ಸ್ವಾತ್ಮಗತ

ಕವಿ ಹೋರಾಟಗಾರ ಗವಿಸಿದ್ದ ಎನ್ ಬಳ್ಳಾರಿ

ಕೆ.ಶಿವು ಲಕ್ಕಣ್ಣವರ

ಹೈದರಾಬಾದ್ ಕರ್ನಾಟಕದ ಜನಧ್ವನಿ ಸಾಹಿತಿ, ಹೋರಾಟಗಾರ ಗವಿಸಿದ್ಧ ಎನ್. ಬಳ್ಳಾರಿ..!

ಕೊಪ್ಪಳವನ್ನು ಕೇಂದ್ರವನ್ನಾಗಿಟ್ಟುಕೊಂಡೇ ರಾಜ್ಯಮಟ್ಟದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದವರು ಗವಿಸಿದ್ಧ ಎನ್. ಬಳ್ಳಾರಿ.ಯವರು.

ಹುಟ್ಟಿದ್ದು ಜೂನ್ ೧೭, ೧೯೫೦ ರಂದು.
ಮಾರ್ಚ್ ೧೪, ೨೦೦೪ ರಂದು ೫೪ ನೇ ವಯಸ್ಸಿನಲ್ಲೇ ನಿಧನರಾದರು…

ಸಾಹಿತ್ಯ ಕ್ಷೇತ್ರದಲ್ಲಿ ‘ರಾಜ್ಯೋತ್ಸವ ಪ್ರಶಸ್ತಿ’ಯನ್ನು ಪಡೆದವರು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಕೆಲಸ ನಿರ್ವಹಿಸಿದವರು…

ಬಿ.ಎಸ್ಸಿ., ಎಂ.ಎ ಪದವೀಧರರು. ಪ್ರೌಢಶಿಕ್ಷಣದವರೆಗೆ ಕೊಪ್ಪಳದ ಗವಿಸಿದ್ಧೇಶ್ವರ ಸಂಸ್ಥೆಯಲ್ಲಿಯೇ ಓದಿ, ಬಿ.ಎಸ್ಸಿ. ಪದವಿಯನ್ನು ಹುಬ್ಬಳ್ಳಿಯ ಪಿ.ಸಿ. ಜಾಬಿನ್ ಕಾಲೇಜಿನಲ್ಲಿ ಮುಗಿಸಿದರು. ಅಲ್ಲಿನ ಕ್ರಾಂತಿಕಾರಿ ಕವಿಗಳ ಇಡೀ ದಂಡಿನಲ್ಲಿ ಸರಳ, ಸಜ್ಜನಿಕೆ ಮತ್ತು ಹರಿತ ಕಾವ್ಯದ ಮೂಲಕ ಆಗಲೇ ಹೆಸರಾಗಿದ್ದವರು…

ಕರ್ನಾಟವ ವಿಶ್ವ ವಿದ್ಯಾಲಯ ಧಾರವಾಡದಲ್ಲಿ ಎಂ.ಎ. ಕನ್ನಡ ಸ್ನಾತಕ ಪದವಿಯನ್ನು ಪಡೆದರು.
ತುರ್ತುಪರಿಸ್ಥಿತಿಯ ಕಾಲಘಟ್ಟದಲ್ಲಿ ‘ಕತ್ತಲು ದೇಶದ ಪದ್ಯಗಳು’ ಎನ್ನುವ ಮೊದಲ ಸಂಕಲನವನ್ನು ೧೯೭೭ ರಲ್ಲಿ ಪ್ರಕಟಿಸಿದರು. ನಂತರ ೧೯೮೪ ರಲ್ಲಿ ‘ಕಪ್ಪುಸೂರ್ಯ’ ಎಂಬ ಎರಡನೆಯ ಕವನ ಸಂಕಲನದ ಮೂಲಕ ರಾಜ್ಯದ ಸಾಹಿತ್ಯ ವಲಯದಲ್ಲಿ ಮಿಂಚು ಹರಿಸಿದವರು. ಈ ಕೃತಿಗೆ ಗುಲಬರ್ಗಾ ವಿಶ್ವ ವಿದ್ಯಾಲಯದ ೫,೦೦೦ ರೂ. ಗಳ ಬಹುಮಾನ ದೊರೆಯಿತು.
೨೦೦೪, ಮಾರ್ಚ್ ೧೪ ರಂದು ಬಳ್ಳಾರಿಯ ಲೋಹಿಯಾ ಪ್ರಕಾಶನ ಪ್ರಕಟಿಸಿದ ‘ಈ ಮಣ್ಣು ಅಪ್ಪಿಕೊಳ್ಳುವ ಮುನ್ನ’ ಕವನ ಸಂಕಲನ ಬಿಡುಗಡೆಯಾಯಿತು. ವಿಪರ್ಯಾಸವೆಂಬಂತೆ ಅದೇ ಸಮಯದಲ್ಲಿ ಅವರು ನಿಧನ ಹೊಂದಿದರು. ಈ ಕೃತಿಗೆ ‘ಕಣವಿ ಕಾವ್ಯ ಪ್ರಶಸ್ತಿ’ ದೊರೆತಿದೆ…

