ಪ್ರಸ್ತುತ

Image result for photos of jnu

ಕ್ಯಾಂಪಸ್ ಕೋಲಾಹಲ……

Image result for photos of jnu

ಗಣೇಶ್ ಭಟ್ ಶಿರಸಿ

ದೆಹಲಿಯ ಜವಾಹರಲಾಲ ನೆಹರೂ ವಿಶ್ವವಿದ್ಯಾಲಯ (ಜೆಎನ್‍ಯು) ಪುನಃ ಸುದ್ಧಿಯಲ್ಲಿದೆ. ವಿವಿಧ ಶುಲ್ಕಗಳ ಏರಿಕೆಯ ವಿರುದ್ಧ ಪ್ರತಿಭಟನೆ ನಡೆಸಿ, ಕೆಲವು ವಾರಗಳ ಹಿಂದೆ ಮಾಧ್ಯಮಗಳಿಗೆ ಆಹಾರವಾಗಿದ್ದ ಜೆಎನ್‍ಯುನಲ್ಲಿ ಮುಸುಕುಧಾರಿಗಳು ಪ್ರವೇಶಿಸಿ ವಿದ್ಯಾರ್ಥಿಗಳಿಗೆ ಹೊಡೆದು ಬಡಿದಿದ್ದಾರೆಂಬ ವಿಷಯ ಬಿತ್ತರವಾಗುತ್ತಿದೆ. ಕ್ಯಾಂಪಸ್‍ನಲ್ಲೇ ವಿದ್ಯಾರ್ಥಿಗಳಿಗೆ ರಕ್ಷಣೆ ಇಲ್ಲವೆಂಬ ವಿಷಯ ದೇಶದಾದ್ಯಂತ ಹಲವು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳನ್ನು ಕೆರಳಿಸಿ, ಪ್ರತಿಭಟನೆ ನಡೆಸಲು ಕಾರಣವಾಗಿದೆ.


ನಾಲ್ಕಾರು ದಶಕಗಳ ಹಿಂದೆ ವಿಶ್ವವಿದ್ಯಾಲಯಗಳಲ್ಲಿ ಸೈದ್ಧಾಂತಿಕ ಚರ್ಚೆಗಳು ಇರುತ್ತಿದ್ದವು. ಅಭಿಪ್ರಾಯ ಭೇದಗಳು ಇದ್ದವು. ಆದರೆ ಇಂದಿನ ರೀತಿಯ ಹೊಡೆದಾಟ, ಬಡಿದಾ ಟಗಳು ಇರುತ್ತಿರಲಿಲ್ಲ. ಅಂದು ಸೈದ್ಧಾಂತಿಕ ನಿಲುವುಗಳನ್ನು ತಳೆಯುವ ವೈಯಕ್ತಿಕ ಸ್ವಾತಂತ್ರ್ಯವನ್ನು ಯಾರೂ ಆಕ್ಷೇಪಾರ್ಹವೆಂದು ಪರಿಗಣಿಸುತ್ತಿರಲಿಲ್ಲ. ವಿದ್ಯಾರ್ಥಿಗಳ ನಡುವಿನ ವೈಯಕ್ತಿಕ ಸಂಬಂಧಕ್ಕೆ ಸೈದ್ಧಾಂತಿಕ ಅಭಿಪ್ರಾಯ ಭೇದಗಳು ತೊಡಕುಂಟು ಮಾಡುತ್ತಿರಲಿಲ್ಲ. ಯಾಕೆಂದರೆ ಇಂದಿನಂತೆ ರಾಜಕೀಯ ಪಕ್ಷಗಳು ಕ್ಯಾಂಪಸ್‍ನಲ್ಲಿ ಮೂಗು ತೂರಿಸಿರಲಿಲ್ಲ.


