ವಿಮಲಾರುಣ ಪಡ್ದoಬೈಲು ಅವರ ಹೊಸ ಕಥೆ-ಬಾಯಾರಿದಾಗ

ಕಥಾಸಂಗಾತಿ

ವಿಮಲಾರುಣ ಪಡ್ದoಬೈಲು

ಬಾಯಾರಿದಾಗ

ಉರಿಬಿಸಿಲಿಗೆ ತಂಪೆಸಗುವ ವರುಣನ ದುಂಡನೆಯ ಹನಿಗಳು ಧರೆಯ ಚುಂಬಿಸಿ ಮಣ್ಣಿನೆದೆಗೆ ನೀರ ಹನಿ ತಾಕಿ ಪರಿಮಳ ಚೆಲ್ಲುತ್ತಿತ್ತು. ಮೊದಲ ಮಳೆಗೆ ತೋಯ್ದು ಸುವಾಸನೆಯನ್ನು ಆಸ್ವಾದಿಸಿ ಸಡಗರದಿಂದ ಮಳೆಯನ್ನು ಸ್ವಾಗತಿಸುವ ಭಾಗ್ಯ ಇಂದು ನೀರವ ಮೌನ ತಾಳಿ ಕಂಗಳು ನೀರಿನ ವರತೆಯಾಗಿದೆ, ಕಣ್ಣೀರು ಬತ್ತಿಹೋಗಿದೆ ಎಂದು ತಿಳಿದಿದ್ದ ಕಣ್ಣಾಲಿಗಳಲ್ಲಿ ಅಶ್ರುಧಾರೆಯಾದರು, ಯಾಕೆ..? ಏನು..? ಎಂದು ಪ್ರಶ್ನಿಸುವ ಜೀವಗಳು ಅಲ್ಲಿಲ್ಲ. ಇಬ್ಬರು ಮಕ್ಕಳು ಪತಿ ಎಲ್ಲಾ ಇದ್ದರೂ ಅವರ್ಯಾರು ದಕ್ಕದೆ ಶೂನ್ಯ ಆವರಿಸಿದೆ. ಗಂಡ ಗೋಪಾಲ ಸಾರಾಯಿ ಕುಡಿದರೆ ಭೂಮಿ ಬಾಯಿ ಬಿಟ್ಟರೂ ಆಗಸ ನೆಲಕ್ಕುರುಳಿದರೂ ಯಾವುದರ ಅರಿವಿಲ್ಲದೆ ನಿದಿರೆಯ ದಾಸನಾಗಿದ್ದಾನೆ. ಉಳಿದವರು ಟಿ.ವಿ ಎಂಬ ಮಾಯಾ ಪೆಟ್ಟಿಗೆಯೊಳಗೆ ಬಂಧಿಯಾಗಿದ್ದಾರೆ. ಭಾಗ್ಯಳ ಕಣ್ಣೀರಿಗೆ ಬೆಲೆ ಇಲ್ಲ. ಅರ್ಥವೂ ಇಲ್ಲ. ಸ್ಪಂದಿಸುವ ಮನಗಳು ಮೊದಲೇ ಇಲ್ಲದಂತಾಗಿದೆ. ಮನೆಯಲ್ಲಾದ ಘಟನೆ ಭಾಗ್ಯಳನ್ನು ಮೌನಕ್ಕೆ ತಳ್ಳಿ ಕಣ್ಣೀರಧಾರೆಯ ಮಿಡಿಸುತ್ತಿದ್ದಳು. ನೆಲೆಕಾಣದ ಮನವ ನೆಲೆಸುವ ಪ್ರಯತ್ನದಲ್ಲಿ ವಿಫಲಗೊಂಡು ನೋವನ್ನು ವರವಾಗಿಸಿಕೊಂಡಿದ್ದಳು.

ಭಾಗ್ಯ ಸಾಮಾನ್ಯ ಹೆಣ್ಣಲ್ಲ. ಗಂಡೆದೆಯ ಹೆಣ್ಣೆಂದು ಹೇಳಿದರೂ ತಪ್ಪಲ್ಲ. ತನ್ನ ಹದಿನೆಂಟರ ಹರೆಯದಲ್ಲಿ ಮಾಂಗಲ್ಯ ಕೊರಳ ಅಲಂಕರಿಸಿ ಮದುವೆ ಎಂಬ ಮೂರು ಗಂಟಿಗೆ ನಲ್ವತ್ತು ವರ್ಷದ ಗೋಪಾಲನಿಗೆ ಸತಿಯಾಗಿ ಶರಣಾಗಿದ್ದಳು. ನಾವೂರಿನ ಸಣ್ಣದಾದ ಕುಟೀರಕ್ಕೆ ಮೊದಲ ಹೆಜ್ಜೆ ಇಟ್ಟ ಭಾಗ್ಯಳನ್ನು ಬಂಧುಗಳು ಆರತಿ ಬೆಳಗಿ ಬರಮಾಡಿಕೊಳ್ಳುತ್ತಾರೆ. ಅವಳ ರೂಪವನ್ನು ವರ್ಣಿಸುತ್ತಾ ವಕ್ರತೆಯ ಬಗ್ಗೆ ಟೀಕೆ ಟಿಪ್ಪಣಿಗಳು ಒಬ್ಬರಿಂದ ಒಬ್ಬರ ಬಾಯಿಗೆ ತುತ್ತಾಯ್ತು. ಉಬ್ಬು ಹಲ್ಲಿನ ಭಾಗ್ಯ ನೋಡಲು ಕುರೂಪಿಯೇ. ಸೆಳೆಯುವಂತಹ ಚೆಲುವಿಲ್ಲದಿದ್ದರೂ ದುಂಡಾದ ದಷ್ಟ ಪುಷ್ಟವಾದ ದೇಹದ ಒಡತಿ. ಮಾತಿನ ಮಲ್ಲಿ. ಹಾವಿನ ವೇಗದ ನಡಿಗೆ. ಕೆಲಸದಲ್ಲಿ ಮುಂಚೂಣಿಯಲ್ಲಿದ್ದಳು. ಇದರಿಂದ ಎಲ್ಲರೊಂದಿಗು ಬಹು ಬೇಗ ಆತ್ಮೀಯಳಾದಳು. ಗೋಪಾಲನು ಭಾಗ್ಯಳನ್ನು ಬಹಳ ಇಷ್ಟಪಡುತ್ತಿದ್ದ. ಮದುವೆಯ ರಸಮಯ ಕ್ಷಣಗಳನ್ನು ಅನುಭವಿಸಿದರು. ಮಧುರ ಭಾವಗಳ ತೊಳಲಾಟ ಮಧುರ ಸುಖವನ್ನು ಕೊಟ್ಟಿತು. ಭಾಗ್ಯಳಿಗಿಂತ ವಯಸ್ಸಿನಲ್ಲಿ ಹಿರಿಯವನಾದರೂ ಅವನ ಸುಂದರ ದೇಹ ವಯಸ್ಸನ್ನು ಮರೆಮಾಚಿತು. ಭಾಗ್ಯಪ್ರತಿದಿನವನ್ನು ನವಿರಾದ ಪ್ರೀತಿಯೊಂದಿಗೆ ಸ್ವಾಗತಿಸುತ್ತಿದ್ದಳು. ಆದರೆ ಆ ಮಧುರ ಕಣಗಳು ಹೆಚ್ಚು ದಿನ ಉಳಿಯಲಿಲ್ಲ. ಸಣ್ಣದಾದ ಕುಟೀರದಲ್ಲಿ ಮಹಾರಾಣಿಯಂತೆ ಇದ್ದ ಭಾಗ್ಯನಿಗೆ ದಿನಕಳೆದ ಹಾಗೆ ಉಣ್ಣುವ ಗಂಜಿಗೂ ಕುತ್ತಾಯಿತು. ಹೀಗೆ ಇದ್ದರೆ ಸಾವೇ ಸಮೀಪಕ್ಕೆ ಬರಬಹುದೆಂದು ಹಪಹಪಿಸಿ ಕೂಲಿ ಕೆಲಸಕ್ಕೆ ಹೊರಡಲು ಸಿದ್ಧಳಾದಳು.

