ಮೊದಲ ಮಳೆಯ‌ ಕಾಡುವ ಹನಿಗಳು

ಪುಸ್ತಕ ಸಂಗಾತಿ

ಮೊದಲ ಮಳೆಯ‌ ಕಾಡುವ ಹನಿಗಳು

ಭಾವನೆಗಳೆ ಮನುಜನ ಬದುಕಿನ ಜೀವಾಳ. ಭಾವನೆಗಳಿಗೆ ಕವಿಮನಸ್ಸು ಸ್ಪಂದಿಸಿದ ಫಲಶ್ರುತಿಯೇ ಈ ಕಾವ್ಯ. ಕಾವ್ಯ ಎಂದರೆ ಮೋಹಕತೆ, ಸೆಳೆತ,  ಕಲ್ಪನಾಲೋಕ, ರಸಾನುಭವ, ಶೃಂಗಾರ, ರಮ್ಯತೆ, ಸೌಂದರ್ಯೋಪಾಸನೆ, ಪ್ರಕೃತಿಯ ಆರಾಧನೆ, ಮನೋಗತದ ಅಭಿವ್ಯಕ್ತಿಯಾಗಿದೆ.

ಈ ಕಾವ್ಯ ಎಂಬುದು ಸಮಗ್ರ ಬದುಕಿನ ಅಕ್ಷರ ರೂಪ. ಇದು ಅಸಂಖ್ಯಾತ ಸಂವೇದನೆಗಳ ಹೂರಣ. ಆಸೆ ಅಭಿಲಾಷೆಗಳ ತೋರಣ. ರಾಗ ಅನುರಾಗ ವಿರಾಗಗಳ ಸಂಗಮ, ಸರಸ ಸಲ್ಲಾಪದ ಸ್ಪಂದನ, ನಿರಾಶೆ, ಹತಾಶೆ, ಭರವಸೆಗಳ ಅಂಬರ, ಕಾಳಜಿ ಸಹಾಯ ಸಹಕಾರಗಳ ಕಣಜ, ಆಲೋಚನೆ ಸಂವಾದ ಚಿಂತನೆಗಳ ಸಮಾಗಮ, ಪ್ರಕೃತಿಯ ಬೆರಗು ಮೆರುಗು ಬೆಡಗುಗಳ ವಿಸ್ಮಯ ಲೋಕ, ಜೀವನಾನುಭವದ ಕಾವ್ಯಕೃಷಿ, ಹಾಸ್ಯ ಲಾಸ್ಯ ಲಾಲಿತ್ಯ ಗಳ ಸೆಳೆತ, ಸರಿ ತಪ್ಪು ಒಳಿತು ಕೆಡುಕುಗಳ ಅನಾವರಣವಾಗಿದೆ. ಸಮಸ್ಯೆಗಳ ಚಾಟಿ, ವ್ಯವಸ್ಥೆ ವ್ಯವಸ್ಥೆ ಅಸಮಾನತೆಯ ವಿರುದ್ಧ ಪ್ರಹಾರ, ಹಕ್ಕು ಅಭಿಪ್ರಾಯಗಳ ಪ್ರಜ್ಞೆ, ನೋವು ಸಂಕಟ ಅಸಹಾಯಕತೆಯ ಅಭಿವ್ಯಕ್ತಿ, ಸುಖ ಸಂತೋಷಗಳ ಸಮಾಗಮ, ಸೃಜನಶೀಲತೆ ಕ್ರಿಯಾಶೀಲತೆಗಳ ನಿರ್ವಹಣೆ, ಅಂತರಂಗದೊಳಗಿನ ನಿಗೂಢತೆಯ ಜಾಗೃತಾವಸ್ಥೆ, ದುರಿತದಲಿ ನೊಂದು ಬೆಂದವರ ಎದೆಯ ದನಿ, ದಾರಿದ್ರ್ಯ ಬಡತನ ನಿರುದ್ಯೋಗಗಳ ಚರ್ಚೆ, ಸತ್ಯ ಶಾಂತಿ ಸಹನೆ ನ್ಯಾಯ ಪ್ರಾಮಾಣಿಕತೆಗಳ ಆಶಾಭಾವನೆ, ಸಾಂಗಿಕ ತತ್ವದ ಪ್ರತಿಪಾದನೆ. ಒಟ್ಟಾರೆ ಕವಿತೆ ಕವಿಯೊಬ್ಬನ ಮನದೊಳಗಣ ಅನುಭವಗಳ ಅನುಭಾವವ ಅನುಸಂಧಾನವಾಗಿದೆ.

ಈ ಚೈತನ್ಯದಾಯಕ ಕಾರ್ಯಕ್ಕಾಗಿ ಕವಿಯ ಲೇಖನಿಗೆ ನಿರಂತರ ತುಡಿತ ಮಿಡಿತವಿರಬೇಕು. ಆ ನಿಟ್ಟಿನಲ್ಲಿ ಕವಿತೆ ಅರ್ಥ, ಗೂಡಾರ್ಥ, ಸೂಚ್ಯಾರ್ಥ, ಭಾವಾರ್ಥ ಮತ್ತು ಮಾರ್ಮಿಕ ಅರ್ಥಗಳಲ್ಲಿ, ಸೊಗಸಾದ ಪದಪುಂಜಗಳಲ್ಲಿ, ಮನಮೋಹಕ ರೂಪಕ ಮತ್ತು ಪ್ರತಿಮೆಗಳಲ್ಲಿ, ಸುಂದರ ಕಾವ್ಯಾಭಿವ್ಯಕ್ತಿಯಲ್ಲಿ, ಗ್ರಹಿಕೆ ಮತ್ತು ಅನುಭವಗಳ ಸ್ಪಂದಿಸುವಿಕೆಯಲ್ಲಿ, ಧ್ವನಿಸುವ ಕಾಲಾತೀತ ಸಾಹಿತ್ಯ ಪ್ರಕಾರವಾಗಿದೆ.

ಯಾವ ದೀಪದ ಬೆಳಕು ನೀನು

 ಆರದಂತೆ ಮಿನುಗುವೆ

 ಆವ ಬೆಳಕಿನ ಸೊಡರು ನೀನು

  ಹೃದಯವನ್ನು ಬೆಳಗುವೆ

 ಎಂಬ ಒಲವ ದೀಪವಚ್ಚಿದ ಮಂಜುಳಾ ಭಾರ್ಗವಿಯವರ “ಮೊದಲ ಮಳೆ” ಕಾಡುವ ಹನಿಗಳು “ಕವನ ಸಂಕಲನ”ದ ಪ್ರಥಮ ಕವಿತೆಯಾಗಿದೆ. ಪ್ರೀತಿ ಪ್ರೇಮವನ್ನು ಅಪ್ಪಿಕೊಳ್ಳುವ ಮೂಲಕ ಕವಿತೆಗಳ ಮಳೆಯನ್ನೇ ಸುರಿಸಿದ್ದಾರೆ. ಈ ಸಂಕಲನ 75 ಕವನಗಳ ಹೂಬನ ವಾಗಿದ್ದು, ವೈವಿಧ್ಯಮಯ ಹಾಗೂ ವಿಶಿಷ್ಟವಾದ ಕಥಾವಸ್ತು ಭಾವದೊನಲು ಹಾಗೂ ಕಾವ್ಯಾಭಿವ್ಯಕ್ತಿಯನ್ನು ಹೊತ್ತು, ಸುಂದರವಾದ ಕವನ ಪುಷ್ಪಗಳನ್ನು ಅರಳಿಸಿ, ಕಾವ್ಯಲೋಕದ ತುಂಬಾ ಸುಗಂಧ ಸೂಸುತ್ತವೆ. ಅವುಗಳ ಮೂಲಕ ಮನಸ್ಸನ್ನು ಉಲ್ಲಾಸದಲ್ಲಿ ತೇಲಾಡಿಸುತ್ತಾ, ಮಳೆಹನಿಗಳಲ್ಲಿ ಆಲ್ಹಾದಕರವಾಗಿ ಕುಣಿಸುತ್ತದೆ.

