ಅಂಕಣ ಬರಹ

ಗಜಲ್ ಲೋಕ

ಶಮೆಯ ಬೆಳಕಿನಲ್ಲಿ ಗಜಲ್ ತೋರಣ..

ನಮಸ್ಕಾರ…

ಇಂದು ಮತ್ತೊಮ್ಮೆ ನಾನು ಆರಾಧಿಸುವ ಗಜಲ್ ಕಾರವಾನ್ ನಲ್ಲಿ ವಿಹರಿಸುತಿದ್ದೇನೆ, ಈ ಲೋಕದ ರಾಯಭಾರಿಯಾಗಿ. ವೈವಿಧ್ಯಮಯ ಮನೋಭಾವದ ಸೆರಗಿನಲ್ಲಿ ಮನಸುಗಳನ್ನು ಅರಿಯುತ್ತ, ತಮ್ಮನ್ನು ಸ್ವಾಗತಿಸುತ್ತಿರುವೆ ; ಜೊತೆ ಜೊತೆಗೆ ಹೆಜ್ಜೆ ಹಾಕಲು…!! ಬರುವಿರಲ್ಲವೆ.. ಬನ್ನಿ…!!

ಹಗೆತನವೆ ಸರಿ ಹೃದಯವನ್ನು ನೋಯಿಸಲಾದರೂ ಬಾ

ಬಾ ಮತ್ತೊಮ್ಮೆ ನನ್ನನ್ನು ಬಿಟ್ಟು ಹೋಗಲಾದರೂ ಬಾ

                                 -ಅಹ್ಮದ್ ಫರಾಜ್

       ‘ನೋವು-ನಲಿವು’ ಎನ್ನುವ ಜೋಡಿ ಪದಗಳು ಮನುಷ್ಯನ ಜೀವನದುದ್ದಕ್ಕೂ ಗೋಚರಿಸುತ್ತವೆ. ಆದರೆ… ಎಲ್ಲರಲ್ಲಿ ಅವುಗಳು ಸಮಪ್ರಮಾಣದಲ್ಲಿ ಇರುವುದಿಲ್ಲ. ಒಂದೆಡೆ ಉಪ್ಪು ನೀರಿನ ಪ್ರಮಾಣ ಹೆಚ್ಚಿದ್ದರೆ, ಮತ್ತೊಂದೆಡೆ ಸಿಹಿ ನೀರಿನ ಪ್ರಮಾಣ!! ಸಿಹಿ ನೀರು ಕುಡಿಯದವರು ಸಿಗಬಹುದು ಈ ಜಗದೊಳಗೆ, ಉಪ್ಪು ನೀರಿನಲ್ಲಿ ಜಳಕ ಮಾಡದವರುಂಟೆ!! ಇಂಥಹ ತಳಮಳ, ದುಗುಡ, ಉತ್ಸಾಹ, ಉಲ್ಲಾಸವನ್ನು ಮನಬಿಚ್ಚಿ ಅಭಿವ್ಯಕ್ತಿಸುವ ಏಕೈಕ ಪ್ರಾಣಿಯೆಂದರೆ ಅದು ಮಾನವ ಮಾತ್ರ. ಅಭಿವ್ಯಕ್ತಿಯ ಕಲಾವಂತಿಕೆಯಾದ ಸಾಹಿತ್ಯ ಸುಖ-ದುಃಖಗಳಿಗೆ, ಸಂಕಟ-ಸವಾಲುಗಳಿಗೆ ಒಂದು ಸ್ವರೂಪವನ್ನು ನೀಡುತ್ತದೆ. ಎಲ್ಲ ಸಾಹಿತ್ಯ ಪ್ರಕಾರಗಳು ಪ್ರಮುಖವಾದರೂ ಉತ್ಕಟವಾದ ಅಭಿವ್ಯಕ್ತಿ ತೋರ್ಪಡಿಸುವಲ್ಲಿ ಕಾವ್ಯ ಮುಂಚೂಣಿಯಲ್ಲಿದೆ.