ನನ್ನದೇ ಅನುಭವದಿಂದ ಈ ವಿಷಯವನ್ನು ಇಷ್ಟೊಂದು ದೃಢವಾಗಿ ಹೇಳಲು ಸಾಧ್ಯವಾಗುತ್ತಿದೆ. ಎಪ್ಪತ್ತರ ದಶಕದ ಪ್ರಾರಂಭದಲ್ಲಿ ನಾನು ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದಾಗ ನಮ್ಮ ಕ್ಯಾಂಪಸ್‍ನಲ್ಲಿ ಪ್ರಮುಖವಾಗಿ ಮೂರು ಆರ್ಥಿಕ ಸಿದ್ಧಾಂತಗಳ ಕುರಿತು ಚರ್ಚೆ ನಡೆಯುತ್ತಿತ್ತು. ಬಂಡವಾಳವಾದವೇ ಶ್ರೇಷ್ಠ ಎಂದು ನಂಬಿದವರು, ಕಮ್ಯುನಿಸಂ ನಿಂದಲೇ ಸರ್ವ ಸಮಸ್ಯೆಗಳಿಗೂ ಪರಿಹಾರವೆಂದು ನಂಬಿದವರು ಹಾಗೂ ಇವೆರಡನ್ನೂ ಟೀಕಿಸುತ್ತಾ ವಿಕೇಂದ್ರಿಕೃತ ಸಹಕಾರಿ ಅರ್ಥ ನೀತಿಯಿಂದಲೇ ಅಭಿವೃದ್ಧಿಯೆಂದು ವಾದಿಸುವ ಪ್ರಉತವಾದಿಗಳು. ಪ್ರಗತಿಶೀಲ ಉಪಯೋಗ ತತ್ವ (ಪ್ರಉತ)ದನ್ವಯ ಬಂಡವಾಳವಾದ ಮತ್ತು ಕಮ್ಯುನಿಸಂಗಳೆರಡೂ ಒಂದೇ ನಾಣ್ಯದ ಎರಡು ಮುಖಗಳು. ಇವೆರಡೂ ಭೌತವಾದಿ ಸಿದ್ಧಾಂತಗಳು. ಮಾನವನ ಅಸ್ತಿತ್ವದ ಸಮಗ್ರತೆಯನ್ನು ಪರಿಗಣಿಸದ ಕೇಂದ್ರೀಕೃತ ಅರ್ಥವ್ಯವಸ್ಥೆಯ ಚಿಂತನೆಗಳು.
ಕಮ್ಯುನಿಸಂ ಈ ಜಗತ್ತಿನಿಂದಲೇ ಮಾಯವಾಗಲಿದೆ (ಇದಾಗಲೇ ನಿಜವಾಗಿದೆ) ಬಂಡವಾಳವಾದವು ಪಟಾಕಿಯ ರೀತಿಯಲ್ಲಿ ಸಿಡಿದು ನಿಶ್ಯೇಷವಾಗಲಿದೆ (ನಿಜವಾಗುವ ದಾರಿಯಲ್ಲಿದೆ) ಎಂದು ಪ್ರಉತವಾದಿಗಳು ವಾದಿಸುತ್ತಿದ್ದರು. ಪ್ರಉತ ಎಂಬುದು ಆನಂದ ಮಾರ್ಗ ಸಿದ್ಧಾಂತದ ಒಂದು ಭಾಗ ಮಾತ್ರ. ಆನಂದ ಮಾರ್ಗದ ಕುರಿತು ಹಲವು ವಿಧದ ಅಪಪ್ರಚಾರಗಳು ತಾರಕಕ್ಕೇರಿದ ಸಂದರ್ಭವದು.


ಕಾಲೇಜಿನ ಚರ್ಚಾಗೋಷ್ಠಿಗಳಲ್ಲಿ, ಹಾಸ್ಟೆಲ್‍ಗಳಲ್ಲಿ ನಡೆಯುತ್ತಿದ್ದ ಚರ್ಚೆಯ ಸಂದರ್ಭಗಳಲ್ಲಿ ಮೂರು ಸಿದ್ಧಾಂತಗಳ ಅನುಯಾಯಿಗಳು ಒಟ್ಟಿಗೇ ಕುಳಿತು ತಮ್ಮ ತಮ್ಮ ವಿಚಾರಧಾರೆಯನ್ನು ಪ್ರಕಟಿಸುತ್ತಿದ್ದರು. ಆಗಿನ್ನೂ ಪ್ರಾರಂಭವಾಗಿದ್ದ, ಕಮ್ಯುನಿಸಂನ ಉಗ್ರರೂಪವಾದ ನಕ್ಸಲ್‍ವಾದದ ಕುರಿತೂ ಬಹಿರಂಗ ಚರ್ಚೆಯಾಗುತ್ತಿತ್ತು. ಆದರೆ ಈ ಸೈದ್ಧಾಂತಿಕ ಒಲವುಗಳು, ವಿದ್ಯಾರ್ಥಿಗಳ ಅಧ್ಯಯನ ಅಥವಾ ವೈಯಕ್ತಿಕ ಸಂಬಂಧಗಳಿಗೆ ತೊಡಕಾಗಿದ್ದನ್ನು ನಾನು ಕಾಣಲಿಲ್ಲ.


ಪ್ರಉತದ ಅನುಯಾಯಿಯಾಗಿದ್ದ ನನ್ನ ಸ್ನೇಹಿತರ ಬಳಗದಲ್ಲಿ ಕಟ್ಟಾ ಎಡಪಂಥೀಯರೂ ಇದ್ದರು. ಬಲಪಂಥೀಯರೂ ಇದ್ದರು. ಗುಂಪು ಅಧ್ಯಯನ ನಡೆಸುವಾಗ, ಗ್ರಂಥಾಲಯ ಬಳಸುವಾಗ ಪುಸ್ತಕ, ನೋಟ್ಸ್‍ಗಳನ್ನು ವಿನಿಮಯ ಮಾಡಿಕೊಳ್ಳುವಂತಹ ಯಾವ ಸಂದರ್ಭದಲ್ಲೂ ಈ ಸೈದ್ಧಾಂತಿಕ ಅಭಿಪ್ರಾಯ ಬೇಧ ನಮ್ಮನ್ನು ಕಾಡಲಿಲ್ಲ. ಅಂದಿನ ದಿನಗಳಲ್ಲಿ ಲಿಖಿತ ರೂಪದಲ್ಲಿ ಅಭಿಪ್ರಾಯ ವ್ಯಕ್ತಪಡಿಸಲು ಸೈಕ್ಲೋಸ್ಟೈಲ್ ಮಾಡಿ ಹಂಚುವುದೇ ಸುಲಭದ ದಾರಿಯಾಗಿತ್ತು. ಅವರವರ ಅಭಿಪ್ರಾಯಗಳನ್ನು ಲಿಖಿತ ರೂಪದಲ್ಲಿ , ಹಾಸ್ಟೆಲ್ ವಾಸಿಗಳ ರೂಂಗಳಿಗೆ ತಲುಪಿಸಲಾಗಿತ್ತಿತ್ತು. ಇಷ್ಟ ಇದ್ದವರು ಓದುತ್ತಿದ್ದರು. ಆದರೆ ಯಾರದೂ ತಕರಾರು ಇರಲಿಲ್ಲ. ಇಂತಹುದೇ ಸನ್ನಿವೇಶ ಇತರ ಹಲವು ವಿಶ್ವವಿದ್ಯಾಲಯಗಳ ಕ್ಯಾಂಪಸ್‍ನಲ್ಲಿದ್ದವು.


