ಅಂಕಣ ಸಂಗಾತಿ

ಹನಿಬಿಂದು

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ 

ನಾಳಿನ ನಂಬಿಕೆ

ನಾವು ಹೃದಯದಿಂದ ಬದಲಾದರೆ ಮಾತ್ರ

ಸಮಾಜದ ಉದ್ಧಾರ ಸಾಧ್ಯ!

​ಅದೆಷ್ಟು ಹೆಣ್ಣು ಮಕ್ಕಳು ಕಷ್ಟ ಪಡುತ್ತಿದ್ದಾರೆ! ದೇವಾ ನೋಡಿದರೆ ಮನಸ್ಸು ಕುಗ್ಗುತ್ತದೆ. ತಂದೆ ತಾಯಿ ಕಷ್ಟಪಟ್ಟು ಓದಿಸಿ, ತಮ್ಮ ಕರ್ತವ್ಯವನ್ನು ಮೆರೆದು ಮದುವೆ ಮಾಡಿ ಕೊಟ್ಟಿದ್ದಾರೆ. ಆದರೆ ಹಣೆ ಬರಹಕ್ಕೆ ಹೊಣೆ ಯಾರು ಎಂಬ ಮಾತಿನಂತೆಯೋ, ಮನಗಳ ಮಲಿನದಿಂದಲೋ, ಕೋಪ ದ್ವೇಶದಿಂದಲೋ, ಹೊಂದಾಣಿಕೆ ಸಮಸ್ಯೆಯಿಂದಲೋ, ಪರ ಸ್ತ್ರೀ ಅಥವಾ ಪರ ಪುರುಷರ ಪ್ರವೇಶ ಕುಟುಂಬದ ನಡುವೆ ಆದ ಕಾರಣಕ್ಕೋ, ಪುರುಷ/ಸ್ತ್ರೀಯ  ಕುಡಿತ, ಜೂಜು ಮೊದಲಾದ ಕೆಟ್ಟ ಅಭ್ಯಾಸದಿಂದಲೋ, ಹಿರಿಯರ ಆಸ್ತಿ , ಸಂಪತ್ತಿನ ಹಂಚಿಕೆಯ ವಿಚಾರದಲ್ಲಿಯೋ, ಧನ ದಾಹ, ವರದಕ್ಷಿಣೆ, ಕೆಲಸ, ಸಂಬಳದ ಹಣದಾಹ, ಕಾರು ಬಂಗಲೆಗಳ ವ್ಯಾಮೋಹ…ಅದೇನೋ ಒಂದು ಕಾರಣದಿಂದ ಗಂಡ ಅಥವಾ ಪತಿ ಬಿಟ್ಟು ಹೋದ ಬಳಿಕ ತಾನೇ ದುಡಿದು, ಮಕ್ಕಳನ್ನು ಸಾಕುತ್ತಾ, ಮನೆಯ ಸರ್ವ ಕಾರ್ಯಗಳನ್ನೂ ಮಾಡುತ್ತಾ, ಮನೆಯ ಒಳಗೂ, ಹೊರಗೂ, ಮಕ್ಕಳ ಆರೋಗ್ಯ, ಓದು ಎಲ್ಲವನ್ನೂ ತನ್ನ ಒಂಟಿ ದುಡಿಮೆಯಿಂದ ನಿಭಾಯಿಸುತ್ತಾ ಇರುವ ಅದೆಷ್ಟು ಮಂದಿ ಮಹಿಳೆಯರಿದ್ದಾರೆ! ಅದೆಷ್ಟು ಕಷ್ಟ ಪಡುತ್ತಿದ್ದಾರೆ ಒಳಗೊಳಗೇ ಬೇಯುತ್ತಾ!

