ಜಾನಪದ

ಗರ್ದಿ ಗಮ್ಮತ್ತು

ಅಳಿದು ಹೋದ ಜಾನಪದ ಕಲೆ ನಮ್ಮ ಎಳೆಯ ಕಾಲದ ‘ಗರ್ದಿ ಗಮ್ಮತ್ತು’..!

ವಿಧಾನಸೌಧ ನೋಡ… ಹೇಮಾ ಮಾಲಿನಿ ನೋಡ… ದುರ್ಗಪ್ಪನ; ‘ಗರ್ದಿ ಗಮ್ಮತ್ತು’ ನೋಡ..!!

1970 ಮತ್ತು 1980ರ ಆಸುಪಾಸಿನಲ್ಲಿ ಮನರಂಜನೆ ಎಂಬುದೇ ವಿರಳವಾಗಿತ್ತು. ಆಗ ಸಿನೆಮಾಗಳು ಹಾಗೂ ವರ್ಷಕ್ಕೊಮ್ಮೆ ಜರುಗುವ ಜಾತ್ರೆ, ಹಬ್ಬಹರಿದಿನಗಳು ಇವುಗಳೇ ಮನರಂಜನೆಯಾಗಿದ್ದವು…

ಆ ಸಮಯದಲ್ಲಿ ಪ್ರತಿ ಜಾತ್ರೆಯಲ್ಲಿ ತಪ್ಪದೇ ಕಾಣುತ್ತಿದ್ದ ಒಂದು ವಿಶೇಷ ಅಂದರೆ ‘ಗರ್ದಿ ಗಮ್ಮತ್ತು’. ಮೊಬೈಲ್, ವಾಟ್ಸ್ ಅಪ್‌ನಲ್ಲಿ ಕಳೆದುಹೋದ ಇಂದಿನ ಬಹುತೇಕ ಮಕ್ಕಳಿಗೆ ‘ಗರ್ದಿ ಗಮ್ಮತ್ತು’ ಅಂದರೇನು ಎಂಬುದೇ ಗೊತ್ತಿಲ್ಲ. ಗರ್ದಿ ಗಮ್ಮತ್ತು ಎಂದರೆ, ಒಂದು ಡಬ್ಬಾದಂತಹ ಪೆಟ್ಟಿಗೆಯು ಫೋಟೊಗಳ ನೆಗಟಿವ್ ಗಳನ್ನು ಬಳಸಿಕಂಡು ಚಿಕ್ಕ ಕಿಂಡಿಯಿಂದ ಅಂದರೆ, ಒಂದೇ ಕಣ್ಣಿನಿಂದ ಇಣುಕಿ ನೋಡುವಷ್ಟು ಕಿಂಡಿಯಿಂದ 2 ರಿಂದ 3 ನಿಮಿಷಗಳ ಚಿತ್ರಗಳ ಸರಣಿಗಳನ್ನು ತೋರಿಸುವ ವೈವಿಧ್ಯಮಯ ಸಾಧನ…

ಈ ಸಾಧನವನ್ನು ಹಿಡಿದುಕೊಂಡಿರುವ ವ್ಯಕ್ತಿಯು ಚಿಣ್ಣರಿಂದ ವೃದ್ಧರವರೆಗೆ ಎಲ್ಲರನ್ನೂ ಆಕರ್ಷಿಸುವ ಪರಿ ವಿಶಿಷ್ಟ. ಏನಿದೆ ಆ ಚಿಕ್ಕ ಡಬ್ಬಾದಲ್ಲಿ ಎಂದು ಕಿಂಡಿಯಲ್ಲಿ ಕಣ್ಣು ಹಾಯಿಸಿದೊಡನೆಯೇ ಆ ವ್ಯಕ್ತಿ ಒಂದು ಕಾಲಿಂಗ್ ಬೆಲ್ ತರಹ ಚಿಕ್ಕ ಘಂಟೆಯನ್ನು ಬಾರಿಸುತ್ತ, “ವಿಧಾನ ಸೌಧ ನೋಡ… ಹೇಮಾ ಮಾಲಿನಿ ನೋಡ… ಅಮಿತಾಭ ಬಚ್ಚನ್ ನೋಡ… ರಾಜಕುಮಾರ ನೋಡ…” ಎಂದು ಹಾಡುತ್ತಿದ್ದನು. ಆ ಹಾಡಿಗೂ ಆ ಡಬ್ಬಾದಲ್ಲಿ ಬರುವ ಚಿತ್ರಗಳಿಗೂ ಸರಿಹೊಂದುವಂತಹ ಪಕ್ಕಾ ಟೈಮಿಂಗ್ ಪ್ರಕಾರ ಮನರಂಜಿಸುವ ಪರಿ ಎಲ್ಲರಿಗೂ ಆಪ್ತ ಮತ್ತು ಇಷ್ಟವಾಗಿರುತ್ತಿತ್ತು…

