ಅಂಕಣ ಸಂಗಾತಿ

ಕಾವ್ಯದರ್ಪಣ

ನನಗಿಲ್ಲ ಬಯಕೆ ನರ್ತಕಿಯ ಕೇಶಗಳಲ್ಲಿ ಬಳಲುವುದು

ನನಗಿಲ್ಲ ಬಯಕೆ ಪ್ರೀತಿಯಲಿ

ಕುರುಡಾದ ಪ್ರೇಯಸಿಯ ರಂಜಿಸಲು

ನನಗಿಲ್ಲ ಬಯಕೆ ಸಾಮ್ರಾಟರ ಶವಗಳ ಮೇಲೆ ರಾರಾಜಿಸುವುದು

ನನ್ನನ್ನು ಮುರಿದುಕೋ ತೋಟಮಾಲಿ

ಎಲ್ಲಿ ಭೂತಾಯಿಗಾಗಿ ತನ್ನ ಜೀವವನ್ನೆ ಅರ್ಪಿಸಿದ

ವೀರ ಸೈನಿಕರಿರುವರೋ ಅವರ

ಪಾದಗಳಲ್ಲಿ ಎಸೆದುಬಿಡು

– ಹಿಂದಿಯ ಸುಪ್ರಸಿದ್ಧ ಕವಿ ಮಾಖನ್ ಲಾಲ್ ಚತುರ್ವೇದಿ ಅವರ “ಪುಷ್ಪದ ಅಭಿಲಾಷೆ” ಕವಿತೆಯ ಸಾಲುಗಳು.

ಕಾವ್ಯ ಪ್ರವೇಶಿಕೆಯ ಮುನ್ನ

ಜನನಿ ಜನ್ಮಭೂಮಿಶ್ಚ

 ಸ್ವರ್ಗದಪಿ ಗರಿಯಸಿ”

 ಎಂಬ ನುಡಿಯು ತಾಯಿ ಮತ್ತು ತಾಯ್ನಾಡು ಸ್ವರ್ಗಕ್ಕಿಂತ ಮಿಗಿಲು ಎಂಬ ಉದಾತ್ತ ಧ್ಯೇಯವನ್ನು ಪರಿಚಯಿಸುತ್ತದೆ. ಆದರ್ಶವನ್ನು ಮೈಗೂಡಿಸಿಕೊಂಡು ಅನವರತ ಭಾರತಾಂಬೆಯ ಸೇವಾ ಕೈಂಕರ್ಯ ಮಾಡುತ್ತಾ, ದೇಶವನ್ನು ಶತ್ರುಗಳ ಕಪಿಮುಷ್ಟಿಯಿಂದ ಪೊರೆದು ಇಡೀ ರಾಷ್ಟ್ರದ ಜನ ಸುಖ, ಶಾಂತಿ, ನೆಮ್ಮದಿಯಿಂದ ನಿದ್ರಿಸುವಂತೆ ಮಾಡುವ ಭಾರತಾಂಬೆಯ ಹೆಮ್ಮೆಯ ವೀರಪುತ್ರರೆ ಸೈನಿಕರು. ಈ ಸೈನಿಕರು ಉಗ್ರಗಾಮಿಗಳಿಂದ ದೇಶವನ್ನು ರಕ್ಷಿಸಿ ರಾಷ್ಟ್ರದ ಏಕತೆ ಮತ್ತು ಸಮಗ್ರತೆಯನ್ನು ಸಾಧಿಸುವ ಹಾಗೂ ವೈರಿ ರಾಷ್ಟ್ರಗಳ ದಾಳಿಯನ್ನು ಹತ್ತಿಕ್ಕಿ ಭಾರತಾಂಬೆಯ ‌ಸೇವೆ ಮಾಡುವ ಈ ಕಲಿಗಳಿಗೆ ನಾಗರಿಕರ ಪ್ರಥಮ ವಂದನೆ ಸಲ್ಲಬೇಕು.

ಸೈನಿಕರು ಎಂಬ ಪದ ಕೇಳಿದೊಡನೆ ಮೈಯೆಲ್ಲ ರೋಮಾಂಚನವಾಗುತ್ತದೆ. ಅವರ ಕಡಕ್ ಭಾವ, ಅವರ ಚತುರತೆ, ಚಾಣಾಕ್ಷತೆ, ಅವರ ಆತ್ಮಸ್ಥೈರ್ಯ, ಸವಾಲುಗಳ ಎದುರಿಸುವ ನೋಟ, ಗತ್ತು, ಗಾಂಭೀರ್ಯ, ಸಹನೆ ಎಲ್ಲವೂ ಪುಳಕಿತ ಭಾವ ಉಂಟು ಮಾಡುತ್ತದೆ.ರಾಷ್ಟ್ರಕ್ಕಾಗಿ ಅವರ ತ್ಯಾಗವನ್ನು ನೋಡಿದಾಗ ಕೈಮುಗಿಯಬೇಕೆಂಬ ಗೌರವ ಪ್ರತಿಯೊಬ್ಬ ನಾಗರಿಕನಿಗೆ ಉಂಟಾಗಬೇಕು.

ಯಾವುದೇ ಒಂದು ರಾಷ್ಟ್ರ ಸುಭದ್ರವಾಗಿ ಅಲ್ಲಿನ ಪ್ರಜೆಗಳು ಸುರಕ್ಷಿತವಾಗಿದ್ದಾರೆ ಎಂದರೆ ಅದರ ಸಂಪೂರ್ಣ ಕೀರ್ತಿ ನೇರವಾಗಿ ದೇಶ ರಕ್ಷಕರಾದ ಸೈನಿಕರ ಶಿರಕೆ ಹೊನ್ನಕಳಸವಾಗಬೇಕು ಎಂಬುದು ನನ್ನ ಮನದಿಂಗಿತ.

ಸತ್ಯ ಅಹಿಂಸೆಗಳನ್ನು ಪಾಲಿಸಿ ಸ್ವತಂತ್ರ ಪಡೆದ ದೇಶ ನಮ್ಮದು. ಶಾಂತಿ ಸತ್ಯಾಗ್ರಹಗಳ ನಾಡಿದು. ಇಂತಹ ಪರಮಪವಿತ್ರ ನೆಲದಲ್ಲಿ ಹಗಲಿರುಳು ಶ್ರಮಿಸುತ್ತಿರುವ ಸೈನಿಕರೇ ನೈಜ ಶ್ರಮಿಕರು. ಇವರು ಜೀವದ ಹಂಗು ತೊರೆದು ಹೋರಾಡುವ ಜನನಾಯಕರು. ಶಿಸ್ತಿನಿಂದ ಗಸ್ತು ತಿರುಗುತ ಪಹರೆ ಕಾಯುವ ಸಂರಕ್ಷಕರು. ವೈರಿಗಳ ಆಕ್ರಮಣದಲ್ಲಿ ರಣರಂಗದಲ್ಲಿ ಎದೆಯೊಡ್ಡಿ ಕೀರ್ತಿ ಪತಾಕೆ ಹಾರಿಸುವ ದಿವ್ಯಜ್ಯೋತಿಗಳು.

ಶತ್ರುಗಳ ಹುಟ್ಟಡಗಿಸುವ ಸಿಡಿಲ ಗುಂಡುಗಳು. ಬಿಸಿಲು, ಮಳೆ, ಚಳಿ,ಗಾಳಿಗೆ ಅಂಜದ ಅಳುಕದ ವಜ್ರಕಾಯಗಳು. ಸೋಲನ್ನು ಮೆಟ್ಟಿ ನಿಲ್ಲುವ ರಣಕೇಸರಿಗಳು. ದೇಶದ ರಕ್ಷಣೆಗಾಗಿ ಬದುಕನ್ನು ಮುಡಿಪಾಗಿಟ್ಟ ಅನರ್ಗ್ಯ ರತ್ನಗಳು.

