ಲೇಖನ
ನಾಳೆಯಭರವಸೆಯೊಂದಿಗೆಇಂದುಬಾಳಬೇಕು
ಅಮುಭಾವಜೀವಿಮುಸ್ಟೂರು
ಈ ಬದುಕು ಬಲು ಸ್ವಾರ್ಥಿ. ನಾವು ಎಷ್ಟೇ ಪ್ರಯತ್ನಪಟ್ಟರೂ ಅದು ತನಗೆ ಹೇಗೆ ಬೇಕೋ ಹಾಗೆ ನಮ್ಮನ್ನು ಕರೆದುಕೊಂಡು ಹೋಗುತ್ತದೆ. ಕೆಲವೊಂದು ಬಾರಿ ಬದುಕು ನಮ್ಮ ಹಿಡಿತಕ್ಕೆ ಸಿಕ್ಕರೂ ಕೂಡ ಹಲವು ಬಾರಿ ಅದು ನಮ್ಮನ್ನು ಹಲವಾರು ಬಿಕ್ಕಟ್ಟುಗಳಲ್ಲಿ ಸಿಲುಕಿಸಿ ನಾವು ಹಿಡಿದ ಹಿಡಿತವನ್ನು ಸಡಿಲಿಸಿಕೊಂಡು ಮುನ್ನಡೆಯುತ್ತ ನಮಗೆ ಹಲವಾರು ಸಂಕಷ್ಟಗಳನ್ನು ನೀಡುವ ಮೂಲಕ ಅನುಭವದ ಪಾಠಗಳನ್ನು ಹೇಳಿಕೊಡುತ್ತದೆ. ನಮ್ಮ ಬದುಕು ನಮ್ಮ ಹಿಡಿತವನ್ನು ತಪ್ಪದಂತೆ ತುಂಬಾ ಜಾಗರೂಕತೆಯಿಂದ ಅದನ್ನು ನಿರ್ವಹಣೆ ಮಾಡಬೇಕಾದ ಜವಾಬ್ದಾರಿ ನಮ್ಮದೇ ಆಗಿರುತ್ತದೆ. ಅಕ್ಕ-ಪಕ್ಕ ಹಿಂದೆ ಮುಂದೆ ನೆರೆಹೊರೆಯ ಯಾವ ಮಾತುಗಳಿಗೂ ನಾವು ಕಿವಿಗೊಡದೆ ನಡೆದಾಗ ಮಾತ್ರ ನಮ್ಮ ಬದುಕು ಸುಸೂತ್ರವಾಗಿ ಸಾಗುತ್ತಿರುತ್ತದೆ. ಅವರ ಆಡುವ ಮಾತುಗಳಿಗೆ ಕಿವಿಗೊಟ್ಟೆವೆಂದರೆ ನಮ್ಮ ಬದುಕಿನ ಅವನತಿಯ ಅಲ್ಲಿಂದಲೇ ಶುರುವಾಗುತ್ತದೆ. ನಮ್ಮ ಬದುಕನ್ನು ನಾವೇ ಮುನ್ನಡೆಸಬೇಕೇ ವಿನಃ ಬೇರೆಯವರ ಹಸ್ತಕ್ಷೇಪಕ್ಕೆ ಅವಕಾಶ ನೀಡಬಾರದು. ನಾವು ಯಾವುದೋ ಒಂದು ಮಾತಿಗೆ ಕಟ್ಟುಬಿದ್ದು ನಮ್ಮ ಬದುಕಿನ ಹಿಡಿತವನ್ನು ಅವರ ಕೈಗೆ ನೀಡಿದೆವೆಂದರೆ ಮುಗಿಯಿತು ನಾವು ನಮ್ಮ ಜೀವನದ ಗುರಿಯನ್ನು ಕಳೆದುಕೊಂಡು ಯಾವುದೋ ಮೋರಿ ಸೇರಿ ಬಿಡುತ್ತೇವೆ. ಹಾಗಾಗಿ ಯಾರು ಏನೇ ಅಂದರೂ ಯಾವುದೇ ಸಲಹೆ ಸೂಚನೆ ನೀಡಿದರು ಅಂತಿಮವಾಗಿ ತೀರ್ಮಾನಿಸಿ ನಮ್ಮ ಬದುಕನ್ನು ರೂಪಿಸಿಕೊಳ್ಳುವ ಹೊಣೆಗಾರಿಕೆ ನಮ್ಮದೇ ಆಗಿರುತ್ತದೆ.
