ಅರುಣಾ ರಾವ್ ಲೇಖನ -ಸುಗ್ಗಿ ಸಂಭ್ರಮ

ಲೇಖನ ಸಂಗಾತಿ

ಅರುಣಾ ರಾವ್

ಸುಗ್ಗಿ ಸಂಭ್ರಮ

ಸಂಕ್ರಾಂತಿ ಬಂತು

ಸುಗ್ಗಿ ಸಂಭ್ರಮ ತಂತು

ಎಳ್ಳು ಬೆಲ್ಲ ತಿನ್ನುಸ್ತು

ಮೈಶಾಖ ಬೆಳೆಸ್ತು||

ಹೌದು, ಸಂಕ್ರಾಂತಿ ಸುಗ್ಗಿಯ ಹಬ್ಬ. ನಮ್ಮ ಭಾರತ ದೇಶದಲ್ಲಿ ಸಂಕ್ರಾಂತಿ, ಪೊಂಗಲ್, ಬಿಹು, ಮಾಘೀ, ಮಾಘ ಮೇಳ ಎಂದು ನಾನಾ ಹೆಸರುಗಳಿಂದ ಕರೆಯಲ್ಪಡುವ ಈ ಹಬ್ಬ, ನೆರೆ ರಾಜ್ಯ ನೇಪಾಳದಲ್ಲೂ ಸಹ ಬಹಳ ವಿಜೃಂಭಣೆಯಿಂದ ಆಚರಿಸಲ್ಪಡುತ್ತದೆ. ಸಂಕ್ರಾಂತಿ ಹಬ್ಬಕ್ಕೆ ತನ್ನದೇ ಆದ ವೈಶಿಷ್ಟ್ಯವಿದೆ. ಉತ್ತರಾಯಣ ಪುಣ್ಯಕಾಲದಲ್ಲಿ ಆಚರಿಸಲ್ಪಡುವ ಮೊಟ್ಟಮೊದಲನೆಯ ಹಿಂದೂ ಹಬ್ಬವೇ ಈ  ಮಕರ ಸಂಕ್ರಾಂತಿ.ಇಂದು ಸೂರ್ಯನು ಧನುರ್ ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವುದರಿಂದ ಇದನ್ನು ‘ಮಕರ ಸಂಕ್ರಾಂತಿ’ ಎಂದು ಕರೆಯಲಾಗುತ್ತದೆ.

ಮಕರ ಸಂಕ್ರಾಂತಿಯ ಆಚರಣೆಗೆ ಪುರಾಣಗಳಲ್ಲೂ ಐತಿಹ್ಯವಿದೆ. ಭಗೀರಥನು ಘೋರ ತಪಸ್ಸನ್ನು ಆಚರಿಸಿ, ದೇವಲೋಕದ ಗಂಗೆಯನ್ನು ಭೂಮಿಗೆ ಕರೆತಂದು ತನ್ನ ಪಿತೃದೇವತೆಗಳಿಗೆ ತರ್ಪಣವನ್ನು ನೀಡಿ, ಅವರಿಗೆ ಮೋಕ್ಷ ಸಿಗುವಂತೆ ಮಾಡಿದ ಪುಣ್ಯ ದಿನವಿದು. ಆದ್ದರಿಂದಲೇ ಈ ದಿನದಂದು ಪಿತೃಗಳಿಗೆ ಎಳ್ಳು ನೀರಿನಿಂದ ತರ್ಪಣವನ್ನು ನೀಡಲಾಗುತ್ತದೆ.

