ಕನ್ನಡ ಮೊಹರಂ ಪದಗಳು-ಡಾ ಪ್ರಕಾಶ ಗ ಖಾಡೆ

ವಿಶೇಷ ಲೇಖನ

ಕನ್ನಡ ಮೊಹರಂ ಪದಗಳು

ಡಾ ಪ್ರಕಾಶ ಗ ಖಾಡೆ

ಕನ್ನಡ ಮೊಹರಂ ಪದಗಳು

ಡಾ ಪ್ರಕಾಶ ಗ ಖಾಡೆ

ಕನ್ನಡ ಜನಪದ ಸಾಹಿತ್ಯದಲ್ಲಿ ಮೊಹರಂ ಪದಗಳಿಗೆ ಒಂದು ವಿಶಿಷ್ಟವಾದ ಸ್ಥಾನವಿದೆ. ಮೊಹರಂ ಹಬ್ಬದ ಸಂದರ್ಭದಲ್ಲಿ ಹೇಳಲಾಗುವ ಈ ಹಾಡುಗಳನ್ನು ರಿವಾಯತ ಪದಗಳು, ಕರ್ಬಲಾ ಹಾಡುಗಳು,ಜಂಗೀನ ಪದಗಳು,ಮೊಹರಂ ಹಾಡುಗಳು ಮೊದಲಾದ ಹೆಸರುಗಳಿಂದ ಕರೆಯಲಾಗುತ್ತದೆ.ಉತ್ತರ ಕರ್ನಾಟಕದ ಪ್ರದೇಶಗಳಲ್ಲಿ ಈ ಹಬ್ಬವನ್ನು ಹಿಂದೂ ಮುಸ್ಲಿಂ ಬಾಂಧವರು ಕೂಡಿ ಆಚರಿಸುತ್ತಾರೆ. ಹಳ್ಳಿಗಳಲ್ಲಿ ‘ಅಲಾಯ’ ಹಬ್ಬವೆಂದು ಕರೆಯಲಾಗುವ ಮೊಹರಂ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಮೊಹರಂ ತಿಂಗಳಲ್ಲಿ ಚಂದ್ರ ದರ್ಶನವಾದ ದಿನವೇ ಮಸೀದೆ ಮುಂದೆ ಗ್ರಾಮದ ಮುಲ್ಲಾನ ಹಿರಿತನದಲ್ಲಿ ಊರ ಹಿರಿಯರು ಕೂಡಿಕೊಂಡು ಗುದ್ದಲಿ ಪ್ರೂಜಾ ಸಮಾರಂಭ ನೆರವೇರಿಸುತ್ತಾರೆ. ಬೆಂಕಿ ಹಾಕುವ ಹೊಂಡ ಮಾಡುವ ಸಲುವಾಗಿ ತಗ್ಗು ತೊಡುತ್ತಾರೆ.ಇದನ್ನೇ ‘ಗುದ್ಲಿ ಬಿತ್ತು’ ಎನ್ನುತ್ತಾರೆ. ಈ ಗುದ್ದಲಿ ಬಿದ್ದ ಆಚರಣೆಯ ಐದನೆಯ ದಿನಕ್ಕೆ ದೇವರು ಕೂಡ್ರಿಸುವ ಕಾರ್ಯಕ್ರಮ ಜರುಗುತ್ತದೆ.