     ಅವರ ಸ್ವಂತ ಆಸೆ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳುವ ಬಗ್ಗೆ ಅವರು ಎಂದೂ ಯೋಚನೆ ಮಾಡಿರುವುದೇ ಇಲ್ಲ. ತಾನು ಹೆಸರು ಕೆಡಿಸಿ ಕೊಂಡರೆ ಮಕ್ಕಳ ಬದುಕು ಹಾಳಾಗುತ್ತದೆ ಎಂದು ಮಕ್ಕಳಿಗಾಗಿ ಸದಾ ತುಡಿಯುವ ಮನಸ್ಸು ಅವರದು. ತಾನು ಏನಾದರೂ ತಿಂದರೆ ಮಕ್ಕಳಿಗೆ ಇಲ್ಲ ಎಂಬ ಕಾರಣಕ್ಕೆ ಬೇರೆ ಯಾರಾದರೂ ಏನಾದರೂ ಕೊಟ್ಟರೂ ಕೂಡಾ ಮಕ್ಕಳಿಗೆ ತಂದು ಕೊಡುವ ಜಾಯಮಾನ, “ತನಗೆ ಕೊಡಿಸಲು ಆಗದು, ಹೀಗಾದರೂ ಪಡೆಯಲಿ” ಎನ್ನುವ ಆಶಯವೂ ಇರಬಹುದು. ಮನೆ ನಡೆಸಲು ಗಂಡಸರೇ ಸರಿ, ಪ್ರತಿ ದಿನ ಹೊರಗೆ ಹೋಗಿ ಹಾಲು, ಮೊಸರು, ತರಕಾರಿ ಅಂತ ಸಾಮಾನು ತಂದು ಹಾಕಿ ಮಾಡೋ ಕಾರ್ಯ ಸುಲಭ ಅಲ್ಲ. ಆದರೂ ಕುಗ್ಗದೆ ಮಹಿಳೆ, ಪುರುಷ ಇಬ್ಬರು ಹೊರುವ ಜವಾಬ್ದಾರಿಯನ್ನು ಕೂಡಾ ತಾನೊಬ್ಬಳೇ ಹೊತ್ತು, ದುಡಿದು ಹೈರಾಣಾಗಿ, ಸಮಾಜದ ಬಾಯಿಗೂ ಸಿಕ್ಕಿ, ಸಮಾಜದ ಕುಹಕ ನೋಟಗಳನ್ನು ಎದುರಿಸಿ ಕಂಡೂ ಕಾಣದಂತೆ, ಕತ್ತಿಯ ಅಲಗಿನ ಮೇಲೆ ನಡೆಯತ್ತ ಕುಟುಂಬದ ಹೊಣೆ ಹೊತ್ತ ಇವರ ಸಾಹಸಕ್ಕೆ ಸಲಾಂ.

     ಸಂಸಾರ ಸಾಗಿಸಲು ಕುಟುಂಬದಲ್ಲಿ ಒಬ್ಬನೇ ದುಡಿಯುವ ಗಂಡಸು ಕತ್ತೆ ದುಡಿತ ದುಡಿಯುವುದಿಲ್ಲವೇ? ಅದೇ ದುಡಿತ ಎಷ್ಟೇ ಇದ್ದರೂ ತನಗೊಂದು ಸರಿಯಾದ ಬಟ್ಟೆ, ಚಪ್ಪಲಿ ತೆಗೆದುಕೊಳ್ಳಲು ಆಗದೆ ಒದ್ದಾಡುವ ಅಪ್ಪಂದಿರು ಕೂಡಾ ಇದ್ದಾರೆ. ಅದೇ ಸಣ್ಣ ಮೊತ್ತಕ್ಕೆ ದುಡಿಯುತ್ತಾ ತಂದೆ ಇಲ್ಲದ  ಮಕ್ಕಳನ್ನು ಮಡಿಲಲ್ಲಿ ಕಟ್ಟಿಕೊಂಡು ಬಾಳ್ವೆ ಮಾಡುವ ಗಟ್ಟಿಗಿತ್ತಿ ಮಹಿಳೆಯ ನೊಂದ ದನಿ ಹಲವು ಕುಡುಕ, ಲಂಪಟ ಗಂಡ ಅನ್ನಿಸಿಕೊಂಡವರಿಗೆ ಕೇಳುವುದೇ? ಈಗ ಬಿಡಿ, ಕುಡುಕರು ಮಾತ್ರ ಅಲ್ಲ, ಕುಡುಕಿಯರೂ ಇದ್ದಾರೆ. ಸಮಾನತೆ ಬಂದಿದೆ. ಗಂಡನನ್ನೇ ದುಡಿಸಿ, ತಾನು ಮೊಬೈಲ್ ನಲ್ಲಿ ಮುಳುಗಿ, ಮಗುವನ್ನೂ ಗಂಡನ ಕೈಗೇ ಕೊಟ್ಟು ಬೆಳೆಸುವ , ಏನೂ ಅಡುಗೆ ಮಾಡಲು ಗೊತ್ತಿರದೆ ಗಂಡನ ಕೈಯಲ್ಲಿ ಮಾಡಿಸಿಕೊಂಡು ತಿನ್ನುವ ಮಹಿಳೆಯರೂ ಇದ್ದಾರೆ. ಕಟ್ಟಿಕೊಂಡ ತಪ್ಪಿಗೆ ಮನೆ, ಹೋಟೆಲ್ ಅಂತೆಲ್ಲಾ ಗಂಡ ಕಷ್ಟ ಪಡುತ್ತಾ ಇರುತ್ತಾನೆ. ಮಕ್ಕಳಿಗೆ ತಾನೇ ಊಟ ತಯಾರಿಸಿ ಕೊಡುವವರೂ ಇದ್ದಾರೆ.

