
ಅಂಕಣ ಸಂಗಾತಿ
ಹನಿಬಿಂದು
ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ
ಕಾಲಕ್ಕೆ ತಕ್ಕಂತೆ ಬದಲಾಗಬೇಕು ಅಲ್ಲವೇ?

ಆಗಸ್ಟ್ ಬಂದಿದೆ. ಆಷಾಡ ಕಳೆದಿದೆ. ಹಬ್ಬಗಳ ಸಾಲು ಪ್ರಾರಂಭವಾಗಿದೆ. ಇನ್ನು ಅಲ್ಲಿ ಇಲ್ಲಿ ಸಿಹಿ ಖಾರ ಅಂತ ತಿಂದು, ಹೊಟ್ಟೆ ಕೆಟ್ಟು ಆರೋಗ್ಯ ಹಾಳಾಗುವುದು ಒಂದು ಕಡೆ ಆದರೆ ಮತ್ತೊಂದು ಕಡೆ ಹಲವೆಡೆ ಮಳೆ, ಕೆಸರು, ಸೊಳ್ಳೆ, ಶೀತ, ಕೆಮ್ಮು, ಡೆಂಗ್ಯೂ, ವೈರಲ್ ಜ್ವರ, ಸಾಂಕ್ರಾಮಿಕ ರೋಗಗಳು, ಆಸ್ಪತ್ರೆಗೆ ಹೋದರೆ ಲಕ್ಷಗಟ್ಟಲೆ ಉದ್ದದ ಬಿಲ್ಲುಗಳು! ಅದಕ್ಕೆ ವಾಕಿಂಗ್ ಜಾಗಿಂಗ್ ರನ್ನಿಂಗ್! ಒಂದು ದಿನ ಹೋದರೆ ಮರುದಿನ ಕೈ ಕಾಲು ನೋವು. ಸಂಜೆ ಕೆಲಸ ಮಾಡಿ ಸುಸ್ತು! ಬೆಳಗ್ಗೆ ಬೇಗ ಏಳಲು ಆಗದು! ಮನೆಗೆ ಬಂಧುಗಳು ಬಂದರೆ ಬಹಳ ಕೆಲಸ! ಸಮಯ ಸಿಗದು! ಇದನ್ನು ಪ್ರತಿದಿನ ಪಾಲಿಸುವುದು ಕಷ್ಟ! ಇದೆಲ್ಲ ಎಲ್ಲರ ಸಾಮಾನ್ಯ ಸಮಸ್ಯೆ! ಆದರೆ ಹಿಂದಿಯಲ್ಲಿ ಒಂದು ಮಾತಿದೆ. ಕುಚ್ ಪಾನೇ ಕೇ ಲಿಯೇ ಕುಚ್ ಖೋನ ಪಡ್ತಾ ಹೆ. ಏನನ್ನಾದರೂ ಪಡೆದುಕೊಳ್ಳಬೇಕು ಅಂದರೆ ಮತ್ತೆ ಏನನ್ನಾದರೂ ಕಳೆದುಕೊಳ್ಳಲೆ ಬೇಕು! ತ್ಯಾಗಕ್ಕೆ ನಾವು ಸಿದ್ಧರಾಗಬೇಕು. ಯಾವುದೇ ಸಾಧಕರ ಬಳಿ ಕೇಳಿ ನೋಡಬೇಕು. ಅವರ ಸಾಧನೆಯ ಹಿಂದಿನ ಕಷ್ಟಗಳನ್ನು! ಡಾ. ಎ. ಪಿ. ಜೆ. ಅಬ್ದುಲ್ ಕಲಾಂ ಅವರು ಹೇಳುವ ಪ್ರಕಾರ ನಾವು ನಿದ್ದೆಯಲ್ಲಿ ಕಾಣುವುದು ನಿಜವಾಗಿ ನಮ್ಮ ಜೀವನದ ಕನಸಲ್ಲ. ನಮ್ಮ ನಿಜ ಜೀವನದ ಕನಸು ಯಾವುದೆಂದರೆ ಅದು ನಮ್ಮನ್ನು ಮಲಗಲು ಬಿಡುವುದಿಲ್ಲ. ಆ ಕನಸನ್ನು ಸಾಧಿಸುವವರೆಗೆ ನಾವು ಅದರ ಕಡೆಗೇ ಗಮನ ಕೊಟ್ಟು, ಹಗಲು ರಾತ್ರಿ ಅದಕ್ಕಾಗಿ ದುಡಿದು ಅದನ್ನು ಸಾಧಿಸಿ ಸಂತಸ ಮರೆಯುತ್ತೇವೆ. ಹೌದು, ನಮ್ಮ ಸಣ್ಣ ಕನಸನ್ನು ಸಾಧಿಸಲು ನಾವು ಒಂದಿಷ್ಟು ತ್ಯಾಗಕ್ಕೆ ಸಿದ್ಧರಾಗಬೇಕು ಅಷ್ಟೇ! ಸಾಧಿಸಿದರೆ ಸಬಳವನ್ನೂ ನುಂಗಬಹುದಂತೆ! ಗಾದೆ ಮಾತು ಸುಳ್ಳಾಗದು! ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ, ಆದರೆ ಸಾಧಿಸುವ ಛಲ, ದಿಟ್ಟ ನಿರ್ಧಾರ ನಮ್ಮಲ್ಲಿ ಇರಬೇಕು ಅಷ್ಟೇ.

” ನನ್ನಿಂದ ಇದು ಸಾಧ್ಯವೇ ಇಲ್ಲಪ್ಪ, ಅದೆಲ್ಲ ದೊಡ್ಡ ದೊಡ್ಡವರಿಗೆ ಮಾತ್ರ ಸಾಧ್ಯ..” ಎಂದು ಹಲವಾರು ಜನ ಮಾತನಾಡಿಕೊಳ್ಳುತ್ತಿರುತ್ತಾರೆ, ಅದರ ಬದಲು “ಆ ದೊಡ್ಡವರು ನಾವೂ ಆಗಬಾರದು ಏಕೆ?” ಎಂದು ಧನಾತ್ಮಕವಾಗಿ, ವೈವಿಧ್ಯಮಯವಾಗಿ ಯಾಕೆ ಯೋಚನೆ ಮಾಡಬಾರದು? ನಮ್ಮ ಬದುಕನ್ನು ಬೇರೆಯವರು ಆಡಿಕೊಳ್ಳುವುದರ ಮೇಲೆ ನಿಲ್ಲಲು ಬಿಡಬಾರದು. ಬದಲಾಗಿ ನಮ್ಮ ಬಾಳು ನಮ್ಮ ಆಲೋಚನೆಗಳ ಮೇಲೆ ನಿಲ್ಲುತ್ತದೆ. ಆ ಆಲೋಚನೆಗಳು ಉದಾತ್ತವಾದರೆ ಸಾಕು, ಬದುಕು ಮೇಲೇರುತ್ತದೆ. ನಮ್ಮ ಭೂಮಿಯಲ್ಲಿ ನಮ್ಮ ಸ್ಥಾನವನ್ನು ದೇವರು ನಿರ್ಧರಿಸುತ್ತಾನೆ ಆದರೂ ಕಷ್ಟ ಪಟ್ಟವನಿಗೆ ಸುಖ ಇದ್ದೇ ಇದೆ. ಕಷ್ಟಪಟ್ಟು ಮರ ಹತ್ತಿದವನು ಮೇಲೆ ಏರಲೆ ಬೇಕು ಅಲ್ಲವೇ? ಕಠಿಣ ಪರಿಶ್ರಮಕ್ಕೆ ಯಶಸ್ಸು ಎಂದೂ ಕಟ್ಟಿಟ್ಟ ಬುತ್ತಿ ಅಲ್ಲವೇ?
