ಅಲೆಮಾರಿ ಬದುಕು

ಇಲ್ಲಗಳ ನಡುವಿನ ಅಲೆಮಾರಿ ಬದುಕು

ಕೆ.ಶಿವು ಲಕ್ಕಣ್ಣವರ

ಸ್ವಾತಂತ್ರ ‌ಭಾರತದಲ್ಲಿ ಇಲ್ಲಗಳ ನಡುವೆಯೇ ಅಲೆಮಾರಿ ಬದುಕು ಬದುಕುತ್ತಿರುವ ಬಸವಳಿದ ಜನ..!

ವಾಸಿಸಲು ಮನೆ ಇಲ್ಲ, ವಿದ್ಯುತ್‌ ಇಲ್ಲ, ಕುಡಿಯಲು ನೀರಿಲ್ಲ, ಓಡಾಡಲು ರಸ್ತೆ ಇಲ್ಲ, ಇತರೆ ಸರ್ಕಾರದ ಸೌಲಭ್ಯಗಳು ಇಲ್ಲವೇ ಇಲ್ಲ. ಹೀಗೆ ಇಲ್ಲಗಳ ನಡುವೆಯೇ ಅಲೆಮಾರಿ ಕುಟುಂಬಗಳು ಬದುಕು ಸಾಗಿಸುತ್ತಿವೆ…

ಊರಿನ ಹೊರ ವಲಯದಲ್ಲಿ ಬದುಕು ಸಾಗಿಸುವ ನೂರಾರು ಅಲೆಮಾರಿ ಕುಟುಂಬಗಳು ಸೇರಿದಂತೆ ಇತರೆ ಕುಟುಂಬಗಳು ವಾಸಿಸುತ್ತವೆ. ಊರೂರು ಅಲೆಯುವ ಈ ಕುಟುಂಬಗಳು ಅಲೆಮಾರಿ ಜೀವನ‌ ನಡೆಸುತ್ತವೆ…

ಸುಡುಗಾಡಸಿದ್ಧರು, ಬುಡ್ಗಜಂಗಮ್ಮ, ಸಿಂದೋಳು, ಹಕ್ಕಿಪಿಕ್ಕಿ, ಸಿಳ್ಳೆಕ್ಯಾತ ಸೇರಿದಂತೆ ಕೊರಚರು ಸಮಾಜದ ಕುಟುಂಬಗಳು, ಹಾಗೂ ನಗರದಲ್ಲಿ ರಸ್ತೆ ಅಗಲಿಕರಣದ ವೇಳೆ ನಿರಾಶ್ರಿತರಾದ ದಲಿತರು, ಅಲ್ಪಸಂಖ್ಯಾತ ಸಮುದಾಯದ ಹೀಗೆಯೇ ನೂರಾರು ಕುಟುಂಬಗಳು ಈಗ ಎದುರಿಸುತ್ತಿರುವ ಸಮಸ್ಯೆಗಳು ಅವರಿಗಲ್ಲದೇ ಮತ್ಯಾರಿಗೂ ಅರ್ಥವಾಗುತ್ತಿಲ್ಲ…

ದೇವರೇ ಭೂಮಿಗಿಳಿದು ಬಂದು ಸರಿ ಮಾಡಿದರೂ ಸರಿಯಾಗದಷ್ಟು ಘೋರ ಸಮಸ್ಯೆಗಳನ್ನು ಈ ಅಲೆಮಾರಿಗಳು ಎದುರಿಸುತ್ತಿದ್ದಾರೆ. ಯಾವೂರಿಂದ
ಬಂದಿದ್ದಾರೋ ಇವರಿಗೂ ಗೊತ್ತಿಲ್ಲ. ಹೊಟ್ಟೆ ಪಾಡಿಗಾಗಿ ಅಲೆಯುತ್ತಾ, ಅಲೆಯುತ್ತಾ ನಗರ, ಹೀಗೆಯೇ ಗ್ರಾಮಗಳಿಗೆ ಬಂದು ನೆಲೆ ನಿಂತಿದ್ದೇವೆ ನೆಲೆ ನಿಂತಿದ್ದೇವೆ ಅನ್ನುವ ಈ ಕಡುಬಡವ ಬದುಕು ಬಾಳುತ್ತಿರುವ ಈ ಜನಾಂಗಗಳು ಬಂದಲ್ಲಿ, ಹೋದಲ್ಲಿ ಹರಕು-ಮುರುಕು ಟೆಂಟ್‌ ಹಾಕಿಕೊಂಡು ಭಯದ ವಾತಾವರಣದಲ್ಲಿ ವಾಸಿಸುತ್ತಿದ್ದೇವೆ ಎನ್ನುವುದೇ ಇವರ ಸಮುದಾಯದ ಹಿರಿಯರ‌ ಪರಿಪಾಟವಾಗಿದೆ…

