ಬೆಳೆಯದಿದ್ದರು ಪರವಾಗಿಲ್ಲ ಬೆಳೆಸುವ ಮನವಿರಲಿ

ಲೇಖನ

ಬೆಳೆಯದಿದ್ದರು ಪರವಾಗಿಲ್ಲ ಬೆಳೆಸುವ ಮನವಿರಲಿ

ಅಮುಭಾವಜೀವಿ ಮುಸ್ಟೂರು

ಇಲ್ಲಿ ಬೆಳೆಸುವವರು ಕಡಿಮೆ ಬಳಸಿಕೊಂಡು ಎಸೆಯುವವರು ಜಾಸ್ತಿ, ಇದೊಂದು ವಾಸ್ತವ ಸತ್ಯ ಬೆಳೆಯಬೇಕು ಎಂಬ ಹಂಬಲದಲ್ಲಿ ಬೆಳೆಸುತ್ತಾರೆ ಎಂಬ ಭ್ರಮೆಯಲ್ಲಿ ಅದೆಷ್ಟೋ ಪ್ರತಿಭೆಗಳು ಬಳಸಿಕೊಳ್ಳುವವರ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ತುಳಿದು ಬೆಳೆದು ಬೀಗುತ್ತಾರೆಯೇ ಹೊರತು ಬಳಸಿಕೊಂಡು ಎಸೆದೆವಲ್ಲ ಎಂದು ಯಾರು ತಲೆ ಕೆಡಿಸಿಕೊಳ್ಳುವುದಿಲ್ಲ. ಅಂಥವರ ಸಹವಾಸವನ್ನು ಕೈಬಿಟ್ಟು ತನ್ನ ಸ್ವಸಾಮರ್ಥ್ಯದಿಂದ ತನ್ನ ಪ್ರತಿಭೆಯನ್ನು ಜಗತ್ತಿಗೆ ತೋರ್ಪಡಿಸಲು ಇರುವ ಹಾದಿಗಳನ್ನು ನಾವೇ ಕಂಡುಕೊಳ್ಳಬೇಕು. ಒಂದು ಮರ ತನ್ನ ಬೆಳವಣಿಗೆಗೆ ಅಡ್ಡಿಯಾಗುತ್ತದೆ ಎಂದು ಗೊತ್ತಿದ್ದರೂ ಕೂಡ ಬಳ್ಳಿಗೆ ಬೆಳೆಯಲು ಆಸರೆಯಾಗಿ ನಿಲ್ಲುತ್ತದೆ. ಒಮ್ಮೊಮ್ಮೆ ಆಸರೆ ನೀಡಿದ ಮರದ ತುಂಬ ಹರಡಿಕೊಂಡು ಇಡೀ ಮರದ ಬೆಳವಣಿಗೆಗೆ ಅಡ್ಡಿಯನ್ನುಂಟು ಮಾಡುತ್ತದೆ. ಆದರೂ  ಎಂದಿಗೂ ಇಂಥವರಿಗೆ ಆಶ್ರಯ ನೀಡಿದೆ ಎಂದು ಬೀಗುವುದೂ ಇಲ್ಲ ಬಾಗುವುದೂ ಇಲ್ಲ ನೊಂದುಕೊಂಡು ಕೂರುವುದಿಲ್ಲ. ತನ್ನ ಪಾಡಿಗೆ ತಾನು ಇದ್ದುಬಿಡುತ್ತದೆ. ನಾನು ಬೆಳೆಯದಿದ್ದರೂ ಚಿಂತೆ ಇಲ್ಲ ನನ್ನಿಂದ ಒಂದಿಬ್ಬರಾದರೂ ಬೆಳೆಯುತ್ತಾರೆ ಎಂದುಕೊಂಡು ಅಂತಹವರಿಗೆ ಸಹಾಯ ಮಾಡುವುದು ದೊಡ್ಡ ಗುಣ.

