ಅಂಕಣ ಸಂಗಾತಿ

ಸುತ್ತ-ಮುತ್ತ

ಸುಜಾತಾ ರವೀಶ್

ಪ್ರಸಕ್ತ ಅಂತರ್ಜಾಲ ಸಾಹಿತ್ಯ

ಇಂದಿನ ಯುಗದ ಮುಖ್ಯ ಆಕರ್ಷಣೆ ಸಾಮಾಜಿಕ ಜಾಲತಾಣಗಳೆಂದರೆ ಅದು ಅತಿಶಯೋಕ್ತಿಯಲ್ಲ . ಇವು ಬರಹಗಾರರ ಒಂದು ದೊಡ್ಡ ಪಡೆಯನ್ನೆ ಕಟ್ಟಿದೆ ಬೆಳೆಸುತ್ತಿದೆ .ಒಂದು ಸೀಮಿತ ವರ್ಗದ ಓದುಗರಿರುವ .ವಾಟ್ಸಾಪ್ ಫೇಸ್ ಬುಕ್ ನಲ್ಲಿನ ಸಾಹಿತ್ಯಿಕ ಗುಂಪುಗಳು ಕನ್ನಡ ಸಾಹಿತ್ಯಕ್ಕೆ ತಮ್ಮದೇ ರೀತಿಯ ಕೊಡುಗೆಯನ್ನು ಸಲ್ಲಿಸುತ್ತಿರುವುದನ್ನು ನಿರಾಕರಿಸುವಂತಿಲ್ಲ. ಮನೆಯ ನಾಲ್ಕು ಗೋಡೆಗಳ ಪರಿಮಿತಿಯಲ್ಲಿ ಸಹ ಓದುಗರ ನಡುವೆ ಸಂಭವಿಸಬಹುದಾದಂಥ ಸಂವಹನ, ವಾಚನಾಭಿರುಚಿಯ ಚಿನ್ನದಂತಹ ಅವಕಾಶಗಳನ್ನು ಈ ಅಂತರ್ಜಾಲ ತಾಣಗಳು ಸುನಾಯಾಸವಾಗಿ ನೀಡುತ್ತಿವೆ ಎನ್ನುವುದನ್ನು ಮರೆಯಬಾರದು.ಬಹಳ ಸುಲಭ ಮತ್ತು ಜನಪ್ರಿಯ ಪ್ರವರ್ಗದ ಈ ಅಂತರ್ಜಾಲ ಸಾಹಿತ್ಯದ ಕೃಷಿಗೆ ಮಹತ್ವದ ಅವಕಾಶಗಳ ಸೃಜನೆಗೆ ಅವಕಾಶವಿದೆಯಾದರೂ ಕೃತಿಚೌರ್ಯ ಕದಿಯುವ ಬರಹಗಳ ಹಾವಳಿಯೂ ಶಾಂತಿಗೆ ಭಂಗ ತರುವುದನ್ನೂ ನಾವು ಲಕ್ಷಿಸಬೇಕಾಗಿದೆ .ಮನೆಯ ಕೆಲಸಗಳ ಮಧ್ಯೆ ಬಿಡುವು ಸಿಕ್ಕಾಗ ಮಹಿಳೆ ಗೃಹಿಣಿಯ ಬಾಧ್ಯತೆ ಅಷ್ಟೇ ಸೀಮಿತವಾಗದೇ ರಚನಾತ್ಮಕವಾಗಿ ಮತ್ತು ಆರಾಮವಾಗಿ ತನ್ನ ಆಲೋಚನೆ ಅಭಿವ್ಯಕ್ತಿ ಸಲೀಸಾಗಿ ಸಾಹಿತ್ಯದ ರೂಪದಲ್ಲಿ ಬರವಣಿಗೆಗೆ ರೂಪ ನೀಡಲು ಈ ಅಂತರ್ಜಾಲ ತಾಣಗಳು ಮುಕ್ತವಾದ ಅವಕಾಶಗಳನ್ನು ಒದಗಿಸುತ್ತಲಿವೆ . ಈ ಸಾಹಿತ್ಯ ಪ್ರವರ್ಗ ಪ್ರಸಕ್ತ ಜನಪ್ರಿಯವಾಗಿರುವ ಮಾಧ್ಯಮ ಅದರದೇ ಆದಂತಹ ಕೆಲವು ಅಡೆತಡೆ ಇತಿಮಿತಿಗಳಿದ್ದರೂ ವೃತ್ತಿ ಗೃಹಕೃತ್ಯಗಳ ನಡುವೆ ಕಿಂಚಿತ್ತಾದರೂ ಬರೆಯುವ ಓದುವ ಹವ್ಯಾಸಕ್ಕೆ ನೀರೆರೆಯುತ್ತಿವೆ ಎಂದರೆ ತಪ್ಪಲ್ಲ.

