ಅಂಕಣ ಸಂಗಾತಿ

ಹೊತ್ತಿಗೆಯೊಂದಿಗೊಂದಿಷ್ಟುಹೊತ್ತು

ತುಮುಲ  ಕಾದಂಬರಿ 

ಶೀರ್ಷಿಕೆ ತುಮುಲ*  ಕಾದಂಬರಿ 

ಲೇಖಕಿ ;   ಸುಧಾ ಮೂರ್ತಿ 

ಪ್ರಕಾಶನ ಸ್ವಪ್ನಬುಕ್ ಹೌಸ್ 

ಹನ್ನೆರಡನೇ ಮುದ್ರಣ ಮಾರ್ಚ್ ೨೦೧೮

ಸುಧಾ ಮೂರ್ತಿ ಕನ್ನಡ ಮತ್ತು ಇಂಗ್ಲಿಷ್ ನ ಪ್ರಸಿದ್ಧ ಬರಹಗಾರ್ತಿ . ತಮ್ಮ ವೃತ್ತಿಪರ ಜೀವನವನ್ನು ಇಂಜಿನಿಯರ್ ಹಾಗೂ ಕಂಪ್ಯೂಟರ್ ವಿಜ್ಞಾನಿಯಾಗಿ ಆರಂಭಿಸಿ ಪತಿ ನಾರಾಯಣಮೂರ್ತಿ ಅವರೊಂದಿಗೆ ಪ್ರಸಿದ್ಧ ಇನ್ಫೋಸಿಸ್ ಪ್ರತಿಷ್ಠಾನವನ್ನು ಸ್ಥಾಪಿಸಿದವರು . ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಗುರುತಿಸಿಕೊಂಡಿರುವ ಇವರ ಬರಹ ಕಾದಂಬರಿಗಳು ಸಾಕಷ್ಟು ಪ್ರಸಿದ್ಧಿ ಪಡೆದಿವೆ . ಡಾಲರ್ ಸೊಸೆ, ಮಹಾಶ್ವೇತೆ, ಅತಿರಿಕ್ತೆ, ಪರಿಧಿ, ತುಮುಲ,  ಋಣ, ಏರಿಳಿತದ ಹಾದಿಯಲ್ಲಿ,  ನೂನಿಯ ಸಾಹಸಗಳು ಇವರ ಹೆಸರಾಂತ ಕೃತಿಗಳು.  ‘ಮನದ ಮಾತು’ ಅಂಕಣ ಬರಹಗಳ ಸಂಗ್ರಹ.  ಇವರ ಸೇವೆಗೆ ಸಾಹಿತ್ಯಕ್ಕೆ ಸಂದ ಗೌರವಗಳು ಹತ್ತು ಹಲವಾರು.  ಪದ್ಮಶ್ರೀ ಪ್ರಶಸ್ತಿ ,ಸಹಸ್ರಮಾನ ಮಹಿಳಾ ಶಿರೋಮಣಿ, ಗುಲ್ಬರ್ಗ ವಿಶ್ವವಿದ್ಯಾನಿಲಯದ ಡಾಕ್ಟರೇಟ್, ಮಿಲೇನಿಯಂ ಮಹಿಳಾ ಶಿರೋಮಣಿ ಪ್ರಮುಖವಾದವು .

ಪ್ರಸ್ತುತ ತುಮುಲ ಕಾದಂಬರಿಯು ಸುಧಾ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಬರುತ್ತಿತ್ತು.  ಈಗ ಹಿಂದಿ ತಮಿಳು ತೆಲುಗು ಮರಾಠಿ ಭಾಷೆಗಳಿಗೆ ಅನುವಾದಗೊಂಡು ಜನಪ್ರಿಯವಾಗಿವೆ . ಆಗ ಓದಿ ಈಗ ಮತ್ತೆ ಮರುಓದು ಕೈಗೊಂಡಿರುವುದು . ವಿಭಿನ್ನ ಕಥಾವಸ್ತು ಹಾಗೂ ಗಟ್ಟಿ ಪಾತ್ರಗಳಿಂದ ವಿಶೇಷ ವಿನೂತನ ಅನುಭವವನ್ನು ಕಟ್ಟಿಕೊಡುವಲ್ಲಿ ಸಫಲವಾಗುತ್ತದೆ . ಭಾರತದ ವಿವಿಧ ಸ್ಥಳಗಳ ಲಂಡನ್ ಸ್ವಿಟ್ಜರ್ಲ್ಯಾಂಡ್ ಹಾಗೂ ಅಮೆರಿಕದ ನೆಲಗಳಲ್ಲಿ ನಡೆಯುವ ಘಟನೆಗಳು ಕಥೆಯ ಚೌಕಟ್ಟನ್ನು ವಿಸ್ತರಿಸುತ್ತಾ ಹೋಗಿದೆ.  ಹಾಗೂ ಅಲ್ಲಿನ ಚಿತ್ರಣವನ್ನು ಓದುಗರಿಗೆ ಕಣ್ಣಿಗೆ ಕಟ್ಟುವಂತೆಯೂ ಮಾಡುತ್ತದೆ.

