ಆಗ….ಈಗ! ಒಂದು ನೆನಪು

ಲೇಖನ

ಆಗ….ಈಗ! ಒಂದು ನೆನಪು

ರೂಪ ಮಂಜುನಾಥ

 “ಏ ತಾರಾ, ಹೋದೊರ್ಷ ಸ್ವಾತಂತ್ರ ದಿನಾಚರಣೆಗೆ ಕೆೊಟ್ಟಿದ್ದ ಕೊಬರಿ ಮಿಟಾಯಿ ಏನ್ ಸಕತ್ತಾಗಿತ್ತಲ್ವೇನೇ? ಈ ಸರಿ ಎಂತದ್ ಕೊಡ್ತರೋ ಏನೋ?”,”ಪದ್ಮಜಾ,ಸ್ಟಾಫ್ ರೂಮಲ್ಲಿ ಶಿವಣ್ಣ ಸರ್,ಎಲ್. ಕೆ. ಎಸ್. ಸರ್ ಇಬ್ರೂ ಮಾತಾಡ್ಕೋತಿದ್ರು,ಈ ಸರಿ ಟ್ಯಾಬ್ಲೋ ಕಿತ್ತೂರು ರಾಣಿ ಚೆನ್ನಮ್ಮನದಂತೆ ಕಣೇ.ರಾಣೀನ ಯಾರ್ನ ಮಾಡ್ತಾರೋ?”,”ಅಯ್ಯೋ, ಈ ಆಗಸ್ಟ್ ೧೫, ಅಂದ್ರೆ,ಪಿ ಟಿ ಸರ್ ಎರಡೆರಡು ಪಿರಿಯಡ್ ಡ್ರಿಲ್, ಮಾರ್‌ಚ್‌ಫಾಸ್ಟ್  ಪ್ರಾಕ್ಟೀಸ್ ಮಾಡ್ಸೀ ಮಾಡ್ಸೀ ಬೆಂಡೆತ್ ಹಾಕ್ತಾರೆ ಕಣೆ. ಕಾಲೆಲ್ಲಾ ಬಿದ್ದೋಗುತ್ತೆ ”, ….ಅಂತ ಆಗಸ್ಟ್ ಶುರುವಾಗುವ ಮೊದಲೇ ಸ್ವತಂತ್ರ ದಿನೋತ್ಸವದ ಕಾರ್ಯಕ್ರಮಗಳ ಬಗ್ಗೆ ನಾವು ಚಿಕ್ಕವರಿದ್ದಾಗ ಗೆಳತಿಯರು ಮಾತಾಡುತ್ತಿದ್ದ ಮಾತುಗಳ ತುಣುಕುಗಳು. ಇನ್ನು ಹದಿನೈದನೆಯ ತಾರೀಖು ಬರಲು ಎರಡು ದಿನದ ಮುಂಚೆಯೇ, ಅಮ್ಮ ಬಿಳಿ ಯೂನಿಫಾರಮ್, ಸಾಕ್ಸು,ಸ್ವಲ್ಪ ವಿಶೇಷವಾಗಿ ಒಗೆಸಿ, ನೀಲಿ ಹಾಕಿ,ಅಪರೂಪಕ್ಕೆಂದು ಇಸ್ತ್ರಿ ಮಾಡಿಡುತ್ತಿದ್ದರು.ಇನ್ನು ಬಿಳಿಯ ಕ್ಯಾನ್ವಾಸ್ ಶೂಗಳನ್ನ ನೀರಿನಲ್ಲಿ ನೆನೆಸಿ, ಬಟ್ಟೆ ಸೋಪು ಸವರಿ,ತೆಗೆದು ಹಾಕಿರುವ ಟೂತ್ ಬ್ರಷ್ನಲ್ಲುಜ್ಜಿ, ತೊಳೆದು, ಬಿಳಿ ಸೀಮೇ ಸುಣ್ಣವನ್ನ ನೀರಿನಲ್ಲಿ ನೆನೆಸಿ, ಶೂಗಳಿಗೆ ತಿಕ್ಕಿ ಪಾಲೀಶು ಮಾಡಿಕೊಳ್ಳುವ ಕೆಲಸ ನಮ್ಮಗಳದೇ. ಅಷ್ಟು ಮುಗಿಸಿದರೆ, ಸ್ವತಂತ್ರ ದಿನೋತ್ಸವಕ್ಕೆ ಸಿದ್ದವಾದಂತೆ!

