ಗಜಲ್
ದೇವರಾಜ್ ಹುಣಸಿಕಟ್ಟಿ.
ನಾವಿಬ್ಬರು ಬಹು ದೀರ್ಘ ಬದುಕಿನ ಒಂದಾದರೂ ತಿರುವಿನಲಿ ಕೂಡಬೇಕು
ನದಿಯಾಗಿ ಅಂತರದಿ ಹರಿದರೂ ಸಮುದ್ರದ ಮಡುವಿನಲಿ ಕೂಡಬೇಕು
ನಡೆದ ಹಾದಿಯ ತುಂಬ ಹೆಜ್ಜೆಯ ಹೂವುಗಳು ಅರಳಿವೆ..!
ಜೊತೆಗೂಡಿ ನಡೆಯುವ ಗಳಿಗೆ ಮತ್ತೆ ಬರದಿದ್ದರೂ ನೆನಪನಲಿ ಕೂಡಬೇಕು
ದೂರ ದೂರವೇ ಇದ್ದರೂ ಭೂಮಿ ಬಾನುವಿನಂತರವ ಕಳೆದಿಲ್ಲವೆ ಮಳೆಯು…?
ಸಂಘರ್ಷದ ಬದುಕು ಲಕ್ಷ ಮಾತಾಡುತ್ತಿದ್ದರೂ ಮೌನದಲಿ ಕೂಡಬೇಕು
ಹುಟ್ಟಿನಲಿ ಬಣ್ಣಗಳ ಬಳಿದುಕೊಂಡವರ ದಿಕ್ಕರಿಸಿಬಿಡಿ ನಿಷ್ಕಲ್ಮಶ ಪ್ರೀತಿಗೆ
ಜಗದ ಗೋಡೆಗಳೆಲ್ಲ ಕೆಡವುವ ಇರಾದೆ ಇಲ್ಲದಿದ್ದರೂ ನೋವಿನಲಿ ಕೂಡಬೇಕು
ಬೆರೆತ ಮೇಲೆನಿತ್ತು ಉಪ್ಪಿನ ಹರಿವಾಣವೆಂದವರು ಮುಳುಗೆಳುತ್ತಲೇ ಇದ್ದಾರೆ
ಸೇರಿದ ಮೇಲೆ ಸಾಗರದಿ ಅಲೆಯಾಗಿಯಾದರೂ ಮತ್ತಿಕ್ಕುವ ದಡದಲಿ ಕೂಡಬೇಕು
ಬದುಕಿದ್ದು ಸತ್ತವರಂತೆ ಇರುವವರೇ ತುಂಬಿರುವ ಲೋಕವಿದಿಗ ಗೆಳೆಯ
ನೆತ್ತರ ಭಯವಿದ್ದರೇನಂತೆ ಮಿಡಿತವಾಗಿಯಾದರೂ ಹೃದಯದಲಿ ಕೂಡಬೇಕು
ಹಾಡಿಗೊಂದು ಹಾಡಂತೆ ಭಾವಕ್ಕೆ ಭಾಷೆ ಗೊಡವೆಯುಂಟೆ..?
ಹುಟ್ಟು ಸಾವುಗಳೆಲ್ಲೆಯಾಗಲಿ ಬೆಳಕಾಗಿಯಾದರೂ ‘ದೇವ’ನಗರಿಯಲಿ ಕೂಡಬೇಕು