ಸುವಿಧಾ ಹಡಿನಬಾಳ ಲೇಖನ-ಹೆತ್ತವರ ನಿದ್ದೆಗೆಡಿಸುವ ಯುವಪಡೆ

ವಿಶೇಷಲೇಖನ

ಸುವಿಧಾ ಹಡಿನಬಾಳ

ಹೆತ್ತವರ ನಿದ್ದೆಗೆಡಿಸುವ ಯುವಪಡೆ

ಕಳೆದ 2021 ಅಕ್ಟೋಬರ್ 21ರಂದು ನಿಧನರಾದ ‘ಕರ್ನಾಟಕ ರತ್ನ ,’ಯುವಕರ ಕಣ್ಮಣಿ ,ಅಭಿಮಾನಿಗಳ ಪಾಲಿನ ಪರಮಾತ್ಮ ಡಾಕ್ಟರ್  ಪುನೀತ್ ರಾಜಕುಮಾರ್ ಅವರ ಸಾವು ಇಂದಿಗೂ ಕೂಡ ಜೀರ್ಣಿಸಿಕೊಳ್ಳಲಾಗದ ಸತ್ಯವೇ ಆದರೂ ಸಾವಿನ ನಂತರವೂ ಒಂದಿಲ್ಲೊಂದು ಕಾರಣಕ್ಕೆ ಪ್ರತಿದಿನ ಪ್ರತಿಯೊಬ್ಬರ ಬಾಳಿನಲ್ಲಿ ಪ್ರೇರಣೆಯಾಗಿರುವ ಪುನೀತ್ ಈ ಕಾಲದ ದಂತಕತೆ ಎನ್ನಿಸಬಹುದು!!  ಲಕ್ಷಾಂತರ ಜನರ ಬಾಳಿಗೆ ಹೊಸ ಬೆಳಕಾಗಿ, ಯುವಕರ ಬಾಳಿಗೆ ಪ್ರೇರಣೆಯಾಗಿ ,ಅದೆಷ್ಟೋ ಜನ ಸಮಾಜ ಸೇವೆ, ಮಾನವೀಯ ನಡೆ ಹೊಂದಿ ಅವರ ನೆನಪಿನಲ್ಲಿ ಸಮಾಜ ಸೇವೆಗೆ ಇಳಿದಿರುವುದು ಅತ್ಯಂತ ಶ್ಲಾಘನೀಯ. ಪುನೀತ್ ಅವರ ಹುಟ್ಟು ಬದುಕಿನ ಸಾರ, ಸಾಧನೆಯ ಔನ್ನತ್ಯ, ಸಾಮಾಜಿಕ ಸೇವೆ, ಕೌಟುಂಬಿಕ ಹಿನ್ನೆಲೆ, ಕನ್ನಡ ಪ್ರೀತಿ ಇವೆಲ್ಲವೂ ಆದರ್ಶಪ್ರಾಯ, ಮಾದರಿಯದು… ಈ ದಿಶೆಯಲ್ಲಿ ಒಂದು ವರ್ಗದ ಯುವ ಸಮೂಹ ಸಾಮಾಜಿಕ ನಡೆಯ ಕಡೆಗೆ ಮುಖ ಮಾಡಿರುವುದು ಈ ಶತಮಾನದ ಅಪರೂಪದ ಸಾಮಾಜಿಕ ಬೆಳವಣಿಗೆ ಎನ್ನಬಹುದು.

