ಅಂಕಣ ಸಂಗಾತಿ

ಸಕಾಲ

ಅಗೋಚರಶಕ್ತಿಗಳು,ನಿಶಾಚರದಂತೆ….

wooden cart wheel on the wall of a wooden house

ಅರಿವೆಂಬ ಗುರುವ ಹುಡುಕಿದಷ್ಟು ಮರೆವು ಕಾಡುವುದು.ಮರೆತಷ್ಟು ಹೂತಿಟ್ಟ ಜ್ಞಾನ ವಜ್ರವಾಗಿ ಬೆಳೆದಿಹುದು.ಜ್ಞಾನ ದಾಹಿಯುದಯದಿ ಪುನರುಜ್ಜೀವನ ಸಂಸ್ಕೃತಿಯ ಹೊಸ ಅಧ್ಯಯನ.. ನಾಡು ನುಡಿಯ ಸೇವೆ ಪುನರ್ ನಾಮಕರಣ.

ಪುರಾತನ ಸಂಸ್ಕೃತಿಯನ್ನು ಹೊಂದಿರುವ ಹಾಗೂ ವಿಭಿನ್ನ ನೆಲೆಗಟ್ಟಿನಲ್ಲಿ ತನ್ನದೇ ಆದ ಶ್ರೀಮಂತ ಪರಂಪರೆಯನ್ನು ಇಡೀ ವಿಶ್ವಕೆ ಪರಿಚಯಿಸಿದ ನಮ್ಮ ಹೆಮ್ಮೆಯ ದೇಶ ಭಾರತವೆಂದರೆ ತಪ್ಪಾಗದು.  ಮಧ್ಯಮ ಯುಗದ ಚಿಂತನೆ ಮತ್ತು ಧಾರ್ಮಿಕ ಚಿಂತನೆಗಳು ಇಲ್ಲಿನ ಜನಜೀವನದ ಮೇಲೆ ಹೆಚ್ಚು ಪ್ರಭಾವ ಬೀರಿದ ಪರಿಣಾಮ, ಅವುಗಳಲ್ಲಿ ಕೆಲವು ವೈಜ್ಞಾನಿಕ ತಳಹದಿಯನ್ನು ಹೊಂದಿದ್ದರೂ ಇನ್ನುಳಿದವು ಆ ಕಾಲದ ಊಹಾಪೋಹಗಳಿಂದ ಸೇರಿಕೊಂಡಿದ್ದವೆಂಬುದನ್ನು ಅಲ್ಲಗಳೆಯುವಂತಿಲ್ಲ. ಅವುಗಳೆಲ್ಲವನ್ನು  ಮನದಾಳದ ಒರೆಗೆ ಒಳಪಡಿಸುವ ಕೆಲಸ ತಲತಲಾಂತರದಿಂದಲೂ ಆಗುತ್ತಿರುವುದು ಪ್ರಗತಿಪರ ಚಿಂತನೆಯೇ ಆಗಿದೆ.

ಹಳೆಯ ಅಥವಾ ಪುರಾತನ ಪರಂಪರೆಯಿಂದ ಮಾತ್ರ ಕಲಿಯಬಹುದೆ? ಅದನ್ನೇ ಅನುಸರಿಸಬೇಕಾ ಎಂದು ಪ್ರಶ್ನಿಸತೊಡಗಿರುವುದು ಮನದ ಮೂಲೆಯಲಿ ಚಿಂತನೆಗಳ ಘರ್ಷಣೆ ನಡೆಯುತ್ತಿದೆಯಂದರ್ಥ. ಅಗೋಚರ ಶಕ್ತಿಗಳು,ನಿಶಾಚರದಂತೆ ವೈಜ್ಞಾನಿಕ ತಳಹದಿ ಇಲ್ಲದೆ ಮೂಢ ನಂಬಿಕೆಗಳನ್ನು ಪ್ರಭಲವಾಗಿ ಹಾಗೂ ತಕ್ಷಣಕ್ಕೆ ಹಿಂದೂ ಮುಂದೂ ವಿಚಾರಿಸದೇ ಒಪ್ಪಿಕೊಳ್ಳುವಂತಹ ಸನ್ನೀವೇಶಗಳು