ವೈರಿ ರಾಷ್ಟ್ರದ ಎದೆ ನಡುಗಿಸುವ ವೀರಕಲಿಗಳು. ಮಾತೃಭೂಮಿಗಾಗಿ ನೆತ್ತರು ಹರಿಸುವ ದೇಶಪ್ರೇಮಿಗಳು‌ ರಾಷ್ಟ್ರ ಪ್ರೇಮಕ್ಕಾಗಿ ತನ್ನೆಲ್ಲ ಪ್ರೀತಿಯ ಮರೆಮಾಚುವ  ಸರ್ವಗುಣ ಸಂಪನ್ನರು.  ದೇಶ ಸೇವೆಯೇ ಈಶ ಸೇವೆ ಎಂದು ದುಡಿವ ಕಾಯಕ ಯೋಗಿಗಳು. ಸರ್ವಸ್ವವನ್ನು ಸಮರ್ಪಿಸಿ ದೇಶಭಕ್ತಿ ಮೆರೆವ ವೀರಾಗ್ರಣಿಗಳು.

ಇಷ್ಟೆಲ್ಲಾ ಸೇವೆಮಾಡುವ ಯೋಧರ ಬಗ್ಗೆ ಅಲ್ಲೊಮ್ಮೆ ಇಲ್ಲೊಮ್ಮೆ ಕೇಳಿ ಬರುವ ಕೊಂಕು ನುಡಿಗಳು ಮನಸ್ಸಿಗೆ ಅಹಿತವನ್ನುಂಟು ಮಾಡುತ್ತವೆ. ಆಗೊಮ್ಮೆ ಈಗೊಮ್ಮೆ ಗಡಿಯಲ್ಲಿ ಸೈನಿಕರು ವೀರ ಮರಣ ಹೊಂದಿದಂತಹ ಸಂದರ್ಭದಲ್ಲಿ ನಾವೆಲ್ಲ ಕವನಗಳನ್ನು ಕಟ್ಟಿ, ಪೋಸ್ಟರ್ ಹಾಕಿ, ಭಾಷ್ಪಾಂಜಲಿ, ಪುಷ್ಪಂಜಲಿ ಮತ್ತು ಕಾವ್ಯಂಜಲಿ ಗಳನ್ನು ಅರ್ಪಿಸಿ, ನಾಳೆಯೆ ಎಲ್ಲವನ್ನು ಮರೆತು ನಮ್ಮ ಪಾಡಿಗೆ ನಾವಿರುವ  ನಮಗೆ ನಿಜಕ್ಕೂ ಅರ್ಥವಾಗಬೇಕಿದೆ ಅವರ ವಾಸ್ತವಿಕ ಪರಿಸ್ಥಿತಿ. ಅವರ ಬಗ್ಗೆ ನಮ್ಮಲ್ಲಿ ಗೌರವ ಭಾವನೆ ಮೂಡಬೇಕು.

ಸ್ನೇಹಿತರೆ ನಾನು ಏಕೆ ಸೈನಿಕರನ್ನು ಸ್ಮರಿಸಿಕೊಳ್ಳುತ್ತಿರುವೆ ಎಂದು ಭಾವಿಸುತ್ತೀರಾ ನಿಜ ಸ್ನೇಹಿತರೆ ಅವರನ್ನು ನಾವು ಎಂದೊ ಒಮ್ಮೆ ನೆನಪಿಸಿಕೊಂಡರೆ ಅದರಿಂದ ಏನು ಪ್ರಯೋಜನವಿಲ್ಲ. ಪ್ರತಿದಿನ ಪ್ರತಿಕ್ಷಣ ಅವರ  ಸೇವಾರ್ಥದಿಂದ ನಾವು ಸುಖವಾಗಿ ಉಸಿರಾಡುತ್ತಿದ್ದೇವೆ ಎಂಬ ಪರಮಸತ್ಯ ಜನತೆಗೆ ಅರ್ಥವಾದ ದಿನ ಅವರ ಒಂದು ಪ್ರಾಮಾಣಿಕ ಸೇವೆಗೆ ಮೌಲ್ಯ ಬರುವುದು. ಇಂತಹ ರಾಷ್ಟ್ರದ ಮಹಾನ್ ತೇಜಸ್ವಿ ಬೆನ್ನೆಲುಬಾದಂತಹ ಸೈನಿಕರ ಕುರಿತಾದಂತಹ ಒಂದು ಕವಿತೆಯೊಂದನ್ನು ನಿಮ್ಮ ಮುಂದೆ  ನಾನು ಪರಿಚಯಿಸಲಿದ್ದೆನೆ.

ಕವಿ ಪರಿಚಯ

ಈರನಗೌಡ ಹಂದಿಗನೂರು ಅವರು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಹಂದಿಗನೂರ ಗ್ರಾಮದವರು. ಇವರು ಸ್ನಾತಕೋತ್ತರ ಪದವೀಧರಾಗಿದ್ದಾರೆ.ವಿಜಯಪುರ ಜಿಲ್ಲಾ ಕರ್ನಾಟಕ ಜಾನಪದ ಪರಿಷತ್ತಿನ ಸಂಘಟನಾ ಕಾರ್ಯದರ್ಶಿಯಾಗಿ ಹಲವಾರು ಜನಪದ ಕಲಾವಿದರನ್ನು ಗುರುತಿಸಿ ಮುನ್ನೆಲೆಗೆ ತಂದ ಹಿರಿಮೆ ಇವರದು. ಹಲವಾರು ಪ್ರತಿಷ್ಠಿತ  ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ  ಭಾಗವಹಿಸಿರುವುದು ಹೆಮ್ಮೆಯ ಸಂಗತಿ.

2007-08 ರಲ್ಲಿ ಬಿಎಡ್ ಓದುವಾಗಲೆ ಮುಸ್ಸಂಜೆ ಕವನ ಸಂಕಲನ ಹೊರತಂದಿದ್ದು ಹಲವಾರು ಸಮಾಜಮುಖಿ ಹಾಗೂ ಜನಪರವಾದ ಬರಹಗಳ ಸರದಾರರಿವರು.

ನಮಗೆಲ್ಲ ಗೊತ್ತಿರುವ ಹಾಗೆ ನಾಡಿನಲ್ಲಿಯೇ ಮೊಟ್ಟ ಮೊದಲ ಬಾರಿಗೆ ನೂರು ಕವಿಗಳ ಕವಿತೆಗಳನ್ನು ಹಲವಾರು‌ ಕವಿಗಳಿಂದ ವಾಚನ ಮಾಡಿಸಿ ನಾಡಿನ ಹೆಸರಾಂತ ಗಾಯಕರಿಂದ ಹಾಡಿಸಿ ಸಂಗೀತ ಮತ್ತು ದೃಶ್ಯ ಸಂಯೋಜನೆಯೊಂದಿಗೆ‌ವಿಡಿಯೋ ಸಂಕಲನ ಮಾಡಿ ಅವರ ಸಾಹಿತ್ಯವನ್ನು ಪರಿಚಯಿಸಿದ  ಕಾರ್ಯ ಶ್ಲಾಘನೀಯವಾಗಿದೆ.

ಸೃಜನಶೀಲ ಕನ್ನಡ ಸಾಹಿತ್ಯ ಬಳಗ ವಿಜಯಪುರ ಜಿಲ್ಲೆಯ ಗೌರವ ಸಲಹೆಗಾರನಾಗಿ ನೂರಾರು ಸೃಜನಶೀಲ ಕವಿ ಕವಿಯಿತ್ರಿಯರನ್ನು ನಾಡಿಗೆ ಪರಿಚಯಿಸಿದ್ದು ಇವರ ಹೆಗ್ಗಳಿಕೆಯೆ  ಸರಿ.

