ಮಹುವಾ

ಅನುಭವ ಕಥನ

ನೂತನ ಕುಲಕರ್ಣಿ

“ದೀದೀ, ಏಕ ಪ್ಲಾಸ್ಟಿಕ್ ಕವರ್ ದೇದೋನಾ” ಅಂತ ಅನಕೋತ ಶ್ರೀಮತಿ ಒಳಗ ಬಂದಳು. ನಾ ಆಕಿಗೆ ಕವರ ಕೊಟ್ಟೆ. ಶ್ರೀಮತಿ ತನ್ನ ಸೆರಗಿನೊಳಗ  ಇದ್ದ ಮಲ್ಲಿಗಿ ಹೂನಂಥಾದ್ದೇನೋ ತಗದ ಕವರನ್ಯಾಗ ಹಾಕಿದ್ಲು. ” ಏ ಕ್ಯಾ ಹೈ ಶ್ರೀಮತಿ?”ಅಂತ ಕೇಳಿದೆ.”ದೀದೀ ನಿಮಗ ಗೊತ್ತಿಲ್ಲಾ ? ಇದು ಮಹುವಾ ಹೂ” ಅಂತಂದ್ಲು. “ಹೌದs , ತೋರಸ ನೋಡೋಣು ಹೆಂಗದ ಅಂತ” ಅಂದೆ. ಹೆಣ್ಣ ಮಕ್ಕಳಿಗೆ ಹೂವಂದ್ರ ಸಾಕ , ಜೀವಾ ಬಿಡೋದs. ಆಕಿ ಒಂದ ನಾಕ ಹೂ ನನ್ನ ಕೈಯ್ಯಾಗ ಹಾಕಿದ್ಳು. ಆಹಾ ! ಸಣ್ಣsಕ ಮಂದ ವಾಸನಿ ಮೂಗಿಗೆ ಬಡಿತು. ತಿಳಿ ಹಸರು , ಕೆನಿ ಬಣ್ಣದ , ಮೆತ್ತನ , ನಮ್ಮ ದುಂಡ ಮಲ್ಲಿಗಿ ಹೂವಿನಕಿಂತಾ ಸ್ವಲ್ಪ ಧೊಡ್ಡ ಆಕಾರದ ಹೂಗಳವು. ಬೊಗಸ್ಯಾಗ ತೊಗೊಂಡ ಮೂಗಿಗೆ ಹಿಡದ , ಕಣ್ಣ ಮುಚ್ಚಿ , ವಾಸನಿ ತೊಗೊಂಡೆ ನೋಡ , ಮೆಲ್ಲsಗ ಮದಾ ಏರಿಧಂಗಾತು. ಅರೇ ಈ ವಾಸನಿ ಭಾಳ ಪರಿಚಿತ ಅನಿಸ್ತು. ದಿನಾ ಮಧ್ಯಾನ ಅಡಗಿ ಮಾಡೋವಾಗ ಖಿಡಕಿಯೊಳಗಿಂದ  ತೇಲಿ ಬರ್ತದಲಾ ಅದs ಇದು . ಬಾಜೂ ಮನಿ ಗೆಹಲೋಟ ಅವರು ಬಾಸಮತಿ ಅಕ್ಕಿದ ಅನ್ನಾ ಮಾಡತಾರ ನೋಡು ಹೆಂಥಾ ಛಂದ ಭೀನಿ ಭೀನಿ ಗಂಧ ಬರ್ತದ , ಅಂತ ಅನಕೋತಿದ್ದೆ.