      ಈ ಜಗತ್ತಿನಲ್ಲಿ ನಿಜವಾದ ಪ್ರತಿಭೆಗಳು ಅರಳುವ ಮೊದಲೇ ಮುರುಟಿ ಹೋಗುತ್ತವೆ. ಕಾರಣ ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಹಾಗೂ ಯಾರೋ ತಮಗೆ ಅವಕಾಶಗಳನ್ನು ನೀಡುತ್ತಾರೆ ಅಥವಾ ಕೊಡಿಸಿ ಕೊಡುತ್ತಾರೆ ಎಂದು ಚಾತಕಪಕ್ಷಿಗಳಂತೆ ಕಾದು ಕುಳಿತು ತಮ್ಮೊಳಗಿನ ಪ್ರತಿಭೆಯನ್ನು ಹೊರಹಾಕುವಲ್ಲಿ ವಿಫಲ ಆಗುತ್ತಾರೆ. ಆದರೆ ಅಂತಹ ಯಾವುದೇ ವ್ಯಕ್ತಿಗಳು ಅವರ ಜೀವಮಾನದಲ್ಲಿ ಸಿಕ್ಕುವುದೇ ಇಲ್ಲ. ಏಕೆಂದರೆ ಅವರು ಕೇವಲ ತಮ್ಮ ಪ್ರತಿಭೆಯ ನಷ್ಟೇ ನೆಚ್ಚಿಕೊಂಡು ಇರುತ್ತಾರೆ. ಇನ್ನೂ ಕೆಲವರಿರುತ್ತಾರೆ ಒಂಚೂರು ಪ್ರತಿಭೆಯಿದ್ದು ಅನೇಕ ಅವಕಾಶಗಳನ್ನು ಬಳಸಿಕೊಂಡು ಮುಖ್ಯವಾಹಿನಿಯಲ್ಲಿ ತೋರ್ಪಡಿಸಿಕೊಂಡು ಎಲ್ಲೆಡೆಯಲ್ಲೂ ಸನ್ಮಾನಿತರಾಗುತ್ತಾರೆ. ತನ್ನ ಕ್ಷೇತ್ರದಲ್ಲಿ ಸಿಗಬಹುದಾದ ಎಲ್ಲಾ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಾರೆ ಅದೇ ಮರವನೇರಿದ ಬಳ್ಳಿಯಂತೆ. ತನ್ನ ಏಳಿಗೆಗಾಗಿ ದುಡಿದವರ ಋಣಸಂದಾಯಕ್ಕಾಗಿ ನಾಯಕನಾಗಿ ಗುರುತಿಸಿಕೊಂಡವರು ತನ್ನ ಹಿಂಬಾಲಕರಿಗೆ ಮಾತ್ರ ಅವಕಾಶಗಳನ್ನು ನೀಡುತ್ತಾ ನಿಜದ ಪ್ರತಿಭೆಗಳನ್ನು ಕಡೆಗಣಿಸಿ ಮೂಲೆಗುಂಪಾಗಿಸುತ್ತಾರೆ. ಎಲೆಮರೆಯ ಕಾಯಿಯಂತೆ ತನ್ನ ವ್ಯಾಪ್ತಿಯಲ್ಲಿಯೇ ಮಾಗಿ ಹಣ್ಣಾಗಿ ಕೊಳೆತುಹೋಗುತ್ತದೆ. ಅದು ಇರುವುದು ಸಮಾಜಕ್ಕೆ ಗೊತ್ತಾಗುವುದೇ ಇಲ್ಲ. ಅದಕ್ಕೆ ಹೇಳುವುದು ಬರಿ ಪ್ರತಿಭೆ ಇದ್ದರೆ ಸಾಲದು ಅದರ ಜೊತೆಗೆ ಗೆದ್ದೆತ್ತಿನ ಬಾಲ ಹಿಡಿದು ಎಲ್ಲ ಅಡೆತಡೆಗಳ ಮೀರಿ ಬೆಳೆಯಬೇಕು. ಸ್ವಾಭಿಮಾನವನ್ನು ಪಕ್ಕಕ್ಕಿಟ್ಟು ಅಂತಹ ನಾಯಕನ ಮಾತುಗಳಿಗೆ ಕೋಲೆ ಬಸವನಂತೆ ತಲೆಯಾಡಿಸಿದವರಿಗೆ ಮಾತ್ರ ತನ್ನ ವ್ಯಾಪ್ತಿಯಲ್ಲಿ ಸಿಗಬಹುದಾದ ಎಲ್ಲಾ ಅವಕಾಶಗಳನ್ನು ಮಾನಸನ್ಮಾನಗಳನ್ನು ಅವರಿಗಷ್ಟೇ ಕೊಡಿಸಿ ತನ್ನದೇ ಆದ ಹೊಗಳುಭಟ್ಟರ ಗುಂಪನ್ನು ಕಟ್ಟಿಕೊಂಡು ತಾನೇ ಮಹಾ ಸಾಧಕ ಎಂದು ಮೆರೆಯುತ್ತಾರೆ. ಇವರೆಲ್ಲ ಬರಿ ಸ್ವಾರ್ಥಿಗಳು. ತಾನು ಬೆಳೆಯದಿದ್ದರೂ ತನ್ನೊಂದಿಗಿರುವವರು ಬೆಳೆಯಲು ಪ್ರೋತ್ಸಾಹ ನೀಡುವ ನಿಸ್ವಾರ್ಥ ಕೈಗಳು ಇಂದು ಕಾಣಿಸುತ್ತಿಲ್ಲ. ಏಕೆಂದರೆ ತಾನಿರುವವರೆಗೆ ಎಷ್ಟು ಸಾಧ್ಯವೋ ಅಷ್ಟು ಲಾಭವನ್ನು ಮಾಡಿಕೊಳ್ಳುವ ಸ್ವಾರ್ಥ ಲಾಲಸೆಯಿಂದ ತನ್ನ ಹೊಗಳುಭಟ್ಟರನ್ನು ಮಾತ್ರ ಬೆಳೆಸುವ ಅಲ್ಲಲ್ಲ ಬಳಸಿಕೊಳ್ಳುವ ಸ್ವಾರ್ಥ ಸಾಧಕರೆ ಹೆಚ್ಚು.