ಇದರರ್ಥ ಅಂದಿನ ವಿದ್ಯಾರ್ಥಿಗಳು ಪ್ರತಿಭಟಿಸುತ್ತಲೇ ಇರಲಿಲ್ಲವೆಂದಲ್ಲ. ಪ್ರತ್ಯೇಕ ತೆಲಂಗಾಣಕ್ಕಾಗಿ ನಡೆದ ಹೋರಾಟದಲ್ಲಿ ವಿದ್ಯಾರ್ಥಿಗಳು ಬಹುದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರಿಂದಾಗಿ 1970-71 ರಲ್ಲಿ ಆಂಧ್ರಪ್ರದೇಶದ ಹಲವಾರು ಕಾಲೇಜುಗಳನ್ನು ಸುಮಾರು ಐದಾರು ತಿಂಗಳುಗಳ ಕಾಲ ಮುಚ್ಚಲಾಗಿತ್ತು. 1972-73 ರಲ್ಲಿ ಕೂಡಾ ಈ ಹೋರಾಟದ ಬಿಸಿಯನ್ನು ಮೂರು ತಿಂಗಳುಗಳ ಕಾಲ ವಿದ್ಯಾರ್ಥಿಗಳು ಅನುಭವಿಸಿದರು. ವಿಶೇಷವೆಂದರೆ, ಈ ಹೋರಾಟದಲ್ಲಿ ಧುಮಕಿದವರ ನಡುವಿನ ಸೈದ್ಧಾಂತಿಕ ನಿಲುವುಗಳು ಹೋರಾಟಕ್ಕೆ ಅಡ್ಡಿಯಾಗಲಿಲ್ಲ. ವಿದ್ಯಾರ್ಥಿಗಳ ನಡುವೆ ನಡೆಯುತ್ತಿದ್ದ ಸಂಘರ್ಷಗಳು ವೈಯಕ್ತಿಕ ನೆಲೆಯಲ್ಲಿ ಇರುತ್ತಿದ್ದವು. ಕಾಲೇಜು, ವಿಶ್ವವಿದ್ಯಾಲಯಗಳ ಚುನಾವಣೆಯಲ್ಲಿ ವ್ಯಕ್ತಿ ಕೇಂದ್ರಿತವಾಗಿದ್ದು, ರಾಜಕೀಯ ಪಕ್ಷಗಳ ಒಲವು, ಬೆಂಬಲ ಇರುತ್ತಲೇ ಇರಲಿಲ್ಲ.


ಇಡೀ ಭಾರತದ ವಿದ್ಯಾರ್ಥಿಗಳು ದೊಡ್ಡ ಪ್ರಮಾಣದಲ್ಲಿ ಹೋರಾಟದಲ್ಲಿ ಪಾಲ್ಗೊಂಡಿದ್ದು 1974 ರ ಜೆ.ಪಿ.ಚಳುವಳಿಯಲ್ಲಿ. ಉತ್ತರ ಭಾರತದಲ್ಲಿ ತೀವ್ರವಾಗಿದ್ದ ಜೆಪಿ ಚಳುವಳಿಯಲ್ಲಿ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ ಅಂದಿನ ರಾಜಕೀಯ ಧುರೀಣರ ಕಣ್ಣು ಕೆಂಪಗಾಗಿಸಲು ಕಾರಣವೆಂದರೆ ಅಧಿಕಾರದ ಗದ್ದುಗೆಯನ್ನು ಅಲುಗಾಡಿಸುವ, ಬದಲಿಸುವ ಹೋರಾಟ ಅದಾಗಿತ್ತು. ಇಂದಿನ ಬಹಳಷ್ಟು ರಾಜಕೀಯ ಧುರೀಣರು ವಿದ್ಯಾರ್ಥಿ ದಿಸೆಯಲ್ಲಿ ಅಂದಿನ ಹೋರಾಟದಲ್ಲಿ ಪಾಲ್ಗೊಂಡಿದ್ದರು.

