ಗಜಲ್
ಪ್ರಭಾಾವತಿ ಎಸ್ ದೇಸಾಯಿ
ಧಗ ಧಗಿಸುವ ಜಗದಲಿ ಶಾಂತಿಯನು ಹುಡುಕುತಿರುವೆ
ಬೆಂದ ಅವನಿಯ ಮಡಿಲಲಿ ಮಗುವನು ಹುಡುಕುತಿರುವೆ
ಬಾನಲ್ಲಿ ಹಾರಾಡುತಿವೆ ಉಕ್ಕಿನ ಹದ್ದುಗಳು
ಅಗ್ನಿ ಕುಂಡದಲ್ಲಿ ಮನ್ಮಥನನು ಹುಡುಕುತಿರುವೆ
ಧಾರಿಣಿಯಲ್ಲಿ ಹರಿಯುತಿದೆ ಕೆನ್ನೀರ ಕಾಲುವೆ
ಉದರಾಗ್ನಿ ತಣಿಸಲು ತಣ್ಣೀರನು ಹುಡುಕುತಿರುವೆ
ಏಕಾಂತದ ಮೂಸೆಯಲ್ಲಿ ಕರಗುತಿದೆ ತನು ಮನ
ಜಂಗಮನ ಜೋಳಿಗೆಯಲಿ ಒಲವನು ಹುಡುಕುತಿರುವೆ
ಊರಲ್ಲಿ ತಿರುಗುವ ನಿಶಾಚರ ಕಂಡು ಬೆದರಿದೆ
ಅಮವಾಸ್ಯೆ ಇರುಳಲಿ ತಂಗದಿರನು ಹುಡುಕುತಿರುವೆ
ಬಂಧಿಸಿದ ಮೇಕೆಯ ರೋದನವು ಮುಗಿಲು ಮುಟ್ಟಿದೆ
ಕಟುಕನ ಅಂಗಡಿಯಲಿ ಕರುಣೆಯನು ಹುಡುಕುತಿರುವೆ
ಮುಂದೆ ಸಾಗದೆ ಕತ್ತಲಲ್ಲಿ ಎಡುವುತಿದೆ ಕಾಲು
ಬದುಕ ಕರಾಳತೆಯಲಿ ಪ್ರಭೆಯನು ಹುಡುಕುತಿರುವೆ
ಚೆಂದದ ಗಜ಼ಲ್.. ಅಮ್ಮ.
ಈ ಗಝಲ್ ಗೆ ಕಳೆ ಕಟ್ಟಿದ್ದು ಸಾನಿ ಮಿಸ್ರಾಗಳು..
ಗಜಲ್ ಇಂದಿನ ಪರಿಸ್ಥಿತಿಗೆ ಕನ್ನಡಿಯಂತಿದೆ ಅಮ್ಮ