ಹೀಗೆಯೇ ಬದುಕುವ ಈ ಕುಟುಂಬಗಳಿಗೆ ಅವರ ಹೆಸರಿನ ಪಟ್ಟಾ ಇದೆ. ಇನ್ನೂ ಕೆಲವು ಕುಟುಂಬಗಳಿಗೆ ವಾಸಿಸುವ ನೆಲದ ಪಟ್ಟಾ ಇಲ್ಲವೇ ಇಲ್ಲಾ. ನಗರಗಳಲ್ಲಿ ವಾಸಿಸುವ ಕೆಲವರಿಗೆ ನಗರಸಭೆಯಿಂದ ವಿವಿಧ ವಸತಿ ಯೋಜನೆಯಡಿ ಮನೆಗಳು ದೊರೆತಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ‌ವಾಸಿಸುವ ಜನರೂ ಸೇರಿದಂತೆ ಈ ಎಲ್ಲ ಸಮುದಾಯಕ್ಕೆ ಇನ್ನೂ ಸೂರಿನಭಾಗ್ಯ ಇಲ್ಲದಂತಾಗಿದೆ…

ಊರೂರು ಅಲೆಯುತ್ತ ಬಂದಿರುವ ಇವರ ಪೂರ್ವಜರಾಗಲಿ ಈಗಿರುವ ಸಮುದಾಯದ ಜನರಾಗಲಿ ಯಾರೂ ಶಾಲೆಗೆ ಹೋಗಿಲ್ಲ! ಎಲ್ಲರೂ ಅವಿದ್ಯಾವಂತರೇ. ಕೆಲವೇ ಆಶ್ರಯ ಕಾಲೋನಿಯಲ್ಲಿ ತಾತ್ಕಾಲಿವಾಗಿ ನಿರ್ಮಿಸಿರುವ ಸರ್ಕಾರಿ ಟೆಂಟ್‌ ಶಾಲೆಗೆ ಹೋಗುತ್ತಿದ್ದಾರೆ. ಇನ್ನೂ ಕೆಲವು ಮಕ್ಕಳು ಶಾಲೆಯಿಂದ ದೂರವೇ ಉಳಿದಿದ್ದಾರೆ…

310 ಕುಟುಂಬಗಳು: ಸುಡುಗಾಡಸಿದ್ಧರು, ಬುಡ್ಗಜಂಗಮ್ಮ, ಸಿಂದೋಳು, ಸಿಳ್ಳೆಕ್ಯಾತ ಸೇರಿದಂತೆ ಕೊರಚರು ಸಮಾಜದ 180 ಕುಟುಂಬಗಳು ಸೇರಿದಂತೆ ದಲಿತರು, ಅಲ್ಪಸಂಖ್ಯಾತ ಸಮುದಾಯದ ಸುಮಾರು 130 ಕುಟುಂಬಗಳು ಕುಟುಂಬಗಳು ಟೆಂಟ್‌ಗಳಲ್ಲಿ ವಾಸವಾಗಿವೆ.

ನಗರದ ಗುಡಿಗುಂಡಾರಗಳಲ್ಲಿ ಇರುವ ಈ ಕುಟುಂಬಗಳಿಗೆ 8 ವರ್ಷಗಳ ಹಿಂದೆ ಕೆಲವಂದಿಷ್ಟು ಅನ್ನುವುದಿಕ್ಕಿಂತ ಯಾವ ಕುಟುಂಬಗಳಿಗೂ ಪಟ್ಟಾ ದೊರೆತಿದೆ. ಇನ್ನು ಸುಮಾರು 214 ಕುಟುಂಬಗಳಿಗೆ ಪಟ್ಟಾ ದೊರೆತಿರುವುದು ಕನಸಿನ ಮಾತಾಗಿದೆ. ಪಟ್ಟಾ ದೊರೆತಿರುವ ಕೆಲ ಕುಟುಂಬಗಳಿಗೆ ಸ್ವಂತ ಮನೆ ಕಟ್ಟಿಕೊಳ್ಳುವ ಭಾಗ್ಯವೇ ಇದುವರೆಗೂ ದೊರೆತಿಲ್ಲ…

