ಅಂಕಣ ಸಂಗಾತಿ
ಹನಿಬಿಂದು
ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ
ದುಡಿಯುವ ಕೈಗಳಿಗೆ ಬಡತನ ಬಾರದಿರಲಿ
ಮೇ ಒಂದು ಎಂದ ತಕ್ಷಣ ನಮಗೆ ನೆನಪಾಗುವುದು ಕಾರ್ಮಿಕರ ದಿನಾಚರಣೆ. ಕಾರ್ಮಿಕನಿಲ್ಲದೆ ಈ ದೇಶ ಸಾಗದು. ಯಾವುದೇ ದೊಡ್ಡ ದೊಡ್ಡ ಕಟ್ಟಡಗಳು ನಿಲ್ಲಬೇಕಾದರೆ ಕಾರ್ಮಿಕರೇ ಅವುಗಳ ಜೀವನ. ಯಾವುದೇ ಇಂಜಿನಿಯರ್ ಗಳಿದ್ದರೂ ಬಿಲ್ಡರ್ಸ್ ಗಳಿದ್ದರೂ ಅವರ ಮೂಲ ಬಂಡವಾಳ ಈ ಕಾರ್ಮಿಕರೇ. ಕಾರ್ಮಿಕರನ್ನು ಬಿಟ್ಟು ಯಾವುದೇ ಕೆಲಸವಿಲ್ಲ. ಯಾವುದೇ ಕಟ್ಟಡಗಳ ರಚನೆಗಳಿಲ್ಲ, ಯಾವುದೇ ಅತ್ಯಂತ ಕ್ರಿಯಾತ್ಮಕ ಕೆಲಸಗಳು ತಳಮಟ್ಟದಿಂದ ಕಾಣಲು ಸಾಧ್ಯ ಇಲ್ಲ. ಈಗಂತೂ ಎಲ್ಲರೂ ಕಲಿತವರೇ. ಹಾಗಾಗಿ ದಿನಗೂಲಿ ಕಾರ್ಮಿಕರ ಲಭ್ಯತೆ ತುಂಬಾ ಕಷ್ಟವಾಗುತ್ತದೆ. ಆದರೆ ಇದು ಇರುವ ಕಾರ್ಮಿಕರಿಗೆ ಒಳ್ಳೆಯದನ್ನೇ ಬಯಸುತ್ತದೆ ಏಕೆಂದರೆ ಕಾರ್ಮಿಕರ ಲಭ್ಯತೆ ಕಡಿಮೆಯಾದ ಹಾಗೆ ಇದ್ದವರ ಅವಶ್ಯಕತೆ ಹೆಚ್ಚು. ಹಾಗಾಗಿ ಅವರ ಅಗತ್ಯತೆ ಹೆಚ್ಚಿ, ಅವರ ಸಂಬಳ ಹೆಚ್ಚುತ್ತಾ ಹೋಗುತ್ತದೆ.
ಯಾವುದೇ ಕಾರ್ಮಿಕರ ಸಂಬಳ ಈಗೇನೂ ಕಡಿಮೆ ಇಲ್ಲ. ಒಂದು ಕಾಲದಲ್ಲಿ ಕೂಲಿ ಕೆಲಸ ಎಂದರೆ ಬದುಕು ಅತ್ಯಂತ ಕಷ್ಟವಾಗಿತ್ತು, ನಿಕೃಷ್ಟವಾಗಿಯೂ ಇತ್ತು. ಆದರೆ ಇಂದು ಕೂಲಿ ಕೆಲಸದವನಿಗೆ ಸರಕಾರದಿಂದ ಹಲವಾರು ಸೌಲಭ್ಯಗಳು ಸಿಗುವುದರ ಜೊತೆಗೆ ಅವನು ಉತ್ತಮವಾದ ಬದುಕನ್ನು ನಡೆಸಲು ಸಾಧ್ಯವಾಗಿದೆ.