    ಆ ದಿನ ಬೆಳಗ್ಗೆ ಏಳಕ್ಕೇ ಸ್ಕೂಲಿಗೋಗಬೇಕೆಂದರೆ, ಆರಕ್ಕೆಲ್ಲಾ ಎದ್ದು ಸಿದ್ದವಾಗಬೇಕಿತ್ತು. ಶ್ರಾವಣ ಮಾಸ, ಲೈಟಾಗಿ ಮಳೆ, ಗಾಳಿ,ಛಳಿ ಇರುವ ಕಾಲ.ಗರಿಗರಿ ಇಸ್ತ್ರಿಯಾದ ಸಮವಸ್ತ್ರ,ಕೂದಲಿಗೆ ಚೆನ್ನಾಗಿ ಎಣ್ಣೆ ಹಚ್ಚಿ ಅಮ್ಮ ಬದನೇಕಾಯಿ ಜಡೆ(ಆಗ ಹೇಳುತ್ತಿದ್ದುದು ಹಾಗೇ. ಈಗೇನಂತಾರೋ ಗೊತ್ತಿಲ್ಲ ಕಣ್ರೀ) ಎರಡು ಬಿಗಿಯಾಗಿ ಹೆಣೆದು,  ಬಿಳಿ ಟೇಪಲ್ಲಿ ಎತ್ತಿ ಕಟ್ಟಿ ಜಡೆ ಹಾಡುತ್ತಿದ್ದರು.ಬಿಳಿ ಸಾಕ್ಸು, ಶೂ ಹಾಕಿ ವೀರಯೋಧರಂತೆ ಕೈ ಬೀಸಿಕೊಂಡು ಶಾಲೆಯ ಕಡೆಗೆ ಲಗುಬಗೆಯಲ್ಲಿ ನಡೆಯುವುದು, ದಾರಿಯಲ್ಲಿ ಸಿಗುವ  ಗೆಳತಿಯರ ಮನೆ ಮುಂದೆ ನಿಂತು ಅವರನ್ನ ಬಾಗಿಲಲ್ಲೇ  ಕೂಗಿ, ಅವರನ್ನೂ ಸೇರಿ ಶಾಲೆಗೆ ಹೋಗುವುದೇ ಒಂದು ರೀತಿಯಾದ ಸಂಭ್ರಮ.ಆ ದಿನ ಬೆಳಗ್ಗೆ ಅಷ್ಟೊತ್ತಿಗೇ ಮನೇಲಿ ತಿಂಡಿ ಆಗಿರುವುದಿಲ್ಲವೆಂದು, ನಾಕಾಣೆಯೋ, ಹೆಚ್ಚೆಂದರೆ ಎಂಟಾಣೆಯೋ ಕೊಟ್ಟು,”ಗಾಳಿ ಚಳಿ, ಸೀಬೆಕಾಯಿ, ಸೌತೆಕಾಯಿ, ನೆಲ್ಲಿಕಾಯಿ, ಎಲ್ಚೀಹಣ್ಣೆಲ್ಲಾ ತಿನ್ಕೂಡ್ದು. ಬೇರೆ ಏನಾದ್ರೂ ತಿನ್ಕೊಳಿ”, ಅಂತ ಎಚ್ಚರಿಸಿ ದುಡ್ಡು ಕೊಟ್ಟಿರುತ್ತಿದ್ದರು. “ನಮ್ಮನೇಲಿ ನಾಕಾಣಿ ಕೊಟ್ಟಿದಾರೆ. ನಿಮ್ಮಪ್ಪ ನಿನಗೆಷ್ಟು ಕೊಟ್ರೇ?”, ಎಂದು ಕುತೂಹಲದಿಂದ ಕೇಳಿಕೊಂಡು ಅವಳಿಗೂ ನಾಕಾಣೆಯಾದ್ರೆ ಓಕೆ, ಹೆಚ್ಚಿಗೆ ಕೊಟ್ಟಿದ್ರೆ, ನಾವೂ ಮುಂದೆ ಮನೇಲಿ ಅಪ್ಲಿಕೇಷನ್ ಹಾಕೋಕೆ ಸಿದ್ದತೆ ಮಾಡಿಕೊಳ್ಳೋ ಅತಿ ಜಾಣತನ!