ಕೆಲವರಿಗೆ ಮನೆ ಬಂದರೂ ಪೂರ್ಣಗೊಳ್ಳದೇ ಅರ್ಧಕ್ಕೆ ನಿಂತಿವೆ ಆಶ್ರಯ ಮನೆಗಳು. ನಿಮಗೆ ಮನೆ ಬಂದಿವೆ ಎಂದು ಯಾರೋ ಹೇಳಿದ್ದರಿಂದ ಕೆಲವೇ ಈ ಜನರು ಮನೆ ಕಟ್ಟಲು ಬೇಕಾಗುವ ಹೆಂಚು, ಇಟ್ಟಿಗೆಗಳನ್ನು ತಂದಿಟ್ಟುಕೊಂಡಿದ್ದರು. ಐದು ವರ್ಷಗಳಾದರೂ ನಿವೇಶನ ಮಂಜೂರಾಗದೇ ಮನೆ ಕಟ್ಟುವ ಸಾಮಗ್ರಿಗಳು ಹಾಳಾಗಿ ಹೋದವು ಎನ್ನುತ್ತಾರೆ ಕುಟುಂಬದ ಹಿರಿಯರು…

ಇದೀಗ ವಾಸಿಸುವ ಜಾಗದಲ್ಲಿ ಹಾವು, ಚೇಳು ಓಡಾಡುತ್ತವೆ. ರಸ್ತೆ, ಚರಂಡಿಗಳಿಲ್ಲ. ಯಾರೂ ಇವರಿಗೆ ಸೌಲಭ್ಯ ಒದಗಿಸಲು ಮುಂದಾಗಿಲ್ಲ. ಮುಂದಾಗುವುದೂ ಇಲ್ಲ…

ಆಶ್ರಯ ಕಾಲೋನಿಯು ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕಗಳಲ್ಲಿ ವಾಸಿಸುವ ಈ ಜನರು ಹೊಸಪೇಟೆ ಹಾಗೂ ಬಳ್ಳಾರಿಗೆ ಸಂರ್ಪಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡುವ ಮೈನಿಂಗ್‌ ಲಾರಿಗಳು ಹಾಗೂ ಭಾರಿ ವಾಹನದಿಂದ ಕಾಲೋನಿಯಲ್ಲಿ ಸುಮಾರು ಕೆಲವಾರು ಜನರಿಗೆ ಆಸ್ತಮ ಕಾಯಿಲೆಯಿಂದ ಬಳಲಿದರೆ, ಕೆಲವರು ಮೃತಪಟ್ಟಿದ್ದಾರೆ…

ನಗರ ಸಭೆ ಅಥವಾ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಈ ಜನರು ಜನ ಪ್ರತಿನಿಧಿಗಳಿಗೆ ಹೇಳಿದರೆ ಯಾವುದೇ ಪ್ರಯೋಜನವಾಗಿಲ್ಲ. ಕೇವಲ ಚುನಾವಣೆಯಲ್ಲಿ ಭರವಸೆ ನೀಡಿ, ನಂತರ ನಮ್ಮ ಪಾಡು ಕೇಳುವರು ಇರಲ್ಲ ಎಂದು ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಈ ಜನ ಹಿಡಿಶಾಪ ಹಾಕುತ್ತಿದ್ದಾರೆ…

ಅಲೆಮಾರಿಗಳ ಸ್ವತಂತ್ರ ಭಾರತದ ಬದುಕು–

ಹೀಗೆಯೇ ಅಲೆಮಾರಿಗಳ ಜೀವನ ಸ್ವತಂತ್ರ ಭಾರತದ 76ಕ್ಕೂ ಹೆಚ್ಚು ವರ್ಷಗಳು ಕಳೆದರೂ, ದೇಶದಲ್ಲಿ ಇನ್ನೂ ವರೆಗೂ ಹಲವಾರು ಜಾತಿಗಳು ಆರ್ಥಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಮತ್ತು ಶ್ಯೆಕ್ಷಣಿಕವಾಗಿ ತೀರಾ ಹಿಂದುಳಿದಿವೆ! ಅಭಿವೃದ್ಧಿ ವಂಚಿತ ಸಮಾಜದವರಿಗೆ ಮೀಸಲಾತಿ ಏನ್ನುವುದು ಕೇವಲ ಮೂಗಿನ ಮೇಲೆ ತುಪ್ಪ ಸವರಿದಂತಾಗಿದೆ…

ಈ ಕಾಲಘಟ್ಟದಲ್ಲಿ ವಂಚಿತ ಸಮಾಜದ ಪರ ದ್ವನಿ ಎತ್ತುವವರನ್ನು ಗೇಲಿಮಾಡುವ ಜನರೇ ಹೆಚ್ಚು! ವಾಸ್ತವಂಶವೆಂದರೆ ನಮ್ಮ ದೇಶದಲ್ಲಿ ಇಂದಿಗೂ ಯಾರ ಲೆಕ್ಕಕ್ಕೂ ಸಿಗದ ನೂರಾರು ಅಲೆಮಾರಿ, ಬುಡಕಟ್ಟು, ಪಶುಪಾಲಕ ಈ ಸಮುದಾಯಗಳಿವೆ. ಅವರ ಪಾಲಿಗೆ ನ್ಯಾಯ, ಸರ್ಕಾರಿ ಸೌಲಭ್ಯಗಳು ಮರೀಚಿಕೆಯಾಗಿಯೇ ಉಳಿದಿವೆ…