ಡಾ. ಜಿ.ಎಸ್. ಶಿವರುದ್ರಪ್ಪನವರು ಒಮ್ಮೆ ಕೊಪ್ಪಳಕ್ಕೆ ಬಂದಾಗ ‘ನಾನು ಗವಿಸಿದ್ಧ ಅವರನ್ನು ಭೇಟಿಯಾಗಿಯೇ ಹೋಗಬೇಕು, ಅವರನ್ನು ಕರೆಸಿರಿ’ ಎಂದು ಹೇಳಿದ್ದು ಗವಿಸಿದ್ಧ ಬಳ್ಳಾರಿಯವರ ಕಾವ್ಯದ ಗಟ್ಟಿತನ ತೋರಿಸುತ್ತದೆ…

ಮೂಲತಃ ಇವರದು ವ್ಯಾಪಾರಿ ಮನೆತನ. ಹವ್ಯಾಸದಲ್ಲಿ ಪತ್ರಿಕೋದ್ಯಮದಲ್ಲಿಯೂ ಕೆಲಸ ಮಾಡಿದರು. ಇಂಡಿಯನ್ ಎಕ್ಸಪ್ರೆಸ್ ವರದಿಗಾರರಾಗಿ, ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿಯೂ ಕೆಲಸ ಮಾಡಿದ್ದಾರೆ.
೧೯೯೯ ರಲ್ಲಿ ‘ತಳಮಳ’ ಎನ್ನುವ ವಾರಪತ್ರಿಕೆ ಆರಂಭಿಸಿ ಇಡೀ ಹೈದರಾಬಾದ್ ಕನಾಟಕದ ಜನಧ್ವನಿಯಾಗಿ ಅನೇಕ ಕವಿಗಳ, ಕಲಾವಿದರ, ಎಲೆ ಮರೆಯ ಕಾಯಿಯಂತಿದ್ದ ಹಲವರನ್ನು ಪರಿಚಯಿಸಿದರು.
ವಿದ್ಯಾರ್ಥಿ ದೆಸೆಯಲ್ಲಿಯೇ ಕಲಬುರ್ಗಿಯ ಶ್ರೀ ಶರಣ ಬಸವೇಶ್ವರ ಸಂಸ್ಥಾನದಿಂದ ಬಂಗಾರದ ಪದಕವನ್ನು ಪಡೆದ ಪ್ರತಿಭಾವಂತರಾಗಿದ್ದರು.
ಬಾಲ್ಯದಲ್ಲಿಯೇ ಕವಿತೆಗಳ ಮೂಲಕ ಶಾಲೆಯಲ್ಲಿ ಗುರುತಿಸಿಕೊಂಡಿದ್ದರು. ಮುಂದೆ ಪಿ.ಸಿ. ಜಾಬಿನ್ ಕಾಲೇಜು ಇವರ ಸಾಹಿತ್ಯದ ಹರವು ವಿಸ್ತಾರಗೊಳಿಸಿತು. ಮೈಸೂರು ದಸರಾ, ಅಖಿಲ ಭಾರತ ಸಾಹಿತ್ಯ ಸಮ್ಮೇಳನ, ಬಂಡಾಯ ಸಮ್ಮೇಳನಗಳು, ಹಂಪಿ ಉತ್ಸವ ಮೊದಲಾದ ರಾಜ್ಯ, ಅಂತಾರಾಜ್ಯ ಮಟ್ಟದ ಹೊರ ರಾಜ್ಯದ ಸಮ್ಮೇಳನಗಳಲ್ಲಿ ಕಾವ್ಯ ವಾಚನ ಮಾಡಿ ಗಮನ ಸೆಳೆಯುತ್ತಿದ್ದರು…
ಇವರ ಕವನಗಳು ಪದವಿಗೆ ಪಠ್ಯವಾಗಿಯೂ ಪ್ರಕಟವಾಗಿವೆ. ನಾಡಿನ ಎಲ್ಲ ಪ್ರಮುಖ ಪತ್ರಿಕೆಗಳಲ್ಲಿ ಮತ್ತು ಬೆಂಗಳೂರು, ಧಾರವಾಡ, ಭದ್ರಾವತಿ, ಗುಲಬರ್ಗಾ ಆಕಾಶವಾಣಿಗಳಲ್ಲಿ ಅಷ್ಟೇ ಅಲ್ಲದೇ ಚಂದನ, ಡಿ.ಡಿ. ಬೆಂಗಳೂರು ದೂರದರ್ಶನದಲ್ಲಿ ಇವರ ಕವನಗಳು ಪ್ರಕಟಗೊಂಡಿವೆ…

