ಸುರೇಶ್ ತಂಗೋಡೆ-ಪ್ರೀತಿಯಮಗನಿಗೊಂದು ಪತ್ರ

ವಿಶೇಷ ಬರಹ

ಸುರೇಶ್ ತಂಗೋಡೆ

ಪ್ರೀತಿಯ ಮಗನಿಗೊಂದು ಪತ್ರ


                        ಪಪ್ಪು( ಮನ್ವಿತ್ ) ನೀನೀಗ ಒಂದು ವರುಷದ ಕೂಸು.ನಿನಗೆ ಈ ಪತ್ರ ಅರ್ಥವಾಗುವುದಿಲ್ಲವೆಂಬುದು ನನಗೂ ಗೊತ್ತು,ಆದರೆ ಮುಂದೊಂದು ದಿನ ನೀನು ಅ ಮೇಲೆ ಈ ಪತ್ರ ನಿನ್ನ ಕೈ ಸಿಕ್ಕು ಓದಬಹುದೆಂಬ ಭರವಸೆಯಲ್ಲಿಯೇ ಬರೆದಿರುವೆ.
ನಿನ್ನಪ್ಪ ಕೋಟಿವೀರನಲ್ಲ,ಶೂರನೂ ಅಲ್ಲ,ಹಾಗಂತ ತನ್ನತನವ ಬಿಟ್ಟು ಬದುಕಿದವನಲ್ಲ.ನನ್ನಪ್ಪ ಹಾಕಿಕೊಟ್ಟ ಜೀವನಪಾಠದಲ್ಲಿಯೇ ನಡೆದವನು ನಾನು.ಪಪ್ಪು ನೀ ಅನುಭವಿಸುತ್ತಿರುವ ಸುಖ ,ನಾ ಅನುಭವಿಸಿಲ್ಲ‌.ನೀನು ಆಸ್ವಾದಿಸುವ ಅಪ್ಪನ ಪ್ರೀರಿ ನನಗೆ ಧಕ್ಕಲಿಲ್ಲ,ಕಾರಣ ನನಗೆ ಅಪ್ಪನೆಂದರೆ ಅಸ್ಪಷ್ಟ ಚಿತ್ರಣ.ನಿನ್ನಪ್ಪನಂತೆ ನನಗೆ ನನ್ನಪ್ಪ ಮುದ್ದಿಸಲಿಲ್ಲ ಯಾಕಂದರೆ ನನ್ನಪ್ಪ ಆಗಲೇ ದೇವರಲ್ಲಿ ಸೇವೆಗೆ ನಿಯುಕ್ತಿಗೊಂಡಿದ್ದ.ಪುಟ್ಟ ಬದುಕು ನನ್ನ ದೃಷ್ಠಿಕೋನದಿಂದ ನೋಡುವುದಾದರೆ ಕ್ಷಣ ಬದುಕಿಗೆ ಮನುಷ್ಯನ ಹರಸಾಹಸ ಹೇಳತೀರದು‌.ನೀನು ಬದುಕುವುದಾರೆ ವಾಸ್ತವದಲ್ಲಿ ಬದುಕು .ಹಿಂದೆ ಮಾಡಿದ ತಪ್ಪು,ಘಟನೆಗಳ ಬಗ್ಗೆ ಚಿಂತಿಸಿ ಕೊರಗುತ್ತಾ ಕೂಡಬೇಡ.ಮುಂದಿನ ಭವಿಷ್ಯದ ಬಗ್ಗೆ ಭ್ರಮಾಲೋಕದಲ್ಲಿ ವಿಹರಿಸಬೇಡ‌.ಜೀವನದ ಪ್ರತಿ ಕ್ಷಣವ ಜೀವಿಸು.ಇದು ನಾ ಅನುಸರಿಸಿದ ಜೀವನ ಮಾರ್ಗ.ಸಮಾಜದ ಬಗ್ಗೆ ಹೇಳುವುದಾರೆ ಇದು  ಉಳಿದವರು ಕಂಡಂತೆ.