ನೆನಪು
ಸುಭಾಶ್ಚಂದ್ರ ಭೋಸ್ ನೆನಪಿನಲ್ಲಿ
ಸುಲೋಚನಾ ಮಾಲಿಪಾಟೀಲ
ದೇಶದ ಸ್ವಾತಂತ್ರ್ಯ ಹೋರಾಟಗಾರಾಗಿ, ಸ್ವಾತಂತ್ರ್ಯದ ನಂತರ ದೇಶದ ಪ್ರಗತಿಗಾಗಿ ಕನಸುಗಳ ಕಂಡ ಕೆಚ್ಚೆದೆಯ ನಾಯಕರೆಂದರೆ ಯಾರು? ಅವರೇ ನೇತಾಜಿ ಸುಭಾಷ್ ಚಂದ್ರ ಬೋಸರು. ಇವರು ೨೩ ಜನವರಿ ೧೮೯೭ ರಲ್ಲಿ ಗುಜರಾತಿನ ಕಟಕವೆಂಬ ಊರಲ್ಲಿ ಜನಿಸಿದರು. ಎಳೆವೆಯಿಂದಲೇ ಪ್ರತಿಭಾವಂತ, ರಾಷ್ಟ್ರಭಕ್ತ, ಬಲು ಚತುರ ಚಾಣಾಕ್ಷರಾಗಿದ್ದರು. ತಮ್ಮ ೧೪ ನೇಯ ವಯಸ್ಸಿನಲ್ಲಿಯೇ ಸ್ವಾಮಿ ವಿವೇಕಾನಂದರ ಹಲವಾರು ಪುಸ್ತಕಗಳನ್ನು ಓದಿ, ಅವರಿಂದ ಪ್ರಭಾವಿತರಾಗಿದ್ದರು. ಅವರು ಬರೀ ಮಾತಾನಾಡದೆ ಸಾಧಿಸಿ ತೋರಿಸುವ ಛಲಗಾರರಾಗಿದ್ದರು. ತಮ್ಮ ಹೆಚ್ಚಿನ ವ್ಯಾಸಂಗಕ್ಕಾಗಿ ಕೆಂಬ್ರೀಜಗೆ ಹೋದಾಗ ಅವರನ್ನು ಒಬ್ಬ ಪ್ರಾಧ್ಯಾಪಕ ಭಾರತೀಯನೆಂದು ತಿಳಿದು ಅವಹೇಳನಮಾಡಿ ಅವಮಾನಿಸಿದ್ದರು. ಅದನ್ನು ಛಲದ ರೂಪದಲ್ಲಿ ಸ್ವೀಕಾರಮಾಡಿ ೧೯೨೦ರಲ್ಲಿ ನಾಗರಿಕ ಸೇವಾ ಪರಿಕ್ಷೇಯಲ್ಲಿ ಕೆಂಬ್ರೀಜ ವಿಶ್ವವಿದ್ಯಾಲಯಕ್ಕೆ ೪ ನೇ ಸ್ಥಾನ ಪಡೆದುಕೊಂಡು ಉತ್ತಿರ್ಣರಾಗಿದ್ದರು. ಅಲ್ಲಿಯ ಜನರು ಭಾರತಿಯನ್ನು ಕಂಡು ನೋಡುವ, ಆಡಿಕೊಳ್ಳುವ ದೃಷ್ಟಿಕೋನ ಬದಲಾಯಿಸಿದ್ದರು. ಬ್ರೀಟಿಷರ ಕೈಕೆಳಗೆ ಗುಲಾಮರಾಗಿ ಕೆಲಸ ಮಾಡುವುದು ಇಷ್ಟವಿರಲಿಲ್ಲ. ಭಾರತೀಯರ ಮೇಲೆ ಬ್ರೀಟಿಷರಿಂದಾಗುವ ದೌರ್ಜನ್ಯ ಕಂಡು ಸುಭಾಷ್ ಚಂದ್ರರವರ ರಕ್ತ ಕುದಿಯುತ್ತಿತ್ತು. ತಮ್ಮ ಕೆಲಸಕ್ಕೆ ರಾಜಿನಾಮೆ ಕೊಟ್ಟು, ಕೇವಲ ತಮ್ಮ ೨೨ ನೇ ವಯಸ್ಸಿನಲ್ಲಿ ಆತ್ಮಾಭಿಮಾನದ ಸ್ವರಾಜ್ಯ ಹೋರಾಟಕ್ಕೆ ಬಲ ತುಂಬಲು ಧೀಮಂತ ನಾಯಕನಾಗಿ ಸ್ವಾತಂತ್ರ್ಯದ ಕ್ರಾಂತಿಕಾರಿ ರಣರಂಗ ಪ್ರವೇಶಿಸಿದರು.