Image result for photos of jp movement


ಜೆಪಿ ಆಂದೋಲನದ ಪರಿಣಾಮದಿಂದ 1975 ರ ತುರ್ತು ಪರಿಸ್ಥಿತಿ, 1977ರಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದ್ದು ಈಗ ಇತಿಹಾಸ. ವಿದ್ಯಾರ್ಥಿ ಶಕ್ತಿಯನ್ನು ಗಮನಿಸಿದ ರಾಜಕೀಯ ಪಕ್ಷಗಳು, ಕ್ಯಾಂಪಸ್‍ನಲ್ಲಿ ಬೇರೂರುವ ಪ್ರಯತ್ನ ನಡೆಸಿದವು. ವಿದ್ಯಾರ್ಥಿ ಸಂಘದ ಚುನಾವಣೆಗಳಿಗೆ ರಾಜಕಾರಣಿಗಳ ಬೆಂಬಲ ದೊರಕತೊಡಗಿ, ಹಣದ ತೊರೆಯೂ ಹರಿಯ ತೊಡಗಿ, ವಿದ್ಯಾರ್ಥಿಗಳಿಗೂ ಭ್ರಷ್ಟಾಚಾರದ ರುಚಿ ತೋರಿಸುವ ಪ್ರಕ್ರಿಯೆ ಕಾಲೂರ ತೊಡಗಿತು. ಸೈದ್ಧಾಂತಿಕ ನೆಲೆಗಟ್ಟಿನ ಮೇಲೆ ನಡೆಯುತ್ತಿದ್ದ ಚರ್ಚೆಗಳ ಸ್ಥಾನವನ್ನು ರಾಜಕೀಯ ಪಕ್ಷಗಳ ಒಲವು ಆಕ್ರಮಿಸತೊಡಗಿತು. ವಿದ್ಯಾರ್ಥಿ ಸಂಘಟನೆಗಳು ನೇರವಾಗಿ ರಾಜಕೀಯ ಪಕ್ಷದೊಂದಿಗೆ ಗುರ್ತಿಸಿಕೊಳ್ಳತೊಡಗಿದವು.


ಈ ಅಧಃಪತನಕ್ಕೆ ಯಾವುದೇ ಒಂದು ರಾಜಕೀಯ ಪಕ್ಷವನ್ನೂ ದೋಷಿಯಾಗಿಸುವುದು ಅಸಮಂಜಸ. ವಿದ್ಯಾರ್ಥಿಗಳನ್ನು ದಾರಿ ತಪ್ಪಿಸುವಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ಸಮಾನದೋಷಿಗಳು. ರಾಜಕಾರಣಿಗಳ ಅಧಿಕಾರ ದಾಹದ ದಾಳಕ್ಕೆ ವಿದ್ಯಾರ್ಥಿ ಸಮುದಾಯ ಕ್ರಮೇಣ ಬಲಿಯಾಗಿ ಇಂದಿಗೂ ಆ ಬಲೆಯಲ್ಲಿ ಸಿಲುಕಿದೆ. ಸಿದ್ಧಾಂತದ ಸ್ಥಾನವನ್ನು ಭಾವನಾತ್ಮಕ ಅಂಶಗಳು, ವಿನಾಕಾರಣದ ದ್ವೇಷ, ಅಸೂಯೆಗಳು ಆಕ್ರಮಿಸಿವೆ. ಎಡಪಂಥೀಯ ಚಿಂತನೆಯ ನೆಪದಲ್ಲಿ ವಿದ್ಯಾರ್ಥಿಗಳಲ್ಲಿ ದ್ವೇಷ ಹುಟ್ಟಿಸುವ ಕೆಲಸವನ್ನು ಕಮ್ಯುನಿಸ್ಟ್ ಪಕ್ಷಗಳು ಮಾಡುತ್ತಿವೆ. ಜಾತಿ, ಮತ, ಪಂಥ, ಹುಸಿ ದೇಶಾಭಿಮಾನಗಳನ್ನು ವಿದ್ಯಾರ್ಥಿಗಳ ಭಾವನೆ ಕೆರಳಿಸಲು ಬಲಪಂಥೀಯ ಪಕ್ಷಗಳು ಬಳಸುತ್ತಿವೆ. ವಿಶ್ವವಿದ್ಯಾಲಯಗಳು ಮಾತ್ರವಲ್ಲ, ಪದವಿ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಕೂಡಾ ವಿಭಜಕ ಕ್ರಮಗಳು ಕಾಲೂರಿವೆ.


ವಿದ್ಯಾರ್ಥಿ ಶಕ್ತಿಯ ಅರಿವುಳ್ಳ ಇಂದಿನ ರಾಜಕಾರಣಿಗಳು ತಮ್ಮ ಪಕ್ಷ ಅಥವಾ ತಮಗೆ ವಿದ್ಯಾಸಂಸ್ಥೆಗಳಲ್ಲಿ ಕಾಲೂರುವ ಅವಕಾಶ ಸಿಗದಿದ್ದಾಗ ಗುಂಡಾಗಿರಿಗೆ ಕುಮ್ಮಕ್ಕು ನೀಡುವ ನೀಚ ಕೆಲಸಕ್ಕೂ ಮುಂದಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿಶ್ಲೇಷಿಸಿದಾಗ ಜೆಎನ್‍ಯುದಲ್ಲಿ ನಡೆಯುತ್ತಿರುವ ಘಟನೆಗಳಿಗೆ ಕಾರಣ ಸ್ಪಷ್ಟವಾಗುತ್ತದೆ.