ಗೋಪಾಲ ಎಂದಿನಂತೆ ತನ್ನ ಹಳೆಯ ಚಾಳಿಯನ್ನು ಪ್ರಾರಂಭಿಸಿದ. ದುಡಿದ ಹಣವನ್ನು ಸಾರಾಯಿಗೆ ಮೀಸಲಿಡುತ್ತಿದ್ದ. ಭಾಗ್ಯ ಗಂಡನ ವರ್ತನೆಯಿಂದ ಹತಾಶಳಾಗಿ, ತನ್ನ ದುಡಿತದಿಂದ ಸಂಸಾರ ರಥವನ್ನು ಎಳೆದೊಯ್ದಳು.
ಹಲವಾರು ಏಳು ಬೀಳುಗಳು ಅವಳ ಬದುಕಲ್ಲಿ ಘಟಿಸಿದವು. ಕುಡಿತಕ್ಕಾಗಿ ಸಾಲ ಮಾಡುತ್ತಿದ್ದ ಗೋಪಾಲ ಸಾಲದ ಹೊರೆಯನ್ನು ತನ್ನ ಬಗಲಲ್ಲಿ ಇರಿಸಿಕೊಂಡಿದ್ದ. ಮನೆಗೆ ಬಂದು ಭಾಗ್ಯಳನ್ನು ಪೀಡಿಸುವವರ ಸಂಖ್ಯೆಯೂ ಹೆಚ್ಚಾಯಿತು. ಮನೆಯಲ್ಲಿದ್ದ ಒಂದೊಂದೆ ವಸ್ತುಗಳು ಮಾಯವಾದವು. ಅಷ್ಟೇ ಏಕೆ ಗೋಪಾಲನ ಗೆಳೆಯರು ಕೆಲವರು ನಡತೆ ತಪ್ಪಿದವರೂ ಇದ್ದರು. ಅವರು ಭಾಗ್ಯಳ ಮೇಲೆ ಕಣ್ಣಾಯಿಸುತ್ತಿದ್ದರು. ಅವನು ಸಾಲ ಕೊಡದಿದ್ದರೆ ಏನು?ರಸಭರಿತ ಹಣ್ಣನ್ನು ಸವಿಯಲು ಕೊಟ್ಟರೆ ಸಾಲವೆಲ್ಲಾ ಮನ್ನಾ ಎಂದು ಹೇಳುವವರ ಸಂಖ್ಯೆಗೂ ಕೊರತೆ ಇರಲಿಲ್ಲ.

ಒಂದು ದಿನ ಆ ದೌರ್ಭಾಗ್ಯವು ಭಾಗ್ಯಳ ಬದುಕಲ್ಲಿ ಎದುರಾಯಿತು. ಭಾಗ್ಯಳ ಮನೆಯೆದುರು ಆಟೋ ಬಂದು ನಿಂತಿತು. ಲಗುಬಗನೇ ಭಾಗ್ಯ ಹೊರಗೆ ಬಂದಳು. ಮತ್ತೇರಿದ ಗೋಪಾಲನಿಗೆ ನೆಲದ ಮೇಲೆ ನಿಲ್ಲಲಾಗುತ್ತಿರಲಿಲ್ಲ. ಮನೆಗೆ ಕರೆದುಕೊಂಡು ಬಂದ ವ್ಯಕ್ತಿ ಅಮಲಿನಲ್ಲಿಯೆ ಇದ್ದನು. ಆದರೆ ಗೋಪಾಲನ ಹಾಗೆ ಪ್ರಪಂಚವನ್ನೇ ಮರೆತಿರಲಿಲ್ಲ. ಆಟೋದಿಂದ ಅವನು ಮತ್ತು ಭಾಗ್ಯ ಗೋಪಾಲನನ್ನು ಒಳಗೆ ಕರೆದುಕೊಂಡು ಬಂದರು. ಕ್ಷಣಮಾತ್ರದಲ್ಲಿ ಅಟೋ ಹೊರಟು ಹೋಯ್ತು. ಕತ್ತಲೆಯಾಯಿತು. ಆಟೋದವನು ಹೊರಟೆ ಬಿಟ್ಟ. “ನಾನು ಮನೆಗೆ ಹೋಗುವುದು ಅಸಂಭವದ ಮಾತು. ಈ ದಿನ ನಾನಿಲ್ಲೇ ಉಳಿಯುವೆ ನಿಮ್ಮ ಅಭ್ಯಂತರ ಇಲ್ಲವೆ..?”ಗಂಡನಿಗೆ ಗೋಚರವೆ ಇಲ್ಲ. ಪರಪುರುಷನನ್ನು ಮನೆಯಲ್ಲಿ ಇರಿಸಿಕೊಳ್ಳುವುದು ಅಪರಾಧ ಎಂದು ಮನ ಹಲವು ಸಲ ಹೇಳುತಿತ್ತು. ಆದರೂ ಕತ್ತಲಾಗಿದ್ದರಿಂದ ಬೇರೆ ವಿಧಿ ಇಲ್ಲದೆ ಉಳಿಯಲು ಸಮ್ಮತಿಸಿದಳು. ಕೈಕಾಲು ತೊಳೆದ ಆ ವ್ಯಕ್ತಿ ಊಟ ಬೇಕೆಂದನು. ಅಡುಗೆ ತಯಾರಾಗಿತ್ತು. ಅವನಿಗೆ ಉಣಬಡಿಸಿದಳು. ಅವಳು ಬಡಿಸುವಾಗ ಕೈಯನ್ನು ಸವರಿದನು. ಭಾಗ್ಯ ವಿಚಲಿತಳಾದಳು. ಈ ಕರಾಳ ರಾತ್ರಿ ನನ್ನ ಬದುಕಿಗೆ ಕರಾಳದಿನ ಆಗದಿದ್ದರೆ ಸಾಕು ಎಂದು ಮನದಲ್ಲಿ ದೇವರನ್ನು ಸ್ಮರಿಸಿದಳು. ಅವನ ಕೆಂಗಣ್ಣುಗಳು ಭಾಗ್ಯಳನ್ನು ದಿಟ್ಟಿಸುತ್ತಿದ್ದವು. ಭಾಗ್ಯಳ ನೋಟ ಅಗ್ನಿ ಜ್ವಲಿಸಿದಂತಿತ್ತು. ಅಷ್ಟರಲ್ಲಿ ಅವನು ಪಿಸುಗುಟ್ಟಿದ. ಗೋಪಾಲ ನನ್ನ ಬಳಿ ಐದು ಸಾವಿರ ಸಾಲ ತೆಗೆದುಕೊಂಡಿದ್ದಾನೆ… ಮೌನಿಯಾಗಿ ಭಾಗ್ಯ ಒಳನಡೆದಳು. ಹಾಲುಕರೆಯುವ ಆಕಳಿದ್ದರಿಂದ ಧಾರಾಳವಾಗಿ, ಹಾಲು ದೊರೆಯುತ್ತಿತ್ತು. ಆ ವ್ಯಕ್ತಿಗೆ ಮಲಗುವ ಮೊದಲು ಒಂದು ಗ್ಲಾಸ್ ಹಾಲನ್ನು ನೀಡಿದಳು. ವ್ಯಕ್ತಿ ಹಾಲನ್ನು ಕೊಳ್ಳುವಾಗ ತನ್ನ ಕಾಮುಕ ಕಣ್ಣುಗಳಿಂದ ತದೇಕ ಚಿತ್ತದಿಂದ ಭಾಗ್ಯಳನ್ನು ದಿಟ್ಟಿಸಿದನು. ಭಾಗ್ಯ ಯಾವುದೆ ಭಾವಗಳನ್ನು ವ್ಯಕ್ತ ಪಡಿಸದೆ ನಿರ್ಲಿಪ್ತಳಾಗಿ ನಡೆದಳು. ಅವಳು ಹೋಗುವಾಗ ಕೈಯನ್ನು ಬಲವಾಗಿ ಹಿಡಿದನು. ಒಂದೆಡೆ ಖಾಲಿ ಲೋಟ ಕೆಳಕ್ಕೆ ಉರುಳಿತು. ಅವನ ಕೈಯಿಂದ ಬಿಡಿಸಿಕೊಳ್ಳುವುದಕ್ಕಾಗಿ ಕೊಸರಾಡಿದಳು‌. ಒಂದೈದು ನಿಮಿಷ ಭಾಗ್ಯ ಸಂಕಟ ಅನುಭವಿಸಿದಳು. ಅಷ್ಟರಲ್ಲಿ ಆ ವ್ಯಕ್ತಿ ನಿದ್ರೆಯ ಅಮಲಿನಲ್ಲಿ ಕೆಳಗೆ ಬಿದ್ದ. ಭಾಗ್ಯಳಿಗೆ ತನ್ನ ಉಪಾಯ ಫಲಿಸಿತೆಂದು ಸಂಭ್ರಮಿಸಿದಳು. ನೆಮ್ಮದಿಯಿಂದ ನಿದ್ರೆಗೆ ಅಣಿಯಾದಳು.