ಕವಿತೆಯ ಆಶಯ

ದೇಶವಾಸಿಗಳು ಸೈನಿಕರನ್ನು. ಗೌರವಿಸಬೇಕು

        – ಶಂಕರನಾರಾಯಣ ಹೊಳ್ಳ

ಯುದ್ಧಕ್ಕೆ ಹೊರಟು ನಿಂತ ಸೈನಿಕರ ಮನದಾಳದ ಭಾವಗಳನ್ನು ಈ ಕವಿತೆ ಹೊತ್ತು ತಂದಿದೆ. ರಜೆಯ ಮೇಲೆ ಮನೆಗೆ ತೆರಳಿ ಕುಟುಂಬದೊಂದಿಗೆ ಮಡದಿ ಮಕ್ಕಳೊಂದಿಗೆ ಕೆಲವು ದಿನಗಳನ್ನು ಕಳೆದು ಖುಷಿ ಖುಷಿಯಾಗಿ ಇರಬೇಕೆಂದು ತನ್ನವರನ್ನು ನೆನೆದು ಅವರನ್ನು ಕಾಣಬೇಕೆಂದು ಸೈನಿಕರು ಮನೆಗೆ ಧಾವಿಸಿ ಬರುತ್ತಾರೆ. ಯೋಧನ ಕುಟುಂಬದ ಮಹಾ ನಿರೀಕ್ಷೆ ವರ್ಷಕ್ಕೆರಡು ಬಾರಿ ಮನೆಗೆ ಬರುವ ಇವನ ಆಗಮನಕ್ಕಾಗಿ ಇಡೀ ಕುಟುಂಬ ವಸಂತನಾಗಮನಕೆ ಸಂಭ್ರಮಿಸುವ ಮಾಮರದ ಕೋಗಿಲೆಯಂತೆ ಕಾಯುತ್ತಿರುತ್ತದೆ.ತಿಂಗಳುಗಟ್ಟಲೆ ಗಂಡನ ಮುಖವನ್ನೇ ನೋಡದ ಅವರ ಪ್ರೀತಿಗಾಗಿ ಹಂಬಲಿಸುವ ಮಡದಿ ಒಂದೆಡೆಯಾದರೆ, ನಾನು ಎಲ್ಲಾ ಮಕ್ಕಳಂತೆ ಅಪ್ಪನ ತೋಳಿನಲ್ಲಿ ಬಂಧಿಯಾಗಿಬೇಕು, ಕಿಲಕಿಲನೆ ನಗುತ್ತಾ ಇರಬೇಕು, ಹೆಗಲ ಮೇಲೆ ಕೂತು ಕೂಸುಮರಿ ಆಡಬೇಕು, ಅವರೊಡನೆ ಬೈಕಲ್ಲಿ ಕುಳಿತು ಸವಾರಿ ಮಾಡಬೇಕು ಎಂಬ ಬಣ್ಣ ಬಣ್ಣದ ಸಹಸ್ರ ಕನಸುಗಳನ್ನು ಕಟ್ಟಿ, ಜಾತಕ ಪಕ್ಷಿಯಂತೆ ಕಾಯುವ ಕಂದಮ್ಮಗಳ ನಿರೀಕ್ಷೆಯೂ ಮತ್ತೊಂದೆಡೆ, ಇವು ಸಾಲದೆಂಬಂತೆ ತನ್ನ ಕರುಳ ಕುಡಿಯನ್ನು ಸೇನೆಗೆ ಕಳುಹಿಸಿ ದೂರದಿಂದಲೇ ಶುಭ ಹಾರೈಸುತ್ತಾ ಪ್ರತಿಕ್ಷಣ ಮಗನ ಸುರಕ್ಷತೆಯ ಬಗ್ಗೆ ಪರಿತಪಿಸುವ ತಂದೆ‌ ತಾಯಿಗಳ ರೋಧನೆ ಮಗದೊಂದೆಡೆ . ಇವೆಲ್ಲವನ್ನೂ ನಾವು ಪದಗಳಲ್ಲಿ ಬಂಧಿಸಲು ಸಾಧ್ಯವೇ ಸ್ನೇಹಿತರೆ ?ಕೆಲಸಕ್ಕೆ ಹೋದ ಗಂಡ ಮನೆಗೆ ಬರುವುದು ಒಂದು ಗಂಟೆ ತಡವಾದರೂ ಚಡಪಡಿಸುವ ನಮಗೆ ಯೋಧನ ಪತ್ನಿಯ ಮನಸ್ಥಿತಿಯನ್ನು ಅರಿಯಲು ಆಗುವುದೇ?

ಇನ್ನು ಯೋಧನ ದೃಷ್ಟಿಕೋನದಲ್ಲಿ ಚರ್ಚಿಸುವುದಾದರೆ ನಿತ್ಯವೂ ಸಮಾಜವನ್ನು ರಕ್ಷಿಸುತ್ತಾ, ಶತ್ರುಗಳಿಗೆ ಎದೆಯೊಡ್ಡಿ, ಸದಾ ಮದ್ದು ಗುಂಡುಗಳನ್ನಿಡಿದು ಬೆಟ್ಟ‌, ಗುಡ್ಡ, ಕಲ್ಲು, ಮುಳ್ಳುಗಳ ಲೆಕ್ಕಿಸದೇ ಹಗಲಿರುಳು ಚಳಿ, ಮಳೆ, ಗಾಳಿ, ಬಿಸಿಲಿಗೆ ಮೈಯೊಡ್ಡುತ್ತಾ, ತನ್ನ ಜೀವವನ್ನು ಲೆಕ್ಕಿಸದೆ ಸುಖ‌ ಸಂತೋಷಗಳು, ಆಸೆ ಅಭಿಲಾಷೆಗಳನ್ನು, ಕನಸುಗಳನ್ನು ತೊರೆದು ದೇಶ ಕಾಯುತ್ತಾ ಭಾರತಾಂಬೆಯ ರಕ್ಷಣೆ ಮಾಡುತ್ತಿರುವ ವೀರಾಗ್ರಣಿಗಳು ನಮ್ಮ ಯೋಧರು.

ಅನಿರೀಕ್ಷಿತವಾಗಿ ಒದಗಿದ ಯುದ್ಧದ ತತ್ಪರಿಣಾಮ ಸೈನಿಕ ಇದ್ದಕ್ಕಿದ್ದಂತೆ ಯುದ್ಧಭೂಮಿಗೆ ಹೊರಡಲು ಸಿದ್ಧವಾಗುತ್ತಾನೆ. ಆಗ ಅವನನ್ನು ನಂಬಿಕೊಂಡಿರುವ ತನ್ನ ಒಲವಿನ ಮಡದಿಗೆ ಧೈರ್ಯ ತುಂಬಿ, ತಾನು ತಾಯಿ ಸೇವೆಗೆ ಹೋಗಲೇಬೇಕು ನಿನ್ನ  ಪ್ರೀತಿಯ ಶ್ರೀರಕ್ಷೆಯೊಂದಿಗೆ ನಾನು ಜಯಿಸಿ ಬರುವೆ ಎಂದು ಮಡದಿಗೆ ಸಮಾಧಾನ ಮಾಡುವ ಸಾಲುಗಳು ಕಟುಕರ ಕಂಗಳನ್ನು ಒದ್ದೆಯಾಗಿಸುತ್ತವೆ.‌ಈ ಘಟನೆಯು ತುಂಬಾ ಭಾವುಕತೆಯಿಂದ ಕೂಡಿದೆ.

ಕವಿತೆಯ ಶೀರ್ಷಿಕೆ

ಹೋಗಿ ಬರಲೇ ಯುದ್ಧಕ್ಕೆ

ಈ ಶೀರ್ಷಿಕೆ ಕವಿತೆಗೆ ಬಹಳ ಅರ್ಥಪೂರ್ಣವಾಗಿ ಹೊಂದುತ್ತದೆ. ಇದು ಸೈನಿಕನು ತನ್ನ‌ ಸತಿಯನ್ನು ಯುದ್ಧಕ್ಕೆ ತೆರಳಲು ಅನುಮತಿ ಕೇಳುತ್ತಿರುವಂತೆ ಕಂಡರೂ, ಅದರಿಂದೆ ಸಾಂತ್ವನದ ಛಾಯೆ ಇರುವುದನ್ನು ನಾವು ಸೂಕ್ಷ್ಮವಾಗಿ ಗಮನಿಸಬೇಕು. ನಾನು ಹೋಗುತ್ತಿದ್ದೇನೆ ಮತ್ತೆ ಬರುತ್ತೇನೋ ಇಲ್ಲವೋ ಎಂಬ ಭಾವವನ್ನು ಕಾಣಬಹುದು .ನನ್ನ ಅನುಪಸ್ಥಿತಿಯಲ್ಲಿ ಕೌಟುಂಬಿಕ ಜವಾಬ್ದಾರಿಗಳನ್ನೆಲ್ಲವನ್ನು ನೀನು ನನಗಾಗಿ, ದೇಶ ಸೇವೆಗಾಗಿ ಯಶಸ್ವಿಯಾಗಿ ನಿರ್ವಹಿಸುತ್ತಿಯಾ ಎಂಬ ಆತ್ಮವಿಶ್ವಾಸದ ಮೇಲೆ ನಾನು ಯುದ್ಧಕ್ಕೆ ಹೋಗಿ ಬರುವೆ ಎಂದು ಸೈನಿಕ ಕೇಳುತ್ತಿರುವುದು ತುಂಬಾ ಗಂಭೀರವಾದ ಶೀರ್ಷಿಕೆಯೊಂದಿಗೆ ಅರ್ಥಪೂರ್ಣವಾಗಿ ಮೂಡಿಬಂದಿದೆ.