ಈ ಮೇಲಿನ ರೀತಿಯ ರಚನಾತ್ಮಕ ಪರಿವರ್ತನೆಗೆ ಒಳಪಟ್ಟವರ ಸಂಖ್ಯೆ ಅಲ್ಪ ಪ್ರಮಾಣದ್ದು; ಮಿಕ್ಕಿದ್ದೆಲ್ಲಾ ಕೇವಲ ಫೇಸ್ಬುಕ್ ,ವಾಟ್ಸಾಪ್ ಕವನ ,ವೇದಿಕೆ ಭಾಷಣಗಳಿಗೆ ಸೀಮಿತವಾಗಿರಬಹುದು. ಇನ್ನೂ ಒಂದು ವರ್ಗದ ಯುವ ಸಮುದಾಯ ಉನ್ನತ ಶಿಕ್ಷಣ ,ಅತ್ಯಧಿಕ ಅಂಕ, ಲಕ್ಷ ಲಕ್ಷ ಸ್ಯಾಲರಿ ಕನಸು ಹೊತ್ತು ಬದುಕಿನಲ್ಲಿ ಸೆಟಲ್ ಆಗಲು ಹಂಬಲಿಸುವವರು ;ಇವರಿಂದ
ಸಮಾಜಕ್ಕೆ ಬಹುದೊಡ್ಡ ಉಪಕಾರವೇನೂ ಇಲ್ಲದಿದ್ದರೂ  ಉಪದ್ರವವಂತೂ ಇಲ್ಲ. ಮತ್ತೊಂದು ವರ್ಗದ ಸಮುದಾಯ ಕಲೆ, ಸಾಹಿತ್ಯ, ಸಂಗೀತ ,ಸಂಘಟನೆ ಇತ್ಯಾದಿಗಳಲ್ಲಿ ತೊಡಗಿಸಿಕೊಂಡು ಸಾಧನೆಯ ಎತ್ತರಕ್ಕೆ ಏರಲು ಹಂಬಲಿಸುವವರು, ಪ್ರಯತ್ನಿಸುವವರು; ಇವರು ಒಂದು ಅರ್ಥದಲ್ಲಿ ಆಯಾ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿರುವವರು .ಆದರೂ ಬಹುದೊಡ್ಡ ಪ್ರಮಾಣದ ಯುವ ಸಮುದಾಯವೊಂದು ಮೊಬೈಲ್ ಗೀಳಿನಿಂದಾಗಿ ವ್ಯರ್ಥ ಕಾಲಹರಣ, ಪ್ರೀತಿ ಪ್ರೇಮ ಮೋಜು, ಮಸ್ತಿ ಇವುಗಳ ಗುಂಗಿನಲ್ಲಿ ಮುಳುಗಿ ಹೋಗಿರುವರು. ಇಂಥವರ ನಡೆ ಇಂದು ಹೆತ್ತವರ ಪಾಲಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ…

ಆ ಹುಡುಗ ಅಪ್ಪಟ ಅಪರಂಜಿ; ಬಲು ಕಷ್ಟದಿಂದ ಬದುಕನ್ನು ಕಟ್ಟಿಕೊಂಡು ಮೇಲಕ್ಕೆ ಬಂದಾತ. ಪ್ರೀತಿ ಪ್ರೇಮ ಎಂಬ ಯಾವ  ಗೋಜಿಗೂ ಸಿಲುಕಿದವನಲ್ಲ .
ಉತ್ತಮ ಸಂಸ್ಕಾರವುಳ್ಳ  ಮನೆತನದ ಹೆಣ್ಣಿಗಾಗಿ ಹುಡುಕಾಟ ನಡೆಸಿ ಅಂತೂ ಅದ್ದೂರಿಯಾಗಿ ಹಸೆಮಣೆ ಏರಿದ .ರೂಪ ,ಪ್ರತಿಷ್ಠೆ, ಸಂಸ್ಕಾರ ಎಲ್ಲವೂ ಮೇಲ್ನೋಟಕ್ಕೆ ಇದ್ದಂತೆ ಕಂಡ ಹುಡುಗಿ; ಆದರೂ ಯಾಕೋ ಅವರ ಸಂಸಾರ ದಡ ಸೇರಲೇ ಇಲ್ಲ. ಒಂದು ವರ್ಷಗಳ ಕಾಲ ಮದುವೆ ಪೂರ್ವ ತಯಾರಿ ನಡೆದಿದ್ದರೂ ಸತ್ಯವನ್ನು ಮುಚ್ಚಿಟ್ಟು ಮದುವೆಯಾಗಿ ಗಂಡನೊಟ್ಟಿಗೆ ಸಂಸಾರ ಮಾಡಲಾಗದೆ ಮೂರೇ ತಿಂಗಳಿಗೆ ತವರು ಮನೆ ತುಳಿದ ಹುಡುಗಿಯ ನಡೆ ಆಘಾತಕಾರಿಯದು!! ಇದರಿಂದ ಹುಡುಗನಿಗೆ, ಹುಡುಗನ ಕುಟುಂಬದವರಿಗೆ ಆದ ನಷ್ಟ ಅವಮಾನ ಅಷ್ಟಿಷ್ಟಲ್ಲ. ಅನ್ಯಾಯವಾಗಿ ಒಬ್ಬ  ಮುಗ್ಧ ಹುಡುಗನ ಬದುಕಿನಲ್ಲಿ ಆಟ ಆಡಿದ ಪಾಪಪ್ರಜ್ಞೆಯೂ ಅವಳಿಗೆ ಇದ್ದಂತಿಲ್ಲ..

