ಮರೆಯಲಾಗದ ಮಹಾನುಭಾವರು
ಕಾವ್ಯಲೋಕದ ಮುದ್ದುಕಂದ “ಮುದ್ದಣ”
ಎಲ್. ಎಸ್. ಶಾಸ್ತ್ರಿ
” ನೀರಿಳಿಯದ ಗಂಟಲೊಳ್ ಕಡುಬಂ ತುರುಕಿದಂತಾಯ್ತು” ಎಂದರೂ , ಹೆಂಡತಿಗೆ ” ಭವತಿ ಭಿಕ್ಷಾಂದೇಹಿ” ಎಂಬ ಸಪ್ತಾಕ್ಷರಿ ಮಂತ್ರ ಬೋಧಿಸಿ ” ಕಸ್ತೂರಿ ಕನ್ನಡ”ದಲ್ಲಿ ರಾಮಾಶ್ವಮೇಧದಂತಹ “ಹೃದ್ಯಮಪ್ಪ ಗದ್ಯ ಕೃತಿ” ಯನ್ನು ಕನ್ನಡಿಗರಿಗೆ ನೀಡಿದ ಮುದ್ದಣ ಕವಿ ಉಡುಪಿ ಹತ್ತಿರದ ನಂದಳಿಕೆಯಲ್ಲಿ ೧೮೭೦ ರ ಜನೆವರಿ ೨೪ ರಂದು ಜನಿಸಿದ. ಲಕ್ಷ್ಮಿನಾರಣಪ್ಪ ಬಾಲ್ಯದಲ್ಲಿ ಮುದ್ದು ಮುದ್ದಾಗಿದ್ದ ಕಾರಣಕ್ಕಾಗಿ ಎಲ್ಲರ ಪ್ರೀತಿಯ “ಮುದ್ದಣ್ಣ” ನೆನಿಸಿ ಅದೇ ಕಾವ್ಯನಾಮದಲ್ಲಿ ಅನೇಕ ಅಮೂಲ್ಯ ಕೃತಿಗಳನ್ನು ನೀಡಿದ. ರತ್ನಾವತಿ ಕಲ್ಯಾಣ ಯಕ್ಷಗಾನ ಪ್ರಸಂಗ, ಕುಮಾರ ವಿಜಯ, ಅದ್ಭುತ ರಾಮಾಯಣ, ಶ್ರೀರಾಮ ಪಟ್ಟಾಭಿಷೇಕಂ, ಮೊದಲಾದವು ನಮ್ಮ ಓದಿಗೆ ದೊರಕಿವೆ.
ತನ್ನ ಬಡತನದ ನಡುವೆಯೂ ಕಾವ್ಯ ಪ್ರೀತಿಯನ್ನು ಉಳಿಸಿಕೊಂಡು ಸಾಹಿತಿಗಳಿಗೆ ಭವತಿ ಭಿಕ್ಷಾಂದೇಹಿ ಎಂಬ ಸಪ್ತಾಕ್ಷರಿ ಮಂತ್ರವೇ ಗತಿ ಎಂದು ಹೇಳಿದ ಅವನು ತನ್ನ ಪತ್ನಿಯ ಜೊತೆ ಸರಸ ಸಂಭಾಷಣೆಯ ಮೂಲಕವೇ ಕಾವ್ಯ ರಚಿಸಿದ. ಕನ್ನಡಂ ಕತ್ತುರಿಯಲ್ತೆ ಎಂದ ಅವನು ಮಹಾ ಪ್ರತಿಭಾವಂತನಾಗಿದ್ದರೂ ಅಲ್ಪಾಯುಷಿಯಾಗಿ ಕೇವಲ ಮೂವತ್ತು ವರ್ಷ ಬಾಳಿ ೧೯೦೧ ರ ಫೆ. ೧೫ ರಂದು ಕಣ್ಮರೆಯಾದದ್ದು ಕನ್ನಡ ಕಾವ್ಯರಸಿಕರಿಗಾದ ನಷ್ಟ.