ಕವಿತೆಯ ವಿಶ್ಲೇಷಣೆ

ಹೋಗಿ ಬರಲೇ ಯುದ್ಧಕ್ಕೆ

ಹೋಗಿ ಬರಲೇ ಯುದ್ಧಕ್ಕೆ

 ಅಳದಿರು ನನ್ನುಸಿರೇ

 ಸಿಹಿ ಸುದ್ದಿ ತಂದೆ ತರುವೆ

 ನೀನಿತ್ತ ಸಿಹಿಮುತ್ತು ಆಸರೆ”

ಯೋಧನ ಬಾಯಿಂದ ಬಂದ ಭಾವುಕವಾದ ಸಾಲುಗಳಿವು. ಯೋಧರ ತಾಯಿಯಾಗಿ ಪತ್ನಿಯಾಗಿ ಮಕ್ಕಳಾಗಿ ಸಮಾಜದಲ್ಲಿ ಗುರುತಿಸಿಕೊಳ್ಳುವುದು ಹೆಮ್ಮೆಯ ವಿಚಾರ ಹಾಗೂ ಅಷ್ಟೇ ಪ್ರಮಾಣದ ತ್ಯಾಗದ ಪ್ರತೀಕವೂ ಕೂಡ.

ಇಲ್ಲಿ ಗಂಡ ಮತ್ತು ಹೆಂಡತಿಯ ನಡುವೆ ಪ್ರೀತಿಯ ಬಂಧವಿರುತ್ತದೆ. ಒಬ್ಬರ ಮೇಲೊಬ್ಬರಿಗೆ ಭಾವನಾತ್ಮಕವಾದ ಸಂಬಂಧವಿರುತ್ತದೆ. ಒಬ್ಬರನ್ನೊಬ್ಬರು ಬಿಟ್ಟಿರಲಾರದಂತಹ ಅನ್ಯೂನ್ಯತೆ ಹಾಗು ಅವಲಂಬನೆಯಿರುತ್ತದೆ. ಹಾಗಿದ್ದು ಕುಟುಂಬಗಳಿಗೆ ಇದನ್ನು ಸ್ವೀಕರಿಸುವುದು ಸಾಧಾರಣವಾದ ಸಂಗತಿಯಲ್ಲ. ನನ್ನ ದೃಷ್ಟಿಯಲ್ಲಿ ಹೇಳುವುದಾದರೆ ವೀರಯೋಧನ ಪತ್ನಿ ವೀರನಾರಿಯೆ ಸರಿ.ಅವನನ್ನು ಹರಸಿ ಹಾರೈಸಿ ಕಳುಹಿಸುವ ಅವಳ ಗಟ್ಟಿತನಕ್ಕೊಂದು ನಮನ ಸಲ್ಲಿಸಲೇಬೇಕು. ಅಂತಹ ಕಾರ್ಯಮಾಡುವ ಹೆಣ್ಣುಮಕ್ಕಳ ದೃಢ ಸಂಕಲ್ಪಕ್ಕೆ ಅವಳ ನಿಸ್ವಾರ್ಥಕ್ಕೆ ಶಹಭಾಷ್ ಏಳಲೇಬೇಕು. ಇಲ್ಲಿ ಸೈನಿಕನ ಪತ್ನಿ ಪತಿಯನ್ನು ಸೇನೆಗೆ ಕಳುಹಿಸಿ ಸದಾ ತನ್ನ ಗಂಡನ ಶ್ರೇಯಸ್ಸಿಗಾಗಿ ಸುರಕ್ಷತೆಗಾಗಿ ಪ್ರಾರ್ಥಿಸುವ ಪರಿ ನಿಜಕ್ಕೂ ಶ್ಲಾಘನೀಯ.

ಅಂತಹ ಮಧುರಾತಿಮಧುರ ಬಾಂಧವ್ಯದಲ್ಲಿ ರಜೆಯಲ್ಲಿ ಮನೆಗೆ ತೆರಳಿದ ಯೋಧನ ರಜೆ ಮುಗಿಯುವವರೆಗೂ ಹೆಂಡತಿ-ಮಕ್ಕಳೊಂದಿಗೆ ಹರುಷದಿಂದ ಕಾಲ ಕಳೆಯಬಹುದು ಎನ್ನುತ್ತಿರುವಾಗಲೇ, ಶುರುವಾದ ಯುದ್ಧ ಅವನ ಕನಸುಗಳಿಗೆ, ಕುಟುಂಬದವರ ಅವಿಸ್ಮರಣೀಯ ಕ್ಷಣಗಳಿಗೆ ತಣ್ಣೀರೆರೆಚಲು ಬಂದೇಬಿಟ್ಟಿತು.

ಆಗ ಸೈನಿಕನಿಗೆ ಎಲ್ಲಕ್ಕಿಂತ ತನ್ನ ಕರ್ತವ್ಯ ಪ್ರಥಮ ಆದ್ಯತೆಯಾಗಿ ಬಂದ ದಾರಿಯಲ್ಲೇ ವಾಪಸ್ ಹೋಗಲು ಸಿದ್ಧನಾಗಿ ನಿಂತು ಅದಕ್ಕಾಗಿ ತನ್ನ ಪ್ರೀತಿಯ ಮಡದಿಯನ್ನು ಓಲೈಸುವ ರೀತಿಯು ಮನಮಿಡಿಯುವಂತೆ ಓದುಗರ ಕಂಗಳಲ್ಲಿ ಕಣ್ಣೀರಧಾರೆ ಹರಿಸುವಂತೆ ಚಿತ್ರಿಸಿರುವುದು ಕವಿಯ ಹೆಗ್ಗಳಿಕೆ ಎನ್ನಬಹುದು.

ಹೋಗಿ ಬರಲೇ ಯುದ್ಧಕ್ಕೆ ಎಂದು ಅನುಮತಿ ಕೇಳುತ್ತಾ ಅವಳನ್ನು “ನನ್ನುಸಿರೇ” ಎನ್ನುವಲ್ಲಿ ಯೋಧನ ಮನದಾಳದ ಒಲವಿನ ನುಡಿಯನ್ನು ಗಮನಿಸಬಹುದು. ಅವಳು ಅವನಿಗೆ ಉಸಿರಾಗಿದ್ದರೆ ಉಸಿರಿಲ್ಲದ ಜೀವ ಇರುತ್ತದೆಯೇ ಆದರೂ ಅಂತಹ ಉಸಿರನ್ನು ಬಿಟ್ಟು ಕರ್ತವ್ಯದ ಕರೆಗೆ ಸಿದ್ಧನಾಗಿ ನಿಂತಿದ್ದಾನೆ ಅದುವೇ ನಮ್ಮ ಭಾರತೀಯ ಸೈನಿಕರ ದಿಟ್ಟ ನಡೆ.

