ಅಂಬೇಡ್ಕರ್ ಜಯಂತಿ ವಿಶೇಷ
ಸುಜಾತಾ ರವೀಶ್
ಮಾನವತಾವಾದಿ
ಇಂದಿಗೂ ನಾವು ಜೀವಿಸುತ್ತಿರುವ ಸಮಕಾಲೀನ ಜಗತ್ತು ಅನೇಕ ಸಾಮಾಜಿಕ ಆರ್ಥಿಕ ಸಮಸ್ಯೆಗಳ ಸುಪ್ತ ಜ್ವಾಲಾಮುಖಿ. ಧರ್ಮಾಂಧತೆ ಕೋಮುವಾದ ಭಯೋತ್ಪಾದನೆ ಜಾತೀಯತೆಗಳಂತಹ ಧರ್ಮ ಸಂಬಂಧಿ ಭುಗಿಲುಗಳು, ಅಸಮಾನತೆ ವರ್ಗಸಂಘರ್ಷ ಮೌಢ್ಯತೆ ಭ್ರಷ್ಟಾಚಾರ ಮೊದಲಾದ ಸಾಮಾಜಿಕ ತಲ್ಲಣಗಳು, ನಿರುದ್ಯೋಗ ಸಂಪತ್ತಿನ ಕ್ರೋಢೀಕರಣದಂತಹ ಆರ್ಥಿಕ ಸಮಸ್ಯೆಗಳು, ಮಕ್ಕಳ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಈ ಎಲ್ಲ ಉರಿಗಳು ಸುತ್ತುವರಿದು ಸಮಾಜವನ್ನು ದಹಿಸುತ್ತಿವೆ. .ಮನುಕುಲ ಮುಂದುವರಿದಷ್ಟೂ ವಿದ್ಯಾಭ್ಯಾಸ ಹೆಚ್ಚಾದಷ್ಟೂ ಕಡಿಮೆ ಆಗಬೇಕಿದ್ದ ಈ ಎಲ್ಲವೂ ನಾಗರಿಕತೆಯ ನಾಗಾಲೋಟದಲ್ಲಿ ಬೇರೆ ರೀತಿಯ ಆಯಾಮವನ್ನು ಪಡೆದುಕೊಂಡು ಮತ್ತಷ್ಟು ವಿಜೃಂಭಿಸ ತೊಡಗಿವೆ.
ಸಮಾನತೆ ಹಾಗೂ ಮಾನವತೆಯ ಹರಿಕಾರರಾದ ಅಂಬೇಡ್ಕರರು ಬರೀ ವ್ಯಕ್ತಿಯಾಗದೆ ವ್ಯಕ್ತಿತ್ವವಾಗಿ ರೂಪುಗೊಂಡು ಸಮಾಜದ ಪರಿವರ್ತನೆಗೆ ಮಾರ್ಗ ಪ್ರವರ್ತಕರಾದದ್ದು ಇತಿಹಾಸ ನಿರ್ಮಿಸಿದ ಮಹಾ ಚರಿತ್ರೆ. ಇಂತಹವರ ಜೀವನವನ್ನು ಅರಿಯುವುದು ಸಾಧನೆಯ ಬಗ್ಗೆ ತಿಳಿಯುವುದು ಮತ್ತು ಅವರ ವಿಚಾರಗಳ ಬೆಳಕಿನಲ್ಲಿ ಮುಂದಡಿ ಇಡುವುದು ಇಂದಿನ ಈ ಪ್ರಕ್ಷುಬ್ಧತೆಯ ವಾತಾವರಣದಲ್ಲಿ ಹೆಚ್ಚು ಪ್ರಸ್ತುತ ಹಾಗೂ ಅನಿವಾರ್ಯತೆಯೂ ಹೌದು . ಈ ನಿಟ್ಟಿನಲ್ಲಿ ಅಂಬೇಡ್ಕರರ ಜೀವನ ಆದರ್ಶ ಮತ್ತು ತತ್ವಗಳ ಕಡೆ ಗಮನ ಹರಿಸೋಣವೇ?