ದಿನಗೂಲಿ ನೌಕರನೊಬ್ಬ ಹಗಲಲ್ಲಿ ದುಡಿದು ತುಂಬಾ ಸುಸ್ತಾಗಿ ಸಂಜೆ ಬಂದು ಮಲಗಿದರೆ ಒಳ್ಳೆ ನಿದ್ದೆ ಬರುತ್ತದೆ. ಏನೇ ತಿಂದರೂ ಕರಗುತ್ತದೆ. ಹಸಿವಿನ ಅನುಭವ ಆಗುತ್ತದೆ. ಹೊಟ್ಟೆ ಭಾಗ ಬೆಳೆಯಲು ಸಾಧ್ಯವಿಲ್ಲ. ಹೊಟ್ಟೆ ಕರಗಿಸಲು ಅವನ ಕೆಲಸವೇ ಎಕ್ಸರ್ಸೈಜ್ ಆಗುತ್ತದೆಯೇ ಹೊರತು ಕಿಲೋಮೀಟರ್ ಗಟ್ಟಲೆ ವಾಕಿಂಗ್ ಹೋಗಬೇಕೆಂಬ ಚಿಂತೆ ಇಲ್ಲ. ಆಹಾರ, ನಿದ್ದೆ, ದಣಿವು ಚೆನ್ನಾಗಿ ಆದವ ಬದುಕಲ್ಲಿ ಆರೋಗ್ಯವಂತ ಮತ್ತು ಸದಾ ಸುಖಿ. ಆ ಜೀವನವೇ ಉತ್ತಮ. ಇದೇ ಕಾರ್ಮಿಕರ ಬದುಕು.
ಕಾರ್ಮಿಕರು ಕೇವಲ ಕಟ್ಟಡ ಕಾರ್ಮಿಕರೇ ಆಗಬೇಕೆಂದು ಇಲ್ಲ, ಪ್ರತಿನಿತ್ಯ ಬಿಸಿಲಿನಲ್ಲಿ, ನೆರಳಿನಲ್ಲಿ, ಕಷ್ಟದ ಪರಿಸ್ಥಿತಿಯಲ್ಲಿ ಕಡಿಮೆ ಸಂಬಳಕ್ಕೆ , ದಿನಾ ಕೆಲಸ ಮಾಡಿ ಬದುಕು ಸಾಗಿಸುವ ಮನುಷ್ಯ. ಅದರಲ್ಲಿ ತನ್ನ ಬದುಕಲ್ಲಿ ಸಂತಸ ಕಾಣುವ ಶ್ರಮಜೀವಿ. ಎತ್ತರದ ಟವರ್ ನಿರ್ಮಾಣ, ವಿವಿಧ ಕಾರ್ಖಾನೆಗಳಲ್ಲಿ ಕೆಲಸ, ಸಾವಿರ ಮಹಡಿ ಎತ್ತರದ ಕಟ್ಟಡಗಳು, ವಿವಿಧ ಉತ್ಪನ್ನಗಳ ತಯಾರಕ ಕಂಪನಿಗಳ ಕೆಲಸಗಾರರು, ರಸ್ತೆಯ ಡಾಂಬರೀಕರಣ ಕೆಲಸ ಮಾಡುವವರು, ಪೌರ ಕಾರ್ಮಿಕರು, ಆಟೋ ರಿಕ್ಷಾ ಟೆಂಪೋ, ಬಸ್ ಚಾಲಕರು, ಟ್ರೈಲರ್ ಗಳು, ಸಣ್ಣ ಸಣ್ಣ ಅಂಗಡಿಗಳಲ್ಲಿ ದುಡಿಯುವ ವರ್ಗದ ಜನರು, ಬೀಡಿ ಕಾರ್ಮಿಕರು, ಗೇರು ಸ್ವಚ್ಚಗೊಳಿಸುವ ಕಾರ್ಮಿಕರು, ಬಟ್ಟಮಿಲ್ ಗಳಲ್ಲಿ ದುಡಿಯುವ ನೌಕರರು, ಮನೆ ಕೆಲಸ ಮಾಡುವವರು,ಎಸ್ಟೇಟ್, ತೋಟಗಳಲ್ಲಿ ನಿತ್ಯ ಕೆಲಸ ಮಾಡುವವರು, ಸಮುದ್ರದ ಬದಿಯಲ್ಲಿ ರಕ್ಷಣಾ ಕೆಲಸ ಮಾಡುವ ಕಾರ್ಮಿಕರು…ಅಬ್ಬಾ ಪಟ್ಟಿ ಮಾಡುತ್ತಾ ಹೋದರೆ ಅದೆಷ್ಟು ವಿವಿಧ ಕಾರ್ಮಿಕರ ಪಟ್ಟಿ ನಮಗೆ ಸಿಗುತ್ತದೆ! ನಿಜಕ್ಕೂ ತಳ ಮಟ್ಟದ ಕೆಲಸ ಮಾಡುವ ಕಾರ್ಮಿಕನ ಅಗತ್ಯ ಸಮಾಜಕ್ಕೆ ತುಂಬಾ ಇದೆ. ಕಾರ್ಮಿಕರು ಎಂದರೆ ರೈಲಿನ ಪಟ್ಟಿಗಳ ಹಾಗೆ. ತಮ್ಮನ್ನು ತಾವು ಎಲ್ಲಾ ಭಾರಗಳಿಗೆ ಮೈಯೊಡ್ಡಿಕೊಂಡು ಕೆಲಸ ಮಾಡುವವರು.