ಮಡದಿಗೆ ಧೈರ್ಯ ತುಂಬುತ್ತಾ ಯುದ್ಧದಲ್ಲಿ ವೀರಾವೇಶದಿಂದ ಹೋರಾಡಿ ನನ್ನ ದೇಶಕ್ಕೆ ತಾಯಿ ಭಾರತಾಂಬೆಗೆ ವಿಜಯದ ಕಿರೀಟ ತೊಡಿಸುವೆ ಎನ್ನುತ್ತಾನೆ. ಆದರೂ ವಾಸ್ತವ ನೋಡಿದರೆ ಯುದ್ಧದಲ್ಲಿ ಏನು ಬೇಕಾದರೂ ಆಗಬಹುದು ಎಂಬ ಅರಿವು ಯೋಧನಿಗೂ ಇದೆ ಆದರೂ ಅವಳು ಪ್ರೀತಿಯಿಂದ ನೀಡಿದ ಸಿಹಿ ಮುತ್ತು ತನ್ನನ್ನು ಕಾಯುತ್ತದೆ .ನನ್ನ ರಕ್ಷಣೆಗೆ, ಗೆಲುವಿಗೆ ಆಸರೆಯಾಗುತ್ತದೆ ಎಂಬ ಆಶಾಭಾವ, ಒಲವಧಾರೆ ಸೈನಿಕನದು.

ನನ್ನವರು ಕಾಯುತಿಹರು

 ನನ್ನನ್ನೇ ನೆನೆಸುತಿಹರು

 ನರಮೇಧ ನಡೆದಿದೆ ಅಲ್ಲಿ

 ನಾನಿದ್ದರೆ ಹೇಗೆ ಇಲ್ಲಿ

  ಹೋಗಿ ಬರಲೆ

ಅಬ್ಬಬ್ಬಾ ಈ ಸಾಲುಗಳು ಯುದ್ಧದ ಸಮಯದಲ್ಲಿ ಸೈನಿಕರ ಉಪಸ್ಥಿತಿಯ ಅನಿವಾರ್ಯತೆಯನ್ನು ಅವರ ಜವಾಬ್ದಾರಿಗಳನ್ನು ಓದುಗರ ಮುಂದಿಡುತ್ತದೆ. ಇಲ್ಲಿ ನನ್ನವರು ಎಂಬ ಪದವೇ ಅದ್ಭುತ ತೂಕದಿಂದ ಮೌಲ್ಯದಿಂದ ಕೂಡಿದೆ. ನನ್ನವರು ಅಂದರೆ ಉಳಿದ ಸೈನಿಕರು ಅವನ ಸ್ನೇಹಿತರು, ಅಧಿಕಾರಿವರ್ಗ ಎಲ್ಲವೂ ಇವನ ಆಗಮನವನ್ನು ಬಯಸುತ್ತದೆ .ಎಂದು ಅಲ್ಲಿ ಈಗಾಗಲೇ ಯುದ್ಧ ಶುರುವಾಗಿದೆ. ಅಲ್ಲಿ ಸೈನಿಕರ ಮಾರಣ ಹೋಮ ನಡೆದಿದೆ. ಹಲವರು ಬಲಿಯಾಗಿದ್ದಾರೆ .ಇಷ್ಟೆಲ್ಲಾ ಆಗಿದ್ದರೂ ನಾನು ಮಾತ್ರ ಇಲ್ಲಿ ಎಲ್ಲವನ್ನು ಮರೆತು ಹೇಗೆ ಕೂರಲಿ ?ನನ್ನ ಸಂಗಡಿಗರ ಆರ್ತನಾದ ಆಕ್ರಂದನ ಮುಗಿಲು ಮುಟ್ಟುತಿದೆ, ನಾನು ಈಗ ಹೋಗಿ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಿ ಅವರಿಗೆ ಆಸರೆಯಾಗಬೇಕು. ನಾನಿದ್ದೇನೆ ನಿಮ್ಮೊಂದಿಗೆ ಧೈರ್ಯವಾಗಿರಿ ಎಂದು ಭರವಸೆ ತುಂಬಬೇಕು, ಶತ್ರುಗಳ ತಂತ್ರಕ್ಕೆ ಪ್ರತಿತಂತ್ರ ಹೆಣೆಯಲೇಬೇಕು, ಇದಕೆ ಕಾರಣರಾದವರ ಸೊಕ್ಕನ್ನು ಅಡಗಿಸಬೇಕು ಇಷ್ಟೆಲ್ಲಾ ಜವಾಬ್ದಾರಿಗಳಿರುವ ನಾನು ಇಲ್ಲಿ ಹೇಗೆ ಇರಲಿ ಯುದ್ಧಕ್ಕೆ ಹೊರಡುವೆ ನನ್ನನ್ನು ಕಳುಹಿಸಿ ಕೊಡು ಎನ್ನುವ ಭಾವನೆ ಹೃದಯ ಕಲಕಿ ಶೋಕಸಾಗರದಲ್ಲಿ ಓದುಗರನ್ನು ಮುಳುಗಿಸುತ್ತದೆ.

ಶಾಂತಿಯ ದೇಶದೊಳು

 ಕ್ರಾಂತಿಯು ಮೊಳಗಿಹುದು

 ಕಡಿವಾಣ ಹಾಕಬೇಕಿದೆ

 ಕಡು ಪಾಪಿಗಳಿಗೆ

 ಹೋಗಿ ಬರಲೆ

ವೀರಕಲಿಗಳ ಕೆಚ್ಚೆದೆಯ ನುಡಿಗಳಿವು. ದೇಶಾಭಿಮಾನದ ಯುಕ್ತಿಗಳಿವು. ನಮ್ಮ ದೇಶವನ್ನು ಶಾಂತಿಯ ಬೀಡು ಎನ್ನುತ್ತಾರೆ. ಇಲ್ಲಿ ನೆಮ್ಮದಿ ತುಂಬಿ ಉಕ್ಕುತ್ತಿದೆ. ಪ್ರೀತಿ, ಪ್ರೇಮ, ವಾತ್ಸಲ್ಯ, ಮಮತೆಗಳ ಸ್ನೇಹ, ಸಹೃದಯತೆ, ಸಾಮರಸ್ಯ ತುಂಬಿ ತುಳುಕುತ್ತಿದೆ. ಈ ಶಾಂತಿಯ ನಾಡಲ್ಲಿ ಕ್ರಾಂತಿಯ ಜ್ವಾಲೆ ಮಟ್ಟಹಾಕಿ, ಅವರ ದುಷ್ಕೃತ್ಯಗಳಿಗೆ ಅವರ ಉತ್ಸಾಹಕ್ಕೆ ರಣಕೇಕೆಗೆ ಕಡಿವಾಣ ಹಾಕಬೇಕಾಗಿದೆ. ಸಾವಿರಾರು ಜನರ ಪ್ರಾಣದೊಂದಿಗೆ ಆಟವಾಡುವ ಕಡು ಪಾಪಿಗಳಿಗೆ ಸಾವಿನ ಮೊಕ್ಷ ಕರುಣಿಸಲು ಸೋಲಿನ ರುಚಿಯನುಣಿಸಲು ಹೋಗಿ ಬರಲೆ ಎಂದು ಪರಿಪರಿಯಾಗಿ ವಿನಂತಿಸುತ್ತಾರೆ.