ಅವರಿಬ್ಬರದು ಕುಟುಂಬದವರು ನೋಡಿ ಮೆಚ್ಚಿ ಮಾಡಿದ ಮದುವೆ .ಹುಡುಗಿಯ ಒಪ್ಪಿಗೆಯು ಮೇರೆಗೆ ಮದುವೆ ಏನೋ ನಡೆಯಿತು .ಎರಡು ವರ್ಷ ನೋಡುವವರ ಕಣ್ಣಿಗೆ ಅಪರೂಪದ ಜೋಡಿ .ತುಂಬಾ ಮುದ್ದಾದ ಸಂಸಾರವೇನೊ ಎನ್ನುವಂತಿತ್ತು ಆದರೆ ಒಳಗಿನ ಗುಟ್ಟು ಶಿವನೇ ಬಲ್ಲ! ಎರಡು ವರ್ಷದ ನಂತರ ಕುಂಟು ನೆಪ ಮಾಡಿ ಗಂಡನ ಮನೆ ಬಿಟ್ಟು ತವರು ಮನೆ ಸೇರಿದ ಹುಡುಗಿ ತಾನು ಮೊದಲು ಪ್ರೀತಿಸಿದ ಹುಡುಗನನ್ನೇ ಮರು ಮದುವೆಯಾದಳು .ಇದೇನು ಸಿನಿಮಾ ಕಥೆಯಲ್ಲ. ಯಾಕೆ ಹೀಗೆ? ಹೆತ್ತವರ ಒತ್ತಾಯಕ್ಕೊ , ತಮ್ಮ ಇಷ್ಟ ಕಷ್ಟವನ್ನು ಹೇಳಿಕೊಳ್ಳಲಾಗದ ಸಂದಿಗ್ಧತೆಗೊ; ಆದರೂ ಅನ್ಯಾಯವಾಗಿ ಹುಡುಗನನ್ನು, ಅವರ ಕುಟುಂಬವನ್ನು ಸಂಕಷ್ಟಕ್ಕೆ ಸಿಲುಕಿಸಿದ ಅವಳ ನಡೆ  ಸಹಿಸಲಾಗದು.ಇದಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಮದುವೆ ಆದ ಕೆಲವೇ ದಿನಗಳಲ್ಲಿ ಗಂಡನ  ದೌರ್ಜನ್ಯ, ಕುಡಿತ, ಅನುಮಾನದ ನಡೆಗೆ ಬೇಸತ್ತು ತವರುಮನೆ ಸೇರುವವರು, ಜೀವ ಕಳೆದುಕೊಳ್ಳುವವರ ದೊಡ್ಡ  ಸಂಖ್ಯೆಯೇ ಇದೆ. ಒಟ್ಟಿನಲ್ಲಿ ಇಂದು ಈ ರೀತಿ ಮೋಸ ಹೋಗುವವರಲ್ಲಿ ಗಂಡು ಹೆಣ್ಣು  ಇಬ್ಬರೂ ಸೇರಿದ್ದಾರೆ.ಇಂತಹ ಘಟನೆಗಳು ದಿನದಿಂದ ದಿನಕ್ಕೆ ಕೋರ್ಟು ,ಮಹಿಳಾ ಆಯೋಗದ ಮೆಟ್ಟಿಲೇರುತ್ತಿವೆ. ಹೆತ್ತವರ ಒತ್ತಾಯಕೊ ಬಚ್ಚಿಟ್ಟ ಪ್ರೀತಿಯನ್ನು ಹೇಳಲಾಗದೆ ಮುಚ್ಚಿಟ್ಟು ಮದುವೆಯಾದ ನಂತರ ಡಿವೋರ್ಸ್ ಪಡೆಯುವವರ ಸಂಖ್ಯೆ ಹೆಚ್ಚುತ್ತಿದೆ.

