ಹೇಗಿದ್ದಳವಳು

ಕಾವ್ಯ ಸಂಗಾತಿ

ಹೇಗಿದ್ದಳವಳು

ದೇವರಾಜ್ ಹುಣಸಿಕಟ್ಟಿ.

ಹೀಗೆ
ಇದ್ದಳವಳು…

ದುಃಖದಲಿ….
ಕಡು ಕಪ್ಪು ಕಾವ್ಯ
ನೀಲಿಬಾನ ತುಂಬಿ ಹರಡಿದಂತೆ….
ಎದೆ ನೆಲದಿ ನೋವು ಸೆರಗು ಹಾಸಿದಂತೆ…
ಜೋಗುಳದ ಹಾಡು ತಂತಾನೆ ಬಿಕ್ಕಳಿಸಿದಂತೆ….

ಹೀಗೆ
ಇದ್ದಳವಳು…

ಸಂತಸದಲಿ
ಎದೆಯಂಗಳದಿ…
ನಗೆ ಗಡಲ ಮಾತು ತೇಲಿದಂತೆ…..
ಚಿಟ್ಟೆಗೆ ರೆಕ್ಕೆಮೂಡಿ ಕನಸಕಟ್ಟಿ ಹಾರಿದಂತೆ….
ಜೊನ್ನ ಹಕ್ಕಿ
ಶೂನ್ಯವಳಿದು ಬಣ್ಣ ಬಳಿದು….
ಕಣ್ಣ ತೊಳೆದು….
ಕಂಗಳೆಂಬ ಬಟ್ಟಲಲ್ಲಿ
ದಿಗಂತವನ್ನೆ ಮುಟ್ಟಿದಂತೆ…..!

ಹೀಗೆ
ಇದ್ದಳವಳು…

ಜೊತೆಗೆ….
ನನ್ನ ಬದುಕ ಚಾದರವ ನಾಜುಕು
ನಗೆಯಿಂದ ಹೆಣೆದು
ಗೊಂಡೆ ಕಟ್ಟಿ..
ಪುಂಡೆ ಹೂವ ಬಿಡಿಸಿ…
ಕಣ್ಣಲ್ಲಿ ಕಣ್ಣಿಟ್ಟು ಕಾದು…..
ಎದೆಯ ಬನದ ತುಂಬ ಹಾಲ್ಬೆಳಕ ಮುತ್ತನಿಕ್ಕಿ…
ಒಲವೆಂಬ ಬೆಳಕ ಬೀಜ ಸಾಲು ಸಾಲು ವಕ್ಕಿ…
ನನ್ನ ಹಗಲಿರುಳೆoಬ ರೆಕ್ಕೆ ಕದ್ದು
ಮತ್ತೆ ಮತ್ತೆ ಹಾಸಿ ಹೊದ್ದು…
ಕನಸು ಕಂಬನಿಯೆಲ್ಲ ಮೆದ್ದು….
ಹಾರಿಹೋದ ಬನದ ಹಕ್ಕಿಯಂತವಳು…..

ಹೀಗೆ
ಇದ್ದಳವಳು…..

ಸೀಮಾತೀತಳಾದವಳು…..
ಮೈ ಮನದಿ ಕೇದಿಗೆಯ ಪರಿಮಳದವಳು
ಒಲ್ಲೆನೆಂದರು ಬಿಡದ ಮಾಯೆಯಾಗಿದ್ದಳು…..
ನೆನಪಿನ ಬಿಕ್ಕಳಿಕೆಯಾಗಿ ಉಳಿದವಳು…
ಕತ್ತಲೆಯ ಹಗಲುಗಳ ನನಗಾಗಿ ಉಳಿಸಿಹೋದವಳು….

ಹೀಗೆ
ಇದ್ದಳವಳು…..

ನಾದವಿಲ್ಲದ ವೀಣೆ
ತಂತಿಯಿಲ್ಲದ ವಾದ್ಯ
ನೀರಿಲ್ಲದ ಕೊಳವ

ನನಗಾಗಿ ಉಳಿಸಿ ಹೊರಟು ಹೋದಳು….
ಎಷ್ಟೆoದಿರಿ ಇಷ್ಟೇ ಅಂದ್ರ್ ಇಷ್ಟೇ
ನನ್ನಾತ್ಮ ಕದ್ದು ದೇಹ ಉಳಿಸಿ ಎದ್ದು ಹೋದಳು…

ಹೀಗೆ
ಇದ್ದಳವಳು….


ದೇವರಾಜ್ ಹುಣಸಿಕಟ್ಟಿ.

Leave a Reply

Back To Top