ಸ್ವಿಡ್ಜರ್ಲ್ಯಾಂಡ್ ಸ್ಕೇಟಿಂಗ್ ಸೀಸನ್ ಅನುಭವಿಸಲು ಹೊರಟ ಮುಖೇಶ್ ವಾಸಂತಿ ದಂಪತಿಗಳು.  ಅಲ್ಲಿ ಬಿದ್ದು ಕಾಲಿಗೆ ಪೆಟ್ಟು ಮಾಡಿಕೊಂಡು ಆಸ್ಪತ್ರೆ ಸೇರುವಳು ವಾಸಂತಿ. ಅಷ್ಟರಲ್ಲಿ  ತಂದೆಗೆ ಸೀರಿಯಸ್ ಎಂದು ತಿಳಿದು ಒಬ್ಬನೇ ಭಾರತಕ್ಕೆ ಮರಳುವ ಮುಖೇಶ್.  ತಂದೆ ದೇಹಾಂತವಾಗಿ ಕರ್ಮಗಳು ನಡೆಯುವಾಗ ಅಕಸ್ಮಾತ್  ಸಿಕ್ಕ ಒಂದು ಹಳೆಯ ಫೋಟೋನಿಂದ ತಾನು ತನ್ನ ತಂದೆ ತಾಯಿಗಳ ಸಾಕು ಮಗ ಎಂಬ ನಿಜದ ಅರಿವಾಗುತ್ತದೆ.  ಅಕ್ಕ ನೀರಜಾಳ ಪತಿ  ಸತೀಶ್ ದುರಾಸೆ ಆಸ್ತಿ ಪೂರ ಹೊಡೆದುಕೊಳ್ಳುವ ಹುನ್ನಾರ.  ಕಡೆಗೆ ಕರ್ಮ ಮಾಡಲೂ ಲ ೮ಮುಖೇಶನಿಗೆ ತಡೆ.  ಆಗ ತನ್ನ ಪಾಲಿನ ಆಸ್ತಿಯನ್ನೆಲ್ಲಾ ಅಕ್ಕಳಿಗೆ ಬರೆದು ಕೊಡುವ ನಿರ್ಧಾರ ಹೇಳಿ ಕರ್ಮ ಮಾಡಲು ಅವಕಾಶ ಕೇಳುತ್ತಾನೆ . ನಂತರ ತಾಯಿ ಸುಮತಿಯಿಂದ ಮಹಾರಾಷ್ಟ್ರದ ಚಾಲನಾ ಎಂಬ ಊರಿನಲ್ಲಿ ತನ್ನ ತಾಯಿ ರೂಪಿಂದರ್ ಎಂದು ಅವಳ ಅತ್ತೆ ಮತ್ತು ಗಂಡ ದುರದೃಷ್ಟದ ಮಗು ಎಂದು ಇವನನ್ನು ಆಶ್ರಮದಲ್ಲಿ ಬಿಡಲೇ ಬೇಕು ಎಂದಾಗ ತಾನೇ ಕರೆದುಕೊಂಡು ಬಂದು ಸಾಕಿದ್ದಾಗಿ ತಿಳಿಸುತ್ತಾಳೆ. 

