ಸಂವಿಧಾನವೇ ಸಾರ್ವಭೌಮ

ವಿಶೇಷ ಲೇಖನ

ಸಂವಿಧಾನವೇ ಸಾರ್ವಭೌಮ

ಕೆ.ವಿ. ವಾಸು

ಪ್ರತಿ ವರ್ಷದ ನವಂಬರ್ ೨೬ ರಂದು ದೇಶಾದ್ಯಂತ ಸಂವಿಧಾನದ ದಿನವನ್ನು ಆಚರಿಸಲಾಗುತ್ತದೆ. ಇದನ್ನು ಕಾನೂನು ದಿನವೆಂದು ಕೂಡ ಕರೆಯಲಾಗುತ್ತದೆ. ದೇಶದ ಕಾನೂನು ವಿದ್ಯಾರ್ಥಿಗಳು; ವಕೀಲರು ನ್ಯಾಯಾಧೀಶರು ಹಾಗೂ ಕಾನೂನು ಕ್ಷೇತ್ರಕ್ಕೆ ಸಂಬಂದಪಟ್ಟವರೆಲ್ಲಾ ಕಾನೂನು ದಿನವನ್ನು ಸಡಗರ ಮತ್ತು ಸಂಭ್ರಮದಿಂದ ಆಚರಿಸುತ್ತಾರೆ. ದೇಶದ ಕಾನೂನು ಪ್ರತಿಯೊಬ್ಬರಿಗೂ ಅನ್ವಯವಾಗುವುದರಿಂದ ” ಕಾನೂನು ದಿನವನ್ನು” ದೇಶದ ಪ್ರತಿಯೊಬ್ಬರೂ ಕೂಡ ಆಚರಿಸಬಹುದಾಗಿದೆ. ೨೦೧೫ ಇಸವಿಯ ನವಂಬರ್ ೧೯ ರಂದು ಕೇಂದ್ರ ಸರ್ಕಾರ ಗೆಜೆಟ್ ಪ್ರಕಟಣೆ ಹೊರಡಿಸಿ; ಭಾರತದ ಸಂವಿಧಾನದ ಪಿತಾಮಹ ಡಾ.ಬಿ.ಆರ್.ಅಂಬೇಡ್ಕರ್ ಅವರ ೧೨೫ನೇ ಜನ್ಮ ದಿನಾಚರಣೆಯ ಕುರುಹಾಗಿ ಪ್ರತಿವರ್ಷದ ನವಂಬರ್ ೨೬ ಅನ್ನು ” ಸಂವಿಧಾನದ ದಿನ” ವನ್ನಾಗಿ ಆಚರಿಸುವಂತೆ ಕರೆ ನೀಡಲಾಯಿತು. ಭಾರತದ ಸಂವಿಧಾನ ರಚನಾ ಸಮಿತಿಯ ಗೌರವಾನ್ವಿತ ಸದಸ್ಯರ ನೆನಪಿಗಾಗಿಯೂ ಸಂವಿಧಾನ ದಿನವನ್ನು ಆಚರಿಸಲಾಗುತ್ತದೆ. ಭಾರತ ಸಂವಿಧಾನ ಕರಡು ರಚನಾ ಸಮಿತಿಯ ಅದ್ಯಕ್ಷರಾಗಿ ಬಾಬಾ ಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ಕಾರ್ಯ ನಿರ್ವಹಿಸಿದ್ದರೆ; ಡಾ.ರಾಜೇಂದ್ರ ಪ್ರಸಾದ್ ಸಂವಿಧಾನ ರಚನಾ ಸಮಿತಿಯ ಅದ್ಯಕ್ಷರಾಗಿದ್ದರು. ಡಾ.ಬಿ.ಆರ.ಅಂಬೇಡ್ಕರ್; ಡಾ.ಎಸ್.ರಾಧಾಕೃಷ್ಣನ್; ಪಂಡಿತ್ ಜವಹರಲಾಲ್ ನೆಹರು; ಆಚಾರ್ಯ ಜೆ.ಬಿ.ಕೃಪಲಾನಿ; ಎನ್.ಜಿ.ರಂಗ; ಮೌಲಾನ ಅಬ್ದುಲ್ ಕಲಾಮ್ ಅಜಾದ್; ಎನ್ ಗೋಪಾಲ ಸ್ವಾಮಿ ಐಯಂಗಾರ್; ಸರ್ದಾರ್ ವಲ್ಲಭಭಾಯಿ ಪಟೇಲ್; ಸಿ.ರಾಜಗೋಪಾಲಚಾರಿ ಸೇರಿದಂತೆ 284 ಕ್ಕೂ ಹೆಚ್ಚು ಮುತ್ಸದ್ದಿಗಳು ಸಂವಿಧಾನ ರಚನಾ ಸಮಿತಿಯ ಸದಸ್ಯರಾಗಿ ಕರ್ತವ್ಯ ನಿರ್ವಹಿಸಿರುವುದನ್ನು ಇಲ್ಲಿ ಸ್ಮರಿಸಬಹುದು. ಅದೇ ರೀತಿ ಖ್ಯಾತ ಸಂವಿಧಾನ ತಜ್ಞ ಬಿ.ಎನ್ ರಾವ್ ರವರು ” ಸಂವಿಧಾನದ ಸಲಹೆಗಾರರಾಗಿ” ಕಾರ್ಯ ನಿರ್ವಹಿಸಿದರು.