      ಶಾಲೆಯ ಆವರಣದಲ್ಲಿ ಧ್ವಜಸ್ಥಂಭಕ್ಕೆ ತ್ರಿವರ್ಣ ಧ್ವಜವೇರಿಸಿ,ಕೆಳಗೆ ರಂಗೋಲೆಯಲ್ಲಿ ಭಾರತ ದೇಶವನ್ನ ಬಿಡಿಸಿ, ಹೂಗಳಿಂದ ಅಲಂಕಾರ ಮಾಡಿ, ಗಾಂಧೀಜಿ, ಸುಭಾಷ್ ಚಂದ್ರ ಬೋಸರ ಪಟಗಳನ್ನು ಮೇಜಿನ ಮೇಲಿಟ್ಟು, ಅವುಗಳಿಗೆ ಮಾಲೆ ಹಾಕಿ, ಅಲಂಕರಿಸುತ್ತಿದ್ದರು. ಏಳೂಕಾಲು ಏಳುವರೆಯಷ್ಟು ಹೊತ್ತಿಗೆ ಬೆಲ್ ಹೊಡೆದರೆ, ಎಲ್ಲರು ತರಗತಿಗಳಿಗನುಗುಣವಾಗಿ ನಿಂತು,ಆ ದಿನದ ಎಲ್ಲ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿ,ಕೊನೆಗೆ ಹಂಚುವ ಸಿಹಿಗಾಗಿ ಕಾಯುತ್ತಿದ್ದೆವು. ಹೊರಗೆ, ಊರನ್ನೆಲ್ಲಾ ಸುತ್ತಿ ಬಯಲು ರಂಗ ಮಂದಿರಕ್ಕೆ ಹೋಗಲು ಟ್ಯಾಬ್ಲೋ ಗಾಗಿ, ಲಾರಿ ಸಿದ್ದವಾಗಿ, ಪಾತ್ರಧಾರಿಗಳು ಬಣ್ಣ ಹಚ್ಚಿ ತಮ್ಮತಮ್ಮ ಭಂಗಿಗಳಲ್ಲಿ ನಿಲ್ಲವ ತುರಾತುರಿಯಲ್ಲಿರುತ್ತಿದ್ದರು.ಆ ದಿನ ಪಾತ್ರಗಳಿಗೆ ಆಯ್ಕೆಯಾದ ಗೆಳಯರೆಲ್ಲಾ ನಮ್ಮ ಕಣ್ಣಿಗೆ ದೊಡ್ಡ ಸೆಲಿಬ್ರಿಟಿಗಳು.ಅವರ ಅದೃಷ್ಟಕ್ಕೆ ಏನೋ ಒಂಥರಾ ಜಲಸೀ.ಆದರೂ, “ಚೆನ್ನಾಗ್ ಕಾಣ್ತಿದೀಯ ಕಣೆ”, ಅಂತಲೋ,”ಈ ಸರಿ ನಮ್ ಸ್ಕೂಲಿಗೇ ಪ್ರೈಜ್ ಪಕ್ಕಾ”, ಅಂತಲೋ ತೋರಿಕೆಗೆ ಅರೆ ಮನಸಿನಿಂದ ಹೇಳಿ ಅಭಿನಂದಿಸುತ್ತಿದ್ದೆವು.ನಂತರ ಮಿಕ್ಕವರ ಜೊತೆಯಲ್ಲಿ,”ನೋಡೆ ಅವಳೆಂಥ ಲಕ್ಕೀ”, ಅಂತಲೋ, ಇಲ್ಲಾ,”ಬಿಡೇ ಆ ರಾಮಣ್ಣ ಸರ್ ಬಲ್ ಪಾರ್ಶಾಲಿಟಿ. ಅವಳಿಗೆ ಆ ಪರ್ಸನಾಲಿಟೀ ಸೂಟೇ ಆಗಲ್ಲ. ಅವರ ಫ್ರೆಂಡ್ ಮಗಳೂಂತ ಎಲ್ಲಾದಕ್ಕೂ ಅವಳಿಗೇ ಪ್ರಾಮಿನೆನ್ಸು ಕೊಡ್ತಾರೆ”, ಅಂತಲೋ ಒಳಗಿರುವ ಬೆಂಕಿಯನ್ನು ಹೊರಗೆ ಹಾಕಿ ಸಮಾಧಾನ ಮಾಡಿಕೊಳ್ಳುತ್ತಿದ್ದೆವು. ಕೊನೆಗೆ ಸಿಹಿ ಹಂಚುವ ಕಾರ್ಯಕ್ರಮ.ಚಾಕಲೇಟಲ್ಲೇ ಮೊದಲಿಗೆ ಕಾರ್ಯಕ್ರಮ ಮುಗಿದರೂ, ಹೈಸ್ಕೂಲಿಗೆ ಬರುವ ಹೊತ್ತಿಗೆ ಮಿಠಾಯಿವರೆಗೂ ಸಿಹಿ ಬಡ್ತಿ ಪಡೆದಿತ್ತು.

