ಕಾವ್ಯ ಸಂಗಾತಿ
ನೀ ನನ್ನಭಿಮಾನ
ಶಾರು
ನನ್ನ ಹೃದಯ ವೀಣೆ ತಂತಿ ನೀ’
ಮಧುರತಮ ಶೃತಿ ಲಯದಿ
ಮೀಟಿದೆಲ್ಲ ಭಾವಸ್ಪರ್ಶಕೆ
ನೋವ ನೇವರಿಸಿದಂತೆ
ಜೀವ ಧ್ಯಾನದ ಭಾವ ಪ್ರತಿ ನೀ’
ಬೆಳದಿಂಗಳ ರಾಗಮಾಲಿಕೆ ನೀ’
ಭಾವಜಾಲದಲಿ ಸೆರೆಗೈದು
ಬೇಸರಿಕೆಯ ಬದಿಗಿರಿಸಿ
ಮೌನ ತಂಪಿರಿಸಿದಂತೆ
ನಾನೆಂಬ ಭಾವವ ಮರೆಸಿಹೆ ನೀ’
ಪ್ರತಿ ಘನ ಸುಮನ ಬೆಳಕು ನೀ’
ಹಾಡೊ ಹಕ್ಕಿಗಳಿನಿದನಿಯಲಿ
ಬೀಸಿಬರೋ ಮಂದನೀಲದಲಿ
ಮುಂಗುರುಳ ಭಾವಕೆ ಅರಳಿ
ಸ್ಪುರಿಸಿ ಪೊರೆವ ಚೆಲುವು ನೀ’
ಪಯಣ ಸಮತೆಯ ಪಣತಿ ನೀ’
ವಸಂತನೋದ್ಯಾನವನದಲಿ
ಮುದ ಮೋದದಾಮೃತಗಾನ
ಬಾಹು ಬಿಗಿದಪ್ಪುವ ಹಸಿರಿಗೆ
ಮದವಳಿದ ಲಜ್ಜೆಯೊಂದಿರಿಸಿದವ ನೀ’
ತುಂಬಿದ ಮನದ ನಂಬುಗೆಯು ನೀ’
ನೀಲಾಗಸದುತ್ಸವದಲಿ ಗುಲ್ಲು
ತಾರಕೆಗಳ ಬೃಂದಾವನದಲಿ
ನಯನಗಳಿಗೆ ಕೊಳಲಗಾನವ
ತುಂತುಂಬಿ ಮನಕೆ ನುಡಿಸಿದವ ನೀ’
ಬೆಳಕನುಂಡು ಬೆಳಕನುಟ್ಟ ದೈವ ನೀ’
ಹಗಲೆಲ್ಲ ಬಾಳ ಬಿಸಿಲಲಿ ದಣಿದು
ಇರುಳಲಿ ನಿನ್ನ ಬೆಚ್ಚನೆದೆಯ ಸಜ್ಜೆಯಲಿ
ನಿನ್ನ ಜೋಗುಳದುಲಿಗೆ ಕಣ್ಣೆವೆಗಳ
ಮುದ್ದಿಸಿ ಮಲಗಿಸುವ ಮಾಯಗಾರ ನೀ’ …