ಕವಿಗಳಾದ ಸೂರ್ಯಕೀರ್ತಿ ಅವರ ಮುನ್ನುಡಿ ಕವನ ಸಂಕಲನದ ಪ್ರತಿಬಿಂಬವಾಗಿ ಮೂಡಿಬಂದಿದ್ದು, ಓದುಗರಿಗೆ ಓದಲು ಕಾರಣಗಳನ್ನು ನೀಡುತ್ತಾ, ಕವನ ಸಂಕಲನದ ಬೆಡಗು ಬಿನ್ನಾಣಗಳನ್ನು, ವಿಸ್ಮಯಗಳನ್ನು, ಓದುಗರ ಮುಂದೆ ತೆರೆದಿಟ್ಟಿದ್ದಾರೆ. “ಮೊದಲ ಮಳೆ ಸಂಕಲನದ ಸಂರಚನೆಯು ಕವಯತ್ರಿಯ ಸಂವೇದನೆಯ ಬೆಡಗು ಬೆರಗಿನ ಲೋಕವನ್ನು ನಮ್ಮೆದುರು ಅನಾವರಣಗೊಳಿಸುತ್ತದೆ” ಎಂಬ ಹಿರಿಯ ಕವಿಗಳಾದಂತಹ ಡಾ.ವಸುಂಧರಾ ಭೂಪತಿಯವರ ಬೆನ್ನುಡಿಯಲ್ಲಿನ ಮಾತುಗಳು ಈ ಕವನ ಸಂಕಲನಕೆ ಒಳಪ್ರವೇಶಿಕೆ ಒದಗಿಸುತ್ತವೆ.

ವಿಶ್ಲೇಷಕರಾದವರು ಕವನ ಸಂಕಲನದ ಎಲ್ಲ ಕವಿತೆಗಳ ರುಚಿಯನ್ನು ಓದುಗರಿಗೆ ಉಣಬಡಿಸಲು ಅಸಾಧ್ಯ. ಅವರು ಕೇವಲ ಜೇನಿನ ರುಚಿಯನ್ನು ತೋರಿಸುತ್ತಾರೆ. ಉಳಿದ ಜೇನು ಹುಡುಕಿ ತಿನ್ನುವ ಜವಾಬ್ದಾರಿ ಓದುಗರ ಮೇಲಿರುತ್ತದೆ.ಹಾಗೆ ಕಾವ್ಯವು ಅದನ್ನು ಹಿಂಬಾಲಿಸಿ ಪೂರ್ಣ ಸಂಕಲನವನ್ನು ಸವಿದು, ಕವಿಗೆ ಪ್ರೋತ್ಸಾಹಿಸುವುದು ಮತ್ತು ಕವಿತೆಗಳ ಸಾರವನ್ನು ಆಸ್ವಾದಿಸುವುದು ಓದುಗರೆ ಮಾಡಬೇಕಿದೆ.

ಈ  ಕವನ ಸಂಕಲನವನ್ನು ಓದಿದಾಗ ನನಗನ್ನಿಸಿದ್ದು ಆ ಕವಯತ್ರಿಯನ್ನು ಬಹಳವಾಗಿ ಕಾಡಿರುವ ವಿಚಾರಗಳೆಂದರೆ ಮಳೆ, ಪ್ರಕೃತಿ, ಒಲವು ಮತ್ತು ಬೆಳಕು. ಮಳೆ ಇಲ್ಲದಿದ್ದರೆ ಇಳೆಯಿಲ್ಲ, ಪ್ರಕೃತಿ ಇಲ್ಲದೆ ಜೀವಸಂಕುಲವಿಲ್ಲ, ಒಲವಿಲ್ಲದೆ ಸೃಷ್ಟಿಯಿಲ್ಲ, ಬೆಳಕಿಲ್ಲದೆ ಮನುಜನ ಬಾಳೆ ಇಲ್ಲ. ಈ ನಿಟ್ಟಿನಲ್ಲಿ ಸೃಷ್ಟಿಯ ಸಮಷ್ಠಿಯು ಇವರನ್ನು ಕಾಡಿ ಬರೆಸಿಕೊಂಡಿದೆ.ಈ ಸಂಕಲನದಲ್ಲಿ ಬಹುತೇಕ ಕವಿತೆಗಳು ಭಾವಗೀತಾತ್ಮಕ ಸ್ವರೂಪದಲ್ಲಿ ಜೀವತಳೆದಿದ್ದು ಓದುಗರಿಗೆ ಹೆಚ್ಚು ಆಪ್ತವಾಗುತ್ತವೆ. ಸದಾ ಗುನುಗುವಂತಹ ಗುಂಗಿನಲ್ಲಿ ಮುಳುಗಿಸುತ್ತದೆ.

ಇವರ ಕವಿತೆಗಳ ಸಾರವನ್ನು ಸವಿದಾಗ ಕವಯತ್ರಿ ಪ್ರಕೃತಿಯನ್ನು, ಅದರ ಸೊಬಗನ್ನು ಬಹುವಾಗಿ ಪ್ರೀತಿಸಿ, ಆರಾಧಿಸಿ, ಕಲ್ಪನಾ ಲೋಕದಲ್ಲಿ ವಿಹರಿಸಿ, ತನ್ನ ಭಾವಕೋಶದ ಲಹರಿಗಳನ್ನು ಎಳೆ ಎಳೆಯಾಗಿ ಹರಿಸಿದ್ದಾರೆ. ಪ್ರಯುಕ್ತ ಪರಿಸರ ಆರಾಧನೆ ಕವಯತ್ರಿಯ ಲೇಖನಿಯಿಂದ ತುಂಬಾ ಚಂದವಾಗಿ ಮೂಡಿ ಬಂದಿದೆ. ಬದುಕಿನ ಜಿಜ್ಞಾಸೆಗಳು, ಸಾಮಾಜಿಕ ತಲ್ಲಣಗಳು, ಮನದ ಪಲ್ಲಟಗಳು, ಮೂಕ ಹಕ್ಕಿಯ ಮನೋವೇದನೆಯನ್ನು ಮನಮಿಡಿಯುವಂತೆ ತುಂಬಾ ಮನೋಜ್ಞವಾಗಿ ಚಿತ್ರಿಸಿದ್ದಾರೆ.  ಅದ್ಭುತವಾಗಿ, ಸಂದರ್ಭೋಚಿತವಾಗಿ ಸಶಕ್ತವಾದ ರೂಪಕಗಳು ಮತ್ತು ಪ್ರತಿಮೆಗಳನ್ನು ಕಟ್ಟಿಕೊಡುವ ಮೂಲಕ ಕವಿತೆಗಳಲ್ಲಿ ಹೊಸತನವನ್ನು ತುಂಬಿರುವುದು ಅವರ ಪ್ರಬುದ್ಧ ಸಾಹಿತ್ಯದ ಪ್ರತೀಕವಾಗಿದೆ.

ಕಾವ್ಯಲೋಕ ಎಂಬುದು ವಿಶಾಲವಾದ ಹಣ್ಣಿನ ತೋಟದಂತೆ. ಈ ತೋಟದಲ್ಲಿ ಭಿನ್ನ ವಿಭಿನ್ನ ಮರಗಳಿದ್ದು ಇವು ವೈವಿಧ್ಯಮಯ ರುಚಿಯ ಅನುಭವ ನೀಡುವಂತೆ, ಈ ಕವನ ಸಂಕಲನದಲ್ಲಿ ವಿಧ ವಿಧವಾದ ಭಾವಗಳನ್ನು ಹೊತ್ತಂತ ಕವಿತೆಗಳಿವೆ. ಇಲ್ಲಿ ಕವಿತೆಯು ಹೊತ್ತು ತಂದಿರುವ ಸಾರವೂ ಕೂಡ ವಿಭಿನ್ನವಾಗಿದೆ. ಕಾವ್ಯಾಭಿವ್ಯಕ್ತಿ ಓದುಗನ ಮನತಟ್ಟುವಂತೆ ಇರದಿದ್ದರೆ ಅದು ಫಲವಿಲ್ಲದ ವೃಕ್ಷದಂತೆ, ನೆರಳಿಲ್ಲದ ಜಾಲಿಯಂತೆ ವ್ಯರ್ಥ. ಆದರೆ ಇಲ್ಲಿ ಅಂತಹ ಅವಕಾಶವನ್ನು ಕವಯತ್ರಿ ನೀಡದೆ ಸೊಗಸಾದ ಕಾವ್ಯ ಲಹರಿ ಧಾರೆಯೆರೆದಿದ್ದಾರೆ.