ಮಹಾಭಾರತದ ಕುರುಕ್ಷೇತ್ರದಲ್ಲಿ ಶರಶಯ್ಯೆಯ ಮೇಲೆ ಮಲಗಿದ್ದ ಭೀಷ್ಮಾಚಾರ್ಯರು ತಮ್ಮ ಪ್ರಾಣವನ್ನು ತ್ಯಜಿಸಲು ಉತ್ತರಾಯಣ ಪುಣ್ಯ ಕಾಲದ ನಿರೀಕ್ಷೆಯಲ್ಲಿದ್ದರು.  ಏಕೆಂದರೆ ಉತ್ತರಾಯಣದ ಆರು ತಿಂಗಳುಗಳ ಕಾಲ ಸ್ವರ್ಗದ ಬಾಗಿಲು ತೆರೆದಿರುತ್ತದೆ. ಈ ಆಯೋಗದಲ್ಲಿ ಮೃತರಾದವರು ನೇರವಾಗಿ ಸ್ವರ್ಗಕ್ಕೆ ಹೋಗುವರೆಂದು ನಮ್ಮ ಪುರಾಣಗಳು ಹೇಳುತ್ತವೆ.

ಉತ್ತರಾಯಣ ಪುಣ್ಯಕಾಲದಲ್ಲಿ ಸೂರ್ಯನು ತನ್ನ ಪಥವನ್ನು ದಕ್ಷಿಣದಿಂದ ಉತ್ತರ ದಿಕ್ಕಿಗೆ ಬದಲಿಸುತ್ತಾನೆ. ಇಲ್ಲಿಯವರೆಗೂ ಇದ್ದ ಚಳಿ ಮೋಡಗಳು ಚದುರಿ ಆಕಾಶದಲ್ಲಿ ಸೂರ್ಯನು ಪ್ರಕಾಶಮಾನವಾಗಿ ಕಂಗೊಳಿಸತೊಡಗುತ್ತಾನೆ. ಉತ್ತರಾಯಣವು ಯಾವುದೇ ಶುಭ ಕಾರ್ಯಗಳನ್ನು ಮಾಡಲು ಯೋಗ್ಯ ಕಾಲ. ಮಕರ ಸಂಕ್ರಮಣದ ದಿನದಂದು ಭಾರತದ  ಪವಿತ್ರ ತೀರ್ಥಗಳಾದ ಗಂಗೆ, ಯಮುನೆ, ಗೋದಾವರಿ, ಕೃಷ್ಣೆ, ಕಾವೇರಿ ಮುಂತಾದ ನದಿಗಳಲ್ಲಿ ಸ್ನಾನ ಮಾಡಿದರೆ ಮಹಾ ಪುಣ್ಯವೂ

ತೀರ್ಥ ಸ್ನಾನವನ್ನು ಮಾಡುವುದರಿಂದ ಮಹಾಪುಣ್ಯವು ದೊರಕುವುದೆಂಬ ಪ್ರತೀತಿ ಇದೆ.

ಉತ್ತರ ಭಾರತದಲ್ಲಿ ಈ ದಿನದಂದು ವಿಶೇಷವಾಗಿ ಗಾಳಿಪಟವನ್ನು ಹಾರಿಸಲಾಗುತ್ತದೆ. ಎಳ್ಳಿನಿಂದ ಸಿಹಿ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಮಕರ ಸಂಕ್ರಾಂತಿ ಹಬ್ಬದಂದು ಹರಿದ್ವಾರ ಹಾಗೂ ಪ್ರಯಾಗಗಳಲ್ಲಿ ಪೂರ್ಣ ಕುಂಭ ಅಥವಾ ಅರ್ಧ ಕುಂಭದ ವಿಶೇಷ ಉತ್ಸವಗಳನ್ನೂ ಸಹ ಆಯೋಜಿಸಲಾಗುತ್ತದೆ.