ಜಾಗತೀಕರಣ, ತಂತ್ರಜ್ಞಾನ ಕ್ಷೇತ್ರದ ಕ್ಷಿಪ್ರ ಬೆಳವಣಿಗೆ ಇಂದು ನಮಗೆಲ್ಲ ಹೊಸ ಜಗತ್ತನ್ನೇ ತೋರಿಸಿತು ನಿಜ. ಆದರೆ, ನಮ್ಮದೇ ಎನ್ನುವಂತಹ ನಮ್ಮಿಷ್ಟದ ಹಲವು ಪುರಾತನ ಸಾಂಪ್ರದಾಯಿಕ ಜಾನಪದ ವೈಶಿಷ್ಟ್ಯಗಳನ್ನು ರೂಢಿಗಳನ್ನು ಮತ್ತು ಮನರಂಜನಾ ವಿಧಾನಗಳನ್ನು ನಮಗರಿವಿಲ್ಲದೇ ದೂರ ಕರೆದುಕೊಂಡು ಹೋಯಿತು ಎನ್ನುವುದು ವಿಷಾದನೀಯ…

ಅವುಗಳಲ್ಲಿ ‘ಗರ್ದಿ ಗಮ್ಮತ್ತು’ ಒಂದು. ಇಂದು 40ರ ವಯಸ್ಸಿನ ಮೇಲೆ ಇರುವ ಬಹುತೇಕ ಜನರು ‘ಗರ್ದಿ ಗಮ್ಮತ್ತ’ನ್ನು ತಮ್ಮೂರ ಜಾತ್ರೆಯಲ್ಲಿ ನೋಡಿಯೇ ನೋಡಿರುತ್ತಾರೆ. ಆದರೆ, ಇಂದಿನ ಕೆಲವು ಯುವಕರಿಗೆ ಹಾಗೂ ಹಲವು ಮಕ್ಕಳಿಗೆ ಇದರ ಬಗ್ಗೆ ಗೊತ್ತೇ ಇಲ್ಲದಂತಾಗಿದೆ…

ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳ ಪ್ರತಿ ಜಾತ್ರೆಗಳಲ್ಲೂ ಕಂಡುಬರುತ್ತಿದ್ದ ‘ಗರ್ದಿ ಗಮ್ಮತ್ತು’ ಇಂದು ಮಾಯವಾಗಿದೆ. ಅಂಗೈನಲ್ಲಿರುವ ಮೊಬೈಲ್ ತೆಗೆದು ಆನ್‌ಲೈನ್‌ನಲ್ಲೇ ಬೇಕಾದ ಚಲನಚಿತ್ರಗಳನ್ನು ನೋಡುವ ಈಗಿನ ಜಮಾನಾದಲ್ಲಿ ‘ಗರ್ದಿಯ ಗಮ್ಮತ್ತು’ ಕಿಮ್ಮತ್ತಿಲ್ಲದೇ ಮೂಲೆಗುಂಪಾಗುತ್ತಿದೆ.
ಡಬ್ಬಾ ಟಾಕೀಸ್‌ನಿಂದ ದಿನಕ್ಕೆ ಬೇಕಾದ ಕನಿಷ್ಠ ಗಳಿಕೇನೂ ಆಗಲ್ಲ ಎಂದು ಇದನ್ನು ಬಿಟ್ಟು ಬೇರೆ ಉದ್ಯೋಗ ಅರಸಿ ಹೋಗಿದ್ದಾರೆ. ಈ ಪೆಟ್ಟಿಗೆಗಳು ಎಷ್ಟೋ ಮನೆಗಳ ಮೂಲೆಯಲ್ಲಿ ಹಾಳಾಗುತ್ತಿವೆ ಹಾಗೂ ಇದರ ನೆನಪುಗಳ ಎಷ್ಟೋ ಮನಗಳ ಮೂಲೆಯಲ್ಲಿ ಹಳೆಯದನ್ನು ನೆನಯುತ್ತ ಮೆಲುಕು ಹಾಕುತ್ತ ಕುಳಿತಿವೆ…

‘ಗರ್ದಿ ಗಮ್ಮತ್ತ’ನ್ನು ಇಂದಿನ ಚಿಣ್ಣರಿಗೂ ಪರಿಚಯಿಸಬೇಕೆಂಬ ಇರಾದೆಯಿಂದ ಗದಗ ಜಿಲ್ಲೆಯ ಅಬ್ಬಿಗೇರಿ ಗ್ರಾಮದ ವೃದ್ಧರೊಬ್ಬರು ಇಂದಿಗೂ ಅದಮ್ಯ ಉತ್ಸಾಹದಿಂದ ಓಣಿ ಕೇರಿಗೆ ಭೇಟಿ ನೀಡುತ್ತಿದ್ದಾರೆ, :ಗರ್ದಿ ಗಮ್ಮತ್ತ’ನ್ನು ಪರಿಚಯಿಸುತ್ತಿದ್ದಾರೆ.


ಅವರ ಹೆಸರು ದುರ್ಗಪ್ಪ ಅಂತ, ಇವರು ಕೊಪ್ಪಳದವರು. 65 ವರ್ಷದ ದುರ್ಗಪ್ಪ ಇಂದಿಗೂ ಹಳ್ಳಿ ಹಳ್ಳಿಗಳಿಗೆ ಹಾಗೂ ಪಟ್ಟಣಗಳಿಗೆ ತೆರಳಿ ‘ಗರ್ದಿ ಗಮ್ಮತ್ತ’ನ್ನು ಪರಿಚಯಿಸುತ್ತಿದ್ದಾರೆ.
ಮೊದಲು ಗದಗ ಹತ್ತಿರದ ಅಬ್ಬಿಗೇರಿಯಲ್ಲಿ ವಾಸಿಸುತ್ತಿದ್ದ ಇವರು ಈಗ ರೋಣ ಪಟ್ಟಣದಲ್ಲಿ ವಾಸವಾಗಿದ್ದಾರೆ. ಇವರಿಗೆ ಇಬ್ಬರು ಮಕ್ಕಳು. ಇಬ್ಬರೂ ರೋಣದಲ್ಲಿ ಪ್ಲಾಸ್ಟಿಕ್ ಅಂಗಡಿ ಇಟ್ಟುಕೊಂಡಿರುವುದರಿಂದ ಇವರು ವಾಸಸ್ಥಳ ಬದಲಾಯಿತು.
ರೋಣ ಪಟ್ಟಣಕ್ಕೆ ಬಂದ ಮೇಲೆಯೂ ದುರ್ಗಪ್ಪ ಸುಮ್ಮನೇ ಕೂಡಲಿಲ್ಲ. ಇಲ್ಲಿಯೂ ಪ್ರತಿದಿನ ಬಿಸಿಲು, ಮಳೆ ಲೆಕ್ಕಿಸದೇ ‘ಗರ್ದಿ ಗಮ್ಮತ್ತು’ ಅನ್ನು ತೆಗೆದುಕೊಂಡು ಹಾಡುತ್ತ ಓಣಿ ಓಣಿ ಅಲೆಯುವ ದುರ್ಗಪ್ಪ ಅವರಿಗೆ ದಣಿವೆಂಬುದು ಗೊತ್ತಿಲ್ಲ.
ಇವರು ಕಳೆದ 45 ವರ್ಷಗಳಿಂದಲೂ ‘ಗರ್ದಿ ಗಮ್ಮತ್ತ’ನ್ನು ಜಾತ್ರೆಗಳಲ್ಲಿ ಕೊಂಡೊಯ್ದು ಮಕ್ಕಳ ಮನ ತಣಿಸುತ್ತಲೇ ಇದ್ದಾರೆ.
ಈಗಲೂ ಪ್ರತಿದಿನ ಬಸ್ಸಿನಲ್ಲಿ ಆಸುಪಾಸಿನ ಊರುಗಳಿಗೆ ಹೋಗಿ :ಗರ್ದಿ ಗಮ್ಮತ್ತ:ನ್ನು ಪರಿಚಯಿಸುತ್ತಿದ್ದಾರೆ. ದುರ್ಗಪ್ಪ ಅವರನ್ನು ನೋಡಿ ಕೆಲವರು ಸೆಲ್ಫಿ ಅಂತ ಕೇಳಿದ್ದೂ ಇದೆ, ತೆಗೆದುಕೊಳ್ಳಿ ಅಂತಾರೆ, ಆದರೆ ಮೊಬೈಲ್ ನೋಡಿ ಇವರು ನಗುವುದಿಲ್ಲ, ಯಾಕೆ ಅಂತೀರಾ, ಇದು ಇವರ ‘ಗಮ್ಮತ್ತು’…

ದುರ್ಗಪ್ಪ ಕೊಪ್ಪಳ ‘ಪ್ರತಿಧ್ವನಿ’ ಪ್ರತಿನಿಧಿ ಜೊತೆ ತಮ್ಮ ಅನುಭವ ಹಂಚಿಕೊಂಡಿದ್ದು ಹೀಗೆ– “ನಾನು 20 ವರ್ಷದವನಿದ್ದಾಗಲೇ ಸ್ವತಂತ್ರವಾಗಿ ‘ಗರ್ದಿ ಗಮ್ಮತ್ತು’ ತೋರಿಸಲು ಸಜ್ಜಾದೆ. ಆಗ ಒಂದು ಕುಟುಂಬದಲ್ಲಿ ಎರಡು ಅಥವಾ ಮೂರು ಪೆಟ್ಟಿಗೆಗಳು ಇರುತ್ತಿದ್ದವು. ನಾವು ಜಾತ್ರೆಗೆ ಹೋದರೆ ಸಾಕು, ಮಕ್ಕಳು ದುಂಬಾಲು ಬೀಳುತ್ತಿದ್ದರು. ಆಗ ಕೆಲವರು 5 ಪೈಸೆ ಅಥವಾ 10 ಪೈಸೆ ಕೊಡುತ್ತಿದ್ದರು.