ಈಗ ಗೊತ್ತಾತು ಅದು ಬಾಸಮತಿ ಅಕ್ಕಿ ವಾಸನಿ ಅಲ್ಲಾ , ಮಹುವಾ ಹೂವಿಂದು ಅಂತ. “ಶ್ರೀಮತಿ , ಮಹುವಾ ಹೂ ದೇವರಿಗೆ ಏರಸತೀರೇನು, ಮತ್ತ ಮಾಲಿ ಮಾಡಿ ಮುಡಕೋಬಹುದೇನು?” ಅಂತ ನಾ ಅಂದ್ರ ಆಕಿ ಜೋರಾಗಿ ನಕ್ಕೋತ ” ಕಾ ಬಾತ ಕರತ ಹೋ ದೀದೀ. ಈ ಹೂ ದೇವ್ರಿಗೆ ಏರಸೋದಲ್ಲಾ , ನಾವ ಮುಡಕೋದಲ್ಲಾ.”ಅಂದ್ಲು. ನಮ್ಮ ಕಡೆ ಹಿಡಿ ಹೂ ತಂದ್ರ , ದೇವ್ರ ತಲಿಗೆ ಎರಡ ಏರಸಿ , ಬಾಕಿ ಮಾಲಿ  ಮಾಡಕೊಂಡ  , ಹೆರಳಿಗೆ  ಸಿಗಿಸಿಕೊಂಡ್ರ ಸಮಾಧಾನ  ನಮ್ಮ ಹೆಣ್ಣ ಮಕ್ಕಳಿಗೆ.  ಗುಲಾಬಿ , ಗುಲಛಡಿ , ಶ್ಯಾವಂತಿಗಿ ಹೂಯೇನರ ಇದ್ರ , ಒಂದ ಗ್ಲಾಸನ್ಯಾಗ ನೀರ ಹಾಕಿ , ಅದರಾಗ ಹೂ ಇಟ್ಟು , ಡ್ರಾಯಿಂಗ್ ರೂಮಿನ ಟೇಬಲ್ ಮ್ಯಾಲ ಇಟ್ಟ ಬಿಟ್ರ ಮುಗೀತು , ಹೂವಿನ ಕೆಲಸಾ.ಏನೂ ಇಲ್ಲದsನ ಇಂಥಾ ಹೂ ಇಷ್ಟೋಕೊಂದ ತೊಗೊಂಡ ಏನsರೆ ಮಾಡತಾರ ಇವರು ಅನಿಸ್ತು. ಕೇಳಿದೆ . ಶ್ರೀಮತಿ ತುಂಟ ನಗಿ ನಕ್ಕೋತ “ದೀದೀ ಮಹುವಾ ಕೋ  ಪಾನಿ ಮೇಂ ಡಾಲಕರ , ಖಟಾಯಿ ಕರಕೆ , ಬಢಿಯಾ ದಾರೂ ಬನಾತೇ ಹೈಂ ಹಮ್. ರಾತ ಮೇಂ ಏಕ ಏಕ ಗಿಲಾಸ ಲಗಾಕೆ ಸೋನೇಸೆ , ಐಸೀ ನೀಂದ ಆವೇಗಿನಾ , ಸುಭೇ ಪಂಛಿ ಜೆಸಾ ಹೋವತ ಹೈ” ಅಂದ್ಳು. “ಬನಾದೂಂ ಆಪಕೋ ಭೀ?” ಅಂತ ಹುಬ್ಬ ಹಾರಿಸಿ , ಚಿಟಕಿ ಹೊಡದ ನಕ್ಕಳು. ಬ್ಯಾಡ ನಮ್ಮವ್ವಾ , ಎಲ್ಲೀದ ಉಸಾಬರಿ ಅಂದೆ.  “ಚಾಹೆ ತೋ ಸಾಬಜೀ ಕೆ ಲಿಯೆ ಬನಾಕೆ ಲಾಊಂ? ” ಅಂತ ಕಣ್ಣ ಹೊಡದ  ಕೇಳಿದ್ಳು . “ಕ್ಯೂಂ ಶ್ರೀಮತಿ ಕಾಮ ಕರನಾ ಹೈ ಕೆ ಭಗಾಊಂ ತುಮ್ಹೆ?” ಅಂದ ಕೂಡಲೇ , “ಐಸೇ ಹೀ ಪೂಛಾ ದೀದೀ. ” ಅನಕೋತ ಒಳಗ ನಡದ್ಲು.