ಏರ್ಪಡುತ್ತಿರುವುದು ಭವಿಷ್ಯದ ಪ್ರಗತಿಗೆ ಅಡಚಣೆಯಾಗಿದೆ.ಯಾವುದೋ ಕಾಲ ಘಟ್ಟದಲ್ಲಿ ಸಕಾರಣವಿಲ್ಲದೆ ಪ್ರಾರಂಭವಾದ ಇಂತಹ ಆಚರಣೆಗಳಿಂದ ಹೊರಬರುವುದು ಇಂದಿನ ಅಗತ್ಯ ವಾಗಿದೆ. ಅವು ನಮ್ಮ ದೈನಂದಿಕ ಬದುಕನ್ನು ಭಾದಿಸು ತ್ತವೆ. ಮಾನಸಿಕ ಕಿರಿಕಿರಿಗಳನ್ನು ಉಂಟು ಮಾಡುತ್ತವೆ.

ಸೂರ್ಯಗ್ರಹಣ,ಚಂದ್ರಗ್ರಹಣದ ವಿಚಾರವಾಗಿ ತಲತಲಾಂತರದಿಂದ ಆಚರಿಸುವ ನಂಬಿಕೆಗಳಿಗೆ ಈಗೀಗ ಏಕೆ? ಹಾಗೆ ಯಾಕೆ ಮಾಡಬೇಕು? ಬಾನಂಗಳದಲ್ಲಿ ಘಟಿಸುವ ಅಮೋಘ ದೃಶ್ಯ ನೋಡಿ ಆನಂದಿಸುವ ಪ್ರಕ್ರಿಯೆ ಒಳಿತು.ಮನುಷ್ಯನ ಮೆದುಳೆಂಬ ಆಗಸದಲ್ಲಿ ಕಾಣಬರುವ ಅನಿರ್ದಿಷ್ಟತೆಯು ವೈಜ್ಞಾನಿಕ ಮನೋಭಾವದ ಮೇಲೆ ದಾಳಿ ಮಾಡಿ ವಿತಂಡವಾದಗಳಿಗೆ ಚರ್ಚಾಕೂಟಗಳೇ ಜನಜಂಗುಳಿಯಲ್ಲಿ ತೀರ್ಮಾನಕ್ಕೆಬಾರದೆ ಹೋಗುತ್ತವೆ

ನಮ್ಮ ವಿವೇಚನೆಗೆ ನಿಲುಕುವ ನಮ್ಮ ದೈನಂದಿಕ ಬದುಕನ್ನು ಭಾದಿಸುವ ಮೇಲ್ನೋಟಕ್ಕೆ ವೈಜ್ಞಾನಿಕ ತಳಹದಿ ಇಲ್ಲದ ಆಚರಣೆಗಳಿಂದ ದೂರವಿರೋಣವೆಂಬ ನಿಲುವು ಎಲ್ಲರ ಮನದಲ್ಲಿ ಮೂಡಿದರೆ ಸಕಾರಾತ್ಮಕ ಪ್ರತಿಕ್ರಿಯೆ ಸಹಜವಾಗಿ ಒಲಿಯುವುದೆಂಬ ನಂಬಿಕೆಯನ್ನು ಹಿರಿಯರು ಬಿತ್ತಿದ್ದಾರೆ.ಸಾಕ್ರಟೀಸ್ ನ ಜೀವನದ ಅಂತ್ಯ ನೆನೆದರೆ ಮನಕಲುಕುತ್ತದೆ.ಆದ್ರೆ ಸತ್ಯ ಬೂದಿಮುಚ್ಚಿದ ಕೆಂಡದಂತೆ.ಅಂದು ತಿರಸ್ಕರಿಸಿದರು,ಇಂದು ಪುರಸ್ಕೃತರಾದರು..ಒಪ್ಪಿಕೊಂಡು ಬೆಳೆಸಿದ್ದರೆ ಇಂದು ಅದೆಷ್ಟೋ ನಿಗೂಢ ವಿಚಾರಗಳಿಗೆ ಉತ್ತರ ಸಿಗುತ್ತಿತ್ತು.