   ಇನ್ನು ಎಲ್ಲಕ್ಕೂ ಹೆಚ್ಚು ತಲೆನೋವೆಂದರೆ, ಬ್ಯಾಂಡ್ ಸೆಟ್ಟಿನ ಜೊತೆಗೆ ಮಾರ್ಚ್‌ಫಾಸ್ಟ್ ಮಾಡಿಕೊಂಡು ನೆತ್ತಿ ಸುಡುವ ಹನ್ನೊಂದು ಹನ್ನೆರಡರ ಸಮಯದ ಬಿಸಿಲಲ್ಲಿ ಊರೆಲ್ಲಾ ಸುತ್ತುವುದು.ಆ ದಿನಕ್ಕೆ ಹಾಕುವ ಬಿಳಿಯ ಕ್ಯಾನ್ವಾಸ್ ಶೂ, ವಾರಕ್ಕೊಮ್ಮೆ ಹಾಕುತ್ತಿದ್ದರಿಂದ ಅಷ್ಟಾಗೆ ಸವೆದಿರುತ್ತಿರಲಿಲ್ಲ.ಮನೆಯಲ್ಲಿ,”ಶನಿವಾರ ಒಂದೊತ್ತು ಹಾಕೋದಲ್ವಾ? ಅಂತಾ ಏನ್ ಸವ್ದಿಲ್ಲ.ಈ ವರ್ಷ ಅದ್ನೇ ಹಾಕೊಳ್ಳಿ”, ಅಂದ್ರೆ,ಸುಮ್ಮನೆ ಗೋಣಾಡಿಸುತ್ತಿದ್ದೆವೇ ಹೊರತು, ಚಿಕ್ಕದಾಗುತ್ತದೆ  ಎಂದು ಹೇಳುವ ಧೈರ್ಯವೂ ಇರಲಿಲ್ಲ. ಸ್ವಲ್ಪ ಬಿಗಿಯಾದರೂ ಹೇಗೋ ಒಗ್ಗಿಸಿಕೊಳ್ಳೋ ಫ್ಲೆಕ್‌ಸಿಬಲ್ ಮತ್ತು ಅಡ್ಜಸ್‌ಟಿಂಗ್ ಸ್ವಭಾವ ನನ್ನೊಬ್ಬಳದ್ದೇ ಅಲ್ಲ. ಆಗಿನ ಸಮಯದ ಎಲ್ಲರಲ್ಲೂ ಅದೇ ಹೊಂದಿಕೆ, ಹಾಗೂ ಒಗ್ಗಿಕೊಳ್ಳುವ ಗುಣವಿತ್ತು . ನಿಜ ಅಲ್ವೇನ್ನೀ? ಹಾಗಾಗೀ,ಎರಡನೇ ವರ್ಷಕ್ಕೂ ಅದೇ ಕಂಟಿನ್ಯೂಯೇಷನ್. ಬೆಳೆಯುವ ವಯಸ್ಸು. ಕಾಲುಗಳಿಗೆ ಹಿಡಿಯದಿದ್ದರೂ ಕಷ್ಟಪಟ್ಟು ಬೆರಳುಗಳನ್ನ ಬಗ್ಗಿಸಿ ತುರುಕಿ ಹಾಕಿಕೊಳ್ಳುತ್ತಿದ್ದೆವು.ಶಾಲೆಯಲ್ಲಾದರೆ, ಕ್ಲಾಸಿನಲ್ಲಿ ಬಿಚ್ಚುವುದೋ, ಲೇಸ್ ಸಡಿಲಿಸಿಯೋ ಹೇಗೋ ಸಂಭಾಳಿಸುತ್ತಿದ್ದೆವು. ಆದರೆ, ಸ್ವತಂತ್ರ ದಿನಾಚರಣೆಯ ದಿನ ನಮ್ ಪಾಡು ಬೇಡ ಕಣ್ರೀ. ಊರೆಲ್ಲಾ ಸುತ್ತಿ, ಪೆರೇಡು ಮುಗಿಸಿ, ಮನೆಗೆ ಬಂದು ಶೂ ಕಿತ್ತುಹಾಕುವುದರಲ್ಲಿ ಪಾದವೆಲ್ಲಾ ಸೆಲೆತಂತಾಗಿ ಉರಿಉರಿ ಶುರುವಾಗಿರುತ್ತಿತ್ತು. ಶೂ ತೆಗೆದರೆ, ಪಾದಕ್ಕೆ  ಸ್ವತಂತ್ರ ಬಂದಷ್ಟೇ ಖುಷಿಯಾಗಿರುತ್ತಿತ್ತು. ಇನ್ನು ಮನೆಯಲ್ಲಿ ಕೊಟ್ಟ ಕಾಸಿಗೆ ಚುರುಮುರಿಯೋ,ಕಡ್ಲೇಕಾಯೋ ತೆಗೆದುಕೊಂಡು ತಿನ್ನುತ್ತಾ ಮನೆಗೆ ಬರುವುದು ಲಕ್ಷುರಿಯೋ ಲಕ್ಷುರಿ. ಈಗಿನ ಮಕ್ಕಳಿಗೆ ನಾವು ಪ್ಯಾಂಪರ್ ಮಾಡೋದು ಕಮ್ಮೀಯೇನ್ರೀ?ಇಂಡಿಪೆಂಡೆನ್ಸ್ ಡೇಗಂತಲೇ ಹೊಸದಾದ ಮಾರ್ಚ್‌ಫಾಸ್ಟಿಗೆ ಸಮವಸ್ತ್ರ,ಕೈಗೆ ಬ್ಯಾಂಡು, ಡ್ರಿಲ್ ಆಕ್ಸೆಸರೀಸ್, ಒಂದೇ ಎರಡೇ? ಮಕ್ಕಳು ಕೇಳುವುದಕ್ಕೆ ಮುಂಚೆಯೇ ಈಗಿನ ತಂದೆತಾಯಿಯರು ಸಾವಿರಾರು ರೂಪಾಯಿಗಳನ್ನು ಸುರಿದು ಏನು ಕೊಡಿಸಲೂ ತಾವೇ ಮುಂಚೆಯಾಗಿ ಸಿದ್ದರಿರುತ್ತಾರೆ.

