ಅಂಕಣ ಸಂಗಾತಿ

ಸುತ್ತ-ಮುತ್ತ

ಸುಜಾತಾ ರವೀಶ್

ನಮ್ಮ ಸಂಪ್ರದಾಯ ಆಚರಣೆಗಳನ್ನು ಉಳಿಸಿಕೊಳ್ಳುವುದು ಹೇಗೆ?

ನಮಗೇ ತಿಳಿದಂತೆ ಭಾರತೀಯ ಸಂಸ್ಕೃತಿ ಪುರಾತನವಾದುದು ಶ್ರೇಷ್ಠವಾದುದು. ಸನಾತನ ವೈದಿಕ ಆಚರಣೆಗಳು ಸಂಪ್ರದಾಯಗಳು ಶತಶತಮಾನಗಳಿಂದ ಪೀಳಿಗೆಯಿಂದ ಪೀಳಿಗೆಗೆ ಹರಿದು ಬಂದದ್ದು ಹೇಗೆ ಎಂದು ಯೋಚಿಸಿದಾಗ ನಮಗೆ ಮುಖ್ಯವಾಗಿ ಕಂಡುಬರುವುದು ತಲೆಮಾರಿನಿಂದ ತಲೆಮಾರಿಗೆ ಉಳಿಸಿಕೊಂಡು ಬಂದ ಅಭ್ಯಾಸಗಳು ಕಾಗದ ಅಥವಾ ಇನ್ಯಾವುದೇ ರೀತಿಯಲ್ಲಿ ಸಂಗ್ರಹ ಮಾಡಲಾಗದಿದ್ದಾಗ ಮೌಖಿಕವಾಗಿಯೇ ಎಲ್ಲವೂ ಅಂದಿನಿಂದ ಇಂದಿಗೆ ರೂಢಿಗತವಾಗಿ ಬಂದಿರುವುದು ವೇದ್ಯವಾಗುತ್ತದೆ. ನಮ್ಮ ಸನಾತನತೆಯನ್ನು ಆಚರಿಸುತ್ತಾ ಮಕ್ಕಳಿಗೆ ದಾಟಿಸುವುದು ಎಷ್ಟು ಮಹತ್ವಪೂರ್ಣ ಮಹತ್ತರ ಕಾರ್ಯವೆಂದು ಅರಿವಾಗುತ್ತದೆ. ಎಲ್ಲವನ್ನೂ ಓದಿ ಅಥವಾ ತಿಳಿದು ಮಾಡುವುದಕ್ಕೆ ಸಾಧ್ಯವಿಲ್ಲ. ನೋಡಿ ಆಚರಿಸುವುದು ಅತ್ಯಂತ ಮುಖ್ಯ. ಈ ದಿಶೆಯಲ್ಲಿ ನಮ್ಮ ನಾರಿಮಣಿಗಳ ಸಹಯೋಗ ಕಾಣಿಕೆಯೂ ಕಡಿಮೆಯದ್ದಲ್ಲ. “ಮನೆಯೇ ಮೊದಲ ಪಾಠಶಾಲೆ ” “ತಾಯಿಯೇ ಮೊದಲ ದೇವರು” ಎನ್ನುವ ಹಾಗೆ ಎಂಟು ವರ್ಷದಲ್ಲಿ ಕಲಿತದ್ದು ಎಂಬತ್ತರತನಕಾ ಅಲ್ಲವೇ? ಒಂದು ಹಬ್ಬ ಹರಿದಿನದ ಆಚರಣೆಯಾಗಲಿ ದಿನನಿತ್ಯದ ಕೆಲ ಸಂಪ್ರದಾಯಗಳ ತಿಳಿವಳಿಕೆಯಾಗಲಿ ಕಡೆಗೆ ಆಯಾ ಪಂಗಡಗಳಿಗೆ ವಿಶೇಷ ಎನಿಸಿದ ರೀತಿಯ ಉಡುಗೆ ತೊಡಿಗೆ ಅಡಿಗೆಗಳ ತಯಾರಿಕೆಗಾಗಲೀ ತಲೆಮಾರಿನಿಂದ ತಲೆಮಾರಿಗೆ ಕಲಿಸಿಕೊಟ್ಟಿದ್ದೇ ಅಲ್ಲವೇ?