ಕಾರ್ಮಿಕರು ಇದೀಗ ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಮಂತ್ರವನ್ನು ಕಲಿತಿದ್ದಾರೆ. ತಮ್ಮದೇ ಸಂಘಗಳನ್ನು ಕಟ್ಟಿಕೊಂಡಿದ್ದಾರೆ. ಅವರಿಗೂ ಅಟಲ್ ಪೆನ್ಶನ್ ಯೋಜನೆಯಲ್ಲಿ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಗಳಲ್ಲಿ ಪ್ರತಿ ತಿಂಗಳೂ ಹಣ ತೊಡಗಿಸಿದರೆ ಮುಂದೆ ಪೆನ್ಶನ್ ಪಡೆಯುವ ಅವಕಾಶವನ್ನು ಸರಕಾರ ಮಾಡಿ ಕೊಟ್ಟಿದೆ. ಹಾಗೆಯೇ ಜಾತಿ ಆದಾಯ ಪ್ರಮಾಣ ಪತ್ರವನ್ನು ಪಡೆದು ಅದರ ಮೂಲಕ ಅವರ ಮಕ್ಕಳ ನೋಂದಾವಣಿ ಆನ್ಲೈನ್ ನಲ್ಲಿ ಮಾಡಿದರೆ ಮಕ್ಕಳಿಗೆ ವಿದ್ಯಾರ್ಥಿ ವೇತನ ಸಿಗುತ್ತದೆ. ಕಲಿಕೆಯಲ್ಲಿ ಉತ್ತಮ ಸಾಧನೆ ತೋರಿದರೆ ಸ್ಕಾಲರ್ಶಿಪ್ ದೊರೆಯುತ್ತದೆ. ಹಲವಾರು ಗಣ್ಯರು ಶಾಲೆಗಳಿಗೆ ಭೇಟಿ ನೀಡಿ ಕಾರ್ಮಿಕರ ಮಕ್ಕಳಿಗೆ ಪುಸ್ತಕ, ಪೆನ್ನು ದಾನ ನೀಡುತ್ತಾರೆ. ಸರಕಾರ ಮನೆ ಇಲ್ಲದ ಕಾರ್ಮಿಕರಿಗೆ ಪ್ರಧಾನಮಂತ್ರಿ ಆವಾಸ ಯೋಜನೆ, ಬಸವ ವಸತಿ ಯೋಜನೆ ಮುಂತಾದ ಇನ್ನೂ ಹಲವಾರು ಯೋಜನೆಗಳ ಮೂಲಕ ಮನೆ, ದನದ ಕೊಟ್ಟಿಗೆ, ಶೌಚಾಲಯ ನಿರ್ಮಾಣಕ್ಕೆ ಆರ್ಥಿಕ ನೆರವು ಸಿಗುತ್ತದೆ. ಸರಕಾರಿ ಶಾಲೆಯಲ್ಲಿ ಉಚಿತ ಶಿಕ್ಷಣದ ಜೊತೆಗೆ ಉಚಿತ ಪಠ್ಯ ಪುಸ್ತಕ, ಉಚಿತ ಸಮವಸ್ತ್ರ, ಉಚಿತ ಮಧ್ಯಾನದ ಊಟ, ವಾರಕ್ಕೆರಡು ದಿನ ಮೊಟ್ಟೆ ಅಥವಾ ಚಿಕ್ಕಿ, ಉಚಿತವಾಗಿ ಬೆಳಗ್ಗೆ ಬಿಸಿ ಬಿಸಿ ಹಾಲು, ಇದರ ಜೊತೆಗೆ ವಿವಿಧ ಸಂಘ ಸಂಸ್ಥೆಗಳ ಸಹಕಾರದ ಜೊತೆಗೆ ಆಗಾಗ ಉಚಿತ ಮಾಹಿತಿ, ತರಬೇತಿ, ಸ್ಪೋಕನ್ ಇಂಗ್ಲಿಷ್ ಕಾರ್ಯಕ್ರಮಗಳು, ಇವುಗಳ ಜೊತೆಗೆ ಸರಕಾರದ ಇತರ ಇಲಾಖೆಗಳ ಮಾಹಿತಿ, ಕೌನ್ಸೆಲಿಂಗ್, ಕೆಲವು ಶಾಲೆಗಳಲ್ಲಿ ಕ್ರಾಫ್ಟ್ ಮತ್ತು ಬಟ್ಟೆ ಹೊಲಿಯುವುದು, ತೋಟಗಾರಿಕೆ, ಡ್ರಾಯಿಂಗ್ ತರಬೇತಿ, ಆಟೋಟ, ನಾಟಕ ಹೀಗೆ ಹತ್ತು ಹಲವು ಆಯಾಮಗಳ ಕಲಿಕೆಗೂ ಅವಕಾಶ ಇದೆ.
ಅಲ್ಲದೆ ಕಲಿಯುವ ವಿದ್ಯಾರ್ಥಿಗಳಿಗೆ ಎಲ್ಲಾ ಬ್ಯಾಂಕುಗಳು ಶೈಕ್ಷಣಿಕ ಸಾಲ ಕೊಡುತ್ತವೆ. ಸಣ್ಣ ಮನೆ ಕಟ್ಟುವವರಿಗೆ ಸಾಲ ಸೌಲಭ್ಯ ಕಡಿಮೆ ಬಡ್ಡಿ ದರದಲ್ಲಿ ಸಿಗುತ್ತದೆ. ಅರವತ್ತು ವರ್ಷ ದಾಟಿದ ಹಿರಿಯ ನಾಗರಿಕರಿಗೆ ವೃದ್ದಾಪ್ಯ ವೇತನ, ವಿಧವೆಯರಿಗೆ ವಿಧವಾ ವೇತನವೂ ಸರಕಾರದಿಂದ ಲಭ್ಯ ಇದೆ. ಕಾರ್ಮಿಕರು ವರ್ಷಕ್ಕೆ ಹದಿಮೂರು ರೂಪಾಯಿ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಕಟ್ಟುವ ಮೂಲಕ ತಮ್ಮ ಜೀವದ ಭದ್ರತೆಗಾಗಿ ಅಲ್ಲದೆ ಅಭಾ ಕಾರ್ಡ್ ಮಾಡುವ ಮೂಲಕ ಆಸ್ಪತ್ರೆ ಸೌಲಭ್ಯಗಳನ್ನು ಸರಕಾರ ಒದಗಿಸಿ ಕೊಡುತ್ತದೆ. ಸರಕಾರ ಹಾಗೂ ಸರಕಾರೇತರ ಸಂಘ ಸಂಸ್ಥೆಗಳು ನೀಡುವ ಎಲ್ಲಾ ಸಹಕಾರ ಹಾಗೂ ಸೌಲಭ್ಯಗಳನ್ನು ತಿಳಿದುಕೊಂಡು ಕಾರ್ಮಿಕರು ಅವುಗಳನ್ನು ಪಡೆದುಕೊಂಡು ತಮ್ಮ ಬದುಕನ್ನು ಉತ್ತಮವಾಗಿ ಕಟ್ಟಿಕೊಳ್ಳಬೇಕು ಅಷ್ಟೇ. ಕಾರ್ಮಿಕ ಸಂಘಗಳು ಅವರಿಗೆ ಬೇಕಾದ ಸಮಾನತೆಗೆ ಮತ್ತು ಸೌಲಭ್ಯಗಳಿಗೆ ಹೋರಾಟವನ್ನೂ ಮಾಡುತ್ತವೆ. ಒಟ್ಟಾರೆ ಇಂದು ಕಾರ್ಮಿಕರ ಬದುಕು ಹಿಂದಿನಂತೆ ಇಲ್ಲ, ಆದರೂ ಹಲವರ ಕಷ್ಟದ ಹಾಗೂ ಡೇಂಜರ್ ಎನ್ನುವ ಕೆಲಸಗಳು ಇದ್ದೇ ಇವೆ.