            ಮತ್ತೊಂದು ಕಡೆ ಮಡದಿ ಸತ್ತ ಬಳಿಕ ಒಂಟಿಯಾದ ಜೀವ ಅವಳ ಸ್ಥಾನಕ್ಕೆ ಯಾರನ್ನೂ ಕರೆ ತರಲು ಆಗದೆ, ಮಕ್ಕಳಿಗಾಗಿ ಬದುಕಿ ಕೊರಗುವ ದೇಹ ಹಾಗೂ ಮನಸ್ಸು. ಮಡಿದ ಮಡದಿಯ ನೆನಪಿನಲ್ಲೇ ಬದುಕುವ ಜೀವ. ಮಕ್ಕಳ ವಿದ್ಯಾಭ್ಯಾಸ, ಒಳಿತನ್ನು ಬಯಸುವ ದೇವರು. ಸ್ವಲ್ಪ ಕುಟುಂಬಗಳಲ್ಲಿ ಮಡದಿಯರು ಮಕ್ಕಳನ್ನು ಗಂಡನ ಮನೆಯಲ್ಲೇ ಬಿಟ್ಟು ತಮ್ಮ ಪ್ರೇಮಿಯ ಜೊತೆ ತಮ್ಮ ಬದುಕು ಸಾಗಿಸ ಹೊರಡುವರು. ಹೋದ ವಾರದ ದಿನ ಪತ್ರಿಕೆಯ ವಾರ್ತೆ ನೋಡಿದೆ. ವಸತಿ ಯೋಜನೆಯಡಿ ಮನೆ ಕಟ್ಟಲು ಸರಕಾರ ದುಡ್ಡು ಕೊಡುತ್ತಾರಂತೆ. ಅದನ್ನು ಕೆಲವು ಬಡ ಗಂಡಸರು ತಮ್ಮ ಮಡದಿ ಮಹಿಳೆಯರು ತಮ್ಮ ಮನೆಗೆ ಗೃಹ ಲಕ್ಷ್ಮಿಯರು ಎಂದು ತಿಳಿದು ಆವಾಸ್ ಯೋಜನೆಯ ಅನುದಾನಕ್ಕೆ ಮಡದಿಯರ ಹೆಸರು, ಬ್ಯಾಂಕ್ ಖಾತೆ ಸಂಖ್ಯೆ ಕೊಟ್ಟು , ಅವರ ಖಾತೆಗೆ ಹಣ ಜಮಾವಣೆ ಆಗಿರಲಿ ಎಂಬುದನ್ನು ಮಾಡಿದವ ಪಾಪ, ಅಕೌಂಟಿಗೆ ಗೋಡೆ ಕಟ್ಟಲು ಐವತ್ತು ಸಾವಿರ ಹಣ ಬೀಳುತ್ತಲೇ ತಮ್ಮ ಪ್ರೇಮಿಗೆ ತಿಳಿಸಿ, ಆ ಐವತ್ತು ಸಾವಿರ ಹಿಡಿದುಕೊಂಡು ಮೂವರು ಮಹಿಳೆಯರು ಗಂಡನ ಬಿಟ್ಟು ಪರಾರಿ ಆದ ವರದಿ ಬಂದಿದೆ. ಅರ್ಧಂಬರ್ಧ ಕಟ್ಟಿದ ಮನೆ, ಮಕ್ಕಳು ಅಲ್ಲೇ ಬಾಕಿ! ಏನು ಹೇಳೋಣ ಸಮಾಜಕ್ಕೆ!