ಕೆಲವರು ನಿನ್ನನ್ನು ಒಳ್ಳೆಯವರೆಂದರೆ ,ಮತ್ತೇ ಕೆಲವರು ನಿನ್ನನ್ನು ಕಟ್ಟವನೆಂದು ಬಿಂಬಿಸುವರು ಅದಕ್ಕೆ ಈ ಸಮಾಜದ ಬಗ್ಗೆ ತಾತ್ಸಾರದಿಂದಿರು.ನಿನ್ನ ಆತ್ಮಸಾಕ್ಷಿಯಂತೆ ಬದುಕು.ಜ್ಞಾನ ಜೀವನದ ಅತಿ ಮುಖ್ಯ ಅಂಶ ಮತ್ತು ಅಸ್ತ್ರ ಅದು ಸದಾ ಹರಿತವಾಗಿರುವಂತೆ ನೋಡಿಕೊ.ಪುಸ್ತಕಗಳನ್ನು ಹೆಚ್ಚಾಗಿ ಓದು ಆದರೆ ಕೂಚುಪಟ್ಟನಂತಾಗಬೇಡ..ಮತ್ತೊಬ್ಬರಿಗೆ ಸಹಾಯ ಮಾಡುವ ಸಂದರ್ಭ ಬರದಿದ್ದರೂ ಚಿಂತೆಯಿಲ್ಲ,ಆದರೆ ಅಪಕಾರ,ಅವಮಾನ,ಮೋಸ ಮಾಡಬೇಡ.ಹುಷಾರು ಅತಿ ಒಳ್ಳೆಯವನು ಆಗಬೇಡ ಯಾಕೆಂದರೆ ಅತಿ ಒಳ್ಳೆಯತನವು ಸರಿಯಲ್ಲ.ಸಂಬಂಧಗಳಿಗೆ ಬೆಲೆ ಕೊಡು, ಆದರೆ ಸಮಯಸಾಧಕನಾಗಬೇಡ.ಪ್ರೀತಿ,ಮಮತೆ,ಕರುಣೆ ಇರಬೇಕು ಊಟಕ್ಕೆ ಉಪ್ಪಿನತರ.ಇಲ್ಲಿ ಯಾವುದು ಅತಿಯಾಗಬಾರದು.ಒಮ್ಮೆ ಯೋಚಿಸಿದರೆ ನಿನಗೆ ಈ ಬದುಕು ತೃಪ್ತಿ ನೀಡಬೇಕು ಅಂತಹ ಬದುಕು ಬಾಳಬೇಕು.”ಅವಶ್ಯಕತೆಗಳೆ ಸಂಶೋಧನೆಯ ತಾಯಿ” ಎಂಬ ಮಾತಿದೆ ಹಾಗೆ ಜೀವನದಲ್ಲಿ ರಿಸ್ಕ್ ತಗೋ ಅದರಲ್ಲಿಯೇ ಕಿಕ್ಕ್ ತಗೋ.
              ಒಟ್ಟಾರೆ ಜೀವನ ಚಿಕ್ಕದು,ಅವರಂತೆ-ಇವರಂತೆ ಬದುಕಬೇಡ,ನಿನಗೆ ತಿಳಿದಂತೆ ಬದುಕು.ಆದರೆ ಬದುಕು ಬರಡಾಗದಂತಲ್ಲ,ಬಂಗಾರದಂತೆ ಹೊಳೆಯುವ ಬದುಕಾಗಲಿ.ಅಂತಹ ಬದುಕನ್ನು ಬದುಕು.
 ನಿನ್ನ ಜೀವನ ಉಜ್ವಲ ಆಗೇ ಆಗುತ್ತದೆ ಎಂಬ ಆಶಯದಲ್ಲಿ……


  ಇಂತಿ ನಿನ್ನಪ್ಪ.

Leave a Reply

Back To Top