ಹೆಣ್ಣಿನ ಮನದಾಳವನ್ನು ತೆರೆದಿಡುವಲ್ಲಿ ಕವಯತ್ರಿಯ ಲೇಖನಿಯು ಬಹುವಾಗಿ ದುಡಿದಿದೆ. ಇತ್ತೀಚಿನ ದಿನಮಾನದಲ್ಲಿ ಹೆಣ್ಣಿಗೆ ಬಹಳಷ್ಟು ಸ್ಥಾನಮಾನಗಳು, ಗೌರವಗಳು, ಪ್ರೀತಿಯ್ಯಾಧರಗಳು ಲಭ್ಯವಾಗುತ್ತಿವೆ. ಆದರೂ ಮಹಿಳೆಯನ್ನು ಭಾಧಿಸುವ. ರೋಧಿಸುವ‌ ಪೂರ್ವಗ್ರಹಪೀಡಿತರ ನಡೆ, ದುಷ್ಟ ಮನಸುಗಳ ಅಟ್ಟಹಾಸವು ಕಡಿಮೆಯಾಗಿಲ್ಲ. ಇವುಗಳು ಮನಸ್ಸಿಗೆ ಹಿತವನ್ನುಂಟು ಮಾಡಿ ಬದಲಾವಣೆ ಎಡೆಗೆ ಮುಖಮಾಡುವಂತೆ ಕವಿತೆಗಳು ಮೂಡಿಬಂದಿವೆ.

ಇವರ ಕವಿತೆಗಳು ಸಮಕಾಲೀನ ಬದುಕಿಗೆ ಸ್ಪಂದಿಸುವಂತಹ ಕಥಾವಸ್ತುವನ್ನು ಹೊಂದಿದ್ದು, ಓದುಗರಿಗೆ ತಮ್ಮದೇ ಜೀವನದ ಒಂದು ಘಟನೆ ಎಂಬ ಅನುಭವದ ಅನುಭೂತಿಯನ್ನು ಒದಗಿಸುತ್ತದೆ.

ಸಹೃದಯ ಓದುಗನೊಂದಿಗೆ ಸಂವಾದಕ್ಕಿಳಿಯುವ ಕವಿತೆಗಳು, ನೇರವಾಗಿ ಹೃದಯವನ್ನು ಹೊಕ್ಕು, ನವಿರಾದ ಹಿತ ಸ್ಪರ್ಶವನ್ನು ನೀಡುತ್ತವೆ. ಯೌವನದ ಉತ್ಸಾಹ, ಹಸಿಬಿಸಿ ಬಯಕೆಗಳು, ಗುರಿ ಕನಸುಗಳು ,ಪ್ರೀತಿ ಪ್ರೇಮದ ಸುತ್ತ ಸುತ್ತುತ್ತಾ ಬೆರಗಿನ ನೋಟಗಳನ್ನು ಸೃಷ್ಟಿಸುತ್ತವೆ.

ಇಲ್ಲಿ ವಿರಹದ ಒಂಟಿ ದನಿಯ ಪ್ರಸ್ತಾಪವಿದೆ. ಪ್ರೇಮಿಗಳ ಸರಸದ ಜಂಟಿ ಗೀತೆಗಳಿವೆ. ಅನುಭವದ ಪಾಕದಲ್ಲಿ ಸೃಷ್ಟಿಯಾದ ಕವಿತೆಗಳು ಓದುಗರ ಮನಸ್ಸಿಗೆ ಹೋಳಿಗೆ ಸವಿಯನ್ನು ನೀಡುತ್ತವೆ. ನೊಂದು ಬೆಂದವರ ಕಥೆ ಹೇಳುವಾಗ ಹಾಗಲಕಾಯಿಯನ್ನು ಹೋಲಿಸಬಹುದು. ಹಾಗಲಕಾಯಿಯು ಕಹಿಯಾದರೂ ಆರೋಗ್ಯಕ್ಕೆ ಹಿತ. ಅದೇ ರೀತಿ ನೋವು ದುಃಖ ದುಮ್ಮಾನಗಳು ಎಷ್ಟೇ ಇದ್ದರೂ ಬದುಕಲ್ಲಿ ಒಳ್ಳೆಯ ಕಾಲ ಬಂದಾಗ ಅವೆಲ್ಲವೂ ಸೂರ್ಯನ ಆಗಮನದೊಂದಿಗೆ ಪಕ್ಕಕ್ಕೆ ಸರಿವ ಮೋಡದಂತೆ  ನಿವಾರಣೆಯಾಗುತ್ತವೆ ಎಂಬ ಆಶಾಭಾವ ಕವಯತ್ರಿಯ ಲೇಖನಿಯಿಂದ ಬಿತ್ತರಗೊಂಡಿದೆ.

ಇಲ್ಲಿ ಕವಯತ್ರಿ ಮಾನವ ಸಂಬಂಧಗಳ ಒಡನಾಟ, ಮನಸ್ತಾಪಗಳನ್ನು ಪ್ರಸ್ತಾಪಿಸುತ್ತಾ, ನಾವೇ ಸೃಷ್ಟಿಸಿಕೊಂಡ ಭದ್ರವಾದ ಗೋಡೆ ಹಾಗೂ ಸಂಕೋಲೆಗಳನ್ನು ಕೆಡವಲಾಗದೆ ಪರಿತಪಿಸುತ್ತಿರುವುದಕ್ಕೆ ವಿಷಾದ ಭಾವ ವ್ಯಕ್ತಪಡಿಸುತ್ತಾರೆ.

ಕವಯತ್ರಿಯ ಮನಮೋಹಕವಾದ ಶಬ್ದ ಭಂಡಾರದ ಪ್ರಯೋಗ, ಕವಿತೆಗಳಲ್ಲಿ ಗಟ್ಟಿತನ ತುಂಬಿ, ಓದಿದ ಮನಸ್ಸನ್ನು ಬೆರಗಾಗಿ ಮರುಳಾಗಿ ಅಭಿಮಾನಿಯಾಗಿಸಿಕೊಂಡು ಕಾಡಿಸಿಕೊಂಡು ನಿಲುಗಡೆ ಇಲ್ಲದೆ ಓದಿಸಿಕೊಂಡು ಹೋಗುವಂತಹ ಚಮತ್ಕಾರಿಕೆಯನ್ನು ಇವರ ಕೆಲವು ಕವಿತೆಗಳಲ್ಲಿ ಕಾಣಬಹುದು.

ಮೊದಲ ಮಳೆ ಕವನ ಸಂಕಲನದಲ್ಲಿ ಸ್ತ್ರೀ ಸಂವೇದನೆಗಳು ಸಹಜವಾಗಿ ಅಭಿವ್ಯಕ್ತಗೊಂಡು ಮಹಿಳಾ ಪರವಾದ ಚಿಂತನಾ ಮಾರ್ಗದಲ್ಲಿ ಓದುಗರನ್ನು ಮುಳುಗಿಸುತ್ತವೆ.ಆ ಮೂಲಕ ಕಾವ್ಯಲೋಕದಲ್ಲಿ ಕವಯತ್ರಿಗೆ ಅಸ್ಮಿತೆ ಕಲಿಸಿಕೊಟ್ಟಿವೆ. ನಾವಿನ್ಯತೆ ತುಂಬಿದ ಸಂವೇದನೆಗಳು ಕಾವ್ಯದ ಮೂಲಕ ಅನುಸಂಧಾನ ಗೊಂಡು, ಓದುಗರಿಗೆ ಅವರದೇ ಬದುಕಿನ ಅನುಭವದಂತೆ ಭಾಸವಾಗಿ ವಾಸ್ತವಿಕ ಜೀವನದ ವಿವಿಧ ಮಜಲುಗಳನ್ನು ತೆರೆದಿಡುತ್ತವೆ.

