ಅನುವಾದ ಸಂಗಾತಿ
ಪಂಜರದ ಹಕ್ಕಿ
ಇಂಗ್ಲೀಷ್ ಮೂಲ: ಮಾಯಾ ಆಂಗ್ಲೂ
ಕನ್ನಡಕ್ಕೆ – ಡಾ. ಶ್ರೀಲಕ್ಷ್ಮಿ
ಹಾರಿದೆ ಮುಕ್ತ ಹಕ್ಕಿಯೊಂದು
ಗಾಳಿಯ ಬೆನ್ನೇರಿ
ತೇಲಿದೆ ಇಳಿದೊರೆಯಲ್ಲಿ
ಹರಿವಿನ ಕೊನೆ ಸೇರಿ
ಅರುಣನ ಹೊಂಗಿರಣದಲ್ಲಿ
ರೆಕ್ಕೆಯದ್ದಿ
ಬಾನನ್ನೇ ತನ್ನದೆಂದಿದೆ ನೋಡಿ
ಆದರಿಲ್ಲೊಂದು ಪಂಜರದ ಬಂಧಿ
ರೋಷದ ಸರಳುಗಳಾಚೆಗೆ
ಕಾಣಲಾರದ ಸಂಧಿ
ರೆಕ್ಕೆ ತರಿದಿದೆ, ಕಾಲು ಕಟ್ಟಿದೆ
ಅದಕೆಂದೇ ಹಾಡಿದೆ ಕೊರಳು ತುಂಬಿ
ಹಾಡಿದೆ ಪಂಜರದ ಹಕ್ಕಿ
ಬೆದರಿದ ಅದುರುಲಿಯಲ್ಲಿ
ಅರಿಯದ ಕನಸುಗಳ
ಹಂಬಲಿಕೆಯಲ್ಲಿ
ಅನುರಣಿಸಿದೆ ಧ್ವನಿ
ದಿಗಂತದಲ್ಲೂ
ಬಿಡುಗಡೆಯ ಹಾಡಿದೆ
ಪಂಜರದ ಹಕ್ಕಿಯಲ್ಲೂ.
ಮುಕ್ತ ಹಕ್ಕಿಗೆ
ಮತ್ತೊಂದು ತಂಬೆಲರ ಕನಸು
ಮರಗಳ ಮಧ್ಯೆ ಹಾರಾಡುವ ಮನಸು
ಮುಂಜಾನೆಯ ಮೃಷ್ಟಾನ್ನವೂ ನನಸು
ಆಗಸವನ್ನಳೆಯುವ ಕಸುವು
ಮಣ್ಣಾದ ಕನಸುಗಳ ಪಂಜರದ ಹಕ್ಕಿ
ನೆರಳಿಗೂ ದುಃಸ್ವಪ್ನ ಚೀರುತಿದೆ ಬಿಕ್ಕಿ
ರೆಕ್ಕೆ ತರಿದಿದೆ, ಕಾಲು ಕಟ್ಟಿದೆ
ಅದಕೆಂದೇ ಹಾಡಿದೆ ಕೊರಳು ತುಂಬಿ
ಹಾಡಿದೆ ಪಂಜರದ ಹಕ್ಕಿ
ಬೆದರಿದ ಅದುರುಲಿಯಲ್ಲಿ
ಅರಿಯದ ಕನಸುಗಳ
ಹಂಬಲಿಕೆಯಲ್ಲಿ
ಅನುರಣಿಸಿದೆ ಧ್ವನಿ
ದಿಗಂತದಲ್ಲೂ
ಬಿಡುಗಡೆಯ ಹಾಡಿದೆ
ಪಂಜರದ ಹಕ್ಕಿಯಲ್ಲೂ.
ಇಂಗ್ಲೀಷ್ ಮೂಲ: ಮಾಯಾ ಆಂಗ್ಲೂ
ಕನ್ನಡಕ್ಕೆ – ಡಾ. ಶ್ರೀಲಕ್ಷ್ಮಿ
ತುಂಬಾ ಸೊಗಸಾಗಿದೆ..ಅನುವಾದಿತ ಕವಿತೆ…ಮೂಲ ಕವಿತೆಯಂತೇ ಭಾವಪೂರ್ಣ…
ಹಮೀದಾ ಬೇಗಂ. ಸಂಕೇಶ್ವರ.
ಧನ್ಯವಾದ ಹಮಿದ ಅವರೆ.
ಭಾವಪೂರ್ಣ ಅನುವಾದsrinivasan
Thanks sir.