“ಸಮಾಜಕ್ಕೆ ಹೆದರಿ ಆತ್ಮಹತ್ಯೆ” ಅಂತ ಒಂದು ಕಾಲದಲ್ಲಿ ಇತ್ತು. ಈಗ ಸಮಾಜ , ಗಣಿತಕ್ಕೆ ಹೆದರೋದು ಬಿಡಿ, ಸಾಲ ಮಾಡಿದವನೇ ಬ್ಯಾಂಕಿಗೆ ಹೆದರಿಸುವ ಕಾಲ ಬಂದಿದೆ. ಇನ್ನು ಸಮಾಜವನ್ನೇ ಹೆದರಿ ನಡುಗಿಸುವ ಮಹಾನ್ ಭಯಂಕರ ರಾಕ್ಷಸ ಕ್ರಿಮಿಗಳು ಹುಟ್ಟಿಕೊಂಡಿರುವ ಈ ಕಾಲದಲ್ಲಿ ಹತ್ತು ತಿಂಗಳ ಹೆಣ್ಣು ಮಗುವಿನಿಂದ ಹಿಡಿದು ಎಂಬತ್ತು ವರ್ಷದ ಹಣ್ಣು ಹಣ್ಣು ಮುದುಕಿಯವರೆಗೂ ಟೆಕ್ನಿಕಲ್, ವೈಜ್ಞಾನಿಕ, ಯಾಂತ್ರಿಕ, ಮುಂದುವರೆದ ಯುಗದಲ್ಲೂ ಗಂಡಸು ಆ ಹೆಣ್ಣಿನ ದೇಹ ತನ್ನ ಕಾಮುಕ ಪ್ರವೃತ್ತಿಯನ್ನು ಅವರ ವಯಸ್ಸು ಸಾಮಾಜಿಕ ಪರಿಸ್ಥಿತಿ ನೋಡದೆ ಹಸುಳೆಯನ್ನೂ ಸಾಯಿಸಿ ಬಿಡುತ್ತಾನೆ ಎಂದರೆ ಎಂತಹ ಶಿಕ್ಷಣ ನಾವು ಪಡೆಯುತ್ತಿದ್ದೇವೆ, ಇಂತಹ ಪೀಳಿಗೆಯನ್ನು ನಾವು ಸೃಷ್ಟಿಸುತ್ತಿದ್ದೇವೆ?