ಆದರೂ ಈ ಅಂತರ್ಜಾಲ ಸಾಹಿತ್ಯದ ಪ್ರಯೋಜನ ಬಹಳವೇ. ಕಾಗದದಲ್ಲಿ ಕಾಪಿ ಮಾಡಿ ಕವರ್ ಗಳಿಗೆ ಹಾಕಿ ಸ್ಟ್ಯಾಂಪ್ ಹಚ್ಚಿ ಅಂಚೆ ಕಚೇರಿಗಳಿಗೆ ಹೋಗಿ ಪೋಸ್ಟ್ ಮಾಡುವ ಕಷ್ಟ ಇಲ್ಲ. ಎಲ್ಲವೂ ವಾಟ್ಸಾಪ್ ಇ ಮೇಲ್ಗಳ ಮೂಲಕವೇ.ಬರೆಯುವ ಅಭ್ಯಾಸವು ಈಗ ಉಕ್ತ ಲೇಖನ ಆಪ್ ಉಪಯೋಗದ ಮೂಲಕ ಕಡಿಮೆಯಾಗುತ್ತಿದೆ . ಕೈ ಬೆರಳುಗಳ ಒತ್ತುವಿಕೆಯಲ್ಲಿ ಎಷ್ಟು ಪತ್ರಿಕೆಗಳಿಗಾದರೂ ಬೇಗವೂ ಕಳಿಸಬಹುದು. ಪುಸ್ತಕ ಹಾಳೆಗಳಿಗೆ ಸ್ಟ್ಯಾಂಪ್ ಗಳಿಗೆ ಹಣ ಖರ್ಚು ಮಾಡುವ ಪ್ರಮೇಯವೇ ಇಲ್ಲ ನೆಟ್ ಪ್ಯಾಕ್ ಅಂತು ಇದ್ದೆ ಇರುತ್ತದೆ. ಸಂಗ್ರಹವೂ ಸಹ ಗೂಗಲ್ನಲ್ಲಿಯೇ ಮಾಡಿಟ್ಥರೆ ಮೊಬೈಲ್ ಹಾಳಾದರೆ ಎಲ್ಲಾ ಹೋಯಿತು ಅಂದುಕೊಳ್ಳುವ ಹಾಗಿಲ್ಲ.ಅಷ್ಟು ಸುರಕ್ಷಿತ. ಹೆಚ್ಚಾಗಿ ಗೃಹಿಣಿಯರಿಗೆ ವಿದ್ಯಾರ್ಥಿಗಳಿಗೆ ಒಟ್ಟಿನಲ್ಲಿ ಮಹಿಳೆಯರಿಗೆ ಇದೊಂದು ವರದಾನವೇ ಆಗಿ ಪರಿಣಮಿಸಿ ಬರೆಯುವ ಪ್ರತಿಭೆ ಇರುವವರೆಲ್ಲ ತಮ್ಮ ಅಭಿವ್ಯಕ್ತಿ ಕೌಶಲ್ಯವನ್ನು ಇಲ್ಲಿ ತೋರಿಸಲು ತೊಡಗಿದ್ದಾರೆ, ನಿಜಕ್ಕೂ ಇದೊಂದು ಒಳ್ಳೆಯ ಬೆಳವಣಿಗೆಯೇ ಸರಿ.

ಈ ಅಂತರ್ಜಾಲ ಸಾಹಿತ್ಯದ ವಿವಿಧ ಪ್ರಕಾರಗಳೆಂದರೆ ಮೊಟ್ಟ ಮೊದಲಿಗೆ ಫೇಸ್ಬುಕ್ ವಾಟ್ಸಾಪ್ ವೈಯುಕ್ತಿಕ ಬ್ಲಾಗ್ ಗಳು ಆಪ್ಗಳು ಪ್ರತಿಲಿಪಿ ಯುವರ್ ಕೋರ್ಟ್ ಮಾಮ್ಸ್ ಪ್ರಸೋ ಇತ್ಯಾದಿ. ಬರೆಯಲು ವಿಷಯಗಳನ್ನು ಸೂಚಿಸುವುದಷ್ಟೇ ಅಲ್ಲದೆ ಬರಹಗಳಿಗೆ ಕೆಲವೊಂದು ಬಾರಿ ಸೂಕ್ತ ಸಂಭಾವನೆ ಎದುರೆತು ಒಂದು ಸಂಪಾದನೆಗೆ ದಾರಿಯೂ ಆಗುವುದಿಲ್ಲ ಮನೆಯಲ್ಲೇ ಕುಳಿತು ತಮ್ಮ ಕರ್ಚನ್ನಾದರೂ ಸಂಪಾದಿಸಿಕೊಳ್ಳಬಹುದು ಇನ್ನೊಬ್ಬ ಗೃಹಿಣಿಯರಿಗಂತು ಇದು ಹೇಗೆ ಇವುಗಳು ಹೇಳಿ ಮಾಡಿಸಿದಂತದ್ದು. ಕೆಲವೊಮ್ಮೆ ಯೂಟ್ಯೂಬ್ ಚಾನಲ್ ಗಳನ್ನು ಮಾಡಿಯೂ ಜನಪ್ರಿಯವಾಗಬಹುದು ಮನೆಯಲ್ಲಿ ಕುಳಿತು ಕ್ಲಬ್ ಹೌಸ್ ಜೂಮ್ ಮತ್ತು ಗೂಗಲ್ ಆಪ್ ಗಳ ಮೂಲಕ ಕವಿಗೋಷ್ಠಿ ವಿಚಾರ ಸಂಕಿರಣ ಪ್ರಬಂಧ ಮಂಡನೆಗಳು ಸಹ ಈಗ ಸಾಧ್ಯ ಬಹಳ ಜನರಿಗೆ ಇದು ಉಪಯುಕ್ತವಾಗಲು ಆರಂಭಿಸಿದೆ. ಕೌಟುಂಬಿಕ ಜವಾಬ್ದಾರಿಗಳು ಮತ್ತು ಇತರ ಸಮಸ್ಯೆಗಳಿಂದ ಮನೆಯಿಂದ ಹೊರಗೆ ಹೋಗಿ ಇಂತಹ ಗೋಷ್ಠಿಗಳಲ್ಲಿ ಪಾಲ್ಗೊಳ್ಳಲು ಆಗದಿರುವ ಬರಿಗಂಟು ಇದು ನಿಜಕ್ಕೂ ವರದಾನವೇ ಸರಿ.