೨೬.೧೧.೧೯೪೯ ರಂದು ಸಂವಿಧಾನ ರಚನಾ ಸಮಿತಿಯು ಸಭೆ ಸೇರಿ ಭಾರತದ ಸಂವಿಧಾನವನ್ನುಅಂಗೀಕರಿಸಿತು. ಜನವರಿ ೨೬; ೧೯೫೦ ರಂದು ಅಧಿಕೃತವಾಗಿ ಭಾರತ ಸಂವಿಧಾನ ಅಸ್ತಿತ್ವಕ್ಕೆ ಬಂದಿದೆ. ವಿಶ್ವದ ಶ್ರೇಷ್ಠ ಸಂವಿಧಾನಗಳಲ್ಲಿ ಒಂದು ಎಂದು ಹೇಳಬಹುದಾದ ಭಾರತೀಯ ಸಂವಿಧಾನ; ಮೂಲಭೂತ ಹಕ್ಕುಗಳು; ಮೂಲಭೂತ ಕರ್ತವ್ಯಗಳು; ರಾಜ್ಯ ನಿರ್ದೇಶಕ ತತ್ವಗಳು; ಕೇಂದ್ರ ಮತ್ತು ರಾಜ್ಯಗಳ ಸಂಬಂಧಗಳು, ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಮುಂತಾದವುಗಳ ಕಾರ್ಯ ನಿರ್ವಹಣೆ, ಸೇರಿದಂತೆ ಹಲವಾರು ಪ್ರಮುಖ ಅಂಶಗಳನ್ನು ಒಳಗೊಂಡಿದೆ. ಸಂವಿಧಾನದ ಪ್ರಸ್ತಾವನೆಯನ್ನು ಸಂವಿಧಾನದ ಹೃದಯ ಭಾಗವೆಂದು ಕರೆಯಲಾಗುತ್ತದೆ. ಅದು ಈ ಕೆಳಕಂಡಂತಿದೆ

. ಪ್ರಸ್ಥಾವನೆ (Preamble)

ಭಾರತದ ಪ್ರಜೆಗಳಾದ ನಾವು ಭಾರತವನ್ನು ಒಂದು
ಸಾರ್ವಭೌಮ, ಸಮಾಜವಾದಿ,, ಜಾತ್ಯಾತೀತ ಮತ್ತು ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ವ್ಯವಸ್ಥೆ ಗೊಳಿಸಲು ಮತ್ತು ಅದರ ಎಲ್ಲಾ ಪೌರರಿಗೂ
:

ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ,
ವಿಚಾರ ಮತ್ತು ಅಭಿವ್ಯಕ್ತಿ, ನಂಬಿಕೆ, ಧರ್ಮ ಮತ್ತು ಉಪಾಸನಾ ಸ್ವಾತಂತ್ರ್ಯ,