‌ ಕಾವ್ಯ ರೂಪಕದ ಮೂಲಕ ಒಂದು ವಸ್ತುವನ್ನು ತೋರಿಸುತ್ತ ಇನ್ನೊಂದು ವಸ್ತುವನ್ನು ಬೆಳಗಿಸುತ್ತದೆ, ಬೆಳಗಿಸುವಂತಿರಬೇಕು. ಜೊತೆಯಲ್ಲಿ ಅದು ಅಭಿವ್ಯಕ್ತಿ ಕೆಚ್ಚೆದೆಯ ಧ್ವನಿಯಾಗಿ ಮೂಡಬೇಕು. ಅಂದಾಗ ಮಾತ್ರ ಕಾವ್ಯದ ರೂಪ ಸಹೃದಯ ಓದುಗರ ಎದೆಯ ಕದವನ್ನು ತಟ್ಟಿ ಅನುಸಂಧಾನಗೈಯುತ್ತದೆ. ಕವಿಯ ಅನುಭಾವ, ಸಾಮರ್ಥ್ಯ‌ಕ್ಕೆ ಅನುಗುಣವಾಗಿ ಕಾವ್ಯ ಹೊರಬರುತ್ತದೆ. ಈ ಕಾವ್ಯ ಪ್ರಕಾರ ಎಲ್ಲ ಭಾಷೆಗಳಲ್ಲಿಯೂ ಪ್ರಖರವಾಗಿದೆ. ಆದರೆ ಜಗತ್ತಿನ ಎಲ್ಲ ಭಾಷೆಯ ಕಾವ್ಯಗಳಿಗಿಂತಲೂ ಅರಬ್ ಭಾಷೆಯ ‘ಗಜಲ್’ ಪರ್ಷಿಯನ್ ಭಾಷೆಯಲ್ಲಿ ಮೈದಳೆದ ರೀತಿಗೆ ಫಿದಾ ಆಗದ ಸಾಹಿತ್ಯಾಭ್ಯಾಸಿಗಳು, ಕಲಾ ರಸಿಕರೆ ಇಲ್ಲ ಎಂದರೂ ಅತಿಶಯೋಕ್ತಿಯಾಗದು.

ಇಂಥಹ ‘ಗಜಲ್’ ಇಂದು ಪ್ರಪಂಚದೆಲ್ಲೆಡೆ ಮೈ ಚಳಿ ಬಿಟ್ಟು ನರ್ತಿಸುತಿದೆ, ಜನ ಸಾಮಾನ್ಯರನ್ನೂ ಭಾವುಕರನ್ನಾಗಿಸಿ ಕುಣಿಸುತಿದೆ. ಕನ್ನಡದಲ್ಲಿಯಂತೂ ಇಂದು ಗಜಲ್ ಗೆ ಪರ್ವಕಾಲವೆ ಸರಿ!! ಕನ್ನಡ ಭುವನೇಶ್ವರಿಯ ಮಕ್ಕಳಲ್ಲಿ ಗಜಲ್ ಕೇಳದ, ಬರೆಯಲು ಪ್ರಯತ್ನಿಸದ ಕವಿಮನಸುಗಳೆ ಇಲ್ಲವೆಂದರೂ ನಡೆದೀತು!! ಈ ದಿಸೆಯಲ್ಲಿ ಕನ್ನಡದಲ್ಲಿ ಅಸಂಖ್ಯಾತ ಸಾಹಿತಿಗಳು ಗಜಲ್ ಗಳನ್ನು ಬರೆಯುತ್ತಿದ್ದಾರೆ. ಅವರುಗಳಲ್ಲಿ ಶ್ರೀಮತಿ ಶಮಾ ಜಮಾದಾರ ಅವರೂ ಒಬ್ಬರು.