ನಾನು ಸಹ ಈ ರೀತಿ ಅಂತರ್ಜಾಲದಲ್ಲಿಯೇ ಬರೆಯಲು ಆರಂಭಿಸಿದ್ದು ಮೊದಲಿಗೆ ಒಂದು ವಾಟ್ಸಪ್ ಗ್ರೂಪಿನಲ್ಲಿ ಕವನಗಳನ್ನು ಬರೆದು ಅಲ್ಲಿ ತೆರೆದ ಸ್ಪಂದನಗಳಿಗೆ ಪ್ರೋತ್ಸಾಹ ದೊರೆತು ಮುಂದುವರೆಸಿದ ಹವ್ಯಾಸ ಇದು ನಂತರ ಫೇಸ್ಬುಕ್ನಲ್ಲಿ ಅನೇಕ ಸಾಹಿತ್ಯಕ ಗುಂಪುಗಳು ಆರಂಭವಾಗಿ ವಿವಿಧ ರೀತಿಯ ಥೀಮ್ ಗಳು ಮತ್ತು ಸ್ಪರ್ಧೆಗಳು ಆರಂಭ ವಾದಾಗ ಬರಹಕ್ಕೆ ಇನ್ನು ಹೆಚ್ಚಿನ ಚಾಲನೆಗಳು ದೊರೆತವು. ಇಲ್ಲಿನ ಅಕ್ಷರ ಚಪ್ಪರ ನಮ್ಮ ಸಾಹಿತ್ಯೋತ್ಸವ ಅಲ್ಲದೆ ಇನ್ನೂ ಎಷ್ಟೋ ಬಳಗ ಗಳು ಕನ್ಲಡ ಸಾಹಿತ್ಯಕ್ಕೆ ಪ್ರೋತ್ಸಾಹ ನೀಡುತ್ತಿವೆ.

ಸ್ಪರ್ಧೆಯ ವಿಷಯಕ್ಕೆ ಬಂದಾಗ ಇತ್ತೀಚೆಗೆ ಕೇಳಿಬಂದ ಒಂದು ಪ್ರತಿಕ್ರಿಯೆಯ ಬಗ್ಗೆ ಹೇಳಲು ಇಷ್ಟ ಪಡುವೆ. ಕವಿ ಕಾವ್ಯ ರಚನೆ ಎಂದರೆ ಅದು ಒಂದು ಸ್ವಾಭಾವಿಕ ಪ್ರಸವದ ಹಾಗೆ . ಕೊಟ್ಟ ಥೀಮ್ ವಿಷಯ ಅಥವಾ ಚಿತ್ರದ ಬಗ್ಗೆ ಬರೆಯುವುದು ಸಹಜವೇ ಅನ್ನೋ ಪ್ರಶ್ನೆ ಬಂತು. ಕೆಲವರಿಗೆ ಅದು ಸಾಧ್ಯವಿಲ್ಲದಿರಬಹುದು . ವ್ಯಕ್ತಿಯಿಂದ ವ್ಯಕ್ತಿಗೆ ಅದು ಬೇರೆ ಆಗಲೂಬಹುದು . ಆದರೆ ಬರೆಯಬೇಕೆಂಬ ತುಡಿತವಿರುವ ವ್ಯಕ್ತಿ ಹೊರಗಿನ ಜಗತ್ತಿಗೆ ಸ್ಪಂದಿಸಲೇಬೇಕು. ಅದರ ಬಗ್ಗೆ ಬರೆಯಲೇಬೇಕು. ಬರಿ ಮನದಾಳದ ಭಾವ ಹಾಗೂ ಒಳಗಿನ ಸ್ಪೂರ್ತಿಯ ಚಿಲುಮೆ ಕಾಯುತ್ತಾ ಕೂರುವುದಿಲ್ಲ. ಪ್ರಸಿದ್ದ ಅಮೇರಿಕನ್ ಬರಹಗಾರ ರಾಲ್ಫ್ ಕೇಯ್ಸ್ ಅವರು ಹೇಳುವ ಪ್ರಕಾರ

serious writers write inspired or not. over time they discover that routine is better friend than inspiration.