ತಮ್ಮನ್ನು ಸಂಪೂರ್ಣವಾಗಿ ರಾಷ್ಟ್ರರಾಜಕಾರಣದಲ್ಲಿ ತೊಡಗಿಸಿಕೊಂಡ ನಾಯಕತ್ವದ ಗುಣಗಳನ್ನು ಕಂಡ ಕಾಂಗ್ರೆಸ್ಸಿನ ರಾಜಕಾರಣಿಗಳೆಲ್ಲ ಸೇರಿ ಅವರನ್ನು ಭಾರತದ ಕಾಂಗ್ರೇಸ್ಸಿನ ಯುವ ಅಧ್ಯಕ್ಷರನ್ನಾಗಿ ಮಾಡಿದರು. ಸುಭಾಶ್ಚಂದ್ರ ಭೋಸರು . ಚಿತ್ತರಂಜನ್ ದಾಸ ಗುರುಗಳ ಕೈಕೆಳಗೆ ಪಳಗಿದವರಾದ ಕಾರಣ ಹೊರ ದೇಶಗಳಲ್ಲಿ ತಿರುಗಾಡುವುದರ ಮೂಲಕ, ಜಾಗತಿಕ ಚಿತ್ರಣದ ಬಗ್ಗೆ ಮತ್ತು ದೇಶವನ್ನು ಹೇಗೆ ನಡೆಸಿಕೊಂಡು ಹೋಗಬೇಕೆಂಬುದರ ಬಗ್ಗೆ ತಮ್ಮ ವಿಚಾರಧಾರೆಗಳನ್ನು ಅರಿಯುವಂತೆ ಜನರ ಮುಂದಿಟ್ಟಿದ್ದರು. ಅವರ ಭಾಷಣ ಕೂಡ ಅಪ್ರತಿಮ. ಮುಂಬರುವ ದಿನಗಳಲ್ಲಿ ದೇಶಕ್ಕೆ ಆತಂಕದ ಛಾಯೆಗಳಾದ ನೌಕರಶಾಹಿ ಮತ್ತು ದೇಶ ವಿಭಜನೆ ಕುರಿತು ಮೊದಲೆ ಮೂನ್ಸುಚನೆ ಕೊಟ್ಟಿದ್ದರು. ಜನಸಂಖ್ಯೆಯ ಸ್ಪೋಟದ ಕುರಿತು ತಮ್ಮ ನಿಲುವನ್ನು ತಿಳಿಸಿದ್ದರು. ದೇಶ ಸ್ವಾತಂತ್ರ್ಯವಾದನಂತರ ಮುಖ್ಯ ಸಮಸ್ಯೆಗಳಾದ ಬಡತನ, ಅನಕ್ಷರತೆ, ಅನಾರೋಗ್ಯದ ನಿರ್ಮೂಲನೆಗೆ ಔದ್ಯೋಗಿಕ ಉತ್ಪಾದನೆಗಳನ್ನು ಹೆಚ್ಚಿಸಿ, ಎಲ್ಲರಿಗೂ ನಿತ್ಯ ಅಗತ್ಯಗಳನ್ನು ಪೂರೈಕೆಮಾಡುವ ಒಂದು ಸಮರ್ಥ ಯೋಜನಾ ಆಯೋಗ ನೇಮಕ ಮಾಡುವ ಉದ್ದೇಶ ಇಟ್ಟುಕೊಂಡಿದ್ದರು. ಪರ ರಾಷ್ಟ್ರಗಳ ಜೊತೆಗೂ ಚೆನ್ನಾಗಿ ಸಂಬಂಧಗಳನ್ನು ಬೆಳೆಸಿಕೊಂಡು ಹೊರ ದೇಶಗಳಲ್ಲಿ ಆಗುವ ಪ್ರಗತಿಯನ್ನು ತಮ್ಮ ದೇಶದಲ್ಲಿಯೂ ಆಗಬೇಕೆಂದು ಕನಸು ಕಂಡಿದ್ದರು. ವಿದೇಶಿ ಉದ್ಯಮಿಗಳ ಜೊತೆ ಸ್ಪರ್ಧೆ ಮಾಡಬೇಕಾದರೆ ಔದ್ಯೋಗಿಕರಣಕ್ಕೆ ಹೆಚ್ಚು ಒತ್ತು ಕೊಡುವ ವ್ಯವಸ್ಥೆ ಕೂಡ ಮಾಡುವವರಿದ್ದರು. ನೇತಾಜಿ ಸುಭಾಷ್ ಚಂದ್ರರ ಕ್ರಾಂತಿಕಾರಿ ನಡೆಗೆ ಬ್ರೀಟಿಷರು ಹೆದರಿ ಅವರನ್ನು ಸಣ್ಣಪುಟ್ಟ ವಿಷಯಗಳನ್ನು ಮುಂದೆಮಾಡಿ ಸೆರೆಮನೆಗೆ ತಳ್ಳುತ್ತಿದ್ದರು. ತವರೂರಿಗೂ ಹೋಗಲು ಅವಕಾಶ ಮಾಡಿಕೊಡುತ್ತಿರಲಿಲ್ಲ. ಸ್ವಾತಂತ್ರ್ಯ ಪಡೆಯಲು ನೇತಾಜಿ ಸುಭಾಶ್ಚಂದ್ರರು ಜರ್ಮನರ ಕದ ತಟ್ಟಿದರು. ಸುಭಾಶ್ಚಂದ್ರ ಭೋಸರ ವ್ಯಕ್ತಿತ್ವದ ವರ್ಚಸ್ಸನ್ನು ಕಂಡು ಅವರಿಗೆ ವಾಸಿಸಲು ಮನೆ, ಕಾರು ಕೊಟ್ಟು ಒಬ್ಬ ಸೇನಾಕಾವಲುಗಾರನನ್ನು(ಸೆಕ್ಯೂರಿಟಿ) ನೆಮಿಸಿದರು. ಅಲ್ಲಿ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಹಾಗೂ ಬ್ರೀಟಿಷರ ಅರಾಜಕತೆಯ ಬಗ್ಗೆ ಹಿಂದು ಜನರು ಜಾಗೃತಗೊಳ್ಳಲು “ದಿ ಗ್ರೇಟ್ ಇಂಡಿಯನ್ ಸ್ಟ್ರಗಲ್” ಎಂಬ ಪುಸ್ತಕ ಬರೆದರು. ೧೯೩೬ರಲ್ಲಿ ಜರ್ಮನಿಯಿಂದ ಭಾರತಕ್ಕೆ ಮರಳುವುದೊಂದೆ ತಡ ಬ್ರೀಟಿಷರು ಸುಭಾಶ್ಚಂದ್ರ ಭೊಸರನ್ನು ಸೆರೆಮನೆಗೆ ಕಳುಹಿಸದರು. ಇದನ್ನು ಕಂಡು ರೊಚ್ಚಿಗೆದ್ದ ಭಾರತೀಯರು ಪ್ರತಿಭಟನೆ ನಡೆಸಿ, ಬಹಳ ದಿನಗಳವರೆಗೆ ನೇತಾಜಿಯವರನ್ನು ಸೆರೆಮನೆಯಲ್ಲಿ ಇಡಲು ಬಿಡಲಿಲ್ಲ. ಹೊರಬರುತ್ತಿದ್ದಂತೆ ಸುಭಾಶ್ಚಂದ್ರರು ರಾಜಕೀಯದಲ್ಲಿ ಸಕ್ರೀಯಗೊಂಡು, ‘ಭಾರತವನ್ನು ಬಂಧಿಸುವ ಯಾವ ಶಕ್ತಿಯೂ ಭೂಮಿಯಲ್ಲಿ ಇಲ್ಲ. ನಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಯಾವತ್ತೂ ಕಳೆದುಕೊಳ್ಳಬೇಡಿ’. ಶಿಘ್ರದಲ್ಲೆ ಭಾರತ ಸ್ವತಂತ್ರವಾಗಲಿದೆ ಎಂದರು. ಅವರ ಮಾತಿನಲ್ಲಿದ್ದ ಜನರ ಪ್ರೀತಿ, ಪ್ರೆರಣೆಯು ೧೯೩೮ರಲ್ಲಿ ಅವರನ್ನು ಮತ್ತೇ ಭಾರತದ ಕಾಂಗ್ರೆಸ್ಸಿನ ಅಧ್ಯಕ್ಷರನ್ನಾಗಿ ಮಾಡಲಾಯಿತು.
ನೇತಾಜಿ ಬುದ್ಧಿಯಿಂದ ಸಂತನಾದರೆ, ಕರ್ಮದಿಂದ ಮಹಾಯೋದ್ಧನಾಗಿದ್ದರು. ತಮ್ಮ ಕಾಲಿಗೆ ಚಕ್ರ ಕಟ್ಟಿಕೊಂಡತೆ ದೇಶದ ಮೂಲೆ ಮೂಲೆಗಳಲ್ಲಿ ಸಂಚರಿಸಿ ಯುವ ಜನರನ್ನು ಸ್ವಾತಂತ್ರ್ಯದ ಚಳುವಳಿಗೆ ಒಗ್ಗೂಡಿಸಿದರು. ಇವರ ಕ್ರಾಂತಿಕಾರಿ ಸ್ವಭಾವವನ್ನು ಗಾಂಧಿಜಿ ಮತ್ತು ಅವರ ಅನುಯಾಯಿಗಳು ವಿರೋಧಿಸುತ್ತಿದ್ದಾಗ ಸುಭಾಶ್ಚಂದ್ರರು ತಮ್ಮನ್ನು ಸಮರ್ಥಿಸಿಕೊಳ್ಳಲು ‘ಗುಲಾಬಿ ಹೂಗಳು ಬೇಕೆಂದಾಗ ಅದರ ಮುಳ್ಳಿಂದಾಗುವ ನೋವನ್ನು ಸಹಿಸಿಕೊಳ್ಳಬೇಕು. ಸ್ವಾತಂತ್ರ್ಯ ಬೇಕೆಂದರೆ ತ್ಯಾಗ, ಬಲಿದಾನ ಮಾಡಲೇಬೇಕು’ ಅಂದವರು. ಒಂದೆಡೆ ದೇಶದ ತುಂಬಾ ಕ್ರಾಂತಿಕಾರಿ ಚಟುವಟಿಕೆಗಳು ಹೆಚ್ಚಾದಂತೆ, ಕಾಂಗ್ರೆಸ್ಸಿಗರಲ್ಲಿ ಸುಭಾಶ್ಚಂದ್ರರವರ ವಿರೋಧಿಗಳು ಹೆಚ್ಚಾಗುತ್ತ ಬಂದರು. ಕೊನೆಗೆ ಬೆಸತ್ತು ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿ ತಮ್ಮದೆ ಆದ ‘ಆಝಾದ್ ಹಿಂದ್ ಫೌಜ್’ಎಂಬ ಸಂಘಟನೆಗಳನ್ನು ರಚಿಸಿ ಸೈನ್ಯಕಟ್ಟಿಕೊಂಡರು. ‘ಭಾರತೀಯರೇ ನನಗೆ ನಿಮ್ಮ ಹನಿ ರಕ್ತವನ್ನು ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ತಂದುಕೊಡುತ್ತೇನೆ’ ಎಂದು ಜಾಗೃತಿ ಮೂಡಿಸುವುದು ಮೂಲಕ ಬ್ರೀಟಿಷರಲ್ಲಿ ಮತ್ತು ತಮ್ಮನ್ನು ವಿರೋಧಿಸುವ ಅನುಯಾಯಿಗಳಲ್ಲಿ ನಡುಕ ಹುಟ್ಟಿಸಿದರು. ಅದು ಜನರಿಗೆ ಸ್ಪೂರ್ತಿ ತುಂಬುವ ಮಾತಾಗಿತ್ತು. ಜನರು ತಮ್ಮ ತಮ್ಮ ಮಕ್ಕಳನ್ನು ಸೇನೆಯಲ್ಲಿ ನೇಮಕಮಾಡುವುದಲ್ಲದೆ ತಮ್ಮಲ್ಲಿದ್ದ ಧನ, ಬಂಗಾರವನೆಲ್ಲ ಸ್ವಾತಂತ್ರ್ಯಕ್ಕೊಸ್ಕರ ಸುಭಾಶ್ಚಂದ್ರರರಿಗೆ ತಂದೊಪ್ಪಿಸಿದರು. ಜಪಾನ್ ದೇಶದಲ್ಲಿಯೂ ಭಾರತೀಯರ ಸೈನ್ಯ ಸಂಘಟನೆಯ ಕಟ್ಟಿ, ಅದರ ಮುಖಂಡತ್ವವನ್ನು ಭಾರತೀಯಳಾದ ಲಕ್ಷ್ಮಿ ಸ್ವಾಮಿನಾಥನ್ ಗೆ ಒಪ್ಪಿಸಿದ್ದರು. ೧೯೪೨ರಲ್ಲಿ ಭಾರತದ ಕೆಲವು ಹಳ್ಳಿಗಳನ್ನು ಮತ್ತು ಅಂದಮಾನ ನಿಕೋಬಾರ ಪ್ರದೇಶಗಳನ್ನು ಬ್ರೀಟಿಷರಿಂದ ಸ್ವತಂತ್ರಗೊಳಿಸಿದರು. ‘ಸ್ವಾತಂತ್ರ್ಯವನ್ನು ಯಾರೂ ಕೊಡುವುದಿಲ್ಲ ಅದನ್ನು ನಾವೇ ಗಿಟ್ಟಿಸಿಕೊಳ್ಳಬೇಕು’ ಎಂಬ ಹಂಬಲ ಅವರದಾಗಿತ್ತು.
‘ಗುಲಾಮಿಯ ಸಂಕೋಲೆ ಕಿತ್ತೊಗೆಯಲು ಭಾರತೀಯರ ಹೃದಯ ಒಂದೇ, ಪ್ರಾಣ ಒಂದೇ ಆಗಿರಬೇಕು’. ಈ ಕ್ರಾಂತಿಕಾರಿ ನುಡಿಗಳು ಬ್ರೀಟಿಷರಲ್ಲಿ ನಡುಕ ಹುಟ್ಟಿಸಿದ್ದವು. ನೇತಾಜಿ ಸುಭಾಶ್ಚಂದ್ರರರು ಜರ್ಮನ್, ಜಪಾನ, ತೈವಾನಿನ ನಿಕಟ ಸಂಪರ್ಕ ಹೊಂದಿದವರಾಗಿದ್ದರು. ಯಾಕೆಂದರೆ ಸಾಕಷ್ಟು ಬಾರಿ ಭೇಟಿ ನೀಡಿದ್ದರಿಂದ ೧೯೪೫ರಲ್ಲಿ ತೈವಾನ್ ವಿಮಾನ ಪಯಣದಲ್ಲಿದ್ದಾಗ ಇಂಧನ ಕೊರತೆಯಿಂದ ವಿಮಾನ ಅಪಘಾತವಾಗಿ ಅದರಲ್ಲಿ ಅವರು ತೀವ್ರ ಗಾಯಗೊಂಡು ನಿಧನಹೊಂದಿದರೆಂಬ ಸುದ್ದಿಯೂ ಹರಡಿತು. ಅದರ ಸತ್ಯಾಸತ್ಯತೆ ಸರಿಯಾಗಿ ಪರಿಕ್ಷಿಸಬೇಕಾಗಿತ್ತು. ಆದರೆ ಯಾರು ಮಾಡಲಿಲ್ಲ. ಹೀಗಾಗಿ ಅವರ ಅಂತ್ಯಕೂಡ ನಿಗೂಢವಾಗಿಯೇ ಉಳಿದುದು ವಿಪರ್ಯಾಸವೇ ಸರಿ. ಏನೇಯಾಗಲಿ ಕೆಚ್ಚೆದೆಯ ಸುಭಾಶ್ಚಂದ್ರ ಭೋಸರ ನಾಯಕತ್ವದ ಗುಣ, ದೇಶಭಕ್ತಿ, ಧೈರ್ಯ, ದೂರ ದೃಷ್ಟಿಯ ಸ್ವಾತಂತ್ರ್ಯ ಹೋರಾಟದ ರಣತಂತ್ರ ಇಂದಿಗೂ ಭಾರತಿಯರಿಗೆ ಸ್ಪೂರ್ತಿದಾಯಕವಾಗಿದೆ. ಸ್ವಾಂತಂತ್ರ್ಯದ ಬಗ್ಗೆ ನೇತಾಜಿ ಸುಭಾಶ್ಚಂದ್ರರು ಹೇಳುವ ಮಾತು ‘ಒಬ್ಬ ವ್ಯಕ್ತಿ ತನ್ನ ಕನಸಿಗಾಗಿ ತನ್ನ ಪ್ರಾಣ ಕೂಡ ತ್ಯಾಗಮಾಡಬಹುದು’ ಆದರೆ ಆತನ ಬಲಿದಾನ ಸಹಸ್ರಾರು ಹೃದಯಗಳಲ್ಲಿ ಅದು ಮತ್ತೆ ಕ್ರಾಂತಿಯ ಬುಗ್ಗೆಯಾಗಿ ಹುಟ್ಟುತ್ತದೆ. ಸುಭಾಶ್ಚಂದ್ರ ಭೋಸರು ಸ್ವಾತಂತ್ರ್ಯ ತರಲು ಕ್ರಾಂತಿಕಾರಿ ಸಶಸ್ತ್ರ ಹೋರಾಟವನ್ನು ಒಪ್ಪಿದವರು. ಸ್ವಾತಂತ್ರ್ಯ ಪಡೆಯುವಲ್ಲಿ ಜನರನ್ನು ಉತ್ತೇಜಿಸಿ ತಮ್ಮದೆಯಾದ ಕೊಡುಗೆಯನ್ನು ನೀಡಿದವರು. ಸುಭಾಶ್ಚಂದ್ರ ಅವರ ಜೀವನಗಾಥೆ ಕೇಳಿದಾಗೊಮ್ಮೆ ಭಾರತೀಯರ ಬೆನ್ನಹಿಂದೆ ಅವರ ನೆರಳು ಯಾವಾಗಲೂ ಉತ್ತೆಜನೆ ನೀಡುವ ಭಾಸ (ಹೊಳಪು) ಎದ್ದುಕಾಣುತ್ತದೆ. ಸುಭಾಷ ಚಂದ್ರ ಬೋಸರ ಜೀವನ ಪಯಣಕ್ಕೆ ನಮ್ಮೆಲ್ಲರ ಹೃದಯ ತುಂಬಿ ಬರುವ ನಮನ ನೀಡಲೇಬೇಕು.
ಸುಲೋಚನಾ ಮಾಲಿಪಾಟೀಲ