ಅಂಕಣ ಸಂಗಾತಿ

ಸುತ್ತ-ಮುತ್ತ

ಸುಜಾತಾ ರವೀಶ್

ಚಾರಿತ್ರ ಹರಣ

ಯಶಸ್ವಿ ಮಹಿಳೆಯರು ಒಂದಲ್ಲ ಒಂದು ಘಟ್ಟದಲ್ಲಿ ಅನುಭವಿಸಿರುವ ಶಿಕ್ಷೆ .ಇದು ತಮ್ಮದಲ್ಲದ ತಪ್ಪಿಗೆ ಸಮಾಜ ಕೊಡುವ ಈ ಶಿಕ್ಷೆಯ ಹೆಸರು ಚಾರಿತ್ರಹರಣ.

ಯಾರಾದರೂ ಪುರುಷ ತನ್ನ ಕ್ಷೇತ್ರದಲ್ಲಿ ಯಶಸ್ಸು ವಿಜಯ ಕಂಡು ಸಫಲನಾದರೆ ಆಗ ಅವನ ಪ್ರತಿಭೆ ಎಂದು ಜನ ಮೆಚ್ಚುತ್ತಾರೆ. ಆದರೆ ಎಲ್ಲಾ ಸಮಯದಲ್ಲೂ ಈ ರೀತಿಯ ಸಮಾಜದ ಪ್ರಶಂಸೆ ಯಶಸ್ವಿ ಮಹಿಳೆಯ ಪಾಲಿಗೆ ಇರುವುದಿಲ್ಲ. ಅವಳನ್ನು ಕಾಮಾಲೆಯ ಕಣ್ಣಿನಿಂದಲೇ ನೋಡುವ ಜನರೇ ಹೆಚ್ಚು .

ಸಿನಿಮಾ ಕ್ಷೇತ್ರದಲ್ಲಿ ಹೆಸರು ಗಳಿಸಿ ಒಳ್ಳೆಯ ಅವಕಾಶಗಳನ್ನು ಪಡೆಯುವ ನಟಿಯ ಜೊತೆಗೆ ಇನ್ಯಾರದೋ ಹೆಸರನ್ನು ತಳಕು ಹಾಕುವುದು, ಅವರನ್ನು ಗಾಡ್ ಫಾದರ್ ಆಗಿ ಹೊಂದಿದ್ದಾಳೆ ಎನ್ನುವುದು, ಅವರೊಡನೆ ಅಕ್ರಮ ಸಂಬಂಧದ ಆರೋಪ ಹೊರಿಸುವುದು ಇದೆಲ್ಲ ಸಮಾಜದ ಸಾಮಾನ್ಯ ನಡೆ. ಇನ್ನು ರಾಜಕೀಯ ಕ್ಷೇತ್ರದಲ್ಲೂ ಅಷ್ಟೇ ಗಾಡ್ ಫಾದರ್ ಗಳಿಲ್ಲದೆ ಮುಂದೆ ಬರಲು ಸಾಧ್ಯವೇ ಎಂಬ ಕುಹಕ. ಯಾರಾದರೂ ಒಬ್ಬರು ಬೆಂಬಲಕ್ಕೆ ಇರಲೇಬೇಕು, ಆ ಬೆಂಬಲ ಕೊಟ್ಟವರು ಅವಶ್ಯವಾಗಿ ಇವರೊಡನೆ ವಿಶೇಷ ಸಂಬಂಧ ಹೊಂದಿರಲೇಬೇಕು ಎನ್ನುವುದು ಈ ಕುಹಕಿಗಳ ಆರೋಪ.

ಪ್ರಸಿದ್ಧರ ಜನಪ್ರಿಯರ ವಿಷಯ ಬಿಟ್ಟುಬಿಡಿ. ಸರ್ವೇ ಸಾಮಾನ್ಯ ಜನ ಜೀವನದಲ್ಲಿಯೂ ಅಷ್ಟೇ. ಹೆಣ್ಣೊಬ್ಬಳು ತನ್ನ ಪ್ರತಿಭೆಯಿಂದ ಮಾತ್ರ ಮುಂದೆ ಬಂದಳು ಬರುತ್ತಿದ್ದಾಳೆ ಎನ್ನುವುದನ್ನು ಜಗತ್ತು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಯಾವುದಕ್ಕಾದರೂ ಒಂದು ಸುಲಭ ದಾರಿ ಇದೆ ಎಂದೇ ಅವರ ಅಂಬೋಣಗಳು. ಹೆಂಗಸರ ವಿಷಯದಲ್ಲಿ ಸಿಗುವುದು ಈ ಎಲುಬಿಲ್ಲದ ನಾಲಿಗೆಗಳಿಗೆ ಮಾತನಾಡಲು ಅದೊಂದೇ ವಿಷಯ. ಅವರ ಸಫಲತೆಗೆ ಅದೊಂದೇ ಹಾದಿ ಎನ್ನುವುದು ಅವರ ಆಚಾರವಿಲ್ಲದ ನಾಲಿಗೆಯ ಹೊರಳು.