      ಶಮಾ ಜಮಾದಾರ ಅವರು ಶ್ರೀ ಗೌಸಖಾನ್ ದೇವಡಿ ಮತ್ತು ಶ್ರೀಮತಿ ಮುಮ್ತಾಜ್ ಗೌ. ದೇವಡಿ ದಂಪತಿಗಳ ಎಂಟು ಮಕ್ಕಳಲ್ಲಿ ಕಿರಿಯ ಮುದ್ದಿನ ಮಗಳಾಗಿ ಬೆಳಗಾವಿ ಜಿಲ್ಲೆಯ ಗೋಕಾಕನಲ್ಲಿ ಜನಿಸಿದರು. ಇವರ ತಂದೆಯವರು ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಶಾಲಾ ಶಿಕ್ಷಕಕರಾಗಿದ್ದು, ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು, ಸಂಸ್ಕಾರವನ್ನು ನೀಡಿ ಬೆಳೆಸಿದರು. ಇವರು ಓದಿದ್ದು ಆಂಗ್ಲ ಸಾಹಿತ್ಯವಾದರೂ ನೆಲದ ಮಹಿಮೆ ಎಂಬಂತೆ ಬಾಲ್ಯದಿಂದಲೂ ಕನ್ನಡ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃಷಿಯನ್ನು ಮಾಡುತ್ತ ಪ್ರವರ್ಧಮಾನಕ್ಕೆ ಬಂದಿದ್ದಾರೆ. ಇದಕ್ಕೆ ಅವರು ಬೆಳೆದ ಪರಿಸರವೂ ಸಾಥ್ ನೀಡಿದೆ. ಇವರ ಕಥೆ, ಕವನ, ಚುಟುಕುಗಳು, ಗಜಲ್ ಗಳು ಧಾರವಾಡದ ಆಕಾಶವಾಣಿಯಲ್ಲಿ, ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. “ಬಿಂಬ”ಎಂಬ ಕವನ ಸಂಕಲನ, “ಶಮಾ ಗಜಲ್” ಎಂಬ ಗಜಲ್ ಸಂಕಲನವನ್ನು ಪ್ರಕಟಿಸಿ ಕನ್ನಡ ಸಾರಸ್ವತ ಲೋಕಕ್ಕೆ ತಮ್ಮದೆಯಾದ ಕೊಡುಗೆಯನ್ನು ನೀಡಿದ್ದಾರೆ. ಇವರ ಎರಡನೆಯ ಗಜಲ್ ಸಂಕಲನವು ಅಚ್ಚಿನಲ್ಲಿದೆ. ಹಲವಾರು ಕವಿಗೋಷ್ಠಿ, ಗಜಲ್ ಗೋಷ್ಠಿಗಳಲ್ಲಿ ಭಾಗವಹಿಸಿದ ಇವರು ಉತ್ತಮ ಸಂಘಟಕರಾಗಿದ್ದು, ಹಲವಾರು ಸಂಘ ಸಂಸ್ಥೆಗಳ ಗೌರವಕ್ಕೆ ಭಾಜನರಾಗಿದ್ದಾರೆ.