ಜಾಗತಿಕ ಪ್ರತಿಷ್ಠೆ ಪಡೆದಿರುವ ಭಾರತದ ಕೆಲವೇ ವಿಶ್ವವಿದ್ಯಾಲಯಗಳಲ್ಲಿ ಜೆಎನ್‍ಯು ಕೂಡಾ ಸೇರಿದೆ. ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ, ಸಂಶೋಧನೆಯಲ್ಲಿ ಆಸಕ್ತಿ ಹುಟ್ಟಿಸುವಲ್ಲಿ ಜೆಎನ್‍ಯು ತನ್ನ ಛಾಪು ಮೂಡಿಸಿದೆ. ಮುಕ್ತ ಚಿಂತನೆಗೆ ಅಲ್ಲಿ ಸಾಕಷ್ಟು ಅವಕಾಶ ಇರುವುದರಿಂದ ಬಲಪಂಥೀಯರನ್ನು ಹಿಂದಿಕ್ಕಿ, ಎಡ ಪಂಥೀಯರು ವಿದ್ಯಾರ್ಥಿಗಳ ಒಲವು ಗಳಿಸುತ್ತಿದ್ದಾರೆ. ಅಭಿಪ್ರಾಯ ಭೇದ, ಭಿನ್ನ ಮತಗಳನ್ನು ಒಪ್ಪಲು ಸಿದ್ಧರಿಲ್ಲದ ಮತೀಯವಾದಿ ಬಲ ಪಂಥೀಯರಿಗೆ ಇದು ಸಹ್ಯವಾಗುತ್ತಿಲ್ಲ. ತಮ್ಮ ಅಭಿಪ್ರಾಯಗಳನ್ನು ಒಪ್ಪದವರನ್ನು ದೇಶದ್ರೋಹಿಗಳೆಂದು ಕರೆಯಲೂ ಹೇಸದ, ದ್ವೇಷದ ಗೋಡೆಗಳ ನಡುವೆ ತಮ್ಮ ಬುದ್ದಿಯನ್ನೇ ಬಂಧಿಸಿಟ್ಟಿರುವ ಜಡವಾದೀ ಚಿಂತಕರು ವಿಶ್ವವಿದ್ಯಾಲಯದಲ್ಲಿ ಪ್ರಾರಂಭವಾಗಿರುವ ಪ್ರತಿಭಟನೆಯನ್ನು ಹಿಂಸಾಚಾರಕ್ಕೆ ತಿರುಗಿಸುತ್ತಿದ್ದಾರೆ.


ನಮ್ಮ ಶಿಕ್ಷಣ ಪದ್ಧತಿ, ಸಾಮಾಜಿಕ- ಆರ್ಥಿಕ ವ್ಯವಸ್ಥೆಗಳೂ ವಿಶ್ವವಿದ್ಯಾಲಯಗಳ ಇಂದಿನ ದುಃಸ್ಥಿತಿಯ ಕಾರಣಗಳು. ಪೂರ್ವ ಪ್ರಾಥಮಿಕ ಹಂತದಿಂದ ಸ್ನಾತಕೋತ್ತರದವರೆಗೂ ವಿದ್ಯಾರ್ಥಿಗಳ ತಲೆಯಲ್ಲಿ ವಿಷಯಗಳನ್ನು ತುರುಕುವುದೇ ಇಂದಿನ ಶಿಕ್ಷಣ. ಕೆಲವೆಡೆ ತಾವು ಭಿನ್ನವಾಗಿ ಕಲಿಸುತ್ತಿದ್ದೇವೆಂದು ತೋರಿಸಿಕೊಳ್ಳುತ್ತಾರೆ. ಆದರೆ ಭಾರತದ ಇಂದಿನ ಶಿಕ್ಷಣ ವ್ಯವಸ್ಥೆ ಬ್ರಿಟಿಷರು ರೂಪಿಸಿದ ಗುಲಾಮಗಿರಿ ಶಿಕ್ಷಣದ ಮುಂದುವರಿಕೆಯೇ ಆಗಿದೆ. ಕಂದುಚರ್ಮದ ಭಾರತೀಯರಲ್ಲಿ ಒಂದಷ್ಟು ಮೇಲರಿಮೆ ಬೆಳೆಸಿ, ಜನಸಾಮಾನ್ಯರಿಂದ ಪ್ರತ್ಯೇಕಿಸಿ, ಬ್ರಿಟಿಷರ ಗುಲಾಮಗಿರಿ ಮಾಡುವುದನ್ನು ಅಂದು ಕಲಿಸಲಾಗುತ್ತಿತ್ತು. ಬ್ರಿಟಿಷರ ಸ್ಥಾನವನ್ನು ಬಂಡವಾಳಶಾಹಿಗಳಿಗೆ ನೀಡಿರುವುದಷ್ಟೇ ಇಂದಿನ ಬದಲಾವಣೆ.


ವಿದ್ಯಾಭ್ಯಾಸ ಮಾಡುವ ಉದ್ದೇಶವೇ ನೌಕರಿ ಪಡೆಯುವುದು; ಬಂಡವಾಳಶಾಹಿಗಳೇ ಉದ್ಯೋಗದಾತರು, ಅವರಿಂದಲೇ ಉದ್ಯೋಗ ಸೃಷ್ಟಿಯೆಂಬ ಮಿಥ್ಯೆಯನ್ನು ವಿದ್ಯಾರ್ಥಿಗಳಲ್ಲಿ ತುಂಬಲಾಗುತ್ತಿದೆ. ಇದರಿಂದಾಗಿ ಪದವಿ ಪಡೆದೊಡನೆ ನೌಕರಿ ಸಿಗಬೇಕೆಂಬ ನಿರೀಕ್ಷೆ ವಿದ್ಯಾರ್ಥಿಗಳಲ್ಲಿದೆ. ಪದವಿ ಪಡೆದು ವರ್ಷಾನುಗಟ್ಟಲೇ ಕಾದರೂ ನೌಕರಿ ಸಿಗದಾಗ ಪದವೀಧರರಲ್ಲಿ ಮಾತ್ರವಲ್ಲ, ವಿದ್ಯಾರ್ಥಿಗಳಲ್ಲೂ ಸಿನಿಕತೆ ಬೆಳೆಯುತ್ತದೆ. ಇದರ ಪರಿಣಾಮವೇ ವಿದ್ಯಾರ್ಥಿ ಮತ್ತು ಯುವಕರಲ್ಲಿ ಅಶಿಸ್ತು , ನಿರಾಶಾವಾದ, ಉದ್ಯೋಗ ಅವಕಾಶ ದೊರಕಿದವರ ಕುರಿತಾದ ಅನಗತ್ಯ ದ್ವೇಷ ಬೆಳೆಯುತ್ತಿದೆ.