ನಾವು ಚಿಕ್ಕವರಿದ್ದಾಗ ಸಂಜೆಯ ಹೊತ್ತು ಶ್ಲೋಕ ಸಂವತ್ಸರ ತಿಥಿ ವಾರ ನಕ್ಷತ್ರಗಳ ಬಾಯಿಪಾಠ ಬಾಯಿಲೆಕ್ಕ ಎಲ್ಲವನ್ನೂ ಹೇಳಿಸುತ್ತಿದ್ದರು. ಆಗ ಕಲಿತದ್ದು ಈಗಲೂ ಬಾಯಲ್ಲಿದೆ. ಇವೆಲ್ಲ ವಿಶೇಷ ಶ್ರಮವಿರದೆ ತಲೆಯೊಳಗೆ ಹೋಗುವ ವಿಚಾರಗಳು. ಹಾಗೆಯೇ ಹಬ್ಬ ವಿಶೇಷ ದಿನಗಳಲ್ಲಿ ಏನು ಮಾಡುತ್ತಾರೆ ಇದೆಲ್ಲದರ ಬಗ್ಗೆಯೂ ನೋಡಿಯೇ ಕಲಿತಿರುವುದು . ಮನೆಯಲ್ಲಿ ಅಜ್ಜಿ ತಾತರಂತಹ ಹಿರಿಯರು ಇರುತ್ತಿದ್ದರು. ಅವರಿಂದ ಪುರಾಣ ಪುಣ್ಯ ಕಥೆಗಳನ್ನು ಕೇಳಿ ಎಷ್ಟೋ ಪ್ರಸಂಗಗಳು ನೆನಪಿನ ಬುತ್ತಿಯಲ್ಲಿ ಉಳಿದಿವೆ. ಎಷ್ಟೇ ಓದಿದರೂ ಕೇಳಿದಾಗ ಮನದ ಭಿತ್ತಿಯಲ್ಲಿ ಕೆತ್ತಿ ಹೋಗಿರುವುದು ಇಲ್ಲಿ ಗಮನಿಸಲೇಬೇಕಾದ ಸಂಗತಿ . ಆದರೆ ಅಷ್ಟು ವರ್ಷಗಳಿಂದ ನಡೆದು ಬಂದ ಕೆಲವೊಂದು ಸಂಗತಿಗಳು ಮೂಲ ಅರ್ಥ ಕಳೆದು ಮೂಢನಂಬಿಕೆಗಳಾಗಿದ್ದರೂ ಆಗಿರಬಹುದು. ಕಾಲಧರ್ಮಕ್ಕನುಗುಣವಾಗಿ ಅನುಕೂಲ ಸಿಂಧುಗಳೂ ಆಗಿರಬಹುದು. ಆ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ. ಅದಕ್ಕೆ ಕಾಳಿದಾಸ ಹೇಳಿರುವುದು “ಪುರಾಣಮಿತ್ಯೇವ ನ ಸಾಧು ಸರ್ವಂ” ಎಂದು. ಅಂದರೆ ಹಳೆಯದು ಅಂದ ತಕ್ಷಣ ಎಲ್ಲವೂ ಒಳ್ಳೆಯದೇ ಆಗಿರಬೇಕು ಎಂದಲ್ಲ . ಮೌಲಿಕವಾದ ವಿಶಿಷ್ಟವಾದ ಪದ್ಧತಿಗಳನ್ನು ಬಿಡದೆ ಅನೂಚಾನವಾಗಿ ಪಾಲಿಸಿರುವುದು ಇತಿಹಾಸ ತೋರುವ ಸತ್ಯ .

ಆದರೆ ಇತ್ತೀಚಿನ ಒಂದು ಶತಮಾನದಿಂದ ಆಚೆಗೆ ಅನುಕರಣೆ ಅನುಸರಿಸುವಿಕೆ ಕಡಿಮೆಯಾಗುತ್ತಿದ್ದು ಉಪೇಕ್ಷೆ ಟೀಕೆ ಮಾಡುವುದೇ ಫ್ಯಾಷನ್ ಆಧುನಿಕತೆ ಎಂದಾಗುತ್ತಿರುವುದು ಸಂಸ್ಕೃತಿಯು ಮರೆಯಾಗುವ ಕಾಲಘಟ್ಟದಲ್ಲಿ ನಿಂತಂತಾಗಿದೆ. ವಿದ್ಯೆ ಶಿಕ್ಷಣ ಎಂದರೆ ಸಂಪ್ರದಾಯದ ಅವಹೇಳನ ಎನ್ನುವಂತಾಗಿರುವುದು ವಿಪರ್ಯಾಸ . ಈ ದಿಶೆಯಲ್ಲಿ ಮಹಿಳೆಯರ ನಡವಳಿಕೆಯೂ ಇದೆ. ಬದಲಾಗುತ್ತಿರುವ ಜೀವನ ಶೈಲಿಯಲ್ಲಿ ಸುಲಭಕ್ಕೆ ಜೋತು ಬೀಳುವ ಐಷಾರಾಮ ಬಯಸುವ ಮನಸ್ಸುಗಳು ಪಾಲಿಸಲು ಕಷ್ಟವಾದದ್ದನ್ನೆಲ್ಲಾ ಬಿಡುತ್ತಾ ಹೋಗುತ್ತಿರುವುದು ಒಂದು ಕಾರಣ . ಈಗಲಾದರೂ ನಾವು ಎಚ್ಚೆತ್ತುಕೊಳ್ಳದಿದ್ದರೆ ಭವ್ಯ ಪರಂಪರೆ ಎನ್ನುವುದು ಬರೀ ಪುಸ್ತಕದ ಸಾಲುಗಳಲ್ಲಿ ಉಳಿಯಬಹುದು.

ಮಕ್ಕಳು ನೋಡಿ ಕಲಿಯುತ್ತಾರೆ. ಹಾಗಾಗಿ ನಾವು ಹೇಗಿರುತ್ತೇವೆ ನಮ್ಮ ಮಕ್ಕಳು ಹಾಗೆ ಬೆಳೆಯುತ್ತಾರೆ . ನಾವು ಇಷ್ಟಪಟ್ಟು ಸಂಪ್ರದಾಯ ಪದ್ಧತಿಗಳನ್ನು ಪಾಲಿಸುತ್ತಾ ಮಕ್ಕಳಿಗೂ ಅದರ ಬಗ್ಗೆ ಅರಿವು ಮೂಡಿಸಬೇಕು. ಯಾವುದೇ ದೇಶ ಸಂಪದ್ಭರಿತವಾಗುವುದು ಐಶ್ವರ್ಯ ಇನ್ನಿತರ ಸಂಪನ್ಮೂಲಗಳಿಂದ ಅಲ್ಲ . ದೇಶದ ಸಂಸ್ಕೃತಿಯ ಅನಾವರಣ ಆಚರಣೆಯಿಂದ. ಅಂತಹ ವೈಭವವನ್ನು ಉಳಿಸಿ ಬೆಳೆಸಿಕೊಳ್ಳುವುದು ದೇಶದ ಪ್ರಜೆಗಳಾದ ನಾವು ಅಮ್ಮಂದಿರದು ತಾನೆ ? ಬನ್ನಿ ಅದಕ್ಕಾಗಿ ಶ್ರಮಿಸೋಣ .


                    ಸುಜಾತಾ ರವೀಶ್


ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ.  “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ 
ಬಯಕೆ ಲೇಖಕಿಯವರದು

Leave a Reply

Back To Top