                 ಉತ್ತರ ಪ್ರದೇಶದ ಅಮೇಠಿ ಹತ್ತಿರದ ಕೋರವಾ ಅನ್ನೋ ಸಣ್ಣಾತಿ ಸಣ್ಣ ಹಳ್ಳಿಗೆ ನಮ್ಮ ಮನೆಯವರ ಪೋಸ್ಟಿಂಗ್ ಆಗಿತ್ತು. ಹಳ್ಳೂರಾದ್ರೂ ಎಚ್ ಎ ಎಲ್ ಕ್ಯಾಂಪಸ್ ಅಂತೂ ಭಾಳ ವ್ಯವಸ್ಥಿತ ಇತ್ತು. ಹತ್ತಿರದ ಪುಟ್ಟ ಪುಟ್ಟ ಹಳ್ಳಿಗಳಿಂದ ಶ್ರೀಮತಿಯಂಥ ಅನೇಕರು ಮನೆಗೆಲಸಕ್ಕೆ ಬರುತ್ತಿದ್ದರು. ಆಕಿ ಹೇಳಿಧಂಗ ನಮ್ಮ ಕ್ವಾರ್ಟರದಿಂದ ಹತ್ತ ಹೆಜ್ಜಿ ದೂರದಾಗs ಮಹುವಾ ಗಿಡಾ ಒಂದ ಇತ್ತು. ಹತ್ತರ ಹೋಗಿ ನೋಡಿದ್ರ ಭಾಳಷ್ಟ ಹೂಗೊಳು ನೆಲಕ್ಕ ಬಿದ್ದ ಬಾಡಿದ್ದು. ಅದನ್ನ ನೋಡಿ ಸಣ್ಣ ನಗಿಯೊಂದ ಬಂದ ಹೋತು. ಲೋಕಲ್ ಮಂದಿಗೂಡ ವಿಚಾರಿಸಿದಾಗ ಮಹುವಾದ ಬಗ್ಗೆ ರಗಡs ಮಾಹಿತಿ ಸಿಕ್ತು. ಮಹುವಾ ಉತ್ತರ ಪ್ರದೇಶ  , ಬಿಹಾರ , ಝಾರಖಂಡ, ಮಧ್ಯಪ್ರದೇಶ ,ಛತ್ತಿಸಗಡ, ಓಡಿಸಾ, ಮಹಾರಾಷ್ಟ್ರ, ಆಂಧ್ರಪ್ರದೇಶ , ತಮಿಳುನಾಡು ರಾಜ್ಯಗಳ ಕೆಲ ಭಾಗಗಳಲ್ಲಿ ಚಿರ ಪರಿಚಿತ ಹೂ‌. ಆ ಹೂವಿನ ಭಾಂಗ ಅಂತೂ ಇನ್ನೂ ಫೆಮಸ್! ಅದರ ಎಲಿ , ಕಾಂಡ , ಹೂ , ಬೇರು , ತೊಗಟಿ, ಬೀಜ…ಅಂತ ಎಲ್ಲಾ ಭಾಗನೂ ಉಪಯೋಗಿ. ಔಷಧಕ್ಕೂ ಬಳಸತಾರಂತ. ಗುಡ್ಡಗಾಡು  ಜನಾಂಗಗಳ ಹಬ್ಬ ಹರಿದಿನ ,ಸಮಾರಂಭಗಳಲ್ಲಿ ಮಹುವಾದ ಪಾನೀಯ ನಮ್ಮ ಶ್ಯಾವಿಗಿ ಪಾಯಸದಷ್ಟs ಮುಖ್ಯ!ಹೂ ಒಣಗಿಸಿ , ಪುಡಿಮಾಡಿ ಆಹಾರದಾಗೂ ಬಳಸತಾರಂತ.  ಕೃಷಿಕರು  , ಕಷ್ಟಾಳುಗೊಳು ಆವಾಗೀವಾಗ ಮಹುವಾದ ದಾರೂ ಹೊಟ್ಯಾಗ ಇಳಸಿ , ಮಬ್ಬ ತಲಿಗೇರಸಿ ಮಲಕೊಂಡ್ರ, ಮರದಿನಾ ದಣಿಕಿ ಹರದ , ಹಕ್ಕಿ ಹಂಗ ಹಗರ ಅಗ್ತಾರಂತ. ಕೂಲಿ ಕಾರ್ಮಿಕ ಹೆಣ್ಣುಮಕ್ಕಳೂ ಸರಾಸಾಗಿ ಹೊಡೀತಾರಂತ. ( ಹೌದ ಮತ್ತs ಹೆಂಗಸರ ದಣಿವು‌ ಹೋಗೋದ ಬ್ಯಾಡೇನ?)  