ಹೆತ್ತವಳು ಕನ್ನಡತಿ

 ಹೊತ್ತವಳು ಭಾರತಿ

 ಹೊತ್ತಿ ಉರಿಯುತ್ತಿದೆ ಅವಳ ನೆತ್ತಿ

 ಬೀಸಬೇಕಿದೆ ತಡಮಾಡದೆ ಕತ್ತಿ

 ಹೋಗಿ ಬರಲೆ

ನಾನು ಜನ್ಮತಳೆದ ಭೂಮಿ ಕರುನಾಡು ನನ್ನ ತಾಯಿ ಕನ್ನಡಾಂಬೆ. ನನಗೆ ಉಸಿರು ಕೊಟ್ಟು, ಹೆಸರು ಕೊಟ್ಟು, ನಿಲ್ಲಲು ನೆಲೆ ಕೊಟ್ಟು , ಪೊರೆದ ಮಾತೆ ಕನ್ನಡತಿ ನಾನು ತಿನ್ನುವ ಅನ್ನ, ಕುಡಿಯುವ ನೀರು,ಉಸಿರಾಡುವ ಗಾಳಿ ಈ ಪುಣ್ಯಭೂಮಿಯದು ಅಂತಹ ಭೂದೇವಿ ಇಂದು ಕಷ್ಟದಲ್ಲಿದ್ದಾರೆ. ನನ್ನನ್ನು ಹೊತ್ತು ನಿಂತಿರುವ ಬೆನ್ನೆಲುಬಾದ ನನ್ನ ತಾಯಿ ಭಾರತಾಂಬೆ .ಕರುನಾಡು ಮತ್ತು ಮಾತೃಭೂಮಿಯ ಬಗ್ಗೆ ಹೆಮ್ಮೆಯ ಮಾತುಗಳನ್ನಾಡುವ ಯೋಧನು ದುಷ್ಟರ ಕ್ರೂರಿಗಳ ಶತ್ರುಗಳ ಹಿಡಿತಕ್ಕೆ ಸಿಲುಕಿ ನನ್ನ ಇಬ್ಬರು ತಾಯಂದಿರು ನರಳುತ್ತಿದ್ದಾರೆ. ಅವರೆಲ್ಲರ ಪ್ರತಾಪಕ್ಕೆ ನನ್ನ ಅಮ್ಮಂದಿರ ನೆತ್ತಿ ಉರಿಯುತ್ತಿದೆ. ಅಂದರೆ ಹೋರಾಟ ನಡೆಯುತ್ತಿದೆ. ಸೈನಿಕರ ಯುದ್ಧ, ಸಿಡಿಮದ್ದುಗಳ ಆರ್ಭಟ, ಮುಗಿಲು ಮುಟ್ಟುತ್ತಿದೆ. ನನ್ನ ಸೇನಾಪಡೆಯು ಸಂಕಷ್ಟದಲ್ಲಿದೆ ನಾನೀಗಲೇ ತೆರಳಬೇಕು. ನನ್ನ ಅವ್ವಂದಿರನ್ನು ರಕ್ಷಿಸಬೇಕು ನಾನು ಪ್ರಾಣದ ಹಂಗು ತೊರೆದು ಹೋರಾಡಬೇಕಿದೆ. ಇಷ್ಟೆಲ್ಲ ಜವಾಬ್ದಾರಿಗಳಿರುವ ನಾನು ಯುದ್ಧಕ್ಕೆ ಹೋಗಿ ಬರಲೆ ಎನ್ನುತ್ತಾರೆ. ನನ್ನನ್ನು ಕಳುಹಿಸಿಕೊಡು ಎನ್ನುವಲ್ಲಿ ಇವರ ದೇಶಾಭಿಮಾನ, ರಾಷ್ಟ್ರಭಕ್ತಿ, ಜನ್ಮ ಭೂಮಿಯ ಬಗ್ಗೆ ಇವರಿಗಿರುವ ಪ್ರೀತ್ಯಾಧರಗಳಿಗೆ ಬೆಲೆ ಕಟ್ಟಲು ಅಸಾಧ್ಯ.

ನಾನು ಇಲ್ಲವೆಂದು ಕೊರಗಬೇಡ

 ನನ್ನನ್ನು ನೆನೆಯಬೇಡ

ಗೆದ್ದರೆ ಧ್ವಜ ಹಿಡಿದು ಬರುವೆ

ನಾ ವೀರಮರಣ ಹೊಂದಿದರೆ

ಧ್ವಜ ಹೊದ್ದು ಬರುವೆ

ಹೋಗಿ ಬರಲೆ

ಈ ಮಾತುಗಳು ಸೈನಿಕನ ನಿಷ್ಠೆ, ದಕ್ಷತೆ ,ಪ್ರಾಮಾಣಿಕತೆಗೆ ಹಿಡಿದ ಕನ್ನಡಿಯಂತೆ ಮೂಡಿಬಂದಿವೆ. ನಾನಿಲ್ಲವೆಂದು ಕೊರಗಬೇಡ ಎನ್ನುವ ಮಾತು ಒಂದು ವೇಳೆ ಸೈನಿಕನಿಗೆ ಸಾವು ಬಂದರೂ ಬರಬಹುದು. ಅದನ್ನು ಎದುರಿಸಲು ನೀನು ಸಿದ್ಧಳಾಗು. ನಾನಿಲ್ಲದಿದ್ದರೂ ನನ್ನನ್ನು ನೆನೆದು ಕೊರಗಬೇಡ ಎಂದು ಮಾನಸಿಕವಾಗಿ ಮಡದಿಯನ್ನು ಸಿದ್ಧಗೊಳಿಸುವ ಸೈನಿಕನ ಮನೋಸ್ಥಿತಿಗೆ ನಾವೆಲ್ಲ ಹ್ಯಾಟ್ಸಾಫ್ ಹೇಳಲೇಬೇಕು.

ಯೋಧರು ದೈಹಿಕವಾಗಿ  ಮಾತ್ರ ಸಬಲರಲ್ಲ. ಮಾನಸಿಕವಾಗಿಯೂ, ಭಾವನಾತ್ಮಕವಾಗಿಯೂ ಸದೃಡರಾಗಿರುತ್ತಾರೆ. ಗೆದ್ದರೆ ವಿಜಯೋತ್ಸವ ಆಚರಿಸಲು ಸಿದ್ಧರಿರುತ್ತಾರೆ. ತಾಯಿ ಕನ್ನಡತಿಗಾಗಿ ವೀರಾವೇಶದಿಂದ ಹೋರಾಡಿ ಮಡಿದರೆ, ವೀರ ಸ್ವರ್ಗ ಸೇರಲು ಸಿದ್ದರಿರುತ್ತಾರೆ. ನಮ್ಮ ದೇಶದ ರಕ್ಷಣೆಗೆ ಕಂಕಣಬದ್ಧರಾಗಿದ್ದಾರೆ. ಇವರು ದೇಶದ ದ್ವಜವು ಸದಾ ಹಾರಾಡುತ್ತಾ ರಾರಾಜಿಸಲು ತಮ್ಮ ಬೆವರ ತೈಲವನೆರೆದು ಸ್ವಾತಂತ್ರ್ಯದ ಹಣತೆಯನ್ನು ಹಚ್ಚಲು ಸದಾ ಸನ್ನದ್ಧರಾಗಿರುತ್ತಾರೆ.

ನಾಡಿನಲ್ಲಿ ಗಡಿಗಳಲ್ಲಿ ಬಾನಿನಲ್ಲಿ ಕಡಲಿನಲ್ಲಿ

 ನಮ್ಮ ಯೋಧರತ್ತಾ ಹಿಡಿದ ನಮ್ಮ ಧ್ವಜದ ನೆರಳಿನಲ್ಲಿ

ಒಂದೆ ನೆಲದ ತೊಟ್ಟಿಲಲ್ಲಿ ಬೆಳೆದ ನಮ್ಮ ಕೊರಳಿನಲ್ಲಿ

 ಎಂಬ ಕೆ. ಎಸ್.  ನರಸಿಂಹಸ್ವಾಮಿಯವರ ಸಾಲುಗಳು ಸೈನಿಕರ ಮಹಿಮೆಯನ್ನು ಸಾರುತ್ತವೆ.

ಯುದ್ಧದಲ್ಲಿ ಯೋಧ ತಾನು ಗೆದ್ದರೆ ವಿಜಯ ಪತಾಕೆ ಹಾರಿಸಿ ನಮ್ಮ ದ್ವಜವನ್ನು ಬಾನೆತ್ತರಕ್ಕೆ ಹಾರಿಸುತ್ತಾ, ಹೆಮ್ಮೆಯಿಂದ, ಅಭಿಮಾನದಿಂದ ಜೈಕಾರ ಮೊಳಗಿಸುತ್ತಾ, ಭಾರತಾಂಬೆಯನ್ನು ವಂದಿಸಲು ಬರುವೆ ಎನ್ನುವ ಜೊತೆಗೆ ಅಚಾನಕ್   ತಿರುವು ಸಿಕ್ಕಿ ಸೋತರೆ, ಶತ್ರುಗಳ ಸೆರೆ ಸಿಕ್ಕರೆ, ಅವರಿಂದ ಗುಂಡೇಟಿಗೆ ಬಲಿಯಾದರೆ ನಾನು ಚಿಂತಿಸುವುದಿಲ್ಲ. ದೇಶಕ್ಕಾಗಿ ನಗು ನಗುತ ನನ್ನ ಪ್ರಾಣ ತ್ಯಾಗ ಮಾಡುವೆ ಎನ್ನುವರು.