ಜಾತ್ರೆ ಇಲ್ಲದ ಸಮಯದಲ್ಲಿ ನಾವು ಓಣಿ ಕೇರಿಗಳಿಗೆ ಹಾಗೂ ಪಟ್ಟಣಗಳಿಗೆ ಹೋಗುತ್ತಿದ್ದೆವು. ಅಲ್ಲಿಯೂ ಕೆಲವು ಜನರು 5 ಪೈಸೆ ಕೊಡುತ್ತಿದ್ದರು. ಇಲ್ಲವಾದರೆ ಒಂದು ಲೋಟ ಜೋಳ ಅಥವಾ ಗೋದಿ ನೀಡುತ್ತಿದ್ದರು. ಆಗ ಅದೇ ನಮ್ಮ ಜೀವನ. ಈ ಪೆಟ್ಟಿಗೆಯು ನಮ್ಮ ಕುಟುಂಬದ ಹಸಿವು ನೀಗಿಸುವಲ್ಲಿ ಮುಖ್ಯ ಪಾತ್ರ ವಹಿಸಿವೆ.
ಈಗ ನಾವು ಮೊಬೈಲ್ ಬಂದೈತಿ ಅದು-ಇದು ಬಂದೈತಿ ಅಂತ, ನಮ್ಮನ್ನು ಸಾಕಿ ಸಲುಹಿದ ಈ ಕಲೆಯನ್ನು ಬಿಡಬಾರದು ಎಂದು ಪ್ರತಿದಿನ ಈ ಪೆಟ್ಟಿಗೆಯನ್ನು ತೆಗೆದುಕೊಂಡು ಹೋಗುತ್ತಿದ್ದೇನೆ. ಇವತ್ತೂ ಈ ಪೆಟ್ಟಿಗೆ ನನಗೆ ದೇವರಿದ್ದಂತೆ. ಹಣವೇ ಮುಖ್ಯವಲ್ಲ ಇಲ್ಲಿ, ಮಕ್ಕಳು ಇದ ನೋಡಿ ಕೇಕೆ ಹೊಡಿಯುವುದನ್ನು ನೋಡಿದರೆ ನನ್ನ ಹೊಟ್ಟೆ ತುಂಬಿದಂತಾಗುತ್ತದೆ.”..! ಎಂದು ‘ಗರ್ದಿ ಗಮ್ಮತ್ತಿ’ನ ದುರ್ಗಪ್ಪ ತಮ್ಮ ಕಲೆಯ ವಾರಸುದಾರನಾಗಿ ಹೇಳಿಕೊಳ್ಳುತ್ತಾರೆ…

ರೊಕ್ಕಾ ಬರೂದ ಕಷ್ಟ ಆದರೂ…–

ಮೊಬೈಲ್ ಕ್ರಾಂತಿ ‘ಗರ್ದಿ ಗಮ್ಮತ್ತಿ’ನ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರಿದರೂ, ಅದರಲ್ಲೇ ಹೊಸತನದಿಂದ ಮಕ್ಕಳನ್ನು ನಗಸ್ತಿನಿ ಅಂತ ಮತ್ತೆ ಮಾತು ಶುರು ಹಚ್ಚಿಕೊಂಡರು ದುರ್ಗಪ್ಪ.
“ಹೌದು ಸಾರ್, ಒಪ್ಪತಿನಿ, ಇಂದು ಮೊಬೈಲ್ ಎಲ್ಲಾ ಇವೆ. ಆದರೂ ನಾವು ಈಗ ಹೊಸದನ್ನೇನಾದರೂ ತೋರಿಸಬೇಕು, ಅದಕ್ಕಾಗಿ ಬಾಹುಬಲಿ, ರೋಬೋಟ್, ಅವತಾರ, ಕ್ರಿಶ್ ಹೀಗೆ ಹೊಸ ಹೊಸ ಹೀರೋಗಳ ಫೋಟೊಗಳನ್ನು ಸಂಗ್ರಹಿಸಿ ಡಬ್ಬಾ ಟಾಕೀಸ್‌ನಲ್ಲಿ ತೋರಿಸಿದಾಗ ಚಿಕ್ಕ ಮಕ್ಕಳು ಕೇಕೆ ಹೊಡೆಯುತ್ತ ನಕ್ಕು ನಲಿಯುತ್ತಾರೆ. ನಿಮಗೆಲ್ಲ ‘ಗರ್ದಿ ಗಮ್ಮತ್ತು’ ಹಳೆಯದು. ಆದರೆ ಈಗಿನ ಮಕ್ಕಳಿಗೆ ಇದು ಹೊಸದೇ ಅಲ್ಲವೇ. ಕೆಲವರಂತೂ ಮತ್ತೆ ಮತ್ತೆ ನೋಡಲು ಮುಗಿಬೀಳುತ್ತಾರೆ.”…