ರವಿಕಿರಣ ಧರೆಗೆ ಬೀಳುವ ಮೊದಲೆ ಭಾಗ್ಯ ಎಚ್ಚರಗೊಂಡಳು. ಗೋಪಾಲ ಮತ್ತು ಆ ವ್ಯಕ್ತಿಯನ್ನು ನೋಡಿದಳು. ಗಾಢವಾದ ನಿದ್ರೆಯಲ್ಲಿದ್ದರು. ಭಾಗ್ಯ ಕೆಲಸದಲ್ಲಿ ತಲ್ಲೀನಳಾದಳು. ಕೊಂಚ ಸಮಯದ ಬಳಿಕ ಗೋಪಾಲ ಎದ್ದನು. ಗಿರೀಶ ಇದ್ದುದನ್ನು ನೋಡಿ ಅವಾಕ್ಕಾದನು! ಅವನನ್ನು ಜೋರಾಗಿ ಅಲುಗಿಸಿ ಎಬ್ಬಿಸಿದನು. ಗಿರೀಶ ಮೆಲ್ಲನೆ ಎದ್ದನು. ಭಾಗ್ಯ ಒಳಗಿಂದ ಬಂದಳು. ಬಂದವಳೇ ಹಿಗ್ಗಾಮುಗ್ಗಾ ಆ ವ್ಯಕ್ತಿಗೆ ಬೈದಳು. ಮೌನಿಯಾಗಿದ್ದ ವ್ಯಕ್ತಿ ತನಗೂ ಭಾಗ್ಯಳಿಗೂ ಸಂಬಂಧವಿದೆಯೆಂದು ನುಡಿದನು. ಅವಳೆ ನನ್ನನ್ನು ಮಲಗಲು ಹೇಳಿದ್ದು. ಈಗ ಗೋಪಾಲನಿಗೆ ಮೈಯೆಲ್ಲ ಕೆಂಡದಂತಾಯ್ತು. ಭಾಗ್ಯಳ ಎದೆ ಸೀಳಿದಂತಾಯಿತು. “ಇಲ್ಲ .. ಅವನು ಸುಳ್ಳು ಹೇಳುತ್ತಿದ್ದಾನೆ. ನಿನ್ನೆ ಅವನೇ ನನ್ನ ಮೈಮುಟ್ಟಲು ಬಂದದ್ದು. ನಾನು ಅವನಿಗೆ ನಿದ್ರೆ ಗುಳಿಗೆ ಹಾಕಿ ಹಾಲಲ್ಲಿ ಕೊಟ್ಟದಕ್ಕೆ ನನ್ನ ಶೀಲಕ್ಕೆ ಭಂಗ ಬರಲಿಲ್ಲ. ಗೋಪಾಲ ಭಾಗ್ಯಳ ಮಾತನ್ನು ನಂಬಲಿಲ್ಲ. ಗಂಡ-ಹೆಂಡಿರ ಜಗಳ ತಾರಕಕ್ಕೇರಿತ್ತು. “ಶಾಂತನಾಗು ಗೋಪಾಲ. ನಾನು ಯಾರ ಬಳಿಯೂ ಈ ವಿಚಾರ ಹೇಳುವುದಿಲ್ಲ” ಆ ವ್ಯಕ್ತಿ ಮೆಲ್ಲನೆ ಕಳಚಿದ. ಭಾಗ್ಯಳ ರೋದನ ಗೋಪಾಲನ ಎದೆಗೆ ನಾಟಲಿಲ್ಲ. ಕೊಂಚ ಸಮಯದ ಬಳಿಕ ಗೋಪಾಲ ತನ್ನ ಮತ್ತೊಬ್ಬ ಗೆಳೆಯನಿಗೆ ರಿಂಗಾಯಿಸಿ ಅವನ ವಿಚಾರ ಕೇಳಿದನು. ಅವನು ನಯವಂಚಕನೆಂದು ಗೋಪಾಲನಿಗೆ ಸಾಬೀತಾಯಿತು. ಭಾಗ್ಯಳ ಮಾತಲ್ಲಿ ನಂಬಿಕೆ ಬಲವಾಯಿತು. ಅವಳ ಬಳಿ ಕ್ಷಮೆಯಾಚಿಸಿದ. ಸುನಾಮಿಯಾಗಿ ಇದ್ದ ವಾತಾವರಣ ತಿಳಿಯಾಯಿತು. ಭಾಗ್ಯಳ ಮನದಲ್ಲಿ ಗೋಪಾಲನಲ್ಲಿದ್ದ ಪ್ರೀತಿಯು ಕೊಂಚ ಕಡಿಮೆಯಾಯಿತು. ತನ್ನ ಮಾತನ್ನು ನಂಬಲಿಲ್ಲ ನನ್ನ ಗಂಡ ಎಂದು ಆ ನೋವು ಅವಳನ್ನು ತಿವಿಯುತ್ತಿತ್ತು.

ಕಾಲ ಉರುಳಿದಂತೆ ಎರಡು ಮುದ್ದಾದ ಮಕ್ಕಳ ತಾಯಿಯಾದಳು ಭಾಗ್ಯ. ಈಗ ತಾನು ಹುಟ್ಟಿದ್ದೇ ಕೆಲಸ ಮಾಡುವುದಕ್ಕೆಂದರಿತು ಪುರುಷರಂತೆ ಹಾರೆ, ಪಿಕಾಸ್ ಹಿಡಿದುಕೊಂಡು ಅಡಿಕೆ ಗಿಡ, ರಬ್ಬರ್ ಗಿಡ ನೆಡುವ ಕಾಯಕದಲ್ಲಿ ಭಾಗ್ಯ ತೊಡಗಿದಳು. ಕಂಟ್ರಾಕ್ಟ್ ಆದ ಕಾರಣ ದೇಹ ದಣಿವ ತನಕ ಕೆಲಸದಲ್ಲಿ ನಿರತಳಾಗುತ್ತಿದ್ದಳು. ಇವಳ ಪರಿಶ್ರಮದ ದುಡಿತದಿಂದ ಕಾಲಾನಂತರ ಒಂದು ಮನೆಯನ್ನು ನಿರ್ಮಿಸಿದಳು. ಎರಡು ಗಂಡು ಮಕ್ಕಳನ್ನು ಯಾವುದೇ ತಾರತಮ್ಯವಿಲ್ಲದೆ ಬೆಳೆಸಿದಳು. ಆದರೆ ಮಕ್ಕಳಿಗೆ ರೆಕ್ಕೆ
ಬಲಿತಂತೆ ತಂದೆ-ತಾಯಿಯರ ಮಾತು ಗೌಣವಾಯ್ತು. ಎರಡು ಗಂಡು ಮಕ್ಕಳು ಅಮಲಿಗೆ ಶರಣಾದರು. ತಾಯಿ ಮಕ್ಕಳ ಜಗಳ ತಾರಕಕ್ಕೇರುತ್ತಿತ್ತು. ಅಣ್ಣ- ತಮ್ಮಂದಿರ ಕಚ್ಚಾಟದಲ್ಲಿ ಭಾಗ್ಯ ಬಸವಳಿದಳು. ಮನೆಯಲ್ಲಿ ಎಂಥ ಕಚ್ಚಾಟವಾದರೂ ಸೂರ್ಯ ಉದಯಿಸುವ ಮೊದಲೇ ಎದ್ದು ಭಾಗ್ಯ ಊಟ-ತಿಂಡಿ ಎಲ್ಲಾ ತಯಾರಿಸಿ ಎಂದಿನಂತೆ ಕೆಲಸಕ್ಕೆ ಹೊರಟಳು. ಆದರೆ ಆ ದಿನ ರಬ್ಬರ್ ಗಿಡ ನೆಡಲು ಬೇರೆ ಯಾವ ಆಳುಗಳು ಅಲ್ಲಿರಲಿಲ್ಲ. ಸಾಹುಕಾರ ನಂಜಪ್ಪ ಅವರೆಲ್ಲರನ್ನು ತನ್ನ ಮತ್ತೊಂದು ಊರಿನ ಗದ್ದೆಯಲ್ಲಿ ಪೈರು ನೆಡುವ ಕೆಲಸಕ್ಕೆ ನೇಮಿಸಿರುವ ವಿಷಯ ಅವಳಿಗೆ ಚಹಾ ತಂದು ಕೊಡುವ ಹುಡುಗನಿಂದ ತಿಳಿಯಿತು. ಚಹಾ ಕುಡಿದು ಎಲೆ-ಅಡಿಕೆ ಮೆಲ್ಲುತ್ತಿರುವಾಗ ಹುಡುಗನು ಮರೆಯಾದನು. ಒಬ್ಬಳೇ ಕೆಲಸ ಮಾಡಲು ಮನಸು ಹಿಂಜರಿಯುತ್ತಿತ್ತು. ಅದರೂ ಮಧ್ಯಾಹ್ನದವರೆಗೆ ಮಾಡುವ ಮನಸ್ಸು ಮಾಡಿದಳು.