   ನಮ್ ಕಾಲ್ದಲ್ಲಿ ಯೂನಿಫಾರಮ್ ಹೊಲಿಸುವ ಕಥೆಯೇ ಚೆೆನ್ನ.ಹೆಣ್ಣುಮಕ್ಕಳ ಸ್ಕರ್ಟುಗಳಿಗಂತೂ ಎರಡೆರಡು ಟಕ್ಕುಗಳನ್ನ ಹಿಡಿಸಿ,ಆರಾರು ತಿಂಗಳಿಗೆ ಬೆಳೆದಂತೆ ಬಿಚ್ಚಿಸಿ ಬಿಚ್ಚಿಸಿ ಸರಿ ಮಾಡುತ್ತಿದ್ದರು. ಇನ್ನು ಹೈಸ್ಕೂಲಿನಲ್ಲಿದ್ದಾಗಂತೂ ಹಸಿರು ಬಣ್ಣದ ಲಂಗ. ಬಿಳಿಯ ಜಾಕೀಟು. ಆ ಲಂಗ ದಪ್ಪದಾದ ಸ್ಪನ್ ಬಟ್ಟೆಯಲ್ಲಿ ಒಂದು ಜೋಡಿ  ಹೊಲೆಸಿದರೆ, ಮೂರು ವರ್ಷಕ್ಕೂ ಸಮವಸ್ತ್ರದ ಯೋಚನೆಯಿಲ್ಲ. ಹೆಂಗನ್ತೀರೋ, ಲಂಗ ಚಿಕ್ಕದಾದಂತೆ, ಟಕ್ಕುಗಳನ್ನ ಬಿಚ್ಚುವುದು. ಮೂರನೆಯ ವರ್ಷಕ್ಕೆ, ಮತ್ತೂ ಚಿಕ್ಕದಾದಾಗ, ಮಂಡಿಗಿಂತಲೂ ಕೆಳಕ್ಕೆ ಬರುವ ಭಾಗದಲ್ಲಿ  ಲಂಗವನ್ನು ಕತ್ತರಿಸಿ ಅಲ್ಲಿ ನಾಕೈದು ಇಂಚಿನ ಬಿಳಿಯ ಬಟ್ಟೆ ಕೊಟ್ಟು ಹೊಲಿಸುವುದು. ಇನ್ನು ಈ ಸಾಕ್ಸುಗಳ ಪಾಡಂತೂ ಕೇಳಬೇಡಿ. ಹಿಗ್ಗೀ ಹಿಗ್ಗೀ ಗೋಣೀಚೀಲಗಳಾಗಿರುತ್ತಿದ್ದವು.ಅವುಗಳು ಬಿಗಿಯಾಗಿ ಕೂರಲು ದೊಡ್ಡ ರಬ್ಬರ್ ಬ್ಯಾಂಡ್ ಹಾಕಿ, ಜಾರಿ ಬಾಳದಂತೆ ನಿಲ್ಲಿಸುತ್ತಿದ್ವಿ. ಇನ್ನು ಬೂಟುಗಳ ವಿಚಾರ ಯಾಕ್ ಕೇಳ್ತೀರೀ? ಮುಂದೆ ಮೊಸಳೆ ಬಾಯಿ ಥರ ತೆರೆದುಕೊಂಡಿದ್ದರೆ, ಹಿಂದೆ ತಳಕ್ಕೆ ಬೂಟು ಬಿಟ್ಟೆದ್ದು ಓಡಾಡಿದರೆ ಟಪಟಪಾ ಎಂದು ಹೊಡೆದುಕೊಳ್ತಿದ್ವು. ಆ ಸದ್ದನ್ನ ಕೇಳಿದರೆ, ಕ್ಲಾಸ್ ರೂಮಿನಲ್ಲಿ ಮಿಸ್ ಗಳು ಸಖತ್ತಾಗೆ ಬೈದು ಕೆಡವುತ್ತಿದ್ದರಿಂದ, ಜೋಪಾನವಾಗಿ ಸದ್ದಾಗದಂತೆ ಎಳೆದೂ ಎಳೆದೂ ಕಾಲು ಹಾಕಿರುವುದೂ ನೆನಪಿದೆ.