ಚಂದ್ರಾರ್ಕ ಮತ್ತು ತಾರೆಗಳ ಸುತ್ತ ಒಲವ ಗೀತೆಗಳು ಸುತ್ತುತ್ತಾ ಚಂದಿರನಿಗೆ ಪ್ರೇಮಿಯಾದ ಕಾವ್ಯಕನ್ನಿಕೆಯ ಸೊಬಗಿಗೆ, ಸೂರ್ಯನು ಅಸೂಯೆಗೊಂಡು ನಿಗಿನಿಗಿ ಕೆಂಡವಾಗುವನು ಎಂಬ ಕಲ್ಪನೆ ತುಂಬಾ ರಮ್ಯ ಭಾವವನ್ನು ಹೊತ್ತು ತಂದಿದ್ದು ಪ್ರೀತಿಯ ಚೆಲುವನ್ನು ಹೆಚ್ಚಿಸುತ್ತದೆ.

ಇಲ್ಲಿನ ಕವಿತೆಗಳು ಸಂದರ್ಭೋಚಿತವಾಗಿ ಮಾತಿಲ್ಲದ ಮೌನವನ್ನು ಕವಿತೆಯಾಗಿಸುವಲ್ಲಿ ಭಾಷೆಯ ಮೇಲೆ ಕವಿಯತ್ರಿಗಿರುವ ಬಿಗಿಯಾದ ಹಿಡಿತವನ್ನು ಸಾಬೀತುಪಡಿಸುತ್ತವೆ. ನೀರವ ಮೌನದಲ್ಲಿ ಮಾತಾಡುವ ಭಾವ ಸೊಗಸೋ ಸೊಗಸು. ಇಂತಹ ಬರಹಗಳು ಮೂಡಿದಾಗ ಆ ಕಾವ್ಯ ಜನಜನಿತವಾಗುತ್ತದೆ, ಚಿರಕಾಲ ಓದುಗರ ಮನದಲ್ಲಿ ಉಳಿಯುತ್ತದೆ ಎಂಬುದಕ್ಕೆ ಕೆ.ಎಸ್.ಎನ್. ಅವರ ಮೈಸೂರು ಮಲ್ಲಿಗೆ ‌ಕವನ ಸಂಕಲನದ ಕವಿತೆಗಳೆ ಸಾಕ್ಷಿಯಾಗಿವೆ. ಮಂಜುಳಾ ಭಾರ್ಗವಿಯವರು ಅಂತರ್ಮುಖಿಯಾಗುವಂತ ಕವನಗಳ ರಚನೆಗೂ ಸಿದ್ಧ, ಸಮಾಜಮುಖಿ ಬರಹಗಳ ಸೃಷ್ಟಿಗೂ ಬದ್ಧರಾಗಿದ್ದಾರೆ. ಒಲವ ಚೆಲುವಿನ ವರ್ಣನೆಯು ಪ್ರಬುದ್ಧವಾಗಿದ್ದು ದುರಿತದಲ್ಲಿ ಮುಳುಗಿದವರನ್ನು ಮೇಲೆತ್ತುವ ಸಂಜೀವಿನಿಯಂತೆ ಕಾವ್ಯ ರಚಿಸಿದ್ದಾರೆ.

ಕವನ ರಚನೆಯಲ್ಲಿ ಗಾಂಭೀರ್ಯ, ಶೈಲಿ, ವಿನ್ಯಾಸ, ರೂಪಕಗಳು, ಕಾವ್ಯವಸ್ತು, ಭಾವ, ಒಳನೋಟಗಳು ,ಅಂತಃಸತ್ವಗಳು, ಹೊಳಹುಗಳನ್ನು ಸಮ್ಮಿಳಿತಗೊಳಿಸಿ ಕುತೂಹಲಕಾರಿಯಾದ ನವಿರಾದ ಸೂಕ್ಷ್ಮವಾದ ಕಾವ್ಯಾಭಿವ್ಯಕ್ತಿಯನ್ನು ಹೆಣೆದಿದ್ದಾರೆ.

ಈ ಕವಿತೆಗಳಲ್ಲಿ ಮನುಷ್ಯ ಮತ್ತು ನಿಸರ್ಗದ ಒಡನಾಟವನ್ನು ಗಾಡವಾಗಿ ಬಿಂಬಿಸಿವೆ. ಜೊತೆಗೆ ಒಲವು ಮತ್ತು ಮಳೆಯ ಸಂಬಂಧವನ್ನು ಚೈತನ್ಯದಾಯಕವಾಗಿ ನಿರೂಪಿಸಿದ್ದಾರೆ ಮತ್ತು ಕಲಾತ್ಮಕತೆ ಕಾವ್ಯ ಅವರ ಬರಹಗಳಲ್ಲಿದೆ.

ಭಾವಗಳು ಬಲಿತು ಮೊಳೆತು ಕಲೆತು ಕವಿತೆಗಳಾಗಿ ಅಭಿವ್ಯಕ್ತಗೊಂಡಿವೆ. ಸೂಕ್ಷ್ಮ ವಿಚಾರಗಳನ್ನು ಜಾಣ್ಮೆಯಿಂದ, ನಾಜೂಕಾಗಿ ಕಾವ್ಯವಾಗಿಸಿ, ಅದರ ಮೂಲಕ ಸಹಬಾಳ್ವೆಯ ಮತ್ತು ಸಾಮರಸ್ಯದ ನಡೆಯನ್ನು ಬೋಧಿಸುವ  ಸಮಾಜಿಕ ಕಾರ್ಯ ಕೈಗೊಂಡಿರುವುದು ಅಭಿನಂದನಾರ್ಹವಾಗಿದೆ.

ಇವರ ಕವಿತೆಗಳು ರಸಾನುಭವದ ಸುಂದರ ಅಭಿವ್ಯಕ್ತಿಯಾಗಿವೆ. ಪ್ರೇಮಿಗಳ ಎದೆಯೊಳಗಿನ ಪಿಸುದನಿ ಗಳಾಗಿವೆ. ಪ್ರಕೃತಿಯ ಆರಾಧನೆಯ ಫಲಶೃತಿಗಳಾಗಿವೆ. ನಲ್ಲ ನಲ್ಲೆಯರ ಸರಸ ಸಲ್ಲಾಪದ ರಮ್ಯ ಸಾಲುಗಳಾಗಿವೆ. ಸಾಮಾಜಿಕ ಬದುಕಿನಲ್ಲಿ ಕಂಡ ನೋವಿನ ಅನಾವರಣವಾಗಿವೆ.

ಕವಿತೆಗಳಿಗೆ ಸ್ಪಂದಿಸುವ ಆಯಾಮಗಳು ಓದುಗರಿಗೆ  ಸಿಗಬೇಕು. ಕಾರಣ ಸಾಹಿತ್ಯ ಎಂಬುದು ಆಯಾ ದಿನಮಾನದ ಕೂಸಾಗಿರುತ್ತದೆ. ವಿಭಿನ್ನ ನೆಲೆಗಳಲ್ಲಿ ಜೀವ ತಳೆದಿರುತ್ತವೆ. ಕಾವ್ಯಾನುಭವ ಮತ್ತು ಲೋಕಾನುಭವ ಎರಡನ್ನು ಸರಿದೂಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಸೌಮ್ಯ ಸ್ವರೂಪದ ಜೊತೆ ಜೊತೆಗೆ, ಪ್ರಶ್ನಿಸುವ ಮನೋಭಾವವನ್ನು ನಾವಿಲ್ಲಿ ಕಾಣಬಹುದು. ಇವರ ಕವಿತೆಗಳು ಪ್ರೇಮಿಗಳ ಮನದೊಳಗಣ ಪ್ರತಿಬಿಂಬಗಳಾಗಿ ಓದುಗರಿಗೆ ಎದುರಾಗುತ್ತವೆ.