ಭಾರತ ವಿಜ್ಞಾನ, ತಂತ್ರಜ್ಞಾನ, ರಾಕೆಟ್ ಎಲ್ಲಾ ದಿಸೆಯಲ್ಲಿ ಮುಂದುವರಿಯುತ್ತಿದೆ. ರಸ್ತೆಗಳು ಆಗಲವಾಗುತ್ತಿವೆ, ಇಲ್ಲಿ ವ್ಯಾಪಾರ ಮಾಡಲು , ಬಂಡವಾಳ ಹೂಡಲು ವಿದೇಶಿಗರನ್ನು ಕೈ ಬೀಸಿ ಕರೆಯುತ್ತಿದೆ. ಆದರೆ ಇಲ್ಲಿನ ನಿರ್ಭಯರಂತಹ  ಅದೆಷ್ಟೋ ಹೆಣ್ಣು ಮಕ್ಕಳ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುವವರಿಲ್ಲ. ಇಂತಹ ಹೆಣ್ಣು ಮಕ್ಕಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದ್ದರೂ, ಬಜೆಟ್ ನಲ್ಲಿ ಆಗಲಿ, ಭಾರತೀಯ ಕಾನೂನಿನಲ್ಲಿ ಆಗಲಿ ಅವರು ಮತ್ತು ಅವರ ಕುಟುಂಬಕ್ಕೆ ಯಾವುದೇ ನ್ಯಾಯ ಇಲ್ಲ. ಕಾರಣ ಉಳ್ಳವರ ದಿನಗಳು. ಅಷ್ಟೇ ಯಾಕೆ, ಓಟಿಗಾಗಿ ಮಾತ್ರ ಹಳ್ಳಿಗೆ ನುಗ್ಗುವ ನಾಯಕರು ಹಳ್ಳಿಯ ಕೆಲ ಜನರ ಬದುಕಿನ ಸ್ಟ್ಯಾಂಡರ್ಡ್ ಬಗ್ಗೆ ತಿಳಿದು ಅದನ್ನು ಹೆಚ್ಚಿಸಲು ಅವರನ್ನೇ ಬಳಸಿಕೊಳ್ಳ ಬೇಕಿದೆ. ಕುಡಿತ, ಮಾದಕ ವ್ಯಸನಗಳ ದುಶ್ಚಟ, ಮೊಬೈಲ್ ಗಳಲ್ಲಿ  ಸುಲಭವಾಗಿ ಸಿಗುವ ಬೇಡದ ನೀಲಿ ಚಿತ್ರಗಳು ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರ ಮನಸ್ಸನ್ನೂ ಕೆಡಿಸಿವೆ ಮತ್ತು ಅದುವೇ ಹೆಣ್ಣು ಮಕ್ಕಳ ಅಭದ್ರತೆಗೆ ಕಾರಣ ಅಲ್ಲವೇ?