ಜಗತ್ತಿನಾದ್ಯಂತ 90 ದೇಶಗಳಲ್ಲಿ 37 ಕೋಟಿ ಮೂಲನಿವಾಸಿ, ಅಲೆಮಾರಿಗಳು ವಾಸಿಸುತ್ತಿದ್ದಾರೆ. ಸುಮಾರು 7,000 ಭಾಷೆಗಳಲ್ಲಿ ಮಾತನಾಡುವ ಇವರು, 5,000 ವಿಭಿನ್ನ, ಅನನ್ಯ ಸಂಸ್ಕೃತಿಗಳನ್ನು ಪ್ರತಿನಿಧಿಸುತ್ತಾರೆ. ನಮ್ಮರಾಜ್ಯದಲ್ಲಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ 51, ಪರಿಶಿಷ್ಟ ಪಂಗಡದಲ್ಲಿ 23, ಒಬಿಸಿ ಪಟ್ಟಿಯಲ್ಲಿ 46 ಅಲೆಮಾರಿ ಸಮುದಾಯಗಳಿವೆ…
ಇದರಲ್ಲಿ ಸೂಕ್ಷ್ಮ ಜಾತಿಗಳು, ಅತಿಸೂಕ್ಷ್ಮ ಮೂಲ ನಿವಾಸಿಗಳು ಹಾಗೂ ಅಸ್ಮಿತೆಯೇ ಇಲ್ಲದ ಈ ಜನ ಸಮುದಾಯಗಳೂ ಸಹ ಸೇರಿವೆ…

ಅಲೆಮಾರಿಗಳ ಶೋಚನಿಯ ಸ್ಥಿತಿ ನೋಡಿದಾಗ ವೈವಿಧ್ಯಮಯ ಭಾರತದ ಶ್ರೀಮಂತ ಸಂಸ್ಕೃತಿಯ ಬೇರುಗಳು ಬುಡಸಮೇತ ಕಳಚಿ ಹೋಗುತ್ತಿವೆಯೇ ಎನಿಸುತ್ತದೆ. ಗೋಂಧಳಿ, ಬುಡಬುಡಕಿ, ಗೌಳಿ, ಕಾಡುಗೊಲ್ಲ, ಶಿಕ್ಕಲಿಗಾರನಂತಹ ಅಲೆಮಾರಿಗಳು, ಕೊರಗ, ಜೇನುಕುರುಬ, ಆದಿಮ ಬುಡಕಟ್ಟುಗಳ ದುಸ್ತರ ಬದುಕೇ ಇದಕ್ಕೆ ಸಾಕ್ಷಿಯಾಗಿದೆ…

ಮಾಂಗ್ ಗಾರುಡಿ, ಫಾರ್ದಿ, ಚಪ್ಪರ್‌ಬಂದ್, ಗಂಟಿಚೋರ್, ಡುಂಗ್ರಿ ಗರಾಸಿಯಾ, ಹಕ್ಕಿಪಿಕ್ಕಿ ಮುಂತಾದ ಬುಡಕಟ್ಟುಗಳು ಚಿಂತಾಜನಕ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿವೆ. ಅಲೆಮಾರಿಗಳ ಜಗತ್ತಿನ ಒಳಹೊಕ್ಕು ನೋಡದ ಹೊರತು ಈ ಸಮುದಾಯದವರ ಬವಣೆ ಅರ್ಥವಾಗದು…

ಪ್ರಾದೇಶಿಕ ಮಿತಿ ಹೊಂದಿರುವ ಕಮ್ಮಾರ, ಕಣಿಯನ್, ಸಿದ್ಧಿಯಂಥ ಪರಿಶಿಷ್ಟ ಪಂಗಡಗಳು ಅಭದ್ರತೆಯ ಬದುಕು ಸವೆಸುತ್ತಿವೆ. ಉತ್ತರ ಕನ್ನಡ ಮತ್ತು ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ವಾಸವಿರುವ ಈ ಸಿದ್ಧಿಗಳು ಎಸ್‍ಟಿ ಪಟ್ಟಿಯಲ್ಲಿದ್ದಾರೆ. ಪಕ್ಕದ ಧಾರವಾಡ, ಬೆಳಗಾವಿಯಲ್ಲಿನ ಸಿದ್ಧಿ ಕುಟುಂಬಗಳಿಗೆ ಎಸ್‍ಟಿ ಸೌಲಭ್ಯ ಸಿಗುವುದಿಲ್ಲ. ಪ್ರತ್ಯೇಕ ಜಾತಿ ಅಸ್ಮಿತೆ ಹಾಗೂ ಸಂವಿಧಾನಬದ್ಧವಾದ ವರ್ಗೀಕೃತ ಸ್ಥಾನಮಾನ ಪಡೆಯಲಾಗದ ಧನಗರ ಗೌಳಿ, ಶಿಕ್ಕಲಿಗಾರ, ಕಾಡುಗೊಲ್ಲದಂತಹ ಅತಂತ್ರ ಸಮುದಾಯಗಳೂ ಇವೆ…