ಇಂದಿನ ಬಹಳಷ್ಟು ವಿಶ್ವವಿದ್ಯಾಲಯಗಳ ಸಿಲೆಬಸ್‍ಗಳು ಉದ್ಯೋಗಾರ್ಹತೆಯನ್ನು ಬೆಳೆಸುವ ಬದಲಿಗೆ ಅದೇ ಹಳೆಯ ನಿರುಪಯುಕ್ತ ಪಾಠಗಳನ್ನು ಹೇಳುತ್ತಿವೆ. ಸರ್ಕಾರದ ಅನುದಾನಿತ ಶಾಲಾ, ಕಾಲೇಜುಗಳ ಶಿಕ್ಷಕರಲ್ಲಿ ಹೆಚ್ಚಿನವರಿಗೆ ಅಧ್ಯಾಪನ, ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆ ಮೂಡಿಸುವದರಲ್ಲಿ ಆಸಕ್ತಿಯೇ ಇಲ್ಲವಾಗಿದೆ. ಅವರು ವಿದ್ಯಾರ್ಥಿಗಳಿದ್ದಾಗ ಕಲಿತ ವಿಷಯಗಳೇ ದಶಮಾನಗಳ ನಂತರವೂ ಇರುವುದರಿಂದ ತಮ್ಮ ಹಳೆಯ ಟಿಪ್ಪಣಿ, ನೋಟ್ಸ್‍ಗಳನ್ನೇ ಬಳಸಿ, ಕಾಟಾಚಾರದ ಪಾಠ ಮಾಡಿ ತೃಪ್ತರಾಗುತ್ತಾರೆ. ಯಾಕೆಂದರೆ ಅವರು ಮಾಡುವ ಪಾಠದ ಗುಣಮಟ್ಟ, ಅವರ ನಡತೆ, ವಿದ್ಯಾರ್ಥಿಗಳಿಗೆ ಅವರ ಬದುಕಿನ ಸಂದೇಶ ಏನೇ ಇದ್ದರೂ ಪ್ರತಿ ತಿಂಗಳು ಸಂಬಳ ತಪ್ಪುವುದಿಲ್ಲ.


ವಿದ್ಯಾರ್ಥಿಗಳಲ್ಲಿ ಸ್ವಾವಲಂಬನಾ ಮನೋಭಾವ ಬೆಳೆಸುವ, ಇತರರ ಕುರಿತಾಗಿ ಪ್ರೀತಿ ಬೆಳೆಸುವ, ಸಹನೆ ಮೂಡಿಸುವ, ಶಿಕ್ಷಣ ವಿಧಾನವೇ ನಮ್ಮಲ್ಲಿ ಇಲ್ಲ. ಇದು ಸ್ಪರ್ಧಾತ್ಮಕ ಜಗತ್ತು ಎಂದೇ ವಿದ್ಯಾರ್ಥಿಗಳಲ್ಲಿ ತಲೆಯಲ್ಲಿ ತುಂಬುತ್ತಾರೆಯೇ ಹೊರತು ಇದು ಸಹಕಾರಾತ್ಮಕ ಜಗತ್ತು ಎಂಬುದನ್ನೇ ಕಲಿಸುವುದಿಲ್ಲ. ಇನ್ನೊಬ್ಬರನ್ನು ನಮ್ಮ ಅವಕಾಶಗಳನ್ನು ಕಸಿಯುವ ಪ್ರತಿಸ್ಪರ್ಧಿ ಎಂದೇ ಪರಿಗಣಿಸಲು ಕಲಿಸುತ್ತಿದ್ದೇನೆ.