ಇದನ್ನು ಸಾಮೂಹಿಕ ನೆಲೆಯಲ್ಲಿ ಕಾರ್ಯ ರೂಪಕ್ಕೆ ತರಬೇಕಾದರೆ ಬಹಳಷ್ಟು ಕಾಲಾವಕಾಶಬೇಕು.ಆದರೆ ವೈಯಕ್ತಿಕ ನೆಲೆಯಲ್ಲಿ ಪ್ರಾಂಜಲ ಮನದಿಂದ ಸ್ವೀಕರಿಸಿ ಅನುಸರಿಸುವುದು ನಮ್ಮ ಕೈಯ್ಯಲ್ಲಿದೆ.ನಾವು ಪ್ರಜ್ಞಾ ವಂತರಾಗಿ ಕೆಲಸ ಮಾಡಲು ಹಾಗೂ ಮಾಡುತ್ತಿರುವ ವರ ಜೊತೆಗೂಡಿ ನಡೆಯಲು ಸಿದ್ದರಾಗಬೇಕು.

ಜೀವನ ಮೌಲ್ಯವೆಂದರೆ ಸತ್ಯ, ಅಹಿಂಸೆ, ಶೀಲ, ಸಂಯಮ, ದಯೆ, ಕ್ಷಮೆ, ತನ್ನಂತೆ ಪರರ ಬಗೆಯುವ ರೀತಿ, ಬೌದ್ಧಿಕ ಪ್ರಾಮಾಣಿಕತೆ..ಮತ್ತಿತರ ಮಾನವೀಯ ಗುಣಗಳು.ಇಂದು ಮನುಷ್ಯ ಪ್ರಕೃತಿಯೊಂದಿಗೆ ಸಂಘರ್ಷಕ್ಕೆ ಇಳಿದಿದ್ದಾನೆ. ಪ್ರಕೃತಿಯ ಮಹತ್ವವನ್ನು ಅರಿತುಕೊಳ್ಳದೆ ಅತಿಯಾಗಿ ಪ್ರಕೃತಿಯನ್ನು ವಿನಾಶದಂಚಿಗೆ ಕೊಂಡೊಯ್ಯುತ್ತಿದ್ದಾನೆ’’ ಅಮೇಜಾನ್ ಕಾಡಿಗೆ ಅಗ್ನಿ ಸ್ಪರ್ಶಿಸಿದಾಗ ಇಡೀ ವಿಶ್ವ ಕಂಗಾಗಿದ್ದು, ಜಗತ್ತಿಗೆ ಜೀವದುಸಿರನು ನೀಡುವ ಆಮ್ಲಜನಕ ಕಾರ್ಖಾನೆ ಸ್ತಬ್ದವಾದಾಗ ಅದರ ಅನಿವಾರ್ಯತೆ ಎಷ್ಟೆಂಬುದನ್ನು ವಿವರಿಸಬೇಕಿಲ್ಲ.

1900ಕ್ಕೂ ಹಿಂದಿನ ವಿಜ್ಞಾನ ಜ್ಞಾನದ ಕೇಂದ್ರಿತವಾಗಿತ್ತು ಆದರೆ ನಂತರದ ಹೆಚ್ಚಿನ ಪಾಲು ವಿಜ್ಞಾನವಾಗಿರದೆ, ಕಾರಣಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುವಲ್ಲಿ ವಿಫಲವಾಗಿರುವುದು ವಿಪರ್ಯಾಸ. ವಿಜ್ಞಾನ,ಕೇವಲ ಪ್ರಾಯೋಗಿಕಲ್ಲ,ಅದರೊಂದರಿಂದಲೇ ಎಲ್ಲವೂ ಸಾಧ್ಯವಿಲ್ಲ, ತತ್ತ್ವಜ್ಞಾನ ಮತ್ತು ವಿಚಾರಶಕ್ತಿಗಳು ಪರಸ್ಪರ ಸಂಯೋಜನೆಗೊಂಡರೆ ಮಾತ್ರ ಸಮಾಜದ ಉನ್ನತಿ ಸಾಧ್ಯ’’ ವೈಜ್ಞಾನಿಕ ಮನೋಧರ್ಮ ಇರುವವರೆಲ್ಲ ಪ್ರಕೃತಿ ಉಳಿಸುತ್ತಾರೆ ಎನ್ನುವುದು ತಪ್ಪು. ಪ್ರಕೃತಿಯೊಂದಿಗೆ ಸಹಬಾಳ್ವೆ ನಡೆಸಬೇಕಾದರೆ ವೈಜ್ಞಾನಿಕ ಮನೋಧರ್ಮ ಮತ್ತು ವೈಚಾರಿಕತೆ ತತ್ವಶಾಸ್ತ್ರದ ನೆಲೆಯಿಂದ ಬಂದಿದ್ದರೆ ಮಾತ್ರ ಸಾಧ್ಯ.