ಸ್ಥಾನಮಾನ ಮತ್ತು ಅವಕಾಶಗಳಲ್ಲಿ ಸಮಾನತೆಯು
ದೊರೆಯುವಂತೆ ಮಾಡುವುದಕ್ಕೆ,
ವ್ಯಕ್ತಿ ಗೌರವವನ್ನು ಮತ್ತು ರಾಷ್ಟ್ರದ ಐಕ್ಯತೆ ಹಾಗೂ ಸಮಗ್ರತೆಯನ್ನು ರಕ್ಷಿಸಿ, ಭಾತೃ ಭಾವನೆಯನ್ನು ಎಲ್ಲರಲ್ಲೂ
ವೃದ್ದಿಗೊಳಿಸುವುದಕ್ಕಾಗಿ, ದೃಢ ಸಂಕಲ್ಪ ಮಾಡಿ, ನಮ್ಮ
ಸಂವಿಧಾನ ರಚನಾ ಸಭೆಯಲ್ಲಿ ನವಂಬರ್ 26, 1949 ರಂದು ಈ ಸಂವಿಧಾನವನ್ನು ಅಂಗೀಕರಿಸಿ, ಕಾನೂನು
ರೂಪದಲ್ಲಿ ಆತ್ಮಾರ್ಪಿತ ಮಾಡಿಕೊಂಡಿದ್ದೇವೆ”.

ನಮ್ಮ ಸಂವಿಧಾನದ ಪ್ರಸ್ಥಾವನೆಯನ್ನು ಸಂವಿಧಾನದ
ಹೃದಯ ಭಾಗವೆಂದು ಕರೆಯಲಾಗುತ್ತದೆ. ಪಂಡಿತ್ ಠಾಕೂರ್ ದಾಸ್ ರವರ ಪ್ರಕಾರ, ಪ್ರಸ್ಥಾವನೆಯು ಸಂವಿಧಾನದ ಸತ್ವ. ಸಂವಿಧಾನದ ಯೋಗ್ಯತೆಯನ್ನು ಅಳೆಯಲು ಇರುವ ಒಂದು ಅಳತೆ ಗೋಲು”

