಸಮುದಾಯ ಎಲ್ಲವೂ ಶಿಕ್ಷಕನ ವೃತ್ತಿಯ ಹೊರೆಯನ್ನು ಕಡಿಮೆ ಮಾಡಲು ಮಾರ್ಗೋಪಾಯಗಳನ್ನು ಕಂಡುಕೊಂಡು ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಶಿಕ್ಷಕರೊಂದಿಗೆ ಕೈಜೋಡಿಸಬೇಕು. ಹಾಗಾದಾಗ ಮಾತ್ರ ಶಿಕ್ಷಕರ ವೃತ್ತಿ ತನ್ನ ಪಾವಿತ್ರತೆಯನ್ನು ಉಳಿಸಿ ಕೊಂಡು ಸದೃಢ ಸಮಾಜ ಕಟ್ಟಲು ಸಹಾಯಕವಾಗುತ್ತದೆ.


ಅಮು ಭಾವಜೀವಿ

2 thoughts on “ಶಿಕ್ಷಕ ಇಂದು ಶಿಕ್ಷಕನಾಗಿ ಉಳಿದಿಲ್ಲ ಅಮು ಭಾವಜೀವಿ

Leave a Reply

Back To Top