ನಿಜ, ಇಂದಿನ ಮಕ್ಕಳಿಗೆ ಈ ಡಬ್ಬಾ ಟಾಕೀಸ್ ಹೊಸದು. ತಾವು ಚಿಕ್ಕಂದಿನಿಂದ ರೂಢಿಸಿಕೊಂಡ ಬಂದ ಈ ಪಾರಂಪರಿಕ ಮನರಂಜನಾ ವಿಧಾನವನ್ನು ಇಂದು ಹಲವರಿಗೆ ಮತ್ತೆ ಪರಿಚಯಿಸುತ್ತಿರುವ ದುರ್ಗಪ್ಪ, ಎಷ್ಟೋ ಜನರ ಮನದಲ್ಲಿ ಕಳೆದುಹೋದ ಪುಸ್ತಕಗಳ ಮರೆತ ಪುಟಗಳನ್ನು ಮತ್ತೇ ತಿರುವಿಹಾಕುವಂತೆ ಮಾಡಿ ಅವರ ಬಾಲ್ಯ ನೆನಪಿಸುತ್ತಿದ್ದಾರೆ…

ಗದಗ ಜಿಲ್ಲೆಯ ರೋಣದ ಸಾಧು ಅಜ್ಜ ನಗರದ ಆರು ವಯಸ್ಸಿನ ಪುಠಾಣಿ ಪ್ರಶಾಂತ ಕುರಿ ಡಬ್ಬಾ ಟಾಕೀಸ್ ನೋಡಿ ಹೇಳಿದ್ದು ಹೀಗೆ– “ಆ ಅಜ್ಜನ ಹಾಡು, ಆ ಹಾಡಿಗೆ ತಕ್ಕ ಹಾಗೆಯೇ ಸಣ್ಣ ಟಾಕೀಸಿನಲ್ಲಿರುವ ಫೋಟೊಗಳು ಬರುತ್ತಿರುತ್ತವೆ. ಬಾಹುಬಲಿ ಶಿವಲಿಂಗವೆತ್ತಿ ಬರುತ್ತಿದ್ದ ಹಾಗೂ ಛೋಟಾ ಭೀಮನ ಚಿತ್ರ ಸೇರಿ ಎಲ್ಲ ಚೆನ್ನಾಗಿವೆ. ಇದೊಂಥರ ಮಜಾ. ಈ ಅಜ್ಜ ಮತ್ತೆ ಮತ್ತೆ ಬರಲಿ.”..!

ದುರ್ಗಪ್ಪ ಅವರನ್ನು ಬಲ್ಲವರಾದ ಗದಗದ ಪರಮೇಶಪ್ಪ ಹಳ್ಳಿ ಹೇಳುವುದು ಹೀಗೆ– “ನಾವು ದುರ್ಗಪ್ಪ ಅವರನ್ನು ಕಳೆದ ಮೂವತ್ತು ವರ್ಷಗಳಿಂದ ನೋಡುತ್ತಿದ್ದೇವೆ. ಅವರು ಪ್ರತಿ ಜಾತ್ರೆಯಲ್ಲಿರುತ್ತಾರೆ. ಮುಂಜಾನೆಯಿಂದ ಸಂಜೆವರೆಗೂ ದಣಿಯದೇ ಹಾಡುತ್ತ ಮಕ್ಕಳನ್ನು ರಂಜಿಸುತ್ತಾರೆ. ಇಂಥವರನ್ನು ಸರ್ಕಾರ ಅಥವಾ ಸರ್ಕಾರೇತರ ಸಂಸ್ಥೆಗಳು ಗುರುತಿಸಬೇಕು. 3-4 ನಿಮಿಷಗಳವರೆಗೆ ಇರುವ ಒಂದು ಡಬ್ಬಾ ಟಾಕೀಸ್ ನೋಡುವುದಕ್ಕೆ ಈಗ 5 ರೂಪಾಯಿಗಳು ಮಾತ್ರ. ಪ್ರತಿದಿನ 120-150ರವರೆಗೆ ದುಡಿಯುವ ದುರ್ಗಪ್ಪ, ಇಂದಿನ ತಲೆಮಾರಿನ ಜನರಿಗೆ ‘ಗರ್ದಿ ಗಮ್ಮತ್ತಿ’ನ ಪರಿಚಯ ಮಾಡುತ್ತಿರುವುದು ಸ್ತುತ್ಯಾರ್ಹವಾಗಿದೆ…”