ಕೂಡ್ರಿಸಿದ ಈ ದೇವರುಗಳಾದ ಗಜ್ಜಿಪೀರಾ,ಲಾಲಸಾಹೇಬ,ಹಸನ ಹುಸೇನಿಗಳಿಗೆ ಹಿಂದೂ ಮುಸ್ಲಿಮರು ಕೂಡಿಯೇ ಭಯ ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ದೇವರುಗಳಿಗೆ ಗಂದ ಏರಿಸುವ ಕಾರ್ಯಕ್ರಮ ಕತ್ತಲ ರಾತ್ರಿ ದಿವಸ ಮಾದಲಿ.ಚೊಂಗೆ,ಮೊದಲಾದ ಸಿಹಿ ತಿನಿಸುಗಳನ್ನು ಮಾಡಿ ನೈವೇದ್ಯ ಹಿಡಿಯುತ್ತಾರೆ. ಈ ಸಂದರ್ಭದಲ್ಲಿ ಹಬ್ಬದ ಐದು ದಿನವೂ ಸಣ್ಣ ದೊಡ್ಡವರು ಕೂಡಿಕೊಂಡು ಅಲಾಯಿ ಕುಣಿಯ ಸುತ್ತಲು ‘ಧೂಲಾ ಧೂಲಾ’ ಎಂದು ಹೇಳುತ್ತ ಕುಣಿದು ಕುಪ್ಪಳಿಸುವ ದೃಶ್ಯ ಸಾಮಾನ್ಯವಾಗಿರುತ್ತದೆ. ಜೊತೆಗೆ ಊರ ಕರ್ಬಲಾ ಮೇಳಗಳು ಎರಡು ತಂಡಗಳಾಗಿ ಹಲಗೆ ವಾದ್ಯದೊಡನೆ ಹೆಜ್ಜೆ ಕುಣಿತ ಕುಣಿಯುತ್ತಾ ಲೇಜಿಮ್ ಬಾರಿಸುತ್ತಾ ,ಕರಬಲಾ ಹಾಡು ಹೇಳುತ್ತಾ ದೇವರು ಕುಳಿತ ಸ್ಥಳಕ್ಕೆಬಂದು ಬೆಳಗು ಹರಿಯುವವರೆಗೂ ಹಾಡು ಹೇಳುತ್ತಾರೆ.ಇವೆ ‘ರಿವಾಯತ ಪದ’ಗಳಾಗಿ ಜನಜನಿತವಾಗಿವೆ.

ಕನ್ನಡ ಮೊಹರಮ್ ಪದಗಳು ಇತಿಹಾಸವನ್ನು ಕಟ್ಟಿಕೊಡುವ ಬಹುಮುಖ್ಯವಾದ ಪಾರಂಪರಿಕ ಗೀತ ಪ್ರಕಾರಗಳಾಗಿವೆ.ಹಿಂದೂ ಮುಸ್ಲಿಂ ಧಾರ್ಮಿಕ ವಸ್ತು ಸಂಗತಿಗಳನ್ನು ಸರಳ ಮತ್ತು ಸುಲಭವಾಗಿ ಹಳ್ಳಿಗರಿಗೆ ಮನದಟ್ಟಾಗುವಂತೆ ಹಾಡಿನಲ್ಲಿ ಹೇಳುವ ಕಥನ ರೂಪದ ಈ ಪದ್ಯಗಳು ಜನಸಾಮಾನ್ಯರ, ಅನಕ್ಷರಸ್ಥರ ಜ್ಞಾನ ಕ್ಷಿತಿಜವನ್ನು ವಿಸ್ತರಿಸಿವೆ. ಒಂದು ಕಾಲಕ್ಕೆ ಈಗಿನಂತಿರುವ ಬಹುಮುಖಿ ಮಾಧ್ಯಮಗಳ ಅಬ್ಬರವೇ ಇಲ್ಲದ ಕಾಲದಲ್ಲಿ ಭಾರತೀಯ ಪುರಾಣೇತಿಹಾಸಗಳನ್ನು, ಆಗಾಗ್ಗೆ ಘಟಿಸುವ ನೆರೆಹಾವಳಿ, ಬರಗಾಲ, ದುರಂತಗಳನ್ನು ಈ ಪದ್ಯಗಳಲ್ಲಿ ಕಟ್ಟಿಕೊಟುವುದರ ಮೂಲಕ ಕರ್ಬಲಾ ರಚನೆಕಾರರು ಖಂಡಿತವಾಗಿಯೂ ಚರಿತ್ರೆಕಾರರ ಸಾಲಿನಲ್ಲಿ ನಿಲ್ಲುತ್ತಾರೆ. ರಿವಾಯತ ಪದಗಳಿಗೆ ಬರೀ ಚರಿತ್ರೆ ಪುರಾಣ ಮತ್ತು ಸಾಂದರ್ಭಿಕ ಘಟನೆಗಳಷ್ಟೇ ವಸ್ತುಗಳಾಗಿರದೆ ಇಲ್ಲಿನ ಸವಾಲು ಜವಾಬು ಪದಗಳಲ್ಲಿ ಬೆಡಗು ಮತ್ತು ಒಗಟಿನ ಬೆರಗಿದೆ.