ಅಲ್ಲದೆ ಹೊಸದಾಗಿ ಬರೆಯಲು ಆರಂಭಿಸಿದವರಿಗೆ ಅಥವಾ ಬರೆಯಲು ಒಂದು ನಿರ್ದಿಷ್ಟ ಗುರಿ ಇಲ್ಲದವರಿಗೆ ಈ ರೀತಿ ಒಂದು ವಿಷಯ ಪದ ಅಥವಾ ಚಿತ್ರ ಕೊಟ್ಟಾಗ ಅವರಿಗೆ ದಿಕ್ಸೂಚಿಯಾಗುತ್ತದೆ ಬರೆಯಲು ಹೊಸ ವಿಷಯ ಸಿಕ್ಕಿದಂತಾಗುತ್ತದೆ . ನಾನು ಸಾಹಿತ್ಯೋತ್ಸವ ಎಂಬ ಫೇಸ್ಬುಕ್ ಗುಂಪಿನ ನಿರ್ವಾಹಕಿ ಹಾಗೂ ಪ್ರತಿ ಶುಕ್ರವಾರ ಪದ ಪದ್ಯೋತ್ಸವ ಎಂಬ ಸ್ಪರ್ಧೆಯಡಿ ಪದಗಳನ್ನು ಕೊಟ್ಟು ಕವಿತೆ ಬರೆಯಲು ಸೂಚಿಸುತ್ತೇನೆ. ಹಾಗೆ ಬರೆದ ಕವನಗಳು ತಮ್ಮ ಇತ್ತೀಚಿನ ಸಂಕಲನದಲ್ಲಿ ಹೆಚ್ಚು ಪ್ರಕಟವಾಗಿದೆ ಎಂದು
ತುಂಬಾ ಕವಿಮಿತ್ರರು ಹೇಳಿದಾಗ ತುಂಬಾ ಸಂತೋಷವಾಗಿದೆ ಹಾಗೂ ಒಂದು ರೀತಿಯ ಮಾರ್ಗದರ್ಶನ ತೋರಿದ ತೃಪ್ತಿ ಸಿಕ್ಕಿದೆ.

ಹಾಗಾದರೆ ಸಾಹಿತ್ಯ ರಚನೆಯ ಉದ್ದೇಶ ಏನು? ಬೇಂದ್ರೆಯವರು ಹೇಳ್ತಾರೆ

ನನ್ನ ಪಾಡೆನಗಿರಲಿ ಅದರ ಹಾಡನಷ್ಟೇ ನೀಡುವೆನು ರಸಿಕ ನಿನಗೆ
ಕಲ್ಲು ಸಕ್ಕರೆಯಂತ ನಿನ್ನೆದೆಯು ಕರಗಿದರೆ ಆ ಸವಿಯ ಹಣಿಸು ನನಗೆ

ಕವಿಗೆ ತನ್ನ ದುಃಖವನ್ನು ಅಡಗಿಸಿಕೊಂಡು ಓದುಗನಿಗೆ ತನ್ನೆದೆಯ ಸಂತೋಷವನ್ನಷ್ಟೇ ಹಂಚುವ ಬಯಕೆ ಸಹೃದಯಿ ಓದುಗ ಪದಗಳ ಹಿಂದಿನ ಭಾವವನ್ನು ಅರ್ಥೈಸಿಕೊಂಡು ಕವಿಯ ಮನವನ್ನು ಅರಿಯಲು ಬಯಸುತ್ತಾನೆ.

ಹಾಗಾಗಿ ಇದು ಒಂದು ಕೊಡುಕೊಳ್ಳುವಿಕೆಯ ಪ್ರಕ್ರಿಯೆ ಪ್ರತಿಕ್ರಿಯೆ ಬಯಸುವ ಪ್ರಯೋಗ. ಒಂದು ಪುಸ್ತಕವನ್ನು ಓದಿದಾಗ ಅಥವಾ ಪತ್ರಿಕೆಯಲ್ಲಿ ಬರಹ ಓದಿದಾಗ ಕ್ಷಣಕ್ಕೆ ಓದುಗನ ಪ್ರತಿಕ್ರಿಯೆ ಬರಹಗಾರನಿಗೆ ತಿಳಿಯುವುದಿಲ್ಲ ಈ ಅಂತರ್ಜಾಲ ಮಾಧ್ಯಮದ ಒಂದು ಮುಖ್ಯ ಅನುಕೂಲವೆಂದರೆ ಓದುಗರ ಪ್ರತಿಕ್ರಿಯೆ ತಕ್ಷಣಕ್ಕೆ ಲಭ್ಯ. ತಪ್ಪುಗಳನ್ನು ತಿದ್ದಿಕೊಳ್ಳಲು ಸಾಧ್ಯ ಮನಸ್ಸಿದ್ದರೆ. ಆದರೆ ಈ ಪ್ರಮುಖ ಅನುಕೂಲತೆ ಒಂದು ಮುಖ್ಯ ಅನಾನುಕೂಲವಾಗುವುದು ಸಹ ವಿಪರ್ಯಾಸ. ಏಕೆಂದರೆ ಇಲ್ಲಿ ವಸ್ತುನಿಷ್ಠ ವಿಮರ್ಶೆಯಾಗಲಿ ಪ್ರತಿಕ್ರಿಯೆ ಆಗಲಿ ಪ್ರಾಮಾಣಿಕವಾಗಿ ದೊರಕುವುದು ಕಷ್ಟ ಒಂದು ಲೈಕ್ ಒತ್ತಿ ಅಥವಾ ಸೂಪರ್ ಎಂದು ಹೇಳಿದರೆ ಮುಗಿದು ಹೋಯಿತು ಅಬ್ಬಬ್ಬ ಎಂದರೆ ಮತ್ತೆ ಕೆಲವು ಸಾಲುಗಳ ಹೊಗಳಿಕೆ ಇರಬಹುದು ಆದರೆ ವಿಮರ್ಶಾತ್ಮಕವಾಗಿ ಓದಿ ಸಲಹೆ ತಿಳಿಸುವರು ಕಡಿಮೆ ಆ ಕಾರ್ಯ ನಡೆದರೆ ಇದನ್ನು ಒಂದು ಮುಖ್ಯ ಸಂವಹನ ವಾಗಿ ಮಾರ್ಪಟ್ಟು ಬರಹಗಾರನಿಗೆ ತುಂಬಾ ಒಳಿತು.