ಗರ್ದಿ ಗಮ್ಮತ್ತಿನಲ್ಲಿ ಮೊದಲೇನಿರುತ್ತಿದ್ದವು?–

70ರಿಂದ 80ರ ದಶಕ– 70 ಹಾಗೂ 80ರ ದಶಕದಲ್ಲಿ ಅಮಿತಾಭ್ ಬಚ್ಚನ್, ಹೇಮಾ ಮಾಲಿನಿ, ರಾಜ್ ಕಪೂರ್, ದೇವಾನಂದ, ನೂತನ, ಶಮ್ಮಿ ಕಪೂರ್, ವಿಧಾನ ಸೌಧ, ತಾಜಮಹಲ್, ಇಂಡಿಯಾ ಗೇಟ್, ಗೇಟ್‌ವೇ ಆಫ್ ಇಂಡಿಯಾ ಇವೆಲ್ಲ ಫೋಟೊಗಳು ಚಿರಪರಿಚಿತವಾಗಿದ್ದವು..!

90ರ ದಶಕದ ನಂತರ– ಸಂಜಯ ದತ್, ಶಾರೂಖ್ ಖಾನ್, ಸಲ್ಮಾನ್ ಖಾನ್, ಆಮಿರ್ ಖಾನ್, ರವೀನಾ ಟಂಡನ್, ಶಕ್ತಿಮಾನ್, ರಾಮಾಯಣ ಮತ್ತು ಮಹಾಭಾರತದ ಪಾತ್ರಗಳು, ರಾಜೀವ್ ಗಾಂಧಿ ಮತ್ತು ಕಾರ್ಟೂನ್ ಹೀರೋಗಳಾದ ಮೋಗ್ಲಿ, ಹೀ-ಮ್ಯಾನ್, ಲಾಲ್‌ಬಾಗ್, ಕಬ್ಬನ್ ಪಾರ್ಕ್ ಇವೆಲ್ಲ ಸಾಮಾನ್ಯವಾಗಿರುತ್ತಿದ್ದವು..!

2010ರ ನಂತರ: 2010ರಲ್ಲಿ ‘ಗರ್ದಿ ಗಮ್ಮತ್ತು’ ಕಾಣೆಯಾದರೂ, 90ರ ದಶಕದ ಚಿತ್ರಗಳನ್ನಿಟ್ಟಕೊಂಡೇ ತೋರಿಸುತ್ತಿದ್ದ ದುರ್ಗಪ್ಪ, 2015ರ ನಂತರ ಹೊಸ ಚಿತ್ರಗಳನ್ನು ಸೇರಿಸತೊಡಗಿದರು. ಈ ಹೊಸ ಚಿತ್ರಗಳಲ್ಲಿ ಬಾಹುಬಲಿ, ಕಟ್ಟಪ್ಪ, ಬಲ್ಲಾಳದೇವ, ರೋಬೊ, ಅವತಾರ್, ಕ್ರಿಶ್, ಕೊಚ್ಚಾಡಿಯನ್, ಯಶ್, ದರ್ಶನ, ಪುನೀತ್ ರಾಜಕುಮಾರ, ಶಿವರಾಜಕುಮಾರ್, ಸುದೀಪ್ ಮತ್ತು ಕಾರ್ಟೂನ್ ತಾರೆಗಳಾದ ಛೋಟಾ ಭೀಮ್ ಹಾಗೂ ಬಾಲವೀರ್ ಸೇರ್ಪಡೆಯಾಗಿವೆ…