ಕೊಪ್ಪಳದಲ್ಲಿ ನಡೆದ ೬೨ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿನ ಹಿಂದೆ ಇವರ ಪಾತ್ರ ಬಹಳಷ್ಟಿದೆ. ಗೌರವ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು. ಸಮ್ಮೇಳನದ ನೆನಪಿನ ಸಂಚಿಕೆ ‘ತಿರುಳ್ಗನ್ನಡ’ದ ಸಂಪಾದಕರಾಗಿ ಕೆಲಸ ನಿರ್ವಹಿಸಿದ್ದಾರೆ…

ಇವರನ್ನು ಪ್ರೀತಿಯಿಂದ ಜನತೆ ‘ನಾಡಕವಿ’ ಎಂದೇ ಸಾಹಿತಿಗಳು, ಸಾಹಿತ್ಯಾಸಾಕ್ತರು ಕರೆಯುತ್ತಿದ್ದರು. ನಾಡಿನ ಪ್ರಮುಖ ಚಳುವಳಿಯಾದ ಗೋಕಾಕ್ ಚಳುವಳಿ, ಹೈದರಾಬಾದ್ ಕರ್ನಾಟಕದ ವಿಶೇಷ ಸ್ಥಾನಮಾನಕ್ಕಾಗಿ ಹೋರಾಟ, ಕೊಪ್ಪಳ ಜಿಲ್ಲಾ ಹೋರಾಟದ ಮುಂಚೂಣಿಯಲ್ಲಿದ್ದವರು…

೧೯೮೬ ರಲ್ಲಿ ಕನ್ನಡ ಸಾಹಿತ್ಯ ಅಕಾಡೆಮಿಯ ವತಿಯಿಂದ ಆಂಧ್ರಪ್ರದೇಶಕ್ಕೆ ಸಾಹಿತ್ಯದ ಪ್ರವಾಸ ಕೈಗೊಂಡು ಅಧ್ಯಯನ ಮಾಡಿದ್ದಾರೆ ಇವರು…

ಇವರ ಇನ್ನಿತರ ಪ್ರಕಟಣೆಗಳೆಂದರೆ — ಕಾವ್ಯಮೇಳ (೧೦೯೪) (ಸಂ. ಹಾ.ಮಾ.ನಾ.), ದಶವಾರ್ಷಿಕ ಕವಿತೆಗಳು (ಸಂ. : ಗೋ.ಕೃ. ಅಡಿಗ),
೧೯೭೪-೮೪ : ರತ್ನ ಸಂಪುಟ ೧೯೮೫ (ಮೈಸೂರು ವಿ.ವಿ.), ಗಾಂಧೀ ಗಾಂಧೀ (ಚಂಪಾ), ಬಂಡಾಯ ಕಾವ್ಯ : ೧೯೯೦ (ಸಂ. ಬರಗೂರು ರಾಮಚಂದ್ರಪ್ಪ), ರತ್ನ ಸಂಪುಟ ಕಾವ್ಯ (ಸಂ. ಮೈಸೂರು ವಿ.ವಿ)…

ಹೀಗೆಯೇ ನಾನಾ ಕೃತಿಗಳನ್ನು ರಚಿಸಿದರು ಮತ್ತು ಅನೇಕಾನೇಕ ಕೃತಿಗಳನ್ನು ಸಂಪಾದಿಸಿದ್ದಾರೆ ಗವಿಸಿದ್ಧ.ಎನ್. ಬಳ್ಳಾರಿಯವರು.
ಹೀಗೆ ಸಾಗಿತ್ತು‌ ಗವಿಸಿದ್ಧ.ಎನ್. ಬಳ್ಳಾರಿಯವರ ಬದುಕು-ಬರಹದ ಪಯಣ….!

Leave a Reply

Back To Top