ದುಡಿಯುವ ಕೈಗಳಿಗೆ ಬಡತನವಿಲ್ಲ ಎಂಬ ಮಾತಿದೆ. ಅಂತೆಯೇ ದುಡಿತವನ್ನೆ ನಂಬಿ ಅವರವರ ಬದುಕು ಕಟ್ಟಿಕೊಳ್ಳುವವರು ಅವರವರೇ. ಕಾರ್ಮಿಕರ ಬದುಕು ಕೂಡಾ ಅವರೇ ಕಟ್ಟಿಕೊಂಡದ್ದು. ಈ ಕೆಲಸಕ್ಕಾಗಿ ಊರು, ಜಿಲ್ಲೆ, ರಾಜ್ಯ, ದೇಶ ಬಿಟ್ಟು ಬಂದವರೂ ಇರುತ್ತಾರೆ. ಎಲ್ಲಾ ಕಷ್ಟಪಟ್ಟು ಬದುಕುವ ಕಾರ್ಮಿಕರ ಬದುಕೂ ಕೂಡಾ ಸುಖವಾಗಿರಲಿ ಎಂದು ಆಶಿಸೋಣ. ನೀವೆಂತೀರಿ?
————————
ಹನಿಬಿಂದು
ಹೆಸರು- ಪ್ರೇಮಾ ಆರ್ ಶೆಟ್ಟಿ ಕಾವ್ಯನಾಮ- ಹನಿ ಬಿಂದುನೂರಕ್ಕೂ ಅಧಿಕ ರಾಷ್ಟ್ರ, ರಾಜ್ಯ, ಅಂತರರಾಜ್ಯ, ಜಿಲ್ಲಾ ಮಟ್ಟದ ಕವಿಗೋಷ್ಠಿಗಳಲ್ಲಿ ಅಧ್ಯಕ್ಷರಾಗಿ, ಕವಿಯಾಗಿ, ಭಾಗವಹಿಸಿದ ಅನುಭವ.ವಿದ್ಯಾರ್ಹತೆ – ಕನ್ನಡ ಮತ್ತು ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ಬಿಎಡ್.ವೃತ್ತಿ – ಪದವೀಧರ ಆಂಗ್ಲ ಭಾಷಾ ಶಿಕ್ಷಕರು ಪ್ರವೃತ್ತಿ – ಫ್ಯಾಷನ್ ಡಿಸೈನಿಂಗ್, ಲೇಖಕಿ, ಕವಯತ್ರಿ, (ಕನ್ನಡ, ತುಳು, ಇಂಗ್ಲಿಷ್ ವಿಷಯಗಳಲ್ಲಿ) ಅಂಕಣಗಾರ್ತಿ (ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ) , ಚಿಂತಕಿ,ಸ್ಪೋಕನ್ ಇಂಗ್ಲಿಷ್ ಬೋಧಕಿ. ಮೋಟಿವೇಟರ್,, ಲಿಟರೇಚರ್ ಆಫ್ ಹನಿಬಿಂದು ಇದು ಇವರ ಬ್ಲಾಗ್. , ತುಳು ಕಲ್ಪುಗ ಚಾನೆಲ್ ನ ಫೇಸ್ಬುಕ್, ಇನ್ಸ್ಟಾ ಗ್ರಾಂ, ಯೂ ಟ್ಯೂಬ್ ನಿರ್ವಾಹಕಿ. ಕಲಿಕಾರ್ಥಿ, ವಿದ್ಯಾರ್ಥಿ ಪ್ರೇರಕಿ.ಪ್ರಕಟಿತ ಕೃತಿ – ಭಾವ ಜೀವದ ಯಾನ (ಕವನ ಸಂಕಲನ)ಪ್ರತಿಲಿಪಿಯಲ್ಲಿ ಬರಹಗಾರ್ತಿ – ಮೂವತ್ತಾರು ಸಾವಿರಕ್ಕೂ ಹೆಚ್ಚು ಜನರಿಂದ ಓದಲ್ಪಟ್ಟಿರುವರು.