ಸಂವಿಧಾನ ರಚನೆಯ ಕರಡು ಸಮಿತಿಯ ಅದ್ಯಕ್ಷರಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್; ಸಂವಿಧಾನ ರಚನೆಯ ಸಂದರ್ಭದಲ್ಲಿ; ಗ್ರೇಟ್ ಬ್ರಿಟನ್; ಅಮೇರಿಕ ಸಂಯುಕ್ತ ಸಂಸ್ಥಾನ; ಜಪಾನ್; ಇಟಲಿ; ಜರ್ಮನಿ; ಮುಂತಾದ ದೇಶಗಳ ಸಂವಿಧಾನಗಳನ್ನು ಕೂಲಂಕುಶವಾಗಿ ಅದ್ಯಯನ ಮಾಡಿದ್ದರು. ವಿಶ್ವದ ಅತಿದೊಡ್ಡ ಲಿಖಿತ ಸಂವಿಧಾನ ಹೊಂದಿರುವ ದೇಶವೂ ನಮ್ಮದಾಗಿದೆ. ಭಾರತ ಸಂವಿಧಾನದಲ್ಲಿ; ಪ್ರಸ್ತುತ 448 ವಿಧಿಗಳು ಹಾಗೂ ೧೨ ಅನುಸೂಚಿಗಳಿದ್ದು; 25 ಭಾಗಗಳಾಗಿ ವಿಂಗಡಿಸಲಾಗಿದೆ. ಮೂಲ ಸಂವಿಧಾನದಲ್ಲಿ ಅಂದರೆ ಜನವರಿ 26, 1950 ರಂದು ಸಂವಿಧಾನದಲ್ಲಿ 395 ವಿಧಿಗಳಿದ್ದವು. ಆದರೆ ನಂತರದ ವರ್ಷಗಳಲ್ಲಿ ಸಂವಿಧಾನಕ್ಕೆ ಮಾಡಲಾದ ತಿದ್ದುಪಡಿಯ ಪ್ರಕಾರ ವಿಧಿಗಳ ಸಂಖ್ಯೆ 448 ಆಗಿದೆ. ಭಾರತದ ಸಂವಿಧಾನದ ಕೆಲವು ವಿಧಿಗಳನ್ನು ಸುಲಭವಾಗಿ ಮತ್ತೇ ಕೆಲವು ವಿಧಿಗಳನ್ನು ಕೆಲವು ಕಠಿಣ ಕ್ರಮಗಳನ್ನು ಅನುಸರಿಸಿ; ರಾಜ್ಯ ಶಾಸನ ಸಭೆಗಳ ಒಪ್ಪಿಗೆ ಪಡೆದು ತಿದ್ದುಪಡಿ ಮಾಡಬಹುದು. ಇದುವರೆಗೂ ಸಂವಿಧಾನಕ್ಕೆ 105 ತಿದ್ದುಪಡಿಗಳಾಗಿವೆ. ಮೊದಲನೆಯ ತಿದ್ದುಪಡಿಯನ್ನು ಪರಿಶಿಷ್ಡ ಜಾತಿ ಮತ್ತು ಪಂಗಡಗಳ ಕಲ್ಯಾಣಕ್ಕಾಗಿ 10.5.1951 ರಂದು ಮಾಡಲಾಯಿತು. ಆಗಸ್ಟ್ 2021 ರಲ್ಲಿ ಇತರ ಹಿಂದುಳಿದ ವರ್ಗಗಳಿಗೆ ಸಂಬಂದಪಟ್ಟಂತೆ ಕಡೆಯ ತಿದ್ದುಪಡಿ ಮಾಡಲಾಗಿದೆ. ಇಡೀ ವಿಶ್ವದಲ್ಲೇ ಅತಿ ಉದ್ದದ ಸಂವಿಧಾನ ಎಂಬ ಕೀರ್ತಿಗೆ‌ ನಮ್ಮ ಸಂವಿಧಾನ
ಪಾತ್ರವಾಗಿದೆ. ಅದೇ ರೀತಿ ಇಂಡೋನೇಷ್ಯಾದ ಸಂವಿಧಾನ (1945) ವಿಶ್ವದ ಅತ್ಯಂತ ಕಿರಿಯ ಸಂವಿಧಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕೆಲವು ವಿದ್ವಾಂಸರ ಪ್ರಕಾರ, ಅಮೇರಿಕ ಸಂವಿಧಾನ ವಿಶ್ವದ ಅತ್ಯಂತ ಕಿರಿಯದಾದ
ಸಂವಿಧಾನವಾಗಿದೆ. ಬ್ರಿಟನ್ ದೇಶ ಅಲಿಖಿತ ಸಂವಿಧಾನ ಹೊಂದಿರುವ ದೇಶವಾಗಿದ್ದು, ರೂಢಿ, ಸಂಪ್ರದಾಯಗಳು, ಪಾರ್ಲಿಮೆಂಟ್ ಕಾಯ್ದೆಗಳು, ಸಾಮಾನ್ಯ ಕಾಯ್ದೆಗಳು, ನ್ಯಾಯಾಲಯಗಳ ತೀರ್ಪುಗಳು ಮುಂತಾದವುಗಳು ದೇಶದ ಸಂವಿಧಾನದ
ರೀತಿಯಲ್ಲಿ ಕೆಲಸ ಮಾಡುತ್ತವೆ.. ಅದೇ ರೀತಿ ಲಿಖಿತ ಸಂವಿಧಾನ ಹೊಂದಿರದ
ಇಸ್ರೇಲ್ ನಲ್ಲಿ ಮೂಲಭೂತ ಕಾಯ್ದೆಗಳು, ಮತ್ತು ಹಕ್ಕುಗಳು ಸಂವಿಧಾನದ ರೀತಿಯಲ್ಲಿ ಕೆಲಸ ಮಾಡುತ್ತದೆ. ನ್ಯೂಜಿಲೆಂಡ್, ಲಿಬಿಯಾ, ಓಮನ್, ಕೆನಡಾ,
ಸೌದಿ ಅರೇಬಿಯಾ ದೇಶಗಳಲ್ಲಿ ಲಿಖಿತ ಸಂವಿಧಾನ ಇಲ್ಲದಿದ್ದರೂ ರೂಢಿ
ಸಂಪ್ರದಾಯಗಳು, ಪಾರ್ಲಿಮೆಂಟ್ ಕಾಯ್ದೆ, ಸಾಮಾನ್ಯ ಕಾನೂನು ಸಂವಿಧಾನದ
ರೀತಿ ಕೆಲಸ ಮಾಡುತ್ತದೆ.