ಮೊದಲಿಗಿ ನೆನೆದಿನೋ

ಅಲ್ಲಾನ ನಾಮಾ

ಪ್ರಥಮಕ ನೆನುವೆನೋ ಶಿವನ ಧ್ಯಾನಾ .

ಬಂತೋ ಮೋರಮ ರಾಜೇಕ ಪ್ರೇಮಾ

ಹಸನ ಹುಸೇನಿ ನಾಮಾ

ಆತೋ ಪಾವನಾ.

ಕನ್ನಡ ಜನಪದ ಸಾಹಿತ್ಯದಲ್ಲಿ ಗುರುತಿಸಿಕೊಂಡಿರುವ ರಿವಾಯತ ಪದಗಳು ಜನಪದ ಗೀತ ಪ್ರಕಾರದ ಬಹುಮುಖ್ಯವಾದ ಕೊಡುಗೆಗಳಾಗಿವೆ. ಗ್ರ್ರಾಮೀಣರ ಧಾರ್ಮಿಕ, ಸಾಂಸ್ಕೃತಿಕ, ಆರಾಧನಾ ಮನೋಭಾವಗಳ ಆಚರಣೆಯ ಹಿನ್ನೇಲೆಯಲ್ಲಿ ಬೆಸೆದುಕೊಂಡಿರುವ ಭಾವೈಕ್ಯತೆಯ ಪ್ರತೀಕವಾಗಿ ಒಡಮೂಡಿದ ಇಂಥ ರಚನೆಗಳು ಪ್ರಸ್ತುತ ಸಂದರ್ಭದಲ್ಲಿ ಅಧ್ಯಯನ ಯೋಗ್ಯವಾಗಿವೆ.

ಕನ್ನಡದಲ್ಲಿ ರಿವಾಯತ ಪದಗಳ ಸಂಗ್ರಹ ಸಂಪಾದನಾ ಕಾರ್ಯ ಅಷ್ಟಾಗಿ ನಡೆದಿಲ್ಲ,ದೊರೆತ ಕೆಲವೇ ಕಲವು ಕೃತಿಗಳು ಈ ಬಗೆಯ ರಚನೆಗಳ ಸಂಗ್ರಹಣಾ ಕಾರ್ಯದ ಅನಿವಾರ್ಯತೆಯನ್ನು ಸಾರುತ್ತವೆ.ಕನ್ನಡದಲ್ಲಿ ಖ್ಯಾತ ಜನಪದ ತಜ್ಞ ಜಿ.ಬಿ.ಖಾಡೆ ,ತೇಜಸ್ವಿ ಕಟ್ಟೀಮನಿ, ದಸ್ತಗೀರ ಅಲ್ಲೀಭಾಯಿ,ಡಾ.ಮಲ್ಲಿಕಾಜರ್ುನ ಲಠ್ಠೆ ಹೀಗೆ ಬೆರಳೆಣಿಕೆಯಷ್ಟು ಸಂಗ್ರಹಕಾರರು ಈ ಗೀತೆಗಳನ್ನು ಸಂಪಾದಿಸಿ ಕೊಟ್ಟಿದ್ದಾರೆ.