ಕವಯತ್ರಿ ನಿನ್ನ ನೆನಪು ಕವಿತೆಯಲ್ಲಿ ಅರುಣೋದಯವನ್ನು ಒಲವಿನ ಉದಯಕ್ಕೆ, ಹೂ ಬಿರಿಯುವುದನ್ನು ನಸು ನಗೆಗೆ, ತಾರೆ ಮಿನುಗುವುದನ್ನು ಕಾಂತಿ ಕಂಗಳಿಗೆ, ಕೋಗಿಲೆಯ ಹಾಡನ್ನು ಇನಿಯನ ನುಡಿ ರಾಗಕ್ಕೆ, ಉಕ್ಕಿ ಹರಿವ ಸಾಗರವನ್ನು ಪ್ರೇಮ ಧಾರೆಗೆ ಹೋಲಿಸುತ್ತಾ, ರಮ್ಯ ಭಾವಗಳನ್ನು ಇನಿಯನ ಕನವರಿಸು ವಿಕೆಗೆ ಹೋಲಿಸಿ ಬಹಳ ಸುಂದರವಾಗಿ ಮೂಡಿ ಬಂದಿದ್ದು ಅವರ ಮನದಲ್ಲಿ ಪ್ರೀತಿ ನೆಲೆಯೂರಿದೆಯೆಂದು ಸೊಗಸಾಗಿ ವರ್ಣಿಸಿದ್ದಾರೆ.

ಇಷ್ಟೆಲ್ಲಾ ವೈಶಿಷ್ಟ್ಯತೆಗಳನ್ನು ಹೊಂದಿ ತಕ್ಕಂತಹ ಈ ಕವನ ಸಂಕಲನದ ಒಳಗಿನ ಕೆಲವೊಂದು ಕವಿತೆಗಳನ್ನು ನೋಡೋಣ

ರಾಧೆಯಾಗುವುದು ತುಂಬಾ ಕಷ್ಟ ಎಂಬ ಸಾಲು ಸ್ತ್ರೀಪರ ಆಲೋಚನೆಗಳಿಗೆ, ಚಿಂತನೆಗಳಿಗೆ ಹಚ್ಚಿ, ಬುದ್ಧಿಜೀವಿಗಳನ್ನು ಕೆಣಕುತ್ತದೆ.ಅವಳ ಯಾತನೆ ನೋವು ತುಮುಲಗಳು ಮನೋವೇದನೆ ಕೇವಲ ರಾಧೆಗೆ ಮಾತ್ರವಲ್ಲ. ಇಡೀ ಸ್ತ್ರೀಕುಲದ ಪ್ರತೀಕವಾಗಿ ಮೂಡಿಬಂದಿವೆ. ಸಮಾಜದಲ್ಲಿ ಕಾಳಜಿಯುತ ಚಿಂತನ ಮಂಥನಕ್ಕೆ ವೇದಿಕೆ ಸೃಷ್ಟಿಯಾಗಿ ಕಾರ್ಯಗತವಾಗಬೇಕೆಂಬುದು ಈ ಕವಿತೆಯ ಆಶಯವಾಗಿದೆ. ಈ ನಿಟ್ಟಿನಲ್ಲಿ ಮಹಿಳೆಯ ಆಗುವುದು ಕಠಿಣ ಎಂಬ ವಿಚಾರವನ್ನು ಓದುಗರ ಮುಂದಿಡುತ್ತದೆ.

ದಿನಕ್ಕೊಂದು ಬೆತ್ತಲೆ ದೇಹ

 ಆತ್ಮಗಳೊಂದಿಗಿನ ಸ್ನೇಹ

 ಈಡೇರದ ಬಯಕೆಗಳಿಗೆ ಸಾಕ್ಷಿಯಾಗಿ

 ಹೇಗೆ ನಳನಳಿಸುತಿದೆ ನೋಡು

ಈ ಕವನ ಸಂಕಲನದಲ್ಲಿ ನನ್ನನ್ನು ಬಹಳವಾಗಿ ಕಾಡಿದ ಕವಿತೆಯೆಂದರೆ ಮಸಣದ ಹೂವು. ಇದು ಮನುಷ್ಯನಿಗೆ ಸ್ಪೂರ್ತಿಯ ಸಂಕೇತವಾಗಿ, ಆತ್ಮವಿಶ್ವಾಸದ ಗರಿಮೆಯಾಗಿ, ಹೂವಿನ ಜೀವನದ ಸಾರ್ಥಕತೆಯ ಪ್ರತೀಕವಾಗಿ ಮೂಡಿಬಂದಿದೆ. ಗೋರಿಯ ಮೇಲೆ ಅರಳಿ ನಗುವ ಕುಸುಮ ಸ್ಮಶಾನ ಸೇರುವ ಬೆತ್ತಲೆ ಹೆಣದೊಂದಿಗೆ, ಅಲ್ಲಿರುವ ಆತ್ಮಗಳ ಸ್ನೇಹ ಬಯಸುತ್ತದೆ. ಆ ಹೂವಿನ ಬಯಕೆ ಈಡೇರಬೇಕು ಎಂಬ ಭರವಸೆಯಲ್ಲಿ ತಾನು ದೇವನ ಮುಡಿಯೇರಬೇಕೆಂದು ಅಥವಾ ಮಧುಮಕ್ಕಳ ಮನವರಳಿಸಿ ಸುಗಂಧ ಬೀರುವ ಅವಕಾಶವೂ ಇಲ್ಲ. ಆದರೂ ಭರವಸೆ ಸತ್ತಿಲ್ಲ ಚೆಲುವು ಒಲವು ತುಂಬಿ ನಳನಳಿಸುತ್ತಿದೆ ಎನ್ನುವ ಕವಿತೆ, ಇಲ್ಲವೆಂದು ಪರಿತಪಿಸುವ ಮಾನವಕುಲಕ್ಕೆ ಪಾಠವಾಗಲಿ. ಬದುಕನ್ನು ಬಂದಂತೆ ಸ್ವೀಕರಿಸುತ್ತಾ ಸಾರ್ಥಕತೆ ಪಡೆಯುವ ಮಾರ್ಗವಾಗಲಿ .

ಕನಿಕರಿಸುವ ಹೃದಯಕ್ಕೆ

ಯಾರು ಹೇಳಿ ಕೊಡಲಿಲ್ಲ

 ಕಷ್ಟಗಳ ಹೊರುವುದನು

 ಅದು ರಕ್ತಗತವಾಗಿ ಬಂದಿತ್ತು

ಕನಿಕರ ಎನ್ನುವುದು ಹೃದಯದೊಳಗಿನ ಅಂತರ್ಗತ ಭಾವ .ಅದು ಹೇಳಿ ಕೇಳಿ ಬರುವಂತದ್ದಲ್ಲ. ಕೇಳಿ ಪಡೆಯುವಂತದ್ದು ಅಲ್ಲ. ಮಾನವೀಯ ಗುಣಗಳನ್ನು ಹೊಂದಿರುವ ಮನಗಳಲ್ಲಿ ಅದು ರಕ್ತಗತವಾಗಿ ಸೇರಿ ಬಿಟ್ಟಿರುತ್ತದೆ ಎನ್ನುವ ಕವಯತ್ರಿ ಅಂತಹ ಮೌಲ್ಯವರ್ಧಿತ ಕಳಸವನ್ನು ನಾವಿಲ್ಲಿ ಧರಿಸಬೇಕೆಂದು ಈ ಕವಿತೆಯ ಮೂಲಕ ಆಶಿಸುತ್ತಾರೆ.

ಪ್ರಕೃತಿಯಂತಾಗುವೆ ನಾನು

 ಭುವಿಯ ಜೋಳಿಗೆಯೊಳಗೆ

 ಎನ್ನುವಲ್ಲಿ ಕವಯತ್ರಿ ಭೂಮಿಯನ್ನು ಜೋಳಿಗೆಯ ರೂಪಕದಲ್ಲಿ ಕಟ್ಟಿಕೊಟ್ಟಿರುವುದು ಪ್ರಕೃತಿಯು ಧರೆಯ ಭಾಗವೆಂದು ಸಾದರಪಡಿಸುತ್ತದೆ.