ಆದರೂ, ಏನೇ ತೇಪೆ ಹಾಕಿದರೂ, ಶಾಲಾದಿನಗಳಲ್ಲಿ ಸಾಮಾನ್ಯ ಎಲ್ಲ ಜೊತೆಗಾರರದೂ ಅದೇ ಪಾಡಾಗಿ,

ಯಾರಿಗೂ ಇನ್ಫೀರಿಯರ್ ಫೀಲ್ ಬರ್ತಿರಲಿಲ್ಲ ಬಿಡ್ರೀ.

           ಈಗ್ಗೆ ನಾಲ್ಕೈದು ದಿನಗಳ ಹಿಂದೆ,ತಾಲ್ಲೂಕು ಆಡಳಿತ ಕಛೇರಿಯಿಂದ,”ಆಜಾದೀ ಕಾ ಅಮೃತ ಮಹೋತ್ಸವದ ಅಂಗವಾಗಿ, ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದ ಸಾಧಕರನ್ನು ಗುರುತಿಸಿ ಗೌರವಿಸುತ್ತಿದ್ದೇವೆ. ಕಲೆ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ನಿಮ್ಮ ಸೇವೆಯನ್ನ ಗುರುತಿಸಿ, ನಿಮ್ಮನ್ನು ಆಯ್ಕೆ ಮಾಡಲಾಗಿದೆ. ಹದಿನೈದನೆಯ ತಾರೀಖು ಬಯಲು ರಂಗ ಮಂದಿರಕ್ಕೆ ಬಂದು ಪುರಸ್ಕಾರವನ್ನು ಸ್ವೀಕರಿಸಬೇಕೆಂಬ ಪತ್ರ ಬಂದಿತು.ನಮ್ಮ ಊರಿನಲ್ಲಿ ನನ್ನನ್ನು ಗುರುತಿಸಿದ್ದು ಬಹಳ ಸಂತೋಷವಾಯಿತು.ಸ್ವತಂತ್ರ  ದಿನಾಚರಣೆಯ ದಿನ,ಅಂದರೆ ನೆನ್ನೆ ಕಛೇರಿಯಲ್ಲಿ ತಿಳಿಸಿದ ಸಮಯಕ್ಕೆ ಬಯಲು ರಂಗಮಂದಿರಕ್ಕೆ ಹೋದೆ .ಪುರಸಭೆಯ ಅಧ್ಯಕ್ಷರಾದ ಶ್ರೀಮತಿ. ಸುಧಾ ನಳಿನಿಯವರನ್ನ ಕಂಡು ವಂದಿಸಿದೆ. ಅವರೂ ಕೂಡಾ ಪ್ರತಿವಂದನೆ ಮಾಡಿ, ವೇದಿಕೆ ಮೇಲೆ ಆಸನವನ್ನ ತೋರಿಸಿ,ಕುಳಿತುಕೊಳ್ಳಲು ಹೇಳಿದರು.ಇಂಥ ರಾಷ್ಟ್ರೀಯ ಹಬ್ಬಗಳಲ್ಲಿ ಚಿಕ್ಕವರಿದ್ದಾಗ ತೊಡಗಿಸಿಕೊಂಡಿದ್ದೂ, ಆಗ ನಾವು ಆಚರಿಸುತ್ತಿದ್ದ ಗತಕಾಲದ ಸ್ಮರಣೆಯನ್ನ ಮಾಡುತ್ತಾ ಕೂತಿದ್ದೆ.

