ಕಾವ್ಯ ಸಂಗಾತಿ
ಗಜಲ್
ದೇವರಾಜ್ ಹುಣಸಿಕಟ್ಟಿ
ಝಗಮಗಿಸುವ ನಗರಗಳಿಗೂ ಹೇಳಲಾಗದ ನೋವಗಳಿವೆ ಗೊತ್ತಾ
ಘಮ ಘಮಿಸುವ ಹೂವುಗಳಿಗೂ ತೋರಲಾಗದ ಗಾಯಗಳಿವೆ ಗೊತ್ತಾ
ತುಟಿಗೆ ಬಳಿದ ಗುಲಾಲು ನಿಜದ ನಗುವ ಸೂಸಲಿಲ್ಲ ಗೆಳೆಯ
ಬೆಳಕಿನಡಿ ನಿಂತ ತೊಗಲು ಗೊಂಬೆಗಳಿಗೂ ಬರೆಯಲಾಗದ ಕಥನಗಳಿವೆ ಗೊತ್ತಾ
ಬದುಕೆಂದರೇನು ಪ್ರಶ್ನೆ….?ಹುಡುಕ ಬೇಡ ಕೆಂಡದ ಉಂಡೆಯು ಇರಬಹುದು
ಕೆಂಡವನೇ ಉಂಡು ತೇಗ ತೆಗದವರಿಗೂ ನೀಗದ ಹಸಿವುಗಳಿವೆ ಗೊತ್ತಾ
ಮಾರಿಕೊಂಡಿದ್ದು ಏನೇನೆಂದು ಕೇಳಬೇಡ ಈಗ ಸುಟ್ಟಾತ್ಮವದು ಗೆಳೆಯ
ಹಸಿ ಮಾಂಸದ ಮುದ್ದೆಯ ಬೆನ್ನ ಮೇಲೂ ಅಳಿಸಲಾಗದ ಗೀರುಗಳಿವೆ ಗೊತ್ತಾ
ಹಿಡಿ ಹೊಟ್ಟೆಯ ಇಂಗದ ದಾಹಕ್ಕೆ ಯಾವ ಯಾವ ದಾರಿ ತೆರೆದಿದ್ದೀಯಾ…ದೇವಾ
ದಿನವೂ ಸತ್ತು ಬದುಕುತ್ತಿರುವವರಿಗೂ ಮರೆಯಲಾಗದ ನೆನಪುಗಳಿವೆ ಗೊತ್ತಾ