      ಪ್ರತಿ ಮನುಷ್ಯನು ತನ್ನ ಎದೆಯ ಗೂಡಲ್ಲಿ ಇರುವ ಹೆಪ್ಪುಗಟ್ಟಿದ ನೋವಿಗೆ ಕಾವು ಕೊಡಲು ಬಯಸುತ್ತಾನೆ. ಆ ಕಾವು ಕೊಡುವ ಶಾಖಾಸುಂದರಿ ಎಂದರೆ ಗಜಲ್. ಹಸಿಗಾಯಗಳಿಗೆ ಮದ್ದು ನೀಡುವ, ನೋವಿನ ಜನ್ಹಾಜಗೆ ಹೆಗಲು ಕೊಡುವ ; ಮಸಣದಲ್ಲೂ ಗುಲ್ ಮೊಹರನ್ನು ಸೃಷ್ಟಿಸುವ ಅನೋಕಿ ಚಾಂದನಿಯೆ ಈ ಗಜಲ್. ಬಿದ್ದವರಿಗೆ ಎತ್ತುವ, ನೊಂದವರಿಗೆ ಸಂತೈಸುವ ; ಬಾಡಿದ ಮುಖಗಳಲ್ಲಿ ಮುಸ್ಕಾನ್ ತರಿಸುವ ಗಜಲ್ ಎಲ್ಲರ ಅಚ್ಚುಮೆಚ್ಚಿನ ಕಾವ್ಯ ಪ್ರಕಾರವಾಗಿದೆ. ಶಬ್ದಗಳೊಂದಿಗೆ ಸದಾ ಸರಸವಾಡುವ ಶಮಾ ಜಮಾದಾರ ಅವರು ಸಮಾಜಮುಖಿಯಾಗಿ ಸಮಾಜದಲ್ಲಿ ದಿನನಿತ್ಯದ ಆಗುಹೋಗುಗಳನ್ನು ತಮ್ಮ ವಸ್ತುವನ್ನಾಗಿಸಿಕೊಂಡು ಗಜಲ್ ಗಳನ್ನು ರಚಿಸಿದ್ದಾರೆ. ಇವರ ಗಜಲ್ ಗಳಲ್ಲಿ ವಿಶೇಷವಾಗಿ ಸ್ತ್ರೀ ಸಂವೇದನೆ, ತಾತ್ವಿಕ ಚಿಂತನೆ, ಸಾಮಾಜಿಕ ವ್ಯವಸ್ಥೆಯ ಚಿತ್ರಣ ದಂಡಿಯಾಗಿ ಒಡಮೂಡಿದೆ. ಇದರೊಂದಿಗೆ ಹರಿಯುವ ಪ್ರೇಮಧರೆಯ ಪ್ರವಾಹವನ್ನು ನಿರ್ಲಕ್ಷಿಸಲಾಗದು!

ದೇಶ ಭಕ್ತಿಯಿಂದು ದೇಹದಲ್ಲಿರದೇ ಬಟ್ಟೆಗಳಲಿ ಕಂಗೊಳಿಸುತಿದೆ ಸಾಕಿ

ಬದ್ಧತೆಯಿಲ್ಲದ ಬದುಕು ಬಯಲಿನಲ್ಲಿ ತಿರುಗುತಿದೆ

‘ದೇಶಭಕ್ತಿ’ ಎನ್ನುವಂತದ್ದು ಜಾಹಿರಾತಿನಂತೆ ಪ್ರಸಾರ, ಪ್ರಚಾರ ಮಾಡುವ ವಸ್ತುವಲ್ಲ. ಆದರೆ ದುರಂತವೆಂದರೆ ಇಂದು ‘ದೇಶಭಕ್ತಿ’ಯನ್ನು ಯಾವ್ಯಾವುದೋ ಮಾನದಂಡಗಳಿಂದ ಅಳೆಯಲಾಗುತ್ತಿದೆ. ಇದನ್ನು ಕಂಡಂತ ಗಜಲ್ ಗೋ ಅವರು ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಬೆರೆತು ಹೋಗಿರುವ ರಾಜಕೀಯವನ್ನು ನೋಡಿ ಜಿಗುಪ್ಸೆ ಪಟ್ಟುಕೊಂಡು ದೇಶಭಕ್ತಿ ಎನ್ನುವುದು ನಾವು ತೊಡುವ ಬಟ್ಟೆಗಳಲ್ಲಿ ಇಲ್ಲ, ಅದು ಅಂತರಂಗದ ಝರಿ ಎಂದು ಹೇಳುತ್ತಲೆ ಬದುಕಿನ ಶಿಲ್ಪಕ್ಕೆ ಬದ್ಧತೆ ಮುಖ್ಯ ಎಂದು ಸಾರಿದ್ದಾರೆ. ಬದ್ಧತೆ ಇರದ ಬಾಳು ವೈಯಕ್ತಿಕ ನೆಲೆಯಲ್ಲೂ ಹಾಗೂ ಸಮಷ್ಟಿ ನೆಲೆಯಲ್ಲೂ ಅಪಾಯಕಾರಿ ಎಂಬ ಸಂದೇಶವನ್ನು ಈ ಷೇರ್ ತನ್ನ ಒಡಲೊಳಗೆ ಕಾಪಿಟ್ಟುಕೊಂಡಿದೆ.