ರಾಜ್ಯದಿಂದ ರಾಜ್ಯಕ್ಕೆ ಒಂದೆತೆರನಾದ ಆಚರಣೆಗಳಿಲ್ಲ.ವೇಷಭೂಷಣ, ಆಹಾರ ಪದ್ದತಿ, ಆಚಾರ ವಿಚಾರ ವಿನಿಮಯ ಎಲ್ಲವೂ ಭಿನ್ನ‌.

ಗಿರಿಜನರ ಕಲೆಯು ಆದಿ ಮಾನವನಿಂದ ಈ ಆಧುನಿಕ ಮಾನವನವರೆಗೆ ಮನು ಕುಲ ಬೆಳೆದುಬಂದ ಬಗೆ ನೋಡಿದರೆ ಬುದ್ಧಿ, ತಿಳಿವಳಿಕೆ, ಜ್ಞಾನ, ಪ್ರಜ್ಞೆ,ತಿಳುವಳಿಕೆ ಮಾನವನಲ್ಲಿರಬೇಕಾದ ಪ್ರಧಾನ ಅಂಶಗಳು. ಯಾವುದು ಚಿಂತನೆಗೆ,ಮನನಗಳಿಗೆ ಪ್ರೇರಣೆಯಾಗುತ್ತೊ ಅಥವಾ ಚರ್ಚೆಯ ವಿಷಯ ವಸ್ತುವಾಗುವುದೋ ಆವಾಗ,ನಮ್ಮ ತಿಳಿವಳಿಕೆಗೆ ಹೊಸದೊಂದು ಆಯಾಮವನ್ನು ನೀಡಿದಂತೆ. ಹೊಸ ಹೊಸ ಕ್ಷಿತಿಜಗಳನ್ನು ತೆರೆದು ತೋರಿಸುವಂತಾಗುವುದೋ ಒಳತಿರುವು. ವೈಚಾರಿಕ ಪ್ರಜ್ಞೆ ಮೂಡಿಸಿಕೊಂಡಿರುವ ವ್ಯಕ್ತಿ ಯಾವುದೇ ವಿಷಯವನ್ನು, ಸಂಗತಿಯನ್ನು ಒಂದೇ ಬಾರಿಗೆ ಒಪ್ಪಲಾರ. ಅದರ ನಿಜಾಂಶವನ್ನು ಅರಿತುಕೊಳ್ಳಲು ಅವನ ವಿಚಾರಶಕ್ತಿ ಶ್ರಮಿಸುತ್ತಿರುತ್ತದೆ. ಪ್ರಪಂಚವೆಲ್ಲ ಅಹುದೆಂದು ಒಂದು ಕಡೆಯಿಂದ ಹೇಳಿದರೂ ವಿಚಾರವಂತನು ಅದನ್ನು ವಿಮರ್ಶಿಸದೆ ಒಪ್ಪಲಾರ. ಅವನ ಪ್ರಜ್ಞೆಗೆ ಒಪ್ಪಿತವಾದರೆ ಮಾತ್ರ ಲೋಕ ಅಲ್ಲಗಳೆದರೂ ಅವನು ತನ್ನ ಅಭಿಪ್ರಾಯವನ್ನು ಬದಲಿಸಲಾರ. ಗೆಲಿಲಿಯೋ, ಅರಿಸ್ಟಾಟಲ್‌ ಇದಕ್ಕೆ ಐತಿಹಾಸಿಕ ನಿದರ್ಶನಗಳು.