ಇತ್ತೀಚಿನ ಒಂದು ವರದಿಯ ಪ್ರಕಾರ ಮಹಿಳಾ ಆಯೋಗಕ್ಕೆ ಬರುತ್ತಿರುವ ದೂರುಗಳಲ್ಲಿ 40 ಶೇಕಡಾ   ಪ್ರಕರಣಗಳು ‘ಲಿವಿಂಗ್ ಟುಗೆದರ್’ಗೆ ಸಂಬಂಧಪಟ್ಟವು ಎನ್ನುವ ಮಾಹಿತಿ ಇನ್ನಷ್ಟು ಆಘಾತಕಾರಿ! ಭಾರತಕ್ಕೆ ಇತ್ತೀಚಿನ ವರ್ಷಗಳಲ್ಲಿ ಪರಿಚಯಿಸಲ್ಪಟ್ಟ ಲಿವಿಂಗ್ ಟುಗೆದರ್ ಪರಿಕಲ್ಪನೆ ಪಾಶ್ಚಾತ್ಯ ನಡೆ-ನುಡಿ  ಆಧಾರಿತವಾದುದು. ಇದು  ನಮ್ಮ ಕೌಟುಂಬಿಕ ವ್ಯವಸ್ಥೆಗೆ ತದ್ವಿರುದ್ಧವಾದ ಪರಿಕಲ್ಪನೆ.

 ಉನ್ನತ ಶಿಕ್ಷಣ, ಉದ್ಯೋಗದ ನೆಪದಲ್ಲಿ ದೂರ ದೂರದ  ಪ್ರದೇಶಗಳಿಂದ ಮಹಾನಗರಗಳಲ್ಲಿ ಬಂದು ನೆಲೆಗೊಳ್ಳುವ ಯುವಕ ಯುವತಿಯರು  ಅಲ್ಲಿನ ತಳುಕು ಬಳುಕಿನ, ಬೆಡಗು ಬಿನ್ನಾಣದ ಮಾಯಾನಗರಿಗಳ ಮೋಹಕ್ಕೆ ಒಳಪಟ್ಟು ಸಂಗಾತಿಯ ಮೊರೆ ಹೋಗುವುದು ಸರ್ವೇ ಸಾಮಾನ್ಯ. ಸ್ನೇಹ, ಪ್ರೀತಿ ಇಷ್ಟೇ ಆಗಿದ್ದರೆ ಓಕೆ. ಅವು ಎಲ್ಲಾ ಕಾಲಕ್ಕೂ ಒಪ್ಪಿತ ಆದರೆ
ಇಂದಿನ ಮುಕ್ತ ಸ್ವಾತಂತ್ರ್ಯ, , ವಯೋಸಹಜ ದೈಹಿಕ ಆಕರ್ಷಣೆ, ವರವಾಗಿರುವ ಮೊಬೈಲ್!  ಉಡುಗೆ ತೊಡುಗೆ, ಆಹಾರ ಆಚಾರ ವಿಚಾರ ಗಳಲ್ಲಿ ಪಾಶ್ಚಾತ್ಯರನ್ನು ಅನುಕರಿಸುವ  ಒಂದು ಜಮಾನವಿದು. ಹೀಗಾಗಿ ಈ ತಲೆಮಾರಿನ ಒಂದಿಷ್ಟು ಯುವ ಸಮೂಹಕ್ಕೆ ನಮ್ಮ ಕೌಟುಂಬಿಕ ವ್ಯವಸ್ಥೆ,  ಜೀವಕ್ಕೆ ಜೀವವಾಗಿ ಸತಿಪತಿಗಳಾಗಿ ಬದುಕುತ್ತಿರುವವರ ಬಗ್ಗೆ ಒಂದಿಷ್ಟು ರೇಜಿಗೆ! ಮಕ್ಕಳು ಮರಿ, ಸಾಂಸಾರಿಕ ಜವಾಬ್ದಾರಿ ಇದಾವುದೂ ಬೇಡ ; ಇಂಥ ವಿಚಾರಧಾರೆಗಳಿಗೆ ಪೂರಕವಾಗಿ ಹುಟ್ಟಿಕೊಂಡ ಹೊಸ ಬಗೆಯೇ ಪರಸ್ಪರ ಒಪ್ಪಿಗೆಯಿಂದ ಇರುವಷ್ಟು ದಿನ ಕೂಡಿ ಸಂಸಾರ ನಡೆಸುವ ಮದುವೆಯ ಹಂಗಿಲ್ಲದ ,ಜವಾಬ್ದಾರಿ ಇಲ್ಲದ ಪರಿಕಲ್ಪನೆ ಲಿವಿಂಗ್ ಟುಗೆದರ್ !!ಒಂದಿಷ್ಟು ದಿನ ಇವೆಲ್ಲವೂ ಚೆನ್ನಾಗಿಯೇ ನಡೆಯುತ್ತವೆ; ಸಂಬಂಧ ಹಳಸಿದಂತೆ ,ಆಕರ್ಷಣೆ ಕಡಿಮೆಯಾದಂತೆ ಕಿತ್ತಾಟ ,ಹಲ್ಲೆ, ಅತ್ಯಾಚಾರದ ಆರೋಪಗಳು ಕೋರ್ಟ್ ಮೆಟ್ಟಿಲೇರುತ್ತವೆ. ಮುಖ್ಯವಾಗಿ ಕಾನೂನಿನ ಅರಿವಿರದ ,ಭವಿಷ್ಯದ ದೂರಾಲೋಚನೆ ಇಲ್ಲದ ಯುವ ಸಮೂಹ ಈ ರೀತಿಯಲ್ಲಿ  ಸುಂದರವಾದ ತಮ್ಮ ಬದುಕನ್ನು ತಾವೇ ಹಾಳು ಮಾಡಿಕೊಳ್ಳುತ್ತಿದ್ದಾರೆ.. ಇದಾವುದರ ಅರಿವಿರದ ಹೆತ್ತವರು ಮಕ್ಕಳ ಬಗ್ಗೆ ಸಾವಿರ ಸಾವಿರ ಕನಸು ಕಟ್ಟಿ ದೂರದಲ್ಲಿ ಎಲ್ಲೋ ಬದುಕಿನ ಬಂಡಿ ಎಳೆಯುತ್ತಿದ್ದಾರೆ . ಇದು ಒಂದು ಬಗೆಯ ಆತಂಕಕಾರಿ ಬೆಳವಣಿಗೆಯಾದರೆ ಇದಕ್ಕಿಂತಲೂ ಆತಂಕ ಕಾರಿಯಾದ ವಿಚಾರಗಳು ಬೆಚ್ಚಿ ಬೀಳಿಸುತ್ತವೆ!