         ನಾರಿಯನ್ನು ಪೂಜಿಸುವ ನಾಡಿನಲ್ಲಿ ನಾರಿಗೆ ಗೌರವ ನೀಡಿರುವುದಕ್ಕಿಂತ ಅವಳಿಗೆ ಸರಪಳಿಯನ್ನು ತೊಡಿಸಿ ರಿಂಗ್ ಮಾಸ್ಟರ್ ನಂತೆ ಆಡಿಸಿರುವುದೆ ಹೆಚ್ಚು. ಸ್ತ್ರೀ ಸಬಲೀಕರಣ, ಸ್ತ್ರೀ ಸಮಾನತೆ ಎಂಬ ಮಾತುಗಳು ಅನಾದಿಕಾಲದಿಂದಲೂ ಚಾಲ್ತಿಯಲ್ಲಿವೆಯಾದರೂ ಫಲ ಮಾತ್ರ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ. ಹೆಣ್ಣನ್ನು ಒಂದೆಡೆ ಪೂಜಿಸುತ್ತ, ಮತ್ತೊಂದೆಡೆ ಭೋಗದ ವಸ್ತುವೆಂದು ಹವಣಿಸುವ ಮನುಕುಲದ ಮೃಗೀಯ ವರ್ತನೆಯನ್ನು ಗಜಲ್ ಗೋ ಶಮಾ ಜಮಾದಾರ ಅವರು ತೀವ್ರವಾಗಿ ಖಂಡಿಸಿದ್ದಾರೆ.

ಅಂಗಳದಲಿ ಆಡುವ ಬಾಲೆಯ ಕೌಮಾರ್ಯ ಪ್ರೇರೇಪಿಸಿತೇ

ಅತೃಪ್ತ ಕಾಮಪಿಪಾಸುವಿನ ಬೇಟೆಯಾದವರಿಗೆ ನ್ಯಾಯ ಎಲ್ಲಿದೆ

ಹೆಣ್ಣನ್ನು ಏಕಕಾಲದಲ್ಲಿಯೆ ರಕ್ಷಿಸುವ, ಭಕ್ಷಿಸುವ ವಿಲಕ್ಷಣ ಪ್ರಾಣಿಯೆಂದರೆ ಅದು ಮೀಸೆ ತಿರುವುವ ಪುರುಷ ಪ್ರಾಣಿ!! ಮನುಷ್ಯ ಬೌದ್ಧಿಕವಾಗಿ ಬೆಳೆಯುತ್ತಲೆ ಮಾನವೀಯ ನೆಲೆಯಲ್ಲಿ ಕುಸಿಯುತಿದ್ದಾನೆ. ಬಾಲೆಯಿಂದ ಹಿಡಿದು ವೃದ್ಧೆಯವರೆಗೂ ತನ್ನ ಕಾಮುಕ ಪರಿಧಿಯಲ್ಲೇ ನೋಡುವ ಅತ್ಯಾಚಾರಿಗಳ ವಿಕೃತ ಮನಸ್ಸನ್ನು ತೀವ್ರವಾಗಿ ಖಂಡಿಸಿದ್ದಾರೆ. ಅತ್ಯಾಚಾರಿಗಳಿಗೆ ಕಾನೂನಿನ ಪ್ರಕಾರ ಶಿಕ್ಷೆ ಇದೆಯಾದರೂ ಅದು ನಮ್ಮ ಸಾಮಾಜಿಕ ವ್ಯವಸ್ಥೆಯ ಹುಳುಕುಗಳಿಂದ ಸಾಧ್ಯವಾಗದಿರುವುದರ ಬಗ್ಗೆ ಬೇಸರ, ಅಸಹಾಯಕತೆ ಹಾಗೂ ಕ್ರೋಧವನ್ನು ವ್ಯಕ್ತಪಡಿಸಿದ್ದಾರೆ.

