ಗಜಲ್
ಅಶೋಕ ಬಾಬು ಟೇಕಲ್
ಮಧುರ ದಾಂಪತ್ಯದ ಹಾದಿಗೆ ಮಲ್ಲೆ ಹಾಕಿಸುವೆ ಬಾ ಸಖ
ಮಧು ಮಂಟಪದಲಿ ಮಧುರ ಗೀತೆ ಕೇಳಿಸುವೆ ಬಾ ಸಖ
ಸಪ್ತಪದಿ ತುಳಿದಾಯ್ತು ಸ್ವಪ್ನ ಗಳು ಕಣ್ತುಂಬಿ ನಗುತ್ತಿವೆ
ತಂಗಾಳಿಗೆ ಮೈ ಸೋಕಿಸಿ ಕಾಮನೆಗಳ ಉಕ್ಕಿಸುವೆ ಬಾ ಸಖ
ಅರಳಿ ನಿಂತ ಕೆಂದಾವರೆಗೆ ಇಬ್ಬನಿಯೊಂದು ಮುತ್ತಿಕ್ಕಿದೆ
ಕೇದಿಗೆಯಂತೆ ಇರುಳೆಲ್ಲ ಘಮಿಸಿ ರಮಿಸುವೆ ಬಾ ಸಖ
ನೆನೆ ನೆನೆದು ಬೀಸುತ್ತಿದೆ ತಂಗಾಳಿಯು ನವ ಜೋಡಿ ಒಂದಾಗಲೆಂದು
ನನ್ನ ತೋಳ ತೆಕ್ಕೆಯಲಿ ತನು ಮನವ ಬಂಧಿಸುವೆ ಬಾ ಸಖ
ನಿನ್ನ ಕಂಗಳ ಸೆಳೆತಕ್ಕೆ ಅಬಾಟೇ ಸಮ್ಮೋಹನಗೊಂಡಿರುವ ನೋಡು
ಮುಂಗುರುಳಿನಲಿ ಮೆಲ್ಲನೆ ಕಚಗುಳಿಯಿಟ್ಟು ನಗಿಸುವೆ ಬಾ ಸಖ