ಚನ್ನಬಸವಣ್ಣನವರ ವಚನ-……ಪ್ರೊ. ಜಿ ಎ. ತಿಗಡಿ (

ವಚನ ಸಂಗಾತಿ

ಪ್ರೊ. ಜಿ ಎ. ತಿಗಡಿ (ಸವದತ್ತಿ)

ಚನ್ನಬಸವಣ್ಣನವರ ವಚನ

ಮಧುರಗುಣವ ಇರುವೆ ಬಲ್ಲುದು.
ವೇಳೆಯ ಗುಣವ ಕೋಳಿ ಬಲ್ಲುದು.
ಗೋತ್ರದ ಗುಣವ ಕಾಗೆ ಬಲ್ಲುದು.
ಈ ಮನುಷ್ಯ ಜನ್ಮದಲ್ಲಿ ಹುಟ್ಟಿ,
ಶಿವಜ್ಞಾನಿಗಳ ಬರವನರಿಯದಿದ್ದಡೆ
ಆ ಕೋಳಿ ಕಾಗೆ ಇರುವೆಗಿಂತಲು ಕರಕಷ್ಟ ಕಾಣಾ,
ಕೂಡಲಚೆನ್ನಸಂಗಮದೇವಾ.

ವಸ್ತುವಿನ ಮಧುರತೆಯ ಗುಣವನ್ನು ಇರುವೆಯೂ,  ವಾಯುವಿನ ಗುಣವನ್ನು ಸರ್ಪವೂ,  ಕುಲ ಗೋತ್ರದ ಗುಣವನ್ನು ಕಾಗೆಯೂ, ಹಾಗೂ ಸಮಯದ ಗುಣವನ್ನು ಕೋಳಿಯೂ ಚೆನ್ನಾಗಿ  ಅರಿತಿರುತ್ತವೆ.  ಹೀಗಿರುವಾಗ ಮಾನವ ಜನ್ಮದಲ್ಲಿ ಹುಟ್ಟಿ ಶಿವಜ್ಞಾನಿಗಳ ಬರುವಿಕೆಯನ್ನು ಅರಿತು ತಿಳಿದುಕೊಳ್ಳದಿದ್ದರೆ  ಆ ಕಾಗೆ, ಕೋಳಿ, ಇರುವೆಗಳಿಗಿಂತ ಮಾನವ ತೀರ ಕನಿಷ್ಠನೆನೆಸಿಕೊಳ್ಳುತ್ತಾನೆ ಎಂದು  ಚೆನ್ನಬಸವಣ್ಣನವರು ಹೇಳುತ್ತಾರೆ.

       ಇಲ್ಲಿ ಚೆನ್ನಬಸವಣ್ಣವರು ನಮ್ಮೆಲ್ಲರ ಜೊತೆಗೆ ಬದುಕುತ್ತಿರುವ ನಾಲ್ಕು  ಪ್ರಾಣಿಗಳ ಶ್ರೇಷ್ಠ ಗುಣಗಳನ್ನು ಉದಾಹರಿಸುತ್ತಾ ವಿಚಾರ ಶಕ್ತಿಯನ್ನು ಪಡೆದ ಮಾನವ ತನ್ನ ಸ್ವಾರ್ಥಪರ ವರ್ತನೆಗಳಿಂದ ಆ ನಾಲ್ಕೂ ಪ್ರಾಣಿಗಳಿಗಿಂತ ಕೀಳೆನಿಸಿಕೊಳ್ಳುತ್ತಾನೆoದು ಹೇಳುತ್ತಾರೆ.       ” ಸಿಹಿ ಇದ್ದಲ್ಲಿ  ಇರುವೆಗಳಿರುತ್ತವೆ ” ಎಂಬ ಮಾತು ಜನಜನಿತ.  ಸಿಹಿ ಪದಾರ್ಥಗಳನ್ನು ಹುಡುಕುವುದರಲ್ಲಿ ಇರುವೆ  ನಿಸ್ಸೀಮ.   ಅದು ತಪ್ಪಿಯೂ ಹುಳಿ, ಖಾರ, ಒಗರು, ಕಹಿ ಪದಾರ್ಥಗಳತ್ತ ಹೋಗುವುದೇ ಇಲ್ಲ, ಇದು ಅದರ ವಿಶೇಷ ಗುಣ.  ಹಾಗೆ ಹಾವು ಕೂಡ ಗಾಳಿಯ ಗುಣವನ್ನು ಚೆನ್ನಾಗಿ ತಿಳಿದಿರುತ್ತದೆ.  ಗಾಳಿಯ ಮೂಲಕವೇ ಶಬ್ದ, ಸ್ಪರ್ಶ ರಸಗಂಧಾದಿಗಳನ್ನು ಆಸ್ವಾದಿಸುತ್ತದೆ.  ಕಾಗೆಗೂ ಕುಲ ಗೋತ್ರಗಳಿಗೂ ಇರುವ ನಂಟಿನ ಕುರಿತಾದ ನಂಬಿಕೆ ಬಹು ಹಿಂದಿನಿಂದಲೂ ನಮ್ಮ ಸಂಸ್ಕೃತಿಯ ಸಂಪ್ರದಾಯದಲ್ಲಿ ಬೆಳೆದು ಬಂದಿದೆ.  ಪಿಂಡ ದಾನದಲ್ಲಿ ಕಾಗೆಗೆ ಅಗ್ರಸ್ಥಾನ ಇರುವುದನ್ನು ಇಂದಿಗೂ ಕಾಣಬಹುದು.  ಇನ್ನು ಕೋಳಿಯ ಸಮಯಪ್ರಜ್ಞೆಯ ಬಗ್ಗೆ ಎಲ್ಲರಿಗೂ ತಿಳಿದಿದೆ.  “ಕೋಳಿ ಕೂಗಿತು ಬೆಳ್ಳಿ ಮೂಡಿತು ” ಎಂಬ ನಾಣ್ಣುಡಿ ಜನಪದರಲ್ಲಿ ಹಾಸುಹೊಕ್ಕಾಗಿದೆ. ಬೆಳಿಗ್ಗೆ 5 ಗಂಟೆಗೆ ಕೂಗುತ್ತಾ ಕೋಳಿಯು ನಮ್ಮನ್ನು  ಎಚ್ಚರಿಸುವ ಕೆಲಸವನ್ನು ತಪ್ಪದೇ ಮಾಡುತ್ತದೆ ಎಂಬ ನಂಬಿಕೆಯಿದೆ.   ಹೀಗೆ ಈ ಎಲ್ಲ ಪ್ರಾಣಿಗಳು ತಮ್ಮದೇ ಆದ ವಿಶೇಷ ಮತ್ತು ನಿರ್ದಿಷ್ಟ ಗುಣಗಳನ್ನು ಹೊಂದಿ ಅದರಂತೆ ಕೊನೆಯವರೆಗೂ  ಚಾಚೂ ತಪ್ಪದೆ ಆಚರಿಸುತ್ತವೆ.  ಇವುಗಳ ನಿತ್ಯದ ಕಾರ್ಯಕ್ಕೆ ಅಡ್ಡಿಯಾಗದಿದ್ದರೆ ಅವು ಯಾರಿಗೂ ತೊಂದರೆ ಕೊಡುವುದಿಲ್ಲ.  ಸಕಲ ಜೀವರಾಶಿಗಳಲ್ಲಿಯೇ ಶ್ರೇಷ್ಠ  ಜೀವಿಯೆನಿಸಿಕೊಂಡ ಮನುಷ್ಯ ಶಿವಜ್ಞಾನಿ ಶರಣರ ಆಗಮನವನ್ನು ತಿಳಿದುಕೊಳ್ಳದಿದ್ದರೆ ಹೇಗೆ ?  ಅವರಿಂದ ಅರಿವಿನ ಜ್ಞಾನ ಪಡೆಯುವದೆಂತು ?   ಇಂತಹ ಮೂಢರು ಆ ಇರುವೆ ಕಾಗೆ,  ಕೋಳಿಗಳಿಗಿಂತ ಕೀಳೆಂದು ಚೆನ್ನಬಸವಣ್ಣನವರು ನಿಂದಿಸುತ್ತಾರೆ.