       ತಾನು ಸಾಧನೆ ಮಾಡಿ ಸಾಧಕ ಎನಿಸಿಕೊಳ್ಳುವುದು ದೊಡ್ಡದಲ್ಲ. ಜೀವನದಲ್ಲಿ ತನಗಾದ ಅನುಭವಗಳ ಆಧಾರದ ಮೇಲೆ ನಾನು ಬೆಳೆಯದಿದ್ದರೂ ಪರವಾಗಿಲ್ಲ ನನ್ನ ಸುತ್ತಮುತ್ತಲಿನ ಹತ್ತಾರು ಪ್ರತಿಭೆಗಳು ಬೆಳೆದು ಸಮಾಜಕ್ಕೆ ತನ್ನ ಕೊಡುಗೆಗಳನ್ನು ನೀಡುತ್ತಾ ಹೋದಾಗ ಬೆಳೆಸಿದ ಕೈಗಳು ಸಾರ್ಥಕತೆಯ ಹಿಂದಿನ ಚಪ್ಪಾಳೆ ಆಗಿ ಉಳಿಯುತ್ತಾರೆ. ಎಲ್ಲ ರಂಗದಲ್ಲೂ ಎಲ್ಲರಿಗೂ ಗಾಡ್ ಫಾದರುಗಳು ಸಿಗುವುದಿಲ್ಲ. ಗಾಡೇ ಫಾದರ್ ಆಗಿ ಬೆಳೆದ ಆದಷ್ಟು ನಿದರ್ಶನಗಳು ನಮ್ಮ ಕಣ್ಣ ಮುಂದೆ ಇವೆ. ಅಂದರೆ ಬೆಳೆಸುವವರು ಯಾರೂ ಇಲ್ಲದಿದ್ದರೂ ಕೂಡ ತನ್ನೊಳಗಿನ ಪ್ರತಿಭೆ ಎಂಬುದು ಸುಮ್ಮನೆ ಕೂರಲು ಬಿಡದೆ ತಾನೇತಾನಾಗಿ ಸಿಕ್ಕ ಸಣ್ಣಪುಟ್ಟ ಅವಕಾಶಗಳನ್ನೇ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಮೇಲೆ ಹತ್ತಿ ಸಾಧಕರಾಗಿ ತಮ್ಮ ಛಾಪನ್ನು ಮೂಡಿಸುತ್ತಾರೆ. ಆದರೆ ಇಂಥವರು ಕೇವಲ ಬೆರಳೆಣಿಕೆಯಷ್ಟು ಜನ ಮಾತ್ರ ಸಿಗಬಹುದು. ಆದರೆ ಅದೆಷ್ಟೋ ಜನ ತಮ್ಮನ್ನ ಬೆಳೆಸುವವರು ಸಿಗಲಿಲ್ಲ ಎಂದು ಕೊರಗಿ ಸೊರಗಿ ಕಮರಿ ಹೋಗಿದ್ದಾರೆ. ಇದು ಅವರ ತಪ್ಪಲ್ಲ ಯಾರ ಪ್ರೋತ್ಸಾಹವಿಲ್ಲದಿದ್ದರೂ ಬೆಳೆಯುವ ಕಲೆ ಅವರಿಗೆ ಸಿದ್ಧಿಸಿರುವುದಿಲ್ಲ ಅಷ್ಟೇ. ಬೆಳೆಯಬೇಕೆಂಬ ಹಂಬಲವಿರುವ ಒಂದು ಬೀಜ ಕಲ್ಲುಬಂಡೆಗಳ ಸಣ್ಣ ಕೊರಗಿನಲ್ಲಿ ಸಿಲುಕಿ ಮೊಳಕೆಯೊಡೆದು ಬೆಳೆಯುವುದನ್ನು ನಾವು ಸ್ಪೂರ್ತಿಯಾಗಿ ತೆಗೆದುಕೊಂಡು ತನ್ನತನವನ್ನು ಇನ್ನೊಬ್ಬರಿಗೆ ಮಾರಿಕೊಳ್ಳದೆ ಯಾರೋ ಬೆಳೆಸುತ್ತಾನೆ ಎಂಬುವನಲ್ಲಿ ಒತ್ತೆ ಇಡದೆ ಇದ್ದುದರಲ್ಲಿಯೇ ಗೆದ್ದು