ಯುಗಾದಿ ವಿಶೇಷ
ಯುಗಾದಿ ಹಬ್ಬ
ಡಾ.ಸುಜಾತಾ.ಸಿ.
ಚುಮು ಚುಮು ಹೊತ್ತನ್ಯಾಗ
ಎದ್ದಳ ಹಡದವ್ವ ಎದ್ದಳ ಹಡದವ್ವ
ಸಾಲಾಗಿ ಮಲಗಿದ ಏಳು ಮಕ್ಕಳೇಬ್ಬಿಸಿ
ಕಸಬರಗಿ ಹಿಡಿದ, ಹೊತ್ತಿನ ಧೂಳ ತಗದಾಳ
ಹೆಂಡಿಕಸ ತುಂಬಿ ಎಸದಾಳ
ಅಂಗಳಕ ಚಳ್ಳನೀರ ಹೊಡೆದಾಳ
ಅಣ್ಣನ ಕರಿಯಿರಿ ಅಕ್ಕನ ಕರಿಯರಿ
ಆಯಿಗೆ ಕೈ ಹಿಡದ ಎಬ್ಬಸರಿ
ಕೂಸಗಳನ ಹಗುರಕ ಕಾಣಿರಿ
ಎಂದೇಳಿ ಒಳಗ ಹೊಂಟಳ
ಅವಸರಕ ಅವ್ವ ಅಣಿಯ್ಯಾಗ್ಯಾಳ
ಹಬ್ಬದ ನೋಟ ಬೀರ್ಯಾಳ
ಹೊತ್ತ ಹೊಂಡದರಾಗ
ತಲಿಗಿ ಎಣ್ಣಿಹಚ್ಚಿ ಬೇವಿನ
ಎಸಳದ ಜಗಕ ಮಾಡಿ
ಹಣಿತುಂಬ ಕುಂಕುಮ ಬೊಟ್ಟಿಟ್ಟ ಹಡದವ್ವ
ಸಿರಿ ಗೌರಿ ಆಗ್ಯಾಳ
ಮಕ್ಕಳ ಸಂಭ್ರಮಕ ಕಾತರಿಸ್ಯಾಳ
ಒಲೆ ಮ್ಯಾಲ ಕುದಿಎಸಳು ಹೊದಾಡತಲಿತ್ತು
ಕಡಲೆಬ್ಯಾಳಿ ಮದುಮಗಳಂಗ
ಮರದಾಗ ಕುಂತ ಇಣುಕುತಲಿತ್ತು
ಹಸಿಬೆಲ್ಲ ಕಣ್ಣಬಿಟ್ಟ ನೊಡುತಲಿತ್ತು
ಕಣಕ ಕಣಗಿಲೇ ಬಾಯತೆರೆದು ನಿಂತಿತ್ತು
ಹದಗೊಳಿಸಾಕ ಅವ್ವನ ಕೈಯ ಹೈರಾಣಾಗಿತ್ತ
ಬೇವಿನ ಎಲೆ ತಂದು ಮಕ್ಕಳಿಗೆ ಒಳ್ಳೆಣ್ಣಿ ಬಾಯೆಂಜಲ ಸೇರಿಸಿ ಮಜ್ಜನ ಮಾಡ್ಯಾಳ
ಹೊಳೆವ ಮಖಕಂಡ ಖುಷಿಯ್ಯಾಗಾಳ
ಅಪ್ಪನ ಖದರದ ಧ್ವನಿಯ ಹೊರಗ ಕೇಳಿಸಿತ್ತು
ಬಂದ ರಾಯ ಅಂತ ಅವ್ವ ಗಡಬಡಿಸಿ
ಸೀರೆ ಅಂಚಿಂದ ಹಿಡಿದ, ಬಿಸಿ ಬಿಸಿ ಚಾದ ಕಪ್ಪ ಅಪ್ಪನ ಮುಂದಿಟ್ಟಳ, ಅವ್ವನ ಮುಗುಳು ನಗೆ ಮನೆ ತುಂಬಿತ್ತ
ಹೊಸ ಅರಬಿ ಬೇಕೆಂದು ತಂಗಿ ಅಳುತ್ತಿದ್ದಳು
ಅಣ್ಣನ ಸಿಟ್ಟಿಗೆ ಅವ್ವ ಸಿಡಕಿದ್ದಳು
ಆಯಿಯ ಹಬ್ಬದ ಕತೆ ಕೇಳಿ ಅಕ್ಕ ಹೊರ ಹೊಂಡಳು
ಅಪ್ಪನ ಮಾತಿಗೆ ಪಿಳಿ ಪಿಳಿ ನೋಡುತ
