ಕಾವ್ಯ ಸಂಗಾತಿ
ಅಕ್ಷತಾ ಜಗದೀಶ
ಹಾರಿ ಹೋದ ಹಕ್ಕಿ……
ಬೆಚ್ಚನೆಯ ಗೂಡಿನೊಳಗೆ
ಹುಟ್ಟಿ ಬೆಳೆದ ಹಕ್ಕಿ
ರೆಕ್ಕೆ ಬಲಿತ ಮೇಲೆ,
ರಣ ಹದ್ದುಗಳ ಸಂಗ ಸೇರಿ
ಹಾರಿ ಹೋಯಿತು
ಆ ನೀಲಿ ಬಾನಿಗೆ
ಮರಳಿ ನೋಡದೆ
ತಾ ಪ್ರೀತಿ ನೀಡಿದ ಗೂಡಿಗೆ….
ಎಲ್ಲಿದೆ ಬಂಧ?
ಹಾರಿ ಹೋಯಿತು
ಕರುಳ ಬಳ್ಳಿ ಸಂಬಂಧ…
ಒಡೆದ ಕನ್ನಡಿಯಲ್ಲಿ
ಕಾಣಬಲ್ಲದೆ ಮನವೇ
ಪರಿಪೂರ್ಣ ಬಿಂಬ..
ತಿಳಿನೀರ ಮೇಲೆ ಛಿದ್ರವಾಗಿದೆ
ನಾ ಕಂಡ ಪ್ರತಿಬಿಂಬ….
ದಾರಿ ತಪ್ಪಿ ಹಾರಿ ಹೋದ ಹಕ್ಕಿ
ತನ್ನವರ ನೆನೆಯಲಿಲ್ಲ….
ಎಲುಬಿರದ ನಾಲಿಗೆ
ಹೊರಡಿಸಿದ ನುಡಿಗಳು
ಮರಳಿ ಬರಲಿಲ್ಲ…
ನಡು ಹಗಲಿನಲ್ಲಿ
ಉರಿದ ದೀಪಕ್ಕೆ
ಮಾನ್ಯತೆಯೂ ಸಿಗಲಿಲ್ಲ…
ಅಗಾಧ ಜಲದ ಕಡಲಿದ್ದರೇನು?
ದಾಹ ತೀರಿಸುವುದೇ
ಸಾಗರದಲ್ಲಿ ಹರಡಿದ ನೀರು….
ಪರಿಚಿತ ಬಳಗವ ತೊರೆದ ಹಕ್ಕಿ
ಅರಿಯದೆ ಹೊಯ್ತು
ತಾಯಿ ಮಡಿಲಿನ ಅಕ್ಕರೆಯ
ಶಕ್ತಿ….
ನೆಲೆನಿಂತಿತು ವಲಸೆ ಹಕ್ಕಿಯ
ನಾಮಾಂಕಿತದಲ್ಲಿ…
ಸನಾತನವಲ್ಲದ ಗೂಡಿನಲ್ಲಿ….
Very nice Akshata, am proud of you