ಕಾವುಂಡ ಕವಿತೆಯ ಮೆಲ್ಲನೆ ತೆರೆದು ಕೊಳುತಲಿದೆ

 ಅಂತಃಕರಣವನ್ನು ಸೀಳಿಕೊಂಡು ಹೊರಚಿಮ್ಮುತಿದೆ

 ಕೃತಿ ಭಾವಗಳು ಸಮಾಗಮ ಗೊಂಡು ಜೀವ ಬೆಸೆಯುತಿದೆ

ಈ ಕಾವು ಕೊಟ್ಟ ಕವಿತೆಯೂ ಕಥನ ರೂಪದಲ್ಲಿ ಮೂಡಿಬಂದಿದ್ದು, ಓದುಗರಲ್ಲಿ ಹೊಸತನವನ್ನು ತುಂಬುತ್ತಾ ಗಮನ ಸೆಳೆಯುತ್ತದೆ .ಇಲ್ಲಿ ಕವಯತ್ರಿಯ ಕಾವ್ಯಯಾನದ ಅಭಿವ್ಯಕ್ತಿಯಿದ್ದು, ಕವಿತೆ ಹೇಗೆಲ್ಲಾ ಕಾಡಿಸಿಕೊಂಡು ತನ್ನ ತೆಕ್ಕೆಯೊಳಗೆ ಸಿಲುಕಿಕೊಂಡು ಬರಹವನ್ನು ಮಾಡಿಸಿಕೊಂಡಿತು ಎಂಬುದನ್ಪು ಸುಂದರವಾಗಿ ಬಿಂಬಿಸಿದ್ದಾರೆ.

ಇನ್ನು ಬಿಕರಿಗೊಳ್ಳದ

 ಅದೆಷ್ಟೋ ಕನಸುಗಳು

 ನಿದ್ರಿಸಿವೆ ಮುಗಿಲ ಹಾಸಿಗೆ ತುಂಬಾ

 ಎಣಿಕೆಗೆ ಸಿಗದ

 ಅಸಂಖ್ಯಾತ ನಕ್ಷತ್ರಗಳ

 ನೋವುಗಳ ಮಡಿಲಿನಲಿ

ಈ ಮೇಲಿನ ಸಾಲುಗಳು ವಿರಹದ ಕಾವನ್ನು ಅನಾವರಣ ಮಾಡುತ್ತವೆ .ವಿಶೇಷವೆಂದರೆ ಇಲ್ಲಿ ಕವಯತ್ರಿ ಚಂದಿರ ಮತ್ತು ವೇದಿಕೆಯ ಹುಸಿ ಮುನಿಸನ್ನು ಅಕ್ಷರಗಳಲ್ಲಿ ಬಂಧಿಸಿದ್ದಾರೆ..ಅಂಬರದ ನಿಶಬ್ದತೆಯ ಮೌನ ರಾಗವನ್ನು ಪ್ರಸ್ತಾಪಿಸುತ್ತಾ ಸಾಗಿದ್ದಾರೆ. ಬೆಳದಿಂಗಳ ನಿಟ್ಟುಸಿರಿನಲ್ಲಿ ಬೆಂದ ಪ್ರೇಮಿಗಳ ಶಾಪದಿಂದ ಚಂದಿರನಿಗೆ ವಿರಹವಾಗಿದೆ ಎನ್ನುವ ಅವರು ನನಸಾಗದ ಅದೆಷ್ಟೋ ಕನಸುಗಳು ನಿದ್ರಿಸಿವೆ ಎನ್ನುತ್ತಾರೆ. ಮುಗಿಲ ಹಾಸಿಗೆ ಹಾಗೂ ನಕ್ಷತ್ರಗಳ ಮಡಿಲು ಎಂಬ ರೂಪಕಗಳಲ್ಲಿ ತಾರೆಗಳ ನನಸಾಗದ ಕನಸುಗಳನ್ನು ಕಾರ್ಯ ಕಾವ್ಯರೂಪದಲ್ಲಿ ನಿರೂಪಿಸಿದ್ದಾರೆ.

ಅವಳೊಂದು ಜೀವನದಿ

 ಹರಿವುದಷ್ಟೇ ಅವಳ ಕಾಯಕ

 ಅವರಿವರ ಪಾಪ ತೊಳೆದು

 ನಿತ್ಯ ನೀರಾಗುವುದೆ ಜೀವದಾಯಕ

ಪುರಾತನ ಕಾಲದಿಂದಲೂ ಹೆಣ್ಣನ್ನು ನದಿಗೆ ಹೋಲಿಸಿಕೊಂಡು ಮೇಲೆ ಅವಳನ್ನು ಜೀವನದಿಯಾಗಿ ಬಿಂಬಿಸಿ ಕವಿತೆ ಕಟ್ಟಿರುವುದು ಸರ್ವೇಸಾಮಾನ್ಯ ಹೊಸ ನದಿಗಳಿಗೆಲ್ಲ ಗಂಗೆ ಕಾವೇರಿ ತುಂಗಭದ್ರಾ ಕೃಷ್ಣ ಹೀಗೆ ಸ್ತ್ರೀ ನಾಮಗಳನಿಟ್ಟು ಗೌರವಿಸುವುದು ಶ್ಲಾಘನೀಯ ಹಾಗೂ ನಮ್ಮ ನೆಲದ ಸಂಸ್ಕೃತಿ ಹಿರಿಮೆಯ ಗರಿಮೆಯ ಪ್ರತೀಕ. ಈ ಭಾವ ಕವಯತ್ರಿ ಮಂಜುಳಾ ಭಾರ್ಗವಿ ಅವರನ್ನು ಕಾಡಿರುವುದರಲ್ಲಿ ಎರಡು ಮಾತಿಲ್ಲ. ಹೌದು ಲಲನೆ  ಹರಿವ ನದಿಯಂತೆ. ನದಿಯು ಹರಿಯುತ್ತಾ , ತನ್ನೊಡಗೂಡಿ ಬರುವ ಕಸಕಡ್ಡಿಗಳನ್ನು ಬೇರ್ಪಡಿಸುತ್ತಾ ಮುಂದೆ ಸಾಗುತ್ತದೆ. ಇವಳು ತನ್ನ ಜೀವನದಲ್ಲಿ ಬರುವ ನೋವು ಸಂಕಟಗಳನ್ನು ಬದಿಗಿರಿಸಿ ಚೈತನ್ಯದಾಯಕವಾಗಿ ಸಂಸಾರ ನೌಕೆಗೆ ದಿಕ್ಸೂಚಿಯಾಗಿ ಮನೆ ಮನ ಬೆಳಗುವಳು ಎಂಬ ಸಾಲುಗಳು ಮಹಿಳೆಯ ಬಗೆಗಿನ ಗೌರವ ಮತ್ತು ಅಭಿಮಾನದ ಸಂಕೇತವಾಗಿ ಜನ್ಮತಾಳಿವೆ.