ಇನ್ನೂ ಗೋಂಧಳಿ, ಜೋಷಿ, ಬುಡಬುಡಕಿ ಮತ್ತು ವಾಸುದೇವ ಜಾತಿಗಳ ಜನರ ಸಮಸ್ಯೆ ಕೇಳತೀರದು! ಮೂಲತಃ ಶಿವಾಜಿ ಮಹಾರಾಜರ ಆಸ್ಥಾನದಲ್ಲಿ ಗುಪ್ತಚರರಾಗಿ ಶ್ರದ್ಧೆಯಿಂದ ಕಾರ್ಯ ನಿರ್ವಹಿಸುತ್ತಿದ್ದ ಈ ಸಮಾಜ, ವ್ಯೆರಿ ರಾಜರೂಗಳ ರಾಜ್ಯದಲ್ಲಿ ನಡೆಯುವ ಪ್ರತಿಯೊಂದು ಮಾಹಿತಿಯನ್ನು ಕಲೆ ಹಾಕಿ ನೇರವಾಗಿ ಶಿವಾಜಿ ಮಹಾರಾಜರಿಗೆ ಹೇಳುತ್ತಿದ್ದರು. ವ್ಯೆರಿ ರಾಜ್ಯದ ಸ್ಯೆನಿಕರಿಗೆ ಸಂಶಯ ಬರಬಾರದು ಎನ್ನುವ ಅಲೋಚನೆಯಿಂದ ದೇವರ ಹಾಡುಗಳನ್ನು ಹಾಡುತ್ತ ಅಲೆಯುತ್ತಿದ್ದರು…

ಶಿವಾಜಿ ಮಹಾರಾಜರ ಸಂಸ್ಥಾನದ ಅವನತಿ ನಂತರ ಈ ಸಮಾಜದ ಜನರು ಅನಾಥರಾದರು. ಆಗಲೇ ತಮ್ಮ ಮೂಲ ಸ್ಥಾನ ಬಿಟ್ಟು ಬೇರೆ ಬೇರೆ ರಾಜ್ಯಗಳಲ್ಲಿ ಗುಡಚರ್ಯೆ ಮಾಡುತ್ತಿದ್ದವರು, ಮರಾಠಾ ಸಾಮ್ರಾಜ್ಯ ಅವನತಿ ನಂತರ ಅಲೆಮಾರಿಗಳಾಗಿ ತಮ್ಮ ಹೊಟ್ಟೆ ಪಾಡಿಗಾಗಿ ದೇವಿಯ ಆರಾಧನೆ ಮಾಡಿ ಗೋಂಧಳ ಹಾಕುವುದು, ಜ್ಯೋತಿಷ್ಯ ವೃತ್ತಿ, ಪಾತ್ರೆ ವ್ಯಾಪಾರ, ಮತ್ತು ಕೌದಿ ಹೋಲೇವುದನ್ನು ತಮ್ಮ ಕಾಯಕನ್ನಾಗಿಸಿಕೊಂಡರು…

ಮಹಾರಾಷ್ರ, ಕರ್ನಾಟಕ ಮತ್ತು ಗೋವಾ ರಾಜ್ಯಗಳಲ್ಲಿ ಹೆಚ್ಚಾಗಿ ಕಂಡು ಬರುವ ಈ ಸಮುದಾಯಕ್ಕೆ ಕರ್ನಾಟಕದಲ್ಲಿ ಪ್ರವರ್ಗ -1 ರ ಮೀಸಲಾತಿಯನ್ನು ರಾಜ್ಯ ಸರ್ಕಾರ ಕಲ್ಪಿಸಿದೆ. ನಿಜ ಅರ್ಥದಲ್ಲಿ ಅಲೆಮಾರಿಯಾದ ಈ ಸಮುದಾಯವನ್ನು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಅನೇಕ ಆಯೋಗಗಳು ಸರ್ಕಾರಕ್ಕೆ ತಮ್ಮ ವರದಿಗಳನ್ನು ಸಲ್ಲಿಸಿದ್ದಾರಾದರೂ ಇನ್ನೂ ಪ್ರಯೋಜನವಾಗಿಲ್ಲ…

