ಯುಗಾದಿ ವಿಶೇಷ
ಮನದ ಕ್ಲೇಶ ಕಳೆಯಲಿ
ವಾಣಿ ಭಂಡಾರಿ
ಧರಣಿ ನಗುತಿಹಳು ಹೊಸ ಸೀರೆ ಯುಟ್ಟು
ಶುಭಕೃತುನಾಮ ಸಂವತ್ಸರದೊಳು ಚೈತ್ರ ಸೂಸಿ.
ಬಿದಿಗೆಯ ಭಾಸ್ಕರನು ಹೊಳಪು ತೊಟ್ಟು
ಜೀವರಾಶಿಯ ನೋವೆಲ್ಲ ತೊಳೆದು ಹಾರಿಸಿ.
ಪಡುವಣದೊಳಗೆ ರವಿ ನಾಚಿ ಧರೆಯಪ್ಪಿ
ಸಿರಿಗುಣದ ಸೊಬಗು ಕಂಡು ಚಂದಿರ ನಲಿದ.
ಬೆಳದಿಂಗಳ ಹೂರಾಶಿ ಮೆಲ್ಲನೆ ಪುಟಿಯುತಲಿ
ಇಬ್ಬನಿಯೊಳು ತರುಲತೆಗಳನಪ್ಪಿ ಮುದ್ದಿಸಿದ.
ಕುಳಿರ್ಗಾಳಿ ತಂಗಾಳಿ ಕರಿಕಹಿ ಕಳೆಯುತಲಿ
ಬೇವಿನೊಳಗೆ ಬೆಲ್ಲತುಂಬಿ ಸವಿದರೆ ಜೀವನ.
ಮನದ ಕಳೆ ತೊಳೆದು ಭಾವಧಾರೆ ಉಕ್ಕಲಿ
ನೊಂದಬೆಂದ ಮನದಿ ಸೂಸಲಿ ನವಚೇತನ.
ಕನಸು ಹೊಮ್ಮಿ ನನಸು ತಬ್ಬಲಿ ಜೀವಕುಲ
ಮುನಿಸು ತೊರೆದು ಮನಸು ಹಿಗ್ಗಲಿ ಭಾವಜಲ.
ತಳಿರುತೋರಣ ಘಮಬೀಸಿ ಆಸೆ ಚಿಗುರಿಸಲಿ
ಸೇಸೆ ಇಕ್ಕ ಬಂದು ಶಶಿಯಪ್ಪಿದ ಹುಣ್ಣಿಮೆಜಲ.
ಮಧು ಹೀರಿ ಗಂಧ ಬೀರಿ ಒನಪಿನ ಮಾರುತ
ಸೊಬಗ ತೋರಿ ಬಿನ್ನಾಣ ದಾರಿಲಿ ಸಾಗುತಲಿ.
ಮಧುರ ಭಾವ ಉಕ್ಕಿಸೊಕ್ಕಿ ವಸಂತ ಹಿಗ್ಗುತ
ಮನದಕ್ಲೇಶ ಕಳೆದು ಸುಗ್ಗಿಸಿರಿ ಎದೆಗೆ ತಾಗಲಿ.
ಕುಹೂ ಕೋಗಿಲೆ ಇಂಪುಗಾನ ಸೂಸಿ ಭೂಮಿಗೆ
ಕುಗ್ಗು ತಗ್ಗು ಸೊಕ್ಕು ಕುಕ್ಕು ಅಗ್ಗದಲಿ ಮಾರಿರಿ.
ಹಿಗ್ಗಿ ಬಗ್ಗಿ ಸಮತಾ ಭಾವದೊಳಗೆ ಬೆರೆಯರಿ
ಆಸೆಯೊನಲು ಸಸಿಯಕಟ್ಟನಿಟ್ಟು ಭಾವಬಿತ್ತಿರಿ.
ಚೆನ್ನಾಗಿದೆ