ಸ್ವಲ್ಪ ಸಮಯ ಕಳೆದ ಸಂತರ ಸಾಹುಕಾರ ನಂಜಪ್ಪ ಹಾಜರಾದನು. ನಯ ವಿನಯ ಪರೋಪಕಾರದ ಮೂರ್ತಿ ಎಂದೇ ಹೆಸರಾದವನು ಅವನು. ಭಾಗ್ಯಳಿಗೆ ಸಂತಸವಾಯ್ತು. ದಣಿಯನ್ನು ತಂದೆಯಂತೆ ಕಾಣುವ ಅವಳು ಕೈ ಜೋಡಿಸಿದಳು. ಹಾಂ…ಹಾಂ….ನಿನ್ನ ಕೆಲಸಮಾಡು. ಆಗಾಗ ಕೇಳುವ ನಂಜಪ್ಪನ ಪ್ರಶ್ನೆಗೆ ಉತ್ತರಿಸುತ್ತಾ ಕೆಲಸದಲ್ಲಿ ತಲ್ಲೀನಳಾಗುತ್ತಿದ್ದಳು. ಅವಳ ಕೆಲಸವನ್ನೇ ತದೇಕಚಿತ್ತದಿಂದ ವೀಕ್ಷಿಸುತ್ತಿದ್ದ ಸಾಹುಕಾರ ತಕ್ಷಣ ಅವಳ ದೇಹದ ಮೇಲೆ ಕಣ್ಣಾಯಿಸುತ್ತಿರುವ ದೃಷ್ಟಿ ಭಾಗ್ಯಳಿಗೆ ಅರಿವಾಯ್ತು. ಅವಳು ತನ್ನ ಉಡುಪನ್ನು ಇನ್ನಷ್ಟು ಸರಿಪಡಿಸಿಕೊಂಡು ಕೆಲಸದಲ್ಲಿ ನಿರತಳಾದಳು. ಮನಸ್ಸು ಕಂಪಿಸುತ್ತಿತ್ತು. ಕೆಲಸ ನಿಧಾನವಾಯ್ತು. ಏನಾದರೂ ಅಚಾತುರ್ಯ ನಡೆದರೆ ಎಂಬ ಸಂಶಯ ಆವರಿಸಿತು. ನಂಜಪ್ಪ ಅವಳನ್ನೇ ಹಿಂಬಾಲಿಸುತ್ತಿದ್ದ. “ಸಾಹುಕಾರ್ರೆ,
ತಾವು ಹೋಗಿ. ನಾನು ಮಧ್ಯಾಹ್ನದವರೆಗೆ ಕೆಲಸ ಮಾಡಿ ಮನೆಗೆ ಹೋಗ್ತೇನೆ” ನಡುಗುವ ಸ್ವರದಲ್ಲಿ ಮೆಲ್ಲನೆ ಉಸುರಿದಳು. “ನೀನೊಬ್ಬಳೇ ಅಲ್ವಾ .. ಹಾಗೇ ನಿಂತೇ. ಮಧ್ಯಾಹ್ನ ಮನೆಗೆ ಬಂದು ನನ್ನನ್ನು ಕಾಣು” ಎಂದು ಹೊರಟ. ಭಾಗ್ಯಳ ಮನ ಕೊಂಚ ಹಗುರವಾಯ್ತು. ಕೆಲಸದ ವೇಗ ಹೆಚ್ಚಿಸಿ, ಗುಂಡಿ ಅಗೆಯಲು ಶುರು ಮಾಡಿದಳು. ಮಧ್ಯಾಹ್ನ ತನ್ನ ಕೆಲಸ ಮುಗಿಸಿ ಸಾಹುಕಾರ ನಂಜಪ್ಪನ ಮನೆಗೆ ಒಲ್ಲದ ಮನದಲ್ಲಿ ಹೊರಟಳು. ಅವನ ನೋಟ ಇವಳನ್ನು ಹಿಸುಕುತಿತ್ತು. ಬ್ರಹ್ಮಚಾರಿಯಾಗಿರುವ ಸಾಹುಕಾರ ಏಕಾಂಗಿಯಾಗಿಯೇ ಮನೆಯಲ್ಲಿ ಇರುವುದು. ಇಂದು ಬೇರೆ ಯಾರೂ ಕೆಲಸದವರು ಇಲ್ಲ. ಸಾಹುಕಾರರು ಹೇಳಿದ ಮೇಲೆ ಹೋಗಲೇ ಬೇಕು. ಲೆಕ್ಕಾಚಾರದ ಮನ ಮನೆಯನ್ನು ತಲುಪಿಸಿತು. ನಾಯಿಯ ಬೌ ಬೌ ಕೇಳಿ ಸಾಹುಕಾರ ನಂಜಪ್ಪ ಹೊರಗೆ ಬಂದ. “ಬಾ ಭಾಗ್ಯ ಒಳಗೆ ಬಾ”. “ಬೇಡ ಬಿಡಿ ಸಾಹುಕಾರೆ, ಏನಾದ್ರು ಕೆಲಸ ಇದ್ರೆ ಹೇಳಿ. ಮಾಡಿ ಮುಗಿಸ್ತೇನೆ” “ಬಾ ಬಾ. ಮನೆ ಒಳಗೆ ತುಂಬಾ ಬಲೆ ಇದೆ. ಅದನ್ನು ತೆಗೆ”. ಉಪಾಯವಿಲ್ಲದೆ ನಡುಗುತ್ತ ಒಳ ಹೊಕ್ಕಳು. ಮನೆಯಲ್ಲಿದ್ದ ಬಲೆ ತೆಗೆದು ಗುಡಿಸಿ ಓರಣವಾಗಿ ಇರಿಸಿದಳು. ಅಷ್ಟರಲ್ಲಿ, ಸಾಹುಕಾರ ನಂಜಪ್ಪ ಎದುರಾಗಿ ಅವಳನ್ನು ಸಮೀಪದಲ್ಲಿದ್ದ ಮಂಚದಲ್ಲಿ ಕುಳ್ಳರಿಸಿದನು. ದೇಹವೆಲ್ಲ ಕಂಪಿಸಿ ಸಿಡಿಲು ಬಡಿದಂತಾಯ್ತು ಭಾಗ್ಯಳಿಗೆ. ಶಾಂತರೂಪಿ ಸಾಹುಕಾರ ಎದುರಿನಲ್ಲಿದ್ದ ಕಪಾಟಿನಿಂದ ಎರಡು ಹೊಸ ಸೀರೆಯನ್ನು ಕೊಟ್ಟು, “ಭಾಗ್ಯ, ಇದು ನಿನಗೆ. ಆ ಹರಕಲು ಸೀರೆಯನ್ನು ಇಂದೇ ಬಿಸಾಕು”. ಎಂದ …

.

