ಕಾವ್ಯ ಸಂಗಾತಿ
ಪಿಶಾಚಿಯ ವೇದನೆ
ಶಂಕರಾನಂದ ಹೆಬ್ಬಾಳ
ಕೊಳಕು ದೇಹದಲ್ಲಿ
ತುಂಬಿದ್ದು ಬರಿ ಹುಳುಕು
ಮುಖದ ಮೇಲೊಂದು
ಮುಖವಾಡ,
ಹೊಳೆವ ಕಂಗಳಲ್ಲೊಂದು
ಕಾಣದಗ್ನಿಯ ಕುಂಡ,
ಧಾವಂತದ ಜೀವನದ
ಪಾಣಿಪೀಠವಿದು…..
ಸ್ವೋಪಜ್ಞತೆಯಿಲ್ಲದ
ಅಹಂಮಿಕೆಯ ಪರಮಾವಧಿ
ಈರ್ಷ್ಯೆಗಳ ಪ್ರಹಾರ
ಹುತ್ತದ ಮಿಡಿನಾಗರ
ಕಚ್ಚಿದನುಭವ,
ಒಳಗೊಳಗೆ ಕುದ್ದು
ರೋಷಾವೇಷದಲ್ಲೆದ್ದು
ಕೀಲುಗೊಂಬೆಯಂತೆ
ಕುಣಿಯುತಿದೆ ಗೆಜ್ಜೆಕಟ್ಟಿ….
ಮಾನವೀಯತೆ ಮೂಟೆಕಟ್ಟಿ
ಗರ್ವದ ರೆಕ್ಕೆಯ ಬಡಿದು
ಹಾರುತಿದೆ ನಾನೆಂಬ
ವಿಹಗ ಸ್ವಚ್ಛಂದದ
ಜಗವೆಂಬ ಆಗಸದಲಿ…
ಎಷ್ಟು ದಿನ..?
ಎಷ್ಟು ಗಳಿಗೆ..?
ಗೊತ್ತಿಲ್ಲ….ಉತ್ತರವಿಲ್ಲ…
ನೆನಪಿನಲ್ಲುಳಿಯಲಿಲ್ಲ
ಅಳಿದು ಹೋದೆ,
ಪರರಿಗಾಗದ ಜನ್ಮ
ಈಗ ತಿರುಗುತ್ತಿದೆ
ಅಂತರಪಿಶಾಚಿಯಾಗಿ
ಒಂದೆ ಸಮ ತಿರುಗುತ್ತಿದೆ
ರಣಗುಡುವ ಬಿಸಿಲಲ್ಲೂ
ಮೈನಡುಗುವ ಚಳಿಯನ್ನೂ
ಲೆಕ್ಕಿಸದೆ ಸುಡುವ
ಆ ರುದ್ರಭೂಮಿಯಲ್ಲಿ….