ಒಂದು ಸಣ್ಣ ಕೆಲಸವೂ ನಾವು ಗಮನ ಕೊಡದೆ ಇದ್ದರೆ ಅದೆಷ್ಟು ದೊಡ್ಡದಾಗಿ ಬಿಡುತ್ತದೆ ಅಲ್ಲವೇ? ಉದಾಹರಣೆಗೆ ಮನೆಯ ಮೂಲೆಯಲ್ಲಿ ಬಲೆ ಕಟ್ಟುವ ಜೇಡ. ಜೇಡರ ಬಲೆ! ದಿನ ದಿನ ಗುಡಿಸುವುದು ಸುಲಭ! ಅದೇ ತಿಂಗಳುಗಟ್ಟಲೆ ಹಾಗೆಯೇ ಬಿಟ್ಟರೆ ಮನೆಯ ಸ್ವಚ್ಛತೆಯ ಕಾರ್ಯವೇ ಒಂದು ದೊಡ್ಡ ಕೆಲಸವಾಗಿ ಬಿಡುತ್ತದೆ ಅಷ್ಟೇ! ಹಿಂದಿನ ಕಾಲದ ಮಹಿಳೆಯರು ವಾಕಿಂಗ್, ಜಾಗಿಂಗ್ ಏನೂ ಮಾಡುತ್ತಿರಲಿಲ್ಲ! ಹತ್ತು ಹನ್ನೆರಡು ಮಕ್ಕಳ ಹೆತ್ತರೂ ಆರೋಗ್ಯವಾಗಿ ಇದ್ದರು. ಚೆನ್ನಾಗಿ ಮನೆಯ ಒಳಗೆ, ತೋಟ, ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದರು. ಮತ್ತೆ ಕಾಡಿಗೆ ಹೋಗಿ ಕಟ್ಟಿಗೆ ಹೊರೆ ತರುತ್ತಿದ್ದರು. ಬಹಳ ದೂರ ನಡೆದು ತಮ್ಮ ಬಂಧುಗಳ ಮನೆ ತಲುಪುತ್ತಿದ್ದರು, ನಡೆದೇ ದೇವಾಲಯಗಳ ದರ್ಶನ ಪಡೆಯುತ್ತಿದ್ದರು. ಬೀಸುವ ಕಲ್ಲು, ರುಬ್ಬುವ ಕಲ್ಲು ಬಳಸುತ್ತಿದ್ದರು, ಒನಕೆ ಹಿಡಿದು ಬತ್ತ ಕಟ್ಟುತ್ತಿದ್ದರು, ಸಣ್ಣ ಹಿಡಿಸೂಡಿ ಅಥವಾ ತೆಂಗಿನ ಗರಿಯ ಪೊರಕೆ ಹಿಡಿದು ಬಗ್ಗಿ ದೊಡ್ಡದಾದ ಅಂಗಳ ಗುಡಿಸುತ್ತಿದ್ದರು, ಬಾವಿಯಲ್ಲಿ ರಾಟೆಯ ಮೂಲಕ ನೀರೆಳೆದು ಮನೆಗೂ, ಗಿಡಗಳಿಗೂ ಹಾಕುತ್ತಿದ್ದರು. ತೋಟದಲ್ಲಿ ಗಿಡಗಳ ಆರೈಕೆ, ಕಳೆ ತೆಗೆಯುವುದು, ಚಿಗುರು ತೆಗೆಯುವುದು, ಕಾಯಿ ಹಣ್ಣು ಕೊಯ್ಯುವುದು, ಬಗ್ಗಿ ಎದ್ದು ಮಾಡುವ ಈ ಕಾರ್ಯಗಳು, ಗದ್ದೆಯಲ್ಲಿ ಉಳುಮೆ, ಬಿತ್ತನೆ, ಕಳೆ ಕೀಳುವ ಕಾರ್ಯ, ಕಟಾವು, ಸ್ವಚ್ಛತೆ ಹೀಗೆ ಪ್ರತಿ ಕಾರ್ಯವೂ ದೈಹಿಕ ವ್ಯಾಯಾಮವೇ ಆಗಿತ್ತು. ಯಾವುದೇ ಹೊಸ ವಾಕ್ ಬೇಕಿರಲಿಲ್ಲ!