ಭಾಗ್ಯಳಿಗೆ ತಬ್ಬಿಬ್ಬಾಯ್ತ. ತನ್ನ ತಪ್ಪು ಕಲ್ಪನೆಗೆ ಮನದಲ್ಲಿಯೇ ಕ್ಷಮೆ ಯಾಚಿಸಿದಳು. ತನ್ನ ಸಂಬಳವನ್ನು ತೆಗೆದುಕೊಂಡು ಸರಸರವೆಂದು ಮನೆಯತ್ತ ಹೆಜ್ಜೆ ಹಾಕಿದಳು. ಈ ಘಟನೆ ಆದ ನಂತರ ಅವಳೆಂದೂ ಸಾಹುಕಾರ ನಂಜಪ್ಪನಲ್ಲಿ ಸಂಶಯವನ್ನೇ ತಾಳಲಿಲ್ಲ. ತಂದೆಯಂತೆ ಪೂಜಿಸುತ್ತಿದ್ದ ಅವಳು ಈಗ ಸುಂದರ ಗುಡಿಯನ್ನೇ ಮನದಲ್ಲಿ ನಿರ್ಮಿಸಿದಳು. ತನ್ನ ಮನೆಯ ಸಮೀಪಕ್ಕೆ ಬಂದಂತೆ ಇವಳ ಹೃದಯದ ಬಡಿತವು ಹೆಚ್ಚಾಗಿತ್ತು. ಮನೆಯ ಮೆಟ್ಟಿಲು ಹತ್ತಿ ಒಳ ಹೊಕ್ಕಾಗ ಮೇಜಿನ ಮೇಲಿದ್ದ ಒಂದು ಪತ್ರ ಇವಳನ್ನು ಸೆಳೆಯಿತು. ರಾಘವ ಬರೆದದ್ದು. “ಅಮ್ಮಾ, ನಿತ್ಯದ ಜಗಳದಿಂದ ಬೇಸರವಾಗಿದೆ. ನಾನು ಮನೆ ಬಿಟ್ಟು ಹೊಗುತ್ತೇನೆ. ಇನ್ನಾದರೂ ತಮ್ಮ ಬದುಕು ಸುಖಕರವಾಗಿರಲಿ.” ಪತ್ರ ಓದಿ ಭಾಗ್ಯ ಕುಸಿದು ಬಿದ್ದಳು. ಅವಳ ರೋದನ ಕರಿಮುಗಿಲಾಗಿಸಿತು. ಮಗನ ಚಿಂತೆಯಿಂದ ಬದುಕಿನಲ್ಲಿ ಲವಲವಿಕೆ ಕಳೆದುಕೊಂಡಳು. ಅದರೂ ತನ್ನನ್ನು ತಾನೇ ಸಮಾಧಾನ ಮಾಡಿಕೊಳ್ಳುತ್ತಾ ಹಿಂದಿನ ತನ್ನ ಬದುಕಿನತ್ತ ಹೆಜ್ಜೆ ಹಾಕಿದಳು. ಯಾವುದರ ಪರಿವೇ ಇಲ್ಲದೆ, ಕುಡಿತದ ದಾಸನಾಗಿದ್ದ ಗೋಪಾಲ ತನ್ನ ದೇಹವನ್ನು ಮನೆಗೆ ತಲುಪಿಸಲು ಸಾಧ್ಯವಾಗದೆ ರಸ್ತೆ ಬದಿಯಲ್ಲಿ ಬೀಳುತ್ತಿದ್ದ. ಎಷ್ಟೋ ದಿನಗಳು ನಾಯಿಯ ಸೂಸು ಅವನನ್ನು ಮೈಲಿಗೆ ಮಾಡುತ್ತಿದ್ದವು. ಎಚ್ಚರವಾದಾಗ ಧರಿಸಿದ ಉಡುಪನ್ನು ಸರಿಪಡಿಸಿಕೊಂಡು ಮನೆ ತಲುಪುತ್ತಿದ್ದ. ಭಾಗ್ಯಳಿಗೆ ಅವನಲ್ಲಿ ಮೊದಲಿದ್ದ ಕಾಳಜಿ ಈಗ ಇರಲಿಲ್ಲ. ಅವನಿಷ್ಟದಂತೆ ಬಿಟ್ಟಿದ್ದಳು. ನಾಯಿ ಬಾಲದಂತಿರುವ ಅವನ ನಡತೆಯನ್ನು ಅವಳಿಗೆಂದೂ ಸರಿಪಡಿಸಲಾಗಲಿಲ್ಲ. ರಾಘವ ತೆರಳಿ ಎರಡು -ಮೂರು ವರ್ಷ ಕಳೆದ ನಂತರ ಅವನ ಪತ್ನಿಯಿಂದ ಭಾಗ್ಯಳಿಗೆ ಕರೆಬಂತು. ರಾಘವನನ್ನು ಮದುವೆಯಾದ ವಿಚಾರ ತಿಳಿಸಿ ಒಂದು ಗಂಡು ಮಗು ಇರುವುದನ್ನು ಹಾಗೂ ಮನೆಗೆ ಬರುವ ಇಂಗಿತವನ್ನು ವ್ಯಕ್ತಪಡಿಸಿದಳು. ಭಾಗ್ಯಳಿಗೆ ಒಂದೆಡೆ ಆನಂದವಾದರೂ ಯಾರಿಗೂ ತಿಳಿಸದೆ ಸಂಸಾರದ ನೌಕೆ ಚಲಾಯಿಸುತ್ತಿರುವುದು ಕುತ್ತಿಗೆಗೆ ಹಗ್ಗ ಬಿಗಿದಷ್ಟು ದುಃಖವಾಯ್ತು. ವಾರ ಕಳೆದರೂ ಯಾವುದೇ ಉತ್ತರ ನೀಡಲಿಲ್ಲ. ನಂತರ ರಘುವಿಗೆ ರಾಘವನ ವಿಚಾರವನ್ನು ಅನಾವರಣಗೊಳಿಸಿದಳು. “ರಾಘವನು ಸಿಡಿದು ಕೆಂಡದಂತಾದನು. ಮೈಯಲ್ಲಿ ಮಿಂಚಿನ ಸಂಚಾರವಾದಂತೆ ನಡುಗಿದನು. ಗುಡುಗಿದನು. ಭಾಗ್ಯಳಿಗೆ ಭಯ ಕಾಡಿತು. ಅವನು ಆಕಸ್ಮಿಕವಾಗಿ ಎಡವಿದ್ದಾನೆ. ಏನು ಮಾಡೋದು ? ಎಲ್ಲವನ್ನೂ ಹೊಟ್ಟೆಗೆ ಹಾಕಿಕೊಳ್ಳಬೇಕು. ಆ ಹೆಣ್ಣುಮಗಳು ಕಷ್ಟದಲ್ಲಿ ಇರಬಹುದು. ಹಾಗೆ ಫೋನ್ ಮಾಡಿದ್ದಾಳೆ. ಅವರಿಗಾದರೂ ಯಾರು ದಿಕ್ಕು ಹೇಳು..? ರಾಘವನ ಕೋಪ ಕೊಂಚ ತಂಪಾಯಿತು. ಸರಿ, ಅವರನ್ನು ಮನೆಗೆ ಬರುವಂತೆ ತಿಳಿಸು. ಭಾಗ್ಯ ರಿಂಗಾಯಿಸಿ ಯೋಗಕ್ಷೇಮವೆಲ್ಲ ವಿಚಾರಿಸಿ ಮನೆಗೆ ಬರುವಂತೆ ತಿಳಿಸಿದಳು. ರಘುವಿನ ವರ್ತನೆಯಿಂದ ಬೇಸತ್ತಿದ್ದ ಮಲ್ಲಿಕಾ ಬಾಡಿಗೆ ಮನೆಗೆ ಕೆಲವು ತಿಂಗಳಿಂದ ಕೊಡಬೇಕಾದ ಹಣವನ್ನು ತನ್ನ ಉಂಗುರ ಮಾರಿ ಹಣ ಸಂದಾಯ ಮಾಡಿದಳು. ಅತ್ತೆಯಿಂದ ಬಂದ ಕರೆಗೆ, ನವಿಲಿನಂತೆ, ಕುಣಿದಳು. ತನ್ನ ಮಗುವಿಗೊಂದು ಸೂರಿದೆ ಎಂಬ ಸಂಭ್ರಮ ಹೆಡೆ ಎತ್ತಿ ನಿಂತಿತು. ತಡಮಾಡದೆ ಅವರಿದ್ದ ಊರಿಗೆ ಮೂವರು ಹೊರಟರು.
ಸುಸೂತ್ರವಾಗಿ ನಡೆದ ಬದುಕಿನ ಪಯಣದಲ್ಲಿ ರಾಘವನ ಕುಟುಂಬ ಬಂದು ಸೇರಿತು. ಅವರ ಆಗಮನ ಮನೆಯಲ್ಲಿ ನವ ಸಂತಸ ತಂದಿತು. ಬಹಳ ವಿಧೇಯತೆಯಿಂದ ನಡೆದುಕೊಳ್ಳುವ ಅವರನ್ನು ಕಂಡು ರಘುವಿಗೂ ಪ್ರೀತಿ ಉಕ್ಕೇರಿತು. ತನ್ನ ಸಂಸಾರ ಸಂತಸದಿಂದಿರುವುದನ್ನು ಕಂಡು ಭಾಗ್ಯಳ ಮನ ನವಿಲಿನಂತೆ ಗರಿಕೆದರಿ ಕುಣಿಯಿತು. ಈ ಆನಂದಕ್ಕಾಗಿ ಅವಳು ತನ್ನ ಮನೆಯಲ್ಲಿ ದೇವಿ ಪೂಜೆ ಮಾಡಿಸಿ ಅಕ್ಕ ಪಕ್ಕದವರಿಗೆ ಉಣ ಬಡಿಸಿದಳು.. ತನ್ನ ಸೊಸೆಯನ್ನು ಪರಿಚಯಿಸಿದಳು. ಆಹ್ವಾನವಿತ್ತವರು “ರಘುವಿಗೂ ಒಂದು ಮದುವೆ ಮಾಡಿ ಬಿಡು ಭಾಗ್ಯ .ಮತ್ತೆ ನಿನ್ನ ಜವಾಬ್ದಾರಿ ಮುಗಿಯುತ್ತದೆ” ಎಂದಾಗ ಇವಳಿಗೂ ಹೌದೆನಿಸಿತು, ಕಾರ್ಯಕ್ರಮವೆಲ್ಲ ಮುಗಿದ ನಂತರ ರಘುವಿನ ಮದುವೆ ವಿಚಾರ ಇವಳ ತಲೆಯಲ್ಲಿ ಹುಳ ಬಿಟ್ಟಾಂತಾಯ್ತು. ಕೊಡಲೇ ಮಗನೊಂದಿಗೆ ವಿಷಯ ಪ್ರಸ್ತಾಪಿಸಿ ತನಗೆ ತಿಳಿದ ಕಡೆಯಿಂದಲೇ ಹುಡುಗಿಯನ್ನು ನೋಡಿ ರಘುವಿಗೆ ವಿವಾಹ ಮಾಡಿದಳು‌. ಹಲವು ತಿಂಗಳು ಸುಖವಾಗಿ ಸಾಗಿದ ಇವರ ಬದುಕಲಿ ದಿನಕಳೆದಂತೆ ನೆಮ್ಮದಿ ಮಾಸಿತು. ನಿತ್ಯವು ಜಗಳದ ಕೇಕೆ ಮನೆಯಲ್ಲೆಲ್ಲಾ ಮೊಳಗಿತು. ಹಿಂದೆ ಅಣ್ಣ ತಮ್ಮಂದಿರ ಜಗಳವನ್ನೆ ನಿಭಾಯಿಸಲು ಹರಸಾಹಸ ಪಡುತ್ತಿದ್ದ ಭಾಗ್ಯ ಅದಕ್ಕೆ ನಂಟಿನಂತೆ ಸೊಸೆಯಂದಿರ ಜಗಳ! ಭಾಗ್ಯಳ ಮಾತು ಈಗ ಗಣನೆಗೆ ಬರುತ್ತಿರಲಿಲ್ಲ. ಕಾಲಮುಸುಕು ಎಳೆದಿದ್ದರಿಂದ ಬೇರೆ ದಾರಿಕಾಣದೆ ಸಾಲ ಮಾಡಿ ರಘುವಿಗೂ ಒಂದು ಮನೆ ಕಟ್ಟಿದಳು. ಆ ಹೊರೆಯನ್ನು ತನ್ನ ಹೆಗಲಮೇಲೆ ಹೊತ್ತಕೊಂಡಳು. ತನ್ನ ಪರಿಸ್ಥಿತಿಯನ್ನು ಕಂಡು ಹಲುಬಿದಳು. ಅವಳ ಮನಸ್ಸು ಈಗ ಹಿಂದಿದ್ದಕ್ಕೆ ಜಾರಿ ಅಂದು ಅಧ್ಯಾಪಕರು ಹೇಳಿದ ಮಾತಿನ ಸಮೀಪ ಬಂದಿತು. ವಯಸ್ಸಾದ ಮೇಲೆ ಮನೆಯವರ ಮನಸ್ಥಿತಿಯ ಅರಿತು ಮನೆಯಲ್ಲಿ ಮಕ್ಕಳೊಂದಿಗೆ ಬಾಳ್ವೆ ನಡೆಸಬೇಕಾ ! ಅಥವಾ ಅನಾಥಾಶ್ರಮಕ್ಕೆ ಸೇರಬೇಕಾ..! ಎನ್ನುವ ನಿರ್ಣಯ ನಾವೇ ತೆಗೆದುಕೊಳ್ಳಬೇಕು. ಒಲ್ಲದ ಮನದವರೊಂದಿಗೆ ಇರುವ ಬದಲು ಅನಾಥಾಶ್ರಮವೇ ಹೆಚ್ಚು ಸೂಕ್ತ. ಆಗ ಭಾಗ್ಯ ದರ್ಪದಿಂದ ನುಡಿದಿದ್ದಳು. ಅನಾಥಾಲಯದ ಆಲೋಚನೆ ಮಕ್ಕಳಿಗೆ ಬಾರದಂತೆ ಸಾಕಿ ಸಲುಹಿಸುವ ಜವಾಬ್ದಾರಿ ಅಪ್ಪ ಅಮ್ಮನವರಿಗಿರಬೇಕು. ಮಕ್ಕಳ ಒಡನಾಟದಲ್ಲಿ ಬಾಳಿ ಬದುಕುವ ಕಲೆಗಾರಿಕೆಯನ್ನು ಅರಿಯಬೇಕು. ತಮ್ಮವರನ್ನು ಬಿಟ್ಟು ಅನಾಥಾಲಯಕೆ ಸೇರುವುದು ಸಮಂಜಸಲ್ಲವೆಂದು..ತನ್ನ ಅನಿಸಿಕೆ ನುಡಿದಿದ್ದಳು. ಆದರಿಂದು ತನ್ನ ಪರಿಸ್ಥಿತಿಯನ್ನು ಕಂಡು ಮರುಗಿದಳು. ಮಕ್ಕಳಿಬ್ಬರು ಜಗಳವಾಡುತ್ತಿರುವುದು ಭಾಗ್ಯ ಮತ್ತು ಗೋಪಾಲನ ಸಾಕುವ ವಿಚಾರದಲ್ಲಿ ರಾಘವನಿಗೆ ತಾಯಿಯ ಮಾತುಗಳು ಮನಕೆ
ಹಿತವಾಗುತ್ತಿರಲಿಲ್ಲ. ಅವಳ ಮಾತುಗಳೇ ಹಾಗೆ. ಇಲಿ ಹೋದರೆ ಹುಲಿಯೆ ಹೋಯ್ತು ಎನ್ನುವ ಮಾಂತ್ರಿಕಳು. ಆದರೆ ಹೃದಯ ಮಾತ್ರ ಯಾರ ದು:ಖಕ್ಕೂ ಮಮ್ಮಲ ಮರುಗುತ್ತಿತ್ತು. ಅವಳ ವಾಚಾಳಿತನದಿಂದ ಮಕ್ಕಳು ಅವಳಿಗೆ ನೆಲೆಕೊಡಲು ಹಿಂಜರಿಯುತ್ತಿದ್ದರು. ಈ ಘಟನೆಯೇ ಅವಳ ಕಣ್ಣಾಲಿಗಳು ತುಂಬಲು ಕಾರಣ, ಸೋತು ಹೋದ ಬದುಕ ಪಯಣದಲ್ಲಿ ನಾವೆ ದಡ ತಲುಪದೆ ನಡು ನೀರಿನಲ್ಲಿ ಬಿಟ್ಟಂತೆ ಭಾಗ್ಯಳಿಗೆ ಭಾಸವಾಗುತ್ತಿತ್ತು.
ಮರುದಿನ ಮುಂಜಾವು ರಾಘವನ ಜಗಳ ತಾಳಲಾರದೆ ಗೋಪಾಲನ
ಬಾಯಾರಿದಾಗ.
ಕರೆದುಕೊಂಡು ರಘುವಿನ ಮನೆಯಲ್ಲಿ ನೆಲೆಯಾದರು ರಘು ಚೆನ್ನಾಗಿ ಉಪಚರಿಸಿದನು. ಅಪ್ಪ-ಅಮ್ಮನವರಲ್ಲಿ ವಿಶೇಷ ಪ್ರೀತಿಯನ್ನು ತೋರಿಸಿ ‘ರಾಘವನು ಒಬ್ಬ ದ್ರೋಹಿ ಎಂದು ಸಾಬೀತು ಪಡಿಸಿದ’ ಈಗ ಭಾಗ್ಯ ಮೊದಲಿಗಿಂತ ಬದಲಾಗಿದ್ದಳು. ಒಂದಾರು ತಿಂಗಳು ನೆಮ್ಮದಿಯಿಂದ ಇದ್ದಳು. ತದನಂತರ ಭಾಗ್ಯಳ ನೆರಳೂ ಕೂಡ ರಘುವಿಗೆ ಸಹಿಸಲಾಗುತ್ತಿರಲಿಲ್ಲ. ಸಣ್ಣ- ಸಣ್ಣ ವಿಚಾರಗಳಿಗೂ ಜಗಳವಾಡುತ್ತಿದ್ದ…ಕೊನೆಗೆ ಅವನೇ ತನ್ನ ಕೈಯಾರೆ ಆವರಿಬ್ಬರನ್ನು ಹೊರಗೆ ತಳ್ಳಿದ ಬೇರೆ ವಿದಿ ಇಲ್ಲದೆ ಪುನಃ ರಾಘವನಲ್ಲಿಗೆ ತೆರಳಿದರು ಈಗ ರಾಘವ ಲಗಾಮ್ ವಿಲ್ಲದ ಕುದುರೆಯಂತಾದ ಬಾಯಿಗೆ ಬಂದಂತೆ ಬಯ್ಯುವುದು ಒಡೆಯುವುದು ಎಲ್ಲವೂ ನಡೆಯುತ್ತಿತ್ತು, ಇವರೀರ್ವರು ಸಹಿಸಿದರು,ಆದರೆ ಹೆಚ್ಚು ದಿನ ಸಹಿಸುವಿಕೆಯನ್ನು ಕಾಯ್ದಿರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಒಂದೆಡೆ ಗೋಪಾಲ ದುಡಿಯಲಾಗದೆ ನಿಶ್ಯಕ್ತನಾದ ಸಾರಾಯಿ ಕುಡಿಯಲು ಹಣ ಸಿಗದ ಕಾರಣ ವಿಷ ಸೇವಿಸಿ ಜನ ನಿಬಿಡ ದಾರಿಯಲ್ಲಿ ಉಸಿರ ಕಳಚಿ ಹೊರಟ. ಈ ಆಘಾತ ಭಾಗ್ಯಳ ಮನವ ಘಾಸಿಗೊಳಿಸಿತು. ಅವಳಿಗಿದ್ದ ಸ್ವಲ್ಪ ಭೂಮಿಯು ಸಾಲ ಕಟ್ಟಲಾಗದೆ ಹರಾಜಿಗೆ ಬರುವ ಸುದ್ದಿಯು ಇವಳ ಕಿವಿಗೆ ಅಪ್ಪಳಿಸಿತು .