ಡಾ.ಶಿವರಾಮ ಕಾರಂತರ ಪ್ರಕಾರ ಸಂಶಯಗಳಿಗೆ ಎಡೆ ಮಾಡಿಕೊಡುವ, ಅಪನಂಬಿಕೆ ಮೂಡಿಸುವ ವಿಷಯ ಗಳನ್ನು ಹೆಚ್ಚು ಯೋಚಿಸಬೇಕಾಗಿಲ್ಲ. ಪರಂಪರೆಯಿಂದ ಸಾಗಿ ಬಂದಿರುವ ಅಧ್ಯಾತ್ಮ,ಮತ,ಧರ್ಮ,ಜಾತಿ-ಪಂಥ ಇವುಗಳಲ್ಲಿಯ ಮೌಡ್ಯ,ಅರ್ಥರಹಿತವಾದ ವಿಧಿ ನಿಷೇಧಗಳು,ಮೂಢನಂಬಿಕೆಗಳು ಮತ್ತು ಅಂಧ ಸಂಪ್ರದಾಯಗಳು ಇವೇ ಮುಂತಾದವುಗಳು. ಈ ವಿಷಯಗಳ ಕುರಿತು ವಿಶ್ಲೇಷಣೆ ಮಾಡಿ ಅವುಗಳಿಂದಾಗಿ ಮಾನವ ಪ್ರಗತಿಗೆ ಆಗಿರುವ ತೊಡಕುಗಳನ್ನು ವಿಶದೀಕರಿಸಿ, ಅವುಗಳ ಜಾಲದಿಂದ ಪುಟಿದೆದ್ದು ಹೊರಬರಲು ಪ್ರಚೋದನೆ ನೀಡುವಂಥ ಸಂಗತಿಗಳ ಬಗ್ಗೆ ಹೆಚ್ಚು ಹೆಚ್ಚು ಜಾಗೃತಿ ಮೂಡಿಸುವುದು ಅನಿವಾರ್ಯ….ಜೊತೆಗೆ ಪ್ರಸ್ತುತ ಕೂಡ.

ಎದುರಾಗಿ ಬೀಸುವ ಗಾಳಿಗೆ ತಡೆಯೊಡ್ಡುವ ಸಾಹಸ ಮಾಡಬಲ್ಲವನಿಂದ ಮಾತ್ರ ಹೊಸದೊಂದು ಲೋಕ ಸೃಷ್ಟಿಯಾದಿತು.ಮೌಲ್ಯಗಳನ್ನು ಗಾಳಿಗೆ ತೂರದೆ ವಾಸ್ತವತೆಯ ನೆಲೆಗಟ್ಟಿನಲ್ಲಿ ಭದ್ರವಾಗಿ ನೆಲೆನಿಲ್ಲವು ನೈಜ ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡರೆ ಸಾರ್ಥಕ. ೮೪ ಜನ್ಮದ ನಂತರ ದೊರೆತ ಈ ಮಾನವ ಶರೀರ ಸಕಾರಾತ್ಮಕ ಪರಿಣಾಮವನ್ನು ಬೀರುವಂತೆ ಜಾಗೃತವಾಗಿರಿಸಬೇಕಿದೆ…..


ಶಿವಲೀಲಾ ಹುಣಸಗಿ

ಊರು- ಯಲ್ಲಾಪುರ ತಾಲೂಕು,ಉತ್ತರ ಕನ್ನಡ ಜಿಲ್ಲೆ ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಬೈಲ್ ದಲ್ಲಿ ಕಳೆದ ೨೪ ವರ್ಷಗಳಿಂದ ಶಿಕ್ಷಕಿಯಾಗಿ ಕಾರ್ಯ ನಿರ್ವಹಣೆ *ಪ್ರಕಟಿತ ಕೃತಿಗಳು- ಬಿಚ್ಚಿಟ್ಟಮನ,ಬದುಕಂದ್ರೆ ಹೀಗೇನಾ? ಅವಳಿ ಕವನಸಂಕಲನಗಳು. ಜಿಲ್ಲಾ ಕ.ಸಾ.ಪ ದ ಸಹ ಕಾರ್ಯದರ್ಶಿಯಾಗಿ ಕೆಲಸ ಮಾಡಿರುವೆ.ಜಿಲ್ಲಾ ಸಮ್ಮೆಳನದ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿರುವೆ. ಸಂದ ಪ್ರಶಸ್ತಿಗಳು- ಅನುಪಮಾ ಸೇವಾ ಪುರಸ್ಕಾರ, ಹೆಮ್ಮೆಯ ಕನ್ನಡಿ,ನಾಡೋಜ ದೇ ಜ ಗೌಡ ಪ್ರಶಸ್ತಿ, ಬೇಂದ್ರೆ ಕಾವ್ಯ ,ಆದರ್ಶ ಶಿಕ್ಷಕಿ,ಕನ್ನಡ ರತ್ನ,ಸಾಹಿತ್ಯ ರತ್ನ ಯುಗದರ್ಶಿನಿ ರಾಜ್ಯ ಪ್ರಶಸ್ತಿ. ಇತ್ಯಾದಿ…