ಜಿ.ಬಿ.ಖಾಡೆ ಅವರ ‘ಹಳ್ಳಿ ಹಬ್ಬಿಸಿದ ಹೂಬಳ್ಳಿ’ ಕೃತಿಯಲ್ಲಿ 170 ರಿವಾಯತ ಪದಗಳಿವೆ.ಒಟ್ಟು ಪದಗಳನ್ನು ನಾಲ್ಕು ಭಾಗಗಳಲ್ಲಿ ಅವರು ವಿಂಗಡಿಸಿಕೊಟ್ಟಿದ್ದಾರೆ.ಜಂಗೀನ ಪದಗಳು,ಭಕ್ತಿ ಪದಗಳು,ಸವಾಲು ಪದಗಳು,ಮತ್ತು ರಿವಾಯತ ಪದಗಳಲ್ಲಿ ಹಿಂದೂ ಧರ್ಮದ ಜಾನಪದ ಹೀಗೆ ವಿಂಗಡಿಸುತ್ತಾರೆ.ಜಂಗೀನ ಪದಗಳಲ್ಲಿ ಮುಸ್ಲಿಂ ಸಂತರ ಸ್ತುತಿ ,ಕದನ,ಪವಾಡಗಳ ನಿರೂಪಣೆ ಇದೆ.ಮೌಲಾನ ಬಾಲ ಲೀಲೆ,ಮೌಲಾಲಿ ಶರಣರ ಪವಾಡ,ಕಾಶೀಮ ಹುಸೇನರ ಕದನ,ಯುಜೀರನ ಕೂಡ ಜಂಗ,ಮೂರು ಲೋಕದಾಗ ಅನಸೀದೋ ಗಂಡಾ ಎಂಬ ಒಟ್ಟು ಐವತ್ತು ಪದ್ಯಗಳಲ್ಲಿ ಹಜರತ್ ಇಮಾಮ್ ಹುಸೇನರು ಯೇಜೀದನ ಬಲಿಷ್ಠ ಸೈನ್ಯವನ್ನು ಕರ್ಬಲಾ ಮೈದಾನದಲ್ಲಿ ಎದುರಿಸಿ ನ್ಯಾಯ ನಿಷ್ಠುರ ಹೋರಾಡಿ ಪ್ರಾಣಾರ್ಪಣೆ ಮಾಡಿದ ಆತ್ಮ ಬಲಿದಾನದ ಸಂಗತಿ ನಿರೂಪಿತವಾಗಿದೆ.

ರಿವಾಯತ ಭಕ್ತಿ ಪದಗಳಲ್ಲಿ ಬಂತೋ ಮೊಹರಮ್ ರಾಜೇಕ ಪ್ರೇಮಾ,ಫಕೀರನ ಪವಾಡ, ಪೈಗಂಬರರು ಮದಿನಾ ಬಿಟ್ಟಿದ್ದು ,ತಿಕೋಟಾ ಹಾಜಿಸಾಹೇಬನ ಕಥೆ,ಇಬ್ರಾಹಿಮ ಲೀಲಾ ಮೊದಲಾದ ಹಾಡುಗಳು ಮುಸ್ಲಿಮ್ ಸಂತರ ,ಶರಣರ ಪವಾಡ ಮತ್ತು ಸಾಧನೆಯನ್ನು ಸಾರುತ್ತವೆ.ರಿವಾಯತದಲ್ಲಿ ಸವಾಲು ಪದಗಳು ಭಾಗದಲ್ಲಿ ಸಭಾದಾಗ ನಿಂತು ಕೊಡಬೇಕೊ ಉತ್ತರಾ,ಪ್ಲಥ್ವಿಯ ಪಂಚಾಂಗ,ಬರುವಾಗ ಯಾವದಿತ್ತೋ ನಿನ್ನ ದಾರಿ ಮೊದಲಾದ ಸವಾಲು ಪದಗಳಿವೆ. ಮೊಹರಂ ಪದಗಳು ಚಿಂತನೆಗೆ ಹಚ್ಚುತ್ತವೆ.

