ಕಾವ್ಯ ಸಂಗಾತಿ
ಶ್ರಾವಣ
ಪ್ರೊ ರಾಜನಂದಾ ಘಾರ್ಗಿ ಕವಿತೆ
ವರುಷ ವರುಷ ಕಳೆದು
ಮರಳಿ ಶ್ರಾವಣ ಬರುತ್ತಿದೆ
ಆಷಾಡದ ಮಳೆಯ ಸರಿಸಿ
ಭೂಮಿಗೆ ಹಸಿರು ಉಡಿಸಿದೆ
ರಂಗುರಂಗಿನ ರಂಗೋಲಿ
ಅಂಗಳದಲ್ಲೆಲ್ಲ ಹರಡಿದೆ
ಕರ್ಪೂರದ ನಸುಗಂಪು
ಸುತ್ತಮುತ್ತ ಸುಳಿದಾಡಿದೆ
ತುಪ್ಪದ ನಂದಾದೀಪಗಳು
ದೇಗುಲಗಳಲಿ ಬೆಳಗುತಿವೆ
ಮನಗಳಲ್ಲಿ ಕಟ್ಟಿದ ಜಿಡ್ಡು
ಕರಗಿ ಹರಿದು ತಿಳಿಯಾಗಿದೆ
ಚಂದದ ಅಂಗನೆಯರು
ಅಂಗಳದಲ್ಲಿ ಓಡಾಡುತ್ತಾ
ಮಂಗಳಗೌರಿ ಪೂಜೆಯ
ಸಡಗರದಿ ತೊಡಗಿಹರು
ಶುಕ್ರವಾರದ ಸಂಜೆ ಹೊತ್ತು
ಮೂಗುತಿ ಹೊತ್ತ ಮುತ್ತೈದೆಯರ
ಲಕ್ಷ್ಮಿ ಪೂಜೆಯ ಸಂಭ್ರಮ
ಮುಗಿಲೆತ್ತರಕೆ ಏರುತಿಹುದು
ಪಂಚಮಿ ಹಬ್ಬ ಬಂದಾಗ
ಮಿಂಚುಗಣ್ಣಿನ ತರುಣಿಯರ
ಹೊತ್ತು ಜೋಕಾಲಿಗಳು
ಸಡಗರದಿ ಜೀಕುತಿವೆ
ವರುಷ ವರುಷ ಕಳೆದು
ಮರಳಿ ಶ್ರಾವಣ ಬರುತ್ತಿದೆ
ಮನದಿ ಕವಿದ ಮೋಡ ಸರಿಸಿ
ಹೆಂಗಳೆಯರಲ್ಲಿ ಹರುಷ ತುಂಬಿದೆ