         ಮೋಹ, ಅನುರಾಗಗಳಿಂದ ಹೊರತು ಪಡಿಸಿದ ಜೀವನವನ್ನು ಊಹಿಸಲೂ ಸಾಧ್ಯವಿಲ್ಲ. ಪಶು-ಪಕ್ಷಿ, ಮನುಷ್ಯರು ಇದರಿಂದ ದೂರ ಉಳಿಯಲು ಸಾಧ್ಯವಿಲ್ಲ. ಇಂಥಹ ಪ್ರೀತಿಯ ಜೇನುಗೂಡೆ ಗಜಲ್. ಈ ಗಜಲ್ ಹನಿ ಹನಿಯಾದ ಮಧು ಸ್ವಾದವನ್ನು ಅಮೃತದಂತೆ ಉಣಬಡಿಸಿದೆ, ಉಣಬಡಿಸುತ್ತಿದೆ. ಗಜಲ್ ಗೋ ಶ್ರೀಮತಿ ಶಮಾ ಜಮಾದಾರ ಅವರಿಂದ ಮತ್ತಷ್ಟು ಮೊಗದಷ್ಟೂ ಗಜಲ್ ಗಳು ರಚನೆಯಾಗಲಿ, ಸಹೃದಯ ಓದುಗರ ಮನವನ್ನು ತಣಿಸಲಿ ಎಂದು ಶುಭ ಕೋರುತ್ತೇನೆ.

ಅವಳ ನೆನಪು ಬಂದಿದೆ ಉಸಿರೆ ಮೆಲ್ಲನೆ ಸಾಗೋಣ

ಹೃದಯದ ಬಡಿತಗಳೂ ಪ್ರಾರ್ಥನೆಗೆ ಭಂಗ ತರುತ್ತಿವೆ

                           –ರಾಹತ್ ಇಂದೋರಿ

ಕಾಲದ ತಕ್ಕಡಿಯು ತೂಗುತಿದೆ, ಸದ್ದು ಗದ್ದಲವಿಲ್ಲದೆ. ನಾನು ಮೌನಿಯಾಗಿ ತಲೆ ಬಾಗಿರುವೆ. ಮತ್ತೆ ಮುಂದಿನ ವಾರ, ಗುರುವಾರ ತಮ್ಮ ಮುಂದೆ ಹಾಜರಾಗಿರುವೆ. ಕಾಯುವಿರಲ್ಲವೆ… ಗೊತ್ತು, ನನ್ನನ್ನು ಸ್ವಾಗತಿಸಲು ಸಿದ್ಧರಿರುವಿರೆಂದು.

ಎಲ್ಲರಿಗೂ ಹೃನ್ಮನದಿ ವಂದನೆಗಳು..


ಡಾ. ಮಲ್ಲಿನಾಥ ಎಸ್. ತಳವಾರ

ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.‌ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ

One thought on “

  1. ಧನ್ಯವಾದಗಳು ಗುರುಗಳಿಗೆ. ಪರಿಚಯ ಲೇಖನ
    ಚೆನ್ನಾಗಿದೆ. ತಮ್ಮ ಶ್ರಮಕ್ಕೆ.. ನನ್ನ ಸಲಾಂ..
    ಶಮಾ. ಜಮಾದಾರ.

Leave a Reply

Back To Top