ಕಾವ್ಯ ಸಂಗಾತಿ
ಡಾ. ಸುನೀಲ್ ಕುಮಾರ್

ಗಜಲ್

ಶುಭಾಶಯ ಕೋರಿದ ನಿನ್ನ ಗುಳಿಗೆನ್ನೆ ನಗುಮೊಗ ರಸಗುಲ್ಲ ಸವಿದಷ್ಟೇ ಲಾಜವಾಬ್
ಸದಾಶಯ ಮನ ಹೊತ್ತು ಹಸ್ತಲಾಘವ ಮಾಡಿದ ಕರ ಬೆಣ್ಣೆಯಷ್ಟೇ ಲಾಜವಾಬ್
ಮುತ್ತ ನೀಡಲು ಮಧುಕರ ಮುತ್ತಿಗೆ ಹಾಕಿತು ಕೆಂಗುಲಾಬಿ ಪುಷ್ಪ ದಳಕೆ
ಮತ್ತು ತಂದ ಮೃದು ಸ್ಪರ್ಶ ಜಿನುಗಿದ ಸಿಹಿಜೇನಿನಷ್ಟೇ ಲಾಜವಾಬ್
ಸೇತುವೆ ದಾಟಿ ಬಂದೆಯಾ ಬದಿಗೆ ಬಯಕೆಯ ಬೇಗುದಿ ತಣಿಸುವ ಘಳಿಗೆ
ಕಣಿವೆಯ ಆಳಕೆ ಇಳಿಯದೆ ಮುಳುಗಿದ ಧಣಿ ನೀಲಕುರುಂಜಿಯಷ್ಟೇ ಲಾಜವಾಬ್
ಹತ್ತಿಯ ಮೆದುವಿಗೆ ಅಪ್ಪಿತು ಹಾಸಿಗೆ ದಣಿದ ಮನಗಳ ಮಿಲನದ ತದಿಗೆ
ನೆತ್ತಿಯ ಸುಳಿಗೆ ಅದರ ಮೈಲಿಗೆಯ ಅಂಟಿನ ಸದರ ಮಹಾಮಜ್ಜದನದಷ್ಟೇ ಲಾಜವಾಬ್
ಚಂದಿರ ಅಂಗಳಕೆ ತಿಂಗಳ ಬೆಳಕು ಹರಿಸುವ ಥಳಕು ಬಿನ್ನಾಣಗಳ ನಡುವೆ
ಕುಮಾರ ಕಂಗಳಿಗೆ ಕನಸು ನನಸಾಗಿಸಿದ ಪಸೆ ಮೊಳೆತ ಬೀಜದಷ್ಟೇ ಲಾಜವಾಬ್
ಶಬ್ದಾರ್ಥ:
ನೀಲಕುರುಂಜಿ- ನೀಲಗಿರಿ ಪರ್ವತ ಶ್ರೇಣಿಗಳಲ್ಲಿ ೧೨ ವರ್ಷಗಳಿಗೊಮ್ಮೆ ಬಿಡುವ ನೀಲಿ ಬಣ್ಣದ ಹೂವು
ಲಾಜವಾಬ್(ಉರ್ದು ಪದ)- ಸಾಟಿಯಿಲ್ಲದ್ದು
–ಡಾ. ಸುನೀಲ್ ಕುಮಾರ್
(ಸುಕುಮಾರ)