ಹಳ್ಳಿ ಹಾದ್ಯಾಗಿನ ಗಿಡಗೊಳನ್ನ ಹುಡಕಿಕೊಂಡ ಹೋಗಿ, ಹೆಣ್ಣ ಮಕ್ಕಳು , ಸಣ್ಣ ಮಕ್ಕಳು ಹೂ ಆರಸೋದೂ ಒಂದ ಸಂಭ್ರಮದ ಕೆಲಸನೂ ಹೌದು , ಅನಿವಾರ್ಯದ ಕೆಲಸನೂ ಹೌದು!ಆರಿಸಿದ ಹೂಗೊಳ ಸಣ್ಣ ಸಣ್ಣ ಗುಂಪಿ ಮಾಡಿ , ಎರಡೋ , ಮೂರೋ ರೂಪಾಯಿಗೆ ಒಂದರ್ಹಂಗ ಮಾರಿ , ಪುಡಿಕಾಸ ಗಳಸೋ ಬಡತನನೂ ಅಷ್ಟs ಖರೇಸತ್ಯ!  (ಮಹುವಾ ಅಂತ ಹುಡುಗಿಯರ ಹೆಸರು ಇರ್ತದ. ಮಹುವಾ ಹೆಸರಿನ ಚಾನೆಲ್ ಸಹಿತ ಅದ)
                  ದಿನಾ ಹತ್ತಕ್ಕ ಬರೋ ಶ್ರೀಮತಿ ಆವತ್ತ ಹನ್ನೆರಡಾದ್ರೂ ಬರೋ ಸುದ್ದಿನs ಇಲ್ಲಾ. ” ಈಕಿ ಮಹುವಾ ಹುಡಕ್ಕೋತ ಹೋಗ್ಯಾಳೇನೋ ಮಾರಾಯ್ತಿ. ಇಲ್ಲಾ ರಾತ್ರಿ ಇಳಿಸಿದ್ದ ಜಾಸ್ತಿ ಆಗಿರಬೇಕ , ಭಾನ ಇಲ್ಲದನ ಬಿದ್ದಿರಬೇಕ” , ಅಂತೆಲ್ಲಾ ಮನಸನ್ಯಾಗ ಬೈಕೋತ ಕೂತಿದ್ದೆ. ಅಷ್ಟರಾಗ ಭರ್ ಭರ್ ಅಂತ ಬಿರಗಾಳಿ ಬಂಧಂಗ ಬಂದೆರಗಿದ್ಳು ನಮ್ಮ ಶ್ರೀಮತಿ. ಬಂದಾಕಿನs  ಧೊಪ್ ಅಂತ ನೆಲಕ್ಕ ಬೀಳೋ ಥರಾ ಕುಕ್ಕರಿಸಿದ್ಳು. ಕೆದರಿ ಹರವಿದ ಕೂದಲಾ, ನಿಗಿನಿಗಿ ಕೆಂಡಧಂಥಾ ಮಾರಿ  , ಥರಥರಾ ನಡಗೋ ಮೈ! ಮಾತಿಲ್ಲಾ , ಕಥಿಯಿಲ್ಲಾ , ಧುಸುಧುಸು ಉಸರಾಡೋ ಶ್ರೀಮತಿ ಆವತ್ತ ಸಾಕ್ಷಾತ್ ರುದ್ರಾವತಾರದಾಗಿದ್ಲು. ಓಡಿ ಹೋಗಿ ನಾನು ನೀರಿನ ತಂಬಿಗಿ ತುಂಬಿ ತಂದು “ಮದ್ಲ ನೀರ ಕುಡಿ” ಅಂತ್ಹೇಳಿ ಕೊಟ್ಟೆ. ತಂಬಿಗಿ ಎತ್ತಿ ನೀರ ಗಟಗಟ ಗಂಟಲಿಗೆ ಸುರಕೊಂಡು ಖಾಲಿ ಮಾಡಿದ್ಲು.  “ಅಬ್ ಬತಾ, ಕಾ ಭವಾ?” ಅಂದೆ. “ಕೇ ಬತಾದೂಂ ದೀದಿ . ಅಭಿ ಮೈಂ  ದರೋಗಾ ಥಾನೇಸೆ ಆ ರಹಿ ಹೂಂ” ಅಂದ್ಳು. ಅಯ್ಯೋ ರಾಮಾ ನೀ ಯಾಕ ಪೋಲೀಸ್ ಠಾಣೆಗೆ ಹೋಗಿದ್ದಿ ಶ್ರೀಮತಿ ಅಂತ ನಾ ದುಗುಡದಿಂದ ಕೇಳಿದೆ. ಇಷ್ಟ ಕೇಳೋದs ತಡಾ  ಆಕಿ ಮೈಯ್ಯಾಗ ಆವಾಹನಿ ಆದವರ್ಹಂಗ ,” ಛೋಡೂಂಗಿ ನಾ. ರಪಟ ಲಿಖವಾಯಾ ಹೈ ಮೈನೆ.