ಗೀಳಿವಿಂಡು ಕುಂತಂಗ ಮನೆಮಂದಿ ಕುಂತಿತ್ತು
ಪ್ಯಾಟಿಗೆ ಹೊಂಟ ನಡೆದ ಅಪ್ಪನ ಕಂಡಿವರು
ಖುಷಿ ಮೀರಿ ಕುಣದು ನಕ್ಕು ನಲಿದಿದ್ದರ್ರು
ಅಪ್ಪ ಬರು ಹೊತ್ತಲ್ಲಿ ನಗು ನಾಚಿ ನಿಂತಿತ್ತು
ಬೇವಿನ ಹೂವು ಕಹಿ ಮರೆತಿತ್ತು
ಹುಣಿಸೆಯ ಹುಳಿ ಸಿಹಿಯಾಗಿತ್ತು
ಬೆಲ್ಲದ ನಂಟು ನಮ್ಮೇಲ್ಲರ ಗಂಟಾಗಿತ್ತು
ಕೂಡಿ ಆಡೋತ ಹೊಸವರ್ಷದ
ಬಾಗ್ಲಿಗೆ ತೋರಣವು ಸಾಕ್ಷಿಯಾಗಿತ್ತು
ಹೋಳಿಗೆ ತುಪ್ಪದ ಘಮಲು ಮನೆಮನ ತುಂಬಿತ್ತು
ಯುಗಾದಿಯ ಸಂಭ್ರಮ ತುಂಬಿ ತುಳುಕಿತ್ತು
ಹಸಿರುಟ್ಟ ಭೂದೇವಿ ಹರಸಿ ಹಾಡಿತ್ತು
ಹಿಂಗ ನಮ್ಮ ಯುಗಾದಿ ನಡದಿತ್ತು
Very nice dear Dr. Sujata. Congratulations
Superb
ದೇಸೀಯ ಸೊಗಡು ಆಡುನುಡಿಯ ಬೆಡಗು ತುಂಬಾ ಆಕರ್ಶಕ. ಸಮಕಾಲೀನ ಸ್ಪಂದನೆಗೆ ಅಭಿನಂದನೆಗಳು
ಧನ್ಯವಾದಗಳು ಸರ್
ಚಂದಾದ ಕವನಾಕ ಯುಗಾದಿಯ ಗಮಲಿತ್ತು
ಹಬ್ಬಾದ ಅಂದ ತುಂಬಿತ್ತು/ತಾಯವನ
ಸಡಗರದ ಸುದ್ದಿ ಸಂತಸದಿ
ತೋರಣವು ತಂದಾತು ಬಾಗಿಲಿಗೆ ಬಿಗಿದಾತು
ಬೇವಿನಾ ಜೊತೆಗೆ ಬೆಲ್ಲಾವು/ ಬೆರಸಿದಳು
ತಾಯವ್ವ ತಂದು ಹಂಚಿದಳು
ಸಂದರವಾದ ಕವನ ಮಮ್.
Halliyelle nijavad habbada acharane nodi thumba chennagide
Thank you sir
ಸದಾ ಹೊಸತನದ ಪ್ರಯೋಗಗಳಿಗೆ ಸಾಕ್ಷಿ ಪ್ರಜ್ಞೆ ಎಂಬಂತೆ ಈ ನೆಲದ ಸೊಗಡನ್ನು ಹಾಸುಹೊಕ್ಕಾಗಿಸಿಕೊಂಡು ಕಾವ್ಯ ಪ್ರಯೋಗ ಮಾಡಿ ಅನನ್ಯತೆಯನ್ನು ಅನುನಯವು ಪಾಲಿಸುವ ಡಾ.ಸುಜಾತಾ ರವರ ಕಾವ್ಯಕುಂಚದ ಹೊಸ ಹುಟ್ಟು ಈ ಕಾವ್ಯ. ಅಭಿಮಾನದ ಅಭಿನಂದನೆಗಳು ಮೇಡಂ.