ಪಶುಪಾಲನೆ ಕಸುಬಿನ ಧನಗರ ಗೌಳಿ ಸಮುದಾಯವು ರಾಜ್ಯದಲ್ಲಿ ಗೌಳಿ, ಹಿಂದೂ ಧನಗರ, ಧನಕರ ಗೌಳಿ, ಕಾಡು ಗೌಳಿ, ಧನಗರ ಮರಾಠಿ, ಕೃಷ್ಣ ಮರಾಠಿ, ಕಚ್ಚೆ ಗೌಳಿ ಮುಂತಾದ ಹಲವು ಹೆಸರುಗಳಲ್ಲಿ ಜಾತಿ ಪ್ರಮಾಣ ಪತ್ರಗಳನ್ನು ಪಡೆಯುತ್ತಿವೆ. ಅಲ್ಲದೇ ಪ್ರವರ್ಗ 1, ಪ್ರವರ್ಗ 2, ಪ್ರವರ್ಗ 3ಬಿ ಇತ್ಯಾದಿ ಕೆಟಗರಿಗಳಲ್ಲಿ ಗುರುತಿಸಿಕೊಂಡಿವೆ. ಈ ವರ್ಗಕ್ಕೆ ಸಂವಿಧಾನಬದ್ಧವಾದ ವರ್ಗಿಕೃತ ಸ್ಥಾನಮಾನವು ಇನ್ನೂ ಇಲ್ಲದಂತಾಗಿದೆ…

ಶಿಕ್ಕಲಿಗಾರ ಕೂಡ ಶಿಕ್ಕಲಿಗ, ಶಿಕ್ಲಿಗ, ಶಿಕ್ಕಲಿಗರ, ಚಿಕ್ಕಲಿಗೆರ್ ಹೆಸರುಗಳೊಂದಿಗೆ ಅಸ್ಮಿತೆಗಾಗಿ ತಡಕಾಡುತ್ತಿವೆ. ಹೀಗೆ ಹಲವಾರು ಅಲೆಮಾರಿಗಳನ್ನು ಹತ್ತಾರು ಹೆಸರುಗಳಲ್ಲಿ ಗುರುತಿಸುವುದರಿಂದ ಜಾತಿ ಪ್ರಮಾಣಪತ್ರ ಮತ್ತು ಸರ್ಕಾರದ ಸೌಲಭ್ಯಗಳನ್ನು ಪಡೆಯುವುದೇ ಸವಾಲಾಗಿದೆ. ಇಂಥ ಸಮುದಾಯಗಳಿಗೆ ಪ್ರಬಲ ಜಾತಿಯವರೊಂದಿಗೆ ಹೋರಾಡುವ ಶಕ್ತಿಯೂ ಇಲ್ಲ. ವೋಟ್ ಬ್ಯಾಂಕ್ ಲೆಕ್ಕಾಚಾರ ಮಾಡುವ ರಾಜಕಾರಣಿಗಳಿಗೆ ಇಂಥ ಸಣ್ಣಸಮುದಾಯಗಳು ಮುಖ್ಯ ಎನಿಸುವೂದು ಇಲ್ಲ…

ಹೀಗಿರುವಾಗ ಈ ಡಿಜಿಟಲ್ ಕಾಲಘಟ್ಟದಲ್ಲಿ ಭಾರತವು ನಿಜವಾಗಿಯೂ ಪ್ರಗತಿ ಕಂಡಿವೆಯೇ ಈ‌ ಜನ ಸಮುದಾಯ ಎಂಬ ಪ್ರಶ್ನೆ ಕಾಡದಿರದು…

ಪ್ರಕೃತಿ ಸಹಜ ಜೀವನ ನಡೆಸುವ ಅಲೆಮಾರಿಗಳು ಮೂಲತಃ ಕಾಡಿನ ಮಕ್ಕಳು. ಆಧುನಿಕತೆಯ ಕೆನ್ನಾಲಗೆ, ಜಾಗತೀಕರಣದ ಹೊಟ್ಟೆಬಾಕತನದಲ್ಲೂ ದೇಶೀಯ ಗಟ್ಟಿತನ, ತಮ್ಮತನ ಸಾರುವ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಉಳಿಸಿಕೊಂಡಿದ್ದಾರೆ. ಪ್ರಾದೇಶಿಕ ಅಸ್ಮಿತೆಗೆಕೊಡಲಿ ಪೆಟ್ಟು ಬಿದ್ದರೆ ಅಲೆಮಾರಿಗಳಿಗೆ ಉಳಿಗಾಲವಿಲ್ಲ. ದೇಶದ ಉದ್ದಗಲಕ್ಕೂ ತಿರುಗಾಡಿ ಭಾರತದ ನಾಡಿಮಿಡಿತ ಅರಿತಿದ್ದ ಗಾಂಧೀಜಿ ಇವೆಲ್ಲವನ್ನೂ ಗಮನಿಸಿಯೇ ‘ಗ್ರಾಮ ಸ್ವರಾಜ್ಯ’ದ ಚಿಂತನೆ ಬಿತ್ತಿರಬಹುದು…

ಸೆಟ್ಲಮೆಂಟ್ (ವಸಾಹತು) ಕುರಿತು ಹೇಳದಿದ್ದರೆ ಕರ್ನಾಟಕದ ಅಲೆಮಾರಿಗಳ ಚರಿತ್ರೆ ಅಪೂರ್ಣವಾಗುದು. ಇಲ್ಲಿ ಪ್ರತಿನಿತ್ಯ ಬದುಕಿ ಸಾಯುತ್ತಿರುವ ನೂರಾರು, ಸಾವಿರಾರು ಜೀವಗಳ ಬದುಕು-ಬವಣೆಗಳ ಬಂಧನವಿದೆ. ಸೆಟ್ಲಮೆಂಟ್ ಎಂಬುದು ಬ್ರಿಟಿಷರ ಒಡೆದು ಆಳುವ ನೀತಿಯ ಫಲ. ಈ ಸಮುದಾಯದವರನ್ನು ಸಮಾಜಘಾತುಕರು, ಕಳ್ಳರು, ಅಪರಾಧಿಗಳು, ದೇಶದ್ರೋಹಿಗಳು ಎಂಬ ಹಣೆಪಟ್ಟಿ ಕಟ್ಟಿ ತಂತಿಬೇಲಿಯೊಳಗೆ ಒಂದು ವ್ಯವಸ್ಥೆ ಸೃಷ್ಟಿಸಿ ಅದರೊಳಗೆ ಬ್ರಿಟಿಷರು ಬಂಧಿಸಿದರು. 1871ರಲ್ಲಿ ಹುಟ್ಟುಪಡೆದ ‘ಕ್ರಿಮಿನಲ್ ಟ್ರೈಬ್ಸ್’ ಚರಿತ್ರೆ, ಸ್ವತಂತ್ರ ಭಾರತದಲ್ಲಿ ಇಂದಿಗೂ ಪ್ರಶ್ನೆಯಾಗಿಯೇ ಉಳಿದಿದೆ!
ಬ್ರಿಟಿಷರು ಕೊಟ್ಟ ‘ಕ್ರಿಮಿನಲ್ಸ್’ ಎಂಬ ಲೇಬಲ್‍ನಿಂದಾಗಿ ಈ ಸಮುದಾಯದವರು ಇಂದಿಗೂ ನಮ್ಮ ನಡುವೆ ಕಳಂಕಿತರಾಗಿಯೇ ಬದುಕುತ್ತಿದ್ದಾರೆ…

ಕರ್ನಾಟಕದಲ್ಲಿರುವ ಸೆಟ್ಲಮೆಂಟ್‍ಗಳಲ್ಲಿ ಹುಬ್ಬಳ್ಳಿ ಸೆಟ್ಲಮೆಂಟ್ ದೊಡ್ಡದು. ಈ ಸೆಟ್ಲಮೆಂಟ್‌ನಲ್ಲಿ ಕೊರಮ, ಗಂಟಿಚೋರ್, ಭೋವಿ, ಹರಣ್ ಪಾದ್ರಿ, ಕಂಜರಭಾಟ್‌, ಚಪ್ಪರಬಂದ್ ಸಮುದಾಯದವರು ನೆಲೆಸಿದ್ದಾರೆ…

ಗದಗ-ಬೆಟಗೇರಿಯ ಸೆಟ್ಲಮೆಂಟ್, ಈ ಸೆಟ್ಲಮೆಂಟ್‌ನಲ್ಲಿ ಕೊರಮ, ,ಚಪ್ಪರಬಂದ್, ಕಂಜರಭಾಟ್, ಪಾರ್ಧಿ ಸಮುದಾಯದವರು ಇದ್ದಾರೆ…

ವಿಜಯಪುರದ ಸೆಟ್ಲಮೆಂಟ್‌ನಲ್ಲಿ ಹರಣಶಿಕಾರಿ, ಗಂಟಿಚೋರ, ಚಪ್ಪರಬಂದ್‌ ಸಮುದಾಯಗಳು ಕಂಡುಬರುತ್ತವೆ. ಕಂಜರಭಾಟ್‌, ಕೊರಮ ಮತ್ತು ಮಾಂಗ್ಗಾರುಡಿಗಳು ಮೊದಲಿಗೆ ಇಲ್ಲಿದ್ದು, ತರುವಾಯ ಬೇರೆ ಕಡೆ ಹೋಗಿ ನೆಲೆಸಿದರು…