ಧ್ವಜ ಹಾರಿಸಲು ಅಸಾಧ್ಯವಾದರೆ ನನ್ನ ಜೀವವಿಲ್ಲದ ದೇಹದ ಮೇಲಾದರೂ ಅದನ್ನು ಹೊದ್ದು ಜೀವನ ಸಾರ್ಥಕಪಡಿಸಿಕೊಳ್ಳುವೆ ಎನ್ನುವ ಸಾಲುಗಳು ನಿಜಕ್ಕೂ ಕಿಡಿಗೇಡಿಗಳ ಮನವನ್ನು ಅರಳಿಸಿ ದೇಶಾಭಿಮಾನ ಅರಳುವಂತೆ ಮಾಡುತ್ತವೆ. ಅಂತಹ ಭಾವ ತುಂಬಿದ ಕವಿಗೆ ನಮನಗಳನ್ನು ಹೇಳಲೇಬೇಕು.

ಸತ್ತರೆ ಅಳದಿರು

 ಹೆತ್ತವರ ನೋಯಿಸದಿರು

 ಹೊಟ್ಟೆಯಲ್ಲಿರುವ ಕಂದನಿಗೆ

 ಸೈನ್ಯಕ್ಕೆ ಸೇರಿಸದೆ ಕೊರಗದಿರು

 ಹೋಗಿ ಬರಲೆ

ಸೈನಿಕರು ಸಾವಿಗೆ ಹೆದರುವ ಅಂಜುಬುರುಕರಲ್ಲ. ಶತ್ರುಗಳಿಗೆ ಬೆನ್ನುತೋರಿ ಪಲಾಯನ ಮಾಡುವ ರಣಹೇಡಿಗಳು ಅಲ್ಲ. ಬಂದಿದ್ದೆಲ್ಲವನ್ನು ಎದುರಿಸಿ ಸಿಡಿದೇಳುವ ರಣಗ್ರಾಹಿಗಳು. ಆದರೂ ಯುದ್ಧ ಎಂದ ಮೇಲೆ ಸೋಲು ಗೆಲುವುಗಳು ಸಹಜ. ಒಂದು ವೇಳೆ ಇವರು ವೀರ ಮರಣ ಹೊಂದಿದರೆ, ಜೀವನೋತ್ಸಾಹ ಕಳೆದುಕೊಳ್ಳಬೇಡ, ನಾನು ಇಲ್ಲವೆಂದು ಹೆತ್ತವರನ್ನು ನೋಯಿಸದಿರು. ಅವರನ್ನು ಪ್ರೀತಿಯಿಂದ ನೋಡಿಕೋ, ಎನ್ನುವಲ್ಲಿ ಒಬ್ಬ ಯೋಧನ  ದೇಶಪ್ರೇಮ, ಅದೇ ಸಮಯದಲ್ಲಿ ಒಬ್ಬ ಮಗನ ಮಾತೃಪ್ರೇಮ ಎರಡು ಅಭಿವ್ಯಕ್ತಗೊಂಡಿವೆ. ಸಾವಿನಂಚಿನಲ್ಲಿದ್ದ ತಂದೆ ತಾಯಿಗಳ ಬಗ್ಗೆ ಇರುವ ಕಾಳಜಿ ಸಾಲುಗಳನ್ನು ಕವನ ರೂಪದಲ್ಲಿ ‌ಕಟ್ಟಿದ್ದಾರೆ.

ಇಲ್ಲಿ ಸೈನಿಕ ತನ್ನ ಮಡದಿಯನ್ನು  ಮಾತ್ರ ಬಿಟ್ಟು ಹೋಗುತಿಲ್ಲ. ಜೊತೆಗೆ ಅವಳ ಒಡಲೊಳಗೊಂದು ಉಸಿರು ತುಂಬಿ ಹೋಗುತ್ತಿದ್ದಾನೆ.‌ ಯುದ್ಧದಲ್ಲಿ ನಾ ಸತ್ತರೆ  ಹೆದರಿ ದುಃಖಿಸುತ್ತಾ ನನ್ನ ಮಗನನ್ನು ಸೇನೆಗೆ ಕಳುಹಿಸದೆ ಇರಬೇಡ ಎನ್ನುವಲ್ಲಿ ಅವನ ದೇಶಾಭಿಮಾನವನ್ನು, ತ್ಯಾಗ ಮನೋಭಾವವನ್ನು ಮನಮಿಡಿಯುವಂತೆ ಶಿರಭಾಗಿ ವಂದಿಸುವಂತೆ ಕಟ್ಟಿರುವುದು ಕವಿಯ ಅಭಿನಂದನಾರ್ಹ ಹೆಜ್ಜೆಯೆನ್ನಬಹುದು.

ತಾಯಿಯ ಸೇವೆ ಮಾಡಿದ

 ತೃಪ್ತಿಯೂ ನನಗಿಂದು

 ಮರೆಯದೆ ಕೊಂಡೊಯ್ಯುವೆ

 ನೀ ಕೊಟ್ಟ ಮುತ್ತೊಂದು

 ಹೋಗಿ ಬರಲೆ ಯುದ್ಧಕ್ಕೆ

 ಅಳದಿರು ನನ್ನುಸಿರೇ

ಇಲ್ಲಿ ಸೈನಿಕ ನಾನು ಯುದ್ಧಕ್ಕೆ ಹೋಗುತ್ತಿರುವುದು ತನಗೆ ಬೇಸರವಿಲ್ಲ,ಸಾವಿಗೆ ಭಯವಿಲ್ಲ,ನಾನು ಕೊರಗುತ್ತಿಲ್ಲ. ತಾಯಿ ಭಾರತಾಂಬೆ ಸೇವೆ ಮಾಡಲು ನನಗೆ ತೃಪ್ತಿ ಇದೆ.  ಎನ್ನುವ ಭಾವ ಅವರ ಕಣಕಣದಲ್ಲೂ ನರನಾಡಿಗಳಲ್ಲೂ ಧುಮ್ಮಿಕ್ಕಿ ಬರುತ್ತಿರುವ ರಾಷ್ಟ್ರ ಭಕ್ತಿಯನ್ನು ಸೂಚಿಸುತ್ತದೆ.

ನಾ ಇಲ್ಲಿಂದ ಹೋದರು ಇಹಲೋಕ ತ್ಯಜಿಸಿದರೂ ಪರಲೋಕಕ್ಕೆ ನೀ ಕೊಟ್ಟ ಸಿಹಿ ಮುತ್ತನು ಕೊಂಡೊಯ್ಯುವೆ ಎನ್ನುವಲ್ಲಿ ಅವರ ನೈಜ ಪ್ರೇಮದ ಅನಾವರಣವಿದೆ.