ನಲ್ಲ ಬರಲು ಒಲುಮೆಯಲಿ

 ನಲಿದು ನಭ ನೋಡಿದಳು

 ಅಚ್ಚುಮೆಚ್ಚು ಕೆಂಪಿ ನಂಚು

 ಕೆಂಪುಗಲ್ಲವಾದವಳು

ಇಲ್ಲಿ ಹೆಣ್ಣಿನ ಚೆಲುವಿನ, ಅವಳ ಒಲವಿನ ವರ್ಣನೆಯೂ ಮೋಹಕವಾಗಿ ಆಕರ್ಷಣೀಯವಾಗಿ ಮೂಡಿಬಂದು ರಮ್ಯಾ ಭಾವ ಎಲ್ಲರಿಗೂ ಆಪ್ತವಾಗುತ್ತದೆ. ನಲ್ಲ ಬರಲು ಒಲುಮೆಯಲಿ ನಲಿದು ನಭ ನೋಡುವಳು ಎನ್ನುವಲ್ಲಿ ಹೆಣ್ಣಿನ ಸಹಜ ಸ್ವಭಾವವನ್ನು ಓದುಗರ ಮುಂದಿಟ್ಟಿದ್ದಾರೆ. ನಾಚಿಕೆ ಮತ್ತು ಸಂಕೋಚ ಸ್ತ್ರೀಯ ಸೌಂದರ್ಯವನ್ನು ನೂರ್ಮಡಿಗೊಳಿಸುವ ಆಭರಣಗಳು. ಅವಳ ನಾಚಿಕೆಯ ಒಂದು ಕಿರುನೋಟ ನಲ್ಲನೆದೆಯಲ್ಲಿ ಸಾವಿರ ಚಿಟ್ಟೆಗಳನ್ನು ಕುಣಿಸಬಲ್ಲದು. ನನ್ನ ಪ್ರೀತಿಯೊಡಗೂಡಿ ಬಂದ ಭಾವಕ್ಕೆ ಪ್ರಿಯತಮೆಯ ಗಲ್ಲಗಳು ಕಾಮನಬಿಲ್ಲಿನಂತೆ ರಂಗೇರಿದವು ಎಂಬ ಸಾಲುಗಳು ಮೈಮನಸ್ಸುಗಳನ್ನು ಪುಳಕಿತಗೊಳಿಸುತ್ತವೆ.

ಕಾಡು ಬೆಳದಿಂಗಳ

 ಎದೆಯಲ್ಲೊಂದು

 ನೊರೆ ಹಾಲ ಬಟ್ಟಲು

 ಹಸಿದ ಮಗುವಿಗಿಲ್ಲಿ

 ತುಟಿ ನೆಂದ ಕನಸು

 ಬಾಯಿ ಚಪ್ಪರಿಸುತಿದೆ

 ಅದೇ ಕನಸ ಗುಂಗಿನಲ್ಲಿ

ಈ ಕವಿತೆಯಲ್ಲಿ ಹೆತ್ತೊಡಲು ತನ್ನ ಹಸುಗೂಸಿಗೆ ಹಾಲುಣಿಸಲು ಆಗದ ಅಸಹಾಯಕ ಪರಿಸ್ಥಿತಿಯಲ್ಲಿ ತನ್ನತನವನ್ನು ಮರೆತು ತನ್ನ ಮನಃಸಾಕ್ಷಿಗೆ ವಿರುದ್ದವಾಗಿ ಕಾಮುಕರ ಪಾಲಿಗೆ ಯಜ್ಞಕ್ಕೆ  ಸಮರ್ಪಿಸಿಕೊಂಡ ಬಲಿಯಾಗಿ ತನ್ನ

ಕಂದನ ಒಣಗಿದ ತುಟಿಯ ನೆನೆಸಿದ ಪರಿಯು ಮಾತೃ ಕುಲದ ಕರುಳು ಹಿಂಡುವ ಜತೆಗೆ ಬದಲಾಗದ ನಮ್ಮ ಆರ್ಥಿಕ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿ ಮೂಡಿ ಬಂದಿದೆ.

ಈ ಕವನ ಸಂಕಲನದಲ್ಲಿ ವನಸುಮ ಕವಿತೆ ವಿಭಿನ್ನವಾಗಿ ಮೂಡಿ ಬಂದಿದ್ದು, ಕಾನನದ ಸುಮವು ದೇವರೊಂದಿಗೆ ಮಾತಿಗಿಳಿದು ಚರ್ಚಿಸುತ್ತಾ ಸೃಷ್ಟಿಯ ಮೂಲವನ್ನು ಕೆದಕುತ್ತಾ ಸಾಗಿರುವ ಸಾಲುಗಳು ಅಧ್ಯಾತ್ಮಿಕತೆಯ ಜೊತೆ ಜೊತೆಗೆ ವಾಸ್ತವಿಕತೆಯನ್ನು ವಿವರಿಸುತ್ತದೆ.

ಗಾಣದೆತ್ತಿನನುಭವ ಇಲ್ಲಿ

 ಬದುಕು ಸವೆಯಿತಿಲ್ಲಿ

 ನೀನು ತಾನೆ ಬರದೆ ಹೋಗಿದ್ದರೆ

 ಬದುಕುಬವಣೆಯಿಲ್ಲಿ

ಇಲ್ಲಿ ಕವಯತ್ರಿ ಸ್ನೇಹ ಲೋಕದಲ್ಲಿ ಮುಳುಗಿ, ಸ್ನೇಹಮಯಿಯಾಗಿ ,ಪ್ರೇಮ ಮಯಿಯಾಗಿ, ಮಿತ್ರ ರಾಗಗಳನ್ನು ನುಡಿಸುತ್ತಾ, ನನ್ನ ಬಳಿಗೆ ಬಂದೆ ಎನ್ನುತ್ತಾ ಗೆಳತಿಯ ಸಹಾಯ ಸಹಕಾರವನ್ನು ನೆರವನ್ನು ಸ್ಮರಿಸುತ್ತಾ ಈ ಕವಿತೆ ಕಟ್ಟಿದ್ದಾರೆ. ಇಲ್ಲಿ ಗಾಣದೆತ್ತಿನ ಎನ್ನುವ ರೂಪಕ ಬದುಕು ಎನ್ನುವ ಸಾಲು ನಿರಂತರ ಶ್ರಮದ ಪ್ರತೀಕವಾಗಿ ಎಲ್ಲರ ಗಮನ ಸೆಳೆದರೆ, ಗೆಳತಿ ಬಾರದಿದ್ದರೆ ಬದುಕಿನಲ್ಲಿ ಕಷ್ಟಗಳು ಎದುರಾಗುತಿದ್ದವು. ಎಲ್ಲವನ್ನು ನಿನ್ನ ಆಗಮನ ಹುಸಿಯಾಗಿಸಿತು ಎಂದು ಹೆಮ್ಮೆಯಿಂದ ಅಭಿಮಾನದಿಂದ ಹೇಳಿಕೊಳ್ಳುತ್ತಾರೆ.

ನೀಲಿಕಂಗಳ ಆಳದಲ್ಲಿ

 ಅದೆಷ್ಟು ಮೌನದ ಮಾತುಗಳು

 ಹೊಳೆದಷ್ಟು ಹೊಳಪು

 ಇರುಳ ಮಗ್ಗುಲಿಗೆ

ನೀಲಿ ಕಂಗಳು ರೂಪಕದಲ್ಲಿ ಸೆಳೆತವಿದೆ, ಚೆಲುವಿನ ಖನಿಯ ಕಂಗಳ ವರ್ಣನೆ ಇದಾಗಿದೆ. ಪ್ರೇಮಿಗಳ ನಡುವಿನ ಒಂದು ಪರಿಭಾಷೆಯಾಗಿ ನಯನಗಳು ಮಾತಾಡುತ್ತವೆ. ಕಣ್ಣು ಕಣ್ಣು ಕಲೆತಾಗ ಮಾತು ಮೌನವಾಗುತ್ತದೆ .ಕಂಗಳ ನಡುವೆ ಮಾತುಗಳ ವಿನಿಮಯವಾಗುತ್ತದೆ. ಪ್ರೇಮನಿವೇದನೆಯಾಗುತ್ತದೆ, ಭಾವನೆಗಳಿಗೆ ಸ್ಪಂದನೆಯಾಗುತ್ತದೆ ಎನ್ನುವ ಕವಯತ್ರಿ ಇರುಳಿನಲ್ಲಿ ಮಾಮರದ ಕನಸುಗಳನ್ನು ಬಿತ್ತುತ್ತವೆ ಎಂದು ಚಂದವಾಗಿ ಪ್ರತಿಧ್ವನಿಸಿದ್ದಾರೆ.

