ಭಾವ ಸಂಗಾತಿ
ಮೌನ ಯಾನ…...
ಭಾವಯಾನಿ ಪ್ರಮೀಳಾ ರಾಜ್
ಯಾರು ಅದೆಷ್ಟೇ ನೋವು ಕೊಡಲಿ,ಈಗೀಗ ಯಾರನ್ನೂ ದ್ವೇಷಿಸಬೇಕು ಅನಿಸುವುದಿಲ್ಲಾ, ಕೋಪ ಮಾಡ್ಕೋಬೇಕು ಅಂತನೂ ಅನಿಸುವುದಿಲ್ಲಾ.ಸುಮ್ಮನೆ ಮೌನಿಯಾಗುತ್ತೇನೆ!!
ನನ್ನ ಮೌನ ಪ್ರಪಂಚದೊಳಗೆ ಒಂದಷ್ಟು ಜನರ ಮುಖಗಳು ಇಣುಕು ಹಾಕುತ್ತವೆ. ಅಪ್ಯಾಯಮಾನ ಅನಿಸಿದ್ದನ್ನು ಬಾಚಿ ಅಲಂಗಿಸಿಕೊಳ್ಳುತ್ತೇನೆ, ಅರ್ಥವಾಗದೆ ಉಳಿದ ಮುಖಗಳನ್ನು ಸುಮ್ಮನೆ ಪಕ್ಕಕ್ಕೆ ಇಟ್ಟು ಬಿಡುತ್ತೇನೆ.
ಮಾತನಾಡಿಕೊಳ್ಳುತ್ತೇನೆ, ನನ್ನೊಳಗೆ ನಾನೊಬ್ಬಳೇ… ಹಾಗಂತ ಅದಕ್ಕೆ ಹುಚ್ಚುತನ ಅನ್ನೋ ಹಣೆಪಟ್ಟಿ ಕಟ್ಟಿ ಬಿಡಬೇಡಿ, ಒಳಗೊಂದು ಮುಗ್ಧ ಮನಸು ಇದ್ಯಲ್ಲ, ಅದು ಸುಮ್ಮನೆ ನೋಯುತ್ತೆ ಕಣ್ರೀ!!
ನಾ ಇದ್ದಿದ್ದೇ ಹೀಗೇ… ಮೌನವನ್ನು ಮನಸಿಗಾಪ್ತ ಸಂಗಾತಿ ಎನ್ನುವಂತೆ ನೆಚ್ಚಿಕೊಂಡವಳು. ಬದುಕಿನ ದಾರಿಯ ಮಧ್ಯೆ ಅವರಿವರ ಭೇಟಿಯಾಗಿ ಒಂದಿಷ್ಟು ಮಾತು ಕಲಿತೆ. ಮಾತು, ಮಾತು, ಮಾತು…. ತುಟಿಯಂಚಿನ ಮಾತುಗಳಿಗೆ ಅರ್ಥವೇ ಸಿಗದೇ ತಡವರಿಸಿದೆ. ಇಲ್ಲಿ ಎಲ್ಲವೂ, ಪ್ರಶ್ನೆಗಳೇ.. ಉತ್ತರ ಸಿಗದೇ ಪರದಾಡಿದೆ, ಮಾತು ಬೇಸರವೆನಿಸಿ ಮತ್ತೆ ಮೌನಿಯಾದೆ.
ಮೌನದೊಳಗೂ ಸಾವಿರ ಮಾತುಗಳಿವೆ. ಆದರೆ ಯಾರ ಮುಂದೂ ಬಿಚ್ಚಿಡಬೇಕು ಅನಿಸುವುದಿಲ್ಲಾ. ನನ್ನದಲ್ಲದ ಜನರ ನಡುವೆ ಮೌನ,ಮಾತು ಎರಡೂ ಅನಾಥವೆ!!
ಕತ್ತಲ ಕೋಣೆಯೊಳಗಿನ ಕಿಟಕಿ ಸರಳುಗಳ ನಡುವೆ ಮೆಲ್ಲಗೆ ಕತ್ತು ತೂರಿಸಿದಾಗ ಕಾಣುವ ಎಳೆಯ ಬಿಸಿಲ ಕಿರಣಗಳು, ಹಕ್ಕಿಗಳ ಚಿಲಿಪಿಲಿ, ಪ್ರಾಣಿಗಳ ಹಿಂಡು ಎಲ್ಲವನ್ನೂ ದಿಟ್ಟಿಸಿ ನೋಡಿದರೆ ಆಶ್ಚರ್ಯ ಅನಿಸುತ್ತದೆ.ಮಾತುಗಳಿಲ್ಲ ಅವುಗಳ ನಡುವೆ. ಆದರೆ ಅಷ್ಟು ಅನ್ಯೋನ್ಯತೆ ಹೇಗೆ ಸಾಧ್ಯ? ಉಹೂಂ, ಇಲ್ಲಿಯೂ ಉತ್ತರ ಸಿಗದೇ ತಲೆ ಕೆರೆದುಕೊಳ್ಳುತ್ತೇನೆ.
ದೂರದಲ್ಲಿ ಅದಾವುದೋ ಬೃಹತ್ತಾಗಿ ಬೆಳೆದ ಮರ. ತೆಳ್ಳನೆಯ ಬಳ್ಳಿಯೊಂದು ಅದನ್ನು ಸುತ್ತುವರೆದು ಅಪ್ಪಿ ಬೆಳೆದಿತ್ತು. ಮರಕ್ಕೂ ಈ ಬಳ್ಳಿಗೂ ಅದಾವ ನಂಟು? ಯಾವುದೊ ಜಾತಿಯ ಬಳ್ಳಿ, ಸಂಬಂಧವೆ ಇಲ್ಲ, ಉಸಿರುಗಟ್ಟುವ ಹಾಗೆ ಬಳಸಿ ಬೆಳೆದಾಗ ಮರಕ್ಕೆ ಏಕೆ ಕಿರಿ ಕಿರಿ ಅನಿಸಲಿಲ್ಲ? ಈ ಮರ ಬಳ್ಳಿಗಳ ಹಾಗೆ ಮನುಷ್ಯರ ನಡುವೆ ಏಕೆ ಬಂಧನ ಸ್ಪಂದನಗಳಿಲ್ಲ? ಅಯ್ಯೋ ಇಲ್ಲೂ ನನ್ನ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯುತ್ತದೆ!
ಪ್ರಶ್ನೆ ಉತ್ತರ ಯಾವುದೂ ಬೇಡ, ನೆನಪುಗಳ ಜೊತೆಗೆ ಪಯಣಿಸುತ್ತ, ಭಾವಯಾನದೊಳಗೊಂದು ಮೌನಯಾನವನ್ನು ಆರಂಭಿಸಿ ಬಹು ದೂರ ಸಾಗಿರುವೆ..
ನಿನ್ನೊಂದಿಗಿರು ನೀನು
ಮರೆತು ಹೋಗಲಿ ಹಾಡು…
ಮೌನವಿಲ್ಲದೆ ಇಲ್ಲ ಹೊಸತು ಹುಟ್ಟು…..
ಕವಿವಾಣಿ ಸತ್ಯ ವೆನಿಸಿ ಮೌನ ಮತ್ತಷ್ಟು ಆಪ್ತವೆನಿಸಿಬಿಡುತ್ತದೆ !!
ಭಾವಯಾನಿ ಪ್ರಮೀಳಾ ರಾಜ್