ವಿದ್ಯಾರ್ಥಿಗಳಲ್ಲಿ ಅಶಿಸ್ತನ್ನು ಗಮನಿಸಿ, ಪ್ರತಿಭಟನೆಗಳಲ್ಲಿ ಅವರು ಪಾಲ್ಗೊಳ್ಳುವುದನ್ನು ನೋಡಿದ ಹಲವರು ಶಿಕ್ಷಣಕ್ಕಾಗಿ ಸರ್ಕಾರ ವೆಚ್ಚ ಮಾಡುವುದನ್ನು ನಿಲ್ಲಿಸಬೇಕೆಂಬ ವಾದ ಮುಂದಿಡುತ್ತಾರೆ. ಅಮೇರಿಕಾ ಮತ್ತು ಇತರ ಹಲವು ದೇಶಗಳಲ್ಲಿ ಇರುವಂತೆ ಕಾಲೇಜು ಶಿಕ್ಷಣದ ವೆಚ್ಚವನ್ನು ವಿದ್ಯಾರ್ಥಿಯೇ ಭರಿಸುವ ಪದ್ಧತಿ ಬರಬೇಕೆಂದು ಸೂಚಿಸುತ್ತಾರೆ. ಆದರೆ ಇಂತಹ ವ್ಯವಸ್ಥೆ ಜಾರಿಗೆ ಬರುವ ಮೊದಲು, ಪಾಲಕರು ಅಥವಾ ವಿದ್ಯಾರ್ಥಿಗೆ ಉದ್ಯೋಗಾವಕಾಶದ ಭದ್ರತೆ ಇರಬೇಕೆಂದು ಅವರು ಯೋಚಿಸುವುದಿಲ್ಲ. ಬೌದ್ಧಿಕ ಶ್ರಮ ಮಾತ್ರ ಶ್ರೇಷ್ಠ, ದೈಹಿಕ ಶ್ರಮ ಕನಿಷ್ಠ ಎಂದು ತಪ್ಪಾಗಿ ಭಾವಿಸಿರುವ ನಮ್ಮ ಸಮಾಜದ ನಂಬಿಕೆ ಬದಲಾಗಬೇಕೆಂದು ಅವರಿಗೆ ಅನಿಸುವುದಿಲ್ಲ.


ವ್ಯಕ್ತಿಯ ವಿದ್ಯಾಭ್ಯಾಸದ ಹೊಣೆಯನ್ನು ಸಮಾಜ ಅಥವಾ ಸರ್ಕಾರ ಹೊರದಿದ್ದರೆ, ಆ ವ್ಯಕ್ತಿಯಿಂದ ಸಾಮಾಜಿಕ ಹೊಣೆಗಾರಿಕೆಯನ್ನು ನಿರೀಕ್ಷಿಸುವ ಹಕ್ಕು ನಮಗೆ ಇದೆಯೇ? ಎಂದು ಚಿಂತಿಸಬೇಕಾಗುತ್ತದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಬಸ್ ಪಾಸ್ ನೀಡಿಕೆಯನ್ನು ನಾಗರಿಕರು ಅವಹೇಳನ ಮಾಡುವುದನ್ನು ಕಂಡಾಗ, ಬಸ್ ಕಂಡಕ್ಟರ್ (ಬಹುಶಃ ಅವರೂ ಇದರ ಲಾಭ ಪಡೆದಿರಬಹುದು) ಪಾಸ್ ಹೊಂದಿದ ವಿದ್ಯಾರ್ಥಿಗಳನ್ನು ತಿರಸ್ಕಾರದಿಂದ ನೋಡಿದಾಗ, ಸಮಾಜದ ಕುರಿತು ಒಳ್ಳೆಯ ಭಾವನೆ ಅವರಲ್ಲಿ ಮೂಡಲು ಸಾಧ್ಯವೇ? ಎಂಬ ಕುರಿತು ಆತ್ಮವಿಮರ್ಶೆ ಮಾಡಿಕೊಳ್ಳುವುದು ಉತ್ತಮ.
ಅಧಿಕಾರ ಗಳಿಸುವುದು, ಅದರಿಂದ ಸಂಪತ್ತು ಗಳಿಸುವುದನ್ನೇ ಗುರಿಯಾಗಿಸಿಕೊಂಡಿರುವ ರಾಜಕಾರಣಿಗಳಿಂದ ಶಿಕ್ಷಣ ವ್ಯವಸ್ಥೆಯಲ್ಲಿ ಪರಿವರ್ತನೆಯಾದೀತು, ವಿದ್ಯಾರ್ಥಿಗಳು ವಿದ್ಯಾರ್ಜನೆಯಲ್ಲೇ ತೊಡಗುವಂತಾದೀತೆಂದು ನಿರೀಕ್ಷಿಸುವುದು ವ್ಯರ್ಥ. ಸಮಾಜದ ಹಿತ ಚಿಂತಕರು , ಶಿಕ್ಷಣ ತಜ್ಞರು , ಮಾನವ ಪ್ರೇಮಿಗಳು ಮುಂದಾಗಿ ಒತ್ತಡ ಸೃಷ್ಟಿಸಿದಾಗ ಪರಿವರ್ತನೆಯ ಬೆಳಕು ಕಂಡೀತು.