ತಮಿಳುನಾಡಿನಲ್ಲಿ ಈ ಹಬ್ಬವನ್ನು ‘ಪೊಂಗಲ್’ ಎಂದೂ, ಕರ್ನಾಟಕ ಆಂಧ್ರಪ್ರದೇಶ ಹಾಗೂ ತೆಲಂಗಾಣಗಳಲ್ಲಿ ‘ಸಂಕ್ರಾಂತಿ’ ಎಂದೂ ಕರೆಯುತ್ತಾರೆ.  ರೈತರ ಪಾಲಿಗಂತೂ ಇದು ಬಹಳ ದೊಡ್ಡ ಹಬ್ಬ. ಮಕರ ಸಂಕ್ರಾಂತಿಯ ದಿನದಂದು ಮನೆಯ ಮುಂದೆ ರಂಗುರಂಗಿನ ರಂಗೋಲಿಯನ್ನು ಹಾಕಿ, ಮಾವಿನ ಎಲೆಗಳ ತೋರಣವನ್ನು ಕಟ್ಟಿ ಸಿಂಗರಿಸಲಾಗುತ್ತದೆ.  ಕಬ್ಬಿನ ಜಲ್ಲೆಗಳನ್ನು ಬಾಗಿಲಿನ ಇಕ್ಕೆಲಗಳಲ್ಲಿ ನಿಲ್ಲಿಸಲಾಗುತ್ತದೆ.ರೈತರು ತಾವು ಬೆಳೆದ ದವಸ ಧಾನ್ಯಗಳನ್ನು ರಾಶಿ ಮಾಡಿ, ಧಾನ್ಯಲಕ್ಷ್ಮಿಗೆ ಪೂಜೆಯನ್ನು ಸಲ್ಲಿಸುತ್ತಾರೆ. ಹೊಸದಾಗಿ ಬಂದ ಫಸಲುಗಳಾದ ಕಡಲೆಕಾಯಿ, ಗೆಣಸು, ಅವರೆಕಾಯಿಗಳನ್ನು ಬೇಯಿಸುತ್ತಾರೆ. ಅಕ್ಕಿ ಹಾಗೂ ಹೆಸರುಬೇಳೆಗಳಿಂದ ಪೊಂಗಲನ್ನು ತಯಾರಿಸಿ, ದೇವರಿಗೆ ನೈವೇದ್ಯ ಮಾಡುತ್ತಾರೆ.. ತಮ್ಮ ವ್ಯವಸಾಯಕ್ಕೆ ಸಹಕರಿಸಿದ ಜಾನುವಾರುಗಳ ಮೈತೊಳೆದು,  ಸಿಂಗರಿಸಿ, ಪೂಜಿಸಿ ಅವುಗಳನ್ನು ಕೃತಜ್ಞತೆಯನ್ನು ಸಲ್ಲಿಸುತ್ತಾರೆ. ಇಷ್ಟೇ ಅಲ್ಲದೆ, ಈ ದಿನ ಸಣ್ಣ ಸಣ್ಣ ಮಣ್ಣಿನ ಮಡಿಕೆಗಳನ್ನು ತಂದು, ಅವುಗಳಿಗೆ ದಾರ ಸುತ್ತಿ, ಅವುಗಳಲ್ಲಿ ಬೋರೆಹಣ್ಣು, ಕಬ್ಬಿನ ತುಂಡುಗಳು, ನೆಲಗಡಲೆ, ಕಡಲೆಕಾಳು, ಎಳ್ಳು ಬೆಲ್ಲಗಳಿಂದ ತುಂಬಿಸುತ್ತಾರೆ. ಮನೆಯಲ್ಲಿರುವ ಚಿಕ್ಕ ಮಕ್ಕಳನ್ನು ಹಸೆಮಣೆಯ ಮೇಲೆ ಕೂಡಿಸಿ, ಎಳಚಿ ಅಥವಾ ಬೋರೆ ಹಣ್ಣು, ಎಳ್ಳು ಬೆಲ್ಲ ಹಾಗೂ ನಾಣ್ಯಗಳಿಂದ ದೃಷ್ಟಿ ನಿವಾಳಿಸುತ್ತಾರೆ.