       ಇಂದು ಹೆಚ್ಚಿನವರು ಓದು ಬರಹ ಕಲಿತವರು, ಆದರೂ ಕೂಡಾ ಅವರು ಅಕ್ಷರಸ್ಥರು ಮಾತ್ರ. ಮಾನವರು ಅಲ್ಲ, ನಡೆಸುವ ಹೀನ ಕೃತ್ಯಗಳನ್ನು ನೋಡಿದರೆ ಭಾರತದ ಕಾನೂನು ಸುವ್ಯವಸ್ಥೆ ಬಡವರ ಪಾಲಿಗೆ, ನೊಂದವರಿಗೆ ಏನೂ ಸರಿ ಇಲ್ಲ ಅನ್ನಿಸುತ್ತದೆ ಒಮ್ಮೊಮ್ಮೆ. ದೇಹಗಳನ್ನು ಕಲ್ಲಂಗಡಿ ಹಣ್ಣಿನಂತೆ ರಸ್ತೆಗಳಲ್ಲೇ ಕೊಚ್ಚಿ ಹಾಕುವುದು, ಮಡದಿಯನ್ನು ತರಕಾರಿ ಕೊಚ್ಚಿದಂತೆ ಕೊಚ್ಚಿ ಕೊಚ್ಚಿ ಕೊಂದು ಫ್ರಿಜ್ ನಲ್ಲಿ ಇಡುವುದು, ಅವನ್ ನಲ್ಲಿ ಬೇಯಿಸುವುದು, ಮೂಟೆ ಕಟ್ಟಿ ಬಿಸಾಕುವುದು, ತುಂಡು ತುಂಡಾಗಿ ಕತ್ತರಿಸಿ ಬಾವಿಗೆ ಎಸೆಯುವುದು…ಅಯ್ಯೋ ದೇವ… ದಿನ ಪತ್ರಿಕೆ ಓದುವಾಗ, ಟಿವಿ ವಾರ್ತೆಯಲ್ಲಿ ಮಕ್ಕಳ ಮುಂದೆ ಆ ದೃಶ್ಯವನ್ನು ಬಿತ್ತರಿಸುವಾಗ ಕರುಳು ಕಿತ್ತು ಬಂದಂತೆ ಆಗುತ್ತದೆ. ಮಕ್ಕಳಲ್ಲಿ ಮಾನಸಿಕ ಸ್ಥೈರ್ಯ ತುಂಬ ಬೇಕಾದ ಸುದ್ಧಿ ವಾಹಿನಿಗಳು ಟಿ ಆರ್ ಪಿ ಗಾಗಿ ಆತ್ಮಹತ್ಯೆ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ಲೈವ್ ಆಗಿ ತೋರಿಸುವ ಮಾಧ್ಯಮಗಳಾಗಿ ಬಿಟ್ಟಿವೆ. ಇದು ಸುಲಭ ಎಂದು ಅರಿತ ಮಗು ಅಂಕಗಳು ಕಡಿಮೆ ಬಂದರೂ, ಪೋಷಕರು ಮೊಬೈಲ್ ನೋಡ ಬೇಡ ಎಂದರೂ ಸಾಕು, ಶಿಕ್ಷಕರು ಬುದ್ಧಿ ಮಾತು ಹೇಳಿದರೂ ಸೀದಾ ಹೋಗಿ ಆತ್ಮಹತ್ಯೆಗೆ ಶರಣಾಗುತ್ತದೆ. ಮತ್ತೆ ತಪ್ಪಿತಸ್ಥರು? ಶಿಕ್ಷಕರೇ!!! ಮತ್ತೆ ವಾಹಿನಿಗಳು ಶಿಕ್ಷಕರ ಮೇಲೆ ಗೂಬೆ ಕೂರಿಸಿ ಬಡ ಶಿಕ್ಷಕರನ್ನು ದುಡಿದು ತಿನ್ನದ ಹಾಗೆ ಮಾಡಿ ಬಿಡುತ್ತಾರೆ.

ಸಮಾಜದ ಒಂದು ಮುಖ ಸಿರಿವಂತಿಕೆ, ಕಾರು, ಬಂಗಲೆ, ಮಾಲ್ ಗಳಲ್ಲಿ ಶಾಪಿಂಗ್, ವಾರದ ಕೊನೆಗೆ ಸುತ್ತಾಟ, ದೂರದ ಪರ್ವತ ಪ್ರದೇಶಗಳಿಗೆ ಹೋಗಿ ಸಂತಸ ಪಡುವುದು ಆಗಿದ್ದರೆ ಮತ್ತೊಂದು ಮುಖ ಬೆಳಗ್ಗೆ ಹೋದರೆ ಸರಿ ಕತ್ತಲೆಯವರೆಗೆ ದುಡಿಯುವ ಪೋಷಕರು, ಮಕ್ಕಳ ಕಡೆ ಗಮನ ಕೊಡಲು ಸಮಯ, ತಾಳ್ಮೆ ಇಲ್ಲ, ಅವರನ್ನು ತಿದ್ದಲು ಮನೆಯಲ್ಲಿ ಹಿರಿಯರೂ ಇಲ್ಲ, ಕಲಿತವನಿಗೂ ಸರಿ ತಪ್ಪು ತಿಳಿದಿಲ್ಲ, ಸಾಮಾನ್ಯ ಜ್ಞಾನದ ಯೋಚನೆ ಇಲ್ಲ, ಹೆಣ್ಣು ಮಕ್ಕಳ ಮೇಲೆ ಕರುಣೆ ಇಲ್ಲ, ಅವರನ್ನು ಭೋಗದ ವಸ್ತುಗಳಂತೆ ತೋರಿಸುವ ಮಾಧ್ಯಮಗಳು, ಸಾಮಾಜಿಕ ಜಾಲ ತಾಣಗಳು, ಹಣಕ್ಕಾಗಿ ಬಟ್ಟೆ ಬಿಚ್ಚಿ ಕುಣಿಯುವ, ದೇಹದ ಅಂಗಾಂಗಳ ಪ್ರದರ್ಶನ ಮಾಡುವ  ನಟ ನಟಿಯರು, ಇದನ್ನೇ ಫ್ಯಾಷನ್, ಜೀವನ ಶೈಲಿ ಎಂದು ತಿಳಿಯುವ ಮುಗ್ಧ ಮಕ್ಕಳು!