ಬದಮಸೋಂನೆ  ಕೇ ಸಮಝ ರಖ್ಖಾ ಹೈ ?* ಒದರಾಡಲಿಕ್ಕೆ ಸುರು ಮಾಡಿದ್ಲು. ಈಗ ನಾನು ಒಳಗ ಹೋಗಿ , ಪ್ಲೇಟ ತುಂಬ ಉಪ್ಪಿಟ್ಟು ತಂದಕೊಟ್ಟು “ಪೆಹೆಲೆ ಖಾಲೋ” ಅಂದೆ. ಹಸಿದಿದ್ದಳೇನೋ ಪಾಪ, ಗಬಗಬನೇ ತಿಂದು, ಸ್ವಲ್ಪ ಶಾಂತ ಆದಳು. ಒಮ್ಮೆಲೇ ಹೋ ಅಂತ ಅಳಲಿಕ್ಕೆ ಹತ್ತಿದಳು. ಆಮೇಲೆ ಎಲ್ಲ ವಿಷಯ ತಿಳಿಸಿದ್ಲು. ಮೇ ತಿಂಗಳ ಸೂಟಿ‌ ಇತ್ತು. ಶ್ರೀಮತಿ ಮಕ್ಕಳು (೧೦-೧೨ ವರ್ಷದವ್ರು), ಅವರ ಆಜೂ ಬಾಜೂ ಮನಿ ಮಕ್ಕಳು ಸೇರಿ ಮಹುವಾ ಹೂ ಆರಿಸಲಿಕ್ಕೆ ಹೋಗಿದ್ರಂತ. ಒಂದೆರಡು ಹುಡುಗ್ರು ಗಿಡದ ಮ್ಯಾಲ ಹತ್ತಿ ಹೂ ಹರದು , ಉದರಿಸಿ ಅಂತನೂ , ಮತ್ತ ಒಂದರೆಡು ಕೆಳಗ ಬಿದ್ದ ಹೂ ಆರಸೋದಂತನೂ ನಡಸಿದ್ದರು. ಅಷ್ಟರಾಗ ಅಲ್ಲೆ ಇದ್ದ ಮನ್ಯಾಗಿನ ಟೊಣಪ ಒಬ್ಬಾಂವ  ಹೊರಗ ಬಂದ ಹುಡುಗ್ರನ್ನ ಜಬರಿಸಿ ಓಡಿಸಿದ್ನಂತ. ಆಂವ ಒಳಗ ಹೋಗೋದ ತಡಾ ಈ ಹುಡುಗ್ರು ಮತ್ತ ಹೂ ಆರಸಲಿಕ್ಕೆ ಸುರು.  ಈ ಸಲಾ ಆ ಮನಷ್ಯಾ ಬಡಗಿ ಹಿಡಕೊಂಡ ಬಡೀತನಂತ  ಬಂದು ” ಏ ಮಹುವಾ ಕಾ ಪೇಡ ಮೇರಾ ಹೈ . ಆರಸಿದ ಹೂ ಹೊಳ್ಳಿ ಕೊಡ್ರಿ , ಇಲ್ಲಾಂದ್ರ ಖೈರಿಯತ್ ಇರುದಿಲ್ಲಾ ಹೂಂ” ಅಂದ. ಹಳ್ಳಿ ಹುಡುಗ್ರೇನು ಕಡಿಮಿ?