ಬಂದೀರಿ ಕರ್ಬಲದೊಳಗ

ನೀವು ಎಲ್ಲಾರು ಕೂಡಿ

ಬೆಳತನಕಾ ಆಗಿ ಹೋಗಲೋ.

ಪದಕ ಪದಾ ಜೋಡಿ

ಅಲಾಯಿ ತಗೀತಿರಿ

ಬೆಂಕಿ ಹಾಕತೀರಿ ಏನ ಕಾರಣಾ.

ಅಲಾಯಿ ಮುಚ್ಚತೀರಿ

ಟೊಂಗಿ ಹಚ್ಚತೀರಿ ಏನ ನಿಮ್ಮ ಕೂನಾ.

ಹೀಗೆ ಹಲವಾರು ಸವಾಲು ಪದಗಳು ಇಲ್ಲಿವೆ.ಈ ಹಾಡುಗಳನ್ನು ಮೊಹರಂ ಸಂದರ್ಭದಲ್ಲಿ ಎದುರಾಳಿ ತಂಡಗಳು ಸವಾಲು ಜವಾಬು ರೀತಿಯಲ್ಲಿ ಹೇಳುತ್ತಾ ನೆರೆದ ಜನರಲ್ಲಿ ಕೌತುಕ ಮೂಡಿಸುತ್ತಾರೆ.ಕೊನೆಯ ಭಾಗದಲ್ಲಿ ಸಂಗ್ರಹಿಸಿಕೊಟ್ಟಿರುವ ‘ರಿವಾಯತದಲ್ಲಿ ಹಿಂದೂ ಧರ್ಮದ ಜಾನಪದ’ ಭಾಗದಲ್ಲಿ ಅನೇಕ ಪೌರಾಣಿಕ ಮತ್ತು ಐತಿಹಾಸಿಕ ಸಂಗತಿಗಳನ್ನು ವಸ್ತುವಾಗುಳ್ಳ ಪದ್ಯಗಳಿವೆ.ಅಭಿಮನ್ಯು ಜನಿಸಿದ್ದು, ಪಾರ್ವತಿ ನೋಡ್ಯಾಳ ಅಜರ್ುನನ ಬೆನ್ನ, ಕೀಚಕ ಸಂಹಾರ,ಮೊದಲಾದ ಪೌರಾಣಿಕ ಸಂಗತಿಗಳು,ಬೆಳವಡಿ ಮಲ್ಲಮ್ಮನ ಕಾಳಗ, ಗಾಂಧೀಜಿ ಕತ್ತಿ ಇಲ್ಲದ ಕರ್ಬಲಾ ಮಾಡಿದ್ದು, ರಾಮದುರ್ಗ ದುರಂತ,ಸಾಂಗಲಿ ಊರಾಗ ಆದ ಕದನಾ ಮೊದಲಾದ ಐತಿಹಾಸಿಕ ಸಂಗತಿಗಳು ,ಜೊತೆಗೆ ಬಸವ ಪುರಾಣ, ಶಿವನೇ ಬಸವಾ ಬಸವಾ ಶಿವನೇ, ಏಕ ಅಲ್ಲಾ ಅನೇಕ ನಾಮಾ, ಕೊಲ್ಲಾವಕಿಂತ ಕಾಯಾಂವ ದೊಡ್ಡವ ಈ ಬಗೆಯ ವೈವಿಧ್ಯಮಯ ಗೀತೆಗಳಿವೆ.