ಭಾರತದ ಸಂವಿಧಾನವು ಹಲವು ದೇಶಗಳ ಸಂವಿಧಾನಗಳ ರಸ ಮಿಶ್ರಣವಾಗಿರುವುದರಿಂದ, ನಮ್ಮ ಸಂವಿಧಾನ ಇಡೀ ವಿಶ್ವದಲ್ಲೇ ಒಂದು ಉತ್ತಮವಾದ ಸಂವಿಧಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇವಿಷ್ಟು ಭಾರತ ಸಂವಿಧಾನದ ಕೆಲವು ಪ್ರಮುಖ ಅಂಶಗಳಾಗಿವೆ. ಇನ್ನು ಕಾನೂನು ದಿನದ ಬಗ್ಗೆ ಸ್ವಲ್ಪ ವಿಚಾರ ಮಾಡೋಣ. ಯಾವುದೇ ದೇಶದ ಅಸ್ತಿತ್ವಕ್ಕೆ ” ಕಾನೂನು” ತೀರಾ ಅವಶ್ಯಕವಾಗಿ ಬೇಕಾಗುತ್ತದೆ. ಕಾನೂನು ಆಯಾ ದೇಶಗಳ ಆಡಳಿತದ ರೂಪು ರೇಷೆಗಳನ್ನು ನಿರ್ಧರಿಸುತ್ತದೆ ಹಾಗೂ ನಿಯಂತ್ರಕನಾಗಿ ಕೂಡ ಕಾರ್ಯ ನಿರ್ವಹಿಸುತ್ತದೆ. ಕಾರ್ಯಂಗ; ನ್ಯಾಯಾಂಗ; ಮತ್ತು ಶಾಸಕಾಂಗಗಳು ಪ್ರಜಾಪ್ರಭುತ್ವದ ಮೂರು ಪ್ರಮುಖ ಅಂಗಗಳೆಂದು ಪರಿಗಣಿಸಲಾಗಿದೆ. ಇವುಗಳ ಪೈಕಿ ನ್ಯಾಯಾಂಗಕ್ಕೆ ಅತಿ ಹೆಚ್ಚಿನ ಮಹತ್ವವಿದೆ. ಕಾರ್ಯಾಂಗ ಹಳಿ ತಪ್ಪಿದಾಗಲೆಲ್ಲಾ ನ್ಯಾಯಾಂಗ ತನ್ನ ಚಾಟಿ ಬೀಸುತ್ತದೆ. ಶಾಸಕಾಂಗ ಅಂಗೀಕರಿಸುವ ಕಾನೂನು ಸಂವಿಧಾನ ವಿರೋಧಿಯಾಗಿದ್ದರೆ; ಅವುಗಳನ್ನು ರದ್ದು ಗೊಳಿಸುವ ಅಧಿಕಾರವೂ ನ್ಯಾಯಾಂಗಕ್ಕಿದೆ. ನಮ್ಮ ಸಂವಿಧಾನದಲ್ಲಿ ನ್ಯಾಯಾಂಗ; ಕಾರ್ಯಾಂಗ ಹಾಗೂ ಶಾಸಕಾಂಗಗಳ ಇತಿಮಿತಿಗಳನ್ನು ವಿಷದ ಪಡಿಸಿ ಲಕ್ಷಣ ರೇಖೆ ಹಾಕಲಾಗಿದೆ ಆದರೂ ಸಹ; ಸಂದರ್ಭ ಒದಗಿ ಬಂದಾಗಲೆಲ್ಲಾ ನ್ಯಾಯಾಂಗ ಮದ್ಯೇ ಪ್ರವೇಶಿಸಿ; ದೇಶದ ಕಾನೂನನ್ನು ರಕ್ಷಿಸುತ್ತಿದೆ. ಹೀಗಾಗಿಯೇ ನ್ಯಾಯಾಂಗಕ್ಕೆ ಇನ್ನಿಲ್ಲದ ಮಹತ್ವ ದೊರೆತಿದೆ. ನ್ಯಾಯಾಂಗವನ್ನು ಸಂವಿಧಾನದ ಸಂರಕ್ಷಕ ಎಂದು ಕೂಡ ಕರೆಯಬಹುದು. ಈ ನಿಟ್ಟಿನಲ್ಲಿ ಕಾನೂನಿನ ಮಹತ್ವ ದಿನೇ ದಿನೇ ಹೆಚ್ಚುತ್ತಲಿದೆ. ಸಂವಿಧಾನದ ಮೂಲಭೂತ ರಚನೆಗಳನ್ನು ( Basic Structures) ಬದಲಾಯಿಸಲು ಅಥವಾ
ತಿದ್ದುಪಡಿಗೊಳಿಸುವ ಅಧಿಕಾರ ಶಾಸಕಾಂಗ ಅಥವಾ ಪಾರ್ಲಿಮೆಂಟಿಗೆ ಇಲ್ಲ ಎಂಬ ಅತ್ಯಂತ ಮಹತ್ವದ ಹಾಗೂ ಚಾರಿತ್ರಿಕ ತೀರ್ಪನ್ನು ” ಕೇಶವಾನಂದ ಭಾರತಿ” ಪ್ರಕರಣದಲ್ಲಿ ( 1973) ಸರ್ವೊಚ್ಚ
ನ್ಯಾಯಾಲಯ ನೀಡುವ ಮೂಲಕ, ಸಂವಿಧಾನದ ಹಿರಿಮೆಯನ್ನು ಎತ್ತಿ
ಹಿಡಿದಿದೆ. ಅದಕ್ಕಿಂತ ಮುಂಚಿತವಾಗಿ, ಗೋಲಕನಾಥ ಪ್ರಕರಣದಲ್ಲಿ ( 1967)
ಸಂವಿಧಾನದಲ್ಲಿ ದತ್ತವಾಗಿರುವ ಮೂಲಭೂತ ಹಕ್ಕುಗಳನ್ನು ರದ್ದುಗೊಳಿಸುವ
ಅಧಿಕಾರ ಪಾರ್ಲಿಮೆಂಟಿಗೆ ಇಲ್ಲ ಎಂದು ಹೇಳಿತು. ಈ ರೀತಿ ಸಂಧರ್ಭ ಒದಗಿ
ಬಂದಾಗಲೆಲ್ಲಾ, ಸರ್ವೋಚ್ಚ ನ್ಯಾಯಾಲಯ, ಸಂವಿಧಾನದ ಆಶಯಗಳನ್ನು
ಎತ್ತಿ ಹಿಡಿಯುತ್ತಾ ಬರುತ್ತಿದೆ.