ಬಾರದಿರಿ ಕನಸುಗಳೆ

 ಬಂದು ಹಿಂಸಿಸದಿರಿ

ಕೆಣಕದಿರಿ ಭಾವಗಳನು

 ಸಾವು ಕಾಣದ ಅದೆಷ್ಟೋ ಕನಸುಗಳು

 ಉಸಿರಾಡುತ್ತಿವೆ ಅದೇ ಹೃದಯದ ಗೋರಿಯಲ್ಲಿ

ಇಲ್ಲಿ ಕಂಡ ಕನಸುಗಳು ನನಸಾಗುತಿಲ್ಲ. ಹಾಗಾಗಿ ಪದೆ ಪದೆ. ಕನಸಲಿ ಬಂದು ನನಸಾಗದ ಅವುಗಳು ಕಾಡುವುದಾದರೂ ಏಕೆಈಗಾಗಲೇ. ಎದೆಯೊಳಗುಳಿದ ಅಸಂಖ್ಯಾತ ಕನಸುಗಳು ಹೃದಯದಲ್ಲಿ ಗೋರಿಯಾಗಿವೆ ಎಂದು ಗೋಗರೆಯುತ್ತಾರೆ.

ಇರುಳ ಕನಸಿಗೊಂದಿಷ್ಟು

ತೈಲ ಸುರಿದು ಮೌನ

ತಳೆದಿರುವೆ ನಾನು

ಸುಖಾ ಸುಮ್ಮನೆ

ಮಾತ ಬೇಲಿಯೊಳಗೊಂದು

ನಗುವ ಗೂಡ ಕಟ್ಟಿರುವೆ ನಾನು

ಕಂಡ ಕನಸುಗಳೆಲ್ಲಾ ನನಸಾಗುವುದಿಲ್ಲ ಆದರೂ ಭರವಸೆಯಿಟ್ಟು ಕಾಯುತ್ತಿರುವೆ ಎನ್ನುವ ಕವಿ ಭಾವವನ್ನು ಇಲ್ಲಿ ಕಾಣಬಹುದು. ಮಾತಿನ ಮಧ್ಯ ಬೇರೆಯವರಿಗೆ ತನ್ನ ಮನೋವೇದನೆ ತಿಳಿಯಬಾರದೆಂದು ಮೊಗದ ಮೇಲೆ ಬಲವಂತದ ನಗು ತಂದುಕೊಳ್ಳುವೆ ಆದರಿದು ಸುಖಾ ಸುಮ್ಮನೆ ಇದರಿಂದ ಏನು ಪ್ರಯೋಜನವಿಲ್ಲ .ಕೇವಲ ವೇಷ ಅಷ್ಟೇ ಎನ್ನುತ್ತಾರೆ.

ಜಂಜಡದ ಬದುಕಿನಲಿ

 ಜಡವಾದ ಮನ

 ನಿನ್ನ ಗೈರು ಮಾತ್ರ ನಿನಗೆ

 ನಿಯತಕಾಲಿಕ ಸುದ್ದಿ

ಎನ್ನುವಲ್ಲಿ ಬದುಕಿನ ಕಷ್ಟಗಳಿಗೆ ಕೊನೆಯಿಲ್ಲ. ಅವು ನಿರಂತರವಾದ ಚಕ್ರದಂತೆ ನಮ್ಮ ಸುತ್ತ ಸುತ್ತುತ್ತಿರುತ್ತವೆ ಎಂಬುದನ್ನು ಗೈರುಹಾಜರಿ ನಿಯತಕಾಲಿಕ ಸುದ್ದಿ ಎಂಬ ರೂಪಕದಲ್ಲಿ ಅದ್ಭುತವಾಗಿ ನಿರೂಪಿಸಿ, ಅಮ್ಮನ ಅನುಪಸ್ಥಿತಿಯಲ್ಲಿನ ಬದುಕನ್ನು ಅವಳ ಕಾಲ್ದೂಳ ಕಣವೆಂದು ಕವಯತ್ರಿ ಭಾವಿಸುತ್ತಾರೆ.

ಎಷ್ಟೋ ನಿಂದನೆಗಳು ನೋವುಗಳು

 ಆವಿಯಾದ ರಣ ದುಃಖಗಳು

 ವಿರಕ್ತಿಯಲಿ ಕೆನೆಗಟ್ಟಿದ

 ಹಗಲು ಮುಸ್ಸಂಜೆಗಳೆಷ್ಟು

ಈ ಕವಿತೆಯಲ್ಲಿ ಕವಯತ್ರಿ ಅಂತರಂಗದ ತುಮುಲಗಳು ಮನದಲ್ಲಿ ಕುದಿಯುವ ಬುಗ್ಗೆಯಂತೆ ಎಂಬರ್ಥದಲ್ಲಿ ವರ್ಣಿಸಿದ್ದಾರೆ. ಜೀವನದ ತುಂಬಾ ಅವಮಾನ, ಅವಹೇಳನ, ತಿರಸ್ಕಾರ, ನಿಂದನೆಗಳ ನೋವುಂಡು, ದುಃಖಗಳು ಆವಿಯಾಗಿ ಕಣ್ಣೀರು ಬತ್ತಿಸಿವೆ ಎನ್ನುತ್ತಾ ಜುಗುಪ್ಸೆಗೊಂಡು ಎಲ್ಲಾ ಬಯಕೆಗಳಿಂದ ಮುಕ್ತಿಪಡೆಯಲು ಹಗಲಿರುಳು ಪರಿತಪ್ಪಿಸುತ್ತಿರುವೆ ಎನ್ನುತ್ತಾರೆ. ಅವನು ಅವಳು ಕವಿತೆಯು ಗಜಲ್ ಸ್ವರೂಪದಲ್ಲಿ ಮೂಡಿಬಂದಿದ್ದು ಅವನು ಅವಳು ಪ್ರೀತಿಯೊಳು ಮಿಂದು ಏನೆಲ್ಲಾ ಆಗಬಲ್ಲರು ಎಂದು ತೋರಿಸುತ್ತದೆ.

ಒಟ್ಟಾರೆ ಹೇಳುವುದಾದರೆ ಮೊದಲ ಮಳೆಯ ಕಾಡುವ ಹನಿಗಳನು ಓದಿದಾಗ ನನಗಾದ ಅನುಭವವೆಂದರೆ ಭಾವನಾತ್ಮಕವಾಗಿ, ಮಧುರವಾಗಿ, ಪ್ರಾಸ ಬದ್ಧತೆಯಲ್ಲಿ ಭಾವಗಳನ್ನು ಬಂಧಿಸಿದ್ದಾರೆ.ಕವಯತ್ರಿಗೆ ಸಾಹಿತ್ಯ ಲೋಕದಲ್ಲಿ ಒಳ್ಳೆಯ ಅಸ್ತಿತ್ವವಿದೆ.

ಒಟ್ಟಾರೆ ಮೊದಲ ಮಳೆ ಕವನ ಸಂಕಲನ ನವಿರಾದ ಭಾವಗಳಲ್ಲಿ, ನವ ನವೀನವಾಗಿ ಮೂಡಿ ಬಂದಿದೆ. ಹೀಗೆ ಇಲ್ಲಿ ಪ್ರತಿಯೊಂದು ಕವಿತೆಯು ವಿಶಿಷ್ಟ ಸ್ವರೂಪದಲ್ಲಿ ಜೀವತಳೆದಿದ್ದು ಓದುಗರಿಗೆ ಯಾವುದೇ ನಿರಾಸೆ ಮಾಡದೇ ಓದಿನ ತೃಪ್ತಿಯನ್ನು ನೀಡುತ್ತವೆ.ಈ ನಿಟ್ಟಿನಲ್ಲಿ ಕವಯತ್ರಿಯ ಕಾವ್ಯ ಪಯಣಕ್ಕೆ ಶುಭಹಾರೈಕೆಗಳು.


ಅನುಸೂಯ ಯತೀಶ್

One thought on “ಮೊದಲ ಮಳೆಯ‌ ಕಾಡುವ ಹನಿಗಳು

  1. ಸೊಗಸಾದ ಪರಿಚಯ ಇಬ್ಬರಿಗೂ ಅಭಿನಂದನೆಗಳು ಮೇಡಮ್

Leave a Reply

Back To Top