‘ಲಿವಿಂಗ್ ಟುಗೆದರ್’ ಪರಿಕಲ್ಪನೆ ಬಹುತೇಕ ಎಲ್ಲರೂ ಒಪ್ಪಿಕೊಳ್ಳಲಾರರು ;ಆದರೆ ಇವತ್ತಿನ ಮೊಬೈಲ್ ಯುಗದಲ್ಲಿ ಹೈಸ್ಕೂಲ್ ಮೆಟ್ಟಿಲು ಹತ್ತುವಾಗಲೇ ಓರ್ವ ಹುಡುಗಿ ಹುಡುಗ ಕದ್ದು ಮುಚ್ಚಿ ಗುಸುಗುಸು, ಪಿಸುಗುಡುವ ಕಾಲ!! ಮುಂದೆ ದೊಡ್ಡವರಾದಂತೆ ಉನ್ನತ ಶಿಕ್ಷಣಕ್ಕಾಗಿ ಹೆತ್ತವರಿಂದ ದೂರವಿರುವ ಮುಕ್ತ ಅವಕಾಶ, ಸ್ವಾತಂತ್ರ್ಯ ಹತ್ತಾರು ಬಗೆಯ ಮೋಜು ಮಸ್ತಿ,  ಪ್ರೇಮ ಕಾಮ, ಔಟಿಂಗ್, ಡೇಟಿಂಗ್, ರೈಡಿಂಗ್ ಎಲ್ಲಾ ಕಾಮನ್! ಎಲ್ಲವೂ ಖುಲ್ಲಂಖುಲ್ಲ! ಮುಂದೆ ಉಳಿಯುವುದೇನು? ಸಂಸಾರ ನಿಸಾರ… ಬೇಸರಗೊಂಡರೆ ಹೊಸ ಹುಡುಕಾಟ ,ಕಿತ್ತಾಟ ಇಲ್ಲವೇ ಖಿನ್ನತೆ , ಆತ್ಮಹತ್ಯೆ! ಈ ಸೌಭಾಗ್ಯಕ್ಕೇ ಹೆತ್ತವರು ಮಕ್ಕಳ ಬೆಳೆಸುವುದು??