              ಜಗತ್ತಿನ ಪ್ರಾಣಿ ಪ್ರಪಂಚದಲ್ಲಿಯೇ ‘ಮಾನವ ಜನ್ಮ ‘ಅತಿ ಶ್ರೇಷ್ಠವಾದದ್ದು. ‘ ‘ಮಾನವ ಜನ್ಮ ದೊಡ್ಡದು ಇದ ಹಾನಿ ಮಾಡಿಕೊಳ್ಳಬೇಡಿರಿ ಹುಚ್ಚಪ್ಪಗಳಿರಾ ‘ ಎಂದು ತತ್ವಪದಕಾರರು ಹಾಡಿದ್ದುಂಟು.  ಆದರೆ ಸಕಲ ಜೀವಿಗಳಲ್ಲಿ ತನ್ನ ವಿಚಾರಶಕ್ತಿಯಿಂದ ಬುದ್ಧಿವಂತ ನೆನೆಸಿಕೊಂಡ ಮಾನವ ಮಾತ್ರ  ಈ ಪ್ರಾಣಿಗಳಂತೆ ನೈಸರ್ಗಿಕವಾಗಿ, ಸಹಜವಾಗಿ ಯಾಕೆ ಬದುಕುತ್ತಿಲ್ಲ?  ಸ್ವಾರ್ಥಿಯಾಗಿ ಸಲ್ಲದ ಕೆಲಸಗಳನ್ನು ಮಾಡುತ್ತಾ ತನ್ನ ಜೀವನವನ್ನು ಹಾಳುಮಾಡಿಕೊಳ್ಳುತ್ತಿದ್ದಾನೆ. ಸುಜ್ಞಾನಿಗಳ, ಸಂತ – ಮಹಾಂತರ, ಶರಣರ ಸಂಗವನ್ನೇಕೆ  ಬಯಸುತ್ತಿಲ್ಲ.   ಹೀಗಿರುವಾಗ ಅಂಥ ಮಹಾತ್ಮರ ಇರುವಿಕೆಯನ್ನರಿತು ತಾನೇ ಹುಡುಕಿಕೊಂಡು ಅವರಲ್ಲಿಗೆ ಹೋಗಬೇಕು.  ಆದರೆ ದುರ್ದೈವವೆಂದರೆ ಆಕಸ್ಮಿಕವಾಗಿ ಅವರಾಗಿಯೇ ತನ್ನತ್ತ  ಬರುತ್ತಿದ್ದರೂ ಅದನ್ನರಿಯದೆ ವಿಮುಖನಾಗಿ ಭೋಗಜಿವನದಲ್ಲಿಯೇ ಮುಳುಗಿರುವ ಈತ  ಇರುವೆ, ಸರ್ಪ, ಕೋಳಿ, ಕಾಗೆ,ಗಳಿಗಿಂತಲೂ ಕಡೆಯಾಗಿದ್ದಾನೆoದು ಚೆನ್ನಬಸವಣ್ಣನವರು  ಹೀಗಳೆಯುತ್ತಾರೆ.
*********


 ಪ್ರೊ. ಜಿ ಎ. ತಿಗಡಿ (ಸವದತ್ತಿ)

Leave a Reply

Back To Top