ಪ್ರತಿಕ್ರಿಯೆಗಳು ಸಾಮಾನ್ಯವಾಗಿ ಪ್ರಾಮಾಣಿಕವಾಗಿರಲ್ಲ ಅಂತ ಹೇಳಿದ್ದು ಏಕೆಂದರೆ ಎಷ್ಟೋಬಾರಿ ಪೂರ್ವಾಗ್ರಹ ಪೀಡಿತವಾಗಿರುತ್ತದೆ .ಇವರು ಪ್ರಸಿದ್ಧ ಕವಿ ಕವನ ಚೆನ್ನಾಗಿಯೇ ಇರುತ್ತದೆ ಎಂಬ ಭಾವನೆ ಅಥವಾ ಇವರೇನು ಬರೆಯುತ್ತಾರೆ ಮಹಾ ಅನ್ನೋ ಭಾವನೆ ಇದ್ದರೆ, ಕೆಲವರದು ನೋಡಿಯೂ ಸುಮ್ಮನೆ ಮುಂದೆ ಸಾಗುವ ಮನೋಭಾವದ ಜಾಣ ಕುರುಡರು . ಇಷ್ಟೆಲ್ಲದರ ಮಧ್ಯೆ ಅವರವರದೇ ಗುಂಪು ರಚಿಸಿ ತಮ್ಮ ತಮ್ಮವರನ್ನೇ ಹೊಗಳುವ ಹೊಗಳುಭಟ್ಟರ ಜಾತ್ರೆಗಳು ಬೇರೆ. ಅವರ ಗುಂಪಿಗೆ ಹೊರಗಸದವರನ್ನು ಹೊಗಳಬಾರದೆಂದು ಕೆಲವೊಮ್ಮೆ ಶಪಥ ಮಾಡಿದ್ದಾರೇನೋ ಅನ್ನಿಸುವಷ್ಟು ಮೌನ.

ಹೋಗಲಿ ಬಿಡಿ ತಲೆ ಅಥವಾ ಪ್ರತಿಕ್ರಿಯೆಗಳಿಗೆ ತಲೆ ಕೆಡಿಸಿಕೊಳ್ಳಬೇಡಿ ಎಂದರೆ ಹಾಕುವ ಉದ್ದೇಶವೇ ಬೇರೆಯವರು ಓದಲು ಎಂದು ತಾನೇ ಇಲ್ಲದಿದ್ದರೆ ನಮ್ಮ ನೋಟ್ ಬುಕ್ ಡೈರಿಗಳಲ್ಲೇ ಇದ್ದರೆ ಸಾಕಿತ್ತು ಅನ್ನುವ ವಾದ ಹೀಗಾಗಿ ಬಹಳ ಬಾರಿ ಲೈಕ್ ಮತ್ತು ಕಾಮೆಂಟ್ಗಳ ಆಧಾರದ ಮೇಲೆ ತಾವು ಉತ್ತಮ ಕವಿಗಳು ಎಂದು ಎನ್ನುವ ಭಾವನೆಯೂ ಕೆಲವರದು.

