ಕಾವ್ಯ ಸಂಗಾತಿ
ಸುಲಭಾ ಜೋಶಿಹಾವನೂರರವರ
ಹೊಸ ಕವಿತೆಗಳು
ಸೂರ್ಯ
ಸೂರ್ಯನಿಗೇನು ಗೊತ್ತು ಹೊಸವರುಷ
ನಿತ್ಯ ಬರುವಂತೆ ಬಂದ
ಆತ ನಿತ್ಯ ನೂತನ
ಸತ್ಯ ಚೇತನ.
ತಂದ ಆತ್ಮೀಯತೆಯ
ಅಮರತ್ವದ ಅನುಬಂಧ
ಅದೇ ಸುರಮ್ಯ ರಶ್ಮಿ
ಪ್ರಭಾವಳಿಯ ಪರ್ವಣಿ
ವಸುಂಧರೆಗೆ ಚಿಗುರು
ಚೈತನ್ಯವೇ ಹೊಸವರುಷ.
ಆಲಸ್ಯ ಜಡತ್ವ
ಕಿತ್ತೋಗೆಯೋ ಭಾಸ್ಕರ
ಸೂರ್ಯ ಮಿತ್ರ
ನಾ ನಿನಗೆ ಸದಾ
ನತಮಸ್ತಕ.
**
ಋತು ಪರ್ವ
ಮಳೆ ಬಿತ್ತು ಮಳೆ ಬಿತ್ತು
ತೊಯ್ದು ಬಸಿಯುತ್ತ
ಹಸಿರು ಹೂವು ಹಣ್ಣು ವೃಕ್ಷ ಅದೇ ವಸುಂಧರೆ
ನಿನ್ನ ಶೃಂಗಾರ.
ಎಳೆ ಬಿಸಿಲು ಎಳೆ ಬಿಸಿಲು ಎಳೆ ಎಳೆಯಾಗಿತ್ತು
ಎಳೆಯುತ್ತ ದಿನದ ತೇರು
ಚಳಿಯಿತ್ತು ಚಳಿಯಿತ್ತು
ತುಳಸಿಟ್ಟೆಯ ಸುತ್ತ
ಪಾರಿಜಾತ ಪರಿಮಳ
ಸಿಂಪಡಿಸಿತ್ತು
ಭುವನ ಪ್ರೀತಿಯ ಭಾವನಾ ತೋಟ
ಜಗವೆಲ್ಲಾ ಋತುಪರ್ವ
ಅಲ್ಲವೇ
ಯಥಾವತ್ ಕಥಾಸರಿತ
ಸಾಗರ.