7 thoughts on “

  1. ಪುರಾತನದಿಂದಲೇ ನೂತನಕ್ಕೆ ಬೆಲೆ ಬರೋದು.ಒಂದು ಹೊಸ ವಿಷಯವಸ್ತುವನ್ನು ಇಟ್ಟುಕೊಂಡು ಪ್ರಾರಂಬಿಸಿರುವ ತಮ್ಮ ಬರಹಕ್ಕೆ ಶುಭವಾಗಲಿ. ಅಭಿನಂದನೆಗಳು ಶಿವ. ನಿಮ್ಮ ಬರವಣಿಗೆ ಓದುಗರ ಮೆದುಳಿಗೆ ಮತ್ತಷ್ಟು ಮೇವು ಸಿಗುವಂತಾಗಲಿ ಶಿವ

  2. ಉತ್ತಮವಾದ ಲೇಖನ ….
    ದ್ವಂದ್ವ ಮನಸ್ಸಿಗೆ ಸರಿಯಾದ ಆಯ್ಕೆ ಮಾಡಲು
    ಸಹಕರಿಸುವ ಲೇಖನ….

  3. ಯಾವುದನ್ನೆ ಸ್ವೀಕರಿಸುವಾಗ ವ್ಯಕ್ತಿ ಆಲೋಚನೆ ಮಾಡಿ ಹೆಜ್ಜೆ ಇಡಬೇಕು.ಗೊಂದಲ ಇದೆಯಂತಾದರೆ ಇನ್ನೂ ಅದರ ಅರಿವಿನ ಅಗತ್ಯ ಇದೆ ಎಂದರ್ಥ.ಹಾಗಾಗಿ ಆಗಾಗ ಇಂತಹ ಉತ್ಕೃಷ್ಟ ಬರಹ ಓದುವುದಾಗಲಿ,ಪುಸ್ತಕ ಓದಿ ಅಧ್ಯಯನ ಮಾಡುವುದಾಗಲಿ ಮಾಡಿದಾಗ ಯಾವದು ತಪ್ಪಾಗದು.ಉತ್ತಮ ಬರಹಕ್ಕೆ ಶುಭಾಶಯ ಕೋರುವೆ.

  4. ನಮ್ಮ ದೇಶ,ಆಚರಣೆಗಳು ಇತ್ಯಾದಿಗಳ ಕುರಿತು ಬೆಳಕು ಚೆಲ್ಲುವ ಬರಹ,ಹಳೆಯದರ ಜೊತೆ ಹೊಸದನ್ನು ಮೇಳೈಸುವುದನ್ನು ಮಾರ್ಮಿಕವಾಗಿ ತಿಳಿಸುತ್ತದೆ.ಅಭಿನಂದನೆಗಳು ಸಹೋದರಿ.

  5. ತುಂಬಾ ಉತ್ತಮ ವೈಚಾರಿಕ ಲೇಖನ.ನಮ್ಮ ಐತಿಹಾಸಿಕ ಶ್ರೇಷ್ಠತೆಯನ್ನು ಎತ್ತಿ ಹಿಡಿಯುವ ಮೂಲಕ ತುಂಬಾ ಉತ್ತಮ ಪ್ರಯತ್ನ ಅದ್ಭುತವಾಗಿದೆ ಎಂಬುದು ನನ್ನ ಅಭಿಪ್ರಾಯ.ಇಂತಹಾ ಲೇಖನಗಳು ಹೆಚ್ಚು ಹೆಚ್ಚು ಮೂಡಿ ಬರಲಿ.ಅಭಿನಂದನೆಗಳು ಮೇಡಂ ರೀ

  6. ದೇಶದ ಮೂಲೆ ಮೂಲೆಗಳಿಂದ ಹೊರಹೊಮ್ಮುವ ಜೀವನ ಮೌಲ್ಯವನ್ನು ಅಳವಡಿಸಿಕೊಂಡರೆ ಮಾತ್ರ ಬದುಕು ಸಾರ್ಥಕ…. ಮಾರ್ಮಿಕ ಭಾವ..

  7. ತಾರ್ಕಿಕ ಕ್ರಿಯೆಯನ್ನು ಹಚ್ಚಿದಂತಿದೆ.ವೈಚಾರಿಕ ಮನೋಭಾವ ಬಿತ್ತುವ ಉತ್ತಮ ಗುಣಮಟ್ಟದ ಲೇಖನ…..

Leave a Reply

Back To Top