ಆದರೆ ಸ್ಪರ್ಧೆಗಳೆಂದರೆ ಆ ಸಮಯದ ತೀರ್ಪುಗಾರರ ಮನಸ್ಥಿತಿಯ ಮೇಲೆ ಅವಲಂಬಿಸಿರುತ್ತೆ. ಅಷ್ಟೇ ಅಲ್ಲದೆ ಕೆಲವೊಂದು ನಿಯಮಗಳಡಿಯಲ್ಲಿ ಪೂರ್ತಿ ಸೃಜನಾತ್ಮಕತೆ ಸಾಧ್ಯವಾಗಿರುವುದಿಲ್ಲ. ಹಾಗಾಗಿಯೇ ಫಲಿತಾಂಶವಾಗಲಿ ಅಥವಾ ಪೋಸ್ಟ್ ಗೆ ಬೀಳುವ ಲೈಕು ಕಾಮೆಂಟುಗಳಾಗಲಿ ಎಂದಿಗೂ ಗುಣಮಟ್ಟದ ಮಾನದಂಡವಾಗಬಾರದು. ನಮ್ಮ ರಚನೆಗಳಿಗೆ ನಾವೇ ಸ್ಪರ್ಧಿಗಳು ಹಿಂದಿನದಕ್ಕಿಂತ ಮುಂದಿನದು ಮತ್ತಷ್ಟು ಚೆನ್ನಾಗಿ ರಚನೆಯಾಗಿ ನಮಗೆ ಮನಃತೃಪ್ತಿ ಕೊಟ್ಟರೆ ಸಾಕು ಎಂಬ ಭಾವನೆ ಬೇಕು. ಅದೇ ವಿಷಯದ ಬೇರೆಯವರ ಕೃತಿಗಳನ್ನು ಓದಿ ಅವುಗಳಿಂದ ಕಲಿಯಲು ಸಾಧ್ಯವಿದ್ದರೆ ಕಲಿತುಕೊಂಡರೆ ಇನ್ನೂ ಒಳ್ಳೆಯದು. ಅದಕ್ಕಿಂತ ಹೆಚ್ಚಿನದು ಬೋನಸ್ ಅಂತ ತಿಳಿದುಕೊಳ್ಳಬೇಕು.

ಇಲ್ಲಿ ಕವಿ ಕೆಎಸ್ ನ ಅವರ ಕವನದ ಕೆಲವು ಸಾಲುಗಳನ್ನು ಹೇಳಲು ಇಷ್ಟಪಡುತ್ತೇನೆ.

ಈ ಸಲವೂ ಕೂಡ ಕೋಗಿಲೆಗಿಲ್ಲ ಬಹುಮಾನ
ಸಂಗೀತ ಪಂಡಿತರ ಬಹುಮತದ ತೀರ್ಮಾನ
ಕೆಲವರಿಗೆ ಸಂತೋಷ ಕೆಲವರಿಗೆ ಅನುಮಾನ
ಇನ್ನು ಕೆಲವರಿಗಂತೂ ಅಡ್ಡಗೋಡೆಯ ದೀಪ
ಹಲವರಿಗೆ ಬಂದಿತ್ತು ಬೆಂಕಿ ಕಾರುವ ಕೋಪ

ಇತ್ತೀಚಿಗೆ ನನಗನಿಸಿದ ಮತ್ತೊಂದು ವಿಷಯದ ಬಗ್ಗೆ ಇಲ್ಲಿ ಸ್ಥಾಪಿಸಲೇಬೇಕು ಎಂದುಕೊಂಡಿದ್ದೇನೆ ಇಲ್ಲಿ ಬಹಳ ಜನ ಯುವಕವಿಗಳಿದ್ದೀರಿ ಹಾಗಾಗಿ ಹೆಚ್ಚು ಪ್ರಸ್ತುತ ಅಂತ ಅನ್ನಿಸುತ್ತೆ ಫೇಸ್ಬುಕ್ ನಲ್ಲಿ ಹಾಗೂ ಗುಂಪುಗಳಲ್ಲಿ ಸಿಗುವ ಪ್ರತಿಕ್ರಿಯೆಗಳು ಹಾಗೂ ಹೊಗಳಿಕೆಗಳು ಕೆಲವೊಮ್ಮೆ ಮತ್ತಷ್ಟು ಹೆಚ್ಚು ಕಲಿಯುವ ತಿದ್ದಿಕೊಳ್ಳುವ ಅವಕಾಶವನ್ನು ಕಸಿದುಕೊಂಡು ಬಿಡುತ್ತದೆ ಹೊಗಳಿದವರೇನ ಹೊನ್ನ ಶೀಲ ಕಿಕ್ಕಿದರೆ ಎಂಬ ಬಸವಣ್ಣನವರ ನುಡಿಗಳು ಈಗ ಮಾನ್ಯವೆನಿಸುತ್ತದೆ ಯಾ ಗುಣಮಟ್ಟ ಹೇಗೆ ಇರಲಿ, ಹೋಗಲಿಕ್ಕೆ ಸಿಕ್ಕಿದರೆ ಅವರು ಉತ್ತಮ ಎನ್ನುವ ಭಾವನೆ ಸನ್ಮಾನಗಳು ಹಾಗೂ ಪ್ರಶಸ್ತಿಗಳು ಸಹ ಈ ರೀತಿಯ ಜನಪ್ರಿಯತೆಯನ್ನೇ ಅವಲಂಬಿಸಿರುತ್ತದೆ ಎಷ್ಟೋ ಬಾರಿ ಅವುಗಳನ್ನು ಕೊಡುವವರ ಜೊತೆಗೆ ಸ್ನೇಹ ಸಂಬಂಧಗಳ ಮೇಲೆ ಅವಲಂಬಿತವಾಗಿರುತ್ತದೆ ಹೆಚ್ಚು ಹೆಚ್ಚು ಗುಂಪುಗಳಲ್ಲಿ ತೊಡಗಿಸಿಕೊಂಡು ಚಟುವಟಿಕೆಯಿಂದ ಸಕ್ರಿಯವಾಗಿ ಇತರೆ ಸಾಕು ಬರವಣಿಗೆ ಹೇಗಾದರೂ ಇರಲಿ ಎನ್ನುವಂತಹ ಮಾನದಂಡ ಈಗ ಎಷ್ಟು ಪ್ರಶಸ್ತಿಗಳಿಗೆ. ಹಾಗೆಯೇ ಸಮಾರಂಭಗಳಿಗೆ ಸಮಸ್ತೆಗಳಿಗೆ ಆರ್ಥಿಕ ಸಹಾಯ ಮಾಡಿದವರಿಗೂ ಹೆಚ್ಚಿನ ಪ್ರಶಸ್ತಿಯ ಸನ್ಮಾನ ಬಿರುದುಗಳು. ಈ ದೀಪದ ಜ್ವಾಲೆಗೆ ಎರವಾದ ಪತಂಗಗಳ ಕೆಲವು ಉದಾಹರಣೆಗಳು ನಮ್ಮ ಕಣ್ಮುಂದೇ ಇವೆ. ಕ್ಷಣಿಕದ ಈ ಜನಪ್ರಿಯತೆ ಅಷ್ಟೊಂದು ಮುಖ್ಯವೇ ಅನ್ನೋ ಪ್ರಶ್ನೆ ನಮಗೆ ನಾವೇ ಹಾಕೋಬೇಕು. ಚಿಂತನ ಮಂಥನ ನಡೆಸಬೇಕು.