ಡಾಕ್ಟರ್ ಬಿ ಆರ್ ಅಂಬೇಡ್ಕರ್ ಮಧ್ಯಪ್ರದೇಶದ ಮಾಹೋ ಮಿಲಿಟರಿ ಕ್ಯಾಂಪಿನಲ್ಲಿ ಮಹಾರ ಜಾತಿಯಲ್ಲಿ ಹುಟ್ಟಿದರು. ಕೀಳು ಜಾತಿ ಎಂಬ ಕಾರಣಕ್ಕೆ ಶಾಲೆಯಲ್ಲಿ ಬಾಗಿಲಿನಾಚೆ ಕುಳಿತುಕೊಂಡು ಶಿಕ್ಷಣ ಪಡೆದರು. ಪ್ರಾಥಮಿಕ ಶಾಲೆಯಲ್ಲಿದ್ದಾಗ ಫೆಂಡ್ಸೆ ಅಂಬೇಡ್ಕರ್ ಎಂಬ ಬ್ರಾಹ್ಮಣ ಶಿಕ್ಷಕರು ಇವರ ಪ್ರತಿಭೆ ಗುರುತಿಸಿ ಊಟ ಬಟ್ಟೆ ಕೊಟ್ಟು ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸಿದರು.ಅವರ ಮೇಲಿನ ಗೌರವದಿಂದ ಅಂಬೇಡ್ಕರ್ ಎಂಬ ಅವರ ಹೆಸರನ್ನು ತಮ್ಮ ಹೆಸರಿಗೆ ಸೇರಿಸಿಕೊಂಡರು ಪ್ರೌಢಶಾಲೆಯಲ್ಲಿ ಸಂಸ್ಕೃತ ಕಲಿಯಲು ಇವರಿಗೆ ಅವಕಾಶ ಸಿಗುವುದಿಲ್ಲ ಅಲ್ಲಿಯೂ ಇವರಿಗೆ ಅಸ್ಪೃಶ್ಯತೆಯ ಅನುಭವವಾಗುತ್ತದೆ. ಹತ್ತನೆಯ
ತರಗತಿಯಲ್ಲಿ ಉತ್ತೀರ್ಣರಾದ ಇವರಿಗೆ ಬುದ್ಧ ಚರಿತೆ ಎಂಬ ಪುಸ್ತಕ ಸಿಗುತ್ತದೆ ಮತ್ತು ಅದನ್ನು ಓದಿ ಪ್ರಭಾವಿತರಾಗುತ್ತಾರೆ. ಹದಿನೇಳನೇ ವಯಸ್ಸಿನಲ್ಲಿ ರಮಾಬಾಯಿ ಅವರೊಂದಿಗೆ ವಿವಾಹವಾಗುತ್ತದೆ. . ಆನಂತರ ಬಿಎ ಮುಗಿಸಿ ಬರೋಡ ಸಂಸ್ಥಾನದಲ್ಲಿ ಲೆಫ್ಟಿನೆಂಟ್ ಆಗಿ ಸೇರುತ್ತಾರೆ. ನಂತರ ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ಓದಲು ವಿದ್ಯಾರ್ಥಿ ವೇತನ ಪಡೆದು ಎಂಎ ಪದವಿ ಪಡೆಯುತ್ತಾರೆ. ಮತ್ತು ಅಂತಾರಾಷ್ಟ್ರೀಯ ಸಮಾಜಶಾಸ್ತ್ರೀಯ ವಿಚಾರ ಸಂಕಿರಣದಲ್ಲಿ ಭಾರತೀಯ ಜಾತಿಗಳು ಎಂಬ ಪ್ರಬಂಧ ಮಂಡಿಸುತ್ತಾರೆ. ನಂತರ ಮರಳಿ ಬಂದು ಕಾಲೇಜು ಉಪನ್ಯಾಸಕರಾಗಿದ್ದು ಕೂಡಿಟ್ಟ ಹಣ ಮತ್ತು ವಿದ್ಯಾರ್ಥಿ ವೇತನ ಪಡೆದು ಲಂಡನ್ನಿನಲ್ಲಿ ಅಧ್ಯಯನ ಮಾಡುತ್ತಾರೆ ಹೀಗೆ ಲಾ ಪದವಿಯನ್ನು ಪಡೆಯುತ್ತಾರೆ ಅವರು ಪಡೆದ ಸ್ನಾತಕೋತ್ತರ ಪದವಿಗಳು ಮತ್ತು ಮಂಡಿಸಿದ ಪಿಎಚ್ಡಿ ಪ್ರಬಂಧಗಳು ಅಸಂಖ್ಯಾತ. ಇಷ್ಟೆಲ್ಲಾ ಆದರೂ ಅಂಬೇಡ್ಕರ್ ಅವರು ಅತ್ಯಂತ ಸ್ಮರಣೀಯರಾಗುವುದು ಅಸ್ಪೃಶ್ಯತೆಯ ವಿರುದ್ಧದ ಹೋರಾಟ ಹಾಗೂ ಸಂವಿಧಾನ ರಚನೆಯಲ್ಲಿ. ೧೯೨೭ ರಿಂದ ೧೯೩೨ವರೆಗೆ ಅಹಿಂಸಾತ್ಮಕ ಆಂದೋಲನಗಳ ಮುಂದಾಳತ್ವ ವಹಿಸಿ ಅಸ್ಪೃಶ್ಯರ ದೇವಾಲಯ ಪ್ರವೇಶದ ಹಕ್ಕು ಸಾರ್ವಜನಿಕ ಕೆರೆ ಬಾವಿಗಳಿಂದ ನೀರು ಸೇದುವ ಹಕ್ಕು ಇತ್ಯಾದಿಗಳಿಗೆ ಹೋರಾಡಿದರು. “ಬಹಿಷ್ಕೃತ ಭಾರತ” ಎಂಬ ಪತ್ರಿಕೆಯನ್ನು ಪ್ರಾರಂಭಿಸುತ್ತಾರೆ . ಲಂಡನ್ನಲ್ಲಿ ನಡೆದ ದುಂಡು ಮೇಜಿನ ಸಮ್ಮೇಳನದಲ್ಲಿ ದಲಿತ ಪ್ರತಿನಿಧಿಯಾಗಿ ಭಾಗವಹಿಸಿ ದಲಿತರಿಗೆ ಮತದಾನದ ಸೌಲಭ್ಯ ದೊರಕಿಸಿ ಕೊಡುತ್ತಾರೆ ಮುಂದೆ ಹಿಂದೂ ಧರ್ಮದಲ್ಲಿ ಉಳಿಯುವುದಿಲ್ಲವೆಂದು ಬೌದ್ಧ ಧರ್ಮಕ್ಕೆ ಮತಾಂತರ ಹೊಂದುತ್ತಾರೆ. ಸಂವಿಧಾನದ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, ನಂತರ ನೆಹರು ಸಚಿವ ಸಂಪುಟದಲ್ಲಿ ಕಾನೂನು ಸಚಿವರಾಗಿದ್ದಾಗ ಸಂವಿಧಾನ ರಚಿಸುವ ಜವಾಬ್ದಾರಿ ಹೊತ್ತು ಸಂವಿಧಾನ ಶಿಲ್ಪಿ ಎಂಬ ಮನ್ನಣೆಗೆ ಪಾತ್ರರಾದರು. ಸಮಾನತೆಯ ತತ್ವದಲ್ಲಿ ಶೋಷಿತ ವರ್ಗವನ್ನು ಸಮಾಜದ ಮುಖ್ಯವಾಹಿನಿಗೆ ತರಲು ಜೀವನವಿಡೀ ಶ್ರಮಪಟ್ಟರೂ ತಾವೇ ಶೋಷಿತರಾಗಿದ್ದ ಅನುಭವದ ಹಿನ್ನೆಲೆಯಲ್ಲಿ ಅಂಬೇಡ್ಕರರಿಗಿಂತ ಸಮಾನತೆಯ ಅವಶ್ಯಕತೆ ಅನಿವಾರ್ಯತೆ ಅರಿತವರು ಇನ್ಯಾರಿದ್ದಾರೆ? ಇಲ್ಲಿ ಶೋಷಿತರೆಂದರೆ ಜಾತಿ ಮುಖೇನ ಶೋಷಿತರು ಮಾತ್ರವಲ್ಲದೆ ಆರ್ಥಿಕ ಕೆಳಮಟ್ಟದವರನ್ನು ಮತ್ತು ಮಹಿಳೆಯರನ್ನು ಸಮಾನತೆಯ ಸ್ತರಕ್ಕೆ ಕೊಂಡೊಯ್ಯುವ ಕೆಲಸ ನಡೆಯಿತು. ಮಹಿಳೆಯರಿಗೆ ಸಮಾನ ವೇತನದ ಪರಿಕಲ್ಪನೆ ಆಚರಣೆ ಅಂಬೇಡ್ಕರರ ದೂರದೃಷ್ಟಿಯ ಫಲವೇ. ಹಾಗೆಯೇ ಆರ್ಥಿಕವಾಗಿ ಕೆಳಮಟ್ಟದಲ್ಲಿದ್ದವರಿಗೆ ಕೆಲವೊಂದು ವಿನಾಯಿತಿ ವಿಶೇಷ ಸೌಲಭ್ಯಗಳು ಸಹ ಇವರದೇ ಪುರೋಗಾಮಿ ಯೋಚನೆಗಳ ಫಲ. ೨೧ ವೈಚಾರಿಕ ಪ್ರಬಂಧಗಳು ೮ ಪ್ರಮುಖ ಕೃತಿಗಳು ೨ ಸಂಶೋಧನಾ ಪ್ರಬಂಧಗಳನ್ನು ಸಾರಸ್ವತ ಲೋಕಕ್ಕೆ ಕೊಡುಗೆ ಕೊಟ್ಟರು. “ಪ್ರಜಾಪ್ರಭುತ್ವ ಎಂದರೆ ಸರ್ಕಾರದ ಒಂದು ರೂಪವಲ್ಲ ಅದು ಪ್ರಮುಖವಾಗಿ ಸಹಬಾಳ್ವೆಯ ಸೊಗಸು ಮತ್ತು ಅನುಭವವನ್ನು ಪರಸ್ಪರ ದಟ್ಟೈಸುವ ಜೋಡಣೆ ಮೂಲಭೂತವಾಗಿ ಅದು ಸಹವರ್ತಿಗಳೇ ತೋರುವ ಗೌರವಾದರ ಭಾವನೆ” ಎಂಬುದು ಇವರ ಅಭಿಪ್ರಾಯ ಜೀವನದ ಕಡೆ ಕ್ಷಣದಲ್ಲಿಯೂ ಅಂದುಕೊಂಡದ್ದನ್ನು ಸಾಧಿಸಲಾಗಲಿಲ್ಲವೆಂದು ನೊಂದು ತಮ್ಮ ತತ್ವ ಆದರ್ಶಗಳಿಗಾಗಿ ತುಡಿಯುತ್ತಾ ಕೊನೆಯುಸಿರು ಎಳೆದವರು ಈ ಮಹಾನ್ ಮಾನವತಾವಾದಿ ಭಾರತ ಸರ್ಕಾರ ಇವರಿಗೆ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿ ಕೊಟ್ಟಿದೆ.