ಒಂದು ಕಡೆ ಹಿರಿಯರ, ಯುವ ಜನರ, ಮಕ್ಕಳ, ಮತ್ತೊಂದೆಡೆ ಮಹಿಳೆಯರ ಎಲ್ಲರ ಮನಸ್ಸು ಕೂಡಾ ಕೆಡುತ್ತಿದೆ. ಇದಕ್ಕೆ ಕಾರಣ ಕೆಡುತ್ತಿರುವ ಸಮಾಜ. ಸಮಾಜ ಎಂದರೆ ನಾವೇ. ತಿದ್ದುವವರಿಲ್ಲ ಇಂದು. ಹಣಕ್ಕಾಗಿ, ಜನರ ಲೈಕ್ ಗಾಗಿ ಹದಿ ಹರೆಯದ ಹೆಣ್ಣು ಮಕ್ಕಳು ಅಪ್ಲೋಡ್ ಮಾಡುವ ಕೆಟ್ಟ,  ಮಾದಕ ರೀಲ್ಸ್ ಗಳು ಹುಡುಗರ ಮನಸ್ಸನ್ನು ಹಾಳು ಮಾಡಿದರೆ, ಹುಡುಗಿಯರ ಮೇಲಿನ ಅತ್ಯಾಚಾರ, ದೌರ್ಜನ್ಯದ ನಡವಳಿಕೆಗಳು ಇಂದು ಯುವಕ ಯುವತಿಯರನ್ನು ಮದುವೆಯೇ ಬೇಡ ಎನ್ನುವ ವರೆಗೆ ಕರೆ ತಂದಿವೆ. ತಂದೆ ತಾಯಿಯರು ಪಡುವ ಕಷ್ಟ, ಹೊಂದಾಣಿಕೆಯ ಸಮಸ್ಯೆಯೂ ಇದಕ್ಕೆ ಕಾರಣ. ಹೆಣ್ಣು ಮಕ್ಕಳಿಗೆ ರೋಲ್ ಮಾಡೆಲ್ ಅವರ ಅಮ್ಮಂದಿರು. ಅವರ ಕಷ್ಟ ಗಮನಿಸಿದ ಹೆಣ್ಣು ಮಕ್ಕಳು ನನ್ನ ಬದುಕು ಅಮ್ಮನಂತೆ ಆಗಬಾರದು ಎಂದು ಯೋಚಿಸುವುದರಲ್ಲಿ  ತಪ್ಪಿಲ್ಲ ಅಲ್ಲವೇ?

ಬೆಕ್ಕಿಗೆ ಘಂಟೆ ಕಟ್ಟುವವರು ಯಾರು?ಸಮಾಜದ ಸ್ವಾಸ್ಥ್ಯ ಕಾಪಾಡುವವರು ಯಾರು? ಪದವಿ, ಇಂಜಿನಿಯರಿಂಗ್, ಮೆಡಿಕಲ್, ಸ್ನಾತಕೋತ್ತರ ಕಾಲೇಜುಗಳ ಅರಿತ ವಿದ್ಯಾರ್ಥಿಗಳೂ, ನಟ ನಟಿಯರೂ ಮಾದಕ ವ್ಯಸನಿಗಳ ಪಟ್ಟಿಯಲ್ಲಿ ಸೇರುತ್ತಿದ್ದಾರೆ, ಎನ್ನುವ ಭಯಾನಕ ಸತ್ಯವನ್ನು ಸುಳ್ಳು ಮಾಡುವವರು ಯಾರು..ಮುಂದಿನ ಭಾರತದ ಭವ್ಯ ಭವಿತವ್ಯವನ್ನು ಉಜ್ವಲ ಗೊಳಿಸುವವರು ಯಾರು? ಒಳ್ಳೆಯ ಜನರನ್ನು ಹುಡುಕುವುದು ಹೇಗೆ? ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ. ಮನುಷ್ಯ ಹೃದಯದಿಂದ ಬದಲಾಗಬೇಕು, ತನ್ನ ಪರಮಾತ್ಮನನ್ನು ತಾನೇ ಸರಿ ಪಡಿಸಿಕೊಂಡಾಗ ಮಾತ್ರ ಆರೋಗ್ಯಕರವಾಗಿ, ಶಾಂತಿಯಿಂದ, ನೆಮ್ಮದಿಯಿಂದ ಹೆಣ್ಣು, ಗಂಡು ಸಮಾಜದಲ್ಲಿ ಬದುಕಲು ಸಾಧ್ಯ ಎಂದು ನನ್ನ ಅನಿಸಿಕೆ. ನೀವೇನಂತೀರಿ?