ಈ ರೀತಿ ಗೌರವ ಸನ್ಮಾನ ಮಂಡಳಿಗಳಿಗೆ ಕೀರ್ತಿ ಶನಿ ಎಂದು ಹೆಸರಿಟ್ಟು ಕುವೆಂಪು ಅವರು ಹೀಗೆ ಹೇಳಿದ್ದಾರೆ

ಪೀಡಿಸುತ್ತಿಹೆ ಏಕೆ ತೊಲಗಾಚೆ ಕೀರ್ತಿ ಶನಿ ಸಾಕೆನಗೆ ನಿನ್ನ ಸಹವಾಸ ವಿಭವ ಭ್ರಾಂತಿ

ವಿಪರ್ಯಾಸ ಎಂದರೆ ಅವರು ತೊಲಗಾಚೆ ಎಂದ ಕೀರ್ತಿ ಶನಿಯನ್ನೇ ಇಂದಿನ ಎಷ್ಟೋ ಅನೇಕರು ತೆರೆದ ಬಾಹುಗಳಿಂದ ಸ್ವಾಗತಿಸುತ್ತಿದ್ದಾರೆ.

ಮುಂದುವರೆದು ಹೀಗೆ ಹೇಳುತ್ತಾರೆ

ಆ ಕ್ಷುದ್ರತಾ ಭೂತಕ್ಕೆ ನಿತ್ಯ ಬಲಿ ;
ಆಳ್ ಬಾಳ್ ನೆಲಂ ನೀರ್ ಮುಗಿಲ್
.

ಅದನ್ನೇ ಡಿವಿಜಿಯವರು ಕಗ್ಗದಲ್ಲಿ ಹೀಗೆ ವಿವರಿಸಿದ್ದಾರೆ

ಅನ್ನದಾತುರಕ್ಕಿಂತ ಚಿನ್ನದಾತುರ ಮಿಗಿಲು
ಚಿನ್ನದಾತುರಕ್ಕಿಂತ ಹೆಣ್ಣು ಗಂಡೊಲವು ಮನ್ನಣೆಯ ದಾಹವದು ಎಲ್ಲಕ್ಕಿಂ ತೀಕ್ಷ್ಣತಮ ತಿನ್ನುವುದಾತ್ಮವನೆ ಮಂಕುತಿಮ್ಮ

ಅನ್ನದಾತುರ ಹಸಿವೆ ಇಂಗುವ ತನಕ. ನಂತರ ಆಸ್ತಿ ಗಳಿಸುವ ಹೆಣ್ಣಿನ ಒಲವು ಪಡೆಯುವ ಹಪಾಹಪಿ. ಇವೆಲ್ಲಕ್ಕೂ ಒಂದು ಸಂತೃಪ್ತಿಯ ಹಂತ ಇರುತ್ತದೆ ಆದರೆ ಈ ಮನ್ನಣೆ ಗೌರವ ಪಡೆಯುವ ದಾಹ ಮಾತ್ರ ತೀಕ್ಷ್ಣ ವಾಗುವುದು ಇದಕ್ಕೆ ಕೊನೆ ಎಂಬುದೇ ಇಲ್ಲ ಕಡೆಗೆ ಆತ್ಮವನ್ನು ತಿನ್ನುವಷ್ಟು ಬಲಿಷ್ಠ ಹಾಗಾಗಿ ಈ ದಾಹ ಬೇಡ ಎನ್ನುತ್ತಾರೆ ತಿಮ್ಮ ಗುರು.

