ಮೇ-ದಿನದ ವಿಶೇಷ

ಸುಧಾ ಪಾಟೀಲ್

ಕಾರ್ಮಿಕರ ದಿನಾಚರಣೆ

ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಕಾರ್ಮಿಕ ಸಂಘಗಳು ಮತ್ತು ಸಮಾಜವಾದಿ ಪಕ್ಷಗಳು ಮುಖ್ಯವಾಗಿ ಆಚರಿಸುವ ಸಂಭ್ರಮದ ಸಾರ್ವಜನಿಕ ಉತ್ಸವ ದಿನ. ಮೇ ದಿನ ಅಥವಾ ಅಂತರರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯನ್ನು ಪ್ರತಿ ವರ್ಷದ ಮೇ ಒಂದನೆಯ ತಾರೀಕಿನಂದು ಪ್ರಪಂಚದ ಹಲವು ದೇಶಗಳಲ್ಲಿ ಆಚರಿಸಲಾಗುತ್ತದೆ. ಈ ದಿನದಂದು ಕಾರ್ಮಿಕ ಆಂದೋಲನದ ಸಾಮಾಜಿಕ ಮತ್ತು ಆರ್ಥಿಕ ಸಾಧನೆಗಳನ್ನು ಆಚರಿಸಲಾಗುತ್ತದೆ. ಕಾರ್ಮಿಕರ ಮೆರವಣಿಗೆ, ಪ್ರದರ್ಶನ, ಸಭೆ.. ಇವು ಆ ದಿನದ ವಿಶೇಷಗಳು.

1886 ರ ಮೇ ನಾಲ್ಕರಂದು ಚಿಕಾಗೋದ ಇಲಿನಾಯ್ಸ್ ಪ್ರದೇಶದ ಹೇ ಮಾರ್ಕೆಟ್ ಎಂಬಲ್ಲಿ ಕಾರ್ಮಿಕರ ಮೇಲೆ ನಡೆದ ದಮನಕಾರಿ ಘಟನೆಯನ್ನು ಈ ಆಚರಣೆ ಹಿನ್ನಲೆಯಾಗಿ ಇಟ್ಟುಕೊಂಡಿದೆ. ಪ್ಯಾರಿಸನಲ್ಲಿ ಸಮಾವೇಶಗೊಂಡಿದ್ದ ಸಮಾಜವಾದಿ ಅಂತರರಾಷ್ಟ್ರೀಯ ಪ್ರಥಮ ಅಧಿವೇಶನದಲ್ಲಿ ಮೇ ಒಂದನೆಯ ದಿನಾಂಕವನ್ನು ವಾರ್ಷಿಕ ಅಂತರರಾಷ್ಟ್ರೀಯ ಉತ್ಸವದಿನವೆಂದು ಆಚರಿಸಬೇಕೆಂದು ನಿರ್ಧರಿಸಲಾಯಿತು. ಮೇ ಒಂದರಂದು ಸಾರ್ವಜನಿಕ ರಜಾದಿನವೆಂದು ಘೋಷಿಸಬೇಕೆಂದು ಒತ್ತಾಯಪಡಿಸಲು ನೇರ ಕ್ರಮ ಕೈಗೊಳ್ಳಬೇಕೆಂದೂ ನಿರ್ಣಯಿಸಲಾಯಿತು.

ಭಾರತದಲ್ಲಿ ಮೇ ದಿನವೇ ಕಾರ್ಮಿಕರ ದಿನ. ಇಪ್ಪತ್ತನೆಯ ಶತಮಾನದ ಎರಡನೆಯ ದಶಕದ ದ್ವಿತೀಯಾರ್ಧದಲ್ಲಿ ಕಾರ್ಮಿಕ ಸಂಘ ಚಳುವಳಿಯ ಪ್ರಭಾವ ಹೆಚ್ಚಿದಾಗಿನಿಂದ ಇದರ ಆಚರಣೆ ಆರಂಭವಾಯಿತು. ಮೇ ದಿನಾಚರಣೆಯಲ್ಲಿ ಭಾಗವಹಿಸಿದ ಮೊಟ್ಟಮೊದಲಿನ ಭಾರತೀಯ ಕಾರ್ಮಿಕರು ಇಂಗ್ಲೆ೦ಡಿನಲ್ಲಿದ್ದ ಭಾರತೀಯ ನಾವಿಕರು. ಭಾರತಕ್ಕೆ ಸ್ವಾತಂತ್ರ್ಯ ನೀಡಬೇಕೆಂಬ ಘೋಷಣೆಯನ್ನೊಳಗೊಂಡ
ಪ್ರದರ್ಶನ ಚಿತ್ರಗಳನ್ನು ಹಿಡಿದು ಮೆರವಣಿಗೆಯಲ್ಲಿ ಅವರು ಹೈಡ್ ಪಾರ್ಕಿನ ಮೇ ದಿನದ ಉತ್ಸವಸಭೆಗೆ ಹೋದರು. ಭಾರತದಲ್ಲಿ 1927 ರಿಂದೀಚೆಗೆ ಪ್ರತಿವರ್ಷವೂ ಕಾರ್ಮಿಕರು ಈ ದಿನವನ್ನಾಚರಿಸುತ್ತಿದ್ದಾರೆ.


ಭಾರತದಲ್ಲಿ ಈ ಉತ್ಸವದಲ್ಲಿ ಭಾಗವಹಿಸುವವರು ಕಾರ್ಮಿಕ ಸಂಘಗಳವರು, ಸಮಾಜವಾದಿಗಳು ಮತ್ತು ಕೆಲವು ಬುದ್ಧಿಜೀವಿಗಳು ಮಾತ್ರ .

1927 ರಲ್ಲಿ ಮುಂಬೈಯಲ್ಲಿ ನಡೆದ ಉತ್ಸವದಲ್ಲಿ ಅನೇಕ ಕಾರ್ಮಿಕ ಮುಖಂಡರು ಭಾಗವಹಿಸಿದ್ದರು. ಅದೇ ವರ್ಷ ಕಲ್ಕತ್ತದಲ್ಲಿ ಬಂಗಾಳ ಪ್ರದೇಶ ಕಾರ್ಮಿಕ ಸಂಘ ಕಾಂಗ್ರೆಸ್ ಮೇ ದಿನವನ್ನಾಚರಿಸಿದಾಗ ಪೊಲೀಸರು ಅನೇಕ ನಿರ್ಬಂಧ ಕಾಯ್ದೆಗಳನ್ನು ವಿಧಿಸಿದರೆಂದು ತಿಳಿದು ಬರುತ್ತದೆ. 1928 ರಿಂದ 1934 ರವರೆಗೆ ಆ ಉತ್ಸವಾ ಚರಣೆಯ ದಿನದಂದು ಕಾರ್ಮಿಕರ ದಿನಾಚರಣೆಯ ಅನೇಕ ಮುಷ್ಕರಗಳು ನಡೆದವು. ಎರಡನೆಯ ಮಹಾಯುದ್ಧಾನಂತರ ಆ ದಿನವನ್ನು ಹೆಚ್ಚು ವ್ಯಾಪಕವಾಗಿ ಆಚರಿಸಲು ಪ್ರಾರಂಭವಾಯಿತು. ಕಾರ್ಮಿಕರೂ , ಕಾರ್ಮಿಕ ಸಂಘಗಳೂ ಅಧಿಕ ಸಂಖ್ಯೆಯಲ್ಲಿ ಭಾಗವಹಿಸತೊಡಗಿದವು. 1969 ರಲ್ಲಿ ಭಾರತ ರಾಷ್ಟ್ರೀಯ ಕಾರ್ಮಿಕ ಸಂಘಗಳ ಕಾಂಗ್ರೆಸ್ ಒಂದನ್ನು ಬಿಟ್ಟು ಉಳಿದೆಲ್ಲ ಕಾರ್ಮಿಕ ಸಂಘಗಳೂ ಒಟ್ಟಾಗಿ ತಮ್ಮ ಹಕ್ಕುಗಳನ್ನು ಸಾಧಿಸಲು ಭಾರಿ ಮೆರವಣಿಗೆಯಲ್ಲಿ ಪಾರ್ಲಿಮೆಂಟ್ ಭವನದ ಬಳಿಗೆ ಮೆರವಣಿಗೆಯಲ್ಲಿ ಹೋಗಿ ಪ್ರದರ್ಶನ ನಡೆಸಿದವು.

ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ಸೆಪ್ಟೆಂಬರ್ ಮೊದಲನೆಯ ಸೋಮವಾರದಂದು ಕಾರ್ಮಿಕ ದಿನವನ್ನಾಚರಿಸಲಾಗುತ್ತದೆ. ಆ ದಿನವನ್ನಾಚರಿಸಬೇಕೆಂಬಚಳುವಳಿಯನ್ನು ಅಲ್ಲಿ ಪ್ರಾರಂಭಿಸಿದವರು ನೈಟ್ಸ್ ಆಫ್ ಲೇಬರ್ ಎಂಬ ಕಾರ್ಮಿಕ ಸಂಘಗಳವರು. ಹೀಗೆ ಜಗತ್ತಿನ ಎಲ್ಲ ಕಡೆಗೆ ಕಾರ್ಮಿಕರ ದಿನವನ್ನು ಆಚರಿಸುತ್ತಾರೆ .


ಸುಧಾ ಪಾಟೀಲ್

Leave a Reply

Back To Top