ಇದುವರೆಗೂ ಕರ್ಮಠ ಬ್ರಾಹ್ಮಣರ ತುಂಬಾ ಶ್ರೀಮಂತರ ಮಗನೆಂಬ ಭಾವ ಇದ್ದ ಬುದ್ಧಿವಂತ ಸುಸಂಸ್ಕೃತ ಮುಖೇಶನ ನಂಬಿಕೆಯ ಬುಡವೇ ಅಲ್ಲಾಡುತ್ತದೆ . ವಿದೇಶದಲ್ಲೇ ಇದ್ದ ಪತ್ನಿಗೆ ವಿಷಯ ತಿಳಿಸದೆ ಸಿಕ್ಕ ಚೂರುಪಾರು ವಿಳಾಸದ ನೆರವಿನಿಂದ ಅಮೃತಸರಕ್ಕೆ ಹೆತ್ತ ತಾಯಿಯನ್ನು ಹುಡುಕಿ ಬರುತ್ತಾನೆ. ತಾಯಿ ಮತ್ತು ಅವಳ ಚಿಕ್ಕಮಗ ಬೇರೊಂದು ಊರಿನಲ್ಲಿ ಕೆಲಸದವರಾಗಿ ಬಾಳುವುದನ್ನು ತಿಳಿಯುತ್ತಾನೆ. ತಾಯಿಯನ್ನು ಭೇಟಿ ಆದಾಗ ಅವಳ ಹರ್ಷ ಹೇಳತೀರದು.  ಆದರೆ ತನ್ನಪ್ಪ ಹೇಗೆ ತನ್ನನ್ನು ತೊರೆದ ಎಂದಾಗ ಅಲ್ಲಿ ಅವನಿಗೆ ಮತ್ತೊಂದು ರಹಸ್ಯ ತಿಳಿಯುತ್ತದೆ.  ತಾನು    ರೂಪಿಂದರ್ ಹಾಗೂ ಅವಳ ಗಂಡ ಸುರಿಂದರ್ ಅವರ ಸ್ವಂತ ಮಗನಲ್ಲ ಕ್ಯಾಲಿಫೋರ್ನಿಯಾದ ಸಾಕ್ರಮೆಂಟೋದಲ್ಲಿ ದುಡಿಯುವಾಗ ಪಕ್ಕದಲ್ಲಿದ್ದ ರೆಡ್ ಇಂಡಿಯನ್ ದಂಪತಿಗಳ ಎರಡನೆಯ ಮಗ . ಅದೇ ವಯಸ್ಸಿನ ರೂಪಿಂದರ್ ಮಗು ಹುಟ್ಟುವಾಗಲೇ ಸತ್ತಾಗ ಅವಳೇ ಇವನಿಗೆ ಹಾಲೂಡಿಸಿದ್ದು . ನಂತರ ಅಪಘಾತದಲ್ಲಿ ಆ ದಂಪತಿಗಳು ಸತ್ತು ಮೊದಲ ಮಗ ಕಾಣೆಯಾದಾಗ ಉಳಿದಿದ್ದ ಈ ಮಗುವನ್ನು ತಾನೇ ಇಟ್ಟುಕೊಂಡು ಗಂಡನ ಅಸಮಾಧಾನವಿದ್ದರೂ ಭಾರತಕ್ಕೆ ಕರೆ ತಂದಿರುತ್ತಾಳೆ.   ರೂಪಿಂದರ್ ಮತ್ತು ಅವಳ ಮಗನಿಗೆ ತನ್ನದೇ ಸಂಪಾದನೆಯ ಹಣದಿಂದ ಜೀವನಕ್ಕೆ ಮಾರ್ಗ ಮಾಡಿಕೊಟ್ಟು ಇಂಗ್ಲೆಂಡಿಗೆ ಮರಳುತ್ತಾನೆ . ಹೆಂಡತಿ ವಾಸಂತಿಗೆ ತನ್ನ ಜನ್ಮ ವೃತ್ತಾಂತವನ್ನೆಲ್ಲ ತಿಳಿಸಿ ಜೊತೆಯಲ್ಲಿ ಇರಬೇಕೋ ಬೇಡವೋ ಎಂಬ ನಿರ್ಧಾರ ಅವಳಿಗೇ ಬಿಡುತ್ತಾನೆ.  ಸದ್ಗುಣಿಯಾದ ಅವಳು ಅವನನ್ನು ಪುರಸ್ಕರಿಸುತ್ತಾಳೆ.  ನಂತರ ಅಮೆರಿಕಾಗೆ ತನ್ನ ಅಣ್ಣನನ್ನು ಹುಡುಕಿಕೊಂಡು ಹೋಗಿ ಅವನನ್ನು ಭೇಟಿಯಾಗುತ್ತಾನೆ ಆದರೆ ಅಲ್ಲಿಯ ಸಾಮಾಜಿಕ ಸ್ಥಿತಿಯಂತೆ ಅವನೇನು ಇವನೊಡನೆ ಒಡನಾಟಕ್ಕೆ ಉತ್ಸಾಹ ತೋರುವುದಿಲ್ಲ . ನಂತರ ಪತ್ನಿಯೊಂದಿಗೆ ಬಂದು ತಾಯಿ ಸುಮತಿಗೆ ಎಲ್ಲ ವಿಷಯ ತಿಳಿಸುತ್ತಾನೆ.  ರೂಪಿಂದರ್ ಗೆ ತನ್ನ ಪತ್ನಿಯ ಭೇಟಿ ಮಾಡಿಸುತ್ತಾನೆ . ಮನ ಹಗುರಾಗುತ್ತದೆ.  ಆವರೆಗಿನ ತುಮುಲ ದುಗುಡಗಳು ಮನೆಗೆ ಬರುವ ಹೊಸ ಪುಟ್ಟ ಅತಿಥಿಯ ನಿರೀಕ್ಷೆಯಲ್ಲಿ ಕರಗಿ ಹೊಸ ಬದುಕಿನ ಬೆಳಕು ಮೂಡುತ್ತದೆ . 