ಆದರೆ ಈಗೀಗ ಈ ಮನ್ನಣೆಯ ದಾಹ ಮಿತಿ ಮೀರುತ್ತಿದೆ. ದಯವಿಟ್ಟು ಅದು ಬೇಡ. ಯಾವಾಗಲೂ ಗೌರವ ನಮ್ಮನ್ನು ಅರಸಿ ಬರಬೇಕು. ಅದರ ಹಿಂದೆ ನಾವು ಹೋದರೆ ವಿನಾಶ ಕಟ್ಟಿಟ್ಟ ಬುತ್ತಿ.ಅದನ್ನು ನೆರಳಿನಂತೆ ಪರಿಗಣಿಸಿ. ನಾವು ನೆರಳಿನ ಬೆನ್ನು ಬಿದ್ದು ಹಿಡಿಯಲು ಹೊರಟರೆ ಕೈಗೆ ಸಿಗುವುದೇ? ಕನಸಿನ ಗಂಟು ಅಷ್ಟೇ. ಆದರೆ ನೆರಳಿನಂತೆ ಅದೇ ನಮ್ಮ ಹಿಂದೆ ಬಂದರೆ ತಡೆದು ನಿಲ್ಲಿಸಲು ಸಾಧ್ಯವಿಲ್ಲ.

ಮತ್ತೊಂದು ಇಂದಿನ ಯುವ ಪೀಳಿಗೆ ಬೆಳೆಸಿಕೊಳ್ಳಬೇಕಾಗಿರುವುದು ಓದು.ಹಿಂದಿನವರ ಕೃತಿಗಳ ಅಧ್ಯಯನ ಸದಾ ಮಾರ್ಗದರ್ಶಕ. ಓದುವಿಕೆ ಹವ್ಯಾಸವಾಗದೇ ಗೀಳಾಗಬೇಕು. ಹಾಗಾದಾಗ ನಮ್ಮ ಬರಹಗಳ ಮೌಲ್ಯವೂ ತುಲನಾತ್ಮಕವಾಗಿ ವೃದ್ಧಿಯಾಗುತ್ತೆ. ಒಂದು ಜಲಾಶಯದಿಂದ ಬರವಣಿಗೆಯ ವಿವಿಧ ನಾಲೆಗಳಿಗೆ ನೀರು ಹರಿದು ಹೋಗುತ್ತಿರುತ್ತೆ ಅಂತ ಭಾವಿಸಿದರೆ ಅಧ್ಯಯನ ಓದು ಆ ಜಲಾಶಯಕ್ಕೆ ಬರುವ ನೀರಿನ ಸೆಲೆಯ
ಒಳಹೊರಹು. ಓದಿರದ ಬರಹದ ಸ್ಠಿತಿ ನೀವೇ ಊಹಿಸಿಕೊಳ್ಳಿ.

ಅಂತರ್ಜಾಲದ ಯಾವುದೇ ಅಂಗವಾಗಲಿ ಸಹಕಾರತತ್ವವೇ ಸರಿ. ಇಲ್ಲಿ ವ್ಯಕ್ತಿ ಮತ್ತು ಸಂಸ್ಥೆ ಎರಡೂ ಮುಖ್ಯ. ಕಗ್ಗದ ಸಾಲುಗಳಲ್ಲೇ ಹೇಳುವುದಾದರೆ

ಏಕದಿಂದಲನೇಕ ಮತ್ತನೇಕದಿನೇಕ ।
ವೀ ಕ್ರಮವೆ ವಿಶ್ವದಂಗಾಂಗಸಂಬಂಧ ॥
ಲೋಕದಲಿ ಜಾತಿಯಲಿ ವ್ಯಕ್ತಿಯಲಿ ಸಂಸ್ಥೆಯಲಿ ।
ಸಾಕಲ್ಯದರಿವಿರಲಿ – ಮಂಕುತಿಮ್ಮ ॥ ೧೩೪

ಹೀಗೆ ಏಕದಿಂದ ಅನೇಕ ಮತ್ತೆ ಅನೇಕದಿಂದ ಏಕವಾಗುವ ವಿಶ್ವದ ತತ್ವ ಅಳವಡಿಸಿಕೊಂಡು ಹಂಸಕ್ಷೀರ ನ್ಯಾಯದಂತೆ ಕೆಡುಕು ತೊಡಕುಗಳ ನಿವಾರಿಸಿಕೊಳ್ಳುತ್ತಾ ಒಳಿತಿನೆಡೆಗೆ ಸಾಗೋಣ. ತಾಯಿ ಭುವನೇಶ್ವರಿಯ ರಥವೆಳೆಯೋಣ.

ಕನ್ನಡಮ್ಮನಿಗೆ ಜಯವಾಗಲಿ.


ಸುಜಾತಾ ರವೀಶ್

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ.  “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ 
ಬಯಕೆ ಲೇಖಕಿಯವರದು

Leave a Reply

Back To Top