ಕವಿತೆಯಲ್ಲಿ ನಾ ಕಂಡ ಕವಿ ಭಾವ

ಒಮ್ಮೆ ನಾವೆಲ್ಲಾ ಯೋಚಿಸಲೇಬೇಕು ಸ್ನೇಹಿತರೆ ಒಮ್ಮೆ ಮನೆಯಿಂದ ಹೊರಟವರು ಮತ್ತೆ  ಮನೆ ಸೇರುವ ಭರವಸೆಯಿಲ್ಲ.ಯುದ್ಧದಲ್ಲಿ ಏನಾದರೂ ಸಂಭವಿಸಬಹುದು. ಹುತಾತ್ಮರಾಗಬಹುದು ಅಥವಾ ಶತ್ರುಗಳೆದೆ ಸೀಳಿ ವಿಜಯ ಪತಾಕೆ ಹಾರಿಸಲುಬಹುದು. ಇಂತಹ ಭಾವನಾತ್ಮಕ ಸನ್ನಿವೇಶದಲ್ಲಿ ತನ್ನವರನ್ನು ಮರೆತು ದೇಶಕ್ಕಾಗಿ ಹೋರಾಡುವುದು ಇದೆಯಲ್ಲ ಅದಕ್ಕೆ ನಾವು ಬೆಲೆ ಕಟ್ಟಲಾದೀತೆ ಇಂತಹ ಒಂದು ಭಾವನಾತ್ಮಕ ಹಾಗೂ ಮನಮಿಡಿಯುವ ಸಾಲುಗಳು  ನಿಜಕ್ಕೂ ಶ್ಲಾಘನೀಯ ಸಂಗತಿ.

ಸೈನಿಕರ ಸಂಪೂರ್ಣ ಬದುಕಿನ ಪರಿಸ್ಥಿತಿಯನ್ನು ಇಲ್ಲಿ ಕವಿಯು ಅನಾವರಣ ಮಾಡುತ್ತಾರೆ. ಇದರಿಂದ ಕವಿಗೆ ಸೈನಿಕರ ಮೇಲೆ, ನಮ್ಮ ಭಾರತೀಯ ಸೇನೆಯ ಮೇಲೆ, ಅವರ ಕುಟುಂಬದವರ ಮೇಲೆ ನಮ್ಮೆಲ್ಲ ನಾಗರಿಕರ ಜವಾಬ್ದಾರಿಗಳ ನೆನಪಿಸು ವಿಕೆಯಲ್ಲಿ ಇರುವ ಕಾಳಜಿ ಮತ್ತು ಹಿತಾಸಕ್ತಿಯನ್ನು ನಾವು ಗಮನಿಸಬಹುದು.

 ಇಂತಹ ಗಂಡುಗಲಿಗಳಿಗೆ ಮತ್ತು ಕುಟುಂಬದವರಿಗೆ ಬೇಕಾಗಿರುವುದು ನಮ್ಮ ಅನುಕಂಪವಲ್ಲ. ಮನವನ್ನು ಸಂತೈಸುವ ಸಾಂತ್ವನದ ನುಡಿಗಳು ನಿಮ್ಮೊಂದಿಗೆ ನಾವಿದ್ದೇವೆ ಎಂಬ ಭರವಸೆಯ ಆಶಾಕಿರಣ ಎಂಬ ಭಾವವನ್ನು ಕವಿ ಓದುಗರ ಮುಂದಿಟ್ಟಿದ್ದಾರೆ

ಹೆಜ್ಜೆ ಹೆಜ್ಜೆಗೂ ಮೃತ್ಯುವಿನೊಂದಿಗೆ ಮುಖಾಮುಖಿಯಾಗುವ ಸೈನಿಕರ ಮನೋಬಲ ಕೋಲ್ಮಿಂಚಿಗಿಂತಲೂ ಪ್ರಕರವಾದ ಅವರ ದೃಷ್ಟಿ ಎಂತಹ ಕ್ರೂರಿಯಾದ ಶತ್ರುವನ್ನು ಎದುರಿಸುವ ಆತ್ಮಸ್ಥೈರ್ಯ ಮದ್ದುಗುಂಡುಗಳನ್ನು ಬಳಕೆಯು ಸಾವಿನ ಕೊನೆಯವರೆಗೂ ದೇಶಕ್ಕಾಗಿ ಹೋರಾಡಿ ಮಿಡಿಯುವ ಇವರ ನಿಸ್ವಾರ್ಥ ಸೇವೆ ಶ್ಲಾಗನೀಯ ಎನ್ನುವ ಅರ್ಥದಲ್ಲಿ ಕವಿ ಬಹಳ ಸೊಗಸಾಗಿ ಕವಿತೆಯನ್ನ ನವಿರಾದ ಭಾವಗಳನ್ನು ಸ್ಪರ್ಶಿಸುವಂತೆ ಹೃದಯ ಹೊಕ್ಕು ಚಿಂತಿಸುವಂತೆ ಮಾಡುವಲ್ಲಿ ಪ್ರೌಢಿಮೆ ಮೆರೆದಿದ್ದಾರೆ.

ಜೊತೆ ಜೊತೆಗೆ ಇವರನ್ನು ಕಳೆದುಕೊಂಡ ಪರಿವಾರದ ಮುಗಿಲು ಮುಟ್ಟಿದ ಆಕ್ರಂದನ ವರ್ಣಿಸಲಸದಳ .ಸೈನಿಕರ ಬಗ್ಗೆ ನಾಗರಿಕ ಸಮಾಜದ ಅನಾದರ ಹಾಗೂ ಕುಟುಕು ಮಾತುಗಳಾಡುವ ಜನತೆಗೆ ಈ ಕವಿತೆಯೊಂದು ಪಾಠವಾಗಲಿ. ಸೈನಿಕರ ಮನೋಸ್ಥಿತಿ, ಸಾಮಾಜಿಕ ಮನ್ನಣೆ ಜನತೆಗೆ ಅರಿವಾಗಲಿ ಎಂಬ ಮನದಿಂಗಿತದಲ್ಲಿ ಕವಿಯು ಕವಿತೆಯನ್ನು ಕಟ್ಟಿರುವುದು ಅಭಿನಂದನಾರ್ಹ ಸಂಗತಿಯಾಗಿದೆ.

ನಿಜವಾಗಿ ಸ್ನೇಹಿತರೆ ಇಂತಹ ಸಹಸ್ರ ಸಹಸ್ರ ಯೋಧರನ್ನು ಪಡೆದ ಭಾರತಾಂಬೆ ಧನ್ಯಳು. ಅದೆ ರೀತಿ ಯೋಧರು ಬಗ್ಗೆ ಇಂತಹ ಮನೆ ಮಿಡಿಯುವ ಕವಿತೆಯೊಂದನ್ನು ರಚಿಸಿದ ಕವಿತೆಗೂ ಅಭಿನಂದನೆಗಳು

ಸ್ನೇಹಿತರೆ ನಿಮಗೆಲ್ಲಾ ಈ ಕವನ ಹಾಗೂ ವಿಶ್ಲೇಷಣೆ ಇಷ್ಟವಾಗಿದೆಹಾಗೂ ನಮ್ಮ ಯೋಧರು ಬಗ್ಗೆ ಗೌರವ ಭಾವನೆ ಮೂಡಿದೆ ಎಂದು ಭಾವಿಸುತ್ತಾ, ಮುಂದಿನ ವಾರ ಮತ್ತೊಂದು ಹೊಸ ಕವಿತೆಯೊಂದಿಗೆನಿಮ್ಮ ಮುಂದೆ ಬರಲಿದ್ಧೇನೆ.


ಅನುಸೂಯ ಯತೀಶ್

ಅನುಸೂಯ ಯತೀಶ್ ಇವರು ನೆಲಮಂಗಲದ ನಿವಾಸಿ. ಸ್ನಾತಕೋತ್ತರ ಪದವೀಧರೆಯಾದ ಇವರು ಮಾಗಡಿ ತಾಲ್ಲೂಕಿನಲ್ಲಿ ಸರ್ಕಾರಿ ಶಾಲಾ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಇವರು ಶಿಕ್ಷಣ ಇಲಾಖೆಯಿಂದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸರ್ಕಾರಿ ನೌಕರರ ಸಂಘದಿಂದ ಸೇವಾರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಸಾಹಿತ್ಯ ವಿಮರ್ಶೆ, ಕಥೆ, ಕವನ,ಗಜಲ್, ಲೇಖನ,ಛಂಧೋಬದ್ದ ಕವನಗಳ ರಚನೆ ಸೇರಿದಂತೆ ಹಲವಾರು ಪ್ರಕಾರಗಳಲ್ಲಿ ಸಾಹಿತ್ಯ ರಚಿಸುತಿದ್ದಾರೆ

Leave a Reply

Back To Top