ತಜಸ್ವಿ ಕಟ್ಟೀಮನಿಯವರು ರಿವಾಯತ ಪದಗಳನ್ನು ಕಥನ ರಿವಾಯತಗಳು, ನೀತಿ ರಿವಾಯತಗಳು, ಉರುಸಿನ ರಿವಾಯತಗಳು, ಪ್ರೇಮ ರಿವಾಯತಗಳು ಹಾಗು ಐತಿಹಾಸಿಕ ರಿವಾಯತಗಳು ಎಂದು ವಿಂಗಡಿಸಿ ‘ರಿವಾಯತ ಪದಗಳು’ ಸಂಕಲನದಲ್ಲಿ ಸಂಪಾದಿಸಿ ಕೊಟ್ಟಿದ್ದಾರೆ. ಈ ಬಗೆಯ ವಿಂಗಡನೆಯಲ್ಲಿ ಸಂಪಾದಕರು ಸಂಗ್ರಹಿಸಿಕೊಟ್ಟ ‘ತುಂಬಿ ತೋಳು, ನಡೆ ಸಣ್ಣ ಡೌಲು’ ಎಂಬ ಪ್ರೇಮ ರಿವಾಯತ ಪದ ಸೇರಿಕೊಂಡಿರುವರು ವಿಶಿಷ್ಟವಾಗಿದೆ. ಐತಿಹಾಸಿಕ ರಿವಾಯತ ಪದಗಳಲ್ಲಿ ‘ಕಡ್ಲಿಮಟ್ಟಿ ಸ್ಟéééೇಷನ್ ಕಥೆ’ ಗಮನಾರ್ಹವಾಗಿದೆ.

ರಿವಾಯತ ಪದಗಳು ಸರಳ ನಿರೂಪಣೆ ಮತ್ತು ಭಾಷಾ ಶೈಲಿಯಿಂದ ಗ್ರಾಮೀಣ ಸೊಗಡನ್ನು ತುಂಬಿಕೊಡುತ್ತವೆ. ಇವುಗಳ ಹಾಡು ಹೇಳುವ ಸಂದರ್ಭದಲ್ಲಿ ಏರಿಳತದಿಂದ ಹಾಡುವುದರಿಂದ ಈ ಹಾಡುಗಳಿಗೆ ಒಂದು ವಿಶಿಷ್ಟ ಲಯ ಪ್ರಾಪ್ತವಾಗಿದೆ. ಜೊತೆಗೆ ಹೆಜ್ಜೆ ಕುಣಿತ ಮಾಡುವ ಮೇಳಕ್ಕೆ ತಾಳ ಲಯಗಳ ಹೆಣಿಕೆ ಇದೆ. ಪದಗಳ ಆರಂಭದಲ್ಲಿ ಜನತೆಯನ್ನು ಆಕಷರ್ಿಸುವ ಮೋಡಿ ಇದೆ.