ಪಿ ಎಚ್ ಡಿ ಮಾಡಲು ಹೊರಟ ವಿದ್ಯಾರ್ಥಿನಿಯರಿಗೆ ಅವರ ಮಾರ್ಗದರ್ಶಿ ಪ್ರಾಧ್ಯಾಪಕರ ವಿಶೇಷ ಗಮನ ಇದೆ ಎಂಬ ಆಪಾದನೆ .ಸಂಶೋಧನಾ ವಿದ್ಯಾರ್ಥಿನಿಯರಿಗೂ ಸಹ ಹಾಗೆಯೇ. ಆಂತರಿಕ ಮೌಲ್ಯಮಾಪನ ಇರುವ ಕಡೆಗಳಲ್ಲಿ ಅಷ್ಟೇ ಪ್ರಾಧ್ಯಾಪಕರ ಜೊತೆ ವಿಶೇಷ ಸಲಿಗೆ ಇರುವ ವಿದ್ಯಾರ್ಥಿನಿಯರಿಗೆ ಹೆಚ್ಚು ಅಂಕಗಳು ದೊರೆಯುತ್ತದೆ ಎನ್ನುವ ಆರೋಪ. ಮಹಿಳಾ ಉದ್ಯೋಗಸ್ಥೆಯರಿಗೆ ಪದೋನ್ನತಿಗಳಾದರೆ ಅವರ ಪುರುಷ ಮೇಲಧಿಕಾರಿಗಳ ಕೃಪಾಕಟಾಕ್ಷ ಎನ್ನುವುದು ಇವೆಲ್ಲವೂ ಈ ಚಾರಿತ್ರ್ಯ ವಧೆಯ ವಿವಿಧ ಮುಖಗಳೇ.

ಹೆಚ್ಚಿನ ಅಂಶ ಈ ರೀತಿಯ ಊಹಾಪೋಹಗಳನ್ನು ಗಾಳಿ ಮಾತುಗಳನ್ನು ಹುಟ್ಟಿಸಿ ರೆಕ್ಕೆ ಪುಕ್ಕ ಕಟ್ಟಿ ಹಾರಿಸುವವರು ಇದೇ ರಂಗದಲ್ಲಿನ ಯಶಸ್ಸು ಕಾಣದ ಸೋಲು ಉಂಡವರೇ ಆಗಿರುತ್ತಾರೆ ಎನ್ನುವುದಷ್ಟೇ ಅಲ್ಲ ಸಂಬಂಧವೇ ಇರದ ಮೂರನೇ ವ್ಯಕ್ತಿಗಳು ಸಹ ಇದರಲ್ಲಿ ಭಾಗಿಯಾಗುತ್ತಾರೆ . ಇಂತಹ ಕಫೋಲ ಕಲ್ಪಿತ ವಿಷಯಗಳು ಅತಿರಂಜಿತವಾಗಿ ಅವರ ಟೀ ಸಮಯದ, ಕೆಲವೊಮ್ಮೆ ರಾತ್ರಿ ಗುಂಡು ಹಾಕುವ ವೇಳೆಯ ನೆಂಚಿಕೆಗಳಾಗಿರುತ್ತವೆ. ಹಾಗೂ ಇವೆಲ್ಲದರಲ್ಲಿ ವಿದ್ಯಾವಂತರು ಸಮಾಜದ ಉನ್ನತಸ್ತರಗಳಲ್ಲಿ ನಿಂತು ಮಾದರಿಗಳಾಗಬೇಕಾದವರೇ ಪಾಲುದಾರರಾಗುವುದು ನಿಜಕ್ಕೂ ಶೋಚನೀಯ ಸಂಗತಿಯೇ ಸರಿ.

ಈ ರೀತಿಯ ಊಹಾಪೋಹದ ಗಾಳಿ ಮಾತುಗಳು ಸಮಾಜದಲ್ಲಿ ಹಬ್ಬುವಾಗ ನಿಜವಾಗಿ ಪ್ರತಿಭೆಯ ಮಾನದಂಡದಿಂದ ಇಂತಹವುಗಳನ್ನು ಪಡೆದ ವ್ಯಕ್ತಿಯ ಆತ್ಮವಿಶ್ವಾಸ ಕುಗ್ಗಿಬಿಡುತ್ತದೆ . ಅಲ್ಲದೆ ಮುಂದೆ ಈ ರಂಗಗಳಲ್ಲಿ ಬರುವವರು ಸಹ ಕೆಟ್ಟ ಹೆಸರು ಬರುವ ಸಾಧ್ಯತೆಯಿಂದ ಪ್ರತಿಭೆಯಿದ್ದರೂ ಹಿಂದೆ ಉಳಿಯುವಂತಹ ಪ್ರಸಂಗಗಳು ಸಹ ಎಷ್ಟೋ. ಸಮಾಜದ ಸ್ವಾಸ್ಥ್ಯ ಮತ್ತು ಒಳಿತಿಗೆ ಇದು ಖಂಡಿತ ಮಾರಕ. ಸ್ತ್ರೀ ಎಂದರೆ ಬರೀ ಕಾಮಪೂರೈಕೆಯ ಶೋಕಿಯ ವಸ್ತು ಎಂದು ನೋಡುವಂತಹ ದೃಷ್ಟಿ ಬದಲಾಗಬೇಕು. ಅವಳ ವಿಶ್ವಾಸ ಅರ್ಹತೆ ಪ್ರತಿಭೆಗಳನ್ನು ನಿಜವಾದ ಮಾನದಂಡದಿಂದ ಅಳೆದು ಅವಳಿಗೆ ತಕ್ಕ ಅವಕಾಶಗಳು ಸಿಗಬೇಕು. ಆಗ ಮಾತ್ರ ಸ್ತ್ರೀ ಸಮಾನತೆ ಎಂಬ ಪದಕ್ಕೆ ಅರ್ಥ ಬರುತ್ತದೆ.


ಸುಜಾತಾ ರವೀಶ್

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ. “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂaಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ
ಬಯಕೆ ಲೇಖಕಿಯವರದು

Leave a Reply

Back To Top