ಆ ದಿನ ಸಂಜೆ ಜಾನುವಾರುಗಳನ್ನು ಕಿಚ್ಚಾಯಿಸುತ್ತಾರೆ. ಇದರಿಂದಾಗಿ ಅವುಗಳ ಮೈ ಮೇಲಿನ ಪುಣ್ಯ ಮುಂತಾದ ಕೀಟಾನುಗಳು ನಶಿಸಿ, ಜಾನುವಾರುಗಳು ಆರೋಗ್ಯವಂತವಾಗುತ್ತವೆ. ಸುಗ್ಗಿಯ ಕಣಗಳಲ್ಲಿ ಸಾಯಂಕಾಲದ ಸಮಯದಲ್ಲಿ ಕೋಲಾಟ, ಯಕ್ಷಗಾನ, ನಾಟಕ ಪಗಡೆಯಾಟ, ಚೌಕಬಾರ ಮುಂತಾದ ಮನರಂಜನಾ ಕಾರ್ಯಕ್ರಮಗಳು ಬಲು ಜೋರು. . ಇಂದಿನ ಆಧುನಿಕ ಯುಗದಲ್ಲಿ ಮಡಿಕೆಗಳಿಗೆ ಬದಲಾಗಿ ವೈವಿಧ್ಯಮಯ ಪ್ಲಾಸ್ಟಿಕ್ ಡಬ್ಬಗಳನ್ನು, ತರಾವರಿ ಸಿಲ್ವರ್ ಕೋಟೆಡ್ ತಟ್ಟೆಗಳನ್ನು ಮಡಿಕೆಗಳಿಗೆ ಬದಲಾಗಿ ಬಳಸಲಾಗುತ್ತದೆ. ಹೊಸದಾಗಿ ಮದುವೆಯಾದ ದಂಪತಿಗಳು ಸಂಕ್ರಾಂತಿ ಹಬ್ಬದಂದು ಐದು ಜನ ಮುತ್ತೈದೆಯರಿಗೆ ಬಾಗಿನ ಕೊಡುವುದೂ ಉಂಟು‌

ಸಿಂಗಾರಗೊಂಡ ಹೆಂಗಳೆಯರು ಮತ್ತು ಮಕ್ಕಳು ಮನೆಮನೆಗೆ ತೆರಳಿ, ಎಳ್ಳುಬೆಲ್ಲವನ್ನು ಕಬ್ಬಿನ ಜಲ್ಲೆ ಹಾಗೂ ಬಾಳೆಹಣ್ಣುಗಳ ಜೊತೆಗೆ ಹಂಚಿ ಸಂಭ್ರಮಿಸುತ್ತಾರೆ. “ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡು” ಎಂಬ ನಾಣ್ಣುಡಿಯೂ ಕನ್ನಡದಲ್ಲಿ ಜನಪ್ರಿಯವಾಗಿದೆ. ಎಳ್ಳು ಬೆಲ್ಲವನ್ನು ಮನೆ ಮನೆಗೆ ಹೋಗಿ ಹಂಚುವುದರಿಂದ ಅವರ ಮಧ್ಯೆ ಸ್ನೇಹ, ಸೌಹಾರ್ದತೆ ಬೆಳೆಯಲು ಅನುವು ಮಾಡಿಕೊಡುತ್ತದೆ. ಈ ಹಿಂದೆ ಏನಾದರೂ ಕಹಿ ಘಟನೆಗಳು ಸಂಭವಿಸಿದ್ದರೂ ಅದನ್ನು ದೂರ ಮಾಡುವ ವಿಧಾನಗಳಲ್ಲಿ ಇದು ಕೂಡ ಒಂದು. ಆದ್ದರಿಂದ ಈ ಹಬ್ಬ ತನ್ನ ವೈಶಿಷ್ಟ್ಯತೆಯನ್ನು ಹಾಗೆಯೇ ಉಳಿಸಿಕೊಂಡು ಬಂದಿದೆ


2 thoughts on “ಅರುಣಾ ರಾವ್ ಲೇಖನ -ಸುಗ್ಗಿ ಸಂಭ್ರಮ

Leave a Reply

Back To Top