ತಿಮ್ಮಪ್ಪಯ್ಯ- ಮಹಾಲಕ್ಷ್ಮಿ ದಂಪತಿಗಳ ಮುದ್ದುಮಗನಾಗಿ ಜನಿಸಿ, ಉಡುಪಿಯಲ್ಲಿ ಪ್ರೌಢ ಶಿಕ್ಷಣ ಮುಗಿಸಿ ಶಾಲಾ ಶಿಕ್ಷಕನಾಗಿ ಕೆಲಸಕ್ಕೆ ಸೇರಿದ ಮುದ್ದಣನ ಸದೃಢ ಕಾಯವನ್ನು ಗಮನಿಸಿ ಶಾಲಾ ಮುಖ್ಯೋಪಾಧ್ಯಾಯರೇ ಅವನನ್ನು ಮದ್ರಾಸಿಗೆ ದೈಹಿಕ ಶಿಕ್ಷಣ ತರಬೇತಿಗೆ ಕಳಿಸಿದರು. ಮರಳಿ ಬಂದು ವ್ಯಾಯಾಮ ಶಿಕ್ಷಕರಾಗಿ ಕೆಲವರ್ಷ ಸೇವೆ ಸಲ್ಲಿಸಿದ ಮುದ್ದಣ ಆಗಲೇ ಪ್ರಬುದ್ಧ ಕಾವ್ಯ ರಚನೆಗೆ ತೊಡಗಿದನಾದರೂ ತನ್ನ ಸಂಕೋಚದ ಸ್ವಭಾವದಿಂದಾಗಿ ತಾನು ರಚಿಸಿದ ಕೃತಿಗಳು ತನ್ನದೆಂದು ಸಹ ಹೇಳಿಕೊಳ್ಳದೇ ಯಾರೋ ಪ್ರಾಚೀನ ಕವಿಗಳದೆಂದು ಹೇಳಿ ಪತ್ರಿಕೆಗಳಿಗೆ ಕಳಿಸಿದ. ಇದರಿಂದಾಗಿ ಮುದ್ದಣನಿಗೆ ಅವನ ಜೀವಿತಾವಧಿಯಲ್ಲಿ ಸಿಗಬೇಕಾದ ಮನ್ನಣೆ ಪ್ರಾಪ್ತವಾಗಲೇಇಲ್ಲ. ಅದರಲ್ಲೂ ಅಲ್ಪಾಯುಷಿ ಬದುಕು. ಎಚ್. ನಾರಾಯಣರಾವ್, ಬೆನಗಲ್ ರಾಮರಾಯರು, ಮಳಲಿ ಸುಬ್ಬರಾಯರು, ಬವಲಾಡಿ ವೆಂಕಟರನಣ ಹೆಬ್ಬಾರ ನೊದಲಾದವರ ಪ್ರೇರಣೆ, ಮಾರ್ಗದರ್ಶನದಲ್ಲಿ ಮುದ್ದಣ ಸಾಹಿತ್ಯ ರಚನೆ ಮಾಡಿದ.