ಮೊದಲೇ ಹೇಳಿದಂತೆ ವಿಭಿನ್ನ ಕಥಾಹಂದರ . ಕಥಾನಾಯಕನ ಮನದ ತುಮುಲವೇ ಹೆಚ್ಚು ಪ್ರಧಾನವಾಗಿರುವ ಕಥೆ . ಇದ್ದಕ್ಕಿದ್ದಂತೆ ಅಷ್ಟು ಪ್ರೀತಿಯಿಂದ ಸಾಕಿದ ಅಪ್ಪ ಅಮ್ಮ ತನ್ನ ಹೆತ್ತವರಲ್ಲ ಎಂದು ತಿಳಿದಾಗ ಅದೆಷ್ಟು ಆಘಾತವಾಗಿರಬೇಕು . ನಂತರ ಸತ್ಯಗಳ ಅನಾವರಣ ಅವು ತಂದೊಡ್ಡುವ ಸಂಧಿಗ್ಧಗಳು,  ಆ ಭಾವನೆಗಳ ಹೊಡೆತ ಚಂಡಮಾರುತದ ನಂತರ ಪ್ರಶಾಂತ ವಾಗುವ ಪ್ರಕ್ಷುಬ್ಧ ಕಡಲಿನಂತಹ ಅಂತರಾಳ ಇದೆಲ್ಲವನ್ನೂ ತುಂಬಾ ಸ್ವಾರಸ್ಯಕರವಾಗಿ ಪಡಿಮೂಡಿಸುತ್ತಾರೆ.  ಅವರ ವಿಶಾಲ ಅನುಭವಗಳ ಹರಹು ವಿವಿಧ ಭಾಗಗಳ ವಿವರಣೆ ಕಥೆಗೆ ಗಟ್ಟಿ ಅಡಿಗಟ್ಟು ಕಟ್ಟುವಲ್ಲಿ ಸಶಕ್ತವಾಗಿದೆ.  ಭಾವನೆಗಳ ನೆರಳಿನಾಟವೂ ಸಂದರ್ಭಗಳ ಹೆಣೆಯುವಿಕೆಯೂ ವಾಸ್ತವಿಕತೆಯ ನೆಲೆಗಟ್ಟಿನಲ್ಲಿ ಸುಂದರವಾಗಿ ಮೂಡಿ ಬಂದಿದೆ.   ಧಾರಾವಾಹಿಯಾಗಿ ಬರೆದಿದ್ದರಿಂದಲೋ ಏನೋ ವಿಷಯದ ವಿಸ್ತಾರ ತುಂಬಾ ಆಗಿಲ್ಲ . ಹ್ರಸ್ವವಾದಂತೆ ಅನ್ನಿಸುತ್ತದೆ . ಕಾದಂಬರಿಗೆಂದೇ ಬರೆದಿದ್ದರೆ ಮನದ ತೊಳಲಾಟಗಳು ಹುಡುಕುವಿಕೆ ಮಾರ್ಗಗಳು ಇನ್ನಷ್ಟು ದೀರ್ಘವಾಗಿ ವರ್ಣಿತವಾಗುತ್ತಿದ್ದವೇನೋ. ಪುಸ್ತಕ ಕೈಗೆ ತೆಗೆದುಕೊಂಡರೆ ಮತ್ತೆ ಕೆಳಗಿಡದಂತೆ ಪೂರ್ಣ ಓದುವಂತೆ ಮಾಡುವ ತಾಕತ್ತಿನ ಬರವಣಿಗೆ.  ಓದಲೇಬೇಕಾದ ಸಂಗ್ರಹಿಸಲೇಬೇಕಾದ ಪುಸ್ತಕಗಳಲ್ಲೊಂದು .


ಸುಜಾತಾ ರವೀಶ್

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ.  “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ 
ಬಯಕೆ ಲೇಖಕಿಯವರದು

Leave a Reply

Back To Top