ಕಾವ್ಯ ಸಂಗಾತಿ
ಲೀಲಾಕುಮಾರಿ ತೊಡಿಕಾನ
ಲಘು ಪಾತ್ರವಷ್ಟೆ!
ನೀ ಕಾಡುವುದಿಲ್ಲವೆಂದರೆ
ಸುಳ್ಳಾದಿತು..
ನಿನ್ನ ಮಾತುಗಳು
ಮೌನದ ಗೋರಿಯೊಳಗೆ
ಸತ್ತು ಮಲಗಿದಾಗ
ನಿನ್ನ ಮೌನ ಬಹು ಕಾಡಿತ್ತು!
ಆಗೆಲ್ಲಾ ಕಾರಣಗಳನ್ನು
ನಾನೇ ಸೃಷ್ಟಿಸುತ್ತಿದ್ದೆ..
ಅದ್ಯಾವುದೂ ಅಲ್ಲದೇ..
ಯಾರದ್ದೋ ಆಮಿಷಕ್ಕೆ ಮಾತುಗಳ ಅಡವಿಟ್ಟಿದ್ದು ತಿಳಿದು
ನನ್ನನ್ನೇ..ಮೌನಿಯಾಗಿಸಿತು!
ಎದುರೆದುರು ಸಿಕ್ಕಿದಾಗಲೆಲ್ಲ
ದೃಷ್ಟಿ ನಿನ್ನೆಡೆಗಿತ್ತು
ನಗುವರಳಿಸ ಬಯಸಿದಾಗೆಲ್ಲ
ಅವರಿವರ ಮಧ್ಯದಲ್ಲಿ ನೀ
ನುಸುಳಿ ಮರೆಯಾದದ್ದು
ಬಿಡದೆ ಕಾಡುತ್ತದೆ..
ಇನ್ನೇನು ನಿನ್ನ ಬಳಿ ಮಾತಾಡಿಯೇ ಬಿಡುತ್ತೇನೆಂದಾಗ
ಮುಖ ತಿರುವಿ ತಿರಸ್ಕರಿಸಿದ್ದು
ಸುಳ್ಳುಗಳ ಬೀಜಗಳನ್ನು ಬಿತ್ತಿ
ಸತ್ಯದ ಮರವಾಗಿಸಲೆತ್ನಿಸಿದ್ದು.
ಆಗಾಗ..ಕಾಡುತ್ತದೆ
ಅವಶ್ಯಕತೆ ತೀರಿದ ಬಳಿಕ
ಪರಿಚಯವೇ ಇಲ್ಲವೆಂಬಂತೆ
ಎದೆ ಮೇಲೆ ನಡೆದಂತೆ
ರಭಸದಲ್ಲಿ ನಡೆದು ಹೋದ
ಆ ತೂಕದ ಹೆಜ್ಜೆಗಳೂ
ಇನ್ನಿಲ್ಲದಂತೆ ಕಾಡುತ್ತವೆ..
ಅಷ್ಟಕ್ಕೂ..ನನ್ನ ಬದುಕಿನ
ಪರಿಚಿತರ ನೂರಾರು
ಮುಖಗಳಲ್ಲಿ ನೀನೊಂದು ಲಘು
ಪಾತ್ರವಷ್ಟೇ…
ನಾನೂ ಸಲೀಸಾಗಿ
ಮರೆತು ಬಿಡಬಹುದಾದಷ್ಟು…
ಅದಕ್ಕಿಂತ ಹೆಚ್ಚೇನೂ ನನ್ನ ಬದುಕಿಗಲ್ಲದಿದ್ದರೂ… ನೀ ಕಾಡುತ್ತಿ..
ನನ್ನೊಳಗಿನ ನಂಬಿಕೆಗಳನ್ನೆಲ್ಲಾ ಹೊತ್ತು ಸಾಗಿದ್ದಕ್ಕಾಗಿ…
ಲೀಲಾಕುಮಾರಿ ತೊಡಿಕಾನ