ವೇದಿಕೆಯ ಮೇಲಿದ್ದ ಸುಮಾರು ಮೂವತ್ತು ಆಸನಗಳೂ ಕೆಲ ಸಮಯದಲ್ಲೇ ಗಣ್ಯರಿಂದ ಭರ್ತಿಯಾಯಿತು. ಅಷ್ಟರಲ್ಲಿ ಸನ್ಮಾನ್ಯ ಶಾಸಕರಾದ ಎಚ್. ಡಿ. ರೇವಣ್ಣನವರು ಆಗಮಿಸಿದರು.ಎಲ್ಲರೂ ಧ್ವಜವನ್ನು ಹಾರಿಸುವ ಕಡೆಗೆ ನಡೆದೆವು. ಧ್ವಜ ವಂದನೆಯ ನಂತರ,ತಹಸಿಲ್ದಾರರು ಸಭೆಯನ್ನುದ್ದೇಶಿಸಿ ಮಾತನಾಡಿದರು. ನಂತರ, ಶಾಲಾ ಮಕ್ಕಳು ವಂದೇ ಮಾತರಮ್, ಝಂಡಾ ಊಂಛಾ ರಹೇ ಹಮಾರಾ, ಜೈ ಭಾರತ ಜನನಿಯ ತನುಜಾತೆ ಗೀತೆಗಳನ್ನ ಹಾಡಿದರು.ಅದೇಕೋ ಈ ವರ್ಷ ಟ್ಯಾಬ್ಲೋಗಳು ಇರಲಿಲ್ಲ. ಕಾರಣ ಗೊತ್ತಾಗಲಿಲ್ಲ. ಎಲ್ಲ ಶಾಲೆಯ ಮಕ್ಕಳೂ ಪೆರೇಡಿನಲ್ಲಿ ಬಂದು ಧ್ವಜವಂದನೆ ಹಾಗೂ ಗಣ್ಯರಿಗೆ ಗೌರವ ಅರ್ಪಿಸಿದ ನಂತರ ವೇದಿಕೆಯಲ್ಲಿನ ಕಾರ್ಯಕ್ರಮಗಳು ಪ್ರಾರಂಭವಾಯಿತು.ಆ ಸಮಯದಲ್ಲಿ ನಾನು ನಳಂದ ಇಂಗಿಲೀಷ್ ಸ್ಕೂಲಿನಲ್ಲಿ ಪ್ರಾಥಮಿಕ ಶಾಲೆ ಓದುತ್ತಿರುವಾಗ,ಆಗಿನ ಕಾಲಕ್ಕೇ, ಅಲ್ಲಿನ ಉತ್ಸಾಹಿ ಪ್ರಾಂಶುಪಾಲರಾದ ಶ್ರೀ. ಶಾಂತ ಕುಮಾರ್ ಸರ್, ಮಾರ್ಚ್ ಫಾಸ್ಟಿಗೆಂದು, ಆರ್ಮಿ, ನೇವಿ, ಏರ್ಫೋರ್ಸ್ ಎಂದು ಮೂರು ವಿಭಾಗಗಳಾಗಿ ಮಾಡಿ, ಅದಕ್ಕೆ ತಕ್ಕಂಥ ಉಡುಪುಗಳನ್ನು ಶಾಲೆಯಿಂದಲೇ ಕೊಡುತ್ತಿದ್ದರು. ಎಲ್ಲ ಮಕ್ಕಳೂ ವಿವಿಧ ರೀತಿಯ ಸಮವಸ್ತ್ರಗಳಲ್ಲಿ ವೇದಿಕೆಯ ಮುಂದೆ  ಮಾರ್‌ಚ್‌ಫಾಸ್ಟ್ ಮಾಡುತ್ತಾ ಹೋಗುವಾಗ, ನಾನೂ ಕೂಡಾ ನಮ್ಮ ಶಾಲೆಯಲ್ಲಿ ವಾಯುದಳದ ಗುಂಪಿಗೆ ನಾಯಕತ್ವ ವಹಿಸಿದ್ದು ನೆನಪಾಗಿ ಮನಸ್ಸು ಪುಳಕಿತವಾಯಿತು.