ಜೀವನದಲ್ಲಿ ಕಷ್ಟಗಳು ಬರುವುದು ಹಾದಿ ತಪ್ಪಿದ ಬದುಕನ್ನು ಸರಿದಾರಿಗೆ ತಂದುಕೊಳ್ಳಲು ಇರುವ ಒಂದು ಅವಕಾಶ. ನಡೆಯುವ ಮನುಷ್ಯ ಎಡವುವುದು ಸಹಜ. ಎಡವಿ ಬಿದ್ದ ಜಾಗದಲ್ಲಿ ಆದ ನೋವು ಇಡೀ ಬದುಕಿನುದ್ದಕ್ಕೂ ನಮ್ಮನ್ನು ಮತ್ತೆ ಬೀಳದಂತೆ ಊರುಗೋಲಾಗಿರುತ್ತದೆ. ಎಂತಹ ಮಹನೀಯರೇ ಆದರೂ ಸಾಧಕರೆನಿಸಿ ಕೊಂಡವರು ಒಮ್ಮೆ ಜೀವನದಲ್ಲಿ ಬಿದ್ದ ಮೇಲೆಯೇ ಎದ್ದು ನಿಂತು ಬದುಕನ್ನು ಉತ್ತುಂಗಕ್ಕೆ ಹೊಯ್ದು ಇತರರಿಗೆ ಮಾದರಿಯಾಗುತ್ತಾರೆ. ಹಾಗೆ ನಾವು ಕೂಡ ಬಾಳುವ ಭರದಲ್ಲಿ ಸೋತೆವೆಂದು ಹತಾಶರಾಗದೆ ಸಾಧಿಸುವ ಹೊಸ ಹುಮ್ಮಸ್ಸಿನೊಂದಿಗೆ ಮುನ್ನಡೆಯಬೇಕು. ನಾವು ಬಿದ್ದ ಸಮಯದಲ್ಲಿ ನಕ್ಕವರ ಎದುರು ಎದ್ದು ನಿಲ್ಲಬೇಕು. ಆ ಭರವಸೆಯ ಆತ್ಮವಿಶ್ವಾಸ ನಮ್ಮಲ್ಲಿ ಅಚಲವಾಗಿರಬೇಕು. ನಗುವ ತುಟಿಗಳು ಎಂದಿಗೂ ಮೇಲೆತ್ತುವ ಕೈಗಳಾದವು. ಕುಹಕವಾಡಿ ನಮ್ಮ ಆತ್ಮ ಸ್ಥೈರ್ಯವನ್ನು ಕುಗ್ಗಿಸುವ ಮಾತುಗಳಿಗೆ ಎಂದು ಕಿವಿಗೊಡಬಾರದು. ಯಾರು ಏನೇ ಹೇಳಿದರೂ ನಾವು ನಂಬಿದ ತತ್ವ ಆದರ್ಶ ಬದುಕಿನ ಬಗೆಗಿನ ನಮ್ಮ ಗುರಿ ವಿಶ್ವಾಸ ನಂಬಿಕೆ ಇದೆಲ್ಲದಕ್ಕೂ ಮಿಗಿಲಾಗಿ ಎಂಥದ್ದೇ ಸಂದರ್ಭದಲ್ಲೂ ಹಿಂದೆ ಸರಿಯಾದ ಸಾಧಿಸಿಯೇ ತೀರುವ ಛಲ ನಮ್ಮಲ್ಲಿ ಅಚಲವಾಗಿರಬೇಕು.
