ಕಾವ್ಯ ಸಂಗಾತಿ
ಭೂತವನ್ನು ಮುದ್ರಿಸಲಾಗಿದೆ
ನಾಗರಾಜ್ ಹರಪನಹಳ್ಳಿ
ಪ್ರೇಮವನ್ನು ಅಮಾನತ್ತನಲ್ಲಿಡಲಾಗಿದೆ
ಹೌದು
ಒಮ್ಮೊಮ್ಮೆ ಹೀಗಾಗುತ್ತದೆ
ಸಲ್ಲದ ಆರೋಪಗಳನ್ನು ಒಬ್ಬರೊಗೊಬ್ಬರು ಹೊರಿಸಿ ಕೊಂಡು, ಪರಸ್ಪರ ಕೆಸರು ಎರಚಿಕೊಳ್ಳುವುದು ಸಹ ಪ್ರೇಮದ ಲಕ್ಷಣವೇ
ಅಥವಾ
ಮನುಷ್ಯರಿಗೆ ತಾನೇ ಎಲ್ಲವನ್ನೂ ಆರೋಪಿಸಿ ಅಲ್ಲಗಳೆಯುವುದು
ಸಮರ್ಥನೆಗಿಳಿಯುವುದು
ಕಾರ್ಯಕಾರಣ ಸಂಬಂಧ ಹುಡುಕುವುದು ಸಾಧ್ಯ ?
ಸಾಧ್ಯ ಅಸಾಧ್ಯಗಳ ಬೆಸೆಯುವುದು ಸಹ
ಪ್ರೇಮವನ್ನು ಅಮಾನತ್ ನಲ್ಲಿಟ್ಟಾಗ !!
ಸಂಭವನೀಯ ಸಂಗತಿಗಳ ತರ್ಕಿಸಿ
ಕೊನೆಗೆ ಕುತರ್ಕಗಳ
ಬಿಸುಟುವುದು
ತರಗಲೆಗಳು ಮಾರ್ಚನಲ್ಲೇ ಕಳಚಿ ಬೀಳುತ್ತವೆ
ಅದೇ ಮರ ಉರಿ ಬಿಸಿಲಲ್ಲಿ ಶಿವರಾತ್ರಿ ಹಾಗೂ ತಣ್ಣನೆಯ ಬೆಳದಿಂಗಳಿಗೆ ಹೊಸ ಚಿಗುರ ಉತ್ಸಾಹದಿ ತನ್ನ ಮೈತುಂಬಾ ತೊಟ್ಟಿದೆ
ಅದೇ ಮರದ ಕೆಳಗೆ ಬಿದ್ದ ಒಣ ಎಲೆಗಳನ್ನು ಒಟ್ಟುಗೂಡಿಸಿ ಬೆಂಕಿ ಹಾಕುತ್ತಾಳೆ ಮನೆಯ ಮಾಲಕಿ
ಗುಡಿಸಿದಷ್ಟೂ ಮತ್ತೆ ಮತ್ತೆ
‘ಒಣ ಎಲೆಗಳ’ ಮರ ಕೊಡವಿ ನಿಲ್ಲುತ್ತದೆ ಹೊಸ ಚಿಗುರಿನೊಂದಿಗೆ
ದಿನವೂ ಗೊಣಗುತ್ತಾ ಕಳಚಿದ್ದನ್ನು ಗುಡಿಸಿ ಹಾಕುತ್ತಾಳೆ ಯಜಮಾನಿ
ಆಹಾ ,ಕಳಚಿಕೊಳ್ಳುವ ನಿರಾಳತೆಗೆ ,ಹೊಸ ಚಿಗುರ ಅಂಗಿ ತೊಟ್ಟ ಮರ
ಉರಿ ಬಿಸಿಲಲ್ಲಿ ಮೈಚೆಲ್ಲಿ ಮಳೆಗೆ ಕಾದಿದೆ
ರಾತ್ರಿ ನೀರವ ಕಳೆಯಿತು
ಬೆಳಿಗ್ಗೆ ಹಾಕಿದ ಬೋಲ್ಟು ತೆಗೆದು
ಕದ ತೆರೆದರೆ
ಚಪ್ಪಲಿ ಬಿಡುವ ಜಾಗದಲಿ
ಸತ್ತ ಸುದ್ದಿಗಳ ಹೊತ್ತ ಪತ್ರಿಕೆ
ನಿರ್ಜೀವ ಹತಾಶೆ ಹತ್ಯೆ ಆತ್ಮಹತ್ಯೆ ಪ್ರಚೋದನೆ ಆರೋಪ ಪ್ರತ್ಯಾರೋಪ, ಸಂಚು ಹೊಂಚುಗಳ ಹೊತ್ತು ಬಿದ್ದಿದೆ ;
ಅಲ್ಲಿ ಭೂತವನ್ನು
ವರ್ತಮಾನದಲ್ಲಿ ಮುದ್ರಿಸಲಾಗಿದೆ ;
ಸರದಿಯಲಿ ಬ್ರೆಡ್ ಗೆ ನಿಂತು ಕಾದವರು ಮಿಸೈಲ್ ಬಿದ್ದು ಹೆಣವಾದ ಸುದ್ದಿ
ಬಸ್ ಉರುಳಿ ಆರು ಕನಸುಗಳು ಮಣ್ಣಾದ ಕಹಿ
ಹಿಜಾಬು ಕೇಸರಿ ಭಗವದ್ಗೀತೆಯ ಹಠದ ವಾರ್ತೆ ಕಣ್ಣಿಗೆ ರಾಚುತ್ತವೆ
ತರಗಲೆ ತಾಗಿದ ಬೆಂಕಿ ಉರಿದು ಹೋಯಿತು
ಶರಣಾಗುವುದು ಎಷ್ಟು ಕಷ್ಟ
ಝೆಲನ್ಸ್ಕಿ ಗೆ ?