ಅಚ್ಚುಕಟ್ಟಾಗಿ ಮಕ್ಕಳು ಮೊಮ್ಮಕಳೊಂದಿಗೆ ಸುಖವಾಗಿ ಕಾಲಹರಣ ಮಾಡಬೆಕೆಂದು ಕೊಂಡವಳ ಮನ ಅನಾಥಾಲಯದ ಕಡೆಗೆ ಹರಿಯಿತು. ಗೋಪಾಲನ ಅಂತ್ಯ ಸಂಸ್ಕಾರದ ನಂತರ ಅವಳು ತನ್ನ ನಿರ್ದಾರದತ್ತ ಹೆಜ್ಜೆ ಹಾಕಿದಳು ಆ ದಿನ ಮಳೆಯ ಆರ್ಭಟವು ಹೆಚ್ಚಾಗಿತ್ತು. ತೂತು ಬಿದ್ದ ಕೊಡ ಇವಳ ನೋಡಿ ನಕ್ಕಿತ್ತು. ಅದನ್ನು ಹಿಡಿದು ಏಕಾಂಗಿಯಾಗಿ ಹೊರಟೇ ಬಿಟ್ಟಳು. ತೀರ್ವವಾದ ಗಾಳಿ ಅವಳನ್ನು ಒದ್ದೆಯಾಗಿಸಿತು. ಆದರೂ ದೇಹದಲ್ಲಿ ಬೆವರಿನ ಹನಿಗಳು ತಾಂಡವ ನೃತ್ಯ ಮಾಡುತ್ತಿತ್ತು. ಮನದಲ್ಲಿ ಮೂಡಿದ ಜಿಜ್ಞಾಸೆಗಳಿಂದ ಜೋರಾಗಿ ಅತ್ತಳು. ಸಿಡಿಲು ಗುಡುಗುಗಳ ಆರ್ಭಟ, ಮಳೆಯ ಶಬ್ದವು ಅವಳ ಆಳುವನ್ನು ಮೂಕವಾಗಿಸಿತು. ಅನಾಥಶ್ರಮವನ್ನು ತಲುಪಿದಳು. ಆಶ್ರಮವನ್ನು ಇವಳಿಗೆ ವಿದ್ಯೆಕಲಿಸಿದ ಗುರುವೇ ನಡೆಸುತ್ತಿದ್ದರು. ಅಂದಿನ ಮಾತುಗಳು ಮನದಲ್ಲಿ ಅಪ್ಪಳಿಸಿ ಮಾನಸಿಕ ಸ್ಥಿತಿಮಿತವನ್ನೇ ಕಳೆದು ಕೊಂಡಳು. ಗಂಡದೆಯ ಭಾಗ್ಯಳ ಹಣೆಯಲ್ಲಿ ವಿಧಿ ಬರಹ ಬೇರೆಯೇ ಬರೆದಿತ್ತು, ಭಾಗ್ಯಳ ಪರಿಚಯ ಸಿಕ್ಕಿದ ಗುರು ರಾಮಶಾಸ್ತ್ರಿ ವಿಚಲಿತರಾದರು. ಅವಳನ್ನು ಆಸ್ಪತ್ರೆಗೆ ಸೇರಿಸಿ, ಅವಳ ಪೂರ್ವ ಪರವೆಲ್ಲ ತಿಳಿದರು ಮಾನಸಿಕ ಅಶಾಂತಿಯಿಂದ ಬಳಲುತ್ತಿದ್ದ ಭಾಗ್ಯಳ ಬದುಕಲ್ಲಿ ಮತ್ತೆ ಹಸಿರು ಚಿಗರಿಸಬೇಕೆಂಬ ವಾಂಛೆ ರಾಮಶಾಸ್ತ್ರಿ ಅವರಲ್ಲಿ ಮೂಡಿತು.ಇತ್ತ ಭಾಗ್ಯಳ ಭೂಮಿ ಹರಾಜಿಗೆ ಬರುವುದನ್ನು ತಪ್ಪಿಸಲು ಸೊಸೆಯಂದಿರು ತಮ್ಮಲ್ಲಿದ್ದ ಹಣವನ್ನು ಸಂದಾಯಿಸಿದರು. ಆ ಹಣ ಸಾಲದೆ ಅಸಲಿನ ಬಡ್ಡಿಯನ್ನು ಭರಿಸಿತು. ಭೂಮಿ ಹರಾಜಿಗೆ ಬರದ ಹಾಗೆ ತಡೆದರು, ಇಬ್ಬರಿಗೂ ಅತ್ತೆಯ ನೆನಪು ಕಾಡ ತೊಡಗಿತು. ಅವಳ ದ್ಯೇಯ ಕೆಲಸ ಎಲ್ಲವೂ ಕಣ್ಣ ಮುಂದೆ ಅರಳಿದವು. ಅತ್ತೆ ತಮ್ಮೊಂದಿಗೆ ಇರಬೇಕೆಂದು ಚಿಂತಿಸಿದರು. ಪತ್ನಿಯರ ಒಳ್ಳೆಯತನದಿಂದ ರಘು ರಾಘವ ಸಹ ಬದಲಾದರು.ಅವರಿಗೂ ತಾಯಿ ಇಲ್ಲದೆ ಮನ ಶೂನ್ಯವಾಯ್ತು. ಅಮ್ಮನ ಕಾಲಿಗೆ ಬಿದ್ದು ಕ್ಷಮೆಯಾಚಿಸಬೇಕೆಂದು ನಿಶ್ಚಯಿಸಿದರು. ಆದರೆ ಆವಳೆಲ್ಲಿದ್ದಾಳೆಂದು ತಿಳಿದಿರಲಿಲ್ಲ. ಅಚಾನಕ್ಕಾಗಿ ಗುರು ರಾಮಶಾಸ್ತ್ರಿ ನಾವೂರಿನ ಭಾಗ್ಯಳ ಮನೆಗೆ ಬಂದು ತಲುಪಿದರು. ಮಕ್ಕಳಿಗೆ ಭಾಗ್ಯಳ ವಿಚಾರ ತಿಳಿಸಿದರು. ಈಗ ಹುಷಾರಾಗಿದ್ದಾಳೆಂದು ಸಿಹಿ ಸುದ್ದಿಯನ್ನು ಕೊಟ್ಟರು.ಅಷ್ಟೇ ಅಲ್ಲದೆ ಭೂಮಿಯ ಸಾಲದ ಮೊತ್ತವನ್ನೆಲ್ಲ ರಾಮಶಾಸ್ತ್ರಿ ಭರಿಸಿದರು ಇದರಿಂದ ಇವರ ಮನದಲ್ಲಿ ಸಂತಸದ ಸುದೆ ಹರಿಯಿತು. ಮಕ್ಕಳು ತಡಮಾಡದೆ ಭಾಗ್ಯಳನ್ನು ಕೆರೆತರಲು ರಾಮಶಾಸ್ತ್ರಿಯವರೊಂದಿಗೆ ಹೊರಟರು, ಚೇತರಿಸಿಕೊಂಡ ಭಾಗ್ಯ ಅನಾಥಾಶ್ರಮದಲ್ಲಿ ಹಿರಿ-ಕಿರಿಯರ ಸೇವೆ ಮಾಡುತ್ತಾ ನಗು-ನಗುತ್ತಾ ಹಣ್ಣುಗಳನ್ನು ಕೊಡುತ್ತಿದ್ದಳು.ಅವಳ ನಿರ್ಲಿಪ್ತಮನ ಸುಖವನ್ನು ಹರಿಸಿತ್ತು.ಮಕ್ಕಳು ಭಾಗ್ಯಳ ಕಂಡೊಡನೆ ಓಡಿ ಹೋಗಿ ಕಾಲಿಗೆ ಬಿದ್ದು ಕ್ಷಮೆಯಾಚಿಸಿ ಗೋಳಾಡಿದರು. ತಮ್ಮೊಂದಿಗೆ ಬರುವಂತೆ ತಿಳಿಸಿದರು. ರಾಮಶಾಸ್ತ್ರಿಯು ನುಡಿದರು “ಭಾಗ್ಯ ನಿನ್ನಾಸೆಯೇ ಮಕ್ಕಳು ಮೊಮ್ಮಕಳೊಂದಿಗೆ ಇರಬೇಕೆಂದು ಧೈರ್ಯದಿಂದ ಮಕ್ಕಳೊಂದಿಗೆ ಹೋಗು ಸಂತಸದಿಂದ ಕಾಲ ಕಳೆ, ಇನ್ನೆಂದೂ ನಿನ್ನ ಬದುಕಲಿ ಕೆಟ್ಟದಿನ ಬರುವುದಿಲ್ಲ ನಿನ್ನ ಮಕ್ಕಳಿಗೆ ಈಗ ನಿನ್ನ ಅಗತ್ಯವಿದೆ”. ಭಾಗ್ಯಳ ಮನ ಸಂತಸದ ಕಡಲಲ್ಲಿ ತೇಲಿತು.ಮಕ್ಕಳನ್ನು ಅಪ್ಪಿಕೊಂಡು “ನೀವು ಬದಲಾಗಿದ್ದೆ ನನ್ನ ಭಾಗ್ಯ ಇನ್ನು ನಿಮಗೆ ನನ್ನ ಅಗತ್ಯವಿಲ್ಲ.ನೀವು ನಿಶ್ಚಿಂತೆಯಿಂದ ಮನೆಗೆ ಹೋಗಿ, ನನಗೆ ಈ ಆಶ್ರಮ ಬಹಳ ಇಷ್ಟವಾಗಿದೆ.ನನ್ನ ಬಲ ಕುಂದಲಿಲ್ಲ. ಇಲ್ಲಿ ಸೇವೆ ಮಾಡುವ ಭಾಗ್ಯ ಆ ದೇವರೇ ನನಗೆ ಕರುಣಿಸಿದ್ದಾನೆ. ನನ್ನ ಗುರು ನನಗೆ ಮಾರ್ಗದರ್ಶಕರಾಗಿದ್ದಾರೆ” ಎಂದಳು, ಬಂದ ದಾರಿಗೆ ಸುಂಕವಿಲ್ಲದೆ ತಾಯಿ ಸಂತುಷ್ಟಳಾಗಿವುದನ್ನು ಹೃದಯದಲ್ಲಿ ಕಾಪಿರಿಸಿಕೊಂಡು ಮಕ್ಕಳು ನಾವೂರಿನ ದಾರಿ ಹಿಡಿದರು.