ಇವರು ಬರೀ ವ್ಯಕ್ತಿಯಾಗದೇ ಒಂದು ಸಂಸ್ಥೆಯಾಗಿ ಬೆಳೆದ ವಿಸ್ಮಯ ಲೋಕದೆದುರು ಅನಾವರಣವಾಗಿದೆ. ಬುದ್ಧ ಹಾಗೂ ಬಸವಣ್ಣನವರು ಶೋಷಿತ ವರ್ಗ ಆಗದಿದ್ದರೂ ತುಡಿವ ಹೃದಯವಿದ್ದವರು . ಇನ್ನು ಅಂಬೇಡ್ಕರರು ಶೋಷಿತ ವರ್ಗದ ಪ್ರತಿನಿಧಿಯಾಗಿ ಆ ತುಮುಲವನ್ನು ಸ್ವತಃ ಅನುಭವಿಸಿ ಅರ್ಥೈಸಿ ಕೊಂಡವರಾಗಿದ್ದರು. ಬುದ್ಧ ವ್ಯಕ್ತಿ ಅಂತರಾತ್ಮನ ಕರೆಯನ್ನು ಆಲಿಸಿ ತನ್ನೊಳಗಿನಿಂದ ಜಾಗೃತನಾಗಿ ಸಮಾಜದ ಅಭಿವೃದ್ಧಿಗೆ ಕಾರಣನಾಗಬೇಕೆಂದು ಹೇಳುತ್ತಾನೆ .ಬಸವಣ್ಣನವರು ತಾರತಮ್ಯ ಭಾವ ನೀಗಿಸಿ ಸಮಾನತೆ ತರುವ ನಿಟ್ಟಿನಲ್ಲಿ ಸಮಾಜದ ಒಳಿತಿಗಾಗಿ ಕರೆ ನೀಡಿ ಸಮುದಾಯವನ್ನು ತಮ್ಮೊಂದಿಗೆ ಕರೆದೊಯ್ಯುವ ಪ್ರಯತ್ನ ಪಡುತ್ತಾರೆ. . ದಮನಿತ ವರ್ಗದ ರಾಯಭಾರಿಯಾಗಿ ಪ್ರಸ್ತುತ ಸಮಾಜದಲ್ಲಿ ಸಮಾನತೆಯ ಹಕ್ಕು ಕಲ್ಪಿಸಲು ಸೈದ್ಧಾಂತಿಕವಾಗಿ ಅಂಬೇಡ್ಕರರು ಪ್ರಯತ್ನಿಸುತ್ತಾರೆ. ವ್ಯಕ್ತಿ ಸಮಾಜ ಹಾಗೂ ಸಮಷ್ಥಿಗಳ ಕ್ರೋಢೀಕೃತ ಪ್ರಯತ್ನದಿಂದಲೇ ಸಫಲತೆ ಸಾಧ್ಯ . ಉನ್ನತ ವಿಚಾರ ಮಟ್ಟವಿದ್ದರೂ ರಾಜ ಕೃಪೆ ಇರದೆ ಬಸವ ಧರ್ಮ ಗೆಲುವು ಸಾಧಿಸಲಾಗಲಿಲ್ಲ . ಹಾಗಾಗಿಯೇ ಅಂಬೇಡ್ಕರರು ಬರೀ ಜನಜಾಗೃತಿಯಲ್ಲಿ ಇದು ಅಸಾಧ್ಯವೆಂದು ಮನಗಂಡು ಸರಕಾರದ ಕಾನೂನಿನ ಸಹಕಾರವೂ ಅಗತ್ಯವೆಂದು ತಿಳಿದೇ ಈ ಸಮಾನತೆಯನ್ನು ಸಂವಿಧಾನಿಕ ಚೌಕಟ್ಟಿನಲ್ಲಿಯೇ ತರುವ ಪ್ರಯತ್ನ ಮಾಡಿ ಸಫಲರಾಗಿದ್ದು. ಅವರ ಕಾರ್ಯದ ಫಲ ಇಂದಿನ ಸಾಮಾಜಿಕ ಆರ್ಥಿಕ ಹಾಗೂ ರಾಜಕೀಯ ವಲಯಗಳಲ್ಲಿ ಪ್ರತಿಬಿಂಬಿತ ವಾಗುತ್ತಿರುವುದನ್ನು ಎಲ್ಲರೂ ಕಾಣುತ್ತಿದ್ದೇವೆ ಹಾಗೂ ಮನಗಂಡಿದ್ದೇವೆ ಅಲ್ಲವೇ ?
ಹೀಗಾಗಿ ಈ ಪ್ರಾತಃಸ್ಮರಣೀಯರ ಸಾಧನೆ ಬಾಳಿಗೊಂದು ಪಾಠವಾಗಲಿ ಎಂದು ಬಯಸುತ್ತಾ “ಸರ್ವೇ ಜನಾಃ ಸುಖಿನೋ ಭವಂತು” ಎಂಬ ಆಶಯ.