ಪ್ರತಿಷ್ಠೆ ಮಣ್ಣಿಗೆ ಹಾಕುವುದು ಅಷ್ಟೇ ಕಷ್ಟ ಪುಟಿನ್ ಮಹಾಶಯನಿಗೆ !
ತೆರೆಮರೆಯ ಆಟ ನಿಲ್ಲಿಸುವುದು ಮುದುಕ ಜೋ ಬೈಡನ್ ಗೂ ಕಷ್ಟ !!
ಪಾಪ ,ಈ ಒಣ ಪ್ರತಿಷ್ಠೆ ಹಠಮಾರಿತನ ಜಿದ್ದೆಗೆ ಸತ್ತದ್ದು
ಉಕ್ರೇನಿನ ಉಸಿರು,
ರಷ್ಯಾದ ಹೃದಯ
‘ಪ್ರೇಮವನ್ನು ಅಮಾನತ್ ನಲ್ಲಿಟ್ಟರೆ’
ಹೀಗೆ ಆಗುವುದು
ಎಂದು ಮೆಲ್ಲಗೆ ಉಸುರಿದಳು
ಆಕೆ
ಶರಣಾಗುವುದು, ಕಣ್ಣು ತೆರೆಯುವುದು,ಹೃದಯ ಬೆಸೆಯುವುದು ಕಷ್ಟದ ಕೆಲಸಗಳು
ಎಂದು
ಆತ ಪ್ರತ್ತ್ಯುತ್ತರಿಸಿದ
…………………………………………………………
ನಾಗರಾಜ್ ಹರಪನಹಳ್ಳಿ
ನಿಜ, ಶರಣಾಗುವುದು ಕಷ್ಟದ ಕೆಲಸ. ವರ್ತಮಾನದ ಕಹಿಯೊಂದಿಗೆ ಪ್ರೇಮವನ್ನು ಬೆಸೆದು ಹೊಸೆದ ಕವಿತೆ. ಪ್ರೇಮವನ್ನೆಂದಿಗೂ ಅಮಾನತ್ ಗೊಳಿಸಲಾಗದು.
ಅಲ್ಲೊಂದು ಬುದ್ಧನ ಪ್ರೇಮ ಯುದ್ಧ ನಿಲ್ಲಿಸಲಿ. ಇಲ್ಲಿಯೂ …ಒಳ ಯದ್ಧಗಳು ನಿಲ್ಲಲಿ. ವಿಶ್ವ ಕವಿತೆಯ ದಿನದ ಶುಭಾಶಯಗಳುನಿ.
ಥ್ಯಾಂಕ್ಯೂ. ಸಹೃದಯ ಕಾವ್ಯದ ಓದಿಗೆ.
ಪ್ರೀತಿ ಅಮಾನತ್ ಗೊಳಿಸಲಾಗದು. ನಿಜ.
ಉಕ್ರೇನ್ – ರಷ್ಯಾ ಮಧ್ಯೆ ಪ್ರೇಮದ ಅನುಪಸ್ಥಿತಿ, ಸಂಶಯ, ಅನುಮಾನ ಯುದ್ದಕ್ಕೆ ಕಾರಣ. ನ್ಯಾಟೋ ಸಹವಾಸ ಬೇಡ ಎಂಬ ಪುಟಿನ್ ಮಾತನ್ನು ಮನಸ್ಸಿಲ್ಲದಿದ್ದರೂ ಒಪ್ಪಿಬಿಡಬೇಕಿತ್ತು ಝೆಲನ್ಸ್ಕಿ . ಎಷ್ಟೊಂದು ಜೀವ ಉಳಿಯುತ್ತಿದ್ದವು. ಎಷ್ಟೊಂದು ನಗರಗಳು ಅಂಗವೈಕಲ್ಯ ಅನುಭವಿಸುತ್ತಿರಲಿಲ್ಲ. ಝೆಲನ್ಸ್ಕಿ ಬುದ್ಧನಾಗಿ ಬಿಡುತ್ತಿದ್ದ….
ವರ್ತಮಾನದ ತುಡಿತವನ್ನು ವಾಸ್ತವಿಕವಾಗಿ ಕವಿತೆ ತೆರೆದಿಟ್ಟಿದೆ. ಜೊತೆಗೆ ಸೋಲನ್ನೊಪ್ಪಿಕೊಳ್ಳುವುದು ,ಗೆಲ್ಲುವುದು ಕೂಡ ಕಷ್ಟದ ಹಾದಿ ಇಲ್ಲಿ.
ಸಹೃದಯ ಓದಿಗೆ….ಥ್ಯಾಂಕ್ಸ