ಬೆಳೆಯಬೇಕು. ಈ ಸಮಾಜದಲ್ಲಿ ಒಬ್ಬ ಸಾಧಕನಿಗೆ ಮಾತ್ರ ಮನ್ನಣೆ ಸಿಗುತ್ತದೆ. ಸಾಧನೆಯ ಹಾದಿಯಲ್ಲಿ ಸೋತವರು ಸಮಾಜದ ತಿರಸ್ಕಾರಕ್ಕೆ ತುತ್ತಾಗಿ ಅಳಿದು ಹೋಗುತ್ತಾರೆ. ಅದಕ್ಕಾಗಿಯೇ ನಾವುಗಳು ಸಾಧಕರಾಗುವ ನಿಟ್ಟಿನಲ್ಲಿ  ಎಲ್ಲ ಏಳುಬೀಳುಗಳನ್ನು ಸಹಿಸಿ ನಿಂದೆ ಅವಮಾನಗಳ ರುಚಿಯನ್ನು ಕಂಡು ಮುಂದೆ ಎದ್ದು ಗೆದ್ದು ಬರುತ್ತೇನೆ ಎಂಬ ಆತ್ಮವಿಶ್ವಾಸದಿಂದ ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ಕಾರ್ಯತತ್ಪರರಾಗಬೇಕು. ಅಪ್ರಮಾಣಿಕನಾಗಿ ಸಾಧನೆ ಮಾಡಿ ನೂರು ಜನರಿಗೆ ಗೊತ್ತಾಗುವುದು ಬೇಡ ತನ್ನ ಪ್ರಾಮಾಣಿಕವಾದ ಹಾದಿಯಲ್ಲಿ ಸಾಗುತ್ತಾ ಹತ್ತು ಜನರಿಗೆ ಗೊತ್ತಾದರೆ ಸಾಕು ಅದು ದೊಡ್ಡ ಸಾಧನೆಯ ಆಗಿರುತ್ತದೆ. ಹಾಡುವ ಕೋಗಿಲೆಗೇಕೆ ಬಿರುದು ಸನ್ಮಾನಗಳ ಗೊಡವೆ. ತನ್ನದೇ ಸ್ವಂತ ಗೂಡು ಇಲ್ಲದಿದ್ದರೂ ಕಾಗೆಯ ಕಾವಿನಿಂದ ಮರಿಯಾದರೂ ಅದೇ ಕಾಗೆಯ ಆಕ್ರಮಣಕ್ಕೆ ತುತ್ತಾದರೂ ಚೈತ್ರ ಕಾಲ ಬಂದಾಗ ಇಂಪಾಗಿ ಹಾಡಿ ಜನ ಮನಸೂರೆಗೊಳ್ಳುವಂತೆ ನಾವುಗಳು ಕೂಡ ನಮ್ಮ ಕ್ಷೇತ್ರದಲ್ಲಿ ತುಳಿಯುವವರ ಅಡಿಯಲ್ಲಿಯೇ ಬೆಳೆದು ಸಮಾಜಕ್ಕೆ ನಮ್ಮ ಪ್ರತಿಭೆಯ ಫಲವನ್ನು ಉಣಬಡಿಸಬೇಕು. ಆ ಮೂಲಕ ತನ್ನ ನಿಸ್ವಾರ್ಥ ಸಾಧನೆಯ ಹಾದಿಯಲ್ಲಿ ಉಳಿದವರಿಗೆ ದಾರಿ ದೀಪವಾಗಬೇಕು. ಬೆಳೆಯುವವರಿಗೆ ಮರದ ಆಸರೆಯಾಗಬೇಕು. ತಾನೊಬ್ಬನೇ ಸಾಧಕ ಆಗುವ ಬದಲು ಹತ್ತಾರು ಸಾಧಕರ ಸಾಧನೆಯ ಹಿಂದಿನ ಮಹಾ ಪೋಷಕನಾಗಿ ಹೆಮ್ಮೆ ಪಡಬೇಕು. ಆಗಲೇ ಜೀವನ ಸಾರ್ಥಕತೆಯ ಸಂತೃಪ್ತಿಯನ್ನು ನೀಡುತ್ತದೆ.

—————————–




Leave a Reply

Back To Top