ಹನಿಬಿಂದು

ಸರು- ಪ್ರೇಮಾ ಆರ್ ಶೆಟ್ಟಿ ಕಾವ್ಯನಾಮ- ಹನಿ ಬಿಂದುನೂರಕ್ಕೂ ಅಧಿಕ ರಾಷ್ಟ್ರ, ರಾಜ್ಯ, ಅಂತರರಾಜ್ಯ, ಜಿಲ್ಲಾ ಮಟ್ಟದ ಕವಿಗೋಷ್ಠಿಗಳಲ್ಲಿ ಅಧ್ಯಕ್ಷರಾಗಿ, ಕವಿಯಾಗಿ, ಭಾಗವಹಿಸಿದ ಅನುಭವ.ವಿದ್ಯಾರ್ಹತೆ – ಕನ್ನಡ ಮತ್ತು ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ಬಿಎಡ್.ವೃತ್ತಿ – ಪದವೀಧರ ಆಂಗ್ಲ ಭಾಷಾ ಶಿಕ್ಷಕರು ಪ್ರವೃತ್ತಿ – ಫ್ಯಾಷನ್ ಡಿಸೈನಿಂಗ್, ಲೇಖಕಿ, ಕವಯತ್ರಿ, (ಕನ್ನಡ, ತುಳು, ಇಂಗ್ಲಿಷ್ ವಿಷಯಗಳಲ್ಲಿ) ಅಂಕಣಗಾರ್ತಿ (ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ) , ಚಿಂತಕಿ,ಸ್ಪೋಕನ್ ಇಂಗ್ಲಿಷ್ ಬೋಧಕಿ. ಮೋಟಿವೇಟರ್,, ಲಿಟರೇಚರ್ ಆಫ್ ಹನಿಬಿಂದು ಇದು ಇವರ ಬ್ಲಾಗ್. , ತುಳು ಕಲ್ಪುಗ  ಚಾನೆಲ್ ನ ಫೇಸ್ಬುಕ್, ಇನ್ಸ್ಟಾ ಗ್ರಾಂ, ಯೂ ಟ್ಯೂಬ್ ನಿರ್ವಾಹಕಿ. ಕಲಿಕಾರ್ಥಿ, ವಿದ್ಯಾರ್ಥಿ ಪ್ರೇರಕಿ.ಪ್ರಕಟಿತ ಕೃತಿ – ಭಾವ ಜೀವದ ಯಾನ (ಕವನ ಸಂಕಲನ)ಪ್ರತಿಲಿಪಿಯಲ್ಲಿ ಬರಹಗಾರ್ತಿ – ಮೂವತ್ತಾರು ಸಾವಿರಕ್ಕೂ ಹೆಚ್ಚು ಜನರಿಂದ ಓದಲ್ಪಟ್ಟಿರುವರು. ವಿಳಾಸ – ಸ ಪ ಪೂರ್ವ ಕಾಲೇಜು ಮೂಲ್ಕಿ 574154

Leave a Reply

Back To Top