ಮುದ್ದಣನ ಮರಣದ ೨೯ ವರ್ಷಗಳ ನಂತರವೇ ಅವನ ಕೆಲವು ಕೃತಿಗಳು ಅವನದೆಂಬುದು ಬೆಳಕಿಗೆ ಬಂದಿದ್ದು. ಪಂಜೆ ಮಂಗೇಶರಾಯರು, ಹುರಳಿ ಭೀಮರಾಯರು, ಬೆನಗಲ್ ರಾಮರಾಯರು ಸೇರಿ ಅವೆಲ್ಲ ಮುದ್ದಣನ ರಚನೆಗಳೇ ಎಂದು ಸ್ಪಷ್ಟಪಡಿಸಿದರು. ರತ್ನಾವತಿ ಕಲ್ಯಾಣ ಒಂದು ಸುಂದರ ಯಕ್ಷಗಾನ ಪ್ರಸಂಗವಾದರೆ, ಶ್ರೀರಾಮ ಪಟ್ಟಾಭಿಷೇಕ, ಅದ್ಭುತ ರಾಮಾಯಣಂ, ಶ್ರೀ ರಾಮಾಶ್ವಮೇಧ, ಗೋದಾವರಿ, ಕುಮಾರ ವಿಜಯ ಮತ್ತು ಜೋಜೋ ( ಪ್ರಬಂಧ) ಎಂಬ ಏಳು ಕೃತಿಗಳು ಮುದ್ದಣನಿಂದ ರಚಿಸಲ್ಪಟ್ಟಿದ್ದು ಅವುಗಳಲ್ಲಿ ಮುದ್ದಣ- ಮನೋರಮೆಯರ ಸರಸ ಸಲ್ಲಾಪ ದಿಂದ ಕೂಡಿದ ಶ್ರೀರಾಮಾಶ್ವಮೇಧ ಸೀತಾಪರಿತ್ಯಾಗದ ಕತೆಯಿಂದ ಕೂಡಿದೆ.
“ಕನ್ನಡ ನವೋದಯದ ಮುಂಗೋಳಿ” ಎಂದು ಮುದ್ದಣನನ್ನು ಬಣ್ಣಿಸಲಾಗಿದ್ದು, “ಕಬ್ಬಿಗರ ಬಲ್ಲಹಂ” ಎಂಬ ಬಿರುದೂ ಅವನಿಗಿದೆ. ತನ್ನ ಕಾವ್ಯವನ್ನು ತಿರುಳ್ಗನ್ನಡ/ ಸಕ್ಕದ ಕನ್ನಡ ನಲ್ನುಡಿಯದು ಎಂದು ಹೇಳಿಕೊಂಡ ಮುದ್ದಣನ ರಚನೆಗಳ ಓದಿನ ಹೊರತಾಗಿ ಕನ್ನಡದ ಕಾವ್ಯಾಭ್ಯಾಸ ಅಪೂರ್ಣವೇ ಸರಿ.
ಪತ್ನಿ ಕಮಲಾಬಾಯಿ, ಪುತ್ರ ರಾಧಾಕೃಷ್ಣ. ಕ್ಷಯರೋಗದಿಂದ ೧೯೦೧ ರ ಫೆಬ್ರವರಿ ೧೫ ರಂದು ಮೃತಪಟ್ಟಾಗ ಮುದ್ದಣ ಕವಿಗೆ ಕೇವಲ ೩೧ ವರ್ಷ.
ಮುದ್ದಣನ ಗೌರವಾರ್ಥ ೨೦೧೭ ರಲ್ಲಿ ಭಾರತ ಸರಕಾರ ಅಂಚೆಚೀಟಿ ಹೊರತಂದಿದ್ದು ನಂದಳಿಕೆಯಲ್ಲಿ ಅವನ ಹೆಸರಿನಲ್ಲಿ ಸಭಾಗೃಹ ನಿರ್ಮಿಸಲಾಗಿದೆ. ಮುದ್ದಣನ ಹೆಸರಿನಲ್ಲಿ ೧೯೭೯ ರಿಂದ ಪ್ರತಿ ವರ್ಷ ಮುದ್ದಣ ಜಯಂತಿ ಆಚರಿಸಲಾಗುತ್ತಿದೆ. ಕಾವ್ಯ ಪ್ರಶಸ್ತಿ ನೀಡಲಾಗುತ್ತಿದೆ. ಕವಿ ಮುದ್ದಣ ಸ್ಮಾರಕ ಮಿತ್ರ ಮಂಡಳಿ ರಚನೆಯಾಗಿದೆ.
ಎಲ್. ಎಸ್. ಶಾಸ್ತ್ರಿ