ಆದರೆ ಹೊಸ ತಾಂತ್ರಿಕ ಯುಗ ಹಾಗಲ್ಲ, ಜನರಿಗೆ ದೈಹಿಕವಾಗಿ ಕಷ್ಟ ಪಡುವ ಎಲ್ಲಾ ಕೆಲಸಗಳನ್ನೂ ಬುದ್ಧಿವಂತರಾದ ನಾವು ಯಂತ್ರಗಳಿಂದ ಮಾಡಿಸುತ್ತೇವೆ. ಹಾಗಾಗಿ ರುಬ್ಬುವ, ಬೀಸುವ, ನೀರೆಳೆಯುವ, ಉಳುವ, ಕಟಾವು ಮಾಡುವ, ನಡೆಯುವ ಯಾವ ಕಷ್ಟ ಕಾರ್ಯಗಳೂ ಇಲ್ಲದ ಕಾರಣ ನಾವು ದೈಹಿಕವಾಗಿ ಅದರ ಜೊತೆ ಯೋಚನೆ ಹೆಚ್ಚಾಗಿ, ಒತ್ತಡಕ್ಕೆ ಮನಸ್ಸನ್ನು ಒಳಪಡಿಸಿ ಮಾನಸಿಕವಾಗಿಯೂ ನೊಂದು ದಿನದಿಂದ ದಿನಕ್ಕೆ ರೋಗಿಗಳಾಗಿ ಹೋಗುತ್ತಿದ್ದೇವೆ. ಹೊಸ ಹೊಸ ರೋಗಗಳಿಗೆ ಮದ್ದು ಕಂಡು ಹಿಡಿಯುತ್ತಿದ್ದ ಹಾಗೆಯೇ ಮದ್ದಿಲ್ಲದ ಹೊಸ ರೋಗಗಳೂ, ಹೊಸ ರೋಗಾಣು ಜೀವ ತಳಿಗಳೂ ನಮ್ಮಿಂದಲೇ ಸೃಷ್ಟಿಯಾಗಿ ನಮ್ಮನ್ನೇ ನಾಶ ಮಾಡುವ ಕಾಲ ಬಂದಿದೆ. ಬಿ ಎ ರೋಮನ್ ವೆನ್ ಯು ಆರ್ ಇನ್ ರೋಮ್ ಎನ್ನುವ ಆಂಗ್ಲ ಗಾದೆಯ ಹಾಗೆ ಕಾಲವನ್ನು ಬದಲಾಯಿಸಿರುವ ನಾವು ಕಾಲಕ್ಕೆ ತಕ್ಕಂತೆ ಕುಣಿಯಲೆ ಬೇಕಲ್ಲವೇ? ನೀವೇನಂತೀರಿ?
————————————————————
ಹನಿ ಬಿಂದು

ಹೆಸರು- ಪ್ರೇಮಾ ಆರ್ ಶೆಟ್ಟಿ ಕಾವ್ಯನಾಮ- ಹನಿ ಬಿಂದುನೂರಕ್ಕೂ ಅಧಿಕ ರಾಷ್ಟ್ರ, ರಾಜ್ಯ, ಅಂತರರಾಜ್ಯ, ಜಿಲ್ಲಾ ಮಟ್ಟದ ಕವಿಗೋಷ್ಠಿಗಳಲ್ಲಿ ಅಧ್ಯಕ್ಷರಾಗಿ, ಕವಿಯಾಗಿ, ಭಾಗವಹಿಸಿದ ಅನುಭವ.ವಿದ್ಯಾರ್ಹತೆ – ಕನ್ನಡ ಮತ್ತು ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ಬಿಎಡ್.ವೃತ್ತಿ – ಪದವೀಧರ ಆಂಗ್ಲ ಭಾಷಾ ಶಿಕ್ಷಕರು ಪ್ರವೃತ್ತಿ – ಫ್ಯಾಷನ್ ಡಿಸೈನಿಂಗ್, ಲೇಖಕಿ, ಕವಯತ್ರಿ, (ಕನ್ನಡ, ತುಳು, ಇಂಗ್ಲಿಷ್ ವಿಷಯಗಳಲ್ಲಿ) ಅಂಕಣಗಾರ್ತಿ (ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ) , ಚಿಂತಕಿ,ಸ್ಪೋಕನ್ ಇಂಗ್ಲಿಷ್ ಬೋಧಕಿ. ಮೋಟಿವೇಟರ್,, ಲಿಟರೇಚರ್ ಆಫ್ ಹನಿಬಿಂದು ಇದು ಇವರ ಬ್ಲಾಗ್. , ತುಳು ಕಲ್ಪುಗ ಚಾನೆಲ್ ನ ಫೇಸ್ಬುಕ್, ಇನ್ಸ್ಟಾ ಗ್ರಾಂ, ಯೂ ಟ್ಯೂಬ್ ನಿರ್ವಾಹಕಿ. ಕಲಿಕಾರ್ಥಿ, ವಿದ್ಯಾರ್ಥಿ ಪ್ರೇರಕಿ.ಪ್ರಕಟಿತ ಕೃತಿ – ಭಾವ ಜೀವದ ಯಾನ (ಕವನ ಸಂಕಲನ)ಪ್ರತಿಲಿಪಿಯಲ್ಲಿ ಬರಹಗಾರ್ತಿ – ಮೂವತ್ತಾರು ಸಾವಿರಕ್ಕೂ ಹೆಚ್ಚು ಜನರಿಂದ ಓದಲ್ಪಟ್ಟಿರುವರು.