ಕುಂತಿರು ಜನಾ | ಮಾಡುವೆ ಶರಣಾ

ಕಲಕಲ ಮಾಡಬ್ಯಾಡ್ರಿ | ಕೇಳರಿ ಸುಮ್ಮನಾ

ಎಂದು ಹಾಡಿನಲ್ಲಿಯೇ ಜನಮುಖಿಯಾಗುವ ಈ ಹಾಡುಗಾರರು

ಸಭಾ ಕೂಡೀರಿ ಏನ ಚಂದಾ

ಅನುಭಾವ ತಗದೇವ ಒಂದಾ

ಸುರಿದಾಂಗ ಮಲ್ಲಿಗೆ ಚಂದಾ | ಕೇಳಿರಿ ಅಸಲಾ

ಎಂದು ಆರಂಭದಲ್ಲಿ ಹಾಡಿನ ಕುತೂಹಲವನ್ನು ಹಂಚುತ್ತಾರೆ. ಸಭಾ ಗೌರವವನ್ನು ಉದ್ದಕ್ಕೂ ಉಳಿಸಿಕೊಳ್ಳುವ ಈ ಹಾಡುಗಾರರು ‘ಸಭಾ ಕೂಡೈತಿ ಬಾಳದಮ್ಮಾ. ಶಾಸ್ತ್ರ ಒಡೆದ ಹಾಡೋ ತಮ್ಮಾ’ ಎಂದು ಎದುರಾಳಿ ತಂಡವನ್ನು ಎಚ್ಚರಿಸುತ್ತಾರೆ. ಹಾಡಿನ ಕೊನೆಗೆ ಊರ ದೇವರನ್ನು ಕವಿತೆ ಹುಟ್ಟಿಸಿದ ಕವಿಯನ್ನು ಹಾಡಿನ ಮೌಲ್ಯವನ್ನು ಈ ಹಾಡುಗಾರರು ದಾಖಲಿಸುತ್ತಾರೆ.

ಬಾಗಲಕೋಟೆ ಶಾರಾ | ರಾಜಕ ಮಿಗಿಲಾ

ರಾಜಕ ಮಿಗಿಲಾ | ಕೇಸುಪೀರ ನೆನದಾನಲ್ಲಾ

(ಸಂ. ಜಿ. ಬಿ. ಖಾಡೆ)

ಸಾಂಬ ಮಲ್ಲೇಶಾನ ಗುಡಿಯಮ್ಯಾಲಾ

ತುಂಬ ಬಂಗಾರ ಕಳಸ ಬೆಳಗೀತಲ್ವಾ

ತೊದಲಬಾಗಿ ರಾಮಣ್ಣ ಕತಿ ಮಾಡಿ ಹೇಳ್ಯಾನಲ್ಲಾ

(ಸಂ. ಜಿ. ಬಿ. ಖಾಡೆ)

ಹೆಸರಾದ ಮೆಣಿಸಿಗಿ ಮಸೂದಿಗೆ ನಾಜೂಕ

ಸುಶೀಲ ಶರಣರ ಪಾದಕ ಹಸುರ ಗಲೀಪ ಹಾಕ

(ಸಂ. ತೇಜಸ್ವಿ ಕಟ್ಟೀಮನಿ)

ರಿವಾಯತ ಪದಗಳ ಸಂಗ್ರಹ, ಸಂಪಾದನೆ ಮತ್ತು ಅಧ್ಯಯನ ಕೆಲಸಗಳು ವ್ಯಾಪಕವಾಗಿ, ನಡೆಯಬೇಕಾಗಿದೆ. ಆಚರಣೆಯ ಹಿಂದಿನ ವಾಸ್ತವಗಳು ಜನಮುಖಿಯಾಗಬೇಕಾಗಿದೆ. ಮೊಹರಂ ಹಬ್ಬದಲ್ಲಿ ಜಾತಿ ಭೇದವಿಲ್ಲದೆ ‘ಆಲಾವಿ’ ಸಂಭ್ರಮದಿಂದ ಕುಣಿಯುವ ಸಂಗತಿಯೇ ಮೂಲತಹ ವೈರುಧ್ಯದಿಂದ ಕೂಡಿದೆ.ದುಃಖಮೂಲ ಆಚರಣೆಯಾಗದೆ ಸಂಭ್ರಮ ಮೂಲವಾಗಿರುವುದು ತತ್ವ ಪದಕಾರರಿಗೆ ಅಭಾಸವಾಗಿ ಕಂಡಿರಬೇಕು. ಕುಣಿಯುವುದು ಮತ್ತು ದೇವರನ್ನು ‘ದಫನ್’ ಮಾಡುವುದನ್ನು ಗಮನಿಸಿದ ಅನುಭಾವಿಗಳು ಅದನ್ನು ಸಹಜವಾಗಿಯೇ ತಮ್ಮ ನೆಲೆಯಲ್ಲಿ ಅಥರ್ೈಸಿಕೊಂಡಿದ್ದಾರೆ. ವ್ಯಕ್ತಿ ತನ್ನನ್ನು ತಾನೇ ಸವಾಲು ಮಾಡಿಕೊಂಡು, ಒಳಗಿನ ಕೆಟ್ಟ ಗುಣಗಳನ್ನು ‘ದಫನ್’ ಮಾಡಿಕೊಳ್ಳಬೇಕು ಎಂಬ ಅರ್ಥದಲ್ಲಿ ವಿವೇಚಿಸಲಾಗಿರುವುದು ರಿವಾಯತ ಪದಗಳನ್ನು ಕಾಣುವ ಹೊಸ ದೃಷ್ಟಿಯಾಗಿದೆ.