ಯಾವುದೇ ದೇಶದಲ್ಲಿ ಸದೃಢವಾದ ನ್ಯಾಯಾಂಗ ವ್ಯವಸ್ಥೆ ಇಲ್ಲವಾದಲ್ಲಿ ಅಲ್ಲಿ ಅರಾಜಕತೆ ತಲೆದೋರುತ್ತದೆ. ಪ್ರಜೆಗಳ ಹಕ್ಕುಗಳನ್ನು ಕೇಳುವವರೇ ಇಲ್ಲವಾಗುತ್ತಾರೆ. ಆದ್ದರಿಂದ ಕಾನೂನು ಯಾವುದೇ ದೇಶದ ರಕ್ಷಾಕವಚ ವೆಂದು ಖಂಡಿತವಾಗಿ ಹೇಳಬಹುದು. ದೇಶಿಯ ಕಾನೂನು ದೇಶದ ಜನರ ಮತ್ತು ಸರ್ಕಾರಗಳ ನಡುವಿನ ವಿವಾದಗಳನ್ನು ಬಗೆಹರಿಸಿದರೇ; ಅಂತರಾಷ್ಟ್ರೀಯ ಕಾನೂನು ದೇಶ ದೇಶಗಳ ನಡುವಿನ ವ್ಯಾಜ್ಯಗಳನ್ನು ಬಗೆಹರಿಸುತ್ತವೆ.