Sand dunes in the Thar desert in Rajasthan, India.


ರಾಮಶಾಸ್ತ್ರಿ ಭಾಗ್ಯಳನ್ನು ಪ್ರಶ್ನಿಸಿದರು. “ಮಕ್ಕಳೊಂದಿಗೆ ಸುಖವಾಗಿ ನೆಮ್ಮದಿಯಿಂದ ಬದುಕಬಹುದಿತ್ತಲ್ಲ ನಿನಗೆ? ನಿನ್ನ ಆಸೆಯೇ ಮಕ್ಕಳು ಮತ್ತು ಮೊಮ್ಮಕ್ಕಳರೊಂದಿಗೆ ಇರುವುದು ಅದಕ್ಕಾಗಿ ನಾನು ಹರಾಜಿಗೆ ಬಂದ ಆಸ್ತಿಯನ್ನು ಮತ್ತೊಬ್ಬರು ಕಸಿಯದಂತೆ ಮಾಡಿದೆ ಕೇವಲ ನಿನ್ನ ಆಸೆಗಾಗಿ” ಗುರುಗಳೆ ಕ್ಷಮಿಸಿಬಿಡಿ, ನಿಮಗೂ ನಾನಿಲ್ಲಿರುವುದು ಅಸಮಾಧಾನನಾ ? ಇಲ್ಲ .ಭಾಗ್ಯ ಹಾಗೇಕೆ ಮಾತನಾಡುತ್ತೀಯ! ನಿನ್ನಂಥ ನೂರು ಭಾಗ್ಯಗಳಿಗೂ ಅವಕಾಶ ಇಲ್ಲಿದೆ. ಮತ್ತೇಕೆ ಸರ್ ನಿಮಗೆ ನನ್ನನ್ನು ಕಳಿಸುವ ತವಕ ಅದಕ್ಕೆ ಉತ್ತರ ನಿನ್ನ ಬಳಿಯೆ ಇದೆ, ಸರ್ ನಾನು ಹಿಂದಿನ ಭಾಗ್ಯಳಲ್ಲ ಬಹಳ ಹತಾಶಳಾಗಿದ್ದೇನೆ. ಎರಡೆರಡು ಬಾರಿ ಮನೆ ಬದಲಾಯಿಸಿದೆ. ಪ್ರಾಣಿಗಳಿಗೂ ಬರಬಾರದು ನನ್ನ ಪರಿಸ್ಥಿತಿ, ಪುಟ್ಬಾಲ್ ಆಟದಂತೆ ಆಗಿತ್ತು ನನ್ನ ಬದುಕು, ನಡು ನೀರಿನ ಸುಳಿಯಲ್ಲಿ ಮಿಂದೆದ್ದ ನನಗೆ ಈಗ ಅವರ ಬಣ್ಣದ ಮಾತುಗಳಿಗೆ ಮರುಳಾಗಿ ಮತ್ತೆ ಅದೇ ಸುಳಿಯಲ್ಲಿ ಸಿಲುಕುವ ಪರಿಸ್ಥಿತಿ ನನಗೆ ಬಂದೊದಗಬಾರದು. ಅವರ ಯಾವ ಮಾತುಗಳಲ್ಲಿಯೂ ನಂಬಿಕೆ ಇಲ್ಲ ನನ್ನನ್ನು ಅವರು ಸಾಕುವುದು ದೂರದ ಮಾತೇ! ಬಾಯಾರಿದ ಬದುಕಲ್ಲಿ ಅಂತ್ಯವಾಗಿ ನೆನಪಾದದ್ದು ಅನಾಥಾಲಯ “ನನ್ನನೆಂದು ನೀವು ಇಲ್ಲಿಂದ ಹೊರಹಾಕಬೇಡಿ ನಾನು ಇಲ್ಲಿ ಇರುವುದು ಪೂರ್ವಾಪರದ ಪುಣ್ಯವೆ ನನ್ನ ಬದುಕಿನ ಮುಕ್ತಾಯ ಪುಟದಲ್ಲಿಯಾದರೂ ಸಂತಸದ ಕ್ಷಣಗಳನ್ನು ಕಳೆಯುವೆ ಅದು ಇಲ್ಲಿ ಮಾತ್ರ ಸಾಧ್ಯ” ರಾಮ ಶಾಸ್ತ್ರಿ ಯವರಿಗೆ ಅಪ್ಪಟ ಅಪರಂಜಿಯಂತಿರುವ ಭಾಗ್ಯಳ ಮಾತು ಕೇಳಿ ಹೃದಯ ತಂಪಾಯಿತು.


ವಿಮಲಾರುಣ ಪಡ್ದoಬೈಲು

Leave a Reply

Back To Top