ಜೀವನದಲ್ಲಿ ಸೋತವರು ಯಾರು ಸತ್ತಿಲ್ಲ, ಸೋಲು ಸಾಯುವುದಕ್ಕೆ ಅಲ್ಲ ಸಾಧಿಸುವುದಕ್ಕೆ ಎಂದುಕೊಂಡಾಗ ಯಾವ ಹತಾಶೆಯ ನಮ್ಮನ್ನು ಕುಗ್ಗಿಸುವುದಿಲ್ಲ. ಸಾಧಕರ ಹಾದಿಯು ಕೂಡ ಕಲ್ಲು ಮಣ್ಣಿನಿಂದ ಕೂಡಿದ್ದರು ಅವರು ಸಾಧಿಸಿದ ನಂತರ ಅದೇ ಹಾದಿ ಇತರರಿಗೆ ಉತ್ತಮ ಮಾರ್ಗವಾಗಿ ತೋರುತ್ತದೆ. ಆದರೆ ನಮ್ಮ ನಮ್ಮ ಹಾದಿಗಳು ಯಾವತ್ತಿಗೂ ಭಿನ್ನ ಭಿನ್ನವಾಗಿಯೇ ಇರುತ್ತವೆ. ಬದುಕನ್ನು ನಾವು ನೋಡುವ ರೀತಿಯಂತೆಯೇ ಮುನ್ನಡೆಸಿಕೊಂಡು ಹೋಗುವುದು ನಮ್ಮ ಗುರಿ ಸಾಧನೆಯ ಮೊದಲ ಮೆಟ್ಟಿಲಾಗಿ ಇರಬೇಕು. ಅವರು ಹೇಳಿದರು ಅವರು ಹೇಳಿದರು ಎಂದು ನಮ್ಮ ದಾರಿಯ ಮಧ್ಯೆ ಕವಲುಗಳೆದ್ದರೆ ನಾವು ಸಾಗುವ ದಾರಿಯ ಕ್ಷಮತೆ ಕಡಿಮೆಯಾಗುತ್ತದೆ. ನಮ್ಮ ಗುರಿ ಸಾಧನೆಯಲ್ಲಿ ಮೂರನೆಯವರ ಕಿವಿ ತುರಿಸುವಿಕೆಗೆ ಅವಕಾಶ ನೀಡಲೇಬಾರದು. ಆಗ ಮಾತ್ರ ನಾವು ಜಯದ ನಗೆ ಬೀರಬಹುದು.
ನಾವು ಜೀವನದಲ್ಲಿ ಅದೆಷ್ಟೇ ಬಾರಿ ಸೋತರೂ ಮರಳಿ ಯತ್ನವ ಮಾಡಿ ಜೇಡ ಮೇಲೇರುವಂತೆ ನಾವು ಕೂಡ ಸತತ ಪರಿಶ್ರಮದಿಂದ ನಮ್ಮ ಬದುಕನ್ನು ಕಟ್ಟಿಕೊಳ್ಳಬೇ ಬದುಕಿನಲ್ಲಿ ನಾವು ಶರಣಾಗುವ ಬದಲು ತುಸು ಸೈರಣೆಯಿಂದ ಯಶಸ್ಸಿನ ಪ್ರೇರಣೆಯೊಂದಿಗೆ ಗೆದ್ದೇ ಗೆಲ್ಲುವೆ ಎಂಬ ಭರವಸೆಯೊಂದಿಗೆ ಸಾಗಿದಾಗ ಮಾತ್ರ ಜೀವನದ ಪರಿಪಾಠದ ಪುಟದಲ್ಲಿ ನಮ್ಮ ಸಾಧನೆಯು ದಾಖಲಾಗುತ್ತದೆ. ಅದು ಸಾಧ್ಯವಾಗಬೇಕೆಂದರೆ ಇಂದು ಇಂದಿಗೆ ಮುಗಿಯಿತು ಎಂದು ಕೊಳ್ಳುವುದಕ್ಕಿಂತ ಇಂದು ಸಾಧ್ಯವಾಗದ್ದು ನಾಳೆ ಸಾಧ್ಯವಾಗುವುದೆಂದುಕೊಂಡರೆ ಯಾವುದು ಅಸಾಧ್ಯವಾಗಿ ಉಳಿಯದು. ಪ್ರತಿ ಸೋಲಿನ ಕುರಿತಾದ ಇಂತಹ ಧನಾತ್ಮಕತೆ ಸಾಧಿಸುವ ಉದ್ದೇಶಕ್ಕ ಉತ್ಸುಕತೆಯನ್ನು ನೀಡುತ್ತದೆ. ಆ ಉತ್ಸಾಹವನ್ನು ನಾವು ಎಂದಿಗೂ ಕಳೆದುಕೊಳ್ಳದಂತೆ ಸಾಗುವ ಮೂಲಕ ಸಂತೃಪ್ತ ಬದುಕಿಗೆ ನಾವು ಆಪ್ತರಾಗೋಣ.