ಭಾರತೀಯ ದಂಡ ಸಂಹಿತೆ; ಭಾರತೀಯ

ಅಂಚೆ ಕಾಯ್ದೆ ಸೇರಿದಂತೆ ಹಲವಾರು ಭಾರತೀಯ
ಕಾನೂನುಗಳಿಗೆ ಶತಮಾ‌ಗಳ ಇತಿಹಾಸವೇ ಇದೆ. ಬ್ರಿಟಿಷ್ ಕಾಲದಲ್ಲಿ ಇದ್ದ ಹಲವಾರು ಕಾನೂನುಗಳು ಈಗಲೂ ಅಸ್ತಿತ್ವದಲ್ಲಿವೆ. ಕೆಲವು ಕಾನೂನುಗಳಿಗೆ ಹಲವಾರು ಬಾರಿ ತಿದ್ದುಪಡಿ ಮಾಡಲಾಗುತ್ತಿದೆ. ಕೆಲವು ಅನುಪಯುಕ್ತ ಕಾನೂನುಗಳನ್ನು ರದ್ದುಗೊಳಿಸಲಾಗುತ್ತಿದೆ. ಹೀಗಾಗಿ ಕಾನೂನು ನಿಂತ ನೀರಾಗದೇ ವರ್ತಮಾನಕ್ಕೆ ಸ್ಪಂದಿಸುವ ಶಕ್ತಿಯನ್ನು ಹೊಂದಿದೆ. ೨೦೧೨ ರಲ್ಲಿ ನಿರ್ಭಯಾಳ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಂತರ ಅತ್ಯಾಚಾರಕ್ಕೆ ಸಂಬಂದಿಸಿದ ಕೆಲವು ಕಾನೂನುಗಳಿಗೆ ಮಹತ್ವದ ತಿದ್ದುಪಡಿ ತಂದಿರುವುದನ್ನು ಇಲ್ಲಿ ಸ್ಮರಿಸಬಹುದು. ಅದೇ ರೀತಿ ಕಂಪನಿ ಕಾಯ್ದೆ; ಕೈಗಾರಿಕಾ ವಿವಾದಗಳ ಕಾಯ್ದೆ ಸೇರಿದಂತೆ ಹಲವಾರು ಪ್ರಮುಖ ಕಾಯ್ದೆಗಳಿಗೆ ತಿದ್ದುಪಡಿ ತರಲಾಗಿದೆ. . ಆದ್ದರಿಂದ ದೇಶದ ಕಾನೂನು, ಜಡ ವಸ್ತುವಾಗದೇ, ಜನತೆಯ ಆಶೋತ್ತರಗಳಿಗೆ ನಿರಂತರವಾಗಿ ಸ್ಪಂದಿಸುತ್ತದೆ ಎಂದು ಹೇಳಬಹುದು. ಬಹು ಜನರ ಇಷ್ಟಕ್ಕೆ ವಿರುದ್ಧವಾದ ಕಾನೂನುಗಳನ್ನು ಜಾರಿಗೊಳಿಸಲು ಸಾದ್ಯವಿಲ್ಲ ಎಂಬುದು ಕೇಂದ್ರ ಸರ್ಕಾರ ಜಾರಿಗೊಳಿಸಲು ಹೊರಟಿದ್ದ ಕೃಷಿ ಕಾಯ್ದೆಗಳ
ವಿರುದ್ಧ ದೇಶಾದ್ಯಂತ ನಡೆದ ರೈತರ ಪ್ರತಿಭಟನೆ ಸಾಬೀತುಗೊಳಿಸಿದೆ.

ದೇಶದ ಪ್ರಜೆಗಳೆಲ್ಲರೂ ದೇಶದ ಕಾನೂನುಗಳನ್ನು ಗೌರವಿಸಬೇಕು. ಕಾನೂನುಗಳನ್ನು ದೇಶದ ಜನರ ಒಳಿತಿಗಾಗಿ ರಚಿಸಲಾಗಿದೆ. ಒಂದು ಸದೃಢ ಆಡಳಿತ ವ್ಯವಸ್ಥೆಯ ಪೂರಕ ಅಂಗವಾಗಿ ರಚಿಸಲ್ಪಟ್ಟಿವೆ. ಇಂತಹ
ಕಾನೂನುಗಳನ್ನು ರಕ್ಚಿಸಿ ಕಾಪಾಡುವ ಹೊಣೆಗಾರಿಕೆ ನಮ್ಮದಾಗಲಿ.


ಕೆ.ವಿ. ವಾಸು

Leave a Reply

Back To Top