” ಪೇಡ ರಾಸ್ತೆ‌ಪರ ಹೈ. ಸಡಕ ಸರಕಾರಿ ಹೈ. ಸರ್ಕಾರೀ ಪೇಡ ತುಮ್ಹಾರಾ  ಕೈಸಾ ಹುವಾ? ಹಮ್ ಮಹುವಾ ಬೀನಕರ ರಹೇಂಗೆ”
ಅಂತ ವಾದಿಸಿದ್ರು.” ಉಲ್ಟಾ ಜವಾಬ ದೇತೇ ಹೋ , ಮಕ್ಕಾರ ಕಹೀಂ ಕೇ.” ಅಂತ ಸಿಟ್ಟಿಗೆದ್ದು ಸಿಕ್ಕಾಪಟ್ಟೆ ಹುಡುಗ್ರನ್ನ ಬಡದಬಿಟ್ಟಾ. ಮದಲs ಸಣ್ಣ ವಯಸ್ಸು , ಎಳೇ ದೇಹಾ , ಬಡತಾ ತಡೀಲಾರದ್ದಕ್ಕ ಕಣ್ಣಿಗೆ ಕತ್ತಲಿ ಬಂದು ಬಿದ್ದುವಂತ ಎರಡು ತೀರಾ ಚಿಕ್ಕಮಕ್ಕಳು. ಕೆಲಸ ಮುಗಿಸಿ ಮನಿಗೆ ಹೋದ ಅಪ್ಪ ಅವ್ವಂದಿರಿಗೆ ಸುದ್ದಿ ತಿಳದು ಕೆಂಡಾಮಂಡಲ ಆದ್ರು. ಆಜೂ ಬಾಜೂ ಅತ್ಲಾಗ ಹಿತ್ಲಾಗ ಅಂತ ಹತ್ತಾರ ಮಂದಿ ಕೂಡಿ ಒಂದ ಕೈ ನೋಡೇ ಬಿಡೋಣಂತ ಮತ್ತ ಆ ಟೊಣಪನ ಮನಿಗೆ ಹೋದ್ರು. ಅವನ ವಾದ ಒಂದs ” ಸರ್ಕಾರಿ ರಸ್ತಾ ಹೋತೋ ಕಾ, ಹಮರೇ ಘರ ಕೆ ಸಾಮನೆವಾಲಾ ರಸ್ತಾ ಹಮರಾ. ಊ ಪೇಡ ಭೀ ಹಮರಾ , ಊಕಾ ಫೂಲ ಭೀ ಹಮರಾ”.
ಅಂವಾ ಬ್ಯಾರೆ ರೊಕ್ಕಸ್ರ. ದರೋಗಾ , ಪೋಲೀಸ್ , ರಪಟ (ರಿಪೋರ್ಟ್) , ಥಾನಾ … ಇವೆಲ್ಲಾ ಯಾವ ಲೆಕ್ಕಾ? ” ಜೇ ಉಖಾಡನಾ ಉಖಾಡಲಿಯೋ!” ಅಂದುಬಿಟ್ಟ. ಇವರೂ ಪೋಲೀಸ್ ಸ್ಟೇಶನಗೆ ಹೋಗಿ ಕಂಪ್ಲೇಂಟ್ ಏನೋ ಕೊಟ್ರು. ಪೋಲೀಸರೂ ನೂರ ಮುರಕಾ ಮಾಡಿ , ಕಂಪ್ಲೆಂಟ್ ಬರಧಂಗ ಮಾಡಿ, ಬಲಾ ಇಲ್ಲದ ಬಡವರನ್ನ ಮಂಗಳಿಸಿ ಕಳಿಸಿದ್ರು ಸಣ್ಣ ಹುಡುಗ್ರನ್ನ‌ ಹಿಗ್ಗಾಮುಗ್ಗಾ ಹೊಡದ ದೊಡ್ಡ ಮನಷಾನ್ನ ಕರದ ಪೋಲೀಸರು “ಯಾಕ” ಅಂತ ಒಂದ ಮಾತ ಕೇಳಲಿಲ್ವ , ದವಾಖಾನಿ ಖರ್ಚ ಸಹಿತ ಕೊಡಸಲಿಲ್ಲಾ.  