ನಿಮಗೂ ನೆನಪುಂಟೇ?–

‘ಗರ್ದಿ ಗಮ್ಮತ್ತಿ’ನಿಂದ ಜೀವನ ನಡೆಸುತ್ತಿದ್ದ ಕೆಲವು ಸಮುದಾಯಗಳ ಜನರು ಇದೀಗ ಪರ ಊರುಗಳತ್ತ ಉದ್ಯೋಗ ಅರಸಿ ಹೋಗಿದ್ದಾರೆ. ಮೊದಲು ಮಳೆ-ಬೆಳೆ ಚೆನ್ನಾಗಿದ್ದ ಕಾರಣ, ರೈತಾಪಿ ಜನರು ಇವರಿಗೆ ಅಕ್ಕಿ, ಜೋಳ, ಗೋಧಿಯನ್ನು ಕೊಡುತ್ತಿದ್ದರು. ಈಗ ಬರ ತಾಂಡವವಾಡುತ್ತಿದೆ. ಇಲವೇ ಅತಿವೃಷ್ಟಿ ತಾಂಡವ ಆಡುತ್ತದೆ.


ಆದ್ದರಿಂದ ಇವರೆಲ್ಲ ಇಂದು ತಮ್ಮ ಕುಲಕಸುಬುಗಳನ್ನು ಬಿಟ್ಟು ಹೊಸದನ್ನು ಹುಡುಕುತ್ತ ಬದುಕಲೆತ್ನಿಸುತ್ತಿದ್ದಾರೆ. ಇಂದಿನ ತಲೆಮಾರಿನ ಜನರು, ಅಂದರೆ ‘ಗರ್ದಿ ಗಮ್ಮತ್ತ’ನ್ನೇ ಕುಲಕಸುಬಾಗಿ ಜೀವನ ನಡೆಸುತ್ತಿದ್ದವರು ಇಂದು ಇದೇ ‘ಗರ್ದಿ ಗಮ್ಮತ್ತಿ’ನಿಂದ ಕೈ ತುಂಬಾ ಸಂಪಾದಿಸಲು ಆಗಲ್ಲ ಎಂಬ ಕಾರಣದಿಂದ ಹಂದಿ ಸಾಕಾಣಿಕೆ ಹಾಗೂ ಪ್ಲಾಸ್ಟಿಕ್ ಮಾರಾಟ ವ್ಯವಹಾರಗಳಲ್ಲಿ ತೊಡಗಿಕೊಂಡಿದ್ದಾರೆ.


ಗದಗ, ಬಾಗಲಕೋಟೆ, ಧಾರವಾಡ, ಬಳ್ಳಾರಿ ಜಿಲ್ಲೆಯಲ್ಲಿ ಹೆಚ್ಚಾಗಿರುವ ಈ ಜನರಲ್ಲಿ ಹಲವರು ಗುಳೆ ಹೋಗಿ, ಗೋವಾ, ಮಂಗಳೂರು ಹಾಗೂ ಸೊಲ್ಲಾಪುರಗಳಲ್ಲಿ ನೆಲೆಸಿದ್ದಾರೆ.


ಹೀಗಾಗಿ ಇದು ಕಡಿಮೆಯಾಗುತ್ತ ಇಂದು ಕಣ್ಮರೆಯಾಗುವಂತಹ ದುಸ್ಥಿತಿಗೆ ಬಂದಿದೆ ‘ಗರ್ದಿ ಗಮ್ಮತಿ’ಗೆ. ಇಂದಿನ ಚಿಣ್ಣರು ಇದರ ಬಗ್ಗೆ ತಿಳಿಯಲಿ ಎಂಬುದು ನಮ್ಮ ಆಶಯವಾಗಿದೆ..!

***********************************

ಕೆ.ಶಿವು.ಲಕ್ಕಣ್ಣವರ


One thought on “ಜಾನಪದ

Leave a Reply

Back To Top