ನಮ್ಮ ದೌರ್ಭಾಗ್ಯ ಕೊರೊನಾ ಬರುವವರೆಗೆ ನಮ್ಮ ಪ್ರಾಥಮಿಕ ಶಾಲಾ ಮಕ್ಕಳಾದರೂ ಮೊಬೈಲ್ ನಿಂದ ಸುರಕ್ಷಿತವಾಗಿದ್ದು ತಮ್ಮ ವಯೋಸಹಜ ಮುಗ್ಧತೆಯನ್ನು ಉಳಿಸಿಕೊಂಡಿದ್ದರು. ಈಗ ಯಾವುದೂ ಹೊಸತಲ್ಲ. ಯಾವುದರಲ್ಲಿಯೂ ಕುತೂಹಲ ಇಲ್ಲ. ಕ್ಲಾಸಿನಲ್ಲಿ ಶಿಕ್ಷಕರು ಹೇಳುವುದನ್ನು ಕೇಳಬೇಕೆಂದಿಲ್ಲ; ಎಲ್ಲಾ ಉತ್ತರಗಳೂ ರೆಡಿಮೇಡ್ ಪೂಡ್ ತರ ಲಭ್ಯ…
ಈ ಸಂದಿಗ್ಧ ಕಾಲಘಟ್ಟದಲ್ಲಿ ನಮಗೆ ನಾವೇ ಜೊತೆಗೆ ಮಕ್ಕಳ ಮೊಂಡುತನಕ್ಕೆ  ಒಂದಿಷ್ಟು ಕಡಿವಾಣ ಅನಿವಾರ್ಯವೇನೊ!!


6 thoughts on “ಸುವಿಧಾ ಹಡಿನಬಾಳ ಲೇಖನ-ಹೆತ್ತವರ ನಿದ್ದೆಗೆಡಿಸುವ ಯುವಪಡೆ

  1. ವಾವ್. ನಿಜಕ್ಕೂ ಚೆನ್ನಾಗಿದೆ ಈ ಸಮಾಜಮುಖಿ ಬರವಣಿಗೆ. ವ್ಯವಸ್ಥೆಯಲ್ಲಿ ಬದಲಾವಣೆ ತರುವುದು ಮತ್ತು ಬಾನಲ್ಲಿ ಹಾರುತ್ತಿರುವ ಇಂಜಿನ್ ಹಾಳಾಗಿರುವ ವಿಮಾನವನ್ನು ಸುರಳಿತವಾಗಿ ನೆಲಕ್ಕಿಳಿಸುವುದು ಎರಡೂ ಒಂದೇ ಲೆಕ್ಕ. ಒಂದೊಮ್ಮೆ ವಿಮಾನ ಲ್ಯಾಂಡ್ ಆದರೂ ವ್ಯವಸ್ಥೆ ಬದಲಾವಣೆ ಕಷ್ಟ ಸಾಧ್ಯ. ಇಂಪ್ರೆಸ್ಸಿವ್ ಬರವಣಿಗೆ…..

  2. ವಾಸ್ತವ ಬದುಕಿನ ಚಿತ್ರಣ..ಹುಟ್ಟಿನಿಂದಲೇ ಮೊಬೈಲ್ ಜೊತೆಗೆ ಬೆಳೆಯುವ ಮಕ್ಕಳು..
    ಮೂಲ‌ಕಾರಣ .ಪಾಲಕರೋ..ಎಂಬ ದುಗುಡ..

    1. ವಾವ್ ತುಂಬಾ ಚೆನ್ನಾಗಿದೆ ಮೇಡಂ ಅತ್ಯುತ್ತಮವಾದ ಬರವಣಿಗೆ*

  3. Good and caution article to the parents but no smuggestions for improving situations from your side

  4. ವರ್ತಮಾನದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಬಹು ಮಾರ್ಮಿಕವಾಗಿ ವಿವರಿಸಿದ್ದೀರಿ.ಲೇಖನ ತುಂಬಾ ಸೊಗಸಾಗಿ ಮೂಡಿ ಬಂದಿದೆ ಮೇಡಂ.ಮಗಳನ್ನು ಕೊಡಲು, ಸೊಸೆಯನ್ನು ತರಲು ಯೋಚಿಸುವಂತಹ ಸ್ಥಿತಿಯಲ್ಲಿ ಇದ್ದೇವೆ.

Leave a Reply

Back To Top