ಜಯಶ್ರೀ ಭ ಭಂಡಾರಿ-ಗಜಲ್

ಕಾವ್ಯ ಸಂಗಾತಿ

ಗಜಲ್

ಜಯಶ್ರೀ ಭ ಭಂಡಾರಿ

ಅಲೆಗಳಲಿ ಆಟ ಆಡುತ ಸಂಭ್ರಮದಿ ನಿಂದಿರುವ ಜೋಡಿ
ಕಲೆಗಳ ಕೌಶಲದಿ ನೀರಲಿ ಜಾರುತ ಮಿಂದಿರುವ ಜೋಡಿ.

ಅನುರಾಗದ ಅಬ್ಬರದಲಿ ಜಗವ ಮರೆತು ಓಡುತಿಹರಲ್ಲವೇ
ಅನುಪಮ ಸೌಂದರ್ಯ ಸಾಗರದ ಉಬ್ಬರದಿ ಚೆಂದಿರುವ  ಜೋಡಿ

ಕಣ್ಣು ಹಾಯಿಸಿದಲ್ಲೆಲ್ಲ ಜಲದ ರಾಶಿಯ ಜಾಲವೇ ಕಾಣುತಿಹುದು
ಬಣ್ಣ ಬಂಗಾರದ ಸಂಜೆಯ ಕಿರಣ ಮುಖದಿ ಹೊಂದಿರುವ ಜೋಡಿ

ಹೊಸ ಹುರುಪು ಹುರಿಗಟ್ಟಿ ಹುರಿದುಂಬಿಸಿ ಹರಿದಿದೆ ಜೊತೆಯಲಿ
ಹಸನಾದ ಬದುಕು ಹಂದರವಾಗಿ ಹಬ್ಬಲಿ ಎನುತ ಬಂದಿರುವ ಜೋಡಿ

ಎಂದಿಗೂ ಮುಗಿಯದಿರಲಿ ಈ ಅನುಬಂಧದ ಪಯಣ ಬಯಸುತಿಹಳು ಜಯಾ
ಮುಂದೆಯೂ ಮುಸ್ಸಂಜೆಯ ಹೊತ್ತು ಇಂತೆಯೇ ಇರಲಿ ಎಂದಿರುವ ಜೋಡಿ


Leave a Reply

Back To Top