       ಹಾಲಿ ಶಾಸಕರಾದ ಶ್ರೀ. ರೇವಣ್ಣನವರ ಭಾಷಣವಾದ ನಂತರ,ಎಲ್ಲ ಹುಡುಗರಿಗೂ ನಂದಿನಿ ಫ್ಲೇವರ್ಡ್ ಮಿಲ್ಕ್, ಐಸ್ಕ್ರೀಮು, ನಂದಿನಿ ಫೇಡೇ ವಿತರಿಸಲಾಯಿತು. ಬೆಳಗ್ಗೆ ಹೊಳೆನರಸೀಪುರದ ಸೋಶಿಯಲ್ ಕ್ಲಬ್ ನಿಂದ ಎಲ್ಲಾ ಶಾಲೆಯ ಮಕ್ಕಳಿಗೂ ರಂಗ ಮಂದಿರದಲ್ಲಿ ಕಾರ್ಯಕ್ರಮ ಪ್ರಾರಂಭವಾಗುವ ಮುಂಚೆಯೇ ಉಪ್ಪಿಟ್ಟು, ಕೇಸರಿ ಬಾತನ್ನು ಕೂಡಾ ಮಾಡಿಸಲಾಗಿತ್ತು.ಅಲ್ಲಾ…..ಏನ್ ಲಕ್ಷುರೀ ರೀ ಈಗಿನ ಜ಼ಮಾನದ ಮಕ್ಕಳಿಗೇ? ನಮ್ ಕಾಲ್ದಲ್ಲಿ ಒಂದು ಚಾಕಲೇಟು ಅಥವಾ ಮಿಠಾಯಿಗೆ ನಾವು ತೃಪ್ತಿ ಪಟ್ಟುಕೊಳ್ಳಬೇಕಾಗುತ್ತಿತ್ತು.ಅಲ್ವೇ?ಆದರೇನು ಬಿಡ್ರೀ, ನಾವು ಆ ಮಿಠಾಯಿಗೆ ಪಡುತ್ತಿದ್ದ ಸಂತಸ, ಈಗಿನ ಹುಡುಗರಲ್ಲಿ ಅಷ್ಟೆಲ್ಲಾ ಕೊಟ್ಟರೂ ಕಾಣಲಿಲ್ಲ ಕಣ್ರೀ.ನಾವು, ನಮ್ಮ ಕಾಲದವರು ಬಹುತೇಕ ಅಲ್ಪತೃಪ್ತರು. ನಿಜ ಅಲ್ವೇ? ಒಪ್ಕೋತೀರಾ?

        ನಂತರ,ಸಾಧಕರಿಗೆ ಗೌರವ ಸೂಚಿಸಲು ವೇದಿಕೆಯ ಮುಂದಿನ ಭಾಗಕ್ಕೆ ವಿವಿಧ ರಂಗದಲ್ಲಿ ಸೇವೆ ಸಲ್ಲಿಸಿರುವ ಎಲ್ಲರನ್ನೂ ಕರೆಯಲಾಯಿತು. ಕಲೆ ಹಾಗೂ ಸಾಹಿತ್ಯದ ಸೇವೆಗಾಗಿ ನಮ್ಮ ಊರಿನಲ್ಲಿ ನನ್ನನ್ನು ಗುರುತಿಸಿದ್ದು ಬಹಳ ಸಂತೋಷದ ವಿಷಯ.ಈ ಸಂತೋಷವನ್ನು ನಿಮ್ಮೆಲ್ಲರ ಜೊತೆ ಹಂಚಿಕೊಳ್ಳಲು ಬಯಸಿದ್ದೇನೆ. ನಿಮ್ಮೆಲ್ಲರ ಹಾರೈಕೆಗಳು ನನ್ನ ಕಲೆ ಹಾಗೂ ಬರೆವಣಿಗೆಯ ಮೇಲಿರಲಿ ಎಂದು ವಿನಮ್ರತೆಯಿಂದ ಕೇಳಿಕೊಳ್ಳುತ್ತಿದ್ದೇನೆ.

ಸುಮಾರು ಮೂವತ್ತೇಳು ವರ್ಷಗಳ ನಂತರ ಸ್ವತಂತ್ರ ದಿನಾಚರಣೆಯ ದಿನ ಮತ್ತೊಮ್ಮೆ ಬಯಲು ರಂಗ ಮಂದಿರದಲ್ಲಿ ಇದ್ದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಒಂದು ಮರೆಯಲಾರದ ಅನುಭವ. ಆಗಿನ, ಈಗಿನ ದಿನಗಳನ್ನು ತಾಳೆ ಹಾಕಿ ಅನುಭವಿಸುವ ಸುಸಮಯ ಒದಗಿ ಬಂದಿದ್ದು ಹಾಗೂ ಈ ಎಲ್ಲಕೂ ಕಾರಣರಾದ ನಮ್ಮೂರಿನ ಶಾಸಕರು, ಪುರಸಭೆಯವರು, ಹಾಗೂ ಸಮಸ್ತ ಜನತೆಗೆ ನನ್ನ ಧನ್ಯವಾದಗಳನ್ನ ಅರ್ಪಿಸುತ್ತಿದ್ದೇನೆ.

    ಈ ಪುರಸ್ಕಾರಕ್ಕೆ ಕಾರಣರಾದ ತಾಲ್ಲೂಕು ಆಡಳಿತದವರಿಗೂ, ಹಾಗೂ ಅವರ ಜೊತೆ ಕೈಜೋಡಿಸಿದ ಎಲ್ಲ ಮಹನೀಯರಿಗೂ ನನ್ನ ಅನಂತಾನಂತ ವಂದನೆಗಳು.


Leave a Reply

Back To Top