ಎಂತಹ ಶಿಕ್ಷಣ ಪದ್ಧತಿ ಬೇಕೆಂಬ ಕುರಿತು ಸಮರ್ಪಕ ತಿಳುವಳಿಕೆ ಇದ್ದಾಗ ಮಾತ್ರ ಸರಿಯಾದ ಶಿಕ್ಷಣ ಪದ್ಧತಿಯ ಅನುಷ್ಠಾನವಾಗುತ್ತದೆ. ತನ್ನನ್ನು ಈ ಬೃಹತ್ ವಿಶ್ವದ ಒಂದು ಭಾಗ, ಸಕಲ ಜೀವರಾಶಿಗಳ ಒಂದು ಕೊಂಡಿ ಎಂದು ಮಗು ಭಾವಿಸತೊಡಗಿದಾಗ ಜೀವನದ ದೃಷ್ಟಿಕೋನವೇ ಬದಲಾಗುತ್ತದೆ. ಪೂರ್ವ ಪ್ರಾಥಮಿಕ ಹಂತದಲ್ಲಿಯೇ ಮಕ್ಕಳ ಮನಸ್ಸನ್ನು ವಿಸ್ತಾರಗೊಳಿಸುವ ಶಿಕ್ಷಣ ನೀತಿಯನ್ನು ಪ್ರಾರಂಭಿಸುವುದು ಸೂಕ್ತ. ಯಾಕೆಂದರೆ ಆ ಹಂತದಲ್ಲಿಯೇ ಮಗು ಸರಿಯಾದ ರೀತಿಯಲ್ಲಿ ಯೋಚಿಸುವ ಸಾಮಥ್ರ್ಯ ಹೊಂದಿರುತ್ತದೆ. ಬಾಲ್ಯದಲ್ಲಿಯೇ ಯೋಗ, ಧ್ಯಾನಗಳನ್ನು ಕಲಿತ ಮಗು ಬೆಳೆದಾಗ ಜಾತಿ, ಮತ, ಪಂಥಗಳ ಸಂಕೋಲೆಯಲ್ಲಿ ಸಿಲುಕಿ ಬೀಳುವುದಿಲ್ಲ.


ಈ ಪ್ರಪಂಚದಲ್ಲಿ ಎಲ್ಲರಿಗೂ ಬದುಕುವ ಅವಕಾಶವಿದೆ. ಇಲ್ಲಿನ ನೈಸರ್ಗಿಕ ಸಂಪನ್ಮೂಲಗಳು ಎಲ್ಲರ ಬಳಕೆಗಾಗಿ ಇವೆ. ಇದು ಕೆಲವರದೇ ಸ್ವತ್ತಾಗುವುದು ನಿಸರ್ಗ ವಿರೋಧಿ ಕ್ರಮ; ಸಹಕಾರವೇ ಪ್ರಕೃತಿಯ ಗುಣ ಎಂಬುದು ಮಗುವಿನ ಮನದಲ್ಲಿ ಮೂಡುವಂತಹ ಪಠ್ಯಕ್ರಮ ರೂಪಿತವಾಗಬೇಕು. ಇಂತಹ ನವ್ಯಮಾನವತಾವಾದಿ ಶಿಕ್ಷಣ ನೀತಿ ಇಂದಿನ ಅಗತ್ಯತೆ.


ಪ್ರತಿಯೋರ್ವ ವ್ಯಕ್ತಿಗೂ ಜೀವನದ ಭದ್ರತೆ ಸಿಗುವಂತಹ ಸಾಮಾಜಿಕ- ಆರ್ಥಿಕ ವ್ಯವಸ್ಥೆ ಜಾರಿಗೆ ಬರಬೇಕು. ಅಂದರೆ ಪ್ರತಿಯೋರ್ವ ವ್ಯಕ್ತಿಗೂ ದುಡಿಮೆಯ ಅವಕಾಶ, ದುಡಿಮೆಯ ಪ್ರತಿಫಲದಿಂದ ತನ್ನ ಹಾಗೂ ತನ್ನ ಅವಲಂಬಿತರ ಜೀವನದ ಕನಿಷ್ಠ ಅಗತ್ಯತೆಗಳಾದ ಆಹಾರ, ಬಟ್ಟೆ, ವಸತಿ, ಶಿಕ್ಷಣ, ಔಷದೋಪಚಾರಗಳನ್ನು ಪೂರೈಸಿಕೊಳ್ಳುವ ಸಾಮಥ್ರ್ಯವಿರಬೇಕು. ಅಂತಹ ವ್ಯವಸ್ಥೆಯಲ್ಲಿ ವಿದ್ಯಾರ್ಜನೆ ಎಂಬುದು ಜ್ಞಾನ ಗಳಿಕೆಯ ಸಾಧನವಾಗಿರುತ್ತದೆಯೇ ಹೊರತು ಪದವಿ ಪಡೆದು ಉದ್ಯೋಗ ಗಳಿಸುವ ಸಾಧನವಾಗಿರದು.


ಸಂಪತ್ತು ಗಳಿಕೆಯೇ ಜೀವನದ ಪರಮ ಧ್ಯೇಯವಾಗಿರುವ ಬಂಡವಾಳವಾದಿ ವ್ಯವಸ್ಥೆಯಲ್ಲಿ ಇಂತಹ ಬದಲಾವಣೆಯನ್ನು ನಿರೀಕ್ಷಿಸಲು ಸಾಧ್ಯವಾಗದು. ಮಾನವ ಸಮಾಜದಲ್ಲಿ ಶಾಂತಿ, ಸುಖ, ಸಮೃದ್ಧಿ ನೆಲೆಸಬೇಕೆಂದರೆ ಸ್ವಾರ್ಥ ಕೇಂದ್ರಿತ ಬಂಡವಾಳವಾದಿ ವ್ಯವಸ್ಥೆಯನ್ನು ಕಿತ್ತೆಸೆಯುವುದು ಅನಿವಾರ್ಯ. ಇದು ಶಾಂತಿಯಿಂದಲೋ, ಕ್ರಾಂತಿಯಿಂದಲೋ ಎಂಬುದನ್ನು ಕಾಲವೇ ನಿರ್ಣಯಿಸಲಿದೆ.

***********

Leave a Reply

Back To Top