ಮೊಹರಂ ಸಂದರ್ಭದಲ್ಲಿ ಹಾಡು ಹೇಳುವ ಆಚರಣೆ ಇಂದು ಬಹಳಷ್ಟು ಮರೆಯಾಗುತ್ತಿದೆ. ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಮುಖ್ಯವಾಗಿ ವಿಜಾಪುರ ಬಾಗಲಕೋಟೆ ಜಿಲ್ಲೆಗಳ ತೊದಲಬಾಗಿ, ಚಿಕ್ಕಲಕಿ, ನಾಗುನೂರ, ಕನ್ನೊಳ್ಳಿ, ಗದ್ಯಾಳ, ಗೋಠೆ, ತಿಕೋಟಾ, ಬಾಬಾನಗರ, ಬಿಜ್ಜರಗಿ, ಗುಣದಾಳ, ಅರ್ಜಣಗಿ, ಕೆರೂರ, ಹಾಲಿಗೇರಿ, ಗಲಗಲಿ, ಇಳಕಲ್ಲ, ಹುನಗುಂದ, ಪಟ್ಟದಕಲ್ಲು, ಚಿಕ್ಕ ಮುಚ್ಚಳಗುಡ್ಡ, ಹಲಸಂಗಿ, ಆಲಮೇಲ, ಸಾಲೋಟಗಿ, ಕವಲೂರ, ಮೊದಲಾದ ಕಡೆ ಈ ಹಾಡುಗಳು ಪ್ರಚಲಿತದಲ್ಲಿವೆ. ಒಟ್ಟಾರೆ ,ಹಿಂದೂ ಮುಸ್ಲಿಮರ ಬಾಂಧವ್ಯದ ಸಂಕೇತವಾಗಿ ಆಚರಿಸಲ್ಪಡುವ ಈ ಹಬ್ಬದಲ್ಲಿ ಇಸ್ಲಾಂ ಧರ್ಮಕ್ಕೆ ಸಂಬಂಧಪಟ್ಟ ಪದಗಳಲ್ಲದೆ ಮಹಾಭಾರತದ ಯುದ್ಧದ ಘಟನೆಗಳನ್ನು, ಭಾರತ ಸ್ವಾತಂತ್ರ್ಯ ಹೋರಾಟದ ಸಂದರ್ಭಗಳು ಇದರಲ್ಲಿ ಬರುತ್ತವೆ. ಇಂಥ ಅಪೂರ್ವ ಸಾಮಗ್ರಿಗಳನ್ನು ತುಂಬಿಕೊಂಡಿದ್ದರೂ ರಿವಾಯತ ಪದಗಳತ್ತ ಜಾನಪದಾಸಕ್ತರ ದೃಷ್ಟಿ ವಿಶೇಷವಾಗಿ ಹರಿದಿಲ್ಲ. ಈ ಕೊರತೆಯನ್ನು ತುಂಬುವ ಕೆಲಸ ನಡೆದಷ್ಟೂ ಕನ್ನಡ ಜನಪದ ಗೀತೆಗಳ ದಾಖಲೆ ಭಂಡಾರಕ್ಕೆ ಮತ್ತಷ್ಟು ಹೊನ್ನಿನ ಉಡಿ ತುಂಬಿದ ಧನ್ಯತೆ ಪ್ರಾಪ್ತವಾಗುತ್ತದೆ.


ಡಾ.ಪ್ರಕಾಶ ಜಿ.ಖಾಡೆ

Leave a Reply

Back To Top