ಬಾಗಲಕೋಟೆಯ ಸೆಟ್ಲಮೆಂಟ್‌ನಲ್ಲಿ ಕೊರಮ, ಗಂಟಿಚೋರ್, ಚಪ್ಪರಬಂದ್, ಪಾರ್ಧಿಗಳು ಕಂಡುಬರುತ್ತಾರೆ…

ಗೋಕಾಕ್ ಫಾಲ್ಸ್ ಸೆಟ್ಲಮೆಂಟ್‌ನಲ್ಲಿ ಕೊರಮ ಮತ್ತು ಗಂಟಿಚೋರ್ ಸಮುದಾಯಗಳಿವೆ…

ದಾಂಡೇಲಿಯಲ್ಲಿ ಗಂಟಿಚೋರ್ ಸಮುದಾಯವಿದೆ. ಹಿಂದೆ ಕಂಜರಭಾಟ್ ಇದ್ದಿತ್ತೆನ್ನಲಾದರೂ, ಅವರು ಇಂದು ಸೆಟ್ಲಮೆಂಟ್ ಹೊರಗೆ ಹಳೆ ದಾಂಡೇಲಿಯಲ್ಲಿ ಕಂಜರ್ ಭಾಟ್ ಕಾಲೊನಿಯಲ್ಲಿ ನೆಲೆ ನಿಂತಿದ್ದಾರೆ…

2021ರ ವೇಳೆಗೆ ಎಲ್ಲರಿಗೂ ಸ್ವಂತ ಸೂರು ಕಲ್ಪಿಸುವುದು ಸರ್ಕಾರಗಳ ಗುರಿ. ಈ ಅಲೆಮಾರಿಗಳು ಸರ್ಕಾರದ ಲೆಕ್ಕದಲ್ಲಿದ್ದಾರೆಯೇ? ಇವರ ಬಳಿ ಯಾವುದೇ ದಾಖಲಾತಿಗಳಿಲ್ಲ, ಸ್ವಂತ ನೆಲೆಯಿಲ್ಲ, ಅಧಿಕೃತ ಪಟ್ಟಿಯಲ್ಲಿ ಸ್ಥಾನವಿಲ್ಲ, ರಾಜ್ಯದಲ್ಲಿ ನೆಲೆಸಿದ್ದಾರೆ ಎಂಬುದಕ್ಕೆ ಸಾಕ್ಷ್ಯಾಧಾರಗಳಿಲ್ಲ. ಹೀಗೆಯೇ ‘ಇಲ್ಲ’ಗಳ ನಡುವೆಯೇ ಇವರ ಬಾಳು ಕರಗುತ್ತಿದೆ. ಹೀಗಿರುವಾಗ ಎಲ್ಲಿಯ ಮನೆ? ಎಲ್ಲಿಯ ಸೌಕರ್ಯ? ಎಲ್ಲಿದೆ ಆರೋಗ್ಯ ಸೌಲಭ್ಯ? ಎಲ್ಲಿದೆ ಶಿಕ್ಷಣ…?!

ಒಬ್ಬ ಅಲೆಮಾರಿ ಹಿರಿಯಜ್ಜ ತಮ್ಮ ಅನುಭವ ಹಂಚಿಕೊಂಡಂತೆ, ‘ಬಾಕಿ ಉಳಿದಿರುವುದೊಂದೇ, ಸ್ವಂತಂತ್ರ ಭಾರತದಲ್ಲಿ ಸ್ವತಂತ್ರ ಅಸ್ತಿತ್ವ ಸಿಗದೆ, ಕರೆಸಿಕೊಳ್ಳಲು ಹೆಸರಿಲ್ಲದೆ, ಉಳಿಯಲು ಸೂರಿಲ್ಲದೆ ಮಣ್ಣಾಗಿ ಹೋಗುವುದು’. ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’, ‘ನವ ಕರ್ನಾಟಕ ನಿರ್ಮಾಣ’ದ ಕನಸುಗಳಲ್ಲಿ ಅಲೆಮಾರಿಗಳು ಲೆಕ್ಕಕ್ಕೆ ಸಿಕ್ಕರೆ ಭಾರತ ಇನ್ನೂ ಉಜ್ವಲವಾಗಿ ಪ್ರಕಾಶಿಸುವುದಲ್ಲವೇ..?!

ಹೀಗಿದೆ ನೋಡಿ ಅಲೆಮಾರಿಗಳ ಬಸವಳಿದ ಬದುಕು-ಬವಣೆ…

***********

Leave a Reply

Back To Top