ಇವರು ಆ ಟೊಣಪನ್ನ , ಪೋಲೀಸರನ್ನ ಹಾಕ್ಯಾಕಿಕೊಂಡು , ಅಚ್ಚ ಅವಧೀ ಭಾಷಾದಾಗ  ಬೈದದ್ದs ಬಂತು. ಹುಡುಗ್ರನ್ನ ಹೊಡದದ್ದ ನೋವು ಒಂದ ಕಡೆ, ಪೋಲೀಸರ ನಿರ್ಲಕ್ಷದಿಂದ ಆದ ನಿರಾಶೆ ಒಂದ ಕಡೆ, ಬಡತನದ ಅಸಹಾಯಕ ಸ್ಥಿತಿ ಒಂದ ಕಡೆ …ಎಲ್ಲಾ ಕೂಡಿ ಶ್ರೀಮತಿ ತೀರಾ ಹತಾಶ ಆಗಿದ್ಲು. ” ಕ್ಯೂಂ ದೀದೀ , ಹಮ್ ಗರೀಬ ಕೆ ಬಚ್ಚೆ ರಾಸ್ತೆ ಕೆ ಪೇಡ ಕಾ ಮಹುವಾ ಭೀ ನಹೀಂ ಲೇ ಸಕತ ಕಾ?  ಛುಟ್ಟೀ ಕೆ ದಿನೋಂ  ಫೂಲ ಬೇಚ ಕರ ಚಾರ ಪೈಸೇ ಭೀ ಕಮಾಯೇ ನಹೀಂ? ಸಚ ಮೇಂ ಗರೀಬಿ ಸ್ರಾಪ ಹೀ ಹೋವತ ಹೈ!” ಅನ್ನುತ್ತಾ , ಕಣ್ಣೀರು ಒರಸಿಕೊಳ್ಳುತ್ತಾ  ಕೆಲಸ ಮಾಡಲು ಒಳಗೆ ನಡೆದಳು. ಇದೆಲ್ಲಾ ಕೇಳಿ ನನಗೂ ಭಾಳ ತ್ರಾಸ ಅನಿಸ್ತು. ಶ್ರೀಮತಿಯ ಮಾತು ಮತ್ತ ಮತ್ತ ಕಾಡಲಿಕ್ಹತ್ತಿತು.
                 ಮರದಿನಾ ಬೆಳ್ಳ ಬೆಳಿಗ್ಗೆ ಎದ್ದು ವಾಕಿಂಗ್ ಮಾಡಲಿಕ್ಕೆ ಹೊಂಟೆ. ಇವರು ಆಶ್ಚರ್ಯದಿಂದ ಹುಬ್ಬೇರಿಸಿ ನೋಡಿದರು. ಅರ್ಧಾ ತಾಸಿನ ಮ್ಯಾಲೆ ಹೊಳ್ಳಿ ಬಂದಾಗ ಇವರು”ಎಂದಿಲ್ಲದ ವಾಕಿಂಗ್ ಇಂದ್ಯಾಕ  ಭಾಗೀರಥಿ? “ಅಂತ ರಾಗದಾಗ ಹಾಡಿದ್ರು. ” ಇನ್ನಮ್ಯಾಲ ದಿನಾ ವಾಕಿಂಗ್ ಹೋಗಬೇಕಂತ ಮಾಡೇನ್ರಿ.”ಅಂದೆ. ” ಅಬಾಬಾಬಾ , ಅದ್ಯಾವಾಗ ಬೋಧಿವೃಕ್ಷದ ಕೆಳಗ ಕೂತ ಬಂದಿ?” ಅಂತ ಹಾಸ್ಯಾ ಮಾಡಿದ್ರು. ” ಇದರ ಸಲವಾಗಿ ವಾಕಿಂಗ್ ಹೋಗೋದು.” ಅಂತ ಹೇಳಿ  , ಕೈಯಾಗಿನ ಪ್ಲಾಸ್ಟಿಕ್ ಕವರ ತೋರಿಸಿ ಹೇಳಿದೆ. ಅದರಾಗಿನ ಮಹುವಾ ಹೂ ನೋಡಿ  ಇವರು ,” ಯಾಕ ಮಹುವಾ ದೇಸಿ ದಾರೂ ರೆಸಿಪಿ ಕೇಳಕೊಂಡ ಬಂದೀಯೇನ? ಜೋಡಿ ಪ್ಯಾಜ ಪಕೋಡಾನೂ ಆಗ್ಲಿ ಮತ್ತ”, ಅಂತ ಫರಮಾಯಿಷಿ ಇಟ್ಟರು. “ಹೋಗ್ರೀ , ಸದಾಶಿವಗ ಅದs ಧ್ಯಾನ ಅಂತ! ದಿವಸಾ ಬೆಳಿಗ್ಗೆ ವಾಕಿಂಗ್ ಹೋಗಿ , ಮಹುವಾ ಆರಿಸಿಕೊಂಡ ಬಂದು , ಶ್ರೀಮತಿಗೆ ಕೊಡೋಣಂತ.  ಹಳ್ಯಾಗ ಯಾರಗರೆ ಮಾರಿ , ನಾಕ ದುಡ್ಡ ಗಳಿಸಿಕೊಳ್ಳಲಿ ಪಾಪ  . ಇಲ್ಲಿರೋ ಅಷ್ಟ ದಿನಾ ಮಾಡೋದು. ಮತ್ತೇನಿಲ್ಲಾ” ಅಂದೆ.

————————————


                                            
   

11 thoughts on “ಮಹುವಾ

  1. ತುಂಬಾ ಚೆನ್ನಾಗಿದೆ ಲೇಖನ…. ಮೇಡಂ…. ಭಾಷೆ, ನಿರೂಪಣೆ ಎರಡೂ ಚೆಂದ

  2. ಹೊಸದೊಂದು ವಿಷಯ ಸೊಗಸಾದ ಉತ್ತರ ಕರ್ನಾಟಕದ ಭಾಷೆ ಅವಧ ಭಾಷೆಯೊಡನೆ ಬೆರೆತ ಅಮಲಿನ ಘಮದೊಂದಿಗೆ ಅರ್ಥವಾಯ್ತು. ಅಭಿನಂದನೆಗಳು.

  3. ತುಂಬಾ ಸುಂದರವಾದ ನಿರೂಪಣೆ. ಬರೆಯುವ ಶೈಲಿ, ಶಬ್ದಗಳ ಕಣ್ಣು ಮುಚ್ಚಾಲೆ ಅತಿಶಯ ಭೇದಕ. ಸರಳವಾಗಿ ಓದಿಸಿಕೊಂಡು ಹೋಗುವಾಗ ಈ ಲೇಖನದ ಪ್ರೇಮದಲ್ಲಿ ಬೀಳುವದಂತು ಖಂಡಿತ.

  4. ಮಹುವಾ ಅನ್ನೋ ಹೂವಿನ ಉಪಯೋಗ, ಅದರಿಂದ ನಾಲ್ಕು ಕಾಸು ಸಂಪಾದಿಸಿಕೊಳ್ಳುವ ಬಡವರು, ರಸ್ತೆಯಲ್ಲಿ ಬೆಳದ ಮರ ತನ್ನದೆನ್ನುವ ಶ್ರೀಮಂತ, ಒದೆ ತಿಂದ ಮಕ್ಕಳಿಗೆ ಸಿಗದ ನ್ಯಾಯ. ಈ ಎಲ್ಲಾ ಘಟನೆಗಳು ಮನಸ್ಸಿಗೆ ಒಂಥರಾ ಅನ್ನಿಸುತ್ತಲೇ …ಧಾರವಾಡದ ಭಾಷಾ ಸೊಗಡು ಓದಲು ಖುಷಿಯೂ ಅನ್ನಿಸಿತು. ಸುಂದರವಾಗಿ ನಿರೂಪಿಸಿದ್ದೀರಿ‌. ಧನ್ಯವಾದಗಳು ಮೇಡಂ.

Leave a Reply

Back To Top